ಬಿ ಜಯಶ್ರೀ ಗುಂಗು..

ಎನ್ ಸಂಧ್ಯಾರಾಣಿ 

‘ಬಿ ಜಯಶ್ರೀ’ ಎಂದರೆ ಒಂದು ದನಿ, ಒಂದು ಬದುಕು, ಒಂದು ಪರಂಪರೆ, ಕರ್ನಾಟಕದ ರಂಗ ಇತಿಹಾಸದ ಒಂದು ಮುಖ್ಯ ಅಧ್ಯಾಯದ ಪುಟ ಮತ್ತು…’,

ಹೌದು.. ಯಾವುದೇ ಬದುಕನ್ನು ಒಂದು ವಾಕ್ಯದಲ್ಲಿ ಹಿಡಿಯಲಾದೀತೇ?

ಅದೂ ಬಿ ಜಯಶ್ರೀ ಅಂತಹವರ ಬದುಕನ್ನು?

ಆದರೆ ಪ್ರೀತಿ ನಾಗರಾಜ್ ಅಂತಹ ಪ್ರಯತ್ನ ಮಾಡಿದ್ದಾರೆ.

ಆ ಪ್ರಯತ್ನದ ಫಲವೇ ’ಕಣ್ಣಾ ಮುಚ್ಚೇ, ಕಾಡೇ ಗೂಡೆ’.

ಮನೋಹರ ಗ್ರಂಥಮಾಲ ಈ ಪುಸ್ತಕವನ್ನು ಪ್ರಕಟಿಸಿದೆ.  ಪ್ರಕಟವಾದ ಒಂದೇ ವರ್ಷದ ಒಳಗೆ ಪುಸ್ತಕ ಎರಡನೆಯ ಮುದ್ರಣ ಕಂಡಿದೆ.  ಈ ಪುಸ್ತಕದ ಬಗ್ಗೆ ಕುತೂಹಲ ಸಹಜ.

ಮಲ್ಲತ್ತಹಳ್ಳಿಯಲ್ಲಿರುವ Indira Gandhi National Centre for the Arts ಪುಸ್ತಕದ ಆಯ್ದ ಭಾಗಗಳ ಓದು ಮತ್ತು ಸಂವಾದ ಏರ್ಪಡಿಸಿತ್ತು.  IGNCA ಪುಸ್ತಕದ ಓದು ಮತ್ತು ಸಂವಾದಗಳ ಸರಣಿಯನ್ನು ಪ್ರಾರಂಭಿಸಿದೆ.  ಆ ಸರಣಿಯ ಮೊದಲ ಪುಸ್ತಕ ’ಕಣ್ಣಾಮುಚ್ಚೆ ಕಾಡೇಗೂಡೆ’.  ಕವಿ ಎಚ್ ಎಸ್ ವೆಂಕಟೇಶ ಮೂರ್ತಿ ಸರಣಿಯನ್ನು ಉದ್ಘಾಟಿಸಿದರು.  ಬಿ ಜಯಶ್ರೀ, IGNCA ದ ಕಾರ್ಯನಿರ್ವಾಹಕ ನಿರ್ದೇಶಕರಾದ ದೀಪ್ತಿ ನವರತ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಚ್ಎಸ್ವಿ ಮಾತನಾಡುತ್ತಾ ಪುಸ್ತಕವನ್ನು ಮೌನವಾಗಿ ’ಓದುವ’ ಸುಖ ಮತ್ತು ಕವನವನ್ನು ಗಟ್ಟಿಯಾಗಿ ಓದುತ್ತಾ ’ಕೇಳುವ’ ಸುಖಗಳ ಬಗ್ಗೆ ಹೇಳಿದರು.  ಪುತಿನ ಅವರು ’ಗೋಕುಲ ನಿರ್ಗಮನ’ ನಾಟಕವನ್ನು ತೀನಂಶ್ರೀ ಮತ್ತು ಡಿಎಲ್ ಎನ್ ಮುಂತಾದವರ ಎದುರಿನಲ್ಲಿ ಓದಿದ ಪ್ರಸಂಗವನ್ನು ಹಂಚಿಕೊಂಡ ಅವರು ಇಂತಹ ಪುಸ್ತಕಗಳನ್ನು ಸಮಾನ ಮನಸ್ಕರೆದುರಲ್ಲಿ ’ಓದುವ’ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದು ಹಾರೈಸಿದರು.

ಪ್ರಾಸಂಗಿಕವಾಗಿ ಮಾತನಾಡಿದ ಬಿ ಜಯಶ್ರೀ ಅವರು ಆತ್ಮಕಥೆ ಬರೆದ ಪ್ರೀತಿ ನಾಗರಾಜ್ ಅವರೆದುರಲ್ಲಿ ಆತ್ಮವನ್ನು ಬಿಚ್ಚಿಟ್ಟ ಕಥೆ ಹೇಳುತ್ತಾ ಈಗ ನಿರೂಪಕಿ ತಮ್ಮ ’ಆತ್ಮ’ವಾದ ಬಗೆಯನ್ನು ಹೇಳಿದರು.  ’ಆತ್ಮಕಥೆ’ಗಳು ಬೇಕೆ, ಬೇಡವೆ?  ಪ್ರತಿ ಆತ್ಮಕಥೆಯೂ ಮತ್ಯಾರನ್ನೋ ಘಾಸಿಗೊಳಿಸಬಹುದೇನೋ ಎನ್ನುವ ಹೆದರಿಕೆಯನ್ನು ಹೊತ್ತೇ ಮಾತಾಗುತ್ತದೆ.  ಅದು ಕಡೆಗೆ ಯಾರನ್ನೋ ಘಾಸಿಗೊಳಿಸೇ ಬಿಟ್ಟಿರುತ್ತದೆ.  ಹೇಳುತ್ತಾ ಹೇಳುತ್ತಾ ಜಯಶ್ರೀ ಅವರ ಕಣ್ಣುಗಳು ತುಂಬಿ ಬಂದಿದ್ದವು.  ನೋಡುತ್ತಿದ್ದವರನ್ನು ಆರ್ದ್ರವಾಗಿಸಿದ ಘಳಿಗೆ ಅದು.

ನಂತರದ ಕಾರ್ಯಕ್ರಮ ಪುಸ್ತಕದ ಆಯ್ದ ಪುಟಗಳ ಓದು.

ಆತ್ಮಕಥೆಗಳನ್ನು ಪುಸ್ತಕವಾಗಿಸಿದಾಗ ಇಂತಹ ಓದಿನ ಕಾರ್ಯಕ್ರಮದಲ್ಲಿ ಯಾವುದಾದರೂ ’ರಸವತ್ತಾದ’ ಅಥವಾ ’ವಿವಾದಾತ್ಮಕ’ ಘಟ್ಟಗಳನ್ನು ಓದಿ ಆ ಮೂಲಕ ಪುಸ್ತಕದ ಮಾರುಕಟ್ಟೆಯನ್ನು ಹೆಚ್ಚಿಸುತ್ತೇವೆ ಅಂದುಕೊಳ್ಳುವುದು ಒಂದು ಟ್ರಾಪ್.  ಪ್ರೀತಿ ನಾಗರಾಜ್ ಅವರು ಅಂತಹ ಯಾವುದೇ ಪುಟಗಳನ್ನು ಆರಿಸಿಕೊಳ್ಳಲಿಲ್ಲ ಎನ್ನುವುದರಲ್ಲಿ ಲೇಖಕಿಯಾಗಿ ಅವರ ಗೆಲುವೂ ಇದೆ, ಜಯಶ್ರೀಯವರ ಬದುಕಿನ ಘನತೆಯೂ ಇದೆ.  ಅದಕ್ಕಾಗಿ ಅಭಿನಂದನೆಗಳು.

ಪ್ರೀತಿ ನಾಗರಾಜ್ ಅವರು ಓದಲು ಆರಿಸಿಕೊಂಡ ಭಾಗಗಳು ಆ ಕಾಲದ ಕಂಪನಿ ನಾಟಕಗಳ ಬದುಕು ಮತ್ತು ವೈಭವವನ್ನು ಕಟ್ಟಿಕೊಟ್ಟವು, ಜಯಶ್ರೀ ಅವರ ಎನ್ ಎಸ್ ಡಿ ದಿನಗಳು ಮತ್ತು ಅಲ್ಲಿದ್ದಾಗ ಅವರು ತಮ್ಮ ತಾತನನ್ನು ಕಳೆದುಕೊಂಡ ದಿನಗಳನ್ನು ಕಟ್ಟಿಕೊಟ್ಟವು ಮತ್ತು ಕಂಬಾರರು ಜಯಶ್ರೀ ಅವರ ಕೈಗಿಟ್ಟ ಕಾಸುಗಳ ಪ್ರಸಂಗವನ್ನು ಕಟ್ಟಿಕೊಟ್ಟವು.  ಪ್ರೀತಿ ನಾಗರಾಜ್ ಅವರು ಆರಿಸಿಕೊಂಡ ಪುಟಗಳು ಮತ್ತು ಅದನ್ನು ನಿರೂಪಿಸಿದ ರೀತಿ ಅಲ್ಲಿದ್ದವರಲ್ಲಿ ಪುಸ್ತಕವನ್ನು ಓದುವ ಬಯಕೆಯನ್ನು ಹುಟ್ಟುಹಾಕಿದವು.

ಸಂವಾದದಲ್ಲಿ ಬಿ ಜಯಶ್ರೀ ಅವರು ಮಾತನಾಡಿದ ಬಗೆಯನ್ನು ಹೇಳಲೇಬೇಕು, ಅವರ ಮುಗ್ಧತೆ, ಅಲ್ಲಿದ್ದ ವಾತಾವರಣದಲ್ಲಿ ಒಂದಾದ ಅವರ ಆತ್ಮೀಯತೆ ಅಲ್ಲಿದ್ದವರ ಮನಸ್ಸಿನಲ್ಲಿ ಬಹುಕಾಲ ಉಳಿಯುತ್ತದೆ.  ಹಾಗೇ ಕಣ್ಣಿಗೆ ಒಡೆದು ಕಾಣುವಂತಿದ್ದದ್ದು ಈ ಬದುಕು ಪುಸ್ತಕವಾಗುವ ಪಯಣದಲ್ಲಿ ಅಲ್ಲಿದ್ದ ಮೂವರನ್ನೂ ಅದು ಹೇಗೆ ಒಂದು ದಾರದಲ್ಲಿ ಬಂಧಿಸಿ ಅವರನ್ನು ಜೊತೆಯಾಗಿಸಿತು ಎನ್ನುವುದು, ಆ ಮೂವರು ಆನಂದ ರಾಜು, ಬಿ ಜಯಶ್ರೀ ಮತ್ತು ಪ್ರೀತಿ.ನಾಗರಾಜ್.  ಅವರ ನಡುವಿನಲ್ಲಿದ್ದ ಪ್ರೀತಿ ವಾತ್ಸಲ್ಯಕ್ಕೆ ಹೆಸರಿನ ಅಗತ್ಯವೇ ಇಲ್ಲ.

IGNCA ಪ್ರಾರಂಭಿಸಿರುವ ಈ ‘ಪುಸ್ತಕ ಓದು ಮತ್ತು ಸಂವಾದ’ ಕಾರ್ಯಕ್ರಮಕ್ಕೆ ’ಅವಧಿ’ಯ ಅಭಿನಂದನೆಗಳು.

1 Response

  1. ಭಾರತಿ ಬಿ ವಿ says:

    ಹೌದು, ಕಾರ್ಯಕ್ರಮ ತುಂಬ ಆಪ್ತವಾಗಿತ್ತು

Leave a Reply

%d bloggers like this: