ಆತ ಬೋಲ್ಟ್, ಹುಸೇನ್ ಬೋಲ್ಟ್..

 

 

 

ಸೇನ್ `ಬೋಲ್ಟ್’ ಎಂಬ ಹೈ-ವೋಲ್ಟೇಜ್

ಪ್ರಸಾದ್ ನಾಯ್ಕ್

 

 

 

ಆ ದೃಶ್ಯವನ್ನು ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ವೀಕ್ಷಿಸುತ್ತಿದ್ದಿರಬಹುದು.

ಆ ಕ್ರೀಡಾಂಗಣದಲ್ಲೇ ಬರೋಬ್ಬರಿ ಐವತ್ತಾರು ಸಾವಿರ ಜನರಿದ್ದರಂತೆ. ಅಲ್ಲಿ ಆಗಮಿಸಿದ್ದ ಹಲವರಿಗೆ ಅವರದ್ದೇ ಆದ ನಿರೀಕ್ಷೆಗಳಿದ್ದವು. ಆದರೆ ಎಂದಿನಂತೆ ಮತ್ತದೇ ಸೆಕೆಂಡುಗಳ ವ್ಯತ್ಯಾಸ, ಕೂದಲೆಳೆಯ ಅಂತರ, ತಲೆಕೆಳಗಾದ ಲೆಕ್ಕಾಚಾರ!

ವಿಶ್ವದ ಅತೀ ವೇಗದ ಮಾನವ ಉಸೇನ್ ಬೋಲ್ಟ್ ನಂತಹ ಉಸೇನ್ ಬೋಲ್ಟ್ ನನ್ನೇ ಅಮೆರಿಕನ್ ಅಥ್ಲೀಟ್ ಜಸ್ಟಿನ್ ಗಟ್ಲಿನ್ ಮಣಿಸಿಬಿಟ್ಟಿದ್ದ. ಗಟ್ಲಿನ್ ಸೇರಿದಂತೆ ಎಲ್ಲರ ಮೊಗದಲ್ಲೂ ಅಚ್ಚರಿಯ, ಆಘಾತದ ಭಾವ. ಈ ಐತಿಹಾಸಿಕ ಸ್ಪರ್ಧೆಯು ಶುರುವಾಗುವ ಮುನ್ನ ಕುಳಿತಲ್ಲಿಂದಲೇ ಹೋ ಹೋ ಎಂದು ದೊಡ್ಡ ದನಿಯಲ್ಲಿ ಜಸ್ಟಿನ್ ನನ್ನು ಅಣಕಿಸುತ್ತಿದ್ದ ಬಹುಪಾಲು ಪ್ರೇಕ್ಷಕರಿಗೆ ಈಗ ಪೇಚಿಗೆ ಬಿದ್ದ ಸಂಕಟ.

ಆದರೆ ಎಲ್ಲರ ಮುಖದಲ್ಲಿ ನಗುವು ನಾಟ್ಯವಾಡಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಸ್ವರ್ಣಪದಕ ವಿಜೇತ ಜಸ್ಟಿನ್ ಗಟ್ಲಿನ್ ತನ್ನದೇ ಶೈಲಿಯಲ್ಲಿ ತಲೆಬಾಗಿ, ಮೊಣಕಾಲೂರಿ ಅಥ್ಲೆಟಿಕ್ಸ್ ಜಗತ್ತಿನ ದಂತಕಥೆಯಾದ ಬೋಲ್ಟ್ ಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದ. ಇಬ್ಬರೂ ಜೀವದ ಗೆಳೆಯರಂತೆ ತಬ್ಬಿಕೊಂಡು ಒಬ್ಬರನ್ನೊಬ್ಬರು ಅಭಿನಂದಿಸಿದರು. ಆ ಅದ್ಭುತ ಕ್ಷಣಗಳನ್ನು ಹಿಡಿದಿಟ್ಟ ಚಿತ್ರಗಳು ಮಾಧ್ಯಮ ವರದಿಗಳಲ್ಲೂ ರಾರಾಜಿಸಿದವು. ಯಾರು ಗೆದ್ದರೋ, ಯಾರು ಸೋತರೋ… ಕ್ರೀಡಾಮನೋಭಾವವು ಮಾತ್ರ ಆ ದಿನ ಗೆದ್ದಿತ್ತು.

ಪಂದ್ಯವನ್ನು ಗೆದ್ದಿದ್ದು ಜಸ್ಟಿನ್ ಆದರೂ ಆ ಕ್ಷಣದ ಅಪೂರ್ವ ಹೊಳಪನ್ನು ಸಂಪೂರ್ಣವಾಗಿ ಅಪಹರಿಸಿದ್ದು ಮಾತ್ರ ಉಸೇನ್ ಬೋಲ್ಟ್ ಎಂಬುದನ್ನು ಹೇಳದಿದ್ದರೆ ಅಪರಾಧವಾದೀತು.

ಜಮೈಕಾ ಮೂಲದ ಬೋಲ್ಟ್ ಅಥ್ಲೆಟಿಕ್ಸ್ ಲೋಕದಲ್ಲಿ, ಅಭಿಮಾನಿಗಳ ಹೃದಯದಲ್ಲಿ ಎಂಥಾ ಸ್ಥಾನವನ್ನು ಪಡೆದಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಇದಕ್ಕಿಂತ ಉತ್ತಮ ನಿದರ್ಶನವು ಸಿಗಲಾರದು. ಹಾಗೆಂದು ಜಸ್ಟಿನ್ ನಿಗೆ ಅಭಿಮಾನಿಗಳೇ ಇಲ್ಲ ಎಂದು ಹೇಳಲಾಗುವುದಿಲ್ಲ. ಈ ಅಪರೂಪದ ಗೆಲುವನ್ನು ಪಡೆಯಲು ಜಸ್ಟಿನ್ ಅದೆಷ್ಟು ಕಷ್ಟಪಟ್ಟಿದ್ದಾನೆ ಎಂಬುದು ಅವನಿಗೇ ಗೊತ್ತು.

ಆದರೆ ದುರಾದೃಷ್ಟವಶಾತ್ ಜಸ್ಟಿನ್ ಗಟ್ಲಿನ್ ನ ಈ ಐತಿಹಾಸಿಕ ಗೆಲುವು ಆತನ ಹಿಂದಿರುವ ತಪ್ಪು ಹೆಜ್ಜೆಗಳ, ಆಪಾದನೆಗಳ ಇತಿಹಾಸದ ಹೆಣಭಾರವನ್ನು ತಡೆಯಲಾರದೆ ಮಂಕಾಗಿಯೇ ಹೋಯಿತು. ಕೆಲವೊಮ್ಮೆ ಚಿಕ್ಕಪುಟ್ಟ ತಪ್ಪುಗಳಿಗೂ ಭಾರೀ ಬೆಲೆ ತೆರಬೇಕಾಗುತ್ತದಂತೆ. ಜಸ್ಟಿನ್ ವಿಚಾರದಲ್ಲೂ ಅದೇ ಆಯಿತು. ಅಥ್ಲೆಟಿಕ್ಸ್ ಲೋಕಕ್ಕೆ ನಾನೊಬ್ಬನೇ `ಮಿಂಚಿನ ಬೋಲ್ಟ್’ ಎಂಬುದನ್ನು ನಿರ್ಗಮನದ ಅವಧಿಯಲ್ಲೂ ಉಸೇನ್ ಬೋಲ್ಟ್ ಸಾಬೀತುಪಡಿಸಿದ್ದ.

ಬೋಲ್ಟ್ ಮತ್ತು ಜಸ್ಟಿನ್ ಇಂದು ನಿನ್ನೆಯ ಎದುರಾಳಿಗಳೇನಲ್ಲ. 2005 ರಿಂದ ಹಿಡಿದು ಇವರಿಬ್ಬರೂ ಈವರೆಗೆ ಹತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳ ಫೈನಲ್ ಓಟಗಳಲ್ಲಿ ಎದುರಾಗಿದ್ದಾರೆ. ಈ ಹತ್ತರಲ್ಲಿ ಎಂಟನ್ನು ಬೋಲ್ಟ್ ಗೆದ್ದಿದ್ದರೆ ಎರಡು ಜಸ್ಟಿನ್ ಪಾಲಾಗಿದೆ. ಜಸ್ಟಿನ್ ಗಿಂತ ಉಸೇನ್ ಬೋಲ್ಟ್ ಮೊದಲ ಬಾರಿ ಹಿಂದುಳಿದಿದ್ದು 2005 ರಲ್ಲಿ. ಆಗ ಬೋಲ್ಟ್ ಹದಿನೆಂಟು ವರ್ಷದ ತರುಣನಾಗಿದ್ದ. ನಂತರ ಈ ಗೆಲುವನ್ನು ಕಾಣಲು ಜಸ್ಟಿನ್ ಗೆ ಎಂಟು ವರ್ಷಗಳೇ ಬೇಕಾದವು. 2013 ರಲ್ಲಿ ನಡೆದ ಡೈಮಂಡ್ ಲೀಗ್ (ರೋಮ್) ನಲ್ಲಿ ಬೋಲ್ಟ್ ನನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಜಸ್ಟಿನ್. ಆ ಓಟದಲ್ಲೂ ಇದ್ದಿದ್ದು ಕೇವಲ 0.01 ಸೆಕೆಂಡುಗಳ ಅಂತರ. ನೂರು ಮೀಟರ್ ದೂರವನ್ನು ಕ್ರಮಿಸಲು ಜಸ್ಟಿನ್ 9.94 ಸೆಕೆಂಡುಗಳನ್ನು ವ್ಯಯಿಸಿದ್ದರೆ 9.95 ಸೆಕೆಂಡುಗಳನ್ನು ಬೋಲ್ಟ್ ವ್ಯಯಿಸಿದ್ದ.

ಆದರೆ ಈ ಬಾರಿ ಲಂಡನ್ನಿನ ಒಲಿಂಪಿಕ್ ಸ್ಟೇಡಿಯಂ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ನಕಾರಾತ್ಮಕ ಘೋಷಣೆಗಳನ್ನು ಕೂಗುತ್ತಾ ಜಸ್ಟಿನ್ ನನ್ನು ಮುಜುಗರಗೊಳಿಸಲು ಕಾರಣವೂ ಇದೆ. ಅಮೆರಿಕಾ ಮೂಲದ ಜಸ್ಟಿನ್ ಗಟ್ಲಿನ್ ತನ್ನ ಪ್ರದರ್ಶನ ಮತ್ತು ಸಾಧನೆಗಳಿಗಿಂತಲೂ ಹೆಚ್ಚಾಗಿ ಹಲವಾರು ತಪ್ಪು ಕಾರಣಗಳಿಂದಲೇ ಸುದ್ದಿಯಲ್ಲಿದ್ದವನು. ಉದ್ದೀಪನ ಮದ್ದುಗಳ ಸೇವನೆಯ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದ ಜಸ್ಟಿನ್ 2011 ರಲ್ಲಿ ಶಿಕ್ಷೆಯ ರೂಪದಲ್ಲಿ ಎರಡು ವರ್ಷಗಳ ನಿಷೇಧಕ್ಕೊಳಪಟ್ಟಿದ್ದ. ನಂತರ ಈ ಶಿಕ್ಷೆಯ ಪ್ರಮಾಣವನ್ನು ಒಂದು ವರ್ಷಕ್ಕೆ ಇಳಿಸಲಾಗಿತ್ತು.

ಈ ಪ್ರಕರಣದಲ್ಲಿ ಜಸ್ಟಿನ್ ಬಳಸಿದ್ದಲೆನ್ನಲಾದ ಆಂಫಿಟಮಿನ್ ನಂತರ ಮಾನಸಿಕ ರೋಗವೊಂದರ ಚಿಕಿತ್ಸೆಗಾಗಿ ನೀಡಿದ್ದ ಔಷಧಗಳಲ್ಲೊಂದಾಗಿತ್ತು ಎಂದು ಜಸ್ಟಿನ್ ನಿಂದ ವಾದಿಸಲ್ಪಟ್ಟಿತ್ತು (ಸಾಮಾನ್ಯವಾಗಿ ಎ.ಡಿ.ಡಿ. ಎಂದು ಕರೆಯಲಾಗುವ ಅಟೆನ್ಷನ್ ಡಿಫಿಸಿಟ್ ಡಿಸಾರ್ಡರ್ ಆತನ ಶಾಲಾದಿನಗಳಲ್ಲೇ ಗುರುತಿಸಲಾಗಿತ್ತು). ಆದರೆ ಒಂದು ವರ್ಷದ ಶಿಕ್ಷೆಯನ್ನು ಮುಗಿಸಿ ಹೊರ ಬಂದ ಜಸ್ಟಿನ್ ಐದು ವರ್ಷಗಳ ಅಂತರದಲ್ಲೇ ಮತ್ತೆ ಎಡವಿಬಿದ್ದಿದ್ದ.

2006 ರಲ್ಲಿ ನಡೆದ ಉದ್ದೀಪನ ಮದ್ದುಗಳ ಸೇವನೆಯ ಹೊಸ ಪ್ರಕರಣವೊಂದು ಸಾಬೀತಾಗಿ ಜಸ್ಟಿನ್ ಗೆ ಎಂಟು ವರ್ಷಗಳ ನಿಷೇಧವನ್ನು ಹೇರಲಾಗಿತ್ತು. ನಂತರ ಈ ಶಿಕ್ಷೆಯನ್ನು ನಾಲ್ಕು ವರ್ಷಗಳಿಗೆ ಇಳಿಸಿದಾಗಲೂ ಕೇಳಿಬಂದ ವಿರೋಧಗಳು ಅಷ್ಟಿಷ್ಟಲ್ಲ. ಜವಾಬ್ದಾರಿಯಿಲ್ಲದೆ ಪದೇ ಪದೇ ತಪ್ಪುಮಾಡುತ್ತಾ ಕ್ರೀಡೆಯ ಘನತೆಗೆ ಕುಂದುತರುವ ಆಟಗಾರರಿಗೆ ಕ್ಷಮಾದಾನವನ್ನು ನೀಡುವುದರಲ್ಲಿ ಅರ್ಥವೇ ಇಲ್ಲ, ಹೀಗಾಗಿ ಇಂಥವರಿಗೆ ಆಜನ್ಮ ನಿಷೇಧವೇ ಸೂಕ್ತ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಅಂತೂ ಈ ನಾಲ್ಕು ವರ್ಷಗಳ ನಿಷೇಧದೊಂದಿಗೆ ಜಸ್ಟಿನ್ ಮತ್ತೆ ನೇಪಥ್ಯಕ್ಕೆ ಸರಿದಿದ್ದ.

ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಎದುರಿಸಬೇಕಾಗಿ ಬಂದ ಎರಡು ನಿಷೇಧಗಳು ಆತನ ಒಟ್ಟಾರೆ ಇಮೇಜ್ ಅನ್ನೇ ಧ್ವಂಸಗೊಳಿಸಿತು ಎಂದರೆ ತಪ್ಪಾಗಲಾರದು. ಅಸಲಿಗೆ ಜಸ್ಟಿನ್ ನ ಸುತ್ತಲಿದ್ದ ಕೂಟವೇ ಅಡ್ಡದಾರಿ ಹಿಡಿದಿತ್ತು. ಜಸ್ಟಿನ್ ಗಟ್ಲಿನ್ ನ ಕೋಚ್ ಆಗಿದ್ದ ಟ್ರೆವರ್ ಗ್ರಹಾಮ್ ಹಲವು ಖ್ಯಾತ ಒಲಿಂಪಿಯನ್ ಗಳಿಗೆ ತರಬೇತುದಾರರಾಗಿ ಸೇವೆ ಸಲ್ಲಿಸಿದವರು. ಆದರೆ ಇವರೊಬ್ಬರ ತಂಡದಿಂದಲೇ ಬರೋಬ್ಬರಿ ಎಂಟು ಆಟಗಾರರು ಉದ್ದೀಪನ ಮದ್ದು ಸೇವನಾ ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದರು ಎಂಬುದು ವಿಚಿತ್ರ.

ಖ್ಯಾತ ಅಮೆರಿಕನ್ ಅಥ್ಲೀಟ್ ಗಳಾದ ಮರಿಯಾನ್ ಜೋನ್ಸ್ ಮತ್ತು ಟಿಮ್ ಮಾಂಟೋಗ್ಮರಿ ಈ ಪಟ್ಟಿಯಲ್ಲಿರುವ ಅಗ್ರಗಣ್ಯರು. ಕ್ರೀಡಾಲೋಕದಲ್ಲಿ ಸಂಚಲನವನ್ನೆಬ್ಬಿಸಿದ ನಿಷೇಧಿತ ಉದ್ದೀಪನಾ ಮದ್ದು ಸೇವನೆ ಮತ್ತು ಅಕ್ರಮ ಸಾಗಾಣಿಕೆ ಸಂಬಂಧಿ ಕುಖ್ಯಾತ `ಬಾಲ್ಕೋ ಹಗರಣ’ವನ್ನು ಬಯಲಿಗೆಳೆದ ಹೊರತಾಗಿಯೂ ತಾನು ತೋಡಿದ ಖೆಡ್ಡಾದಲ್ಲೇ ಗ್ರಹಾಮ್ ಸ್ವತಃ ಬಿದ್ದುಬಿಟ್ಟಿದ್ದರು. ಮುಂದೆ ಇವೆಲ್ಲವುಗಳಿಂದಾಗಿ ಗ್ರಹಾಮ್ ಗೆ ಭಾರೀ ತಲೆದಂಡವೇ ಕಾದಿತ್ತು. ಇನ್ನು ಮುಂದೆ ಯಾವ ಆಟಗಾರರಿಗೂ ನೀವು ತರಬೇತಿ ಕೊಡುವಂತಿಲ್ಲ ಎಂದು ಅಮೇರಿಕಾ ಒಲಿಂಪಿಕ್ಸ್ ಸಮಿತಿಯಿಂದ ಬಂದೆರಗಿದ ಆದೇಶವು ಅವರಿಗೆ ಆಜನ್ಮ ನಿಷೇಧವನ್ನು ಹೇರಿತ್ತು. ಅಂತೂ ಜಸ್ಟಿನ್ ಕೂಡ ಗ್ರಹಾಮ್ ರ ಪಾಳಯದಲ್ಲೊಬ್ಬ ಎಂಬ ಕಲೆಯು ಶಾಶ್ವತವಾಗಿ ಉಳಿದೇಬಿಟ್ಟಿತು.

ಉಸೇನ್ ಬೋಲ್ಟ್ ನ ಕಳಂಕರಹಿತ ಹಿನ್ನೆಲೆಯ ಪ್ರಖರತೆಯೆದುರು ಜಸ್ಟಿನ್ ಗಟ್ಲಿನ್ ನ ಈ ಐತಿಹಾಸಿಕ ಸಾಧನೆ ಅದೆಷ್ಟು ಮಂಕಾಯಿತು ಎಂದರೆ ಆತನ ಗೆಲುವಿನ ನಂತರ ನಡೆದ ಅನಿರೀಕ್ಷಿತ ಬೆಳವಣಿಗೆಗಳೇ ಸಾಕ್ಷಿ. ಪದಕಗಳನ್ನು ವಿಜೇತರಿಗೆ ನೀಡಲು ಆಗಮಿಸಿದ್ದ ಇಂಟನ್ರ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಷನ್ನಿನ ಅಧ್ಯಕ್ಷರಾದ ಲಾರ್ಡ್ ಸೆಬಾಸ್ಟಿಯನ್ ಕೋ ರವರು ಲಗುಬಗೆಯಿಂದ ಪದಕಗಳನ್ನು ವಿಜೇತರ ಕೊರಳಿಗೆ ಹಾಕಿ ಹೊರನಡೆದರಲ್ಲದೆ ತಾನೇ ಸೋತುಹೋದೆಯೆಂಬಂತಹ ನಿರಾಸೆಯ ಧಾಟಿಯಲ್ಲಿ ನಂತರ ಮಾತನಾಡಿದರು (ಲಾರ್ಡ್ ಕೋ ಒಲಿಂಪಿಕ್ಸ್ ನಲ್ಲಿ ಎರಡು ಬಾರಿ ಚಿನ್ನದ ಪದಕಗಳನ್ನು ಪಡೆದುಕೊಂಡ ಕ್ರೀಡಾಳು ಕೂಡ ಹೌದು.

2012 ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದ ಮುಖ್ಯಸ್ಥರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ). ಇನ್ನು ಪದಕ ವಿತರಣಾ ಸಮಾರಂಭವನ್ನು ಸ್ಥಳೀಯ ಕಾಲಮಾನ ರಾತ್ರಿಯ ಎಂಟು ಗಂಟೆಯಿಂದ ಸಂಜೆಯ ಆರೂ ಐವತ್ತಕ್ಕೆ ಹಟಾತ್ತನೆ ಬದಲಿಸಲಾಗಿತ್ತು. ಪಂದ್ಯದ ಫಲಿತಾಂಶವೇ ಇದಕ್ಕೆ ಕಾರಣವೆಂಬುದನ್ನು ಆಯೋಜನಾ ಸಮಿತಿಯು ಅಲ್ಲಗಳೆದರೂ ಜಸ್ಟಿನ್ ನ ಹೆಸರಿನೊಂದಿಗೆ ಅಂಟಿಕೊಂಡಿರುವ ನಕಾರಾತ್ಮಕ ಪಬ್ಲಿಸಿಟಿಯಿಂದ ಸಮಿತಿಯು ದೂರವೇ ಉಳಿದುಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಿದ್ದು ಸ್ಪಷ್ಟವಾಗಿತ್ತು. ದ ಐರಿಷ್ ಟೈಮ್ಸ್ ಪತ್ರಿಕೆಯಂತೂ ಜಸ್ಟಿನ್ ನನ್ನು ಉಲ್ಲೇಖಿಸುತ್ತಾ `ವಿದಾಯದ ಸಮಯದಲ್ಲಿ ಬಂದ ವಿಲನ್’ ಎಂದೇ ಬರೆದುಬಿಟ್ಟಿತು.

ಹಾಗೆ ನೋಡಿದರೆ ಜಸ್ಟಿನ್ ಗಟ್ಲಿನ್ ಪ್ರತಿಭಾವಂತನೇ. 2004 ರ ಒಲಿಂಪಿಕ್ಸ್ ನಲ್ಲಿ ನೂರು ಮೀಟರ್ ಓಟದ ಚಿನ್ನದ ಪದಕವೂ ಸೇರಿದಂತೆ ಜಸ್ಟಿನ್ ಒಟ್ಟು ಐದು ಒಲಿಂಪಿಕ್ಸ್ ಪದಕಗಳ ಒಡೆಯ. ಇನ್ನು ವಿಶ್ವ ಚಾಂಪಿಯನ್ ಪಂದ್ಯಾವಳಿಗಳ ಲೆಕ್ಕ ಹಿಡಿದರೆ ಅವುಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಾಗುತ್ತದೆ. ನಾಲ್ಕು ವರ್ಷಗಳ ನಿಷೇಧದ ಶಿಕ್ಷೆಯನ್ನು ಮುಗಿಸಿ 2010 ರಲ್ಲಿ ಮರಳಿ ಬಂದು ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆಲ್ಲುವುದೆಂದರೆ ತಮಾಷೆಯ ಮಾತಲ್ಲ.

ಆದರೆ ಅನಗತ್ಯ ವಿವಾದಗಳೇ ಆತನ ಸಾಧನೆಯ ಎತ್ತರವನ್ನು ಮಂಕಾಗಿಸಿದವು. ಕೊಂಚ ಬಾಯಿಬಡುಕತನವೂ ಆತನ ಇಮೇಜ್ ಅನ್ನು ಮತ್ತಷ್ಟು ತಗ್ಗಿಸಿತು. “ತಮ್ಮ ಮಾತುಗಳಲ್ಲಿ ನನ್ನನ್ನು ವಿನಾಕಾರಣ ಯಾಕೆ ಎಳೆದು ತರುತ್ತಾರೆಂದೇ ಗೊತ್ತಿಲ್ಲ. ಆದರೆ ಅವರ ಕುಹಕದ ಪ್ರತೀ ಮಾತುಗಳೂ ಕೂಡ ನನ್ನನ್ನು ತೀವ್ರವಾಗಿ ಕೆರಳಿಸುತ್ತವೆ. ದೇಹವನ್ನು ಮತ್ತಷ್ಟು ದಂಡಿಸುವಂತೆ, ಪರಿಶ್ರಮ ಪಡುವಂತೆ ಪ್ರೇರೇಪಿಸುತ್ತವೆ”, ಎಂದು ಸ್ವತಃ ಉಸೇನ್ ಬೋಲ್ಟ್ ಈ ಬಗ್ಗೆ ಹೇಳಿದ್ದುಂಟು. ಬೋಲ್ಟ್ ನ ತೂಕದ ಮಾತುಗಳು ನಿಜವಾಗಿದ್ದವು. ವಾಚಾಳಿತನವನ್ನು ತೋರಿಸುತ್ತಿದ್ದವರು ಒಣಮಾತುಗಳಲ್ಲೇ ಉಳಿದುಹೋದರೆ ಬೋಲ್ಟ್ ಒಂದರ ಹಿಂದೊಂದರಂತೆ ಮೈಲುಗಲ್ಲುಗಳನ್ನು ನೆಡುತ್ತಲೇ ಹೋದ. ತನಗೆ ತಾನೇ ಸಾಟಿ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದ.

ಮಾಧ್ಯಮಗಳು ಉಸೇನ್ ಬೋಲ್ಟ್ ಮತ್ತು ಜಸ್ಟಿನ್ ಗಟ್ಲಿನ್ ರನ್ನು ಕ್ರೀಡಾಂಗಣದಾಚೆಗೂ ಬದ್ಧವೈರಿಗಳಂತೆಯೇ ಪ್ರಸ್ತುತಪಡಿಸುತ್ತಾ ಬಂದಿವೆ. ಜಸ್ಟಿನ್ ನ ಹರಕುಬಾಯಿಯೂ ಇವುಗಳಿಗೆ ಕುಮ್ಮಕ್ಕು ನೀಡಿದ್ದು ಸತ್ಯ. ಆದರೆ ಮಾತಿನ ವಿಷಯದಲ್ಲಿ ಬೋಲ್ಟ್ ಬುದ್ಧಿವಂತ. ಆ ಶಿಸ್ತೇ ಅವನನ್ನು ಕಾಲಕಾಲಕ್ಕೂ ಕಾಪಾಡಿತು. ತಮಾಷೆಯ ಸಂಗತಿಯೆಂದರೆ 1896 ರಿಂದ ಪ್ರಾರಂಭವಾದ ಆಧುನಿಕ ಒಲಿಂಪಿಕ್ಸ್ ನ ಇತಿಹಾಸವನ್ನು ಅವಲೋಕಿಸಿದರೆ ಪದಕ ವಿಜೇತ ನೂರು ಮೀಟರ್ ಓಟದ ಆಟಗಾರರ ಸರಾಸರಿ ವಯಸ್ಸು ಇಪ್ಪತ್ತಮೂರು. ಆದರೆ ಇನ್ನೇನು ಎರಡು ವಾರಗಳಲ್ಲಿ ಉಸೇನ್ ಬೋಲ್ಟ್ ಗೆ ಮೂವತ್ತೊಂದು ತುಂಬಲಿದ್ದರೆ ಜಸ್ಟಿನ್ ಆಗಲೇ ಮೂವತ್ತೈದರ ಬೋಗಿಯಲ್ಲಿದ್ದಾನೆ. ಒಲಿಂಪಿಕ್ಸ್ ಕ್ರೀಡಾಕೂಟದ ನೂರು ಮೀಟರ್ ಓಟದ ಇತಿಹಾಸದಲ್ಲಿ ಚಿನ್ನದ ಪದಕ ಗಳಿಸಿದವರಲ್ಲಿ ಹಿರಿಯ ಎಂದರೆ ಇದೇ ಜಸ್ಟಿನ್ ಗಟ್ಲಿನ್. ಬೋಲ್ಟ್ ಈತನನ್ನು `ಮುದುಕ’ ಎನ್ನುತ್ತಾ ಕಾಲೆಳೆಯುವುದು, ಜಸ್ಟಿನ್ ಬೋಲ್ಟ್ ನನ್ನು `ಮಧ್ಯವಯಸ್ಕ’ ಎಂದು ಕಿಚಾಯಿಸುವುದು… ಇವೆಲ್ಲಾ ಕ್ಯಾಮೆರಾ ಹಿಂದಿನ ಇವರಿಬ್ಬರ ಗೆಳೆತನದ ಝಲಕ್ ಗಳಲ್ಲೊಂದಂತೆ.

ಇಬ್ಬರೂ ಹೋಗಿ ದಕ್ಷಿಣ ಫ್ಲೋರಿಡಾದಲ್ಲಿ ಪಾರ್ಟಿ ಮಾಡಿ ಸುದ್ದಿಯಾಗಿದ್ದೂ ಇದೆ. ಅಂದಹಾಗೆ ತನ್ನನ್ನು ತಾನು `ಬ್ಯಾಟ್ ಮ್ಯಾನ್ ಆಫ್ ಟ್ರ್ಯಾಕ್’ ಎಂದು ಹೆಮ್ಮೆಯಿಂದ ಕರೆದುಕೊಳ್ಳುವ ಜಸ್ಟಿನ್ ಗಟ್ಲಿನ್ ಬಿಳಿಯಾಗುತ್ತಿರುವ ತನ್ನ ತಲೆಕೂದಲುಗಳ ಬಗ್ಗೆ ಮಾತನಾಡಿದರೆ ಅವಕ್ಕೆ `ಲೋಕಜ್ಞಾನ’ದ ಹೆಸರಿಟ್ಟು ತನ್ನ ಯೌವನದ ಪರವಾಗಿ ಬ್ಯಾಟ್ ಬೀಸುತ್ತಾನಂತೆ.

ಇಂತಿಪ್ಪ ಜಸ್ಟಿನ್ ಗಟ್ಲಿನ್ ಮಾಧ್ಯಮಗಳೆದುರು ಈ ಹಿಂದೆ ಕೊಂಕು ಮಾತಾಡಿದಾಗಲೂ ತನ್ನ ಅದ್ಭುತ ಪ್ರದರ್ಶನದ ಮೂಲಕವೇ ಉತ್ತರಗಳನ್ನು ಕೊಟ್ಟು ಎಲ್ಲರ ಬಾಯಿಮುಚ್ಚಿಸುತ್ತಿದ್ದಾತ ಉಸೇನ್ ಬೋಲ್ಟ್. ತನ್ನ ಜೀವನದ ಕೊನೆಯ ನೂರು ಮೀಟರ್ ಓಟದ ಪಂದ್ಯದಲ್ಲೂ ಬೋಲ್ಟ್ ಅದನ್ನೇ ಮಾಡಿದ. ಗೆದ್ದ ಎದುರಾಳಿಯನ್ನು ಮನಸಾರೆ ಅಭಿನಂದಿಸಿದ. “ನನ್ನಂತೆಯೇ ಜಸ್ಟಿನ್ ಕೂಡ ನಿರಂತರವಾಗಿ ತನ್ನ ಪ್ರತಿಭೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾನೆ”, ಎಂದ ಬೋಲ್ಟ್ “ಜಸ್ಟಿನ್ ನ ಪ್ರತಿಭೆಗೆ, ಪರಿಶ್ರಮಕ್ಕೆ ಸಂದ ಗೆಲುವಿದು” ಎಂದೂ ಹೇಳಿದ. ಬೆಳ್ಳಿ ಪದಕ ವಿಜೇತ `ಹೊಸ ಹುಡುಗ’ ಕೋಲ್ ಮನ್ ಬಗ್ಗೆಯೂ ಬೋಲ್ಟ್ ನ ಮಾತುಗಳಲ್ಲಿ ಪ್ರಶಂಸೆ ಮತ್ತು ಹಾರೈಕೆಗಳಿದ್ದವು.

ಉಸೇನ್ ಬೋಲ್ಟ್ ಈ ಬಾರಿಯೂ ಸಮಯೋಚಿತ ಮಾತನ್ನೇ ಆಡಿದ ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ ಹಾಗೇನಾದರೂ ಪ್ರೇಕ್ಷಕರಿಂದ ಬೈಗುಳಗಳನ್ನು ಕೇಳಲೇಬೇಕಾದ ಅನಿವಾರ್ಯತೆಯಿದ್ದರೆ ಅದು ಜಸ್ಟಿನ್ ಗಷ್ಟೇ ಸೀಮಿತವಾಗಬೇಕಾಗಿರಲಿಲ್ಲ. ಯೊಹಾನ್ ಬ್ಲೇಕ್ ಎಂಬ ಜಮೈಕನ್ ಆಟಗಾರನೂ ಇವರೆಲ್ಲರ ಜೊತೆ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ಸ್ಪರ್ಧಾಳುವಾಗಿ ಭಾಗವಹಿಸಿದ್ದ. ಬೋಲ್ಟ್ ನ ತಂಡದ ಸದಸ್ಯನೂ ಆಗಿರುವ ಬ್ಲೇಕ್ ಕೂಡ ಉದ್ದೀಪನಾ ಪರೀಕ್ಷೆಯಲ್ಲಿ ಎಡವಿ ಮೂರು ತಿಂಗಳ ನಿಷೇಧವನ್ನು ಎದುರಿಸಿದವನು. ಹೀಗಾಗಿ ಎಲ್ಲರ ಬಗ್ಗೆಯೂ ಸಮಾನ ಗೌರವಗಳಿರಲಿ ಎಂಬ ಕಳಕಳಿಯು ಬೋಲ್ಟ್ ನ ಮಾತುಗಳಲ್ಲಿತ್ತು.

ಬೋಲ್ಟ್-ಜಸ್ಟಿನ್ ರನ್ನು ನಿರಂತರವಾಗಿ `ಧರ್ಮ-ಅಧರ್ಮ’ಗಳ ಧಾಟಿಯಲ್ಲೇ ಮಾಧ್ಯಮಗಳು ಪ್ರಸ್ತುತಪಡಿಸುತ್ತಾ ಬಂದಿವೆ. ಸಂದರ್ಭಗಳೂ ಹಾಗಿದ್ದವು ಎಂಬುದನ್ನು ಒಪ್ಪಿಕೊಳ್ಳೋಣ. ಉಸೇನ್ ಬೋಲ್ಟ್ ತನ್ನ ಮಿಂಚಿನ ವೇಗದಿಂದಷ್ಟೇ ಅಲ್ಲದೆ ಕಳಂಕರಹಿತ ದಾಖಲೆಗಳಿಂದಲೂ ದಂತಕಥೆಯಾದವನು. ನೂರು ಮೀಟರ್ ಗಳ ದೂರವನ್ನು 9.58 ಸೆಕೆಂಡುಗಳಲ್ಲಿ (2009) ಮತ್ತು ಇನ್ನೂರು ಮೀಟರ್ ಗಳ ದೂರವನ್ನು 19.19 ಸೆಕೆಂಡುಗಳಲ್ಲಿ ಕ್ರಮಿಸಿದ ವಿಶ್ವದಾಖಲೆ (2009) ಅವನ ಹೆಸರಿನಲ್ಲೇ ಇದೆ. ಆತ ಫುಟ್ಬಾಲ್ ತಾರೆ ಪೀಲೆಯಂತಹ ದಿಗ್ಗಜರಿಂದ ಭಲೇ ಎನ್ನಿಸಿಕೊಂಡವನು.

ಜಸ್ಟಿನ್ ಗಟ್ಲಿನ್ ಯಾವ ರೀತಿಯಲ್ಲೂ ಉಸೇನ್ ಬೋಲ್ಟ್ ನ ಸರಿಸಮಾನನಾಗಿಲ್ಲದಿರಬಹುದು. ಆದರೆ ಆತನೂ ಕೂಡ ತನ್ನ ನಾಲ್ಕು ವರ್ಷಗಳ ಸುದೀರ್ಘ ಶಿಕ್ಷೆಯನ್ನು ಅನುಭವಿಸಿ, ಮತ್ತೆ ಫೀನಿಕ್ಸ್ ನಂತೆ ಮೇಲೆದ್ದು ಹಿಂದೆಂದಿಗಿಂತಲೂ ಹೆಚ್ಚಿನ ವೇಗದಲ್ಲಿ ಓಡಿ ಸೈ ಎನಿಸಿಕೊಂಡವನು. ಆಗಾಗ ದಾರಿತಪ್ಪಿದ್ದು ಹೌದಾದರೂ ಹೇಳಿಕೊಳ್ಳಲು ಆತನದ್ದೂ ಕೂಡ ಒಂದು ಸಾಹಸಮಯ ಪಯಣ.

ಇದೇ ಶನಿವಾರ ಉಸೇನ್ ಬೋಲ್ಟ್ ನ ಅಂತಾರಾಷ್ಟ್ರೀಯ ಕ್ರೀಡಾಜೀವನದ ಕೊನೆಯ ರಿಲೇ ಪಂದ್ಯವು ನಡೆಯಲಿದೆ. ಇದರೊಂದಿಗೆ ಅಥ್ಲೆಟಿಕ್ಸ್ ಲೋಕದಲ್ಲಿ ಉಸೇನ್ ಬೋಲ್ಟ್ ಎಂಬ ಕೌತುಕದ ಮಿಂಚಿನ ವೇಗದ ಓಟಕ್ಕೆ ಮುಕ್ತಾಯವೂ ಆಗಲಿದೆ. ತನ್ನ ಪಯಣದುದ್ದಕ್ಕೂ ಕ್ರೀಡೆಯ ಘನತೆಗೆ ಕೊಂಚವೂ ಕುತ್ತಾಗದಂತೆ ಮುನ್ನಡೆದ ಮಹಾನ್ ಅಥ್ಲೀಟ್ ಉಸೇನ್ ಬೋಲ್ಟ್ ಎಂಬುದರಲ್ಲಿ ಎರಡು ಮಾತಿಲ್ಲ. ಎಂದಿನಂತೆ ಈ ಬಾರಿಯೂ ಅಪ್ಪಟ ಕ್ರೀಡಾಮನೋಭಾವವೇ ಗೆಲ್ಲಲಿ.

4 Responses

 1. Sasashiv soratur says:

  ಅಂಗಳದಲ್ಲಿ ಇನ್ನೂ ಬೊಲ್ಟ್ ಇರುವುದಿಲ್ಲ ಅನ್ನುವುದೇ ಬೇಜಾರು!
  ಉತ್ತಮವಾಗಿ ಬರೆದಿದ್ದೀರಿ.
  ಧನ್ಯವಾದಗಳು.

  • Prasad says:

   ನೀವು ಹೇಳಿದ್ದು ಸತ್ಯ… ಧನ್ಯವಾದ ಸದಾಶಿವರವರೇ…

 2. ಉತ್ತಮವಾದ ಲೇಖನ

Leave a Reply

%d bloggers like this: