ಇನ್ನೊಮ್ಮೆ ದಾರಿ ತಪ್ಪಿಸು ದೇವರೇ..!!

ಕಳೆದ ವಾರ ಬಿಡುಗಡೆಯಾದ ಉಡುಪಿಯ ಮಂಜುನಾಥ ಕಾಮತರ

‘ದಾರಿ ತಪ್ಪಿಸು ದೇವರೇ’ ಪುಸ್ತಕದ ಒಂದು ಲೇಖನ ನಿಮ್ಮಓದಿಗಾಗಿ..

ಮಂಜುನಾಥ್ ಕಾಮತ್

ಸೀತಾನದಿ ಹಾಗೂ ವಾರಾಹಿ ನದಿಗಳ ನಡುವಣ ಕುಂದಾಪುರ ತಾಲೂಕಿನ ಊರುಗಳು ಬಹಳ ಕುತೂಹಲದ್ದು. ಇಲ್ಲಿನ ಹಳ್ಳಿಗಳು ಹಲವು ವಿಶೇಷಗಳ ತವರು.ಹಲವು ಹಳೆಮನೆಗಳು ಇಂದಿಗೂ ಇರುವ ನಾಡದು. ಮನೆಯೊಳಗೆ ಕಾಲಿಟ್ಟರೆ, ಉಪ್ಪರಿಗೆಯಿಂದ ಇಣುಕಿದರೆ ಹಳೆ ಕಾಲಗಳೇ ನಮ್ಮೆದುರಿಗೆ ಕಾಲವನ್ನೇ ಕೆದರಿ ಬಂದಿರುವಂತೆ ತೋರುತ್ತದೆ‌.ಹಿಂದೊಮ್ಮೆ ದಾರಿ ತಪ್ಪಿ ಒಂದು ಮನೆಗೆ ಹೋಗಿದ್ದೆ. ಗೌಡ ಸಾರಸ್ವತ ಬ್ರಾಹ್ಮಣರ ಮನೆಯದು. ಉಪ್ಪರಿಗೆ ಇರುವ ಬಲು ದೊಡ್ಡ ಮನೆ. 700 ವರ್ಷ ಹಿಂದಿನದು ಎನ್ನುತ್ತಾರೆ.

ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದ ತಾವದು. ಮನೆಯ ಯಜಮಾನರಾರೂ ಅಲ್ಲಿ ವಾಸವಿಲ್ಲ. ಪೂಜೆಗೆಂದು ಅರ್ಚಕರೋರ್ವರನ್ನು ಅಲ್ಲಿ ಇರಿಸಲಾಗಿದೆ. ವರ್ಷಕ್ಕೊಮ್ಮೆ ಚೌತಿಗೆ ಮಾತ್ರ ಇಡೀ ಕುಟುಂಬದ ಸದಸ್ಯರು ಅಲ್ಲಿಗೆ ಬಂದು ಹಬ್ಬ ಆಚರಿಸಿ ಹೋಗುತ್ತಾರೆ.ಪ್ರವೇಶ ದ್ವಾರ. ದೊಡ್ಡ ಬಾಗಿಲು. ವಿಶಾಲ ಜಗಲಿ. ಅಂಕಣದ ಮನೆ. ಅಂಗಳದಲ್ಲಿ ಫಿರಂಗಿಯ ತುಂಡೊಂದು ಬಿದ್ದಿದೆ. ದೇವರ ಕೋಣೆ ಸಾಮಾನ್ಯದ್ದಲ್ಲ. ಅದೊಂದು ದೇವಸ್ಥಾನವೇ. ಅಲ್ಲಿ ಹತ್ತಾರು ತಾಳೆಗ್ರಂಥಗಳೂ ಪೂಜೆ ಪಡೆಯುತ್ತವೆ.

 

ಅಟ್ಟದ ಮೇಲೆ ಬಾವಲಿಗಳ ವಾಸ. ಅಲ್ಲಿ ಅವುಗಳ ಹಿಕ್ಕೆ ದೂಳುಗಳ ನಡುವೆ ಇಲ್ಲಿ ಚಿತ್ರದಲ್ಲಿ ತೋರಿಸಿರುವಂತಹ ಕಡತಗಳ ರಾಶಿಯೇ ಇತ್ತು. ಕಪ್ಪು ಮಸಿ ಹೊಡೆದ ಉದ್ದದ ಬಟ್ಟೆಯದು. ಪುಸ್ತಕದ ಹಾಳೆಯಷ್ಟೇ ಅಗಲಕ್ಕೆ ಮಡಚಲಾಗಿತ್ತು. ಅಕ್ಷರ ಕನ್ನಡವೇ. ಆದರೆ ಓದಲು ಬರುವುದಿಲ್ಲ. ಅದು ಲೆಕ್ಕಾಚಾರಗಳ ಪುಸ್ತಕವಂತೆ. ಓದಲು ಬರುತ್ತಿದ್ದರೆ ಆ ಕಾಲದ ವ್ಯವಹಾರದ ಗುಟ್ಟುಗಳನ್ನು‌ ತಿಳಿಯಬಹುದಿತ್ತು.

ನಾನು ಯಾವ ಮನೆಗೆ ಹೋಗಿದ್ದೆನೋ, ಆ ಮನೆಗೆ ಇನ್ನೊಮ್ಮೆ ಹೋಗಲು ದಾರಿಯೇ ತಿಳಿಯುತ್ತಿಲ್ಲ. ಸಂಪರ್ಕಕ್ಕೂ ಯಾರೂ ಇಲ್ಲ. ಇನ್ನೊಮ್ಮೆ ದಾರಿ ತಪ್ಪಿಯೇ ಹೋಗಬೇಕೆನಿಸುತ್ತೆ.

Leave a Reply