ಬರೆದು ಬೆತ್ತಲಾದ ಮೇಲೆ..

ನಾನು ಕತೆ ಮತ್ತು ಕವಿತೆ
ಸಂದೀಪ್ ಈಶಾನ್ಯ 
ಹಗುರಾಗಿ ಉಸಿರಾಡಲಾಗದೆ ಗಂಟಲುಬ್ಬಿಸಿಕೊಂಡೆ
ನಾನೇ ನನಗೆ ಸಾಕೆನ್ನುವಷ್ಟು ಹಿರಿದುಕೊಂಡೆ
ಕೈ ಕಾಲುಗಳನ್ನು ಬೇಕಾದಂತೆ ವಕ್ರವಾಗಿಸಿ ತಿರುಗಿಸಿಕೊಂಡೆ

 

ಬೋರಲಾಗಿ ಮಲಗಿದೆ
ಹಿಮ್ಮುಖವಾಗಿ ಕೈ ಚಾಚಿ ಎದೆಯ ಅಳತೆ ತೆಗೆದುಕೊಂಡೆ
ಈಗ
ಎಲ್ಲವೂ ಅನೈಸರ್ಗಿಕ
ಯಾವೊಂದು ಕ್ರಮದಲ್ಲಿಯೇ ಇಲ್ಲಾ ಎಂದು ಪಿಸುನುಡಿಯಬೇಕೆಂದಾಗ
ನಿಧಾನವಾಗಿ ಪದ್ಯಯೊಂದು ರಕ್ತ ಒಸರುವಂತೆ
ಟಿಸಿಲೊಡೆಯಿತು
ದಣಿವರಿಯದೆ ನಡೆದ ನಾಟಕ ಕೊನೆಯಾಯಿತು
ಪರದೆ ಕಳಚಿಟ್ಟು ಕೂಲಿಯವರಿಗೆ ಹಣ ಎಣಿಸಿದೆ
ರಂಗ ಬರಿದಾಯಿತು
ಬಣ್ಣ ಹಚ್ಚಿದವನು ಒರೆಸಿಟ್ಟ
ಬೆಳಕು ತಂದವನು ಕಳಚಿಟ್ಟ
ಯಾರನ್ನೋ ಕುರಿತು ಬರೆದವನು  ಅಲ್ಲೆಲ್ಲೋ ಕೊರಳೆರಿದ ಹಾರ
ತೂಗುಹಾಕುತ್ತಿದ್ದ
ಬಂದವರೆಲ್ಲ ತಮ್ಮನ್ನೇ ತಾವು ಕಂಡು ಕಣ್ಣರಳಿಸಿ ನಗುವಷ್ಟರಲ್ಲಿ
ಕತೆಯೊಂದು ಸ್ಪಷ್ಟವಾಗಿ ಕೈ ಹಿಡಿದು ತಲೆ ನೇವರಿಸಿತು
ಪದ್ಯವನ್ನು ಅಪ್ಪಿಕೊಂಡು ಬಾಲ್ಯದ ಗುಟ್ಟು ಹೇಳಿದೆ
ಇನ್ನು ಕತೆಗೆ ಯೌವನ
ಹರಿದ ಜೇಬಿನ ಅಪ್ಪ
ಸಿಂಬಳವೊರೆಸಿದ ಅವ್ವ
ಗಾಳಿಪಟ ಹಾರಿಸಿದ ಅಣ್ಣ
ಪೆಪ್ಪರಮೆಂಟು ನೀಡಿದ ಹುಡುಗಿ ಪದ್ಯವಾದರು
ಹಟಮಾರಿ
ಕತೆಗೆ ಕಾರಣ ಬೇಕಿರಲಿಲ್ಲ
ನಾನು ಬೇಕೆಂದೇ ಮುಚ್ಚಿಟ್ಟ ಎಲ್ಲವನ್ನೂ ತೆರೆದಿಟ್ಟು
ಸುಮ್ಮನಾಯಿತು
ನಾನೂ ಮೌನವಾದೆ
ಮೊದಲು ಕೊಡವಿದ ಸಿಗರೇಟು
ಅಪರಾತ್ರಿ  ನೆನೆಸಿಕೊಂಡ ಬೆಸ್ತರ ಹೆಂಗಸು
ಕದ್ದು ಓದಿದ ಪುಸ್ತಕಗಳು
ಒಮ್ಮೆಲೇ ಕದ್ದ ಚಿಲ್ಲರೆ ಕಾಸು
ಕೇಳದೇ ಕತೆಯಾಗಿದ್ದವು
ನಾನು
ಬರೆದು ಬೆತ್ತಲಾದ ಮೇಲೆ ಎದುರಾದವರಲ್ಲೆಲ್ಲಾ
ಚಿಂದಿ ಬಟ್ಟೆಗಾಗಿ ಹುಡುಕುತ್ತಿದ್ದೆ

Leave a Reply