ಅವನು ಮತ್ತೆ ಬರೆಯಲೇ ಇಲ್ಲ..

 

 

 

 

ಸಂವರ್ತ ‘ಸಾಹಿಲ್’

 

 

 

 

 

 

 

ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಭೇಟಿ ಆದ ಬಾಲ್ಯ ಮಿತ್ರನೊಬ್ಬ ನಾನು ಅನುವಾದ ಮಾಡಿದ ಪುಸ್ತಕಕ್ಕೆ ಅಭಿನಂದಿಸಿ, “ಶಾಲಾ ಸಮಯದಲ್ಲಿ ನಿನಗೆ ಓದು ಬರಹ ಅಂದ್ರೆ ಆಗುತ್ತಿರಲಿಲ್ಲವಲ್ಲ. ಎಲ್ಲಾ ಬದಲಾಗಿದ್ದು ಹೇಗೆ? ಶಾಲೆಯಲ್ಲಿ ಅಂಥಾ ನಿರಾಸಕ್ತಿ ಯಾಕಿತ್ತು?” ಎಂದು ಕೇಳಿದ. “ಶಾಲೆಯಲ್ಲೇ ಏನೋ ಸಮಸ್ಯೆ ಇದ್ದಿರಬೇಕಲ್ವಾ?” ಎಂದು ನಗಾಡಿ ಸುಮ್ಮನಾದೆ. ನಾನು ನಕ್ಕ ಕಾರಣ ಆತನೂ ನಕ್ಕನೊ ಏನೋ ಗೊತ್ತಿಲ್ಲ..

ನಾನು ಶಾಲೆಯಲ್ಲಿ ಯಾಕೆ ಓದು ಬರಹದ ಬಗ್ಗೆ ಆಸಕ್ತಿ ತೋರಲಿಲ್ಲ ಎಂಬುದಕ್ಕೆ ಶಾಲಾ ವ್ಯವಸ್ಥೆ, ನನ್ನ ವೈಯಕ್ತಿಕ ಬದುಕು ಎಲ್ಲವೂ ಕಾರಣ ಇದ್ದಿರಬಹುದು. ಆದರೆ ಓದು ಬರಹದಲ್ಲಿ ಆಸಕ್ತಿ ಇಲ್ಲದ ನಾನು ಬರವಣಿಗೆಯಲ್ಲಿ ತೊಡಗಿದ್ದು ನಿಜವಾಗಿಯೂ ದೊಡ್ಡ ಸಂಗತಿಯಲ್ಲ. ಈ ನನ್ನ ಕಥನದ ಬೆಳಕಿನಲ್ಲಿ ಯಾರೂ ಲೋಕವನ್ನು ಅಳಿಯಬೇಕಾಗಿಲ್ಲ. ಆದರೆ ನನ್ನೊಂದಿಗೆ ಕಲಿತ ಇನ್ನೊಂದು ಹುಡುಗ ಮಂಜನ ಬದುಕಿನ ಕನ್ನಡಿಯಲ್ಲಿ ಈ ವ್ಯವಸ್ಥೆ ಒಮ್ಮೆ ಮುಖ ನೋಡಿಕೊಳ್ಳಬೇಕು.

ನಾನು ಹೈಸ್ಕೂಲ್ ಕಲಿತ ಶಾಲೆಯಲ್ಲಿ ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ಎರಡೂ ಇದ್ದವು. ನಮಗೆಲ್ಲ ನಾವು ಆಂಗ್ಲ ಮಾಧ್ಯಮದವರು ಎಂಬ ಅಹಂ ಲೋಕಕ್ಕೆಲ್ಲಾ ಹಂಚುವಷ್ಟು ಇತ್ತು. ಕನ್ನಡ ಮಾಧ್ಯಮದಲ್ಲಿ ಕಲಿತ ಹಲವರು ತಮ್ಮ ಪ್ರಾಥಮಿಕ ಶಾಲೆಯಲ್ಲಿ ನನ್ನ ಅಮ್ಮನ ವಿದ್ಯಾರ್ಥಿಗಳಾಗಿದ್ದವರು. ಅವರಲ್ಲಿ ಒಬ್ಬ ಮಂಜ.

ಫುಟ್ಬಾಲ್ ಮೈದಾನದಲ್ಲಿ ಮೊದಲು ಪರಿಚಯವಾದ ಮಂಜ ಬಹಳ ರಫ್ ಆಗಿ ಫುಟ್ಬಾಲ್ ಆಡುತ್ತಿದ್ದು ಎದುರಾಳಿಯಾದ ನಮ್ಮಲ್ಲೆಲ್ಲಾ ಹೆದರಿಕೆ ಹುಟ್ಟುಹಾಕಿದ್ದ. ತೀರಾ ಸಣ್ಣಕ್ಕೆ ಇದ್ದರೂ ದೊಡ್ಡ ಬಾಯಿ ಮತ್ತು ನಿರಂಕುಶ ಉಡಾಫೆ ಇರುವ ನಾನು ಹೆಚ್ಚು ಕಡಿಮೆ ಎಲ್ಲರನ್ನೂ ಎದುರುಹಾಕಿಕೊಳ್ಳುತ್ತಿದ್ದೆ ಮತ್ತು ಅದಕ್ಕೆ ಮಂಜ ಏನೂ ಹೊರತಾಗಿರಲಿಲ್ಲ. ಅವನು ರಭಸದಿಂದ ಒದ್ದ ಫುಟ್ಬಾಲ್ ಅದೆಷ್ಟೋ ಬಾರಿ ನನ್ನ ಮೂತಿ ಮುಸುಡಿಗೆ ತಾಗಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಆ ಎಲ್ಲಾ ಫುಟ್ಬಾಲ್ ಏಟು ನನ್ನನ್ನು ಇನ್ನಷ್ಟು ಒರಟಾಗಿ ಮಾಡಿತ್ತು ಮತ್ತು ಆ ಕಾರಣಕ್ಕೆ ನಾನು ಮಂಜನನ್ನು ಇನ್ನೂ ಹೆಚ್ಚು ಹೆಚ್ಚು ಎದುರಾಗುತ್ತಿದ್ದೆ. ಇದೆಲ್ಲಾ ಎರಡು ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲ ನೆಡೆಯಿತು.

ನಾವು ಹತ್ತನೇ ತರಗತಿಯಲ್ಲಿ ಇರುವಾಗ ಶಾಲೆಯಲ್ಲಿ ನೆಡೆದ ಕವಿತೆ ರಚನೆ ಸ್ಪರ್ಧೆಗೆ ಹೋದಾಗ ಅಲ್ಲಿ ನನ್ನ ಪಕ್ಕದಲ್ಲಿ ಮಂಜನನ್ನು ಕಂಡು ನಾನು ಆಶ್ಚರ್ಯಗೊಂಡಿದ್ದೆ. ಅದು ನಮ್ಮ ಶಾಲೆಯಲ್ಲಿ ಮೊದಲ ಬಾರಿಗೆ ನೆಡೆದ ಕವಿತೆ ರಚನೆ ಸ್ಪರ್ಧೆ. ಅಲ್ಲಿ ತನಕ ಹಾಡು, ಛದ್ಮವೇಷ ಇಂಥವೆಲ್ಲಾ ನಡೀತಾ ಇದ್ದವು. ಆದರೆ ಕವಿತೆ, ಊಹ್ಞೂ “ಎಲಾ ಇವನ… ಫುಟ್ಬಾಲ್ ಒದ್ದ ರೀತಿಯಲ್ಲೇ ಕವಿತೆ ಬರೆಯುತ್ತಾನಾ ಹೇಗೆ?” ಎಂದು ನನಗೆ ನಾನೇ ಅಂದುಕೊಂಡಿದ್ದೆ. ದೇಶಪ್ರೇಮ ದೇಶಭಕ್ತಿ ಇಂಥದ್ದೇನೋ ವಿಷಯ ಕೊಟ್ಟು ಆ ಕುರಿತು ಕವಿತೆ ರಚಿಸಲು ಹೇಳಿದರು. ಅಂದು ಅಲ್ಲಿ ಮಂಜ ಕೂತು ಆವೇಶಭರಿತವಾಗಿ ಬರೆಯುತ್ತಿದ್ದದ್ದು ಒಂದೇ ಕಡೆ ಹೆಚ್ಚು ಹೊತ್ತು ಕಾನ್ಸನ್ಟ್ರೇಟ್ ಮಾಡಲಾಗದ ನಾನು ಕಣ್ಣರಳಿಸಿ ನೋಡಿದ್ದೆ. ಆ ಸ್ಪರ್ಧೆಯ ಫಲಿತಾಂಶ ಬಂದಾಗಲೇ ಗೊತ್ತಾಗಿದ್ದು ಆಕ್ರಮಣಕಾರಿಯಾಗಿ ಫುಟ್ಬಾಲ್ ಒದೆಯುತ್ತಿದ್ದ ಮಂಜ ಓರ್ವ ಕವಿಯೂ ಎಂದು.

ಆ ವರ್ಷದ ಶಾಲಾ ಮ್ಯಾಗಜಿನ್ ಸ್ಪರ್ಧೆ ಗೆದ್ದ ಮಂಜನ ಕವಿತೆಯನ್ನು ಪ್ರಕಟಿಸಿತ್ತು. ನಾವು ಹತ್ತನೇ ತರಗತಿ ಮುಗಿಸಿ ಪದವಿಪೂರ್ವ ತರಗತಿಗೆ ದಾಖಲಾಗಲು ಹೋದ ಸಂದರ್ಭದಲ್ಲಿ ನಮ್ಮ ಕೈಗೆ ಮ್ಯಾಗಜಿನ್ ಇಟ್ಟಿದ್ದರು. ಮಂಜನ ಕವಿತೆ ಓದಿದ ನಾನು ಅವನ ಅಕ್ಷರ ಶ್ರೀಮಂತಿಗೆಗೆ ಮನಸೋತೆ. ಮಂಜನನ್ನು ಅಭಿನಂದಿಸಬೇಕು ಎಂದುಕೊಂಡರೆ ಆತ ಹತ್ತನೇ ತರಗತಿ ಫೇಲ್ ಆಗಿದ್ದ. ಕಾಲೇಜಿನಲ್ಲಿ ಕಾಣಸಿಗಲಿಲ್ಲ (ನಮ್ಮ ಹೈಸ್ಕೂಲ್ ಅಲ್ಲಿಯೇ ಪಿ.ಯು. ತರಗತಿಗಳು ಇದ್ದವು. ಮತ್ತು ನಾನು ಅಲ್ಲಿಯೇ ವಿದ್ಯಾಭ್ಯಾಸ ಮುಂದುವರಿಸಿದ್ದೆ)

ಆ ವರ್ಷದ ಶಾಲಾ ಮ್ಯಾಗಜಿನ್ ನಾವು ಹತ್ತು ವರ್ಷದ ಹಿಂದೆ ಮನೆ ಶಿಫ್ಟ್ ಮಾಡುವ ತನಕ ನನ್ನ ಬಳಿ ಇತ್ತು. ನಾವೆಲ್ಲಾ ಮಂಜ ಮಂಜ ಎಂದು ಕರೆಯುತ್ತಿದ್ದ ಮಂಜುನಾಥನ ಪೂರ್ಣ ಹೆಸರು ಮಂಜುನಾಥ ಬೋವಿ ಎಂದು ತಿಳಿದದ್ದು ನಮ್ಮ ಶಾಲಾ ಮ್ಯಾಗಜಿನ್ ಮಂಜನ ಕವಿತೆಯನ್ನು ಪ್ರಕಟಿಸಿದಾಗಲೇ. ಮಂಜ ಯಾನೆ ಮಂಜುನಾಥ್ ಬೋವಿ ಕವಿಯಾಗಿ ನನಗೆ ಪರಿಚಯವಾಗಿದ್ದ ಆದರೆ ಆತ ಫೇಲ್ ಆಗಿ ಕಾಲೇಜಿಗೆ ಸೇರದೆ ಹೋದ, ಎಲ್ಲಿದ್ದಾನೋ ತಿಳಿಯಲಿಲ್ಲ.

ಆದರೆ ಸಪ್ಲಿಮೆಂಟರಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ ಸ್ವಲ್ಪ ಸಮಯದಲ್ಲೇ ಕಾಲೇಜಿನಲ್ಲಿ ಒಂದು ದಿನ ಮಂಜ ಪ್ರತ್ಯಕ್ಷನಾದ. ಹೋಗಿ ಮಾತನಾಡಿಸಿದಾಗ, “ಪಾಸ್ ಆದೆ. ಕಾಮರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ,” ಎಂದ. ನಾನು ಕಲಾ ವಿಭಾಗದಲ್ಲಿ ಇದ್ದೆ. ಕನ್ನಡ ತರಗತಿಗಳು ಕಾಮರ್ಸ ಮತ್ತು ಕಲಾ ವಿಭಾಗಕ್ಕೆ ಒಟ್ಟಿಗೆ ನೆಡೆಯುತ್ತಿದ್ದ ಕಾರಣ ಮಂಜ ಮತ್ತು ನಾನು ಎರಡು ವರ್ಷ ಒಂದೇ ಕ್ಲಾಸಿನಲ್ಲಿ ಕನ್ನಡ ತರಗತಿಗಳಿಗೆ ಕೂರುವಂತಾಯಿತು. ಆ ಸಂದರ್ಭದಲ್ಲೇ ನಮ್ಮಿಬ್ಬರ ನಡುವೆ ಸ್ನೇಹ ಮೊಳಕೆಯೊಡೆದದ್ದು. ಆದರೂ ಅಪರೂಪಕ್ಕೆ ಮಾತ್ರ ಮಾತನಾಡುತ್ತಿದ್ದದ್ದು ನಾವು. ಆ ದಿನಗಳಲ್ಲೇ ನಾನು ಒಮ್ಮೆ ಅವನ ಬಳಿ, “ನಿನ್ನ ಕವಿತೆ ತುಂಬಾ ಇಷ್ಟವಾಯಿತು,” ಎಂದದ್ದು. ಮಂಜ ತುಂಬಾ ಕ್ಯಾಶುಯಲ್ ಆಗಿ, “ಹಾಗೆ ಟಾಪಿಕ್ ಕೊಟ್ಟು ಕವಿತೆ ಬರೀಲಿಕ್ಕೆ ಹೇಳಿದ್ರೆ ಕಷ್ಟ. ಹಾಗೆಲ್ಲ ಚೌಕಟ್ಟು ಹಾಕ್ಬಾರ್ದು” ಎಂದಿದ್ದ.

ನಾವು ಎರಡನೇ ವರ್ಷದ ಪಿ.ಯು. ಕಲಿಯುತ್ತಿರುವಾಗ ಒಂದು ದಿನ ನನ್ನ ಮನೆಯನ್ನು ಹುಡುಕಿಕೊಂಡು ಬಂದ ಮಂಜ ಸುಮ್ಮನೆ ಏನೇನೋ ಮಾತನಾಡುತ್ತ ಬಹಳ ಸಂಕೋಚದಿಂದ, “ನಾನೊಂದು ಕಾದಂಬರಿ ಬರೆದಿದ್ದೇನೆ. ಓದಿ ನಿನ್ನ ಅಭಿಪ್ರಾಯ ಹೇಳ್ತೀಯಾ?” ಎಂದು ಕೇಳಿದ. “ಖಂಡಿತಾ,” ಎಂದು ನಾನು ಹೇಳುತ್ತಿದ್ದಂತೆ ಆತ, “ಹಾಗಿದ್ದರೆ ಮನೆಗೆ ಹೋಗಿ ನನ್ನ ಪುಸ್ತಕ ತೆಗೆದುಕೊಂಡು ಬರುತ್ತೇನೆ,” ಎಂದಾಗ ನಾನು ಜೊತೆಗೆ ಬರುತ್ತೇನೆ ಎಂದರೆ, “ಬೇಡ ಬೇಡ,” ಎಂದದ್ದು ಮಾತ್ರವಲ್ಲ, “ನಾಳೆ ಕಾಲೇಜಿನಲ್ಲಿ ಕೊಡುತ್ತೇನೆ,” ಎಂದ.

“ಹಾಗಿದ್ದರೆ ಈ ಮಾತನ್ನು ಕಾಲೇಜಿನಲ್ಲಿಯೇ ಕೇಳಬಹುದಿತ್ತಲ್ಲ,” ಎಂದರೆ, “ಅಲ್ಲಿ ಯಾರಾದರೂ ಕೇಳಿಸಿಕೊಂಡರೆ ನನಗೆ ಮುಜುಗರವಾಗುತ್ತದೆ,” ಎಂದು ಹೇಳಿದ. “ನೀನು ನಾಳೆ ಪುಸ್ತಕ ಕೊಡುವಾಗ ಯಾರಾದರೂ ನೋಡುವುದಿಲ್ಲವೇ?” ಎಂದು ಕೇಳಿದರೆ, “ಅದು ನೋಟ್ ಬುಕ್ ಅಂತ ತಿಳಿತಾರೆ ಬಿಡು,” ಎಂದ. ಆತ ಯಾಕೆ ಮಾತಿನ ದಿಕ್ಕು ತಪ್ಪಿಸುತ್ತಿದ್ದ ಎಂದು ಆಗ ನನಗೆ ಅರ್ಥವಾಗಿರಲಿಲ್ಲ. ಆದರೆ ಮಾರನೇ ದಿನ ಆತ ಆ ಪುಸ್ತಕ ಮರೆತು ಬಂದಿದ್ದು ನಾನು ಅದನ್ನ ಕಲೆಕ್ಟ್ ಮಾಡಿಕೊಳ್ಳಲು ಆತನ ಇಚ್ಚೆಯ ವಿರುದ್ಧ ಆತನ ಮನೆಗೆ ಹೋದಾಗ ಆತ ಯಾಕೆ ನನ್ನನ್ನು ತನ್ನ ಮನೆಗೆ ಕರೆದೊಯ್ಯಲು ಹಿಂಜರಿದಿದ್ದ ಎಂದು ತಿಳಿಯಿತು.

ಅದೊಂದು ಸಣ್ಣ ಗುಡಿಸಿಲು. ಅಲ್ಲಿ ಒಂದು ಮೂಲೆಯಲ್ಲಿ ಆತನ ತಂಗಿ ಕೂತು ನೀರು ಕಾಸುತ್ತಿದ್ದಳು. ಒಂದು ಟ್ರಂಕ್ ಒಳಗಡೆಯಿಂದ ಇನ್ನೂರು ಪುಟದ ಲಾಂಗ್ ನೋಟ್ ಬುಕ್ ತೆಗೆದು ಮಂಜ ನನಗೆ ಕೊಟ್ಟ. ಬಿಡಿಸಿ ನೋಡಿದರೆ ಮೊದಲ ಪುಟದಲ್ಲಿ ‘ಶಾಂತ’ ಎಂದು ನೀಲಿ ಶಾಯಿಯಲ್ಲಿ ಬರೆದಿತ್ತು. “ಬಾ ಹೊರಗೆ ಹೋಗಿ ಮಾತಾಡುವ,” ಎಂದು ಮಂಜ ತನ್ನ ಗುಡಿಸಿಲಿನಿಂದ ಹೊರಗೆ ಕರೆದುಕೊಂಡು ಬಂದ. “ಇದು ನನ್ನ ಅಮ್ಮನಂಥಾ ಹೆಣ್ಣೊಬ್ಬಳ ಕತೆ. ಬರೆಯುವಾಗ ನಾಯಕಿಯ ಜಾಗದಲ್ಲಿ ನನಗೆ ನನ್ನಮ್ಮನೇ ಕಾಣಿಸುತ್ತಿದ್ದಳು. ಬರೆಯುತ್ತ ಬರೆಯುತ್ತ ಬಹಳ ಅತ್ತಿದ್ದೇನೆ. ನೀನು ಒಮ್ಮೆ ಓದಿ ಹೇಳು ನಿನಗೆ ಹೇಗೆ ಅನ್ನಿಸುತ್ತದೆ ಅಂತ,” ಎಂದು ಹೇಳಿದ ಮಂಜ ನಾನು ಹೊರಡುವಾಗ ಒಂದು ಮಾತು ಸೇರಿಸಿದ, “ಜಾಗ್ರತೆ. ಕೈತಪ್ಪಿ ಹೋದರೆ ಬೇರೆ ಕಾಪಿ ಇಲ್ಲ. ಮತ್ತೆ ಕೂತು ಬರೆಯಲು ಸಹ ಆಗುವುದಿಲ್ಲ.”

