ಹೇಗೆ ಕಂಗೊಳಿಸುತಿದೆ ನೋಡಿ ಈ ಕೃತಿ..

ನಮ್ಮೊಡನಿಲ್ಲದ ವಿ ಕೆ ಮಣಿಮಾಲಿನಿ

ಅವರ ಕೃತಿಯ ಬಗ್ಗೆ-

 

 

 

‘ಬಾಜಿರಕಂಬದ ಒಳಸುತ್ತು’

ಅಹಲ್ಯಾ ಬಲ್ಲಾಳ್

 

 

 

 

ಹೋ, ಬನ್ನಿ ಇವರೇ. ತುಂಬ ದಿನಗಳ ನಂತರ ನಿಮ್ಮ ದರುಶನಭಾಗ್ಯ. ಸೌಖ್ಯವೆ? ಹೀಗೆ ಬನ್ನಿ, ಕಾಲು ತೊಳೆದು ಬಾಯಾರಿಕೆ ತಗೊಂಡಿರಾ? ನಮ್ಮ ಹಿತ್ತಿಲ ತೋಟಕ್ಕೆ ಸುತ್ತುಹಾಕಿ ಬರಬೇಕೋ? ಹೀಗೆ ಬನ್ನಿ ಮತ್ತೆ …ಹೇಗೆ ಬೆಳೆದಿದೆ ನೋಡಿ ನಮ್ಮಲ್ಲಿನ ಸಸ್ಯಭಂಡಾರ. ಪ್ರತಿ ಗಿಡಕ್ಕೂ ಒಂದು ಅನನ್ಯತೆ, ಇನ್ನೊಂದರ ಜೊತೆ ಸಾರಾಸಗಟಾದ ತುಲನೆಗೆ ಒಗ್ಗದ, ಅದರದೇ ಸ್ವಂತ ಮೌಲ್ಯ. ಆದರೂ, ಒಂದೊಂದೇ ಹೊಸ ಸೇರ್ಪಡೆಯಾದಾಗ, ಮುಂಚಿನವೆಲ್ಲ ಸೂಕ್ಷ್ಮ ರೀತಿಯಲ್ಲಿ ತಂತಮ್ಮ ಸ್ಥಾನಮಾನಗಳನ್ನು ಪಲ್ಲಟಮಾಡಿಕೊಳ್ಳುವ ಸೋಜಿಗವೇ! ಅಥವಾ ಅವು ಸ್ವಸ್ಥಾನದಲ್ಲಿಯೇ ಇದ್ದು, ನೋಡುವ ನಮ್ಮ ಕಣ್ಣಿಗೆ ಹಾಗೆ ಕಾಣುವುದೋ ಏನೋ, ಅಲ್ಲವೆ?

ಇರಲಿ. ಹೂಂ, ನೀವನ್ನುವುದು ಸರಿ. ಒಳಹೋದಂತೆ ಇದೊಂದು ಸಾಂದ್ರ ಕಾಡು. ಹಚ್ಚ ಹಸಿರು ಕಾಶಿ. ಹಾಂ, ಮೆಲ್ಲ. ಹಾದಿಯಲ್ಲಿ ಕಲ್ಲುಮುಳ್ಳುಗಳಿದ್ದಾವು. ನೀವು ಕನಸಿನಲ್ಲಿಯೂ ನಿರೀಕ್ಷಿಸದ ತಿರುವುಗಳು ಸಿಕ್ಕಾವು. ಈವರೆಗೆ ಕಂಡು ಕೇಳರಿಯದ ಕನ್ನಡಿಕೊಳಗಳು ಎದುರಾದಾವು. ಅಲ್ಲಿ ನಿಮ್ಮನ್ನೇ ನೀವು ಕಂಡುಕೊಂಡೀರಿ, ಎಚ್ಚರ. ಕೆಲ ದಟ್ಟ ಮೋಡಗಳು ತಲೆಯ ಮೇಲಿಂದ ಸುಮ್ಮನೆ ಹಾದು ಹೋದಾವು. ಕಾಡು ಹಕ್ಕಿಗಳ ಹಾಡು ಒಮ್ಮೊಮ್ಮೆ ಕೇಳಿಸದೇ ಹೋದೀತು! ಒಂದಿಷ್ಟು ತಾಳ್ಮೆ ಇರಲಿ. ಬುದ್ಧಿ ಹೃದಯ ತೆರೆದೇ ಇರಲಿ. ಎಷ್ಟೋ ವರ್ಷಗಳ ಹಿಂದೆ ನಮ್ಮೆಲ್ಲರ ಹಿರಿಯಕ್ಕ ಕದಳೀವನದ ತಿರುಳನ್ನು ಹುಡುಕುತ್ತಾ ಹೊರಟ್ಟಿದ್ದನ್ನು ನಾವು ಈಗಲೂ ಆಗಾಗ ಕೇಳುವುದುಂಟು. ಪ್ರತಿ ಬಾರಿ ಕೇಳಿದಾಗಲೂ ಅವಳ ಏಕಾಗ್ರತೆ, ಸಾಹಸಗಳು ರೋಮಾಂಚನ ಉಂಟುಮಾಡುವುದುಂಟು. ಗಾಬರಿಗೊಳ್ಳದಿರಿ ಇವರೇ… ನಿಮ್ಮ ಆಸಕ್ತಿಗೆ ಇಲ್ಲಿ ಚ್ಯುತಿ ಬರುವುದಿಲ್ಲ. ಮುಂದೆ ಸಾಗುತ್ತಿದ್ದಂತೆ ನಿಮಗೆ ಈ ಜಾಗ ಒಗ್ಗುತ್ತಲೇ ಒಲಿಯುತ್ತಲೇ ಹೋಗುತ್ತದೆ, ಪರಿಚಿತವೆನಿಸುತ್ತದೆ. ನೆಮ್ಮದಿಯಿಂದಿರಿ

ಎದುರಿರುವ ಆ ಕಡುಪಚ್ಚೆ ಸಸ್ಯ ಯಾವುದೆಂದಿರಾ? ನಮ್ಮಕ್ಕ ಮಣಿಮಾಲಿನಿ ನಟ್ಟು ನೀರೆರೆದು ಪೋಷಿಸಿದ ಕೂಸದು. ಈಗ ಇಲ್ಲಿಲ್ಲ ಆಕೆ. ಬಂದ ಕೆಲಸವಾಯಿತೆಂದು ಎದ್ದು ಹೋಗಿರಬೇಕು. ತರತರಹದ ಫಲಪುಷ್ಪಗಳಿಂದ ಹೇಗೆ ಕಂಗೊಳಿಸುತಿದೆ ನೋಡಿ ಈ ಕೃತಿವಿಶೇಷ. ಹೆಸರು,”ಬಾಜಿರಕಂಬದ ಒಳಸುತ್ತು”.

ನೀವು ನಮ್ಮ ರಾಜ್ಯದ ಕರಾವಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದವರಾಗಿದ್ದರೆ, ಈ ಬಾಜಿರಕಂಬ ಏನು ಎನ್ನುವುದು ನಿಮಗೆ ತಿಳಿದಿರುತ್ತದೆ. ಈಗೀಗ ನಶಿಸಿಹೋಗುತ್ತಿರುವ ಕೂಡುಕುಟುಂಬಗಳು ಇರುತ್ತಿದ್ದ ಹಳೆಯ ವಿಶಾಲ ಮನೆಗಳ ಚಾವಡಿಯಲ್ಲಿ ನೆಲ ಮತ್ತು ಚಾವಣಿಗಳಿಗೆ ಆಧಾರವಾಗಿ, ಅವುಗಳನ್ನು ಬೆಸೆಯುವ ಕಲಾತ್ಮಕ ಕೆತ್ತನೆ ಇರುವ ಮರದ ಕಂಬವದು. ಅಪ್ಪಟ ಪ್ರಾದೇಶಿಕತೆಯ ಸಂಕೇತವಾಗಿದ್ದುಕೊಂಡೇ ಸಾರ್ವಕಾಲಿಕ ಸಾರ್ವತ್ರಿಕ ಕೌಟುಂಬಿಕ ಮೌಲ್ಯಗಳಿಗೂ ಒಂದು ಗಟ್ಟಿ ಪ್ರತಿನಿಧಿ. ಈ ಕೃತಿಸಸ್ಯದ ಒಂದು ಹೆಗ್ಗುರುತೆಂದರೆ ಅದರಿಂದ ಸೂಸುವ ಆಡು ಭಾಷೆ ಹವ್ಯಕದ ಗಂಧ, ಅದರದೇ ಆದ ನುಡಿಗಟ್ಟು, ಕಾಕು, ಸಂವೇದನೆಗಳು, ಜೀವನಶೈಲಿ ಎನ್ನಿ ಬೇಕಾದರೆ. ಕಥಾ ಕುಸುಮಗಳಲ್ಲಿ ಅರಳಿ ನಿಂತ ಜೀವಂತ ಪಾತ್ರಗಳು. ಅವುಗಳ ಕೊರಲು ಕೇಳುತ್ತಿದೆಯೇ ನಿಮಗೆ? ಹಳಯ ಹೊಸತರ ನಡುವಿನ ಸಂಘರ್ಷದಲ್ಲಿ ಪ್ರಾಣ ಪಡೆದಂಥವು. ಕಂಡೆ ಕಂಡೆ ಎಂಬಂತಿರುವ ಅನುಭವಗಳನ್ನು ಮೈಗೂಡಿಸಿಕೊಂಡಂಥವು.

ಅಗೋ ನೋಡಿ, ಗಟ್ಟಿಗಿತ್ತಿ ಸುಬ್ಬಕ್ಕಜ್ಜಿ. “ಹೆದರಿಕೆ ಎನ್ನುವುದು ಅವಳಿದ್ದ ವಠಾರಕ್ಕೆ ಸುಳಿಯುತ್ತಿರಲಿಲ್ಲ”’. ಕಂಡದ್ದನ್ನು ಕಂಡಂತೆ ಹೇಳಿಯೇ ಬಿಡುವ, ಯಾರಿಗೂ ಅಡಿಯಾಳಾಗದ ಬಾಯಾಳ್ತಿ, ಶ್ರಮಜೀವಿ. “ಮೊದಲು ನಮ್ಮ ಸುಬ್ಬಕ್ಕ ಹೀಗೆ ಬಾಯಾಳ್ತಿ ಆಗಿರಲಿಲ್ಲಪ್ಪ. ಬಂಗಾರದಂಥ ಹೂಡುಗಿ. ರಂಗನಾಥನನ್ನು ಮದುವೆಯಾದಾಗ ಅವಳಿಗೆ ಹದಿಮೂರೋ ಹದಿನಾಲ್ಕೋ ವರ್ಷ, ಏನು ಕಳೆಕಳೆಯಾಗಿದ್ದಳು! ನಾಲ್ಕೇ ವರ್ಷಗಳಲ್ಲಿ ಅದೇನಾಯ್ತೋ, ರಂಗನಾಥ ಇದ್ದಕ್ಕಿದ್ದಂತೆ ಮಾಯಕವಾಗಿಬಿಟ್ಟ!” ತನಗಾದ ಜೀವನಾನುಭವಕ್ಕೆ ಸುಬ್ಬಮ್ಮ ಗುಂಡುಕಲ್ಲಿನ ಹಾಗೆ ಆದ ಪರಿಯೋ! (“ಅವಳ ಕಣ್ಣುಗಳಲ್ಲಿ ಮಿಂಚುತ್ತಿದ್ದ ವಿಚಿತ್ರ ಹೊಳಪು ಸಂಪುಷ್ಟದೊಳಗಿನ ಸಾಲಿಗ್ರಾಮವಾಗಿಯೇ ಉಳಿದಿಬಿಟ್ಟಿತು.”)

ಇಲ್ಲಿದ್ದಾನೆ ನೋಡಿ, ಪಾತ್ರೋಳಿ ಗಣಪ. “ಲೆಕ್ಕದಿಂದ ಹೆಚ್ಚು ಸಾಧುವಾಗಿರುವ” ಈತ ತನ್ನ ಎಟುಕಿಗಿಂತ ತೀರ ಎತ್ತರದ ಸಾಹಿತ್ಯ-ಸನ್ಮಾನದ ಗೊಡವೆಗೆ ಹೊರಟ ಮೊದ್ದು-ಮುಗ್ಧ ಘನಸ್ತಿಕೆಯೋ! ಕೊನೆಯಲ್ಲಿ “ಸುತ್ತೂ ತೇದ ಗಂಧದ ಕೊರಡಾದ” ಚೊಗರು ಚೋದ್ಯವೋ…

ಸಸ್ಯದ ಈಚೆ ಬದಿಗೆ ಬನ್ನಿ ನೋಡುವ. ಇಲ್ಲಿ ಕಾಣಿಸುವ ಎಳೆಯ ಟಿಸಿಲು ಚಿಗುರುಗಳೇ ಬದುಕಿನ ಅತ್ಯಮೂಲ್ಯ ಆಸ್ತಿಯಾದ ಬೆಚ್ಚಗಿನ ಬಾಲ್ಯದ “ಬಿಂಗ್ರುಟ್ಟಿ” ಅನುಭವ ಕಥನಗಳು, ತುಂಬಾ ಅಪ್ಯಾಯಮಾನ. “ದಂಡಯಾತ್ರೆ”, “ಮಲ್ಲಿಗೆ ಮೊಗ್ಗ ತಂದೇನ”, “ನೆನಪಿನ ಮೊಗಸಾಲೆ” ಇವೆಲ್ಲ ಈ ವರ್ಗಕ್ಕೆ ಸೇರಿವೆ. (“ಯಶಸ್ಸು ಸೋಲುಗಳಿಗೆಲ್ಲ ನಾವು ಏನೇನೂ ಬೆಲೆ ಕೊಡುತ್ತಿರಲಿಲ್ಲ. ಹಸಿ ಹಸಿರಾಗಿ ಕುಣಿಯುವುದು, ಬೈಸಿಕೊಳ್ಳುವುದು, ಕೋಂಗಿ ಕಟ್ಟುವುದು, ಚಾಳಿಸುವುದು, ಎಡವಿ ಬೀಳುವುದನ್ನೆಲ್ಲ ನಾವು ಕುಶಾಲಾಗಿಯೇ ಕಾಣುತ್ತಿದ್ದೆವು, ನಾವು ಬರೀ ಮಕ್ಕಳಾಗಿದ್ದೆವು”.) ನನಗಂತೂ ಇವುಗಳತ್ತ ಮತ್ತೆ ಮತ್ತೆ ಕಣ್ಣು ಹಾಯಿಸಬೇಕೆಂಬ ಮರ್ಲು..

ಓ ಈ ಪಕ್ಕಕ್ಕೆ ಬಂದು ಗಮನಿಸಿ. ಈ ಶಾಖೆ ಮಣಿಮಾಲಿನಿಯಕ್ಕನ ಸ್ಪೆಶಾಲಿಟಿ. ಹಳಯ ಬಂಗಾರದಲ್ಲಿ ಗಟ್ಟಿಗೊಂಡ ಹೂವುಗಳನ್ನು ಕರಗಿಸಿ ಅವುಗಳಿಂದ ಜೀವ ಮಿಡಿಯುವ ಇಂದಿನ ಕಾಲದ ಹೂವುಗಳನ್ನು ಅರಳಿಸುವುದೆಂದರೆ ಆಕೆಗೆ ತುಂಬ ಪ್ರಿಯ. ನಮ್ಮ ಪುರಾಣಗಳ ಊರ್ಮಿಳೆ, ಅಹಲ್ಯೆ, ಅಮೃತಮತಿ ಇವರನ್ನೆಲ್ಲ ಜಂಗು ಹಿಡಿದ ಚೌಕಟ್ಟುಗಳಿಂದ ಹೊರತಂದು ಹೊಸತಾಗಿ ನೋಡಿದಾಗ, ಅವರು ತಂತಮ್ಮ ಜೀವನದಲ್ಲಿ ಎದುರಿಸಿದ ಘಟನೆಗಳು, ಮಾಡಿರುವ ಆಯ್ಕೆಗಳು, ತಲೆತಲಾಂತರದಿಂದ ಇತರರು ಅವರನ್ನು ನೋಡಿರುವ ದೃಷ್ಟಿಕೋನ…ಇವೆಲ್ಲ ಸೂಕ್ಷ್ಮವಾಗಿಯಾದರೂ, ದೃಢವಾಗಿ ಹೇಗೆ ಬದಲಾಗುತ್ತವೆ ನೋಡಿ. ಈ ಕಥಾಕುಸುಮಗಳಲ್ಲಿ ಕಾಣಿಸಿಕೊಳ್ಳುವ ನಿರೂಪಕನಿಗೆ ಸ್ಥಾಪಿತ ಪುರಾಣಗಳಾಚೆಗಿನ , ಕಣ್ಣಿಗೆ ಕಾಣದ ವ್ಯಕ್ತಿತ್ವಗಳ ಶೋಧ ಮುಖ್ಯವಾಗುತ್ತದೆ. ಅವುಗಳನ್ನು ಅರಿಯುವ ಕುತೂಹಲ, ಸಹೃದಯತೆ ಆತನಿಗಿದೆ. ನೋಡಿ ಒಂದು ರೀತಿಯ ಭರವಸೆ ಮೂಡುತ್ತದೆಯಲ್ಲವೆ? ಇದು ಈ ಕಾಲದ ಅಗತ್ಯವೂ ಹೌದು. ಇಲ್ಲಿನ ಪಿಸುನುಡಿಗಳನ್ನು ಮೌನವಾಗಿ ಆಲಿಸಿ. “ಲಕ್ಷ್ಮಣನೆಂದೂ ಒಂಟಿಯಾಗಿ ಊರ್ಮಿಳೆಯ ಅಂತರಂಗದ ಕದವನ್ನು ತಟ್ಟುತ್ತಿರಲಿಲ್ಲ. ಲಕ್ಷ್ಮಣನ ಪಕ್ಕದಲ್ಲೇ ಸಾಗುತ್ತಿದ್ದ ರಾಮನ ದೃಢವಾದ ಹೆಜ್ಜೆಗಳ ಸಪ್ಪಳ ಹತ್ತಿರವಾದಂತೆಲ್ಲ ಆ ಕದಗಳು ಅವಕ್ಕವೇ ಭದ್ರವಾಗಿ ಬೆಸೆದುಕೊಂಡುಬಿಡುತ್ತಿದ್ದವು. ತಟ್ಟುವ ಕೈಗಳು ಸೋಲುತ್ತಿದ್ದವು, ಕಾಯುತ್ತಿದ್ದ ಕಾಲುಗಳು ಮರಳುತ್ತಿದ್ದವು.”( “ಬಿರುಕು”)

“ವೈವಾಹಿಕ ಬಂಧನವನ್ನು ಆತ ಅರ್ಥೈಸಿಕೊಂಡ ರೀತಿಯ ಬಗೆಗೆ ನನ್ನಲ್ಲಿ ಔದಾಸೀನ್ಯವಿತ್ತು. ಸಾಧನೆಯ ಒಂದೊಂದು ಮಜಲನ್ನು ಗೆದ್ದುಕೊಂಡಾಗಲೂ ಆತ ಉನ್ಮತ್ತನಾಗುತ್ತಿದ್ದ ರೀತಿಗೆ ನಾನು ಹೇಸಿಕೊಳ್ಳುತ್ತಿದ್ದೆ. ಕಾಮಪಿಪಾಸೆ, ರಕ್ತ ಪಿಪಾಸೆಗೆ ಸಂವಾದಿಯಾಗಿಯೇ ಅವನಲ್ಲಿದ್ದ ಪ್ರಸಿದ್ಧಿಯ ಪಿಪಾಸೆಯನ್ನು ನಾನು ಗುರುತಿಸಿಕೊಳ್ಳುತ್ತಿದ್ದೆ. ಆದ್ರೆ ಇದು ಒಂದು ಆತ್ಮಘಾತಕ ಪ್ರಕ್ರಿಯೆಯೆಂಬುದನ್ನು ಏಕಮುಖ ಗ್ರಹಣವೆಂಬುದನ್ನು ಅವನ ಪ್ರಜ್ಙೆಗೆ ದಾಟಿಸುವುದರಲ್ಲಿ ನಾನು ಸೋತುಹೋಗಿದ್ದೆ”. (ಅಹಲ್ಯೆ, ಬಿಸಿಲು ಕುದುರೆ)

“ಹೆಣ್ಣು ಹೇಗಿರಬೇಕೆಂಬ ನಿಯಮದಾಚೆಗೆ ಬದುಕಹೊರಟಾಗ ನೀವು ಒಬ್ಬೊಬ್ಬರೂ ಖಡ್ಗಹಸ್ತರಾಗಿ ಅವಳ ಸಂಹಾರಕ್ಕೆ ಅಣಿಯಾಗುತ್ತೀರಿ. ಆ ಛಿದ್ರಗೊಂಡ ಜೀವಂತಿಕೆಯಲ್ಲಿ ಕೃತಕೃತ್ಯತೆಯನ್ನು ಕಾಣುತ್ತೀರಿ. ಇದಕ್ಕೆ ಔದಾರ್ಯ, ಮಾನವೀಯತೆ ಎನ್ನುತ್ತಾರೇನು ನಿಮ್ಮ ಶಬ್ದಕೋಶದಲ್ಲಿ?…ನನಗೆ ದೈವತ್ವಕ್ಕೇರುವುದು ಬೇಕಾಗಿಲ್ಲ!” (ಅಮೃತಮತಿ)

ನಾನು ಆಗಾಗ ಮುಡಿಯುವ ಈ ಹೂವಿನ ಹೆಸರು “ಅಭಿಯಾನ”. ಹೆಣ್ಣಿಗೆ ತಾಯ್ತನ ಅನಿವಾರ್ಯವೇ ಎಂಬ ಸವಾಲು ಈ ಹೂವಿನ ಗಂಧ. ಜೈವಿಕ ಸೃಷ್ಟಿ ಮತ್ತು ಸೃಜನಶೀಲ ಸೃಷ್ಟಿ ಇವುಗಳ ನಡುವಿನ ತುಲನೆಯನ್ನು ಎರಡೂ ಪರಿಗಳ ಸೃಷ್ಟಿಕರ್ತೆಯಾದ ಸ್ತ್ರೀಯ ಕಣ್ಣುಗಳಿಂದಲೇ ನೋಡಿದರೆ ಸೊಗಸು. ಇಲ್ಲಿಯ ಕೊನೆಯ ಸಾಲುಗಳು ಹೃದಯವನ್ನು ತಟ್ಟದಿರಲು ಸಾಧ್ಯವೇ!

ನಿಮ್ಮ ಗಮನಕ್ಕೆ ಒಂದು ವಿಷಯ ಬಂತೋ ಇಲ್ಲವೋ ಗೊತ್ತಿಲ್ಲ. ನಿನ್ನೆ ಬಂದವರೊಬ್ಬರು ಹೇಳಿದ ವಿಷಯವಿದು: ಈ ಸಸ್ಯದುದ್ದಕ್ಕೂ ಹರಡಿರುವ ಒಂದು ಮುಖ್ಯ ವಿನ್ಯಾಸವೆಂದರೆ ಘರ್ಷಣೆಯ ಹಿಂದಿನ ಮನೋಸ್ಥಿತಿ ಮತ್ತು ಅಮಾಯಕತೆ, ಮುಗ್ಧತೆಗಳ ಮೇಲಣ ಆಕ್ರಮಣ. “ನಾನೊಂದು ಕನಸ ಕಂಡೆ”ಯಲ್ಲಿನ  ಮತ್ಸ್ಯಕನ್ಯೆ  ಮೀನಾಕ್ಷಿ ಕೊನೆಗೂ ಸಿದ್ರಾಮ ಒಡ್ಡಿದ ಗಾಳವನ್ನು ಅಗಿದು ಹೂಡಿ ಮಾಡಿ ಗಾಳಿಗೆ ತೂರಬಹುದು ಎನ್ನುವ ಕಲ್ಪನೆ, ಸಾಧ್ಯತೆಯೇ ಬಾಡಿದ ಕಂಗಳಿಗೆ ಹೊಳಪು ನೀಡುತ್ತವೆಯಲ್ಲವೆ!

ಹೇಳುತ್ತಾ ಹೋದರೆ ಎಷ್ಟೋ  ಹೇಳಬಹುದು ಇವರೇ. “ಯಮುನೆ ಹೇಳಿದ ಕತೆ” ಯಲ್ಲಿನ  ಸಾಗರ-ಯಮುನೆಯರ ಸಂಬಂಧ, “ದರ್ಪಣ-ದರ್ಶನ”ದಲ್ಲಿ ಒದಗಿ ಬರುವ ಸವಾಲುಗಳು ನಿಮ್ಮ ಈವರೆಗಿನ ಗ್ರಹಿಕೆಗಳನ್ನು ತಿರುಗಿ ನೋಡುವಂತೆ ಒತ್ತಾಯಿಸಿಯಾವು.

ಹೊತ್ತಾಯಿತು, ಹೋಗಿ ಬರುವೆನೆಂದಿರಾ? ಒಳ್ಳೆಯದು. ಆಗಾಗ ಬರುತ್ತಿರಿ. ಪ್ರತಿ ಸಲ ಬಂದಾಗಲೂ ಹೊಸತನ್ನು ಕಾಣುವಿರಿ. ಯಾನವೆಂದರೆ ಒಂದರ್ಥದಲ್ಲಿ ಅದೇ ತಾನೆ. ಹೊಸ ನಾಡು, ಹೊಸ ದೃಶ್ಯಗಳ ಹುಡುಕಾಟವಲ್ಲ, ಹೊಸ ಕಣ್ಣುಗಳ ನೋಟ! ನಮ್ಮ ಈ ಸಸ್ಯಕಾಶಿ ಸದಾ ಹಚ್ಚಹಸಿರಾಗಿರಲಿ, ನಿಮ್ಮ ನೋಟದಲ್ಲಿಯೂ ಸದಾ ಹೊಸತನವೇ ಇರಲಿ. ಆಗದೆ?

10 Responses

 1. `ಬಾಜಿರ ಕಂಬದ ಒಳಸುತ್ತು’- ಮಣಿಮಾಲಿನಿ ಯವರ ಕೃತಿಯ ಪರಿಚಯವನ್ನು ಮಾಡಿದ ರೀತಿಗೆ ಅಹಲ್ಯಾ ಬಲ್ಲಾಳರಿಗೆ ಶರಣು. “ಆಡು ಭಾಷೆ ಹವ್ಯಕದ ಗಂಧ, ಅದರದೇ ಆದ ನುಡಿಗಟ್ಟು,… ಕಾಕು,…ಬಾಯಾಳ್ತಿ, ಮರ್ಲು.“
  (“ಅವಳ ಕಣ್ಣುಗಳಲ್ಲಿ ಮಿಂಚುತ್ತಿದ್ದ ವಿಚಿತ್ರ ಹೊಳಪು ಸಂಪುಷ್ಟದೊಳಗಿನ ಸಾಲಿಗ್ರಾಮವಾಗಿಯೇ ಉಳಿದಿಬಿಟ್ಟಿತು.”
  “ಲೆಕ್ಕದಿಂದ ಹೆಚ್ಚು ಸಾಧುವಾಗಿರುವ”
  “ಸುತ್ತೂ ತೇದ ಗಂಧದ ಕೊರಡಾದ”
  ಚೊಗರು ಚೋದ್ಯವೋ
  ಬಿಂಗ್ರುಟ್ಟಿ
  “ಯಶಸ್ಸು ಸೋಲುಗಳಿಗೆಲ್ಲ ನಾವು ಏನೇನೂ ಬೆಲೆ ಕೊಡುತ್ತಿರಲಿಲ್ಲ. ಹಸಿ ಹಸಿರಾಗಿ ಕುಣಿಯುವುದು, ಬೈಸಿಕೊಳ್ಳುವುದು, ಕೋಂಗಿ ಕಟ್ಟುವುದು, ಚಾಳಿಸುವುದು, ಎಡವಿ ಬೀಳುವುದನ್ನೆಲ್ಲ ನಾವು ಕುಶಾಲಾಗಿಯೇ ಕಾಣುತ್ತಿದ್ದೆವು, ನಾವು ಬರೀ ಮಕ್ಕಳಾಗಿದ್ದೆವು”.
  “ ಲಕ್ಷ್ಮಣನೆಂದೂ ಒಂಟಿಯಾಗಿ ಊರ್ಮಿಳೆಯ ಅಂತರಂಗದ ಕದವನ್ನು ತಟ್ಟುತ್ತಿರಲಿಲ್ಲ. ಲಕ್ಷ್ಮಣನ ಪಕ್ಕದಲ್ಲೇ ಸಾಗುತ್ತಿದ್ದ ರಾಮನ ದೃಢವಾದ ಹೆಜ್ಜೆಗಳ ಸಪ್ಪಳ ಹತ್ತಿರವಾದಂತೆಲ್ಲ ಆ ಕದಗಳು ಅವಕ್ಕವೇ ಭದ್ರವಾಗಿ ಬೆಸೆದುಕೊಂಡುಬಿಡುತ್ತಿದ್ದವು. ತಟ್ಟುವ ಕೈಗಳು ಸೋಲುತ್ತಿದ್ದವು, ಕಾಯುತ್ತಿದ್ದ ಕಾಲುಗಳು ಮರಳುತ್ತಿದ್ದವು.”
  “ಅವನಲ್ಲಿದ್ದ ಪ್ರಸಿದ್ಧಿಯ ಪಿಪಾಸೆಯನ್ನು ನಾನು ಗುರುತಿಸಿಕೊಳ್ಳುತ್ತಿದ್ದೆ. ಆದ್ರೆ ಇದು ಒಂದು ಆತ್ಮಘಾತಕ ಪ್ರಕ್ರಿಯೆಯೆಂಬುದನ್ನು ಏಕಮುಖ ಗ್ರಹಣವೆಂಬುದನ್ನು ಅವನ ಪ್ರಜ್ಙೆಗೆ ದಾಟಿಸುವುದರಲ್ಲಿ ನಾನು ಸೋತುಹೋಗಿದ್ದೆ”.
  ಎಂಥ ಅಧ್ಯಯನ ಯೋಗ್ಯ ಸಾಲುಗಳು. ಪದಪುಂಜಗಳು. ಮನನೀಯವಾಗಿವೆ.
  ನಿಮ್ಮ ಪುಸ್ತಕ ಪರಿಚಯವೇ ಅದನ್ನೊಂದು ಸುಗ್ರಾಹ್ಯ ಎತ್ತರಕ್ಕೆ ಕೊಂಡೊಯ್ದಿದೆ. ಅಂತೆಯೇ ಪುಸ್ತಕ ಓದುವ ಹಂಬಲ ನೂರ್ಮಡಿಯಾಗಿದೆ.
  ನೀವು ಅದೇ ನನ್ನ ಹರಟೆಯ ಗೆಳತಿ ಅಹಲ್ಯಾನಾ ಎಂಬ ಸಂಶಯ ಬರುತ್ತಿದೆ!! ಹ್ಯಾಟ್ಸ್ ಆಫ್ ಮಣಿಮಾಲಿನಿ ಎಂಬ ಜೀವಕ್ಕೆ, ಅಹಲ್ಯಾ ಬಲ್ಲಾಳ ಎಂಬ ಪ್ರತಿಭೆಗೂ…

  • Ahalya Ballal says:

   ಓಹೋ. ಇಷ್ಟೊಂದು ಗಮನಕೊಟ್ಟು ಪ್ರೀತಿಯಿಂದ ಓದಿದಿರಲ್ಲ ಸರ್. ಖುಶಿಯಾಯ್ತು. Thank you so much!

 2. ಈ ಪುಸ್ತಕ ಕೊಳ್ಳಲು ಯಾರನ್ನು ಸಂಪರ್ಕಿಸಬೇಕು

  • Ahalya Ballal says:

   ಓದಿ ಸ್ಪಂದಿಸಿದ್ದಕ್ಕೆ ಧನ್ಯವಾದಗಳು ಸರ್.
   ಈ ಪುಸ್ತಕವನ್ನು ಪ್ರಕಟಿಸಿದವರು: ವಸುಧಾ ಪ್ರಕಾಶನ, ಪಂಜಳ, ಉಪ್ಪಿನಂಗಡಿ, ದ.ಕ. ಜಿಲ್ಲೆ -574241

 3. Dr. Chandra Aithal says:

  ಅಹಲ್ಯಾ ಬಲ್ಲಾಳರ ಕೃತಿ ವಿಮರ್ಶೆಯ ಪರಿ ಬೆರಗಾಗಿಸುತ್ತದೆ. ಕೃತಿಯ ತೀರಾ ಸಮೀಪ ಇದ್ದುಕೊಂಡು — ಮೂಲ ಲೇಖಕಿಯೇ ನಮ್ಮೊಡನೆ ಸಂವಾದಿಸುತ್ತಿದ್ದಂತೆ — ಕೃತಿ ಮೂಡಿಸುವ ಭಾವನೆಗಳನ್ನೂ ಮೀರಿದಂಥ ವಿಮರ್ಶಾ ಕೌಶಲ! ಬಹು ಸಮರ್ಥ ಲೇಖಕಿ ಎಂಬುದಂತೂ ನಿಸ್ಸಂಶಯ. ಇವರದೇ ಬೇರೆ ಬರಹಗಳಿದ್ದರೆ ದಯವಿಟ್ಟು ತಿಳಿಸಿ.

  ಚಂದ್ರ ಐತಾಳ
  ಲಾಸ್ ಎಂಜಲ್ಸ್

  • ನಿಮ್ಮ ಸಹೃದಯತೆಗೆ ನನ್ನಿ.
   ಈ ಲೇಖನದಲ್ಲಿ ಏನಾದರೂ ಮೌಲ್ಯ ಕಂಡಿದ್ದರೆ ಅದು ಮೂಲ ಲೇಖಕಿಯ ಬರವಣಿಗೆಯ ಶಕ್ತಿಯೇ ಹೊರತು ಇನ್ನೇನೂ ಅಲ್ಲ. ‘ವಿಮರ್ಶೆ’ ಎನ್ನುವ ಪದವೇ ಭಯ ಹುಟ್ಟಿಸುತ್ತದೆ ನನ್ನ ಪಾಲಿಗೆ. ಇದು ವಿಮರ್ಶೆ ಅಲ್ಲ. ನನಗೆ ಹತ್ತು ವರ್ಷಗಳ ಹಿಂದೆ ಅನಿಸಿದ್ದು ಅಷ್ಟೇ.
   ನನಗೆ ತಿಳಿದ ಮಟ್ಟಿಗೆ ಹೇಳುವುದಾದರೆ, ಮಣಿಮಾಲಿನಿ ‘ಪ್ರಲೋಭನೆ’ ಮತ್ತು ‘ದ್ರೌಪದಿ ಸಮೀಕ್ಷೆ'(ಸಂಶೋಧನಾ ಸಂಪ್ರಬಂಧ) ಎಂಬ ಕೃತಿಗಳನ್ನೂ ರಚಿಸಿದ್ದಾರೆ. ನಾನಿನ್ನೂ ಅವುಗಳನ್ನು ಓದಬೇಕು.

 4. Vijaykumar wadawadagi says:

  ಓದುವ ಹಂಬಲ ಹೆಚ್ಚಿಸಿದ ಸಾಲುಗಳು…..

 5. ಜಯಲಕ್ಷ್ಮೀ ಪಾಟೀಲ್ says:

  ಅಪಾರ ಮೆಚ್ಚುಗೆ ನಿಮ್ಮ ಬರವಣಿಗೆಯ ಮೋಡಿಗೆ, ಗುತ್ತಾಗಿ ಕಟ್ಟಿ ಘಮ್ಮೆನ್ನುವ ಪದಗಳ ಹದಕ್ಕೆ. ಮಣಿಮಾಲಿನಿ ಅವರೊಂದಿಗಿನ ನನ್ನ ಒಡನಾಟ ನಿಮ್ಮಷ್ಟಿಲ್ಲವಾದರೂ ಆ ಮೂರ್ನಾಲ್ಜು ಭೇಟಿಯಲ್ಲೆ ಅವರು ತುಂಬಾ ಆಪ್ತರೆನಿಸಿಬಿಟ್ಟಿದ್ದರು. ಅವರು ಇನ್ನಿಲ್ಲ ಅನ್ನೊ ಸುದ್ದಿ ಅಂದು ಕೇಳಿದಾಗ ಆದ ಸಂಕಟ ಅವರನ್ನು ನಾನು ಅಷ್ಟು ಹಚ್ಚಿಕೊಂಡಿದ್ದೆ ಅನ್ನೋದರ ಅರಿವು ಮಾಡಿಸಿತ್ತು. ಊರ್ಮಿಳೆಯನ್ನು ನಾಟಕವಾಗಿ ಬರೆದುಕೊಡುತ್ತೇನೆಂದ ಅವರ ಮಾತು ಉಳಿದೇ ಹೋಯಿತು…

  • ನಿಮಗೆ ಮೆಚ್ಚುಗೆಯಾಗಿದ್ದು ಖುಶಿ, ಜಯಲಕ್ಷ್ಮೀ.
   ಮಣಿಮಾಲಿನಿಯವರೊಂದಿಗೆ ನನಗೂ ಅಂಥಾ ಒಡನಾಟವೇನಿರಲಿಲ್ಲ. ಒಂದೆರಡು ಸಲ ಅವರ ಮನೆಯಲ್ಲಿ ಮತ್ತು ಬಿಡಿಬಿಡಿ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಅವರನ್ನು ಭೇಟಿಯಾಗಿದ್ದೆ. ಮುಂಬಯಿ ವಿವಿ ಕನ್ನಡ ವಿಭಾಗದ ವಿದ್ಯಾರ್ಥಿ ಸಮೂಹಕ್ಕೆ ತಾಯಿಸಮಾನರಾಗಿದ್ದರು.
   ಒಂದೇ ಒಂದು ಸಲ ಅವರ ಭಾಷಣ ಕೇಳಿದ್ದೆ. ಅಬ್ಬಾ! ಅನಿಸಿತ್ತು.

Leave a Reply

%d bloggers like this: