ದೀಪದ ಕಂಬದ ಹಿಂದಿನ ಕನಸುಗಳು..

ಆಗ ಬೇಸಿಗೆಯ ಸೆಕೆ, ಬೇಗುದಿ ಇನ್ನೂ ಕಳೆದಿರಲಿಲ್ಲ.  ನಾಲ್ಕು ದಿನ ಮಳೆ ಬಿದ್ದು ಕಾದ ಹೆಂಚಿನ ಮೇಲೆ ನೀರು ಹನಿಸಿದಂತೆ ದೆಹಲಿಯ ಬದುಕನ್ನು ಅಸಹನೀಯ ಮಾಡಿಬಿಟ್ಟಿರುತ್ತದೆ ಈ ಆರ್ದ್ರ ವಾತಾವರಣ. ಸೆಪ್ಟೆಂಬರ್ ತಿಂಗಳಿಗೆ ಕ್ಯಾಲೆಂಡರ್ ಮುಗುಚಿದರೆ ಸಾಕು ಇನ್ನೇನು ಚಳಿಗಾಲ ಸನಿಹದಲ್ಲೇ ಇದೆ ಎನಿಸುವಂತೆ ಮನಸ್ಸು ನಿರಾಳವಾಗುತ್ತದೆ. ಆದರೆ ಗಾಳಿ ಬೀಸದೆ , ಎಲೆ ಅಲುಗದೇ ಎಷ್ಟು ಕಾಲವಾಯಿತೋ ಅನ್ನುವಷ್ಟು ಆರ್ದ್ರತೆ ಮುಸುಕಿರುತ್ತದೆ.

ಆದರೂ  ದಿಲ್ಲಿಯ ಬದುಕು ನಿಂತಿರುವುದಿಲ್ಲ. ಹಿಂಡು ಹಿಂಡು ಪಾರಿವಾಳಗಳಿಗೆ ಕಾಳು ಹಾಕುವುದನ್ನೂ ಅವು ರೆಕ್ಕೆ ಬೀಸಿಕೊಂಡು ಹಾರುವುದನ್ನೂ ಆಕಾಶ ನೋಡುತ್ತಲೇ ಇರುತ್ತದೆ. ಒಂದೆಲೆ ಅಲುಗಿದರೂ ಹಾಯ್..ಗಾಳಿ ಬೀಸಿತು ಎಂದು ಮನಸ್ಸು ಮುದಗೊಳ್ಳುತ್ತದೆ. ನಡುಹಗಲಿನ ಸೆಕೆ ಕುದಿಯ ನೆನಪೇ ಆಗದಷ್ಟು ಊರು ಧಾವಿಸುತ್ತಿರುತ್ತದೆ.  ಇಂಥದ್ದೇ ಒಂದು ದಿನ ನಾನು ಮೊದಲಬಾರಿಗೆ ಈ ದೇಶ ಕಂಡ ಅಪರೂಪದ ಚಿಂತಕಿ ಮಹಾಶ್ವೇತಾ ದೇವಿ ಅವರ ಬದುಕು ಬರೆಹದ ಕುರಿತು ಸಾಕ್ಷ್ಯಚಿತ್ರವನ್ನು ನೋಡಿದ್ದು ಮತ್ತು ಹಲವು ಬಲ್ಲವರ ಬಾಯಿಂದ ಕೇಳಿದ್ದು.

2016  ಸೆಪ್ಟೆಂಬರಿನಲ್ಲಿ ದೆಹಲಿಯ ಇಂಡಿಯಾ ಸೆಂಟರ್ ಫಾರ್ ಕಲ್ಚರಲ್ ಸೆಂಟರ್ನಲ್ಲಿ ಮೊಟ್ಟ ಮೊದಲ ಬಾರಿಗೆ ( Nomad Film Festival 2016 ) ‘ಅಲೆಮಾರಿಗಳ ಚಲನಚಿತ್ರೋತ್ಸವ’ ನಡೆಯುತ್ತಿತ್ತು.  ಪುಟ್ಟ ಪುಟ್ಟ ಡಾಕ್ಯೂಮೆಂಟರಿಗಳನ್ನು ಆಯಾ ಸಮುದಾಯದ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು, ಕಾರ್ಯಕರ್ತರು ಸಂಘಟಿತರಾಗಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಈ ಚಲನಚಿತ್ರೋತ್ಸವವು ಸಹ ಸಮಾಜದಲ್ಲಿ ಜಾಗೃತಿ ಮೂಡಿಸಲು ದೇಶದ ವಿವಿಧ ಮೂಲೆಗಳಲ್ಲಿ ಮರೆಯಾಗುತ್ತಿರುವ ಈ ಅಲೆಮಾರಿ ಸಮುದಾಯಗಳೂ ಮತ್ತು ಅವುಗಳ ಸುತ್ತ ಸುತ್ತಿಕೊಂಡಿರುವ ಸಿದ್ಧಮಾದರಿಯ ಕಲ್ಪನೆಗಳನ್ನು ಮುರಿಯುವ  ಪ್ರಾಮಾಣಿಕ  ಪ್ರಯತ್ನವಾಗಿತ್ತೆಂದರೆ ಸರಿಯಾದೀತು.

ನಾವೆಲ್ಲ ಬಾಲ್ಯದಲ್ಲಿ ಕಂಡಿರುವ ಹಾವಾಡಿಗರು, ಮಂಗನಾಟ ಆಡಿಸುವ ಮದಾರಿಗಳು, ದೊಂಬರಾಟದವರು, ಹಕ್ಕಿಪಿಕ್ಕಿಗಳು, ಕರಡಿಯಾಡಿಸುವವರು, ವೇಷಹಾಕಿ ಜನರನ್ನು ರಂಜಿಸುವ ಬುಹುರೂಪಿಗಳು, ಇಂಥ ಅಲೆಮಾರಿ ಮತ್ತು ಅಧಿಸೂಚಿತ ಪಂಗಡಗಳಿಂದ ಹೊರತಾಗಿರುವ ಬುಡಕಟ್ಟು ಜನರ ಸ್ಥಿತಿ ನಿಜಕ್ಕೂ ಅತ್ಯಂತ ಕೆಟ್ಟದಾಗಿದೆ. ಈ ಸಮುದಾಯದ ಸಮಸ್ಯೆಗಳೂ ಮತ್ತು ಅವರ ಕನಸುಗಳಿಗೆ ದನಿಯಾಗಿ ನಾವು ಕಂಡರಿಯದ ಅವರ ವಾಸ್ತವ ಲೋಕವನ್ನು ಈ ಕಿರುಚಿತ್ರಗಳು ಅನಾವರಣಗೊಳಿದವು. ಛಾರ, ಸಬರ್, ಕಂಧ, ಕಂಜರ್, ಮುಂತಾಗಿ ಇನ್ನುರಕ್ಕೂ ಹೆಚ್ಚು ಸಮುದಾಯಗಳಿವೆ.  ಅವರಲ್ಲಿ ’ ಕಳ್ಳತನ /ಸುಲಿಗೆ ಮಾಡುವ ಜನಾಂಗವೇ ಇದೆ’ ಹಿಂದೆ ಮುಂಬೈಯಲ್ಲಿ ಪರ್ದಿ ಬುಡಕಟ್ಟಿನ ವ್ಯಕ್ತಿಯೊಬ್ಬ ಕೊಲೆ ಮಾಡಿದ್ದ. ಪರ್ದಿ ಬುಡಕಟ್ಟು ಒಂದು ಕಾಲದಲ್ಲಿ ಕ್ರಿಮಿನಲ್ ಪಂಗಡವೆಂದೇ ಅಧಿಸೂಚಿತವಾಗಿತ್ತು.

ಶೋಷಿತ ವರ್ಗದ ಜನರೂ ಈಗ ವಿದ್ಯೆಯ ಮಹತ್ವವನ್ನು ಅರಿತಿದ್ದಾರೆ. ತಾವು ಪಟ್ಟ ಪಾಡು ತಮ್ಮ ಮಕ್ಕಳಿಗೆ ಬರಬಾರದು ಎನ್ನುತ್ತಾರೆ. ಕುತೂಹಲಕಾರಿ ಮತ್ತು  ಮಾಹಿತಿಪೂರ್ಣ ಕಿರುಚಿತ್ರಗಳನ್ನು ನೋಡುವ ಭಾಗ್ಯವೂ ಅದಾಗಿತ್ತು.

1871 ರಲ್ಲಿ ಬ್ರಿಟಿಷರು ಕಿಮಿನಲ್ ಟ್ರೈಬ್ಸ್ ಆಕ್ಟ್ ಅನ್ನು ನಮ್ಮ ದೇಶದಲ್ಲಿ ತಂದಾಗ ಸುಮಾರು 200 ಬುಡಕಟ್ಟು ಜನಾಂಗೀಯರನ್ನು ಹುಟ್ಟು ಅಪರಾಧಿಗಳೆಂದು ಪರಿಗಣಿಸಿದರು. ಅವರ್ಯಾರಿಗೂ ಅಪರಾಧದ ಹಿನ್ನೆಲೆಯಿದ್ದಿಲ್ಲ. 1952 ರಲ್ಲಿ ಶಾಸನವನ್ನು ಪರಿಷ್ಕರಿಸಿ ಆ ಜನಾಂಗೀಯರನ್ನು denotified Tribes ಅಧಿಸೂಚನೆಯಿಂದ ವಿಮುಕ್ತರು ಎಂದಾಗಿ ಮರು ವಿಂಗಡನೆ ಮಾಡಿದರು. ಆದಾಗಿಯೂ ಇವತ್ತಿಗೂ ಅವರು ಹುಟ್ಟು ಅಪರಾಧಿಗಳು, ಕಳ್ಳರು ಎಂದೇ ಸಮಾಜದಿಂದ ಮತ್ತು ಪೋಲಿಸರುಗಳಿಂದ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಾರೆ,  ಅವಮಾನಕ್ಕೆ ಗುರಿಯಾಗುತ್ತಿದ್ದಾರೆ. ಎಲ್ಲಾದರೂ ಕೊಲೆ ಸುಲಿಗೆಗಳಾದರೆ ಈ ಅಮಾಯಕರನ್ನು ಎಳೆದುತಂದು ಲಾಕಪ್ಪಿನಲ್ಲಿ ಕೂಡಿ ಹಾಕಿ ಥಳಿಸುತ್ತಾರೆ. ವಿನಾಕಾರಣ ಹಿಂಸೆ ಕೊಡುತ್ತಾರೆ.  ಯಾತನೆಯನ್ನು ತಾಳದೇ ಕೆಲವೊಮ್ಮೆ ಮಾಡದ ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ.  ಹೀಗೆ ಪೋಲಿಸರ ಕಾಟ, ಜೈಲಿನ ವಾಸ ಈ ಅಲೆಮಾರಿಗಳ ಬದುಕಿನ ಅವಿಭಾಜ್ಯ ನೋವು.

ಹಿಂದುಳಿದ ಮತ್ತು ಪರಿಶಿಷ್ತ ಜಾತಿಯವರಿಗೆ ಸಿಗುವ ಮೂಲಭೂತ ಸೌಕರ್ಯಗಳು  ಯಾವವೂ ಇವರಿಗೆ ಸಿಕ್ಕಿಲ್ಲ.  ಯಾತಕ್ಕೂ ಬಾರದ ಕ್ರಿಮಿಗಳಂತೆ ಬಾಳುತ್ತಿರುವ ’ವಿಮುಕ್ತ ಜಾತಿ’ – ಡಿನೋಟಿಫೈಡ್ ಜನಾಂಗ ಎಂದು ಹಣೆಪಟ್ಟಿಯಲ್ಲಿ ವಂಚಿತರಾದ ಈ ಸಮುದಾಯಗಳನ್ನು ಇತರ ಹಿಂದುಳಿದ ವರ್ಗಕ್ಕೆ ಸೇರಿಸಬೇಕೆನ್ನುವುದು ಮಹಾಶ್ವೇತಾ ದೇವಿ ಅವರ ಮುಖ್ಯ ಆಶಯವೂ ಆಗಿತ್ತು, ಕಾಲು ಶತಮಾನ ಕಾಲ ಅವರಿಗೆ ಹೋರಾಟವೇ ಬದುಕೂ ಆಗಿತ್ತು. ಇದು ಆ ಚಲನಚಿತ್ರೋತ್ಸವದ ಸಾರ.

ಈ ಕಿರು ಸಾಕ್ಷ್ಯಚಿತ್ರೋತ್ಸದಲ್ಲಿ ಭಾಗವಹಿಸಿರದಿದ್ದರೆ ನನಗೆ ಇವತ್ತು ಮಹಾಶ್ವೇತಾದೇವಿ ಸಿಗುತ್ತಿದ್ದಿಲ್ಲ.  ಆ ಇಡೀ ನೊಮಾಡಿಕ್ ಚಲನಚಿತ್ರೋತ್ಸವ ಅವರಿಗೆ ಅರ್ಪಣೆಯಾಗಿತ್ತು. ಅಷ್ಟೆಲ್ಲ  ಮನಸ್ಸನ್ನು ಆವರಿಸಿಕೊಂಡ ಮಹಾಶ್ವೇತಾದೇವಿ ಆಗಾಗ ನಮ್ಮನ್ನು ವಿಚಲಿತಗೊಳಿಸುತ್ತಾರೆ. ಸಮಾಜದಲ್ಲಿ ಸಣ್ಣ ಮೆಲುದನಿಯನ್ನೂ ಎತ್ತದ ಶತಶತಮಾನಗಳಿಂದ ತುಳಿತಕ್ಕೊಳಗಾದ ಬುಡಕಟ್ಟು ಜನಾಂಗಗಳು, ದಮನಿತ , ಶೋಷಿತ ವರ್ಗಗಳಿಗಾಗಿ ತಮ್ಮ ಕೊನೆಯುಸಿರಿನವರೆಗೂ ಹೋರಾಡಿದ್ದು,  ಓದಲು ಒಂದು ಜೀವಮಾನವೇ ಸಾಲದಷ್ಟು ಬರೆದ ಸಾಹಿತ್ಯವನ್ನು ಕಂಡರೆ ಅವರ ಅಂತಸಾಕ್ಷಿ, ಅದಮ್ಯ ಜೀವನಪ್ರೀತಿಗೆ ತಲೆಬಾಗುತ್ತದೆ ಮನಸ್ಸು.   ಅವರೇ ಬರೆದ ಬೆಂಕಿಯ ಕೆಂಡದಂತ ಅಗ್ನಿಕನ್ಯೆ  ಬಲಾತ್ಕಾರಕ್ಕೊಳಗಾದ  ಬುಡಕಟ್ಟು ಆದಿವಾಸಿ ಹೆಣ್ಣು ‘ದೋಪ್ತಿ’  ಮತ್ತು   ’ಚೋಲಿ ಕೇ ಪೀಛೆ’ ’behind the boidcie’  ಕಥೆಯ  ಗಂಗೋರ್ ಪಾತ್ರಗಳು ನಮ್ಮ ವ್ಯವಸ್ಥೆಯ ಮುಖಕ್ಕೆ ಬೀಸಿ ಹೊಡೆಯುತ್ತವೆ.  ಮತ್ತು ದನಿಯಿಲ್ಲದವರ ದನಿಯಾಗಿ ಮಹಾಶ್ವೇತಾದೇವಿ ಇಷ್ಟವಾಗಿಹೋಗುತ್ತಾರೆ.

ಇತ್ತೀಚೆಗೆ ಮಹಾಶ್ವೇತಾದೇವಿ ಅವರ ನೆನಪಲ್ಲಿ ಇಂಡಿಯನ್ ಲ್ಯಾಂಗ್ವೇಜ್ಸ್ ಫೆಸ್ಟಿವಲ್ ಸಮನ್ವಯ ( ILF Samanvaya) ಒಂದು ಕಾರ್ಯಕ್ರಮ ಆಯೋಜಿಸಿತ್ತು.  ಸೀಗಲ್ ಬುಕ್ಸ್ ನ ನವೀನ್ ಕಿಶೋರ್ ಅವರು ಸಂದರ್ಶಿಸಿದ ಸಾಕ್ಷಚಿತ್ರಗಳಲ್ಲಿ ಮಹಾಶ್ವೇತಾದೇವಿ ಗಂಡನಿಂದ ವಿಚ್ಚೇದನ ಪಡೆದು ತೀವ್ರ ಮಾನಸಿಕ ಆಘಾತಕ್ಕೊಳಗಾಗಿ ದೀರ್ಘಕಾಲದ ಯಾತನೆಯ ಕೆಂಡಗಳು ಸುಟ್ಟುಬೂದಿಯಾಗಿ ಮತ್ತೆ ಆ ಬೂದಿಯಿಂದ ಬದುಕುವ ಅದಮ್ಯ ಶಕ್ತಿ ಹುಟ್ಟಿಕೊಳ್ಳುತ್ತದೆ. ಆಕೆ ಛಲಗಾತಿ. ಕನಸುಗಳನ್ನು ಕಾಣುವುದು ನಮ್ಮ ಮೂಲಭೂತ ಹಕ್ಕು ಎನ್ನುವ ಕನಸುಗಾರ್ತಿ.

ಈ ಬದುಕು ತನ್ನದು, ತಾನು ಬದುಕಬೇಕು, ಕರುಳಿನ ಕುಡಿ ನಬಾರುನ್ ಗಾಗಿ, ಸಮಾಜದ ತುಳಿತಕ್ಕೊಳ್ಳಟ್ಟವರಿಗಾಗಿ, ಅವರ ಹಕ್ಕುಗಳಿಗಾಗಿ ಬದುಕಬೇಕೆಂದು  ಜೀವಗಟ್ಟಿಮಾಡಿಕೊಳ್ಳುತ್ತಾರೆ. ಕಡುಬಡತನ ಹದ್ದಿನಂತೆ ಎರಗಿದಾಗ ಕಂಡ ಕಂಡ ಕೆಲಸವನ್ನು ಮಾಡುತ್ತಾರೆ. ಮನೆ ಮನೆಗೆ ಹೋಗಿ ಸಾಬೂನು ಮಾರುತ್ತಾರೆ, ಅಪಾರವಾದ ಯಾತನೆಯನ್ನು ಕೊಟ್ಟ ಸಂಬಂಧ ಅವರನ್ನು ಆತ್ಮಹತ್ಯೆಯ ಅಂಚಿಗೂ ನೂಕುತ್ತದೆ. ಪರದೆಯ ಮೇಲಿನ  ದೇವಿ ಎಲ್ಲ ಹೆಣ್ಣು ಜಾತಿಯ ಅಂತರಂಗದ ಅಭಿವ್ಯಕ್ತಿಯಾಗಿ  ಅಸಂಖ್ಯ ನೋವಿನ ಒಳಸುಳಿಗಳನ್ನು ಒಡಲಲ್ಲೇ ಅದುಮಿಟ್ಟುಕೊಂಡು ಅನಂತದ ಎತ್ತರಕ್ಕೇ ಬೆಳೆದು ಬಂದ ಬಗೆಯನ್ನು ಬೆರಗನ್ನು ಅವರ ಕಣ್ಣಲ್ಲಿ  ಕಂಡೆ.

ಅವರ ಮೊದಲ ಪತಿ ಬಿಜೋನ್ ಭಟ್ಟಾಚಾರ್ಯ, ಹೆಸರಾಂತ ಬಂಗಾಳಿ ರಂಗಕರ್ಮಿ. ಅವರೊಂದಿಗಿನ ದಾಂಪತ್ಯ ಸುಮ್ಮನೇ ಹರಿಯುವ ನದಿಯಂತೆ ಹರಿಯದೇ ಹೋದಾಗ ಆಕೆ ಅವರಿಂದ ವಿಚ್ಚೇದನ ಪಡೆದು ಒಲ್ಲದ ಸಂಬಂಧದಿಂದ ಹೊರಬರುತ್ಟಾರೆ. ಆ ಮದುವೆಯಿಂದ ಅವರಿಗೊಬ್ಬ ಮಗನೂ ಇರುತ್ತಾನೆ. ನಬಾರುನ್ ಭಟ್ಟಾಚಾರ್ಯ.  ಅವನೂ ಖ್ಯಾತ ಕ್ರಾಂತಿ ಕವಿ. ಬಿಜೊನ್ ಅವರೊಂದಿಗಿನ ಸಾಂಗತ್ಯ ಮುಗಿಯುವ ಹೊತ್ತಿಗೆ  ಅವರಿಗೆ ಪ್ರಸಿದ್ಧ ಸಾಹಿತಿ ಅಸಿತ್ ಗುಪ್ತಾ ಅವರೊಂದಿಗೆ ಪ್ರೇಮವಾಗಿರುತ್ತದೆ.  ಎಲ್ಲವೂ ಸರಿಯಾಗಿಯೇ ಇತ್ತು. ಇನ್ನು ನಮ್ಮ ಬದುಕಿನಲ್ಲಿ ಏನೂ ಘಟಿಸುವುದಿಲ್ಲ ಎಂದುಕೊಂಡಿರುವಾಗಲೇ ಏನೇನೋ ಘಟಿಸಿರುತ್ತದೆ ನಮ್ಮ ಕೈಮೀರಿ. ಮಹಾಶ್ವೇತಾ ದೇವಿ  ಹೇಳುತ್ತಾರೆ : ಅವರ ದಾಂಪತ್ಯ ಹೀಗೆ ಕೊನೆಗೊಂಡೀತೆಂದು ಕನಸು ಮನಸಿನಲ್ಲಿಯೂ ಅಂದುಕೊಂಡಿದ್ದಿಲ್ಲವಂತೆ. ಅಸೀತ್ ಗುಪ್ತಾ ಇನ್ನೊಬ್ಬಳಲ್ಲಿ ಅನುರಕ್ತರಾಗುತ್ತಾರೆ. ದೇವಿ ಮತ್ತೊಮ್ಮೆ ಘಾಸಿಗೊಂಡು  ತಾವೇ ಗಂಡನನ್ನು ತ್ಯಜಿಸಿ ಆ ನೋವಿನ ಕೂಪದಿಂದ ಹೊರಬರುತ್ತಾರೆ.

ಅಸೀತ್ ಗುಪ್ತಾರಿಗೆ  ಯಾವತ್ತೂ ದೇವಿ ಅವರ ಬರವಣಿಗೆ ಕೇವಲ ಲೌಕಿಕವಾಗಿದೆ ಅವರು ಸಾಕಷ್ಟು ತಿಳಿದುಕೊಂಡಿಲ್ಲ ’  ಎಂಬ ಭಾವನೆಯಿತ್ತಂತೆ. ಮಹಾಶ್ವೇತಾದೇವಿಗೆ ತಮ್ಮ ಬರವಣಿಗೆ , ಹೋರಾಟಗಳ ಬಗ್ಗೆ ಹೆಮ್ಮೆ ಇರುವಂತೆ ವೈಯಕ್ತಿಕ ಬದುಕಿನ ಬಗ್ಗೆಯೂ ನೋವಿದೆ. ಎಲ್ಲ ಹೆಣ್ಣುಮಕ್ಕಳಂತೆ ದೇವಿ ಮಾನಸಿಕ ಮತ್ತು ದೈಹಿಕ ಸಖ್ಯವನ್ನು, ಸಾಂಗತ್ಯವನ್ನು ಬಯಸಿದ್ದರು. ಯಾವ ಸಂಬಂಧವೂ ಅವರು ಬಯಸಿದ್ದ ಹಿಡಿ ಪ್ರೀತಿಯನ್ನಾಗಲಿ, ನೆಮ್ಮದಿಯನ್ನಾಗಲಿ, ಗೌರವವನ್ನಾಗಲಿ ಕೊಡಲಿಲ್ಲ.  ತಮ್ಮ ಹೃದಯದ ತುಕಡಿಗಳನ್ನೇ ಕತ್ತರಿಸಿಕೊಳ್ಳುವಂತೆ ಎಲ್ಲ ಸಂಬಂಧಗಳಿಂದ ಕಳಚಿಕೊಂಡು ಒಂಟಿಯಾಗುಳಿದ ದೇವಿ ಎಲ್ಲ ವಿಷಾದಗಳನ್ನೂ ಮೆಟ್ಟಿ ದೊಡ್ಡ ಆಲದ ಮರದಂತೆ ಬೆಳೆದು ನಿಲ್ಲುತ್ತಾರೆ.  ನೊಂದವರಿಗೆ ನೆರಳಾಗುತ್ತಾರೆ.   ಭಾವುಕತೆಯನ್ನೂ ಕಿತ್ತೆಸೆದು ಕ್ರಾಂತಿಯ ಕುರಿತು ಮಾತು ತಿರುಗಿಸುವ ದೇವಿ – “ ನಾವೆಲ್ಲರೂ ದೀಪದ ಕಂಬದ ಹಿಂದೆ ಕ್ರಾಂತಿ ಅವಿತುಕೊಂಡಿದೆಯೆಂದು ನಂಬಿದ್ದೇವೆ,  ನಾವು ಹೋಗಿ ಹಿಡಿಯಬೇಕದನು “  ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ. ತುಂಟ ಮಕ್ಕಳಂತೆ ತಮಾಷೆ ಮಾಡಿ ನಗುತ್ತಾರೆ.

ಚೂರಾದ ಎಲ್ಲವನ್ನೂ ಕೂಡಿಸಿ ತನ್ನತನವನ್ನು ಇಡಿಯಾಗಿ ಮತ್ತೆ ಜೋಡಿಸಿಕೊಳ್ಳುವ ಕ್ರಿಯೆಯೇನೂ ಸಾಮಾನ್ಯದ್ದಾಗಿರುವುದಿಲ್ಲ. ಸಂತೋಷಕರವಂತೂ ಮೊದಲೇ ಆಗಿರುವುದಿಲ್ಲ. ಅವರಿಗೆ ಮನೆಯೆಂಬುದೇ ಇದ್ದಿಲ್ಲ.  ಎಲ್ಲೆ ಇದ್ದರೂ ಎಷ್ತೇ ಸುತ್ತಾಡಿದರೂ ಮನೆ ಕೊಡುವ ನೆಮ್ಮದಿ ಎಲ್ಲೂ ಸಿಗಲಾರದು. ತಾನು ಕೂರುವ ಮನೆಯ ಒಂದು ಮೂಲೆ, ನನ್ನದೇ ಎನ್ನುವ  ಟೇಬಲ್ಲು, ಪುಸ್ತಕಗಳು, ಬರಹ , ಲೇಖನಿ, ಚಿಲಿಪಿಲಿಗುಡುವ ಅಸಂಖ್ಯ ಪಕ್ಷಿಗಳು, ಪಾರಿವಾಳಗಳು, ಆಗಾಗ ಬರುಹೋಗುವ ಅಭಿಮಾನಿಗಳು, ಅವರ ಆತ್ಮಬಂಧುಗಳಾದ ಬುಡಕಟ್ಟು ಜನರು ಅವರ ಮನೆಗೆ ಬಂದುಹೋಗುತ್ತಿದ್ದರಂತೆ. ಮಹಾಶ್ವೇತಾದೇವಿ ಅವರೂ ಆ ಬಡ ಬುಡಕಟ್ಟುಗಳ ಗುಡಿಸಲುಗಳಲ್ಲಿದ್ದು ಬರುತ್ತಿದ್ದರಂತೆ. ಯಾವ ಸೋಗೂ ಇಲ್ಲದೇ ಉಣ್ಣುತ್ತಿದ್ದರು, ಬೀಡಿ ಸೇದುತ್ತಿದ್ದರು, ಚಹ ಕುಡಿಯುತ್ತಿದ್ದರಂತೆ. ಬಯಸಿದ ಗಂಡಸು ಪ್ರೀತಿ ಕೊಡದಿದ್ದರೇನಂತೆ, ಇಡೀ ದೇಶದ ತುಂಬೆಲ್ಲ ಎಣಿಕೆಯಿರದಷ್ಟು ಪ್ರೀತಿಸುವ ಜೀವಗಳಿವೆ.  ಬದುಕು ದೊಡ್ಡದು, ಇಷ್ಟೇ ನನ್ನನ್ನು ಕೊನೆತನಕ ಕೈಹಿಡಿದು ನಡೆಸಿಕೊಂಡು ಬಂದವು ಎನ್ನುವ ದೇವಿ ಅವರ ಮಾತುಗಳು ಸಾರ್ವಕಾಲಿಕ ಸತ್ಯ.

ಇನ್ನೂ ಮಹಾಶ್ವೇತಾದೇವಿಯ ಗುಂಗಿನಿಂದ ಹೊರಬರಲಾರದೇ ಮತ್ತೆ ಮತ್ತೆ ಅವರನ್ನೇ ಧೇನಿಸುತ್ತಿದ್ದೇನೆ.  ಕನಸು ಕಾಣುವುದು ಮೂಲಭೂತ ಹಕ್ಕಾಗಬೇಕು ಎನ್ನುವ ಅವರ ಮಾತು ನೆನೆಪಾಗಿ – “ ದೀಪದ ಕಂಬದ ಹಿಂದೆಯೂ ಕನಸುಗಳು ಅವಿತಿರಬಹುದೇನೋ ಎಂದು  ಇಶಾರೆ ಮಾಡುತ್ತಿದ್ದಾರಾ ಎಂದು ನೆನೆದು ಅಚ್ಚರಿಪಡುತ್ತಿದ್ದೇನೆ ಇನ್ನೂ……

5 Responses

 1. Bharathi B v says:

  ಏನೆಲ್ಲ ಬದುಕುಗಳಿವೆ ಈ ಭೂಮಿಯಲ್ಲಿ! ಆಕೆಯ ಬಗ್ಗೆ ಏನೇನೂ ತಿಳಿದಿರಲಿಲ್ಲ, ಬರಹ ಗಾಢವಾಗಿ ಅದನ್ನು ಕಟ್ಟಿಕೊಟ್ಟಿತು …

 2. ತನ್ನ ವೈಯುಕ್ತಿಕ ಕಷ್ಟ ಕೋಟಲೆಗಳ ನಡುವೆ ಬೆರಗಾಗುವಂತೆ ಮೀರಿ ಬೆಳೆದು ಬುಡಕಟ್ಟು ಜನರ ದನಿಯಾಗಿ ಮಹಾಶ್ವೇತಾದೇವಿ ರವರು ಬೆಳೆದುನಿಂತ ಕಥೆ , ವಿಸ್ಮಯ ಮೂಡಿಸುತ್ತದೆ . ಅವರಿಗೊಂದು ನಮಸ್ಕಾರ.

 3. L. C. Nagaraj says:

  ಇಷ್ಟವಾಯಿತು

 4. MAHESHA V says:

  Yea.. thumba ishta aaythu….

 5. Renuka says:

  ಚಂದದ ಬರಹ

Leave a Reply

%d bloggers like this: