‘ಕಾಡಂಕಲ್ಲ್ ಮನೆ’ಯಲ್ಲಿ ವೈದೇಹಿ 

ಹಿರಿಯ ಲೇಖಕ ಮುಹಮ್ಮದ್ ಕುಳಾಯಿ ಅವರು ಬರೆದಿರುವ ‘ಕಾಡಂಕಲ್ಲ್ ಮನೆ’ಗೆ ‘ಹೇಮಂತ ಸಾಹಿತ್ಯ ವರ್ಷದ ಲೇಖಕ 2016’ ಪ್ರಶಸ್ತಿ ದೊರಕಿದೆ.

ಈ ಕಾದಂಬರಿಯ ಕುರಿತಂತೆ ವೈದೇಹಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಈ ಕಾದಂಬರಿಯನ್ನು ಇರುವೆ ಪ್ರಕಾಶನ ಮಂಗಳೂರು ಇವರು ಪ್ರಕಟಿಸಿದ್ದಾರೆ. 

ಮಹಮ್ಮದ್ ಕುಳಾಯಿ ಅವರ ಕಾದಂಬರಿ “ಕಾಡಂಕಲ್ಲ್ ಮನೆ” ಹೇಳುವುದು ಎಲ್ಲರೂ ಒಳ್ಳೆಯವರೇ ಆಗಿಯೂ ನೋವುಂಡ ಕತೆಗಳನ್ನು.

ಅಂಥಾ ದುಷ್ಟರಾಗಲೀ ಕೆಟ್ಟವರಾಗಿಯೂ ಅಲ್ಲದೆಯೂ ಅನಿವಾರ್ಯತೆ ಕೂಡ ಏನೂ ಇಲ್ಲದೆಯೂ ತಮ್ಮ ತಮ್ಮ ಸಂದರ್ಭಕ್ಕೆ ತಕ್ಕಂತೆ ಆದರೆ ಅನುದ್ದೇಶವಾಗಿ ಮರಣಾಂತಿಕವಾಗಿ ನೋಯಿಸುವ ನೋಯುವ ಕತೆಗಳನ್ನು. ಈ ಸಮಾಜದಲ್ಲಿ ಯಾರೂ ತಮಗೆ ಮಾತ್ರ ತಾವು ಎನ್ನುವಂತಿಲ್ಲ. ನಮ್ಮಷ್ಟಕ್ಕೆ ನಾವು ಎನ್ನುವಂತೆಯೂ ಇಲ್ಲ.

ಇಲ್ಲಿ ಎಲ್ಲರ ಜೀವನವೂ ಹುಟ್ಟಿನಿಂದಲೇ ಅಗೋಚರ ಸೂತ್ರದಿಂದ ಪರಸ್ಪರ ಬಂಧಿತವಾಗಿದೆ. ಆ ಬಂಧನ ಉಸಿರುಗಟ್ಟದಂತೆ ತುಸು ಸುರಳೀತ ಮಾಡಿಕೊಂಡು ಬದುಕುವುದರಲ್ಲೇ ವಿವೇಕ ಇದೆ ಹೊರತು, ಕಳಚಿಕೊ:ಳ್ಳುವುದರಲ್ಲಿಲ್ಲ. ಅದು ಸಾಧ್ಯವೂ ಇಲ್ಲ. ಸಂಪೂರ್ಣ ಸ್ವಾತಂತ್ರ್ಯವೆಂಬುದು ಸ್ವಚ್ಛಂದ ಅಲ್ಲದೇ ಹೋಗಬಹುದು. ಆದರೆ ಅದು ಸಂಪೂರ್ಣ ಸ್ವಾರ್ಥವಂತೂ ಹೌದು- ಎಂಬುದನ್ನು ಈ ಕಾದಂಬರಿ ಹಲವು ಮಜಲುಗಳಲ್ಲಿ ಚಿಂತಿಸುತ್ತದೆ.

ಅಬ್ಬುಬ್ಯಾರಿ ಒಬ್ಬ ಅತ್ಯಂತ ಸಜ್ಜನ ಶೀಲವಂತ ವ್ಯಕ್ತಿ. ಮನೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಆತ ಎಲ್ಲವನ್ನೂ ಪ್ರೀತಿ ವಿಶ್ವಾಸದಿಂದ ನಿಭಾಯಿಸಿಕೊಂಡು ಹೋಗುವವನು. ಊರಿಗೆಲ್ಲ ಬೇಕಾದವನು. ಫಾತಿಮಾ, ಆತನ ಅಸ್ವಸ್ಥ ತಮ್ಮನ ಹೆಂಡತಿ. ತಮ್ಮ ತೀರಿಕೊಂಡು ಆಕೆ ಅನಾಥಳಾಗುವ ಪ್ರಸಂಗ ಬಂದಾಗ ಧೈರ್ಯದಿಂದ ಆಕೆಯನ್ನು ವಿವಾಹವಾಗಿ ಬದುಕು ಕೊಟ್ಟವನು. ವಿಭಿನ್ನ ಸಮುದಾಯದವರಾದ ಆತನೂ ತ್ಯಾಂಪಣ್ಣನೂ ಗಾಢ ಸ್ನೇಹಿತರು.

ಈ ಸ್ನೇಹ ಆ ಊರಿನ ಸೌಹಾರ್ದತೆಯ ದೊಡ್ಡ ಶಕ್ತಿ. ಆತನಿಗೆ ಇಬ್ಬರು ಹೆಣ್ಣುಮಕ್ಕಳು, ಜಮೀಲಾ, ಸಾರಾ. ಇನ್ನೊಬ್ಬಳು ಸಾಕುಮಗಳಂತೆಯೇ ಆಗಿ ಹೋದ ಐಸು. ಮುದ್ದಿನ ಮಗಳು ಸಾರಾಳಿಂದ ಅಬ್ಬುಬ್ಯಾರಿಯ ಕುಟುಂಬ ಆಘಾತಕ್ಕೊಳಗಾಗಿ ದೀರ್ಘವಾಗಿ ನರಳುತ್ತಿದೆ.

ಇದು ಕಾದಂಬರಿಯ ಉದ್ದಕ್ಕೂ ಬಲು ನಿಧಾನವಾಗಿ ಬಿಡಿಸಿಕೊಳ್ಳುತ್ತ ಅಜ್ಜಿ, ಐಸು, ಜಮೀಲಾ ಮುಂತಾದವರ ಜೀವನದ ಹಾಸು-ಹೊಕ್ಕುಗಳೂ ಈ ನೇಯ್ಗೆಯಲ್ಲೇ ಹೆಣೆದುಕೊಂಡು ಇವತ್ತಿಗೂ ಮಾಯವಾಗದ, ಹಲವು ರೂಪಾಂತರಗಳಲ್ಲಿ ಇದ್ದೇ ಇರುವ, ಹೆಣ್ಣುಮಕ್ಕಳ ಸ್ಥಿತಿಗತಿಗಳನ್ನೂ ಸಂಬಂಧಗಳು ಎಷ್ಟು ಮಧುರವೋ ಅಷ್ಟೇ ಕಠಿಣವೂ ಸಂಕೀರ್ಣವೂ ಆಗಿರುವುದನ್ನೂ ವಿಷಣ್ಣತೆಯಿಂದ ದಾಖಲಿಸುತ್ತದೆ.

ವೈದೇಹಿ

ಕಾದಂಬರಿ ಆರಂಭವಾಗುವಾಗ, ಆ ಮನೆಯಲ್ಲಿ ಇರುವುದು ಐಸು ಮತ್ತು ಅಜ್ಜಿ ಫಾತಿಮಾ. ಮಂಗಳೂರು ಸಮೀಪದ ಕಾಡಂಕಲ್‌ಲ್ ಎಂಬ ಹಳ್ಳಿ ಮೂಲೆಗೆ ಸಾರಾಳ ಮಗಳು ತಾಹಿರಾ ಬಂದು ಬಾಗಿಲು ತಟ್ಟಿದಲ್ಲಿಂದ ಅಲ್ಲಿನ ಸಂಕಟದ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಅಜ್ಜಿ ಫಾತಿಮಾ ಮಗಳಿಂದಾಗಿ ಉಂಟಾದ ದುಃಖವನ್ನು ಈಗಲೂ ಹಸಿಹಸಿಯಾಗಿ ಅನುಭವಿಸುತ್ತ ಅರೆ-ಮರೆ ಸ್ಥಿತಿಯಲ್ಲಿದ್ದಾಳೆ. ಅವಳನ್ನು ಮುಚ್ಚಟೆಯಾಗಿ ನೋಡಿಕೊಳ್ಳುತ್ತಿರುವವಳು ಅಬ್ಬುಬ್ಯಾರಿಯ ಮನೆಯಲ್ಲಿ ಲಾಗಾಯ್ತಿನಿಂದಲೂ ಇರುವ ಅವನ ಸಾಕುಮಗಳು ಐಸು. ಏನು ಯಾಕೆ ಎಲ್ಲಿಗೆ ಎಂದೇ ತಿಳಿಸದೆ ಹೊರಟುಹೋದ ತನ್ನ ಪತಿ ಒಂದಲ್ಲ ಒಂದು ದಿನ ಬಂದೇ ಬರುವ ಎಂಬ ಅನಂತ ನಿರೀಕ್ಷೆ ಆಕೆಗೆ. ಥಟ್ಟಂತ ಅರ್ಧದಲ್ಲೇ ನಿಂತ ತನ್ನ ಬಾಳಿಗೆ ಭರವಸೆಯಂತಿರುವ ಮಗ ನಾಸರ್‌ನೊಂದಿಗೆ ತಾಳ್ಮೆಯಿಂದ ದಿನಗಳೆಯುತ್ತಿರುವವಳು.

ಹೌದು. ಹೋದವರು ಮರಳಲೇ ಇಲ.್ಲ ಎಲ್ಲಿಗೆ ಹೋದರು ಯಾಕೆ ಹೋದರು ಒಂದೂ ಗೊತ್ತಿಲ್ಲ. ಅಜ್ಜ ಹುಡುಕದ ಜಾಗ ಇಲ್ಲ. ಇಪ್ಪತ್ನಾಲ್ಕು ವರ್ಷಗಳಿಂದ ನಾನು ಅವರ ದಾರಿ ಕಾಯುತ್ತಿದ್ದೇನೆ ತಾಹಿರಾ ಬಳಿ ತನ್ನ ಕುರಿತು ಹೇಳುವ ಐಸುವಿನ ದನಿಯಲ್ಲಿ ದುಃಖ ಇದೆಯೇ ಹೊರತು ಗಂಡನ ಬಗ್ಗೆ ಒಂದೇ ಒಂದು ಕಹಿ ಇಲ್ಲ. ಯಾಕೆಂದರೆ ಅವಳ ನಂಬಿಕೆಯಂತೆ ಆತ ಕೆಟ್ಟವನಲ್ಲ. ಊರಿನ ಮಸೀದಿಯ ಮದ್ರಸಕ್ಕೆ ಪಾಠ ಹೇಳಲೆಂದು ಅಬ್ಬುವಿನ ಅಳಿಯ ಕೇರಳದಿಂದ ಕರೆಸಿಕೊಂಡ ಉಸ್ತಾದ ಆತ. ಆತನ ಪಾಂಡಿತ್ಯ, ಮಕ್ಕಳಿಗೆ ಪಾಠ ಹೇಳುವ ಪರಿ ಊರಿಗೆಲ್ಲಾ ಮೆಚ್ಚುಗೆ. ನೋಡಲು ಚೆಲುವರಾಯ ಬೇರೆ. ಅವನನ್ನು ತಾನು ನೋಡುತ್ತ ಕಣ್ಣು ರೆಪ್ಪೆ ಮುಚ್ಚುವುದನ್ನೇ ಮರೆತುಬಿಟ್ಟಿದ್ದೆ ಎನ್ನುತ್ತಾಳೆ ಐಸು.

ಅಂಥವ ಒಂದು ರಾತ್ರಿ ನಾಳೆ ನನಗೊಮ್ಮೆ ಊರಿಗೆ ಹೋಗಿ ಬರಬೇಕು ಎಂದು, ನಾಲ್ಕು ವರುಷ ಅವನೊಂದಿಗೆ ಐಸು ಅನುಭವಿಸಿದ ಸುಖದ ನೆನಪುಗಳನ್ನು ಮಾತ್ರ ಹಿಂದೆ ಬಿಟ್ಟು, ಪುಟ್ಟಮಗು ನಾಸರ್‌ನನ್ನೂ ಬಿಟ್ಟು ಮರುದಿನ ಹೊರಟೇ ಬಿಡುವ. ಒಂದು ವಾರದಲ್ಲಿ, ಬಕ್ರೀದ್ ಹಬ್ಬಕ್ಕೆ ಇಲ್ಲಿರುತ್ತೇನೆ ಎಂದು ಹೋದವ, ಇವತ್ತಿನವರೆಗೂ ಇಲ್ಲ. ಕಾಯುವ ಐಸುವಿನಲ್ಲಿ ಎಲ್ಲಾ ಜಾತಿ ಜನಾಂಗಗಳಲ್ಲಿಯೂ ನಿರಂತರವಾಗಿ ಇದ್ದೇ ಇರುವ ಒಬ್ಬ ಚಿರವಿರಹಿಯ ಚಿತ್ರ ಕಾಣುತ್ತದೆ. ಮರಳಿ ಮರಳಿ ಜೀವ ತಾಳುವ ಅಸಂಖ್ಯ ಯಶೋಧರಾ ಚರಿತೆಗಳ ಒಂದು ಆವೃತ್ತಿಯೂ.

ಇನ್ನು ಜಮೀಲಾ! ಜೀವವನ್ನೆ ನೆಟ್ಟುಕೊಂಡಂತೆ ತಾನು ಪ್ರೀತಿಸಿದ ಗಂಡ, ತನ್ನ ಮೂರು ಹೆಣ್ಣುಮಕ್ಕಳ ತಂದೆ, ಮೌಲವಿ, ಗುಟ್ಟಿನಲ್ಲಿ ಇನ್ನೊಂದು ಮದುವೆಯಾಗಿ ದೂರದಲ್ಲೆಲ್ಲೋ ಇರುವ ಎಂಬ ಸುದ್ದಿ ಯಾರಿಂದಲೋ ಕೇಳಿ ತಡೆಯಲಾಗದ ಆಘಾತಕ್ಕೆ ಒಳಗಾದವಳು. ಅದು ಅವಳ ಎಲ್ಲ ಕೋಮಲತೆಯನ್ನೂ ಸುಟ್ಟುಹಾಕಿದೆ. ಏನೇನು ಮಾಡಿದರೂ ಆಕೆಗೆ ಗಂಡನ ಕುರಿತು ಮೃದುತ್ವ ಹುಟ್ಟದಂತೆ ಮಾಡಿದೆ. ತನಗಾದ ಅವಮಾನ, ಅವಳಲ್ಲಿ ಸಮಾಧಾನದಿಂದ ಆಲಿಸುವ ಚಿತ್ತವನ್ನೇ ಛಿದ್ರ ಮಾಡಿದೆ. ಆಶ್ರಯವಿಲ್ಲದೆ ಬದುಕುವ ಆಸೆಯ ದಿಟ್ಟ ಜಮೀಲಾ ಅವಳು. ಅಂಥವಳಿಗೆ ತಂದೆಯ ನೆರವು ಅನಿವಾರ್ಯವಾಗುತ್ತದೆ.

ಮೊದಲ ಮಗಳ ಮದುವೆ ನಿಶ್ಚಯವಾಗಿ ತನ್ನ ತಂದೆ ತನ್ನನ್ನು ಕೇಳದೆಯೇ ತನಗೆ ಹೇಳದೆಯೇ ಅಳಿಯನ ಬಳಿ ಹೋಗಿ ವಿಷಯ ತಿಳಿಸಿ ಕರೆದು ಬಂದಾಗ ಆಕೆ ರೋಷತಪ್ತಳಾಗುತ್ತಾಳೆ. ತನ್ನ ಅಭಿಮಾನದ ಬುಡಕ್ಕೇ ಕೊಡಲಿಪೆಟ್ಟು ಹಾಕಿದ ವ್ಯಕ್ತಿಯ ಕುರಿತು ಹಾಗಾದರೆ ತಂದೆಗೆ ಸಿಟ್ಟೇ ಇಲ್ಲವೆ? ತನ್ನನ್ನು ಹೆತ್ತ ತಾಯಿಗೂ? ತನಗೆ ಹೇಳದೆ (ಅಥವಾ ತನಗೆ ತಿಳಿಯದಂತೆ; ಇಲ್ಲಿಯೂ ಗುಟ್ಟು!) ಅವನಲ್ಲಿಗೆ ಒಸಗೆ ಒಯ್ಯುವ ಅಗತ್ಯ ಏನಿತ್ತು? ತಾನು ಹಾಗಾದರೆ ಯಾರಿಗೂ ಏನೂ ಅಲ್ಲವೆ? ತನ್ನ ಭಾವನೆಗಳಿಗೆ ಹೆತ್ತವರಲ್ಲಿಯೂ ಬೆಲೆ ಇಲ್ಲವೆ?

ಅಪ್ಪಾ, . . .ಯಾವಾಗ ನೀವು ನನ್ನಲ್ಲಿ ಒಂದು ಮಾತೂ ಕೇಳದೆ ಅವರ ಮನೆಯ ಹೊಸಿಲು ಹತ್ತಿದಿರೋ ಇನ್ನು ನನ್ನಿಂದಾಗಲ್ಲಪ್ಪಾ. ಇನ್ನು ನಾನು ಈ ಮನೆಯಲ್ಲಿರೋದಿಲ್ಲ. ನನ್ನ ಮನೆಯಲ್ಲಿರುತ್ತೇನೆ. ನಾನು ಒಂಟಿಯಾಗಿ ಬದುಕ ಬಲ್ಲೆ. ನಾನು ಹೋಗುತ್ತೇನೆ. ಮದುವೆಯ ದಿನ ಬೆಳಿಗ್ಗೆ ಎಲ್ಲರಂತೆ ನಾನೂ ಬರುತ್ತೇನೆ. . . ಎಂದು ತಂದೆ ಮನೆಯಿಂದಲೂ ರಪ್ಪನೆ ಹೊರಟ ತೀರಾ ಆತ್ಮಗೌರವದ ಜಮೀಲಾ ಅವಳು; ಅಳಿಯ ಒಬ್ಬ ಅನಾಥ ಹುಡುಗಿಗೆ ಬಾಳು ಕೊಟ್ಟಿದ್ದಾನೆ ಎಂದು ಮೆಚ್ಚುವ ಅಬ್ಬು ಬ್ಯಾರಿ ಆ ಹುಡುಗಿಯಲ್ಲಿ ತನ್ನ ಮಗಳನ್ನೇ ನೋಡುತ್ತಾನೆ!

ಅವಳಿಗೆ ಬೇರೆ ವರ ಹುಡುಕಿ ಮದುವೆ ಮಾಡಿಸಬಹುದಿತ್ತಲ್ಲ ಎಂಬ ಸರಳ ಸವಾಲನ್ನಾದರೂ ಅಳಿಯನಿಗೆ ಕೇಳಲೇ ಬೇಕು ಎಂದು ಸಜ್ಜನನಾದ ಆತನಿಗೂ ಅನಿಸದೇ ಹೋಗುವುದು, ಮಗಳಿಗೆ ಹೇಳದೆ ಅವಳ ಮಕ್ಕಳ ಮದುವೆಗೆ ಅಳಿಯನನ್ನು ಕರೆದು ಬರುವುದು ಎಲ್ಲವೂ ಕೊನೆಗೂ ಹೆಣ್ಣಿನ ಭಾವನೆಗಳ ಬಗ್ಗೆ ಪುರುಷರಲ್ಲಿ ಪ್ರಜ್ಞೆಯಾಚೆಗೆ ಹುದುಗಿರುವ ಅವಜ್ಞೆಯ ಕುರುಹಿಗೆ ಪುರಾವೆಯಂವೆ. ಅಳಿಯನ ಅನಾರೋಗ್ಯ ಉಲ್ಬಣಿಸಿದೆ, ಆತ ಪ್ರತಿ ಉಸಿರಿಗೂ ಜಮೀಲಾ ಜಮೀಲಾ ಎನ್ನುತಿದ್ದಾನೆ ಎಂಬ ಸುದ್ದಿ ಬಂದು ತಾಯಿ ಜಮೀಲಾಳಿಗೆ ಕೊನೆಗಾಲದಲ್ಲಾದರೂ ಒಮ್ಮೆ ಮುಖ ತೋರಿಸಿ ಬಾ ಎಂದು ಹೇಳಿದಾಗ ಜಮೀಲಾ ಒಪ್ಪುವುದಿಲ್ಲ. ಪತಿ ತನ್ನೊಂದಿಗೇ ಗುಟ್ಟು ಮಾಡಿ ವಂಚಿಸಿದ ಅವಳ ಆಕ್ರೋಶವನ್ನು ತಡೆಯಲು ಜೀರ್ಣಿಸಿಕೊಳ್ಳಲು ಸ್ವತಃ ಅವಳಿಗೆ ಸಾಧ್ಯವೇ ಆಗುತ್ತಿಲ್ಲ. ಆದರೆ ಅವಳ ಈ ಆಕ್ರೋಶ ತಾಯಿಗೂ ಐಸುವಿಗೂ ಕೇವಲ ವ್ಯರ್ಥ ಹಟದಂತೆ ಕಾಣುವುದಿದೆಯಲ್ಲ, ಸ್ತ್ರೀಲೋಕದ ಕಟು ವ್ಯಂಗ್ಯಗಳ ಬೇರುಬೀಳುಗಳು ಇರುವುದೇ ಇಲ್ಲಿ ಮತ್ತು ಹೀಗೆ!

ಮುದ್ದಿನ ಮಗಳು ಸಾರಾಳ ವಿಚಾರವೇ ಬೇರೆ. ಕತೆಯ ಪ್ರಕಾರ ಜೋಹರಾ  ಜಮೀಲಾಳಿಗಿಂತ ಸುಂದರಿ, ಕಲಿಯುವುದರಲ್ಲಿ ಬುದ್ಧಿವಂತೆ. ಹುಡುಗಿಯರಿಗೆ ಹೆಚ್ಚು ಕಲಿಸಬಾರದು ಎಂಬಂಥ ವಾತಾವರಣದಲ್ಲಿ ಅವಳು ಎಷ್ಟು ಕಲಿಯುತ್ತಾಳೊ ಕಲಿಯಲಿ ಎಂದು ಕಲಿಸಲು ಸಿದ್ಧವಿರುವ ತಂದೆ ಅಬ್ಬು ಬ್ಯಾರಿ. ರಸ್ತೆಯಲ್ಲಿ ತೊಂದರೆ ಕೊಡುವ ಪೋಲಿ ಮಕ್ಕಳನ್ನು ಎದುರಿಸಿ ಕಾಲೇಜಿಗೆ ಹೋಗುತಿದ್ದ ಧೀರೆ ಜೋಹರಾ. ಒಮ್ಮೆ ಎಲ್ಲಿಂದಲೋ ಬೀಸಿ ಬಂದ ಕಲ್ಲು ಅವಳ ಹಣೆಗೆ ಹೊಡೆದು, ಇನ್ನು ಕಲಿಯುವುದು ನಿಲ್ಲಿಸುವುದೇ ಸೈ ಎಂಬ ಸ್ಥಿತಿ ಬಂದಾಗ ಅಬ್ಬುಬ್ಯಾರಿಯ ಪ್ರಾಣಸ್ನೇಹಿತ ತ್ಯಾಂಪಣ್ಣ ಮೌಲವಿಯವರೆದುರು ನಿಮ್ಮ ಹೆಣ್ಣುಮಕ್ಕಳು ಓದಬೇಕು ಗುರುಗಳೇ ಎಂದು ವಾದಿಸಿ ಅವಳನ್ನು ಮತ್ತೆ ಕಾಲೇಜಿಗೆ ಹೋಗಲು ಅನುವು ಮಾಡಿಕೊಡಲು ಕೇಳಿಕೊಂಡಾಗ ಮೌಲವಿ ತ್ಯಾಂಪಣ್ಣ ನಿಮ್ಮ ಈ ಪ್ರೀತಿ ಎಂದೂ ಹೀಗೆಯೇ ಇರಲಿ. ನೆರಳು ನೀಡುವ ಮರಕ್ಕೆ ಬ್ಯಾರಿಗಳು ಎಂದೂ ಕೊಡಲಿ ಏಟು ಹಾಕಲಾರರು. ಒಂದು ಲೋಟ ಹಾಲು ಕೊಟ್ಟರೆ ಹಾಲಿಗೆ ಜೇನು ಸೇರಿಸಿ ಹಿಂದೆ ಕೊಡುವವರು ಅವರು. ಎನ್ನುವ ಮಾತು ಆಳವಾಗಿ ಕಲಕುವಂಥದು.

ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾಳೆ ಮಗಳು. ಅಬ್ಬುಬ್ಯಾರಿ ಸಂಭ್ರಮದಿಂದ ಅವಳ ಮದುವೆಗೆ ತಯಾರಿ ನಡೆಸುತ್ತಾರೆ. ಅಂದು ಅವಳನ್ನು ಗಂಡಿನ ಕಡೆಯವರು ನೋಡಲು ಬರುವ ದಿನ. ಮನೆಯಲ್ಲಿಡೀ ಸಂತಸದ ಗಲಗಲವಿದೆ. ಗಂಡಿನ ಕಡೆಯವರು ಬಂದೂ ಬಿಟ್ಟಿದ್ದಾರೆ. ಈಗ ಮದುಮಗಳು ಹೊರಬರಬೇಕು. ಆದರೆ ಎಲ್ಲಿ ಆಕೆ? ಎಲ್ಲಿಯೂ ಎಷ್ಟು ಹೊತ್ತಾದರೂ ಅವಳ ಸುಳಿವೇ ಇಲ್ಲ. ಅವಳಿಗಾಗಿ ಸಂಜೆಯವರೆಗೂ ಕಾದ ಗಂಡಿನ ಕಡೆಯವರು ಅಬ್ಬುವನ್ನು ಹೀಯಾಳಿಸಿ ಹೊರಟು ಹೋಗುತ್ತಾರೆ.

ಇದು ನೇರ ಅಬ್ಬುಬ್ಯಾರಿಯ ಮಾನ ಮರ್ಯಾದೆಯ ಪ್ರಶ್ನೆಯಾಗಿ ಸಮಾಜದಿಂದ ಅವಹೇಳನಕಾರಿ ಮಾತುಗಳನ್ನು ಕೇಳಬೇಕಾಗುತ್ತದೆ. ಆತ ಕುಗ್ಗುತ್ತಾನೆ, ಒಳಗೊಳಗೇ ಕುಸಿಯುತ್ತಾನೆ. ತಾಯಿ ಅನ್ನನೀರು ಬಿಟ್ಟು ಮರುಗುತ್ತಾಳೆ. ಕತೆ ಮುಂದರಿಯುತ್ತ ಜೋಹರಾ ಬೇರೊಬ್ಬನನ್ನು ಮದುವೆಯಾಗಿ ಸುಖವಾಗಿರುವ ಸುದ್ದಿಯೂ ಬಂದು ಅಬ್ಬುಬ್ಯಾರಿಗೆ ತಲುಪುತ್ತದೆ. ಆ ಮನೆಯ ಇರಸ್ತಿಕೆಯೇ ಬದಲಾಗುತ್ತದೆ. ಅಜ್ಜ ಅವಳನ್ನೇ ಕನವರಿಸುತ್ತ ತೀರಿಕೊಳ್ಳುತ್ತಾನೆ. ಅಜ್ಜಿ ಅರೆಸ್ವಯದವಳಾಗುತ್ತಾಳೆ. ತಾಹಿರಾ ಬರುವಾಗ ಆ ಮನೆಯ ಅವಸ್ಥೆ ಹೀಗಿದೆ.

ಅಚ್ಚರಿಯೆಂದರೆ, ಈ ಸಂದರ್ಭದಲ್ಲಿ ಮನೆಯಲ್ಲಿ ಎಲ್ಲ ಬೆಪ್ಪುಗಟ್ಟಿದರೇ ಹೊರತು ಯಾರೂ ಸಾರಾಳನ್ನು ತೆಗಳಲಿಲ್ಲ. ಬದಲು ಮೊದಲೇ ಹೇಳಿದ್ದರೆ ಎಲ್ಲ ಸರಿಹೋಗುತಿತ್ತಲ್ಲ ಎಂಬುದೇ ಅಬ್ಬುಬ್ಯಾರಿಯ ಕೊರಗು. ತನ್ನನ್ನು ಅತ್ಯಂತ ಪ್ರೀತಿಸುತಿದ್ದ ತನಗೆ ಶಾಲೆ ಕಾಲೇಜಿಗೆ ಹೋಗಲು ಸ್ವತಂತ್ರ ಬಿಟ್ಟ ತಂದೆತಾಯಿಗೆ ಜೋಹರಾ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಅಡ್ಡಿ ಬಂದದ್ದಾದರೂ ಏನು? ಯಾವ ಭಯ, ಆತಂಕ? ಉತ್ತರವಾಗಿ ಕಾಣುವುದು, ನಾವೇ ಬೆಳೆಸಿಟ್ಟ ಸಮಾಜ. ಅದರ ಅರ್ಥಹೀನ ಕಟ್ಟುನಿಟ್ಟುಗಳು. ಅವುಗಳಿಂದಾಗಿ ಮನಸ್ಸಿನಲ್ಲಿ ಅರಿವೇ ಆಗದಂತೆ ಉತ್ಪನ್ನವಾಗುವ ಭಯ.ಜೋಹರಾ ಶಿಕ್ಷಣ ಪಡೆದಳೆನೋ ಸರಿ, ಅದರೆ ಅವಳಿಗೆ ತಂದೆಯ ವಿಶಾಲ ಮನಸ್ಸು ಪ್ರೀತಿಯ ಪರಾಕಾಷ್ಠೆಯ ಅರಿವೇ ಆಗಿಲ್ಲವೇನೋ ಅನಿಸುತ್ತದೆ. ಗಂಡನ ಜೊತೆ ಒಮ್ಮೆ ತವರಿಗೆ ಬಂದು ಹೋಗಬೇಕೆಂದು ಉತ್ಕಟ ಆಸೆಯಾದರೂ ಜೋಹರಾ ಹಿಂಜರಿಯುತ್ತಾಳೆ.

ಓದುತ್ತ ಹೋದಂತೆ ಸಮಾಜದ ವಿಕ್ಷಿಪ್ತತೆ ಎಷ್ಟು ಢಾಳಾಗಿ ಎದ್ದು ಕಾಣುತ್ತದೆ! ಉದಾಹರಣೆಗೆ-ಜಮೀಲಾ ಪತಿ ಇನ್ನೊಬ್ಬಳನ್ನು ಮದುವೆಯಾಗಿ ದೂರ ಹೊರಟು ಹೋದಾಗ ಯಾವ ಬಗೆಯ ಅಲ್ಲೋಲಕಲ್ಲೋಲವೂ ಆಗಿಲ್ಲ, ಜಮೀಲಾಳ ಮರ್ಯಾದೆಯ ಪ್ರಶ್ನೆಯೇ ಯಾರಿಗೂ ಕಾಣಲಿಲ್ಲ, ಸಮಾಜದಿಂದ ಅವಳ ಪತಿಗೆ ಒಂದು ರೀತಿಯಲ್ಲಿ ಪರವಾನಗಿ ಇದ್ದಂತೆಯೇ ಇತ್ತು, ಏಕೆ?

ಐಸು ಪತಿ ಇದ್ದಕ್ಕಿದ್ದಂತೆ ಒಂದು ಬೆಳಗಾತ ಎದ್ದು ಹೋದವನು ಬಾರದೇ ವರ್ಷಗಳು ಕಳೆದರೂ ಅದೊಂದು ಆಗಬಾರದ್ದು ಆಗಿಹೋದ ಘಟನೆಯಂತೆ ಯಾರನ್ನೂ ಕೆಣಕಲಿಲ್ಲ; ಐಸುವಿನ ಬದುಕಿನ ಪ್ರಶ್ನೆ ಇತ್ಯರ್ಥ ಆಯಿತೇ ಹೊರತು ಅವಳ ಮರ್ಯಾದೆಯ ಪ್ರಶ್ನೆಯೇ ಏಳಲಿಲ್ಲ ಏಕೆ?

ಹಾಗೆ ನೋಡಿದರೆ ಗಂಡು ನೋಡಲು ಬರುವ ದಿನ ಸಾರಾ ಮನೆಬಿಟ್ಟು ಹೊರಟದ್ದು  ಮೌಲವಿ ಮತ್ತು ಉಸ್ತಾದ್ ಅವರುಗಳು ಮಕ್ಕಳನ್ನು ಪಡೆದು ಹೆಂಡಂದಿರ ಮಡಿಲಿಗೆ ಬಿಟ್ಟು ತಮ್ಮ ನೇರದಲ್ಲಿ ಹೇಳದೆ ಕೇಳದೆ ನಡೆದು ಹೋದಷ್ಟು ದಾರುಣ ಅಲ್ಲ. ಆದರೆ ಆಕೆ ಬಿಟ್ಟುಹೋದ ಸಂದರ್ಭ ಮಾತ್ರ ಅತ್ಯಂತ ದಾರುಣ. ಹಾಗೆ ಯಾವ ಅಪ್ಪಅಮ್ಮನ ಮರ್ಯಾದೆಯನ್ನೂ ಯಾವ ಮಕ್ಕಳೂ ಕಳೆಯದಿರಲಿ. ಅವರ ಶುಭ್ರ ಆನಂದಕ್ಕೆ ಸಂಭ್ರಮಕ್ಕೆ ಬಂಡೆಕಲ್ಲು ಹೇರದಿರಲಿ, ಇಂತಹ ಪರಿಸ್ಥಿತಿ ನಮ್ಮ ಶತ್ರುಗಳಿಗೂ ಬರದಿರಲಿ ಎಂದು ಯಾರೇ ಆಗಲಿ ಆರ್ತವಾಗಿ ಆಶಿಸಲೇ ಬೇಕು, ಸರಿಯೆ. ಆದರೆ ಇದರೊಂದಿಗೇನೇ ಮೇಲೆ ಹೇಳಿದಂತೆ ಈ ಕಾದಂಬರಿ ನಮ್ಮ ಸಮಾಜ ತನ್ನ ಭಾವನೆಗಳಲ್ಲೇ ಕಲ್ಪನೆಗಳ ಮೂಲದಲ್ಲೇ ಹೊಂದಿರುವ ಹೆಣ್ಣು ಗಂಡಿನ ತಾರತಮ್ಯವನ್ನೂ ಸೂಕ್ಷ್ಮವಾಗಿ ಗಮನಿಸುತ್ತದೆ. ಎಂದಿನಿಂದಲೂ ನಡೆದುಕೊಂಡು ಬಂದಿರುವ ಈ ಬಿಟ್ಟು ಹೊರಡುವ ಪ್ರಕ್ರಿಯೆ ಮತ್ತು ಪ್ರತಿಕ್ರಿಯೆಗಳ ಹಿಂದೆ ದೊಡ್ಡ ರಾಜಕಾರಣವೇ ಇದೆ. ಇವೆಲ್ಲವೂ ಆತ್ಯಂತಿಕ ಪರಿಣಾಮದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೇ ಎರವಾಗುತ್ತವೆ.
***

ಇತ್ತೀಚೆಗೆ ನಮ್ಮಲ್ಲಿ ಹೀಗೆ  ಎಲ್ಲ ಮುಂದರಿಯುವವರೆಗೂ ಸುಮ್ಮನಿದ್ದು ನಿಶ್ಚಯದ ದಿನದಂದೋ ಮದುವೆ ಮುಹೂರ್ತದಲ್ಲಿಯೋ ಕಣ್ತಪಿಸಿ, ಕದ್ದು ಓಡಿಹೋಗುವ ಹೆಣ್ಣುಮಕ್ಕಳ ಅನೇಕ ಉದಾಹರಣೆಗಳು ಪ್ರಾಯಶಃ ಈ ಕಾದಂಬರಿಗೆ ಪ್ರೇರಣೆ ಇರಬಹುದೆಂದು ಊಹಿಸುವೆ. ಅವರ ಇಂಥ ನಡವಳಿಕೆಯಿಂದ ಹೆತ್ತವರಿಗೆ ಆಗುವ ಮರ್ಮಾಂತಿಕ ಹೊಡೆತವನ್ನೂ, ಸಮಾಜ ಅವರು ತಲೆಯೆತ್ತದಂತೆ ಮಾಡುವ ಹೀನೈಕೆಯ ಪರಿಯನ್ನೂ ಕಾದಂಬರಿ ಸಮರ್ಥವಾಗಿ ಹಿಡಿದಿಟ್ಟಿದೆ. (ಜೊತೆಗೆ ಉಳಿದಿಬ್ಬರ ಉದಾಹರಣೆಗಳನ್ನೂ ಇರಿಸಿ ಸಮಾಜವೆಂಬ ಜನಸಮೂಹದ ಆತ್ಮಾವಲೋಕನಕ್ಕೂ ಎಡೆ ಮಾಡಿದೆ.)

ಎಲ್ಲೆಲ್ಲೂ ಕಾಣುವ ಭಯಾನಕ ಸುದ್ದಿ ಸಮಾಚಾರಗಳಿಂದಾಗಿ ಕವಿಯುವ ಬೈಯ್ಯತ್ತಾರೆ, ಹೊಡೆಯುತ್ತಾರೆ, ಕೊಲ್ಲುತ್ತಾರೆ, ಹೋಗಲು ಬಿಡುವುದಿಲ್ಲ ಎಂಬ ಭಯ, ಶಿಕ್ಷಣ ನೀಡಬೇಕಾದ ಎಲ್ಲ ಧೈರ್ಯವನ್ನೂ ವಿವೇಚನೆ ವಿವೇಕವನ್ನೂ ಹೊಸಕಿ ಹಾಕುತ್ತಿದೆ. ಅಬ್ಬುಬ್ಯಾರಿ ಮತ್ತು ಫಾತಿಮಾ ಅವರಂಥ ಸಾತ್ವಿಕ ತಂದೆತಾಯಿಯರು ಅಲ್ಲಲ್ಲಿ ಇದ್ದರೂ ಅವರ ಸಂಖ್ಯೆ ವಿರಳವಾಗಿ ಮಕ್ಕಳ ಅತಿಕಲ್ಪನೆಯು ಇಂಥ ಸಾತ್ವಿಕರನ್ನೂ ಬಿಡದೆ ಸುತ್ತಿ ಮನಸ್ಸುಗಳನ್ನು ಹೇಳಿಕೊಳ್ಳಲಾರದಂತೆ ಮುಚ್ಚಿಸಿ ಬಿಟ್ಟಿದೆ.

ಹೋಗಲಿ, ಧಿಕ್ಕರಿಸಿ ಸ್ವತಂತ್ರ ಹೊರಟು ಹೋದವರಾದರೂ ಸಂತೋಷದಲ್ಲಿರುವರೆ? ಒಳಗೊಳಗೇ ಹಳಹಳಿಸುವುದರಲ್ಲೇ ಅವರ ಬದುಕು ಸಾಗುತ್ತದೆ. ಸಾರಾ ಹೇಳುವಂತೆ ಜೀವನ ಪೂರ್ತಿ ಬರೀ ನೋವು. . .ಯಾಕೆ ಹೀಗಾಯಿತು? ಗಟ್ಟಿಯಾಗಿ ಅಳಲೂ ಸಾಧ್ಯವಾಗದಂತಹ ದುಃಖ ನೋವುಗಳನ್ನು ಯಾರಲ್ಲಿಯೂ ತೋಡಿಕೊಳ್ಳಲಾಗದಂತ ಸುಳಿಗೆ ಹೇಗೆ ಸಿಲುಕಿಕೊಂಡೆ? ಇದು, ಪ್ರೀತಿ ಮತ್ತು ಹೃದಯವಂತಿಕೆಯನ್ನು ಮನತುಂಬಿ ಉಂಡು ಬೆಳೆದ, ಅನವಶ್ಯ ಗಾಬರಿಯಿಂದ ಮನೆಬಿಟ್ಟು ಓಡಿ ಸ್ವತಂತ್ರವಾಗಿ ಜೀವನಕ್ಕೆ ಕಾಲಿಟ್ಟ ಯಾರೇ ಆದರೂ ಅನುಭವಿಸುವ ತಪ್ತತೆಯ ಮಾದರಿಯಾಗಿದೆ. ಮಗಳು ತಾಹಿರಾ ಮತ್ತು ನಾಸರ್ ಮದುವೆಯ ಸಂಭ್ರಮ, ಈ ನೆಪದಲ್ಲಿ ತಾಯಿಯನ್ನು ಕಾಣಲು ಬರುವ ಜೋಹರಾಳ ತಹತಹ  ಇವುಗಳ ಸಮ್ಮಿಶ್ರ ವಾತಾವರಣದಲ್ಲಿ ಕಾದಂಬರಿ ಮುಗಿಯುತ್ತದೆ.

ಬ್ಯಾರಿ ಸಮುದಾಯದ ಆಗುಹೋಗುಗಳು, ತಿಂಡಿತಿನಿಸು ಅಡುಗೆ ಮೇಲೋಗರಗಳು, ಆಭರಣ ಸಡಗರಗಳು, ವಿವಿಧ ಸನ್ನಿವೇಶಗಳಲ್ಲಿ ನಡೆಸಿಕೊಂಡು ಬರುವ ಆಚಾರಗಳು, ಭಾವನಾ ವಲಯಗಳು, ಮದುವೆ ಮರಣ ಇತ್ಯಾದಿಗಳಲ್ಲಿ ನುಡಿವ ಶ್ಲೋಕಗಳು, ಇತ್ಯಾದಿ ದಟ್ಟ ಸಾಂಸ್ಕೃತಿಕ ವಿವರಗಳು ಸೊಗಸಾಗಿ ಅನಾವರಣಗೊಳ್ಳುವ ಕಾಡಂಕಲ್ಲ್  ಮನೆ ಅಬ್ಬು ಮತ್ತು ತ್ಯಾಂಪಣ್ಣರ ಮೂಲಕ ಸೌಹಾರ್ದದ ಬದುಕಿನ ಅಂದಿನ ದಿನಗಳನ್ನೂ ಆಪ್ಯಾಯಮಾನವಾಗಿ ನೆನಪಿಸುತ್ತದೆ.

ಇಡೀ ಕಾದಂಬರಿ ಸಿನಿಮೀಯ ಧಾಟಿಯಲ್ಲಿ ರಚಿತವಾಗಿದೆಯೆಂದು ಅನಿಸಿದರೂ ಎಲ್ಲಿಯೂ ವಾಸ್ತವತೆಯ ನೆಲೆಗಟ್ಟು ತಪ್ಪದಿರುವುದು ವಿಶೇಷವೆನಿಸುತ್ತದೆ. ಸರಳವಾಗಿ ಆದರೆ ಸಶಕ್ತವಾಗಿ ತನ್ನ ಒಳಗುದಿಯನ್ನು ಕಾದಂಬರಿ ಮೂಲಕ ಪ್ರಕಟಿಸಿದ ಮಿತ್ರ ಶ್ರೀ ಮಹಮ್ಮದ್ ಕುಳಾಯಿ ಅವರಿಗೆ ವಂದನೆ; ಜೊತೆಗೆ ಹಾರ್ದಿಕ ಅಭಿನಂದನೆಗಳು

ಈ ಕೆಳಗಿನ ವಿಳಾಸಕ್ಕೆ ಎಂ ಓ ಮಾಡಿ

“ಕಾಡಂಕಲ್ಲ್ ಮನೆ” ಪುಸ್ತಕ ತರಿಸಿ ಕೊಳ್ಳ ಬಹುದು.

ಕೃತಿಯ ಮೂಲ ಬೆಲೆ -200 ರೂಪಾಯಿ
ನೀವು ಕೊಡಬೇಕಾದ ರಿಯಾಯಿತಿ ಬೆಲೆ – 150 ರೂಪಾಯಿ 

ಆಸಕ್ತರು ತಮ್ಮ ವಿಳಾಸವನ್ನು ಕೆಳಗಿನ ಇಮೇಲ್ iruveprakashana@gmail.com ಅಥವಾ ಮೊಬೈಲ್ ಗೆ ಮೆಸ್ಸೇಜ್ ಮಾಡಬಹುದು.ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.
B.M. BASHEER
A/C-NO-3 0 9 2 8 2 4 1 6 9 9
STATE BANK OF INDIA
PORT ROAD, MANGALORE BRANCH
IFSC CODE-SBIN 0 0 0 0 8 7 1
MOBILE-944 8835 621
iruveprakashana@gmail.com

ಈ ಅಕೌಂಟಿಗೆ ಪುಸ್ತಕ ಹಣವನ್ನು ಜಮಾಗೊಳಿಸಿ, ತಮ್ಮ ವಿಳಾಸವನ್ನು ಈ ಮೇಲ್ ಮೂಲಕ ಅಥವಾ ಮೊಬೈಲ್ ಮೆಸೇಜ್ ಮೂಲಕ ನೀಡಿದರೆ, ಕೊರಿಯರ್‌ನಲ್ಲಿ ಪುಸ್ತಕವನ್ನು ತಲುಪಿಸಲಾಗುತ್ತದೆ. ಅಂಚೆ ವೆಚ್ಚ ಉಚಿತ.

Leave a Reply