‘ನನ್ನ ಮನೆಗೆ ಬರುವಾಗ ಫಲಾಶ ತಾ’

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ? ಎನ್ನುವ ಜಿ ಎಸ್ ಶಿವರುದ್ರಪ್ಪನವರ ಸಾಲನ್ನು ನೆನಪಿಸಿಕೊಂಡಾಗೆಲ್ಲ ಹೂವನ್ನೂ, ಪ್ರೀತಿಯನ್ನೂ, ಬದುಕನ್ನೂ ಒಂದೇ ದಾರದಲ್ಲಿ ಪೋಣಿಸಿ ಬಿಗಿದ ಸಂಬಂಧದ ಎಳೆಯೊಂದು ಬೆಸೆದುಕೊಳ್ಳುತ್ತದೆ.

‘ನನ್ನ ಮನೆಗೆ ಬರುವಾಗ ಫಲಾಶ ತಾ’ ಎನ್ನುವ ಎಳೆಯ ಹುಡುಗಿಯೂ ಮತ್ತು ಅಷ್ಟೇ ಮುಗ್ಧತೆಯಿಂದ ತಂದೇ ಬಿಡುವ ಹುಡುಗನನ್ನು ಧೇನಿಸುವುದಾದರೆ ನಾನವನನ್ನೇ ಧೇನಿಸುವುದು. ಮತ್ತು ಅವನ ಬೆರಳಿಗೆ ಸುತ್ತಿ ಹೊಸೆದುಹೋದ ಪ್ರೀತಿಯ ಎಳೆಗಳೂ ಫಲಾಶದ ಕಂಡುಗೆಂಪಿನ ಒಡಲಿಗಿಳಿದು ಕಾಲ ಹೊಸಕಿಹಾಕದಂತೆ ಆಕಾಶದಲ್ಲೇ ಉಳಿದುಬಿಡಲಿ,  ಸಖ್ಯದ ಮಕರಂದ ಮಾತ್ರ ಬದುಕಿನ ಬಟ್ಟಲಲ್ಲಿರಲಿ..” ಹೀಗೆ ಫಲಾಶಕ್ಕೆ ಮರುಳಾಗದ ಮನಸುಗಳೇ ಇಲ್ಲವೇನೋ !

ಶಾಲ್ಮಲಿಯ ಸೆರಗಿನಲ್ಲಿ ಮಗುವಿನಂತಿದ್ದವಳು ಅರಿಯದ ಊರಿಗೆ ಬಂದೆ! ಈ ನೆಲದ ಋಣ ನನ್ನನ್ನು ಕರೆಯಿತೋ ಇಲ್ಲ ಸಂದಾಯವಾಗಬೇಕಾದ ಆಯುಷ್ಯದ  ಋಣ ನನ್ನನು ಎಳೆದು ತಂದಿತೋ ಗೊತ್ತಿಲ್ಲ. ಅಂತೂ ದೆಹಲಿಗೆ ಬಂದೆ.  ಮನೆಯಲ್ಲಿ ನನ್ನ ಅವ್ವ ನೆರೆಹೊರೆಯವರೆಲ್ಲ ಇಂದಿರಮ್ಮನ ಊರಿಗೆ ಹೊರಟಿದ್ದಾಳೆ ಮಗಳೆಂದು ಬಲು ಹೆಮ್ಮೆಯಿಂದ ಹರಸಿ ಕಳಿಸಿದ್ದರು.

ಈ ನೆಲೆದ ಮೇಲೆ ಮೊದಲಬಾರಿಗೆ ಕಾಲೂರಿದಾಗ ನನ್ನ ಭವಿಷ್ಯತ್ತು ವರ್ತಮಾನಗಳ ಯಾವ ಖಬರೂ ಇದ್ದಿಲ್ಲ. ಹಳ್ಳಿಹುಡಿಗೆಯಂತೆ ಹೊಸ ದೆಹಲಿಯ ರೈಲು ನಿಲ್ದಾಣದಲ್ಲಿ ಕಣ್ಣುಕಣ್ಣು ಬಿಟ್ಟಿದ್ದೆ. ಇಷ್ಟು ದೊಡ್ದ ರೇಲ್ವೇ ನಿಲ್ದಾಣವನ್ನು ನಾನು ಅದುವರೆಗೂ ಕಂಡಿರಲಿಲ್ಲ. ಮೀರಜ್, ಪುಣೆ ಸ್ಟೇಶನ್ನುಗಳು ಭಯ ಹುಟ್ಟಿಸಿದ್ದವು. ಗಿಜಿಬಿಜಿ ಜನಜಂಗುಳಿ ನೋಡಿಯೇ ಹೆದರಿದ್ದೆ. ನನ್ನ ಬದುಕು ನನ್ನದು ಎನ್ನುವ ಯಾವ ಮೋಹವೂ ಇರದೇ ಎಲ್ಲಿಗೋ ಹರಿದು  ಓಡುತ್ತಿದೆ…, ಎಲ್ಲಿ ಗದ್ದಲದಲ್ಲಿ ತಪ್ಪಿಸಿಕೊಂಡು ಬಿಡ್ತಿನೋ ಎನ್ನುವ ಆತಂಕ,  ಎಲ್ಲೆಲ್ಲೂ ಕಣ್ಣು ಕೊರೈಸುವ ಝಗಮಗ ಬೀದಿಬದಿಯ ಅಂಗಡಿಗಳು, ಹೆಜ್ಜೆಗಳು ತತ್ತರಿಸುವಂತೆ ಅಡ್ದಡ್ದ ಬರುವ ಗಾಡಿಗಳು, ರಿಕ್ಷಾಗಳು,  ಕತ್ತೆತ್ತಿನೋಡಿದರೆ ಎತ್ತರೆತ್ತರದ ಕಟ್ಟಡಗಳು, ಆದಿ ಯಾವುದು ಅಂತ್ಯವಾವುದು ತಿಳಿವಿಗೇ ಬಾರದ ವಿಶಾಲವಾದ ಬೀದಿಗಳು, ಇನ್ನು ದಾರಿಯೇ ಕಾಣದಂಥ ಮಂಜು ಸುರಿಯುವ ಇರುಳು

ನನಗಿನ್ನೂ ನೆನಪಿದೆ. ಬದುಕೇ ನೀನೆಲ್ಲಿರುವಿ ಎಂದು ಹುಡುಕುವ ನನ್ನ ಕಣ್ಣುಗಳಲ್ಲಿ ಹರಳುಗಟ್ಟದ ನೂರೆಂಟು ಭಾವಗಳು. ಮನುಷ್ಯನ ಬದುಕೇ  ನಿರಂತರ ಹುಡುಕಾಟ. ಗಮ್ಯವೇ ಗೊತ್ತಿರದ  ಪಯಣ.  ಹೊಸ ಲೋಕ , ಹೊಸ ಜನರು, ಹೊಸ ಊರಿನಲ್ಲಿ ಸದಾ  ಬೆರಗು ಮತ್ತು ಏಕಾಂಗಿತನದಲ್ಲಿ ಬಿಟ್ಟುಬಂದ ನೀಲ  ಕಡಲು, ಕೆಂಪುಸೂರ್ಯ ಮತ್ತು ಮಳೆಯ ಹನಿಗಳು ಕಾಡುತ್ತಿದ್ದವು.

ಮಾಘ ಮಾಸದ ಚಳಿಯಲ್ಲಿ ನಾನು ತೊಟ್ಟ ಹಳೆಯ ಸ್ವೆಟರು ಏನೇನೂ ಉಪಯೋಗವಿಲ್ಲದೆ ಗಡಗಡ ನಡುಗುತ್ತ ಆರುನೂರಾ ಹದಿನೈದು ಬಸ್ಸನ್ನು ಅಲ್ಲಿಂದ ಇಲ್ಲಿಗೆ ಕರೆತಂದ ಗಂಡನೊಡನೆ ಹತ್ತಿದ್ದೆ.  ಮಗಳು ಹುಟ್ಟಿದರೆ ಇಂದಿರಾ ಪ್ರಿಯದರ್ಶಿನಿಯಂತೆ ಇರಬೇಕು ಎಂದು ಬಯಸುವ ಬಹಳಷ್ಟು ಅಪ್ಪಂದಿರು ಇಂದಿರಾ ಎಂದು ಹೆಸರಿಡುತ್ತಿದ್ದ ಕಾಲದಲ್ಲಿ ನಮ್ಮ ಅಪ್ಪ ಅವ್ವ ತಮ್ಮ ಹರಕೆಯಂತೆ ಬೇರೆಯದೇ ಹೆಸರಿಟ್ಟಿದ್ದರು. ನಾನಿಲ್ಲಿ ಬರುವಾಗ ’ಇಂದಿರಮ್ಮನ’ ದೇಶಕ್ಕೆ ಹೋಗುತ್ತಿದ್ದಿನೆಂದು ಹರಸಿ ಕಳಿಸಿದ ಮುಖಗಳೆಲ್ಲ ನೆನಪಾಗಿ ಏಕಾಂಗಿ ನಡುಹಗಲಿನಲ್ಲಿ ಕಣ್ಣು ಮಂಜಾಗಿರುತ್ತಿದ್ದವು.

ಧೀಮಂತ ಮಹಿಳೆ , ಉಕ್ಕಿನ ಮಹಿಳೆಯೆಂದು ವಿಶ್ವವೇ ಕೊಂಡಾಡಿದ  ಇಂದಿರಾ ಗಾಂಧಿಯವರ ಹತ್ಯೆಯಾಗಿ ನಾಲ್ಕು ತಿಂಗಳೂ ಕಳೆದಿರಲಿಲ್ಲ. ಮಾಗಿಯ ಕುಸುರು ಚಳಿಯ ಬೆಳಗಿನ ಹಿತವಾದ ಬಿಸಿಲಲ್ಲಿ ಕೂತು ಅಕ್ಕಪಕ್ಕದವರೊಡನೆ ನಿತ್ಯವೂ ಕೇಳುತ್ತಿದ್ದ ಕತೆಗಳೆಲ್ಲ ಹತ್ಯೆಯ ನಂತರದ ಕೊಲೆ ಸುಲಿಗೆಗಳು, ದಂಗೆಗಳು, ಸುಟ್ಟು ಕರಕಲಾಗಿ ಹೋದ ಕೆಂಡಗಳ ಒಡಲಲ್ಲಿ ಇನ್ನು ಧಗಧಗಿಸುವ ಅಸಹನೆಯ ಹೊಗೆ.  ಆರಿದ ಬೂದಿಯಿಂದ ಬಗ್ಗನೇ ಏನಾದರೂ ಹೊತ್ತಿಕೊಂಡೀತೆಂಬ ಆತಂಕ,  ಮೈಯೆಲ್ಲ ಎಚ್ಚರದಿಂದಿರುವ ವಾತಾವರಣ. ಮೊನ್ನೆ ಮೊನ್ನೆತನಕ ನೆರೆಹೊರೆಯವರಾಗಿದ್ದ ಜನರೇ ಒಬ್ಬರನ್ನೊಬ್ಬರು ಕೊಂದು, ಮನೆಯ ಹೆಂಗಸರನ್ನು ಬಲಾತ್ಕರಿಸಿ, ಮನೆಯ ಫ್ಯಾನು, ಚಾರಾಪಾಯಿ, ಟಿವಿಗಳನ್ನೂ ಬಿಡದೇ ಲೂಟಿ ಮಾಡಿದ್ದನ್ನು ಇವರೆಲ್ಲ ಬಣ್ಣಿಸುವಾಗ ಬೆಚ್ಚಿಬಿದ್ದಿದ್ದೆ.

ನನಗಿದೆಲ್ಲ ಹೊಸದು ಮತ್ತು ಭೀಭತ್ಸ. ಇಡೀ ಊರೇ ಮಂಜಿನ ಮುಸುಕಲ್ಲಿ ನಿಗಿನಿಗಿಸುವ ಕೆಂಡಗಳನ್ನು ಅಡಗಿಸಿಟ್ಟುಕೊಂಡಂತೆ ನಿಗೂಢವೆನಿಸುತ್ತಿತ್ತು.  ಆಗಲೂ ಈಗಲೂ ಪರಿಸ್ಥಿತಿ ಎಲ್ಲಾ ಒಂದೇ ರೀತಿಯದೇ ಇದೆ.  ಹತ್ಯೆಗಳು, ಹಲ್ಲೆಗಳು, ಬಾಂಬ್ ಆಸ್ಫೋಟ, ಮಹಿಳೆಯರ ಮೇಲೆ ಅತ್ಯಾಚಾರ, ಮನುಷ್ಯ ಮನುಷ್ಯನನ್ನು ಕೊಲ್ಲುವ ಕಾರಣಗಳು ಘಟಿಸುವ ಘಟನೆಗಳು ಬದಲಾಗಿವೆ ಅಷ್ಟೆ.  ಜನಜೀವನ ಮತ್ತೆ ಏನೂ ಆಗಿಯೇ ಇಲ್ಲವೆಂಬ ಹಾಗೆ ತಣ್ಣಗಿನ ನದಿಯಂತೆ ಹರಿಯುತ್ತಲೇ ಇದೆ.  ಇದೆಲ್ಲದರ ನಡುವೆಯೇ ಮಾಗಿಯ ಬೆಳ್ಳಿ ಬಟ್ಟಲಿನ ಸೂರ್ಯ ಎಳೆ ಮಗುವಿನಂತೆ ಕೈಹಿಡಿದು ನಡೆಯುತ್ತಾನೆ.

ಬೆನ್ನುಹುರಿಯಲ್ಲಿ ಕತ್ತರಿಯಾಡಿಸುವ ಚಳಿಯೂ ಮೆಲ್ಲನೆ ನಕ್ಕು ಬಿಳಿ ಚಾದರಿನ ಮುಸುಕಿನಲ್ಲಿ “ಮಂಜಿನ ತೆರೆಯಾಚೆಗಿದೆ ಒಂದು ಮುಖ ತಲುಪಲಾರೆ ನೀನದನು’ ಎಂದು ಅಣಕಿಸುತ್ತದೆ. ತೆರೆಯಾಚೆಗಿನ ಸದ್ದಿಗೆ ಹೃದಯ ಮಿಡಿತದ ಸದ್ದೂ ಆಲಿಸುತ್ತ ಬದುಕು ಒಂದು ಹದಕ್ಕೆ ಸಾಗುತ್ತಿರುವಾಗಲೇ ನನ್ನ ಕಿವಿಗೆ ಮತ್ತೊಮ್ಮೆ ಈ ಹಾಡು ಗುಂಗುಹಿಡಿಸಿಬಿಟ್ಟಿತು..

ಹಿಂದೆ ಟ್ರಾನ್ಸಿಸ್ಟರಿನ ಹಿಂದಿ ಹಳೇ ಹಾಡುಗಳು, ಗಜಲುಗಳಷ್ಟೇ ನನ್ನ ಮೆಚ್ಚಿನ ಸಂಗಾತಿಗಳಾಗಿರುವ ಕಾಲದಲ್ಲಿ  ಹಾಡನ್ನು ಕೇಳಿದ್ದೆ  ರೇಡಿಯೋದಲ್ಲಿ. “ಜಬ್ ಜಬ್ ಮೇರೆ ಘರ್ ಆನಾ ತುಮ್ ಫೂಲ್ ಫಲಾಶ್ ಕೆ ಲೇ ಆನಾ ತುಮ್..”  ಇದಿಷ್ಟೇ  ನೆನಪಲ್ಲುಳಿದದ್ದು.  ಮುಂದೆ ದೂರದರ್ಶನದಲ್ಲಿ ಒಂದು ಸೀರಿಯಲ್ಲಿಗೆ ಇದೇ ಶೀರ್ಷಿಕೆಯ ಹಾಡಾಗಿತ್ತು.   ನನಗದು ನೆನಪಿಲ್ಲ. ಹಮ್ ಲೋಗ್, ಬುನಿಯಾದ್.. ಇನ್ನೂ ಎಷ್ಟೆಷ್ಟೋ ನೋಡಿದೀನಿ. ಆದರೆ “ಫೂಲ್ ಫಲಾಶ್ ಕೇ ಲೇ ಆನಾ” ಮಾತ್ರ ಸದಾ ಕಿವಿಯಲ್ಲಿ ಅನುರಣಿಸುತ್ತಿರುತ್ತಿತ್ತು.

ನೆಲದಲ್ಲಿಯೇ ನೆದರಿಟ್ಟು ನನ್ನದಲ್ಲದ ನೆಲದಲ್ಲಿ ಯಾವ ಬೇರುಗಳು ಹರಿದು ಬಂದವು  ನನ್ನತನಕ, ಯಾವ ರೆಂಬೆಗಳು ಬಳಸಿ ನಿಂದವು ಆಸರೆ ನೀಡಿ ? ತಿರುಗಿ ನೋಡಿದರೆ ವಾಕ್ಯಗಳಾಗದೇ ನಡುವೆಯೇ ತುಂಡರಿಸಿಹೋದ ಪದಗಳೇ, ಕತ್ತರಿಸಿದ ರುಂಡದಂತೆ ನೆತ್ತರು ಹನಿಸುತ್ತ ನಿಂತಿವೆ.  ಅಪರಿಚಿತವಾದ ನೆಲದಲ್ಲಿ ಅತಂತ್ರವಾದ ಕಾಲುಗಳನ್ನೂರಿ, ಬೆನ್ನು ನೆಟ್ಟಗೇ ಇಟ್ಟು ನಿಂತು ಹೆಜ್ಜೆ ಹಾಕುವಾಗ ಕಾಡುವ  ಪ್ರಶ್ನೆಗಳಲ್ಲಿಯೇ ಮುಳುಗಿದ್ದವಳಿಗೆ ಆಕಾಶ ನೋಡಿದರೆ ಒಂದೇ ಒಂದು ಮಳೆಗರೆವ ಮೋಡ ಕಾಣುತ್ತಿದ್ದಿಲ್ಲ.  ನಾಕು ಹನಿ ಮಳೆ, ಬಿಸಿಲಿನ ತುಂಡು, ಮಿಂಚಿ ಮರೆಯಾಗುವ  ನವಿಲು, ಕಡು ಬಿಸಿಲು, ಮತ್ತು ಕಡುಚಳಿ  ಜೀವರಹಿತ ಆಕಾಶ., ಇದಿಷ್ಟೇ ಲೋಕ… ಶಾಲ್ಮಲೆ ಸತ್ತುಹೋಗಿದ್ದಳು..!

ನಾನು ದೆಹಲಿಯನ್ನು ನೋಡಿದ್ದು , ಮತ್ತು ಈ ಫಲಾಶ ನನ್ನನ್ನು ತಡೆದು ನಿಲ್ಲಿಸಿದ್ದು, ಇಲ್ಲಿನ  ಗಿಡ ಮರಗಳನ್ನು , ಆಕಾಶವನ್ನೂ ಬೆರಗುಗಣ್ಣಿನಿಂದ ನೋಡಲು ತೊಡಗಿದ್ದೇ ನಾನು ಮನೆಯೆಂಬ ನಾಲ್ಕು ಗೋಡೆಗಳಿಂದ ಹೊರಗಡೆ ಬಂದಾಗ. ಕಂಡೇ ಇರದ  ಅಮಲ್ತಾಸ್ ಇಲ್ಲಿ ಮನಕದ್ದಿತು.  ಫಲಾಶದ ಮರವೆಂಬುದು ವರ್ಷಪೂರ್ತಿ ಅವಿತು ಕುಳಿತಿದ್ದು ಕಟು ಚಳಿಗಾಲ ಮುಗಿದು ವಸಂತ ಇನ್ನೇನು ಕಾಲಿಡುವ ಹೊತ್ತಿಗೆ ಇಡೀ ದೆಹಲಿಯ ತುಂಬ ನಿಗಿ ನಿಗಿ ಕೆಂಡದಂತಹ ಕೆಂಪು, ಕಡುಗೆಂಪಿನ ಫಲಾಶ ಅರಳಿ ಇಡೀ ಊರೇ ಒಂಥರಾ ಸಿಂಗಾರಗೊಂಡಂತೆ ತೋರುತ್ತಿತ್ತು.

ಒಂದೇ ಒಂದು ಎಲೆಯೂ ಕಾಣದಂತೆ ಮರದಲ್ಲಿ ಬರೀ ಬೊಗಸೆಯಗಲದ ರಕ್ತವರ್ಣದ ಹೂಗಳು ಶರತ್ ಕಾಲ ಮುಗಿಯಿತು ಬಾ ವಸಂತ ಬಾ ವಸಂತ ಎಂದು ಕರೆಯುತ್ತಿರುವಂತೆ ಅರಳಿರುತ್ತಿದ್ದವು.  ಆವಾಗಲೇ ಅದು ಫಲಾಶದ ಮರ ಎಂದು ಗೊತ್ತಾಗುತ್ತಿತ್ತು. ಆ ಮರವನ್ನು  ನೆನಪಿಟ್ಟುಕೊಂಡು ವರ್ಷವಿಡಿ ಗಮನಿಸಿದರೂ ಅದು ಸ್ಥಿತಪ್ರಜ್ಞನಂತೆ ಮೌನವಾಗಿ ತನಗೂ ಈಗಿನ ಜಗತ್ತಿಗೂ ಸಂಬಂಧವಿಲ್ಲ  ಎನ್ನುವಂತೆ ಧ್ಯಾನಸ್ಥವಾಗಿ ನಿಂತಿರುತ್ತಿತ್ತು. ಅದರ ಕೊಂಬೆಗಳೆಲ್ಲ  ಆಕಾಶಕ್ಕೆ ಕೈಚಾಚಿ  ಎತ್ತಿಕೋ ನನ್ನನ್ನು ಎನ್ನುವ  ಮಗುವಂತೆ ಕಾಣಿಸುತ್ತಿದ್ದವು. ನನ್ನನ್ನೂ ಎತ್ತಿಕೊಳ್ಳಲಿ ಎಂದು ಕಾತರಿಸುವ ಮಗು ನನ್ನೊಳಗೂ !

ಕವಿ ಕಾಳಿದಾಸ ತನ್ನ ‘ಋತುಸಂಹಾರ’ದಲ್ಲಿ ನಿಗಿನಿಗಿಸುವ ಕೆಂಡದಂತೆ ಅರಳಿದ ಅಚ್ಚ ಕೆಂಪುವರ್ಣದ ಹೂಗಳ ಫಲಾಶ ವನ ಕೆಂಪು ವಸ್ತ್ರಗಳಿಂದ ಅಲಂಕರಿಸಿಕೊಂಡ ನವವಧುವಿನಂತೆ ಕಂಗೊಳಿಸುತ್ತಿದ್ದಾಳೆಂದು ವರ್ಣಿಸಿದ್ದಾನಂತೆ. ಹಾಗೇ ಉರ್ದು ಕವಿ ಅಮೀರ್ ಖುಸ್ರೋಗೂ ಕಾಡಿದ ಮರ.  “ಗೀತ ಗೋವಿಂದ” ದಲ್ಲಿ ಜಯದೇವನು ಕಡುಗೆಂಪು ಫಲಾಶದ ದಳಗಳನ್ನು ಕುರಿತು –  ‘ಕಾಮದೇವನ ಕೆಂಪು ನಖಗಳು ಪ್ರೇಮಿಗಳ ಎದೆಯನ್ನು ಗಾಯಗೊಳಿಸುತ್ತವೆ’ ಎನ್ನುತ್ತಾನೆ.   ಚೈತ್ರದ ಆಗಮನವೂ ಪ್ರೇಮದ ದ್ಯೋತಕವೂ ಆಗಿ ಫಲಾಶ ಎಲ್ಲರಿಗೂ ಇಷ್ಟ.  ಎರಡೂ ಮೇಳೈಸಿದಾಗ ಬದುಕು ಸಹ್ಯವೇ !.

ಮೇರೆ ಖಯಾಲ್ ಹೈ ಯೆಹ್ , ಹಕೀಕತ್ ಸೀ ಹೋ ಜಾನಾ ತುಮ್,

ಮೇರಿ ಬಾಹೋಂ ಮೇ ಆಕರ್ ಸೋ ಜಾನಾ ತುಮ್

ಅಪನೀ ಖುಶ್ಬೂ ಸೇ ಮೇರೆ ಘರ್ ಕೋ ಮೆಹಕಾನಾ ತುಮ್

ಫೂಲ್ ಫಲಾಶ ಕೇ ಚುನ್ ಲಾನಾ ತುಮ್ !

“ ಇದು ಕನಸಾಗಿಯೇ ಉಳಿಯದಿರಲಿ ನನಸಾಗಿಬಿಡು,  ನನಗನಿಸುತ್ತದೆ ನೀನು ನಿಜವಾಗಿಬಿಡು, ನನ್ನ ಆಲಿಂಗನದಲಿ ಮಲಗಿಬಿಡು, ನಿನ್ನ ಪರಿಮಳದಿಂದ ನನ್ನ ಮನೆಯನ್ನೂ ಪರಿಮಳಿಸು , ಫಲಾಶದ ಹೂವನ್ನು ಆರಿಸಿ ತಾ ನೀನು –  ನನ್ನ ಮನೆಗೆ ಬರುವಾಗೆಲ್ಲ  ಫಲಾಶದ ಹೂವನ್ನು ತಾ ನಲ್ಲ,  !  ಎಂದು ನಲ್ಲನಿಗೆ ಕೋರುವ ಅವಳು ತಮ್ಮಿಬ್ಬರ  ಪ್ರೇಮದ ಉತ್ಕಟತೆಯನ್ನು ಫಲಾಶಕ್ಕೆ ಹೋಲಿಸುತ್ತಾಳೆ. ಕಡು ಪ್ರೇಮದ ಬಣ್ಣ ಫಲಾಶ.   ಸದಾ ಜ್ವಲಿಸುತ್ತ ಎದೆಯಲ್ಲಿ ನಿಗಿನಿಗಿಯಾಗಿ ದಹಿಸುವುದೂ ಪ್ರೀತಿಯೇ. ಬದುಕು ದೀಪವಾಗಿ ಉರಿಯುವುದೂ ಪ್ರೀತಿಯೆಂಬ ಕಿಡಿ ಹೊತ್ತಿದಾಗಲೇ. ಪರಿಮಳವೇ ಇರದ ಈ ಫಲಾಶ ಪರಿಮಳಿಸುತ್ತದೆ ಪ್ರೇಮಿಗಳ ಹೃದಯಗಳಲ್ಲಿ.

ಇನ್ನು, ನಿನಗೆ ನೀನೇ ಗೆಳೆಯ ಎನ್ನುವಂತೆ ತನ್ನ ಪಾಡಿಗೆ ತಾನು ಆಕಾಶದೆತ್ತರಕ್ಕೆ ರೆಕ್ಕೆ ಹರಡಿಕೊಂಡು ನಿಂತ  ಫಲಾಶವನ್ನು ಕಂಡಾಗ ಅನಿಸುವುದು –   ಯಾವ ಋತುವೂ ಶಾಶ್ವತವಲ್ಲ, ಯಾವ ನೋವೂ ಶಾಶ್ವತವಲ್ಲ ಈ ಲೋಕದಲ್ಲಿ.  ಎದೆಯಲ್ಲಿ ಕಾವು ಕೂತ ಪ್ರೀತಿ- ಪ್ರೇಮ, ಮೋಹ , ಎಲ್ಲವೂ ಒಂದಾಯುಷ್ಯದ ಚಾದರಿನಲ್ಲಿಯೇ ಸುತ್ತಿಕೊಂಡಿರುತ್ತದೆ.  ವರ್ಷಕ್ಕೊಮ್ಮೆ ಅರಳುವ ಫಲಾಶ ಅಲ್ಪಾಯುಷಿ.  ಅರಳುವ ಆಯುಷ್ಯ ಕಳೆದು ನೆಲಕ್ಕುದುರಿದಾಗಲೂ ಅಷ್ಟೇ ನಿರ್ಲಿಪ್ತತೆಯಿಂದ  ಹಾದಿಬೀದಿಗಳೆಲ್ಲ ಕೆಂಪು ಪಕಳೆಗಳು ಕೆಂಪು ಕಾರ್ಪೆಟ್ ಹಾಸಿನಂತೆ ಹರಡಿ ಬದುಕೇ ಅಳಿದುಹೋಗುವ ದುಃಖವೇಕೆ  ಇರುವಷ್ಟು ಹೊತ್ತು ಇನ್ನಿಲ್ಲದಂತೆ ಪ್ರೇಮಿಸು ಎನ್ನುತ್ತಿರುತ್ತದೆ…

8 Responses

 1. ಅರಿಯದ ಲೋಕದ ಸೂಕ್ಷ್ಮ ಅವಲೋಕನ. ಅರಿಯದ ಫಲಾಶದ ಘಮ ನಮಗೂ ತಲುಪಿತು. ಚಂದವಾದ ಬರಹ. ಮುನ್ನಡೆಯಲಿ ಮೇಡಂ

 2. Bharathi B v says:

  ವಾಹ್ ರೇಣು ತುಂಬ ಚೆನ್ನಾಗಿದೆ …

 3. Hemalatha says:

  ರೇಣುಕಾ ಬ್ಯೂಟಿಫುಲ್‌

 4. K. Nalla Thambi says:

  Wonderful. When some one is sharing their memory, it also brings out the memories of the listner.

 5. umesh desai says:

  very good. started reading avadhi because of Your article . well what is PHALAASH…? can u put a photo also curious about the ghazal mentioned inthe article.

 6. ಅಕ್ಕಿಮಂಗಲ ಮಂಜುನಾಥ says:

  ಲೇಖನ ತುಂಬಾ ಚೆನ್ನಾಗಿದೆ.

 7. ಜಯಲಕ್ಷ್ಮೀ ಪಾಟೀಲ್ says:

  ಘಮಿಸಲಿ ಫಲಾಶ ಪಯಣ ರೇಣು. ಚೆನ್ನಾಗಿದೆ ಶುರುವಾತ್.

Leave a Reply

%d bloggers like this: