ಹಾಳಾದದ್ದು ಈ ಪುಸ್ತಕದ ಅಂಗಡಿ..

 

 

 

ಚಿನ್ನಸ್ವಾಮಿ ವಡ್ಡಗೆರೆ

 

 

 

 

ಹಾಳಾದದ್ದು ಈ ಪುಸ್ತಕದ ಅಂಗಡಿಗೆ ಹೋದಗಾಲೆಲ್ಲ ಈ ನಾಡು ಕಂಡ ಸಭ್ಯ ರಾಜಕಾರಣಿ, ಗುಂಡ್ಲುಪೇಟೆಯ ಮರೆಯಲಾಗದ ಮಾಣಿಕ್ಯ ಅಬ್ದುಲ್ ನಜೀರ್ ಸಾಬ್ ಅವರ ಜೀವನದಲ್ಲಿ ನಡೆದ ಘಟನೆಯೊಂದು ನನ್ನನ್ನು ಟೆಂಪ್ಟ್ ಮಾಡಿಬಿಡುತ್ತದೆ.

ಮನೆಯಲ್ಲಿ ಓದಿರದ ರಾಶಿ ರಾಶಿ ಪುಸ್ತಕಗಳಿದ್ದರೂ ಮತ್ತೆ ರಾಶಿ ಪುಸ್ತಕ ಖರೀದಿಸಿ ಮನೆಗೆ ಬಂದರೆ, ಇಡಲು ಜಾಗ ಇಲ್ಲ ಎಂದು ಬೈಸಿಕೊಳ್ಳುತ್ತೇನೆ. ಅದೆಲ್ಲ ಇರಲಿ ಬಿಡಿ.ಎಲ್ಲರ ಮನೆಯಲ್ಲೂ ಇದು ಇದ್ದದ್ದೇ. ಆದರೆ ನಜೀರ್ ಪ್ರಸಂಗ ಮಾತ್ರ ವಿಶೇಷವಾದದ್ದು

ಅದೇನೆಂದರೆ,ಒಮ್ಮೆ ಅಬ್ದುಲ್ ನಜೀರ್ ಸಾಬ್, ರಮೇಶ್ ಕುಮಾರ್ ಮತ್ತು ರಘುಪತಿ ಸೇರಿ ದೆಹಲಿಗೆ ಹೋಗಿರುತ್ತಾರೆ. ಇದೇ ಸಂದರ್ಭದಲ್ಲಿ ನಜೀರ್ ಮನೆಯಿಂದ ದೂರವಾಣಿ ಕರೆಯೊಂದು ಬರುತ್ತದೆ. ಕುಟುಂಬದ ಸದಸ್ಯರೊಬ್ಬರ ಆರೋಗ್ಯ ಸರಿಇಲ್ಲ, ಬೇಗ ಬಂದುಬಿಡಿ ಎಂದು.

ಆಗ ತುರ್ತಾಗಿ ನಜೀರ್ ಸಾಬ್ ಬೆಂಗಳೂರಿಗೆ ಬರಬೇಕಾಗುತ್ತದೆ. ವಿಮಾನದಲ್ಲಿ ಬರಲು ಅವರ ಬಳಿ ಅಷ್ಟೊಂದು ಹಣ ಇಲ್ಲ.ಇಂತಹ ಪ್ರಾಮಾಣಿಕ ರಾಜಕಾರಣಿಯ ಬಳಿ ಅಷ್ಟು ಹಣವಿರಲು ಹೇಗೆ ಸಾಧ್ಯ ಅಲ್ವಾ. ಮಿತ್ರರಾದ ರಮೇಶ್ ಕುಮಾರ್, ರಘುಪತಿ ಅವರಿಂದ ಸಾಲ ಪಡೆದು ಹೊರಡುತ್ತಾರೆ.

ಸಾಲದ ಹಣ ಹಿಡಿದು ಬರುತ್ತಿರಬೇಕಾದರೆ ಎದುರಿಗೆ ಪುಸ್ತಕದ ಅಂಗಡಿ ಕಣ್ಣಿಗೆ ಬೀಳುತ್ತದೆ. ಸರಿ, ಮೊದಲೇ ಪುಸ್ತಕ ಪ್ರೇಮಿಯಾಗಿದ್ದ ನಜೀರರು ಅಲ್ಲಿಗೆ ಹೋಗುತ್ತಾರೆ. ಗೆಳೆಯರು ಕೊಟ್ಟಿದ್ದ ಮುಕ್ಕಾಲು ಭಾಗ ಹಣದಲ್ಲಿ ಪುಸ್ತಕ ಖರೀದಿಸಿಬಿಡುತ್ತಾರೆ. ಸಂಜೆ ಮತ್ತೆ ಗೆಳೆಯರು ಭೇಟಿಯಾಗಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಯಾಕೆ? ಏನು ಅಂತ ಗಾಬರಿಯಿಂದ ಕೇಳುತ್ತಾರೆ.

ಆಗ ಅವರು ತಮ್ಮನ್ನೇ ತಾವು ಮೈಮರೆತು “ಎಂಥೆಂಥಾ ಒಳ್ಳೆಯ ಪುಸ್ತಕ ಕಣ್ರಯ್ಯಾ, I couldnt resist buying them” ಎಂದರಂತೆ. “ಬೆಂಗಳೂರಿಗೆ ಹೋಗೆ ಹೋಗ್ತೀನಯ್ಯ” ಎಂದು ಉಳಿದ ಹಣವನ್ನು ತೋರಿಸಿ “ಇಲ್ಲಿದೆ ನೋಡು ಟ್ರೈನಿಗೆ ಸಾಕಾಗುತ್ತೆ” ಎಂದರಂತೆ. ಸಂತನೊಬ್ಬನ ನಿರ್ಲಪ್ತತೆಯಿಂದ.

ಪಕ್ಷ ರಾಜಕಾರಣ,ಜಾತಿ ರಾಜಕಾರಣದ ಕೆಸರಿನಲ್ಲಿ ಹೂತು ಹೋಗಿರುವ ನಮ್ಮ ಹೊಸ ತಲೆಮಾರಿನ ಹುಡುಗರಿಗೆ ಇದೆಲ್ಲ ಗೊತ್ತಾದರೆ ಒಳ್ಳೆಯದು. (ಇದು ರಘುಪತಿ ಮತ್ತು ರಮೇಶ್ ಕುಮಾರ್ ನಜೀರ್ ಸತ್ತಾಗ ನೆನಪಿಸಿಕೊಂಡು ಹೇಳಿದ ಪ್ರಸಂಗ. ಕರ್ನಾಟಕ ವಿಧಾನಮಂಡಲ ಗ್ರಂಥಾಲಯ ಪ್ರಕಟಿಸಿರುವ ಪುಸ್ತಕದಲ್ಲಿ ದಾಖಲಾಗಿದೆ).

ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ನವ ಕರ್ನಾಟಕ ಪ್ರಕಾಶನ ವತಿಯಿಂದ ರಿಯಾಯತಿ ದರದಲ್ಲಿ ಪುಸ್ತಕ ಮಾರಾಟ ಮೇಳ ನಡೆಯುತ್ತಿದೆ. ಅಲ್ಲಿಗೆ ಹೋದರೆ ಎಷ್ಟೇ ಪುಸ್ತಕಕೊಂಡರೂ ಸಮಾಧಾನವೇ ಆಗುವುದಿಲ್ಲ. ಮನೆಯಲ್ಲಿ ಇನ್ನೂ ಓದಿರದ ರಾಶಿರಾಶಿ ಪುಸ್ತಕಗಳಿವೆ ಆದರೂ ತೀರದ ದಾಹ. ಅವು ಕಳೆದುಹೋಗುವ ಗೆಳೆಯರಂತಲ್ಲ. ಎಂದಾದರೂ ಉಪಯೋಗಕ್ಕೆ ಬಂದೇ ಬರುತ್ತವೆ. ಮುರಿದು ಬಿದ್ದ ಮನಸ್ಸಿಗೆ ಚೈತನ್ಯ ತುಂಬುತ್ತವೆ.ಹೊಸ ಸಾಹಸವೊಂದಕ್ಕೆ ನಮ್ಮನ್ನು ಹಣಿ ಮಾಡುತ್ತವೆ ಎಂಬ ನಂಬಿಕೆ ನನ್ನದು. ಆಗಾಗಿ ಇನ್ನೂ ಓದಿರದ ಎಷ್ಟೂ ಪುಸ್ತಕಗಳು ಗೂಡಿನಲ್ಲೇ ಬೆಚ್ಚಗೆ ಕುಳಿತು ಕರೆಯುತ್ತಲೇ ಇರುತ್ತವೆ.

ಪ್ರಭುಶಂಕರ, ಬಿ.ಎಂ.ಬಶೀರ್, ರಾಜೇಂದ್ರ, ತೇಜಸ್ವಿ, ಚಂದ್ರಶೇಖರ ಆಲೂರು, ಯುಜಿ, ಪದಾರ್ಥ ಚಿಂತಾಮಣಿ ಸೇರಿದಂತೆ 60 ಹೊಸ, ಹಳೆಯ ಪುಸ್ತಕಗಳು ಮನೆಗೆ ಬಂದವು. ವಿಜ್ಞಾನ, ಕೃಷಿ, ವೈಚಾರಿಕತೆ, ಆಧ್ಯಾತ್ಮ, ಆರೋಗ್ಯ, ಮಕ್ಕಳ ಸಾಹಿತ್ಯ ಹೀಗೆ… ಇನ್ನಾದರೂ ಅವುಗಳನ್ನು ಓದಲೇಬೇಕು.

Leave a Reply