ಮೊದಲ ಮಿಲನ  ನೆನಪಿಸಿಕೊಂಡವು..

 

 

 

ನಾಗರಾಜ ಹರಪನಹಳ್ಳಿ 

 

 

ಮಳೆ ಧ್ಯಾನಿಸುತ್ತಿದೆ
ಗರಿಕೆ ನಗುತ್ತಿದೆ
ಆಕೆ ಎದೆಯಲ್ಲಿ
ತಣ್ಣಗೆ ನಕ್ಕ ನೆ‌ನಪು

ಪಂಜರದ ಪಕ್ಷಿಗಳು
ಬೆಳಗಿಂದ ಸುರಿವ
ಮಳೆ ಕಂಡು
ಮೊದಲ ಮಿಲನ
ನೆನಪಿಸಿಕೊಂಡವು

 

 

 

 

ಮಳೆಗೆ ಮೈಯೊಡ್ಡಿದ
ಮರ
ಬೇಸಿಗೆಯ ಬಿಸಿಲ ನೆನೆಯಿತು
ಕೋಣೆ ಸೇರಿದ್ದ
ಆಕೆ
ಮಳೆ ಬಿಸಿಲು ಚಳಿಯ
ಮೈಥುನಗಳ
ನೆನೆದು
ನಿಟ್ಟುಸಿರಾದಳು

ಸದಾ ಸುಳ್ಳು ಹೇಳುವ
ಮನುಷ್ಯ
ಮಳೆಯಲ್ಲೂ
ಸುಳ್ಳು ಹೇಳಿ ಬಂದ
ಶಬ್ದಗಳು ಹರಿವ
ನೀರಲ್ಲಿ ತೇಲಿದವು

ಬೇಸಿಗೆಯ
ವಿರಹ ಮರೆಯಾಯ್ತು
ಗೋಡೆಗಳ ಮಧ್ಯೆ
ಪಿಸುಮಾತುಗಳು
ಮೊಳಕೆಯೊಡೆದವು

ಮಳೆಗೂ ಮೈಥುನಕ್ಕೂ
ಸಂಬಂಧ ಇದೆ
ವಾದಿಸಿದ ;
ಕನ್ನಡಿಯ ಮುಂದೆ
ನಗ್ನವಾಗಿ ಕುಳಿತು
ನಗುತ್ತಿದ್ದಳು

ಭೂಮಿ ಮಳೆ
ಮಧ್ಯೆ  ಗಾಳಿ ಸುಳಿಯಿತು
ಗಿಡಮರ ಹಕ್ಕಿಗಳು
ಆಡಿಕೊಂಡವು

ಮಳೆ
ಕಡಲು ದಂಡೆ
ಬದಿಯ ಹೋಟೆಲ್
ಟೇಬಲ್ ಮೇಲೆ ವೋಡ್ಕಾ
ಗ್ಲಾಸ್ ನಲ್ಲಿ ನಗುತ್ತಿದೆ
ವಿರಹಿ
ಎದುರು ಕುಳಿತಿದ್ದಾನೆ

ಶಬ್ದಗಳು
ಕರಗುತ್ತಿವೆ
ತಣ್ಣಗೆ ಸುರಿವ ಮಳೆಯಲ್ಲಿ

ಈ ಮಳೆಗಾಲದಲ್ಲಿ
ಕೂಡೋಣ
ಕವಿತೆ ಕಟ್ಟಲು
ಕನಸು ಕಳಿಸಿದ

ಮರಳಿ ಬಂದ ಶಬ್ದ
ಹೇಳಿತು
ಮನುಷ್ಯರ ಮಾತು ನಂಬಲಾಗದು
ಮಳೆಗೆ ಉತ್ತರಿಸುವ
ಮಣ್ಣ ಗರಿಕೆ ನಸು ನಕ್ಕಿತು

2 Responses

  1. ಅಕ್ಕಿಮಂಗಲ ಮಂಜುನಾಥ says:

    ಪದ್ಯ ಚೆನ್ನಾಗಿದೆ .

  2. ರೇಣುಕಾ says:

    ಗಾಢ ನವಿರು ಪದ್ಯ

Leave a Reply

%d bloggers like this: