ಭಾರತಿಯ ‘ಭಾರತೀಯ ಹೃದಯ’ ಒಡೆದು ಹೋಗಲಿಲ್ಲ ಸಧ್ಯ!

ಕಾಫಿ ಕುಡಿದ ನಂತರ ಆ್ಯಂಗ್ರಿ ಯಂಗ್ ಮ್ಯಾನ್ ಆದ ಯೂಸುಫ್ ಸ್ವಲ್ಪ ಸಮಾಧಾನ ಹೊಂದಿದ್ದ.

ದಾರಿಯಲ್ಲಿ ಕಾಣುವ ಎಲ್ಲದರ ಬಗ್ಗೆ ಮೆಲುದನಿಯಲ್ಲಿ ವಿವರ ಕೊಡುತ್ತಾ ಹೋದಾಗ ಮೊದಲಿದ್ದ ಸಿಟ್ಟು ಮಾಯವಾಗಿತ್ತು. ಹಸನ್ಮುಖನಾಗಿ ದಾರಿಯಲ್ಲಿ ಸಿಕ್ಕ ಫ್ಯಾಕ್ಟರಿಯೊಂದರ ಮುಂದಿದ್ದ ಬಿಳಿಯ ಗುಡ್ಡಗಳನ್ನು ತೋರಿಸಿ ಅದು ಫಾಸ್ಫೇಟ್ ಎಂದ. ಭಾರತವೂ ಸೇರಿದಂತೆ ಅನೇಕ ದೇಶಗಳಿಗೆ ಅದನ್ನು ರಫ್ತು ಮಾಡುತ್ತಾರೆಂದ. ಜೊಂಪೆಜೊಂಪೆಯಿದ್ದ ಖರ್ಜೂರದ ಮರ ತೋರಿಸಿ, ದೊಡ್ಡ ಗಾತ್ರಕ್ಕೆ ಬೆಳೆಯಲೆಂದು ಹಣ್ಣುಗಳ ನಡುನಡುವೆ ಇರುವ ಕೆಲವು ಹಣ್ಣುಗಳನ್ನು ಕಿತ್ತು ಹಾಕುತ್ತಾರೆ ಎಂದ.

ನಾನು ಹೊಟ್ಟೆ ಉರಿದುಕೊಳ್ಳುತ್ತಾ ‘ಅಯ್ಯೋ ಅನ್ಯಾಯ ಅಲ್ಲವಾ ಇದು. ಹಣ್ಣುಗಳನ್ನು ಯಾಕೆ ಕಿತ್ತು ಹಾಕ್ತಾರೆ’ ಅಂದಾಗ ‘ಹಾಗೆ ಮಾಡದಿದ್ದರೆ ಪಕ್ಕದ ಹಣ್ಣುಗಳು ಬೆಳೆಯಲು ಜಾಗವೇ ಇರುವುದಿಲ್ಲವಾದ್ದರಿಂದ ಇದು ಅನಿವಾರ್ಯ’ ಎಂದ. ಇದ್ಯಾಕೋ ಮನುಷ್ಯರ ಮನಸ್ಥಿತಿಯನ್ನೇ ಹೋಲುತ್ತದಲ್ಲವಾ ಅನ್ನಿಸಿತು! ನಾನು ಬೆಳೆಯಬೇಕೆಂದಿದ್ದರೆ ಪಕ್ಕದವರನ್ನು ಬೆಳೆಯಗೊಡದಂತೆ ಮಾಡಿ …. ಇದೂ ಒಂದು ರೀತಿಯ ಕ್ರೌರ್ಯವೇ ಅಲ್ಲವಾ ಅನ್ನಿಸಿತು.

ಇದ್ದಕ್ಕಿದ್ದಂತೆ ನೆನಪಾಗಿ ‘ನಿನಗೆ ಮದುವೆಯಾಗಿದೆಯಾ’ ಎಂದೆ ಯೂಸುಫ್‌‌ಗೆ. ‘ಮುಂದಿನ ತಿಂಗಳು … ನಾಲ್ಕನೆಯ ಮದುವೆ’ ಅಂದ. ನಾನು ಕಣ್ಣುಕಣ್ಣು ಬಿಡುತ್ತಾ ‘ನಾಲ್ಕು ಹೆಂಡತಿಯರಾ ನಿನಗೆ?!’ ಅಂದೆ. ‘ಅಯ್ಯೋ ಇಲ್ಲಪ್ಪ, ನಾಲ್ಕು ನಾಲ್ಕು ತಲೆನೋವು ಯಾರು ಕಟ್ಟಿಕೊಳ್ಳುತ್ತಾರೆ … ನನಗೆ ಬುದ್ಧಿಯಿಲ್ಲವಾ’ ಅಂತ ‘ಜೋಕ್’ ಮಾಡಿದ.

ಇಂಥ ಜೋಕುಗಳನ್ನು ಕಂಡರೆ ನಗುವೇ ಬಾರದ ನಾನು, ಕೆಟ್ಟಮುಖ ಮಾಡಿಕೊಂಡು ‘ಎಷ್ಟು ಮದುವೆ ಮಾಡಿಕೊಳ್ಳಬಹುದು’ ಅಂದೆ. ಆಗ ತಾನೇ ಅದನ್ನು ತಲೆನೋವು ಅಂದಿದ್ದವನು ಅದನ್ನು ಮರೆತವನಂತೆ ‘ನಾಲ್ಕು’ ಅಂತ ಖುಷಿಯಿಂದ ಹೇಳಿದ. ಅಲ್ಲಿಂದ ಸುಮಾರು ಹೊತ್ತು ನನ್ನ ಫೇವರೆಟ್ ವಿಷಯವಾದ ಜೋರ್ಡಾನಿನ ಹೆಂಗಸರ ಸ್ಥಿತಿ-ಗತಿ ಬಗ್ಗೆ ಪ್ರಶ್ನೆ ಹಾಕುತ್ತಲೇ ಇದ್ದೆ. ಜೋರ್ಡಾನಿನಲ್ಲಿ ವಿದ್ಯಾವಂತ ಹೆಂಗಸರ ಸಂಖ್ಯೆ ಗಂಡಸರದಕ್ಕಿಂತ ಹೆಚ್ಚಿನದ್ದಾದರೂ, ಹೆಂಗಸರು ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಂತೆ. ‘ಗಂಡಸೊಬ್ಬನಿಗೆ ಕೆಲಸದ ಅಗತ್ಯ ಹೆಂಗಸಿಗಿಂತ ಹೆಚ್ಚಲ್ಲವಾ. ಹೆಂಗಸು ಮನೆಯಲ್ಲಿರಬಹುದು, ಗಂಡಸು ಮನೆಯಲ್ಲಿರಲು ಸಾಧ್ಯವಾ’ ಅಂದ ಯೂಸುಫ್. ಅವನು ಅಮೆರಿಕೆಯಲ್ಲಿ ಇದ್ದುಬಂದವನಾದರೂ ದೃಷ್ಟಿಕೋನದಲ್ಲಿ ಅಂಥಾ ಅದ್ಭುತ ಪ್ರಗತಿಯನ್ನೇನೂ ನಾನು ಕಾಣಲಿಲ್ಲ. ಅಪರೂಪಕ್ಕೆ ನಾನೂ ವಾದ ಮಾಡದೇ ಸುಮ್ಮನಾದೆ!

ಆತ ಮುಂದಿನ ಕೆಲವು ವಿಷಯಗಳನ್ನು ಹೇಳಿದ್ದು ಕೇಳಿದ ನಂತರ ಕೆಲಸದ ಬಗ್ಗೆ ಆಡಿದ ಮಾತು ತುಂಬ ಕ್ಷುಲ್ಲಕ ಅನ್ನಿಸಿಬಿಟ್ಟಿತು …

ಹೆಣ್ಣೊಬ್ಬಳು ‘ಶೀಲ ಕಳೆದುಕೊಂಡರೆ’ ಆಕೆಯ ಸಂಬಂಧಿ ಅವಳನ್ನು ಕೊಲೆ ಮಾಡಿದರೂ ಕೋರ್ಟಿನಲ್ಲಿ ಆ ಕೇಸು ನಿಲ್ಲುವುದಿಲ್ಲವಂತೆ

ಹೆಂಗಸರು ದೇಶ ಬಿಟ್ಟು ಹೊರ ಹೋಗಬೇಕಾದರೆ ಗಂಡನ ಲಿಖಿತ ಅನುಮತಿ ತೆಗೆದುಕೊಳ್ಳಲೇಬೇಕಂತೆ

ಡೈವೋರ್ಸ್ ತೆಗೆದುಕೊಂಡರೆ ಮಕ್ಕಳ ಕಸ್ಟಡಿ ಅಪ್ಪನಿಗೆ ಸೇರುವುದರಿಂದ ಇಲ್ಲಿನ ಹೆಂಗಸರು ಡೈವೋರ್ಸ್‌ಗೆ ಅಪ್ಲೈ ಮಾಡಲು ಹಿಂಜರಿಯುತ್ತಾರಂತೆ

ಇದೆಲ್ಲ ಕೇಳುವಾಗ ‘ಯಾವುದೇ ದೇಶದ, ಜಾತಿಯ, ಧರ್ಮದ ಜನರನ್ನೇ ತೆಗೆದುಕೊಂಡರೂ,  ತನಗಿಂತ ಬಲಿಷ್ಠರಿಂದ ಶೋಷಿತವಾಗುವ ಸುಮಾರು ಗಂಡಸರು, ತನ್ನದೇ ಮನೆಯ ಹೆಂಗಸನ್ನು ಸಮಾನವಾಗಿ ಕಾಣದೇ, ಶೋಷಿಸುವುದಕ್ಕೆ ಹಾತೊರೆಯುತ್ತಾನೆ’ ಎಂದು ಓದಿದ ಮಾತು ನೆನಪಾಯಿತು. ಆಗ ನನ್ನ ಗಂಡ ಇರಲಾರದೇ ಇರುವೆ ಬಿಟ್ಟುಕೊಂಡವನಂತೆ ‘ಅರಾಫತ್ ಒಳ್ಳೆಯ ಲೀಡರ್ …. ಜೋರ್ಡಾನಿನ ಜೊತೆ ಪ್ಯಾಲೆಸ್ಟೈನಿನದ್ದು ಒಳ್ಳೆಯ ಸಂಬಂಧವಿತ್ತು. ಆದರೆ ಇಲ್ಲೆಲ್ಲೂ ಅವರ ಮೂರ್ತಿ ಕಾಣಲಿಲ್ಲವಲ್ಲ, ಕಾರಣವೇನು’ ಅಂದ.

ಯೂಸುಫ್ ಅಡ್ಡಡ್ಡಲಾಗಿ, ಬಿರುಸಾಗಿ ತಲೆ ಆಡಿಸುತ್ತಾ ‘ಏನಂದಿರಿ! ಅರಾಫತ್ ಆ?! ಒಳ್ಳೆಯವರಾ!! ಎಂತ ಒಳ್ಳೆಯದು ಮಾಡಿದ್ದು ಅವರು ಮಣ್ಣಾಂಗಟ್ಟಿ? ಇಸ್ರೇಲಿನಲ್ಲಿ ಕಾನೂನುಬಾಹಿರವಾಗಿದ್ದ ಕ್ಯಾಸಿನೋಗಳನ್ನು ಬಾರ್ಡರಿನಲ್ಲಿ ನಡೆಸಲು ಅನುಕೂಲ ಮಾಡಿಕೊಟ್ಟು, ಇಸ್ರೇಲಿಗಳನ್ನು ದೇಶದೊಳಕ್ಕೆ ಬಿಟ್ಟುಕೊಂಡು ಲಾಭ ಮಾಡಿಕೊಂಡಿದ್ದಷ್ಟೇ ಆತನ ಸಾಧನೆ. ಅವ ನೆಟ್ಟಗಿದ್ದಿದ್ದರೆ ಫ್ಯಾಲೆಸ್ಟೈನ್ ಯಾವತ್ತೋ ಉದ್ದಾರವಾಗಿರುತ್ತಿತ್ತು’ ಅಂತ ಬಯ್ಯಲು ಶುರುವಿಟ್ಟುಕೊಂಡ. ನಾವು ಎಲ್ಲೋ ಎತ್ತರದ ಸ್ಥಾನದಲ್ಲಿರಿಸಿ ನೋಡುವವರನ್ನು ಸ್ಥಳೀಯರು ಈ ರೀತಿ ನೆಲಕ್ಕಿಳಿಸಿಬಿಟ್ಟಾಗ ಏನು ಹೇಳಬೇಕೆಂದೇ ತೋಚಲಿಲ್ಲ. ಆದರೆ … ಆದರೆ ಮನುಷ್ಯನ ಸಣ್ಣತನ, ದೊಡ್ಡತನ ತೀರಾ ಹತ್ತಿರದಲ್ಲಿ ಇರುವವರಿಗೇ ತಾನೇ ಗೊತ್ತಾಗುವುದು!

ಹೀಗೆ ಮಾತಾಡುತ್ತಲೇ ಇರುವಾಗಲೇ ಅದ್ಯಾವ ಮಾಯದಲ್ಲಿ ಜೊಂಪು ಆವರಿಸಿತೋ ಗೊತ್ತೇ ಆಗಲಿಲ್ಲ.

ನಿದ್ರೆಗಣ್ಣಿನ ಅಮಲಿನಲ್ಲೆಲ್ಲೋ ಯೂಸುಫ್ ‘ಪೆಟ್ರಾ ಬಂತು’ ಎಂದು ಘೋಷಿಸಿದ್ದು ಕೇಳಿಸಿತು! ಕಣ್ಣನ್ನು ಬಲವಂತವಾಗಿ ಬಿಡಿಸಿ ನೋಡಿದರೆ ಮರುಭೂಮಿಯ ಹಾದಿ ಮುಗಿದು ನಾವು ಅತ್ಯಾಧುನಿಕ ನಗರವೊಂದರ ಹಾದಿಬೀದಿಗಳಲ್ಲಿ ಸಾಗುತ್ತಿದ್ದೆವು. ಪೆಟ್ರಾ ಅನ್ನುವ ಕಲ್ಲಿನ ಊರನ್ನು ನಿರೀಕ್ಷಿಸುತ್ತಿದ್ದಾಗ ಇದೆಲ್ಲಿಂದ ಬಂದಿತು ಈ ಊರು ಅಂತ ಆಶ್ಚರ್ಯ ಪಡುವುದರಲ್ಲೇ ‘ಇದು ವಾಡಿ ಮೂಸಾ. ಪೆಟ್ರಾಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿಯೇ ಈ ನಗರ ಇಷ್ಟು ಬೃಹತ್ತಾಗಿ ಬೆಳೆದಿದೆ. ಹೋಟೆಲ್, ಕ್ಯಾಬ್ ಸರ್ವೀಸ್, ಗೈಡ್ ಸರ್ವೀಸ್, ಟೆಂಟ್‌ಗಳಲ್ಲಿ ಉಳಿದುಕೊಳ್ಳುವ ಉದ್ಯಮ ಹೀಗೆ ಹತ್ತು ಹಲವಾರು ವ್ಯವಹಾರಗಳು ಈ ಊರಿನಲ್ಲಿ’ ಎಂದ ನಮ್ಮ ಸಾರಥಿ.

ಊರು ಅತ್ಯಾಧುನಿಕವಾಗಿತ್ತು. ವಾಡಿ ಮೂಸಾ ಎಂದರೆ ಮೂಸಾನ ಕಣಿವೆ ಎಂದರ್ಥವಂತೆ … ಮೋಸೆಸ್ ಇದೇ ಜಾಗದಲ್ಲಿಯೇ ಕಲ್ಲಿನಿಂದ ನೀರನ್ನು ತರಿಸಿದನಂತೆ … ಹೀಗೆ ಯೂಸುಫ್ ಪುರಾಣ, ಆಧುನಿಕ ಜಗತ್ತು, ಚರಿತ್ರೆ ಎಲ್ಲವನ್ನೂ ಕಲಸುಮೇಲೋಗರ ಮಾಡಿ ಹೇಳುತ್ತಿದ್ದ … ಅದರೆಡೆ ಕಿವಿ ಹರಿಯಬಿಟ್ಟು ಊರು ನೋಡುತ್ತಾ ಕುಳಿತೆ …

ಸಮಯ ಆಗಿನ್ನೂ ಹತ್ತೂಕಾಲು!

ಹೊರಟು ಮೂರೂಕಾಲು ಘಂಟೆಯಾಗಿತ್ತು ಅಷ್ಟೇ. ಬೆಂಗಳೂರಿನಿಂದ ಮೈಸೂರಿನ 140 ಕಿಲೋಮೀಟರ್‌ಗೆ ಮೂರೂವರೆ ಘಂಟೆ ತೆಗೆದುಕೊಳ್ಳುವ, ಬೆಂಗಳೂರಿನಿಂದ ಹಾಸನದ 180 ಕಿಲೋಮೀಟರ್ ದೂರವನ್ನು ಮೂರೂವರೆ ಘಂಟೆಯಲ್ಲಿ ತಲುಪುತ್ತೇವೆಂದು ಹೆಮ್ಮೆ (?!) ಪಡುವ ನಮಗೆ 240 ಕಿಲೋಮೀಟರ್‌ಗಳ ಅಂತರವನ್ನು ಮೂರೂಕಾಲು ಘಂಟೆಯಲ್ಲಿ ಕ್ರಮಿಸಿದ್ದು ಅದ್ಭುತವೆನ್ನಿಸಿತ್ತು.

ಅಷ್ಟು ಪ್ರಯಾಣ ಮಾಡಿದ್ದರೂ ವಿಮಾನ ಪ್ರಯಾಣದ ಹಾಗೆ ಕುಡಿದ ನೀರು ಅಲುಗಾಡಿರಲಿಲ್ಲ. ಯೂಸುಫ್ ನಮಗೆ ಎಂಟ್ರಿ ಟಿಕೆಟ್ ಕೊಡಿಸಿ ಹೊರಡುವುದಾಗಿಯೂ, ನೋಡಿದ್ದು ಮುಗಿದ ನಂತರ ಅಲ್ಲೇ ಇರುವ ಯಾವುದಾದರೂ ಅಂಗಡಿಯವರ ಹತ್ತಿರ ಫೋನ್ ಮಾಡಿಸಿದರೆ ಬಂದು ಪಿಕ್ ಮಾಡುತ್ತೇನೆ ಎಂದೂ ಹೇಳಿದ. ಪೆಟ್ರಾದ ಅಗಾಧತೆ ತಿಳಿದಿಲ್ಲದ ನಾವು ‘ಒಂದು ಕೆಲಸ ಮಾಡ್ತೀವಿ. ಅರ್ಧ ನೋಡಿ ಹೊರಬಂದು ನಂತರ ಊಟ ಮುಗಿಸಿ ಮತ್ತೆ ಒಳಹೋಗಿ ಸಂಜೆ ದೀಪ ಹಚ್ಚಿಸುತ್ತಾರಲ್ಲ, ಅದನ್ನೂ ನೋಡಿ ನಂತರ ಬರುತ್ತೇವೆ’ ಅಂತ ಹೇಳಿದಾಗ ಅವನು ಜೋರಾಗಿ ನಗುತ್ತಾ ‘ಇವತ್ತು ದೀಪ ಹತ್ತಿಸುವ ದಿನವೂ ಅಲ್ಲ. ವಾರಕ್ಕೆ ಮೂರು ದಿನ ಮಾತ್ರ ಅದು ಬೆಳಗಿಸುವುದು. ಜೊತೆಗೆ ಪೆಟ್ರಾ ಎಂದರೆ ಏನೆಂದು ತಿಳಿದಿದ್ದೀರಿ?! ಅದು ಎಷ್ಟು ಅಗಾಧವಾಗಿದೆ ಅನ್ನುವುದು ನಿಮಗೆ ಕಲ್ಪನೆಯಿಲ್ಲ. ಹಾಗಾಗಿ ಈ ಮಾತಾಡುತ್ತಿದ್ದೀರಿ. ಊಟಕ್ಕೆ ಹೊರಬರುವುದು ಆಗದ ಮಾತು. ನೀವು ಎಲ್ಲ ಮುಗಿಸಿ ಬಂದ ನಂತರವೇ ಊಟ’ ಎಂದು ಖಡಾಖಂಡಿತವಾಗಿ ಹೇಳಿದವನೇ ಟಿಕೆಟ್ ಮತ್ತು ಗೈಡ್ ವ್ಯವಸ್ಥೆ ಮಾಡಿ ಬರಲು ಹೊರಟುಬಿಟ್ಟ.

ನಮ್ಮ ಗೈಡ್ ಮಹಾಶಯ ಮಹಮ್ಮದ್

ಕಾಯುತ್ತ ನಿಂತ ನಾವು ಮುಗ್ಧಮಾನವರು ‘ಅವನು ಏನಾದರೂ ಹೇಳಿಕೊಳ್ಳಲಿ. ಒಳಗೆ ಹೋದ ನಂತರ ಏನಾದರೂ ಮಾಡಿ ಅಲ್ಲೇ ಏನಾದರೂ ಚೂರು ತಿಂದು, ಸಂಜೆ ಲೈಟಿಂಗ್ ನೋಡಿಯೇ ಬರುವಾ. ಅವನಿಗೆ ನಾವು ಬೇಗ ಮುಗಿಸಿ ಬರಲಿ ಅಂತಲೇ ಇರುತ್ತದೆ. ಹಾಗಾಗಿ ಮಿಸ್‌ಗೈಡ್ ಮಾಡುತ್ತಿದ್ದಾನೆ’ ಅಂತ ಮಾತಾಡಿಕೊಂಡೆವು. ಅಷ್ಟರಲ್ಲಿ ಮಹಮ್ಮದ್ ಎನ್ನುವ ಗೈಡಿನ ಜೊತೆ ಬಂದ ಯೂಸುಫ್ ನಮ್ಮನ್ನು ಅವನಿಗೆ ಗಂಟು ಹಾಕಿ ‘ನನ್ನ ಫ್ರೆಂಡ್ ಮನೆಯಲ್ಲಿ ಮಲಗಿದ್ದು ಸಂಜೆ ಬರ್ತೀನಿ’ ಎಂದು ಹೇಳಿ ಫೋನ್ ನಂಬರ್ ಕೊಟ್ಟು ಹೊರಟುಬಿಟ್ಟ. ದಾರಿಯಲ್ಲಿ ಬರುವಾಗಲೇ ‘ಮುಂದಿನ ತಿಂಗಳು ನಾಲ್ಕನೆಯ ಮದುವೆ’ ಎಂದು ಹೇಳಿದ್ದರಿಂದ ಅವಳ ಮನೆ ಇಲ್ಲಿಯೇ ಇರಬೇಕು, ಸುಮ್ಮನೇ ಫ್ರೆಂಡ್ ಅನ್ನುತ್ತಿದ್ದಾನೆ ಅಂತ ಫೇಸ್‌ಬುಕ್ ರೀತಿಯ ಗಾಸಿಪ್ ಮಾಡಿಕೊಂಡೆವು!

ಪೆಟ್ರಾ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ಎಂದು ವರ್ಲ್ಡ್ ಹೆರಿಟೇಜ್ ಸಂಸ್ಥೆಯಿಂದ ಘೋಷಿತವಾದ ಸ್ಠಳ.  ಹಾಗಾಗಿ ಪ್ರವೇಶ ದರ ಅತೀವ ತುಟ್ಟಿ. ಒಂದು ದಿನದ ಟಿಕೆಟ್‌ಗೆ 50, ಎರಡು ದಿನಕ್ಕೆ 55, ಮೂರು ದಿನಕ್ಕೆ 60 ಜೋರ್ಡಾನಿನ ದಿನಾರುಗಳು ಅಂದರೆ ಕ್ರಮವಾಗಿ 70, 78 ಮತ್ತು 85 ಡಾಲರುಗಳು!! ಇಡೀ ಪೆಟ್ರಾಗೆ ಹೋಗಿ ಬರುವ ಒಂದು ದಿನದ ಪ್ಯಾಕೇಜ್ ಖರ್ಚು 160 ಡಾಲರ್‌ನಲ್ಲಿ 70 ಡಾಲರ್ ಪ್ರವೇಶದರಕ್ಕೇ ಆಗಿಹೋಗುತ್ತದೆ. ಇನ್ನುಳಿದ 90 ಡಾಲರ್ ಊಟ, ಗೈಡ್, ಮತ್ತು ಪ್ರಯಾಣದ ಖರ್ಚಿಗೆ. 160 ಡಾಲರ್ ಅಂದಾಗ ‘ಅಷ್ಟೇಕೆ!!’ ಎಂದು ಹೌಹಾರಿದ್ದಕ್ಕೆ ಪಶ್ಚಾತ್ತಾಪವಾಯಿತು.

ಜೋರ್ಡಾನಿನಲ್ಲಿ ಒಂದು ದಿನವೂ ಉಳಿಯದೇ ಬೇರೆ ದೇಶಗಳಿಂದ ಬಂದು ನೋಡಿ ಹಾಗೆಯೇ ಮತ್ತೆ ಬೇರೆ ದೇಶಕ್ಕೆ ಹೊರಟುಹೋಗುವವರಿಗಂತೂ ಪ್ರವೇಶದರ 90 ಜೋರ್ಡಾನಿಯನ್ ದಿನಾರುಗಳು, ಅಂದರೆ 127 ಡಾಲರುಗಳು! ನಮ್ಮ ತಾಜಮಹಲ್ ಕೂಡಾ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದರೂ, ಹೊರದೇಶದ ಪ್ರಜೆಗಳಿಗೆ ಪ್ರವೇಶದರ ಸಾವಿರ ರೂಪಾಯಿ ಮಾತ್ರ. ಒಂದು ಜೋರ್ಡಾನಿಯನ್ ದಿನಾರ್‌ಗೆ ಹೆಚ್ಚು ಕಡಿಮೆ ಭಾರತದ ನೂರು ರೂಪಾಯಿಗಳು. ಅಂದರೆ ಒಂದು ದಿನದ ಟಿಕೆಟ್‌ಗೆ ಹತ್ತಿರ ಹತ್ತಿರ 5000 ರೂಪಾಯಿಗಳು! ತೆರೆದ ಬಾಯಿ ಮುಚ್ಚದೇ ಹೋಯಿತು…

ಮಹಮ್ಮದ್‌ನನ್ನು ಹಿಂಬಾಲಿಸಿದೆವು. ಅವನೂ ತಾಳ್ಮೆಯ ಮನುಷ್ಯನಂತೆ ಕಂಡ. ವಯಸ್ಸಾದ ನನ್ನ ಅಪ್ಪ-ಅಮ್ಮನಿಗಾಗಿ ಸ್ವಲ್ಪ ನಿಧಾನ ಮಾಡಬೇಕಾಗುತ್ತದೆ ನೀನು ಎಂದು ಆಗ್ರಹಿಸಿದಾಗ ತಲೆಯಾಡಿಸಿದ. ನಾವು ಅವನನ್ನು ಹಿಂಬಾಲಿಸಿದೆವು.

ಗೇಟಿನ ಒಳಹೊಕ್ಕ ಕೂಡಲೇ ಕಣ್ಮನ ಸೆಳೆಯುತ್ತಿದ್ದ ಅಂಗಡಿಗಳಲ್ಲಿನ ವಸ್ತುಗಳನ್ನೆಲ್ಲ ನೋಡುತ್ತ, ಕೈಯಲ್ಲಿ ಹೆಚ್ಚು ಕಾಸಿಲ್ಲದ್ದರಿಂದ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ ಮುಂದಕ್ಕೆ ನಡೆದೆ. ಟಿಕೆಟ್ ಮತ್ತು ಸೆಕ್ಯುರಿಟಿ ಚೆಕ್ ಮುಗಿಯಿತು. ಆ ನಂತರ ನಮ್ಮೂರ ಹಳ್ಳಿಗಳ ಕಡೆ ಇರುವ ಕಲ್ಲುಮಣ್ಣಿನ ಹಾದಿ ಕಂಡಿತು. ಸಣ್ಣ ನುರುಜುಗಲ್ಲುಗಳನ್ನು ನೋಡಿ ‘ಸಧ್ಯ ಶೂ ಹಾಕಿ ಬಂದೆವಲ್ಲಾ ಅಂತ ಸಮಾಧಾನವಾಯಿತು. ಮಹಮ್ಮದ್ ತಾನು ಒಂದು ಮಟ್ಟದವರೆಗೂ ಬಂದು ಎಲ್ಲ ಹೇಳಿ ಹೊರಡುತ್ತೇನೆಂದೂ, ಆ ನಂತರ ಆಸಕ್ತಿಯಿದ್ದರೆ ನಾವು ಮೊನಾಸ್ಟರಿಗೆ ಮತ್ತು ಹೈ ಪ್ಲೇಸ್ ಆಫ್ ಸ್ಯಾಕ್ರಿಫೈಸ್‌ಗೆ ಹೋಗಬಹುದು ಎಂತಲೂ ಹೇಳಿದ.

ಮತ್ತೆ ಮುಗ್ಧಮಾನವರಾದ ನಮ್ಮ ಮುಖದಲ್ಲಿ ನಗು … ‘ಅಲ್ಲಾ, ಅಲ್ಲಿಂದ ಇಲ್ಲಿಯವರೆಗೆ ಬಂದು ‘ಆಸಕ್ತಿಯಿದ್ದರೆ ನೋಡಬಹುದು’ ಅನ್ನುತ್ತಾನಲ್ಲ! ನೋಡದೇ ಹೋಗುತ್ತೇವಾ ನಾವು! ಎಂಥ ರಿಡಿಕ್ಯುಲಸ್ ಮಾತು’ ಅಂತ ನಗಾಡಿಕೊಂಡೆವು. ಕುದುರೆಗಾಡಿಗಳು, ಕತ್ತೆಗಳ-ಕುದುರೆಗಳ ಯಜಮಾನರು ಕಾಲಿಗೆ ತೊಡರುತ್ತಾ ‘ಫ್ರೀ ಕುದುರೆ ಅಥವಾ ಕತ್ತೆ ಬೇಕೇ’ ಅಂತ ವಿಚಾರಿಸಲು – ಅಲ್ಲಲ್ಲ, ಪ್ರಾಣ ತಿನ್ನಲು ತೊಡಗಿದರು.

ಮಹಮ್ಮದ್ ‘ದಾರಿಯುದ್ದಕ್ಕೂ ನೋಡುವ ಜಾಗಗಳು ಸಿಗುತ್ತಾ ಇರುವುದರಿಂದ ನಡೆದೇ ಹೋಗುವುದು ಉತ್ತಮ’ ಎಂದ. ನಾವೂ ‘ಹೂ ಮತ್ತೆ! ಯಾರು ಅದರಲ್ಲಿ ಹೋಗುತ್ತಾರೆ ಹೇಳಿ. ವಿ ಲವ್ ವಾಕಿಂಗ್’ ಎಂದೆವು. (ಆಮೇಲೆ ಗೊತ್ತಾಯಿತು ಫ್ರೀ ಅಂದರೆ ಆ ರೈಡ್‌ ಮಾತ್ರ ಫ್ರೀ … ಇಳಿದ ನಂತರ ಟಿಪ್ಸ್ ಐದು ಜೋರ್ಡಾನಿಯನ್ ದಿನಾರ್ ಕೇಳುತ್ತಾರೆ ಎನ್ನುವುದು … ಐನೂರು ರೂಪಾಯಿ ಟಿಪ್ಸ್!! ಭಾರತಿಯ ‘ಭಾರತೀಯ ಹೃದಯ’ ಒಡೆದು ಹೋಗಲಿಲ್ಲ ಸಧ್ಯ!) ಹಾಗೆ ಶುರುವಾಯಿತು ನಮ್ಮ ಪಯಣ … 2300 ವರ್ಷಗಳ ಹಿಂದಿನ ನಾಗರೀಕತೆಯೊಂದಕ್ಕೆ ಮುಖಾಮುಖಿಯಾಗುವ ಪಯಣ…

। ಇನ್ನು ನಾಳೆಗೆ ।

1 Response

  1. Sujathalokesh says:

    ಪಯಣದ ಕಥೆ ಓದುವುದಕ್ಕೆ ಕುತೂಹಲ..ಮಜಾನೇ..ಅಯ್ಯೋ ಎಲ್ಲಿಗೆ ಹೋದ್ರೂ ಹೆಣ್ಗಳ ಗೋಳು ಇದೇನಾ ಅನಿಸ್ತಿದೆ 🙁

Leave a Reply

%d bloggers like this: