ತುಸು ನಿಲ್ಲು ಕಾಲವೇ

          

 

 

ವಿಷ್ಣು ಭಟ್ ಹೊಸ್ಮನೆ

 

 

ನೀಲಿ ಬಾನಲ್ಲಿ

ಬಿಸಿಲು-ಮಳೆಹನಿಯ ಸರಸಕ್ಕೆ

ಹರಡಿಕೊಂಡ ಕಾಮನಬಿಲ್ಲು

ಕಣ್ಣು ತುಂಬಿಕೊಳ್ಳುವ ಕಾಲಕ್ಕೆ

ನಿಲ್ಲು ಕಾಲವೇ ತುಸು ನಿಲ್ಲು

 

ನೀಲಿ ಸಾಗರದಲ್ಲಿ

ನೇಸರಾಂಬುಧಿಗೆ ಇಳಿವ

ಕಾಲಕೆ ಕೆಂಬಣ್ಣದ ಚಿತ್ತಾರದ

ಅಲೆಯೊಡನೆ ಮನ ಅಲೆದಾಡುವಾಗ

ನಿಲ್ಲು ಕಾಲವೇ ತುಸು ನಿಲ್ಲು

ಹರೆಯ ಬಂದ ಹೊತ್ತಿನಲ್ಲಿ

ಮನದೊಳಗಿನ ತವಕ-ತಲ್ಲಣಗಳ

ಪ್ರೀತಿಯ ಸವಿಗನಸುಗಳು ಬಾಳ

ಕೊನೆತನಕ ನನಸಾಗುತ್ತಲೇ ಇರುವಂತೆ

ನಿಲ್ಲು ಕಾಲವೇ ತುಸು ನಿಲ್ಲು

 

ಬಾಳ ಸಂಜೆಯಲ್ಲಿ

ಹಿಂದಣವ ಅವಲೋಕಿಸುತ್ತ

ಮೊಮ್ಮಗುವಿನ ನಗುವಿನ ಸವಿಯ

ಅನುಭವಿಸುವ ಕಾಲಕ್ಕೆ

ನಿಲ್ಲು ಕಾಲವೇ ತುಸು ನಿಲ್ಲು

 

ಬರಡಾದ ನೆಲದಲ್ಲಿ

ಹಸಿರಿಲ್ಲದೆ ಉಸಿರುಗಟ್ಟುತ್ತಿರುವಾಗ

ಮೋಡಗಳು ಚದುರದೇ

ಜಡಿಮಳೆಯು ಸುರಿಯುವತನಕ

ನಿಲ್ಲು ಕಾಲವೇ ತುಸು ನಿಲ್ಲು

 

ಹಸಿದವರ ಬೊಗಸೆಯಲ್ಲಿ

ಹರಿಸಿದ ಬೆವರುಗಳು

ಆರುವ ಮೊದಲೇ ತುತ್ತೊಂದು

ಸೇರಿ, ದಣಿವಾರುತ್ತಿರುವಾಗ

ನಿಲ್ಲು ಕಾಲವೇ ತುಸು ನಿಲ್ಲು

 

ಸಾವಿನ ಕತ್ತಿಗಳಲ್ಲಿ

ಧಾಷ್ಟ್ಯಗಳು ಸಾವನ್ನಪ್ಪಿ

ಪ್ರೀತಿಯ ಉದಯವಾಗಿ

ಜೀವ-ಜೀವಗಳ ಬೆಸೆಯುತ್ತಿರುವಾಗ

ನಿಲ್ಲು ಕಾಲವೇ ತುಸು ನಿಲ್ಲು

2 Responses

  1. Sarojini Padasalagi says:

    ತುಂಬಾ ಸುಂದರ ಕವನ. ಕಾಲವನ್ನು ತಡೆದು ನಿಲ್ಲಿಸಲು ನಾನೂ ಎಷ್ಟೆಷ್ಟೋ ಪ್ರಯತ್ನಿಸ್ತಾನೇ ಇದೀನಿ.ಅದು ಯಾರ ಮಾತು ಕೇಳದು ,ಅಲುಗದು .ನಿರ್ಲಿಪ್ತ ,ವಿಕ್ಷಿಪ್ತ ಕಾಲನವನು.ತಿರುಗಿ ಬಾರನು ,ತಡೆದರೂ ನಿಲನು ಅಂತಲೇ ನಮಗೆ ಕಳೆದು ಹೋದ ಸಮಯದ ಹಂಬಲಿಕೆ ,ಅಲ್ಲವೇ.ಅದಕೇ ಗೊತ್ತಿದ್ದರೂ ಕಾಲನನ್ನು ತಡೆಯುವ ಆಸೆ.ತುಂಬಾ ಸುಂದರವಾಗಿ ಮೂಡಿದೆ ಹಂಬಲಿಕೆ.ಆತ ತುಸು ನಿಂತರೆ ನಮಗೂ ತಿಳಿಸಿ.ನಿಮ್ಮ ಅಭಿವ್ಯಕ್ತಿಗೆ ಅಭಿನಂದನೆಗಳು
    ಸರೋಜಿನಿ ಪಡಸಲಗಿ

Leave a Reply

%d bloggers like this: