‘ಒನ್ ಅವರ್ ಹೋಟೆಲ್ಲಾ?’

ಉಸಿರಿರೋವರೆಗೂ ದುಡಿತ

ಜಮೀಲ್ ಸಾವಣ್ಣ

 

 

 

ಮೊದಲನೇ ಸಲ ನನ್ನ ಮಿತ್ರರೊಬ್ಬರು ಆ ಹೊಟೇಲ್ ಬಗ್ಗೆ ಕೇಳಿದಾಗ ಆಶ್ಚರ್ಯವಾಯಿತು. ‘ಒನ್ ಅವರ್ ಹೊಟೇಲ್ಲಾ?’ ಎಂದೆ. ‘ಹೌದು. ಅಲ್ಲಿ ಇಡ್ಲಿ, ದೋಸೆ ಸಿಗುತ್ತೆ. ಆದರೆ ಬೆಳಗ್ಗೆ 8ರಿಂದ 9ರ ವರೆಗೆ ಮಾತ್ರ. ಅಲ್ಲಿ ಇಡ್ಲಿ ಅದೆಷ್ಟು ಮೃದುವಾಗಿರುತ್ತೇ ಅಂದ್ರೆ ನೀವು ತಿಂದರೇನೇ ಗೊತ್ತಾಗೋದು’ ಎಂದು ನನ್ನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದರು ಆ ಮಿತ್ರ.

ಒಮ್ಮೆ ಹೋಗಿ ಆ ಮೃದು ಇಡ್ಲಿಯ ರುಚಿ ನೋಡಿಯೇ ಬಿಡೋಣ ಎಂದು ಆಲೋಚಿಸಿ, ನನ್ನ ಪತ್ನಿ ಮತ್ತು ಮಗಳೊಂದಿಗೆ ಒಂದು ದಿನ ಅಲ್ಲಿಗೆ ಹೊರಟೆ. ಜೆ. ಪಿ. ನಗರ ಮತ್ತು ಶಾಕಾಂಬರೀನಗರದ ನಡುವೆ ಇತ್ತು ಆ ಹೊಟೇಲ್. ಹೊಟೇಲ್ ಬಹಳ ಪುಟ್ಟದು. ಹೊಟೇಲ್ ಹೆಸರೇನೆಂದು ತಿಳಿಯಲು ಅಲ್ಲಿ ಬೋರ್ಡ್ ಇರಲಿಲ್ಲ! ಬಾಗಿಲಲ್ಲಿದ್ದ 80ರ ವೃದ್ಧರು ‘ಏನೂ ಇಲ್ಲ ‘ ಎಂದರು.

‘ಮತ್ತೆ ಎಂಟರಿಂದ ಒಂಬತ್ತು ಗಂಟೆ ವರೆಗೆ ಇಡ್ಲಿ ಸಿಗುತ್ತೆ ಅಂತ ನನ್ನ ಫ್ರೆಂಡು ಹೇಳಿದ್ರಲ್ಲ?’ ಎಂದೆ. ‘ಈವತ್ತು ಇಡ್ಲಿ ಅರ್ಧ ಗಂಟೆಯಲ್ಲಿ ಖಾಲಿ ಆಯ್ತು. ಭಾನುವಾರದ ದಿನ ಸ್ವಲ್ಪ ಬೇಗ ಖರ್ಚಾಗುತ್ತೆ’ ಎಂದರು. ನನ್ನ ಮಗಳ ಮುಖದ ಮೇಲಿನ ನಿರಾಸೆ ಕಂಡು ‘ಪಕ್ಕದಲ್ಲಿಯೇ ದಾವಣಗೆರೆ ಬೆಣ್ಣೆ ದೋಸೆ ಕೊಡಿಸ್ತೀನಿ’ ಎಂದೆ ಅವಳಿಗೆ ಸಾಂತ್ವನ ನೀಡುವಂತೆ.

ಅಲ್ಲಿಯೇ ನಿಂತಿದ್ದ ವೃದ್ಧರಿಗೆ ನನ್ನ ಮಾತು ಕಿವಿಗೆ ಬಿತ್ತು.  ಏನೋ ನಿರ್ಧಾರ ತಳೆದವರಂತೆ, ‘ನನಗೆ ಹದಿನೈದು ನಿಮಿಷ ಸಮಯ ಕೊಡಿ. ಇಡ್ಲಿ ಮಾಡಿಕೊಡುತ್ತೇನೆ’ ಎಂದರು.
‘ಆಗ್ಹೋಯ್ತು ಅಂದ್ರಲ್ಲ ಸರ್!’ ಎಂದೆ.

‘ ನನ್ನ ಮೊಮ್ಮಕ್ಕಳಿಗೋಸ್ಕರ ಒಂದಿಷ್ಟು ಹಿಟ್ಟು ಇಟ್ಟಿದ್ದೀನಿ. ಅದನ್ನೇ ನಿಮಗೆ ಮಾಡಿಕೊಡ್ತೀನಿ’ ಎಂದರು. ನಾನೆಷ್ಟೇ ಬೇಡವೆಂದರೂ ಸುಮ್ಮನೆ ನಕ್ಕು ಒಳನಡೆದರು. ಅವರ ಹೊಟೇಲ್ ಒಳಗೆ ನಾವು ನಡೆದೆವು. ಅಲ್ಲೊಂದು ಬೋರ್ಡ್ ಒರಗಿಸಿ ಇಡಲ್ಪಟ್ಟಿತ್ತು. ‘ಓಹೋ! ಈ ಹೊಟೇಲ್ ಹೆಸರು ರಮ್ಯ’ ಎಂದುಕೊಂಡೆ ಆ ಬೋರ್ಡ್ ಓದಿ. ವೃದ್ಧರು ತಂದಿಟ್ಟ ಆ ಮೃದು ಇಡ್ಲಿ ತಿನ್ನುತ್ತಿರುವಾಗ ‘ನನ್ನ ಮೊಮ್ಮಕ್ಕಳು ನನ್ನ ಇಡ್ಲಿ ತಿನ್ನುತ್ತಲೇ ಇರುತ್ತಾರೆ. ನಿಮ್ಮ ಮಗಳಿಗೆ ನಿರಾಸೆ ಮಾಡೋಕ್ಕೆ ಇಷ್ಟ ಇಲ್ಲದೇ ನಿಮಗೆ ಮಾಡಿಕೊಟ್ಟೆ’ ಎಂದರು. ಬಹಳ ಹೊತ್ತಿನಿಂದ ನನ್ನ ಮನವನ್ನು ಕೊರೆಯುತ್ತಿದ್ದ ಪ್ರಶ್ನೆ ಈಗ ಥಟ್ಟನೆ ಹೊರಬಂದಿತು.

‘ಈ ಒನ್ ಅವರ್ ಹೊಟೇಲ್ ಯಾಕೆ ಶುರು ಆಯ್ತು?’ ಎಂದು ಕೇಳಿದೆ.
‘ನಾನು, ನನ್ನ ಪತ್ನಿ ಈ ಹೊಟೇಲನ್ನು ಬೆಳಗ್ಗೆ ಆರರಿಂದ ರಾತ್ರಿ ಒಂಬತ್ತರ ವರೆಗೆ ನಡೆಸುತ್ತಿದ್ದೆವು. ನನ್ನ ಪತ್ನಿ ತೀರಿಕೊಂಡ ಮೇಲೆ …’ ವ್ಯಥೆ ಅವರ ಧ್ವನಿಯಲ್ಲಿತ್ತು. ಮತ್ತೆ ಮಾತು ಮುಂದುವರಿಸಿ ‘ಮಧ್ಯಾಹ್ನದ ವರೆಗೆ ನಡೆಸುತ್ತಿದ್ದೆ. ಆಮೇಲೆ ನನ್ನ ಸೊಸೆಯಂದಿರು, ಮಕ್ಕಳು ಬ್ಯುಸಿ ಆಗಿಬಿಟ್ಟರು. ಅದಕ್ಕೇ ನಾನು ಇದನ್ನು ದಿನಕ್ಕೆ ಒಂದು ಗಂಟೆ ಮಾತ್ರ ನಡೆಸಲೇಬೇಕು ಅಂತ ನಿರ್ಧಾರ ಮಾಡಿ ನಡೆಸ್ತಿದ್ದೀನಿ. ಯಾಕೆಂದರೆ… ‘ ಅವರು ಉಸಿರೆಳೆದುಕೊಂಡು ಮಾತು ಮುಂದುವರಿಸಿದರು. ಮುಂದಿನ ಅವರ ಆ ಮಾತುಗಳು ನನ್ನ ಜೀವನಕ್ಕೆ ಹೊಸ ತಿರುವು ನೀಡಿದವು.

ಇಲ್ಲೊಂದು ಚಿಕ್ಕ ಫ್ಲ್ಯಾಶ್ ಬ್ಯಾಕ್. ನಾನು ಬ್ಯುಸಿನೆಸ್ ಶುರು ಮಾಡಿ, ನನಗೆ ಬೇಕಾದ ಹಾಗೆ ಜೀವಿಸುತ್ತಿದ್ದೇನೆ. ನನ್ನ ಪತ್ನಿ, ಮಕ್ಕಳ ಬಳಿ ‘ನಾನು ನನ್ನ ಅರವತ್ತನೇ ವರ್ಷದ ವರೆಗೆ ಮಾತ್ರ ಕೆಲಸ ಮಾಡೋದು. ಆಮೇಲೆ ಹಾಯಾಗಿ ರಿಟೈರ್ ಆಗಿ ಆರಾಮವಾಗಿ ಇರ್ತೀನಿ’ ಎನ್ನುತ್ತಿದ್ದೆ.

ಈಗ ಆ ವೃದ್ಧರ ಮುಂದಿನ ಮಾತುಗಳು ನನ್ನನ್ನು ಹೊಸ ಹಾದಿಯಲ್ಲಿ ಆಲೋಚನೆ ಮಾಡುವಂತೆ ಮಾಡಿದವು. ಆ ವೃದ್ಧರು ‘ನನಗೆ ಕೆಲಸ ಮಾಡೋದು ಬಹಳ ಇಷ್ಟ. ನನ್ನ ಈ ದೇಹದಲ್ಲಿ ಉಸಿರಿರೋ ವರೆಗೂ ನಾನು ದುಡಿಯೋದಕ್ಕೆ ಇಷ್ಟ ಪಡ್ತೀನಿ’ ಎಂದರು.

ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ನಾನು ಅರವತ್ತು ವರ್ಷಗಳಿಗೆ ನಿವೃತ್ತಿ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಎಂಬತ್ತರ ವಯಸ್ಸಿನಲ್ಲೂ ಈತ ಕೊನೆಯ ಉಸಿರಿನ ವರೆಗೂ ದುಡಿಯುವಾಸೆ ಎನ್ನುತ್ತಿರುವರಲ್ಲಾ ಎಂದು ಮನದಲ್ಲಿಯೇ ಅವರನ್ನು ವಂದಿಸಿದೆ. ಇವರ ಈ ಆದರ್ಶವನ್ನು ನಾನೂ ಪಾಲಿಸಲು ಆ ಕ್ಷಣದಲ್ಲಿ ತೀರ್ಮಾನ ಮಾಡಿ, ಉಸಿರಿರೋ ವರೆಗೂ ದುಡಿಯುವ ನಿರ್ಧಾರ ಮಾಡಿದೆ.

ಇತ್ತೀಚೆಗೆ ಅವರನ್ನು ನೋಡಬೇಕೆಂದುಕೊಂಡು ಅಲ್ಲಿಗೆ ಹೋದರೆ ಹೊಟೇಲ್ ಬಾಗಿಲು ಹಾಕಿತ್ತು. ನನ್ನ ಎದೆ ಧಸಕ್ಕೆಂದಿತು. ಫೋನ್ ಮಾಡಿದಾಗ ಆತನೇ ಫೋನೆತ್ತಿದರು. ‘ಅನಾರೋಗ್ಯದ ನಿಮಿತ್ತ ಹೊಟೇಲ್ ತೆಗೆದಿಲ್ಲ. ಸ್ವಲ್ಪ ಸುಧಾರಿಸಿಕೊಂಡ ಮೇಲೆ ಮತ್ತೆ ತೆಗೆಯುತ್ತೇನೆ. ನಾನು ಹೇಳಿದೆನಲ್ಲಾ… ನನಗೆ ಜೀವ ಇರೋ ವರೆಗೂ ಕೆಲಸ ಮಾಡಲು ಇಷ್ಟ ಅಂತ…’ ಎಂದರು.

ನನ್ನ ಬದುಕಿನ ತಿರುವುಗಳಿಗೆ ಅನೇಕ ಮಹಾನುಭಾವರು ಕಾರಣರಾಗಿದ್ದಾರೆ. ಅವರಲ್ಲಿ ಈ ಹೊಟೇಲ್ ಮಾಲೀಕ ಶ್ರೀ ಪಿ. ಎಸ್. ಕೃಷ್ಣಮೂರ್ತಿ ಕೂಡ ಒಬ್ಬರು. ಅವರು ಬದುಕಿರುವ ವರೆಗೂ ಒಳ್ಳೆಯ ಆರೋಗ್ಯದಿಂದ ಇರಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದೆ.

7 Responses

 1. ಇಂಥವರೇ ನಿಜವಾದ ಕಾಯಕ ಪ್ರೇಮಿಗಳು. ಓದಿ ಕಣ್ಣು ಹಸಿಯಾದವು. ನನಗೂ ಭೂತಾಯಿಯ ಗರ್ಭ ಸೇರುವ ತನಕ ಏನಾದರೂ ಮಾಡುತ್ತಲೇ ಇರಬೇಕೆಂಬ ಹಂಬಲ.

 2. Prakash says:

  Thumba aaptavagide hotel address heltira please

 3. Jn Thimmaiah says:

  Ninne thane TV yalli Krishnana bodhane karmada bagge nodithe. Eega artha aayithu. Thanks.

 4. Jayasimha says:

  Wonderful thanks for sharing

 5. Mr. Jameel your presentation is excellent in Kannada. It was impressed a lot to me too. I hats off to you. I will visit once to Ramya Restourent.

 6. c.venugopal says:

  Don’t Waste today

Leave a Reply

%d bloggers like this: