ಆಧುನಿಕ ತಲ್ಲಣಗಳ ‘ನುಣ್ಣನ್ನ ಬೆಟ್ಟ’

 

 

 

 

ಆಧುನಿಕ ತಲ್ಲಣಗಳ ಸ್ಪಷ್ಟ ಚಿತ್ರಣ

ಬಿ.ಸುರೇಶ

 

ಇಂದು ನಮ್ಮೆದುರಿಗೆ ನಿಮಿಷಕ್ಕೊಂದು ಪ್ರವಚನ, ಗಳಿಗೆಗೊಂದು ನಿರ್ವಚನ ಹುಟ್ಟುತ್ತಿದೆ.

ಆಧುನಿಕ ಮನುಷ್ಯ ಮಾಹಿತಿ ಪ್ರವಾಹದಲ್ಲಿ ಅದರ ಸತ್ಯಾಸತ್ಯತೆಯನ್ನು ಅರಿಯುವ ಮೊದಲೇ ಮುಳುಗಿ ಹೋಗಿದ್ದಾನೆ. ಇದರಿಂದಾಗಿ ಇಡೀ ಸಮಾಜವೇ ಬಲ, ಎಡ, ನಡ ಎಂಬ ಅನೇಕ ಧೃವೀಕರಣಗಳಲ್ಲಿ ಸಿಕ್ಕಿಕೊಂಡಿದೆ ಮತ್ತು ಗೊಂದಲದ ಗೂಡಾಗಿದೆ.

ಇಂತಹ ಕಾಲಘಟ್ಟದಲ್ಲಿ ಮಾಧ್ಯಮಗಳು ಸಂಯಮಿಗಳಾಗಿ ತಿಳುವಳಿಯನ್ನು ನೀಡುವುದಕ್ಕಿಂತ ಹೆಚ್ಚಾಗಿ ತಲ್ಲಣಗಳನ್ನು, ಕಾತರಗಳನ್ನು ಪ್ರಧಾನವಾಗಿ ಉಣಬಡಿಸುತ್ತಿರುವ ಸಂಕಟವೂ ಸೇರಿಕೊಂಡು ಒಟ್ಟು ಸಮಾಜವು ವಾದ-ವಿವಾದಗಳ, ದ್ವೇಷ-ಕದನಗಳ ತಾಣವಾಗಿದೆ. ನಿನ್ನೆಯ ವರೆಗೂ ಸ್ನೇಹಿತರಾಗಿದ್ದವರು ಇಂದು ಬೇರೆ ಬೇರೆ ಬಾವುಟಗಳ ಅಡಿಯಾಗಿ ಒಬ್ಬರ ವಿರುದ್ಧ ಮತ್ತೊಬ್ಬರು ಚೀರುತ್ತಾ ಇದ್ದಾರೆ.

ಈ ಹೊತ್ತಿನಲ್ಲಿ ನಮ್ಮ ಸಾಮಾನ್ಯ ಜನಗಳಿಗೆ ಒಂದು ವಾದದ, ಒಂದು ವಿವಾದದ ಎಲ್ಲಾ ಮಗ್ಗುಲುಗಳ ಚರ್ಚೆಯನ್ನು ಅದರಾಳಕ್ಕಿಳಿದು ತಿಳಿಸುವ ಕೆಲಸವನ್ನು ಕೆಲವು ಪತ್ರಕರ್ತರು ಮಾತ್ರ ಮಾಡುತ್ತಾ ಇದ್ದಾರೆ. ಅಂತಹವರ ಸಂಖ್ಯೆ ಬೆರಳೆಣಿಕೆಯದು ಅಷ್ಟೇ. ಆ ಪಟ್ಟಿಯಲ್ಲಿ ಪ್ರಮುಖ ಹೆಸರು ರಾಜಾರಾಂ ತಲ್ಲೂರು ಅವರದ್ದು.

ರಾಜಾರಾಂ ತಲ್ಲೂರು ಅವರು ನನಗೆ ಪರಿಚಿತರಾದದ್ದು ನಾಲ್ಕೈದು ವರ್ಷಗಳ ಹಿಂದೆ ಸ್ಕ್ರಿಪ್ಟ್ ರೈಟಿಂಗ್ ವರ್ಕ್‍ಶಾಪ್ ಒಂದರಲ್ಲಿ. ನಂತರ ಅವಧಿ ವೆಬ್ ಪೋರ್ಟಲ್‍ನಲ್ಲಿ ಅವರು ಬರೆಯುವ ಕಾಲಮ್ಮಿನ ಓದುಗನಾದೆ. ರಾಜಾರಾಂ ಅವರ ಗ್ರಹಣ ಶಕ್ತಿ ಮತ್ತು ಅವರು ವಿಷಯವನ್ನು ಮಂಡಿಸುವ ಕ್ರಮದಲ್ಲಿ ಇರುವ ಸ್ಪಷ್ಟತೆ ಯಾವುದೇ ಓದುಗನನ್ನು ಆತನಿಗಿರುವ ಆತಂಕಗಳಿಂದ ದೂರಾಗಿಸುತ್ತದೆ.

ನಮ್ಮ ನಡುವಿನ ಹೊಸ “ಗೋಪುರಾಣ”, “ಅನಾಣ್ಯೀಕರಣ”, “ಜಿಎಸ್‍ಟಿಗಳ ಅನೃತ ಪುರಾಣ”, “ರೈತರ ಹೋರಾಟ”ಗಳನ್ನು ಕುರಿತ ಅರ್ಥಶಾಸ್ತ್ರದ ನೆಲೆಯಿಂದ ವಿಶ್ಲೇಷಿಸಿದ್ದಾರೆ ರಾಜಾರಾಂ ತಲ್ಲೂರು ಅವರು. ಈ ಲೇಖನಗಳು ಓದುಗನಿಗೆ ಆಯಾ ಪುರಾಣಗಳ ಹಿನ್ನೆಲೆಯನ್ನು ಮಾತ್ರವೇ ಅಲ್ಲದೆ, ಆ ಪುರಾಣಗಳನ್ನು ನೋಡುವ ಕ್ರಮಗಳನ್ನು, ಸರ್ಕಾರಗಳು ತೆಗೆದುಕೊಳ್ಳಬೇಕಾದ ಎಚ್ಚರಗಳನ್ನು ತಿಳಿಸುವಂತಹದು.

ಈಚೆಗೆ ಅವರು ಬರೆದ ಮಧ್ಯಪ್ರದೇಶದ ರೈತರ ಹೋರಾಟದ ಹಿಂದಿನ ಕಾರಣಗಳನ್ನು ಕುರಿತ ಲೇಖನವನ್ನೇ ಗಮನಿಸಿ. ಒಂದು ಕೃಷಿ ಪ್ರಧಾನ ಪ್ರದೇಶವನ್ನು ಕಳೆದ ಇಪ್ಪತ್ತು ವರ್ಷಗಳಿಂದ ಹೇಗೆಲ್ಲಾ ಬದಲಿಸಲು ಹೊರಟು, ಇಂದು ಯಾವ ಸ್ಥಿತಿ ತಲುಪಿದ್ದೇವೆ ಎಂಬುದನ್ನು ಅಂಕಿ ಅಂಶಗಳ ಸಹಿತವಾಗಿ ತಲ್ಲೂರರು ತಿಳಿಸಿಕೊಡುತ್ತಾರೆ. ಈ ಅಂಕಿ ಅಂಶಗಳು ಕಪೋಲ ಕಲ್ಪಿತವಲ್ಲ ಎಂಬುದಕ್ಕೆ ಸಾಕ್ಷಿಗಳನ್ನು ಸಹ ಒದಗಿಸುತ್ತಾರೆ. ಆ ಮೂಲಕ ಮಧ್ಯಪ್ರದೇಶದ ಮಂಡಸೂರಿನಲ್ಲಿ ಜೀವ ಕಳಕೊಂಡ ರೈತರ ಬವಣೆಯನ್ನು ಮಾತ್ರವೇ ಅಲ್ಲದೇ ಬಡವರ ಸಿಟ್ಟಿನ ಕಾರಣವನ್ನು ಬಿಡಿಸಿಡುತ್ತಾರೆ.

ಇಂತಹ ಬರಹವನ್ನು ಓದುವುದರಿಂದ ಆಗುವ ಪ್ರಧಾನ ಲಾಭವೆಂದರೆ ಈ ನಾಡಿನ ಪ್ರಧಾನ ವಾಹಿನಿಗಳು ಹೇಳುವ “ಸುಳ್ಳು”ಗಳ ಹಿಂದಿನ “ಸತ್ಯ”ಗಳ ಅನಾವರಣ.

ಇಂತಹ ಲೇಖನಗಳನ್ನು ಆಯಾ ದಿನ ಬ್ಲಾಗ್‍ನಲ್ಲಿ ಪ್ರಕಟಿಸುವಷ್ಟಕ್ಕೆ ನಿಲ್ಲದೆ ಅವುಗಳನ್ನು ಪುಸ್ತಕವಾಗಿಯೂ ತರುತ್ತಾ ಇರುವುದರಿಂದ ನಮ್ಮ ಕಾಲದ ತಲ್ಲಣಗಳು ಮತ್ತು ಅವುಗಳ ವಿಶ್ಲೇಷಣೆಗಳು ಅಕ್ಷರ ರೂಪದಲ್ಲಿ ಮುಂದಿನ ತಲೆಮಾರಿಗೂ ತಲುಪುತ್ತವೆ. ಅದರಿಂದಾಗಿ ಹೆಚ್ಚುತ್ತಿರುವ “ಮೂರ್ಖ ಮತ್ತು ಬಾಯಿಬಡುಕ ಭಕ್ತ”ರಲ್ಲಿ ಕೆಲವರಿಗಾದರೂ ಜ್ಞಾನೋದಯವಾದರೆ ಅದೇ ಈ ನಾಡಿಗೆ ದೊಡ್ಡ ಲಾಭ.

ಥ್ಯಾಂಕ್ಸ್ ರಾಜಾರಾಂ ತಲ್ಲೂರ್ ನನ್ನಂತಹವರಿಗೆ ನೀವು ನೀಡಿದ ತಿಳುವಳಿಕೆಯಿಂದ ನಾನಂತೂ ಸಾಕಷ್ಟು ಕಲಿತಿದ್ದೇನೆ. ನನ್ನಂತಹವರ ಕಲಿಕೆಯ ಹಸಿವನ್ನು ನಿರಂತರವಾಗಿ ತಣಿಸುತ್ತಿರಿ.

‘ಅವಧಿ’ಯಲ್ಲಿ ಪ್ರಕಟವಾದ ಅಂಕಣ ಬರಹಗಳ ಗುಚ್ಛ ಈಗ ಪುಸ್ತಕವಾಗಿ ನಿಮ್ಮ ಮುಂದೆ ಬರುತ್ತಿದೆ. ರಾಜಾರಾಂ ತಲ್ಲೂರು ಅವರ ಕೃತಿಯನ್ನು ಪಿ ಸಾಯಿನಾಥ್ ಅವರು ಉಡುಪಿಯ ಟೌನ್ ಹಾಲ್ ನಲ್ಲಿ ಆಗಸ್ಟ್ ೨೦ ರಂದು ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ ೧೦ಕ್ಕೆ, ಬನ್ನಿ

Leave a Reply