‘ಡ್ರಾಮಾ ಜೂನಿಯರ್ಸ್’ ನೋಡುತ್ತಾ..


 

 

 

ಶ್ರೀಪಾದ ಹೆಗಡೆ 

 

 

ಈಗ ಒಂದೆರಡು ವಾರದಿಂದ ‘ಡ್ರಾಮಾ ಜೂನಿಯರ್ಸ್’ ಆಯ್ಕೆ ಕಾರ್ಯಕ್ರಮ ನೋಡುತ್ತಿದ್ದಾಗ ನನ್ನ ಗಮನಕ್ಕೆ ಬಂದ ಒಂದು ವಿಷಯ ಅಂದರೆ ದಕ್ಷಿಣೋತ್ತರ ಜಿಲ್ಲೆಗಳಿಂದ ಬಂದ ಸ್ಪರ್ಧಿಗಳಲ್ಲಿ ಅನೇಕರ ಆಯ್ಕೆ ‘ಯಕ್ಷಗಾನ’ ದ ಪಾತ್ರಾಭಿನಯ.

ಈ ಸ್ಪರ್ಧಿಗಳೆಲ್ಲ ಇನ್ನೂ ಚಿಕ್ಕ ಮಕ್ಕಳಾದ್ದರಿಂದ ಇದು ಅವರ ಆಯ್ಕೆ ಎನ್ನುವುದಕ್ಕಿಂತ ಇದು ಅವರ ಪಾಲಕರ ಆಯ್ಕೆ ಎನ್ನುವುದು ಯೋಗ್ಯವಾದೀತು. ಯಕ್ಷಗಾನ ಕಲೆ ಈ ಪ್ರದೇಶವನ್ನು ಇನ್ನೂವರೆವಿಗೂ ಅದೆಷ್ಟು ಆವರಿಸಿಕೊಂಡಿದೆ ಎನ್ನುವುದನ್ನು ಇದು ತೋರಿಸುತ್ತದೆ.

ಹಿಂದೆಂದಿಗಿಂತಲೂ ಬೇರೆ ಬೇರೆ ಕಲಾ ಪ್ರಕಾರಗಳಿಗೆ ನಾವೆಲ್ಲ ತೆರೆದುಕೊಂಡ ಕಾಲ ಇದು. ಇಂಥ ಕಾಲದಲ್ಲಿಯೂ ಯಕ್ಷಗಾನದ ಪ್ರಭಾವ ಈ ಊರುಗಳಲ್ಲಿ ಉಳಿದೆಲ್ಲ ಕಲಾ ಪ್ರಕಾರಗಳನ್ನು ಮಸುಕಾಗಿಸಿದೆ.

ಅಂದಮೇಲೆ ಮೂರು ನಾಲ್ಕು ದಶಕಗಳ ಹಿಂದೆ ಈ ಯಕ್ಷಗಾನದ ಪ್ರಭಾವ ಈ ಪ್ರದೇಶದಲ್ಲಿ ಹೇಗಿದ್ದಿರಬಹುದು ಊಹಿಸಿಕೊಳ್ಳಿ. ಹಾಗಾಗಿಯೇ ಕವಿ ಗೋಪಾಲಕೃಷ್ಣ ಅಡಿಗರು ಒಮ್ಮೆ ಹೇಳಿದ್ದರು ‘ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಯಕ್ಷಗಾನವು ಅನ್ಯ ಕಲಾಪ್ರಕಾರಗಳನ್ನು ಬೆಳೆಯಗೊಡಲಿಲ್ಲ , ಹಾಗೆಯೇ ತಾನೂ ಬೆಳೆಯಲಿಲ್ಲ.’ ಬಹುಶಃ ಈ ಹೇಳಿಕೆಯ ಮೊದಲ ಭಾಗವನ್ನು ಯಾವ ವಿವಾದವಿಲ್ಲದೆ ದಕ್ಷಿಣೋತ್ತರ ಜಿಲ್ಲೆಯ ಎಲ್ಲರೂ ಒಪ್ಪಿದರೂ ಎರಡನೆಯ ಭಾಗದ ‘ಅದು ತಾನೂ ಬೆಳೆಯಲಿಲ್ಲ’ ಎನ್ನುವ ಮಾತಿಗೆ ಯಕ್ಷಗಾನ ಪ್ರೇಮಿಗಳ ತೀವ್ರ ಆಕ್ಷೇಪವಿರುವ ಸಾಧ್ಯತೆ ಇದೆ.

ಅಡಿಗರ ಯಕ್ಷಗಾನದ ಬಗೆಗಿನ ಇನ್ನೊಂದು ಹೇಳಿಕೆ ಯಕ್ಷಗಾನ ಪ್ರೇಮಿಗಳಿಂದ ತೀವ್ರವಾದ ವಿರೋಧವನ್ನು ಎದುರಿಸಿತ್ತು. ಅದೆಂದರೆ ‘ಯಕ್ಷಗಾನ ಮತ್ತು ತಾಳಮದ್ದಲೆಗಳಲ್ಲಿ ಮಾತಾಡಿ ಮಾತಾಡಿ ದಕ್ಷಿಣೋತ್ತರ ಜಿಲ್ಲೆಗಳ ಜನ ತಮಗೆ ಏನು ಅನಿಸುತ್ತದೆ ಎನ್ನುವುದನ್ನು ಯೋಚಿಸುವುದನ್ನೇ ಮರೆತು ಬಿಟ್ಟಿದ್ದಾರೆ’ ಎನ್ನುವ ಅವರ ಮಾತಿಗೆ ಬಹು ದೊಡ್ಡ ಪ್ರಮಾಣದಲ್ಲಿ ಯಕ್ಷಗಾನ ಕಲಾವಿದರು ಮತ್ತು ಯಕ್ಷಗಾನ ಪ್ರೇಮಿಗಳು ವಿರೋಧ ವ್ಯಕ್ತ ಪಡಿಸಿದ್ದರು.

ಇಂತಹ ವಿಷಯಗಳಲ್ಲಿ ಯಕ್ಷಗಾನದ ಮೇರು ಕಲಾವಿದರಲ್ಲೊಬ್ಬರಾಗಿದ್ದ ಕೆರೆಮನೆ ಶಂಭು ಹೆಗಡೆಯವರು ಸಮ ತೂಕದ ನಿಲುವುಗಳನ್ನು ತೆಗೆದುಕೊಳ್ಳುವುದನ್ನು ನಾನು ಬಲ್ಲೆ.

ನಾಡಿನ ಮತ್ತು ದೇಶದ ಇತರ ಕಲಾಪ್ರಕಾರಗಳನ್ನು ಹತ್ತಿರದಿಂದ ನೋಡಿದ ಅನುಭವವಿದ್ದ ಅವರು ಯಕ್ಷಗಾನ ಕಲೆಯ ಇತಿ ಮಿತಿಗಳನ್ನು, ದೌರ್ಬಲ್ಯ ಮತ್ತು ಶಕ್ತಿಗಳನ್ನು ಚೆನ್ನಾಗಿ ಅರಿತವರಾಗಿದ್ದರು. ಅವರೊಂದಿಗಿನ ಖಾಸಗಿ ಮಾತುಕತೆಗಳಲ್ಲಿ ಅವರು ಈ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಸಂಪ್ರದಾಯದ ಚೌಕಟ್ಟಿನಲ್ಲಿಯೇ ಉಳಿದು ಯಕ್ಷಗಾನ ಕಲೆಯನ್ನು ಸಮಕಾಲೀನ ಸ್ಪಂದನೆಗೆ ಮಿಡಿಯುವ ಕಲಾಮಾಧ್ಯಮವಾಗಿ ಸುಧಾರಣೆಗೊಳಿಸುವುದು ಅವರ ಚಿಂತನೆಯ ಮುಖ್ಯ ಭಾಗವಾಗಿತ್ತು.

Leave a Reply