ಅರೆಗಣ್ಣಿನಿಂದ ನೋಡಿ..

ಬಿ ಆರ್ ಸತ್ಯನಾರಾಯಣ್ 

 

ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಪಲಪುಷ್ಪ ಪ್ರದರ್ಶನದಲ್ಲಿ ಕೇವಲ ಎರಡೇ ಬಣ್ಣದ ಸಣ್ಣ ಸಣ್ಣ ಪ್ಲಾಸ್ಟಿಕ್ ಚೆಂಡುಗಳನ್ನು ಬಳಸಿ, ಕುವೆಂಪು ಅವರ ಮುಖದ ಮ್ಯೂರಲ್ ಸಿದ್ಧಪಡಿಸಲಾಗಿದೆ.

ಬರಿಗಣ್ಣಿಗೆ ಏನು ಎಂದೇ ತಿಳಿಯುವುದಿಲ್ಲ. ಆದರೆ ಕ್ಯಾಮೆರಾ ಮೂಲಕ ನೋಡಿದಾಗ ಕುವೆಂಪು ಅವರ ಮುಖ ಸ್ಪಷ್ಟವಾಗಿ ಕಾಣುತ್ತದೆ.

ಅದಕ್ಕೆಂದೇ, ಆ ಮ್ಯೂರಲ್ ಬಳಿ ಅದಕ್ಕೆ ಬಳಸಿರುವ ಮೂಲ ಚಿತ್ರದ ಜೊತೆಯಲ್ಲಿ, ಮೊಬೈಲ್ ಕೆಮೆರಾ ಮೂಲಕ ನೋಡಿ ಎಂಬ ಸೂಚನೆಯಿದೆ.

ಆದರೆ ನೆನ್ನೆ ಫಲಪುಷ್ಪ ಪ್ರದರ್ಶನಕ್ಕೆ ಬಂದಿದ್ದ ಲೇಖಕ ದೇವನೂರ ಮಹಾದೇವ ಅವರಿಗೆ ಅದನ್ನು ತೋರಿಸಿ, ಕ್ಯೆಮೆರಾ ಮೂಲಕ ನೋಡಲು ಕೇಳಿಕೊಂಡಾಗ, ಏನೋ ಧ್ಯಾನಿಸುತ್ತಾ ನಿಂತಿದ್ದ ಅವರು, “ಸ್ವಲ್ಪ ಅರೆಗಣ್ಣು ಮಾಡಿ ನೋಡಿ” ಎಂದರು. ಅರೆಗಣ್ಣಿನಿಂದ ನೋಡಿದರೆ ಅದ್ಭುತವೆಂಬಂತೆ, ಕ್ಯೆಮೆರಾದ ಮೂಲಕ ನೋಡಿದಾಗ ಕಂಡಷ್ಟೇ ಸ್ಪಷ್ಟವಾಗಿ ಕುವೆಂಪು ಅವರ ಮುಖ ಕಾಣುತ್ತಿತ್ತು. ಕುವೆಂಪು ಅವರನ್ನು ದರ್ಶಿಸಲು ಬರೀ ಹೊರಗಣ್ಣು ಸಾಲದು, ಒಳಗಣ್ಣು (ಧ್ಯಾನನೇತ್ರ) ಬೇಕು ಎಂದು ಹೇಳುವಂತಿತ್ತು ದೇವನೂರರು ಆಗ ನಿಂತಿದ್ದ ನಿಲುವು!

ನಂತರ, ಅಲ್ಲಿಯೇ ಇದ್ದ ಕಲಾವಿದರಿಗೂ ಅದನ್ನು ತಿಳಿಸಲಾಯಿತು. ಅವರಿಗೂ ಆಶ್ಚರ್ಯ! ಅವರಿಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ, ಕಲಾವಿದ ಕಾಣದ್ದನ್ನು ದೇವನೂರರು ಕಂಡಿದ್ದರು! ಈಗ ಅಲ್ಲಿ ಅರೆಗಣ್ಣಿನಿಂದ ನೋಡಿ ಎಂಬ ಬೋರ್ಡ್ ಹಾಕಿಸಲು ವ್ಯವಸ್ಥೆ ಮಾಡಲಾಗಿದೆ!

Leave a Reply