ಮಂಜ ಬರೆದ ಕಾದಂಬರಿ ಮನೆಗೆ ತೆಗೆದುಕೊಂಡು ಬಂದ ನಾನು ತಿಂಗಳುಗಳ ಕಾಲ ಅದನ್ನು ಓದಲೇ ಇಲ್ಲ. ಆಲಸ್ಯ ಮೊದಲು, ಪರೀಕ್ಷೆ ಆಮೇಲೆ ಹೀಗೆ ಏನೇನೋ ಕಾರಣ. ಪರೀಕ್ಷೆ ಮುಗಿದು ರಜೆ ಸಿಕ್ಕಾಗ ಕೂತು ಮಂಜ ಬರೆದ ‘ಶಾಂತ’ ಕಾದಂಬರಿಯನ್ನು ಓದಿದೆ. ತುಂಬಾ ಆಟೋಬಯೋಗ್ರಾಫಿಕಲ್ ಎಂದು ನನಗನ್ನಿಸಿದ್ದ ಆ ಕಾದಂಬರಿಯ ಡೀಟೇಲ್ಸ್ ಎಲ್ಲಾ ಈಗ ಮರೆತಿದ್ದೇನೆ. ಆದರೆ ಅದು ತುಂಬಾ ಎಮೋಷನಲ್ ಆಗಿತ್ತು ಮತ್ತು ಬದುಕುವುದೇ ಒಂದು ಸಾಧನೆ ಎಂದು ಹೇಳುತ್ತಿದ್ದ ಕತೆ ಎಂದು ನೆನಪಿದೆ.

ಪರೀಕ್ಷೆ ಮುಗಿದು ಫಲಿತಾಂಶ ಬಂದು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಾನು ಮಂಗಳೂರಿಗೆ. ಮೊದಲಿಗೆ ಮಂಗಳೂರಿನಲ್ಲೇ ಇದ್ದು ವಾರಾಂತ್ಯಕ್ಕೆ ಮನೆಗೆ ಬರುತ್ತಿದ್ದೆ. ಹಾಗೆ ಒಮ್ಮೆ ಬಂದಾಗ ಮಂಜ ಮನೆಗೆ ಬಂದು ತನ್ನ ಕಾದಂಬರಿ “ಹಿಂದೆಗೆದುಕೊಂಡು ಹೋಗಲೇ?” ಎಂದು ಕೇಳಿದ. ನಾನು ನನ್ನ ಶೆಲ್ಫ್ ಇಂದ ಪುಸ್ತಕ ತೆಗೆಯುತ್ತಿರುವಾಗ, “ಓದಿದೆಯಾ?” ಎಂದು ಕೇಳಿ ನನ್ನ ಉತ್ತರವನ್ನು ಕೇಳಿಸಿಕೊಂಡು, “ಇದು ಹೆಚ್ಚು ಕಡಿಮೆ ನಮ್ಮ ಮನೆಯ ಕತೆ. ಅಂತಾ ವಿಶೇಷ ಏನಿಲ್ಲ,” ಎಂದ. “ಇಲ್ಲ ನನಗೆ ಇಷ್ಟ ಆಯ್ತು,” ಎಂದರೆ, “ಓದಿಸಿಕೊಂಡು ಹೋದರೆ ಸಾಕು ನನಗೆ,” ಎಂದು ಹೇಳಿ, “ಇದನ್ನು ಓದಲಿಕ್ಕೆ ಜನರಿಗೆ ಇಷ್ಟ ಇರಬಹುದಾ?” ಎಂದು ಪ್ರಶ್ನಿಸಿದ. “ಗೊತ್ತಿಲ್ಲ,” ಎಂದು ಹೇಳಲಿಕ್ಕೆ ಹೊರಟವನು, “ಓದಲು ಕೂತರೆ ಓದಿ ಮುಗಿಸದೆ ಬಿಡಲಾಗದು,” ಎಂದು ಮಹಾ ಕ್ಲೀಷೆ ಉತ್ತರ ಕೊಟ್ಟೆ. ತಾನು ಮಣಿಪಾಲದಲ್ಲಿಯೇ ಡಿಗ್ರಿ ಮಾಡುತ್ತಿರುವ ವಿಷಯ ಎಲ್ಲ ತಿಳಿಸಿ ಮಂಜ ಅಂದು ಮನೆಗೆ ಮರಳಿದ.

ಅಂದು “ಯಾರಾದ್ರೂ ಪ್ರಕಟ ಮಾಡುತ್ತಾರ?” ಎಂದು ಕೇಳಿದ ಮಂಜನಿಗೆ, “ಯಾರನ್ನಾದರೂ ವಿಚಾರಿಸಿ ಹೇಳುತ್ತೇನೆ,” ಎಂದಿದ್ದೆ ಮತ್ತು ಯಾರನ್ನಾದರೂ ಕೇಳಬೇಕು ಎಂದು ಅನ್ನಿಸಿಯೂ ಇತ್ತು. ಆದರೆ ಯಾರನ್ನೂ ವಿಚಾರಿಸಲಿಲ್ಲ ನಾನು. ನನ್ನ ಬದುಕಿನ ಹಾದಿಯನ್ನೇ ನಿರ್ಮಿಸುವ ಕಡೆ ನಿರತನಾದೆ.

ಮುಂದೆ ಮಂಜ ಕಲಿಯುವ ಕಾಲೇಜಿನ ಯಾವುದೇ ಸ್ನೇಹಿತರು ಸಿಕ್ಕರೆ ಮಂಜನ ಬಗ್ಗೆ ವಿಚಾರಿಸುತ್ತಿದ್ದೆ. ಒಂದಿಷ್ಟು ಸಮಯದ ನಂತರ ಹಾಗೆ ಆಕಸ್ಮಿಕವಾಗಿ ಆಗುತ್ತಿದ್ದ ಭೇಟಿಗಳೇ ಕಡಿಮೆಯಾದವು. ಸುಮಾರು ಒಂದೂವರೆ ಎರಡು ವರ್ಷದ ನಂತರ ಒಂದು ದಿನ ಗಾಡಿ ಓಡಿಸುತ್ತಾ ಮನೆ ಕಡೆ ಬರುತ್ತಿದ್ದ ನನಗೆ ಒಂದು ಗೂಡಂಗಡಿಯಲ್ಲಿ ಮಂಜ ಕಂಡ. ಒಂದು ಹರಕು ಪಂಚೆ ಉಟ್ಟು ಒಂದು ಮಾಸಿದ ಅಂಗಿ ತೊಟ್ಟು. ಚಹಾ ಕುಡಿಯುತ್ತಿದ್ದ ಮಂಜನನ್ನು ನೋಡಿ ಗಾಡಿ ನಿಲ್ಲಿಸಿ ಗೂಡಂಗಡಿ ಕಡೆ ಹೋದೆ. ಮಂಜ ಕಾಲೇಜು ಬಿಟ್ಟಿದ್ದ. ಕೂಲಿಕೆಲಸ ಮಾಡಲಾರಂಭಿಸಿದ್ದ.

ಮಂಜ ಹೇಳಿದ, “ತಂಗಿಯನ್ನು ಕಲಿಸಬೇಕು ಇಲ್ಲ ನಾನು ಕಲಿಯಬೇಕು ಅನ್ನುವಂತಾ ಸ್ಥಿತಿ ಇತ್ತು. ನಾನು ಹೆಗಲು ಕೊಟ್ಟರೆ ಬಹುಶಃ ಅವಳಾದರೂ ಈ ಕಷ್ಟದ ಗೋಡೆ ದಾಟಲಿಕ್ಕಾಗುತ್ತದೆ ಎಂದು ನಾನು ಓದು ನಿಲ್ಲಿಸಿದೆ. ಅವಳು ಕಾಲೇಜ್ ಸೇರಿದ್ದಾಳೆ. ತುಂಬಾ ಹುಷಾರಿದ್ದಾಳೆ ಕಲಿಯಲಿಕ್ಕೆ,” ಎಂದು ಬಹಳ ಹೆಮ್ಮೆಯಿಂದ ಹೇಳಿದ. “ಚಹಾ ಕುಡಿಯುತ್ತೀಯಾ?” ಎಂದು ಕೇಳಿ ಮಂಜ ನನಗೊಂದು ಚಹಾ ಕುಡಿಸಿದ ಅಂದು. ಹೆಚ್ಚೆನೂ ಹೇಳಲಿಕ್ಕಾಗದೆ ನಾನು ಸುಮ್ಮನೆ ಕೂತಿದ್ದೆ. ಚಹಾ ಲೋಟೆಯಲ್ಲಿ ಇನ್ನೊಂದು ಗುಟುಕು ಬಾಕಿ ಇರುವಾಗ ಕೇಳಿದೆ, “ಬರೀತಿಯಾ ಈಗಲೂ?” ಮಂಜ ನಗಾಡುತ್ತಾ ಹೇಳಿದ, “ಬರೀಬೇಕು ಅಂತ ತಂದಿದ್ದ ಹೊಸ ಪುಸ್ತಕ ತಂಗಿಗೆ ನೋಟ್ಸ್ ಮಾಡಲಿಕ್ಕೆ ಕೊಟ್ಟೆ.”ನೀನು ಬರೆದ ಕಾದಂಬರಿ…” ಎಂದು ನಾನು ಹೇಳುತ್ತಿದ್ದಂತೆಯೇ, “ಅಯ್ಯೋ ಅದೆಲ್ಲ ಹಳೆ ಕತೆ,” ಎಂದ.

ಬಹುಶಃ ಹೊಸ ಕತೆ ಅವನ ತಂಗಿಯ ಬಾಳಿನ ಮುಖಾಂತರ ರೂಪಗೊಳ್ಳುತ್ತಿತ್ತು. ಹಳೆಯ ಕತೆಯನ್ನು ಕೈಗೆ ಪೆನ್ ಎತ್ತಿಕೊಂಡು ದಾಖಲಿಸಿದ್ದ ಮಂಜ ಹೊಸ ಕತೆ ಬರೆಯಲು ಕೈಯಿಂದ ಪೆನ್ ಬಿಟ್ಟುಬಿಬಿಟ್ಟಿದ್ದ.

ಅಂದೇ ಕೊನೆ. ಅದಾದ ಮೇಲೆ ನನಗೆ ಮಂಜ ಎಲ್ಲೂ ಸಿಗಲಿಲ್ಲ. ಬಹುಶಃ ಅವನೂ ಮಣಿಪಾಲ ಕರಾವಳಿ ಎಲ್ಲಾ ಬಿಟ್ಟು ಹೋಗಿ ದಶಕವೇ ಆಗಿರಬೇಕು. ಮುಂದೆ ಪತ್ರಿಕೋದ್ಯಮ ಅಭ್ಯಾಸ ಮಾಡುವ ಸಂದರ್ಭದಲ್ಲಿ ನಾವು ವಿದ್ಯಾರ್ಥಿಗಳೇ ನಡೆಸುತ್ತಿದ್ದ ಪಾಕ್ಷಿಕ ಪತ್ರಿಕೆಗೆ ಮಂಜನ ಬಗೆಗೆ ಒಂದು ಸಣ್ಣ ಲೇಖನ ಬರೆದೆ. ನಮ್ಮ ಪತ್ರಿಕೆಯನ್ನು ಮೇಲ್ವಿಚಾರಿಸುತ್ತಿದ್ದ ಅಧ್ಯಾಪಿಕೆ, “ಇದರಲ್ಲಿ ವಿಶೇಷ ಏನಿದೆ? ತಮ್ಮ ಪರಿಸ್ಥಿತಿಯನ್ನು ಮೀರಿ ಗೆದ್ದವರ ಕತೆ ಹೇಳುವುದಾದರೆ ಅದಕ್ಕೊಂದು ಬೆಲೆ ಇದೆ. ದಿಸ್ ಈಸ್ ನಾಟ್ ಹ್ಯಾವಿಂಗ್ ಎನಿ ಸ್ಟೋರಿ ವ್ಯಾಲ್ಯೂ,” ಎಂದು ಲೇಖನದ ಮೇಲೆ ನೀಟಾಗಿ ಒಂದು ಗೀಟು ಎಳೆದು ಲೇಖನವನ್ನು ತಿರಸ್ಕರಿಸಿದ್ದರು.

ಸ್ಪೂರ್ತಿದಾಯಕ ಕತೆಗಳನ್ನೇ ಬಯಸುವ ಈ ಲೋಕಕ್ಕೆ ಮಂಜನ ಬದುಕಿನ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುವ ಧೈರ್ಯ ಇಲ್ಲ.

ಶಾಲೆಯಲ್ಲಿ ಇರುವಾಗ ಓದು ಬರಹದಲ್ಲಿ ಅಂತಾ ಆಸಕ್ತಿ ಇಲ್ಲದ ನಾನು ಈಗ ಬರವಣಿಗೆಯನ್ನೇ ನೆಚ್ಚಿ ಬದುಕುತ್ತಿರುವುದು ಸ್ವಾರಸ್ಯಕರ ಕತೆ ಇರಬಹುದು. ಎರಡನೇ ಅಕ್ಷರಸ್ತ ತಲೆಮಾರಿನ ಒಬ್ಬ ಓ.ಬಿ.ಸಿ. ಹುಡುಗನ ಒಂದು ಸಣ್ಣ ಚಿಲ್ಲರೆ ಯಶಸ್ಸಿನ ಕತೆ ಆಗಿರಬಹುದು ನಾನು ಈ ತನಕ ಕ್ರಮಿಸಿದ ಹಾದಿ. ಆದರೆ ಅದು ಒಂದು ಲೆಕ್ಕದಲ್ಲಿ ನನ್ನ ಭಾಗ್ಯದಲ್ಲಿ ಇದ್ದ ಒಂದಿಷ್ಟು ಸವಲತ್ತಿನ ಕತೆಯೂ ಹೌದು. ಹಾಗಾಗಿ ಅದು ತೀರಾ ಕುತೂಹಲ ಕೆರಳಿಸಬೇಕಾಗಿಲ್ಲ.

ಆದರೆ ನಿಜವಾಗಿಯೂ ಬರವಣಿಗೆಯಲ್ಲಿ ಆಸಕ್ತಿ ಇದ್ದು ಹದಿಹರೆಯದಲ್ಲೇ ಒಂದು ಕಾದಂಬರಿ ಬರೆದು ಮುಗಿಸಿದ್ದ ಮಂಜ ಯಾಕೆ ಫೇಲ್ ಆಗಿದ್ದ? ಆತನಿಗೆ ಯಾಕೆ ಓದು ಮುಂದುವರೆಸಲಾಗಲಿಲ್ಲ? ಯಾಕೆ ತನ್ನ ಬರವಣಿಗೆ ಮುಂದುವರಿಸಲಾಗಲಿಲ್ಲ ಮಂಜನಿಗೆ? ಇದು ನಾವೆಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆ ಮತ್ತು ಅವುಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ.

ಇದನ್ನೆಲ್ಲಾ ನೆನಪು ಮಾಡಿಕೊಳ್ಳುವಾಗ ಅಮ್ಮನನ್ನು ಕೇಳಿದೆ, “ನಿಮಗೆ ನಿಮ್ಮ ಸ್ಟುಡೆಂ ಮಂಜುನಾಥ್ ಬೋವಿ ನೆನಪಿದೆಯಾ?” ಎಂದು. ಅಂಥಾ ನೆನೆಪಿನ ಶಕ್ತಿ ಇಲ್ಲದ ನನ್ನಮ್ಮ “ನೆನಪಾಗುತ್ತಿಲ್ಲ” ಎಂದು ಹೇಳಿದಾಗ ಮಂಜನ ಕತೆ ಹೇಳಿದೆ. ಸರಕಾರಿ ಶಾಲೆಯಲ್ಲಿ 24 ವರ್ಷ ಪಾಠ ಮಾಡಿದ ಅಮ್ಮ, “ನನ್ನ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳ ಕತೆಯೂ ಇಷ್ಟೇ. ಸರಿಯಾದ ಅವಕಾಶ ಸರಿಯಾದ ಪರಿಸರ ಇದ್ದಿದ್ದರೆ ಅವರೆಲ್ಲಾ ಬಹಳ ಎತ್ತರಕ್ಕೆ ಏರುತ್ತಿದ್ದರು,” ಎಂದರು.

2 Responses

  1. nimbargi says:

    ಮಾರ್ಮಿಕವಾಗಿ ಬರೆದಿರುವಿರಿ. ನಿಮ್ಮಮ್ಮ ಹೇಳಿದ್ದು ನಿಜ, ‘ಸರಕಾರಿ ಶಾಲೆಯಲ್ಲಿ ಕಲಿತವರಿಗೆ ಸರಿಯಾದ ಪರಿಸರ ಸಿಕ್ಕಿದ್ದರೆ ಬಹಳ ಎತ್ತರಕ್ಕೆ ಹೋಗಬಲ್ಲರು.’ ನಾನೂ ಮುಂಚೆ ಸರಕಾರಿ ಶಾಲೆಯಲ್ಲಿ ಕಲಿತವನೇ, ಬಹುಷಃ ನನಗೆ ಉತ್ತಮ ಹಾಗೂ ಪ್ರೋತ್ಸಾಹಿಸುವ ಶಿಕ್ಷಕರು ದೊರೆತದ್ದೂ ಕಾರಣವಿರಬಹುದು. ಶಿಕ್ಷಣದಲ್ಲಿ ಎತ್ತರಕ್ಕೆ ಹೋದೆನೇನೋ ನಿಜ, ಬದುಕಿನ ಹೋರಾಟ ಎಂದರೆ ವೃತ್ತಿ ಆಯ್ಕೆಯಲ್ಲಿ ಸರಿಯಾದ ಪ್ರೋತ್ಸಾಹ ಸಿಗದೇ, ಪಕ್ಷಪಾತದ ಧೋರಣೆಯಿಂದ ಸೋತದ್ದೇನೋ ಸರಿ. ಆದರೆ ನಾನು ಎದೆಗುಂದಲಿಲ್ಲ, ಮನಶ್ಶಾಂತಿಗೋಸ್ಕರ ಅನುವಾದದ ಕ್ಷೇತ್ರಕ್ಕಿಳಿದೆ. ಮಂಜನಿಗೂ ಹೀಗೇ ಆಗಿರಬೇಕು, ಮನೆಯತ್ತ ಲಕ್ಷ್ಯ ನೀಡುವುದೇ ಮಹತ್ವದ್ದಾಗುತ್ತದಲ್ವೇ, ಅವನಿಗೆ ಅದರಲ್ಲೇ ಶಾಂತಿ ದೊರೆತಿರಬಹುದು. ಎಲ್ಲಕ್ಕೂ ಪರಿಸ್ಥಿತಿಯ ಒತ್ತಡಗಳೇ ಕಾರಣ.

  2. ಸರಕಾರಿ ಶಾಲೆಯಲ್ಲಿ 24 ವರ್ಷ ಪಾಠ ಮಾಡಿದ ಅಮ್ಮ, “ನನ್ನ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳ ಕತೆಯೂ ಇಷ್ಟೇ. ಸರಿಯಾದ ಅವಕಾಶ ಸರಿಯಾದ ಪರಿಸರ ಇದ್ದಿದ್ದರೆ ಅವರೆಲ್ಲಾ ಬಹಳ ಎತ್ತರಕ್ಕೆ ಏರುತ್ತಿದ್ದರು,” ಎಂದರು, ಬೆಳಕಿನಷ್ಟೇ ಸತ್ಯವಾದ ಮಾತು ಸರ್., ಬರಹ ಎದೆಯಿಂದ ನೇರವಾಗಿ ಮಾನವೀಯತೆಯ ಹೊದರಿನಿಂದ ಹರಿದಿದ್ದು ಕಾಣುತ್ತದೆ.-lakshmikanth itnal

Leave a Reply

%d bloggers like this: