ಹೇಗಿದ್ದೀ….ಎಂದೆ

 

 

 

 

 

ರೇಣುಕಾ ರಮಾನಂದ /
ಶೆಟಗೇರಿ ಅಂಕೋಲಾ

 

 

 

 

 

 

ಪ್ರತಿಸಲದಂತೆ
ಈ ಸಲವೂ
ಕಡೆಯ ಬಾರಿ
ಮಾತನಾಡೋಣ ಅನ್ನಿಸಿತು
ಹೇಗಿದ್ದೀ…ಎಂದೆ

ಹೊಸ ಕಾರ್ ತರಲು
ಹೊರಟಿದ್ದೇವೆ ಇಬ್ಬರೂ..
ನಂತರ ಸಿಗುವೆ -ಎಂದ

ಸಿಗಲಿಲ್ಲ

ಮತ್ತೆ ಮರುದಿನ
ನಿನ್ನ ನೆನಪಾಗುತ್ತಿದೆ ತುಂಬ
ಎಂದೆ

ನಾಳೆ ಎಂಟರಿಂದ ಇಪ್ಪತ್ತೆಂಟರವರೆಗೆ
ಕಮ್ಮಟಗಳು..ಶಿಬಿರಗಳು..ಮೀಟಿಂಗುಗಳು ..
ಬಾಕಿ ಇವೆ ಬರೆಯಬೇಕಾದ ಒಂದಷ್ಟು ಮುನ್ನುಡಿಗಳು
ಬೆನ್ನುಡಿಗಳು..
ಮುಗಿಸಬೇಕು ಬೇಗ ಬೇಗ
ಸಮಯ ಸಾಲುತ್ತಿಲ್ಲ
ಅಂದ

ಬಿಡಲಿಲ್ಲ ನಾನು
ಮೊಳೆಯುತ್ತಿರುವ ನಗುವ ಮುಚ್ಚಿಟ್ಟು
ತುಂಬ ಪ್ರೀತಿಯಿಂದ
ಈ ಶರ್ಟ  ಚಂದ ಕಾಣ್ತಿದೆ ನಿನಗೆ
ಎಂದೆ

ಎರಡು ಸಾವಿರದ ಮುನ್ನೂರು…
ಪ್ರೀತಿಪಾತ್ರರೊಬ್ಬರು ಕೊಡಿಸಿದ್ದು
ಬಣ್ಣ ಅಷ್ಟಾಗಿ ಹಿಡಿಸಲಿಲ್ಲ
ಆದರೂ
ನಾನೆಂದರೆ ತುಂಬ ಅಭಿಮಾನ
ಅವರ ಪ್ರೀತಿ ದೊಡ್ಡದು ನೋಡಿ
ಎಂದ

ಹೇ…
ಏಕವಚನ ಬಹುವಚನವಾದದ್ದು
ಎಂದು….?
ಗಮನಿಸಿರಲಿಲ್ಲ

ನಿನ್ನೆ  ಪುಟ್ಪಾತಿನಲಿ ನಾನು
ಸೋವಿ ಚಪ್ಪಲಿ ಆಯುತ್ತಿರುವಾಗ
ಪಕ್ಕದ ಅಂಗಡಿಯಲ್ಲಿ
ಅವನೇ ಮುನ್ನೂರು ಕೊಟ್ಟು ಕೊಂಡ ಅಂಗಿಯಲ್ಲವೇ ಅದು-
ಮಧ್ಯೆ
ಈ ಎರಡು ಸಾವಿರ ಎಲ್ಲಿಂದ ಬಂತು ಕೇಳಲಿಲ್ಲ
ಅಂದೆಲ್ಲ ಅವನ ಹಮ್ಮು ನನ್ನ ನಗು
ನನ್ನ ಸಿಟ್ಟು ಅವನ ತಾಳ್ಮೆ
ಎರಡೂ ಕುಸ್ತಿಗೆ ಬಿದ್ದು ಸಾಕಾಗಿ
ಸುಮ್ಮನೆ ಇರತಕ್ಕದ್ದೆಂದು
ನನಗೆ ನಾನೇ
ಕರಾರು
ಮಾಡಿಕೊಂಡಿದ್ದೆ

ಒಂದು ಕೂಸಿನಂತ ಹುಡುಗ ಅವನು
ಹಿಂದೆ
ಸರಿರಾತ್ರಿಯಲ್ಲಿ ಎದ್ದು-
ಮಡಿಲಲ್ಲಿ ಹುದುಗಿಸಿಕೋ…
ಒಂದು ಮುತ್ತು ಕೊಟ್ಟು ಮಲಗು…
ಇರು ಇಷ್ಟು ಬೇಗ ಹೊರಡುವೆಯ…
ನಿನಗೊಮ್ಮೆ ಒರಗಿ ಕುಳಿತು ಕವಿತೆ ಓದಬೇಕು…
ಎಂದೆಲ್ಲ ಹಲುಬಿ
ಕೆನ್ನೆ ತಟ್ಟಿ ಮಲಗಿಸಿದ್ದು
ಸರದಿಯಂತೆ ನೆನಪಾಗಿ
ಮುದ್ದು ಉಕ್ಕಿ ಬಂತು

ವಿದಾಯವನ್ನು ಮುಂದೂಡುತ್ತ
ಕಣ್ಣೇಕೆ ಹೀಗೆ ಬಾಡಿ ಬಸವಳಿದಿವೆ
ನಿದ್ದೆ ಮಾಡ್ತಿಲ್ಲವಾ ಸರಿಯಾಗಿ
ಎಂದೆ

‘ಯಾರಿಗೆ ಬೇಕು ನಿದ್ದೆ ಊಟ ಮೈಥುನ
ನೀನಿಲ್ಲದ ಮೇಲೆ’
ಅಂದುಕೊಂಡಿದ್ದನ್ನು ಮುಚ್ಚಿಟ್ಟ…

ನಾಳಿದ್ದು ಒಂದು ಒಳ್ಳೆ
ಏಕವ್ಯಕ್ತಿ ಪ್ರದರ್ಶನ
ಕಲಾಭವನದಲ್ಲಿ
ನಮ್ಮ ನಾಡಿನ
ಬಹುಮುಖ ಪ್ರತಿಭೆ ಶ್ರೀ……..ಇವರಿಂದ
ಸಾಧ್ಯವಾದರೆ ಬನ್ನಿ
ಎಂದು ಮಾತು ಮುಗಿಸಿದ

ತಡೆಯಲಾಗಲಿಲ್ಲ
ಉಕ್ಕುಕ್ಕಿ ನಗುತ್ತ
ಶ್ರೀ……ಅಂದರೆ ನೀನೇ ಅಲ್ಲವೇನೋ
ನಾನು ಅನ್ನಲು ಕೂಡ
ಬಿಗುಮಾನವ ಎಂದೆ
ಉರುಳಾಡುತ್ತ ಮತ್ತೂ ಮತ್ತೂ
ನಗತೊಡಗಿದೆ…

ಅಂದಿನಿಂದಲೇ ನೋಡಿ
ಅವನ ತಾಳ್ಮೆ ನನಗೂ
ನನ್ನ ಸಿಟ್ಟು ಅವನಿಗೂ
ಅದಲು ಬದಲಾದದ್ದು…
ಅವನ ಕಣ್ಣಿಂದ
ಜಾರಿದ ಒಂದು ಹಟಮಾರಿ ಹನಿ
ಯನ್ನು ಅವನಿಗೆ ಗೊತ್ತಿಲ್ಲದಂತೆ ಎತ್ತಿಟ್ಟುಕೊಂಡು ನಾನು ಜೋಪಾನಮಾಡತೊಡಗಿದ್ದು..

ಸಾಧ್ಯವಾದರೆ
ಒಮ್ಮೆ ಅವನನ್ನು
ನಾಡಿದ್ದು ಪ್ರದರ್ಶನಕ್ಕೂ ಮೊದಲು
ಕೊಸರಿಕೊಂಡರೂ ಬಿಡದೇ
ಎಲ್ಲರೆದುರಿಗೆ
ಕಡೆಯಬಾರಿ
ಅಪ್ಪಿಕೊಂಡುಬಿಡಬೇಕು..

7 Responses

 1. Lalitha siddabasavayya says:

  ವಾಹ್, ಬಹಳ ಚೆನ್ನಾಗಿದೆ ರೇಣುಕಾ, ಹೊಸದಾಗಿದೆ, ಮತ್ತೆ ಓದಬೇಕು ಎನ್ನಿಸುತ್ತದೆ.

  • ರೇಣುಕಾ says:

   ಅಕ್ಕಾ..
   ಧನ್ಯ ನಾನು ನಿಮ್ಮ ಕವಿತೆಗಳು ನನ್ನ ಬೆಳವಣಿಗೆಯ ಪಾಠಗಳು.

 2. Nagraj Harapanahalli says:

  ಕವಿತೆ ಸಾವನ್ನು ಮುಂದೂಡುವ, ಪ್ರೇಮದ ಸುತ್ತ ಸುಳಿದಾಡುತ್ತಾ , ನೆನಪುಗಳನ್ನು ಕಟ್ಟಿಕೊಡುವ ಪ್ರಕ್ರಿಯೆಯೇ? ಪುರುಷ ಅಹಂಕಾರ, ಪ್ರತಿಷ್ಟೆಗೆ ಬೀಳುವುದು, ಮತ್ತೇನನ್ನೋ ಬೆನ್ನು ಹತ್ತುವ ಗಂಡನ್ನು , ನೆನಪುಗಳಿಂದಲೇ ತಿವಿಯುವ ಹೆಣ್ಣು , ಕವಿತೆಯಲ್ಲಿ ಗೆಲ್ಲುವುದು ಅದ್ಭುತ. ಹಾಗೇ ಸಿಟ್ಟನ್ನು ಗಂಡಿಗೂ, ತಾಳ್ಮೆ ಯನ್ನು ಹೆಣ್ಣಿಗೆ ವರ್ಗಾಯಿಸುವ ಕವಯತ್ರಿ ಮಧುರ ಕ್ಷಣಗಳನ್ನು ಕಟ್ಟುತ್ತಲೇ ಪ್ರೀತಿಸುವುದರಲ್ಲಿ ಸಹ ಸೋಲುವ ಗಂಡನ್ನು , ಅವನ ಸೋಗಲಾಡಿತನವನ್ನು ಬಯಲಾಗಿಸುವ ಕಾವ್ಯದ ಒಳಹರಿವು, ಧ್ವನಿ ಕಟ್ಟಿಕೊಡುವ ರೀತಿಯೇ ಚೆಂದ. ಕಾವ್ಯ ಕವಿಯನ್ನು ಉಲ್ಲಂಘಿಸಿ ಬೆಳೆಯುವುದೆಂದರೆ ಇದೇ ರೀತಿ ಇರಬೇಕು.

 3. ರೇಣುಕಾ says:

  ಹೇ ನಾಗರಾಜ್ ಎಷ್ಟು ಚನ್ನಾಗಿ ಅರ್ಥೈಸಿಕೊಂಡು ಬರೆದಿರುವಿರಿ…ಇಂಥ ಓದಿಗೆ ನಿಲುಕಿರುವ ನನ್ನ ಕವಿತೆ ಧನ್ಯ…

 4. ಶ್ರೀ ತಲಗೇರಿ says:

  ಇಷ್ಟ ಆಯ್ತು ಜೀ 🙂 🙂 🙂

 5. ಕೊನೆಯ ಎರಡು ಸಾಲುಗಳು ಅತ್ಯದ್ಭುತ….

Leave a Reply

%d bloggers like this: