ದೇವಪುಷ್ಪದ ಕರುಳ ಹಾಡು

 

 

 

ಎನ್ ರವಿಕುಮಾರ್ / ಶಿವಮೊಗ್ಗ

 

 

 

 

ಮತ್ತೆ ದೀಪಗಳು ಹೊತ್ತಿಕೊಂಡವು
ಮುಂಬಾಗಿಲ ಸಜ್ಜೆಗೆ  ಬಣ್ಣ ಬಣ್ಣದ
ಆಕಾಶ ಬುಟ್ಟಿಗಳನ್ನು ತೂಗು ಬಿಡಲಾಗಿದೆ
ಝಗಮಗಿಸುವಂತೆ
ಮಲ್ಲಿಗೆ ಹೂವು ದಂಡೆಗಳು ಕೋಣೆ ಸೇರಿಕೊಂಡಿವೆ
ಕತ್ತಲನ್ನು ಉನ್ಮತ್ತಿಸುವಂತೆ  ಮಂದ ಬೆಳಕು ..‌
ನಾನಿನ್ನೂ ರೆಡಿಯಾಗಿಲ್ಲ.
ಹಜಾರದಲ್ಲಿ ಸಾಲು ನಿಂತಿದ್ದಾರೆ ಅವರಿಗೀಗ ಹೊಸದೊಬ್ಬಳು
ಹಾದರಗಿತ್ತಿಗೆ ಮೊಹರು ಒತ್ತುವ  ಉತ್ಸಾಹ

ದಟ್ಟ ಕಡುಗಪ್ಪಿನ  ತುರುಬಿನಲ್ಲಿ ಹೆಣಿಗೆ ಸಿಕ್ಕು ಬಿಡಿಸುವುದು ಮುಗಿದಿಲ್ಲ
ಅವನು  ಮನಬಂದಂತೆ ಬೆರಳಾಡಿಸಲು
ಮದ ಏರಿ  ಹಿಡಿದೆಳೆದು  ಜುಮ್ಮಿರಿದು
ಎಳೆ ಎಳೆ ಹೆರಳು ಹಾಸಿಗೆ ತುಂಬೆಲ್ಲಾ ಚೆಲ್ಲಾಡಲು
ಸಲೀಸು ಮಾಡಿಕೊಡಬೇಕಿದೆಯಲ್ಲಾ.
ಕೆನ್ನೆ-ತುಟಿಗಳು ಇನ್ನೂ ಈಗಷ್ಟೇ ಅರಳಿದ ದೇವಪುಷ್ಪಗಳಂತಿವೆ  ನಿಜ,
ಆದರೂ ಅವು ಇನ್ನಷ್ಟು ಮೆತ್ತಗೆ, ದಪ್ಪಗೆ, ಕೆಂಪಗೆ ಕಾಣಲು
ಸ್ನೋ, ಪೌಡರ್, ತುಟಿಬಣ್ಣ ಮೆತ್ತಿಕೊಳ್ಳಲೇ ಬೇಕು
ಅವುಗಳಿಗಿಂದು ಮ..ಧುರ ನೋವನ್ನು ಪರಿಚಯಿಸಬೇಕಿದೆ
ಗಂಧದುಡಿಯ
ಪರಾಗವನ್ನು ಚಿಮುಕಿಸಿಕೊಳ್ಳಬೇಕು
ಅವನ ಬೆವರ ಗಟಾರ ಘಮಲನ್ನೂ ಸುಗಂಧಗೊಳಿಸಲು
ಕಪ್ಪನ್ನು ರೆಪ್ಪೆಗಳಿಗೆ ತೀಡಿ ಇನ್ನಷ್ಟು ತಾಜಾ ಗೊಳಿಸಬೇಕು
ಮಿಂಚು ಮಿಣುಕಿನ ಸೀರೆ ಒಂದರಗಳಿಗೆಯಾದರೂ ಇರಲಿ
ಉಳಿದಂತೆ ಬೆತ್ತಲಾಗುವುದು ಇದ್ದಿದ್ದೆ. ಅವನಿಗಿಷ್ಟವಂತೆ- ಅವನಿಷ್ಟದಂತೆ

ಮಬ್ಬುಗತ್ತಲಲ್ಲಿ ಕಣ್ಣಿಗೆ ಕಣ್ಣು ನೆಟ್ಟು ನೋಡಲಾರದವನ
ಕಣ್ಣುಗಳೆಲ್ಲಾ ಹೆಣ್ತನದ ಮೇಲೆಯೇ ಹರಿದಾಡುತ್ತಿವೆ
ಹೂವುಗಳು ಕಪ್ಪಿಡಬೇಕು ಮಗ್ಗುಲಿಗೆ  ಸಿಲುಕಿ
ನರಳಬೇಕು  ಅವನು ಇನ್ನಷ್ಟು ಉನ್ಮತ್ತ ಗೊಂಡು
ಹೊರಳಾಡಲು
ಸುರತ ರಾತ್ರಿಯಲ್ಲಿ ಸುರಿದು ಹೋದ ಕಣ್ಣೀರಿನ
ಪರಿಚಯ  ಅವನಿಗೆ ಬೇಕಿಲ್ಲ
ಎದೆಯಲ್ಲಿ ಮಡುಗಟ್ಟಿದ್ದ ಹಾಡು ಹಿತವೆನಿಸಿಲ್ಲ
ಅವನೀಗ ಸೊಕ್ಕಿ ಸೊಲ್ಲಡಗಿ  ಬೆನ್ನು ತಿರುಗಿಸಿದ್ದಾನೆ.
ತೇಗಿ ಬಣ್ಣ ಬಣ್ಣದ ನೋಟುಗಳ ತೂರಿದ್ದಾನೆ
ಬಟ್ಟೆ ಹುಡುಕಾಡುವ ಹೊತ್ತಿಗೆ ಕೈಗೆ ಸಿಕ್ಕವನ್ನೆಲ್ಲಾ
ಜೋಡಿಸಿಕೊಂಡಿದ್ದೇನೆ: ಕಣ್ಣೀರಿನಲ್ಲಿ ನೆಂದಿವೆ
ಛಾವಣಿಯಲ್ಲಿ ಒಣ ಹಾಕಿದ್ದೇನೆ.

ಪೇಟೆಯಲ್ಲಿ ಜನಜಂಗುಳಿ ನೆರೆದಿತ್ತು
ನನ್ನನ್ನು ಕೊಂಡಾಡಲಾಗುತ್ತಿತ್ತು.  ಮೆರವಣಿಗೆಯೂ ಇತ್ತು
ಅವನಿದ್ದ, ಅವನಂತೆ ಹಲವರಿದ್ದರು
ನನಗಾಗಿ ನ್ಯಾಯ ಕೇಳಲಾಗುತ್ತಿತ್ತು
ನಕ್ಕು ಕಿಟಕಿ ಮುಚ್ಚಿದೆ
ಮತ್ತೆ ದೀಪಗಳು ಹೊತ್ತಿಕೊಂಡವು
ಹಜಾರದಲ್ಲಿ ಸಾಲು ನೆರೆದಿತ್ತು….

1 Response

  1. Sreenivasa p n says:

    It’s so blatant, her pain and how the men treat her as a tool of enjoyment.

Leave a Reply

%d bloggers like this: