ಅಮ್ಮ.. ಅವಳೊಂಥರಾ ವಿಸ್ಮಯ

 

 

 

 

ಕೃಷ್ಣ ಶ್ರೀಕಾಂತ ದೇವಾಂಗಮಠ

 

 

 

 

 

 

ನನ್ನಮ್ಮ ನನ್ನೊಳಗಿನ ಭಾವನೆಗಳ ಕಣಜ.

ನಾನೊಬ್ಬ ಭಾವಜೀವಿ ಆಗಿದ್ದೇನೆ ಎಂದಾದರೆ ಅಲ್ಲಿ ನನ್ನೆಲ್ಲಾ ಭಾವನೆಗಳ ಜೊತೆಗೂ ಅಮ್ಮನ ಬಿಡಲಾರದ ನಂಟಿದೆ.

ನಾನು ಆಸ್ಪತ್ರೆಯ ಹೆರಿಗೆ ವಾರ್ಡಿನಲ್ಲಿ  ಹುಟ್ಟಿದಾಗ ಅವಳೊಂದಿಗೆ ಅಪ್ಪ ಮತ್ತು ನನ್ನ ದೊಡ್ಡಮ್ಮ ಬಿಟ್ಟರೆ ಇನ್ಯಾರೂ ಇರಲಿಲ್ಲ. ಹಾಳು ಜಗಳಗಳು , ಕೋರ್ಟು ಕೇಸುಗಳು ನಮ್ಮ ಮಧ್ಯೆ ಎಂಥಾ ಗೋಡೆಗಳನ್ನು ಸೃಷ್ಟಿಸಿಬಿಡ್ತವೆ. ಒಮ್ಮೆ  ಇಂಥಹದ್ದೇ ಸಮಸ್ಯೆಗೆ ಅಮ್ಮ ವಿಷ ಸೇವಿಸಿದ್ದೂ ಇದೆ. ಆಗಿನ ನನ್ನ ನೋವು ಎಂದಿಗೂ ಮರೆಯುವಂಥದ್ದಲ್ಲ.

ಆಗ ಅಪ್ಪ ಕೆಲಸದ ನಿಮಿತ್ತ ಚಿತ್ರದುರ್ಗ ಜಿಲ್ಲೆಯಲ್ಲಿದ್ದರು, ನಾನೋ ಆಗ ಇನ್ನೂ ಮೂರನೇಯ ತರಗತಿಯ ಹುಡುಗ. ಏರಿಯಾದ ಜನವೋ ಕೊಂಚ ಕೂಡಾ ಮಾನವೀಯತೆ ಇಲ್ಲದವರು. ನನಗೆ ತಿಳಿದಂತೆ ಟೆಲಿಫೋನ್ ಬೂತಿಗಿ ಓಡಿಹೋಗಿ ಪೋಲೀಸ ಸ್ಟೇಷನ್ನಿಗೆ ಫೋನು ಮಾಡಿದರೆ ಅವರೋ ನಿಷ್ಪ್ರಯೋಜಕರಂತೆ ನೀನು ಅವರನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗು ನಾವು ಬ್ಯುಸಿ ಇದಿವಿ ಎಂದು ಫೋನಿಟ್ಟರು,

ಫೋನು ಮಾಡಿ ಸರ್ಕಾರಿ ಆರೋಗ್ಯ ವಾಹನ ಬರಹೇಳೋಣ ಎಂದು ಫೋನು ಮಾಡಿದರೆ ಅವರೂ ನಾವು ರಜೆಯಲ್ಲಿದ್ದೇವೆ ಬರಲಾಗುವುದಿಲ್ಲ ಎಂದುಬಿಟ್ಟರು.

ಕೊನೆಗೆ ದಾರಿ ತೋಚದೇ ಮನೆಗೆ ಓಡಿ ಹೋಗಿ ಕಪಾಟಿನಲ್ಲಿದ್ದ ಹಣವನ್ನು ಜೇಬಿಗಿಳಿಸಿ ಆಟೋ ಹಿಡಿದು ಅಮ್ಮನೊಂದಿಗೆ ಸರ್ಕಾರಿ ಆಸ್ಪತ್ರೆಗೆ ಹೋದರೆ ಡ್ಯೂಟಿ ಡಾಕ್ಟರ್ ಇಲ್ಲ ಅವರು ಬರುವುದು ತಡವಾಗುತ್ತದೆ ಕಾಯುತ್ತಿರಿ ಎಂದು ದಾದಿಗಳು ಕೂಡಾ ಕಾಲ್ಕಿತ್ತರು

ನನಗೊಂದು ತಿಳಿಯಲಿಲ್ಲ ಖಾಸಗಿ ಆಸ್ಪತ್ರೆಗೆ ಹೋದರೆ ಅವರು ಬಾಗಿಲಲ್ಲೇ ನಿಲ್ಲಿಸಿ ಇದು ಪೋಲಿಸ ಕೇಸ್ ಎಂದು ಹಾಗೇ ಆಚೆ ಕಳಿಸಿಬಿಟ್ಟರು. ಎಲ್ಲರೂ ಕೈ ಬಿಟ್ಟರೂ ಆಪದ್ಬಾಂದವ ಕೈ ಬಿಡಲಿಲ್ಲ. ಅದ್ಯಾರೋ ಅಲ್ಲೇ ಇದ್ದ ಓರ್ವ ವ್ಯಕ್ತಿ ಓಡಿಬಂದು ಉಪ್ಪು ಮಿಶ್ರಿತ ನೀರು ಕುಡಿಸಿ ಮುಕ್ಕಳಿಸಿದರೆ ವಿಷ ಆಚೆ ಬಂತು. ಅವರು ಯಾರೋ ಈಗ ಅವರ ಮುಖವೂ ಅಸ್ಪಷ್ಟ. ಮುಂದೆ ಎರಡು ದಿನ ಅಮ್ಮ ನಿತ್ರಾಣ ಸ್ಥಿತಿಯಲ್ಲೇ ಇದ್ದಳು, ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯೂ ಆಯಿತು, ಹೇಗೋ ಅಮ್ಮನನ್ನು ಉಳಿಸಿಕೊಂಡೆ. ಹೌದು ದೇವರು ಅವಳನ್ನು ನಮಗಾಗಿ ಉಳಿಸಿಕೊಟ್ಟಿದ್ದೂ ನಿಜವೇ.

ಮಕ್ಕಳು ತಪ್ಪು ಮಾಡಿದರೆ ಇನ್ನೊಮ್ಮೆ ಹಾಗೆ ಮಾಡದಿರಲಿ ಅಂತ ಅಪ್ಪ ಎರಡೇಟು ಹೆಚ್ಚೇ ಹೊಡೆಯುತ್ತಾರೆ. ಇದಕ್ಕೆಲ್ಲಾ ಅಡ್ಡಲಾಗಿ ನಿಂತು ಬಿಡಿಸಿ ಮುದ್ದಿಸಿ ಬುದ್ಧಿ ಹೇಳಿ ತಪ್ಪು ತಿದ್ದುತ್ತಾಳೆ, ನಾನು ತಿಂದ ಏಟುಗಳಿಗೆ ನನಗಿಂತಲೂ ಹೆಚ್ಛೇ ರೋದಿಸುತ್ತಾಳೆ. ಜೊತೆಗೆ ಬಾಸುಂಡೆ ಬರುವಂತೆ ಹೊಡೆದಿದ್ದೀರಿ ಎಂದು ಅಪ್ಪನೊಂದಿಗೆ ಜಗಳಕ್ಕಿಳಿಯುತ್ತಾಳೆ.

ಇನ್ನೊಂದು ಘಟನೆ. ಆಗ ಐದನೇ ತರಗತಿಯಲ್ಲಿ ಓದುತ್ತಿದ್ದೆ. ಶಾಲೆಗೆ ಹೋಗುವವನಂತೆ ಪಾಟಿಚೀಲ ಹೆಗಲಿಗೇರಿಸಿ ಹೊರಟರೆ ನೇರ ಗುಡ್ಡದ ಮೇಲಿದ್ದ ಗೆಳೆಯನ ಮನೆಗೆ ಹೋಗಿ ಅಲ್ಲಿ ಚಿಂಟು ಪೋಗೋ ಹಂಗಾಮಾ ದ ಅನಿಮೇಶನ್ ಸೀರಿಯಲ್ಲು , ಮೂವಿಗಳನ್ನಾ ನೋಡುತ್ತಾ ಕೂತುಬಿಡುತ್ತಿದ್ದೆ.

ಅವರ ಮನೆಯಲ್ಲಿ ಎಲ್ಲರೂ ಬೆಳಿಗ್ಗೆ ಹೊಲಕ್ಕೆ ಹೋದರೆ ಬರುವುದು ಸಂಜೆ ಏರಿದಮೇಲೆಯೇ. ಇನ್ನು ಕೆಲವು ಸಾರಿ ಗೆಳೆಯರೆಲ್ಲ ಸೇರಿ ಯಾವುದಾದರೂ ತೋಟ ಹೊಕ್ಕು ಮಾವು , ಕಬ್ಬು , ಶೇಂಗಾ, ಕದ್ದು ತಿನ್ನುತ್ತಿದ್ದೆವು. ಯಾವುದೋ ಮರದ ಕೆಳಗೆ ಬುಗುರಿ , ವಟಪಾ , ಲಗೋರಿ , ಗುಂಡಾ ಆಡುತ್ತಾ ಮಜವಾದ ಸಮಯ ಕಳೆದು ಬಿಡುತ್ತಿದ್ದೆವು.

ಸಂಜೆ ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಓದಿ ಕಲಿತು ಬಂದವನಂತೆ ಮನೆ ಸೇರಿಬಿಡುತ್ತಿದ್ದೆ. ಒಂದು ದಿನ ಹೀಗೆ ಅಡ್ಡಾಗಿ ಮನೆಗೆ ಹೋದರೆ ಒಳಗೆ ಅಪ್ಪನಿಗೆ ನಾನು ಶಾಲೆಗೆ ಹೋಗದೇ ಖಾಲಿಪೀಲಿ ತಿರುಗಾಡುತ್ತಿರುವ ವಿಷಯ ಗೊತ್ತಾಗಿಹೋಗಿತ್ತು ಸಿಕ್ಕರೆ ಚರ್ಮ ಸುಲಿಸಿಕೊಳ್ಳುವುದು ಗ್ಯಾರಂಟಿ ಅಂತ ಬಾಗಿಲಲ್ಲಿ ನಿಂತವನು ಹಾಗೆ ಓಟ ಕಿತ್ತೆ. ಅಮ್ಮ ನನಗಾಗಿ ಊರೆಲ್ಲಾ ಅದೆಷ್ಟು ಬಾರಿ ಸುತ್ತಿದ್ದಳೋ ಗೊತ್ತಿಲ್ಲ, ನಾನಂತು  ಮೂರ್ನಾಲ್ಕು ದಿನ ಮನೆ ಹತ್ತಿರ ಅಲ್ಲ ಓಣಿಯ ಸಮೀಪಕ್ಕೂ ಸುಳಿಯಲಿಲ್ಲ.

ಬಹುಶಃ ಐದೊ ಆರನೇ ದಿನವೋ ರಾತ್ರಿ ವಿಠ್ಠಲ ದೇವಸ್ಥಾನದಲ್ಲಿ ಮಲಗಿದ್ದಾಗ ಪೂಜಾರಿ ಸೆರೆಹಿಡಿದು ಕೊಟ್ಟುಬಿಟ್ಟರು. ಮನೆಗೆ ಕರೆದುಕೊಂಡು ಹೋದರೆ ಅಪ್ಪ ಒಂದೇಟೂ ಹೊಡೆಯಲಿಲ್ಲ ಅಮ್ಮ ಮಾತ್ರ ಅಂದು ರೊಟ್ಟಿ ಹಿಟ್ಟು ನಾದಿದಂತೆ ಚೆನ್ನಾಗಿ ಹಿಂಡಿದ್ದಳು. ಹೊಡೆದು ನನ್ನ ಜೊತೆ ತಾಸುಗಟ್ಟಲೇ ತಾನೂ ಅತ್ತು, ತುತ್ತು ತಿನ್ನಿಸಿ,  ಚೆವಿ ತಟ್ಟಿ ಮಲಗಿಸಿದ್ದಳು. ಅವಳ ಪ್ರೀತಿಯ ಗುರುತುಗಳು ಮೈ ತುಂಬಾ ಕೆಂಪು ಮೂಡಿಸಿದ್ದವು. ಅವಳೊಂದಿಗಿನ ನನ್ನ ಸ್ನೇಹ, ನೋವು ಹೇಳಲಸಾಧ್ಯವಾದದ್ದು, ಅಮ್ಮ ಅಂದರೆ ಹಾಗೇನೇ ಅವಳೊಂಥರಾ ವಿಸ್ಮಯ.

ಈಗಂತೂ ಅವರಿಂದ ದೂರವೇ ಇದ್ದೇನೆ. ಒಮ್ಮೊಮ್ಮೆ ಏನೋ ಮಾಡುತ್ತಿದ್ದಾಗ ಪಟ್ಟಂತ ನೆನಪಾಗಿ ಬಿಡ್ತಾರೆ,  ಹೇಳದೇ ಕೇಳದೇ ಕಣ್ಣೀರು ದಳದಳ ಇಳಿದುಬಿಡ್ತವೆ, ಫೋನು ಮಾಡಿ ಅವರ ಕ್ಷೇಮ, ನೋವು, ನಲಿವು ವಿಚಾರಿಸಿ ನನ್ನ ಸುಖ – ದುಃಖ ಎಲ್ಲ ಹೇಳಿಕೊಳ್ತೀನಿ.ಆಗಾಗ ಮೊಬೈಲ್ ಗ್ಯಾಲರಿಯಲ್ಲಿನ ಫೋಟೊಗಳನ್ನ , ಮಾತನಾಡುವಾಗ ರೆಕಾರ್ಡ್ ಮಾಡಿಕೊಂಡ ಆಡಿಯೋಗಳನ್ನ=, ಸಂತೋಷದ ಕ್ಷಣಗಳನ್ನು ಸೆರೆಹಿಡಿದುಕೊಂಡ ವಿಡಿಯೋ ತುಂಡುಗಳನ್ನಾ ನೋಡುತ್ತಾ ಕೇಳುತ್ತಾ ತೇವಗೊಂಡ ರೆಪ್ಪೆಗಳನ್ನಾ ಒರೆಸಿಕೊಳ್ತೇನೆ.

ಆಗೆಲ್ಲಾ ಎಂಥಾ ನೋವಿನಲ್ಲೂ ಖುಷಿ ನನ್ನೆದೆಯಲ್ಲಿ ಗೂಡು ಕಟ್ಟುತ್ತೆ. ಬಿಡುವಿದ್ದಾಗ ಕೆಲಸದ ಮಧ್ಯೆ ರಜೆ ಹಾಕಿ ಊರಿಗೆ ಹೊರಟು ಬಿಡ್ತಿನಿ, ಮನೆಯಲ್ಲಿ ಅಪ್ಪ – ಅಮ್ಮ ಇಬ್ಬರನ್ನೂ ಬಿಡುವಾಗಿರಿಸಿ ಅವರ ಬಾಲ್ಯದ ದಿನಗಳನ್ನು , ಆಸೆಗಳನ್ನು , ಕನಸುಗಳನ್ನು ತಿಳಿದುಕೊಳ್ಳುತ್ತಲೇ ಇರ್ತೀನಿ. ಕಾಲಿಗೆ ಎಣ್ಣೆ ಮಾಲಿಷ್ ಮಾಡ್ತೀನಿ, ಸಾಧ್ಯವಾದಷ್ಟು ಕೆಲಸಗಳಿಗೆ ಸಹಾಯ ಮಾಡ್ತೀನಿ , ಕೀಟಲೆ ಮಾಡ್ತಿನಿ, ತಮಾಷೆಯಾಗಿ ಮಾತಾಡಿ ಅವರೊಂದಿಗೆ ನಾನು ನಗ್ತೀನಿ, ಹಾಗೆ ಅವರಿಂದ ದೂರ ಇದ್ದಂತೆ ಅವರ ಸಂತೊಷವನ್ನಾ ತುಂಬಿಕೊಳ್ತಿನಿ. ಅಮ್ಮ ನನಗಾಗಿ ಸಿಹಿ ಸಿಹಿ ತಿಂಡಿ ಮಾಡಿಕೊಡ್ತಾಳೆ, ಸಂತೆಯಿಂದ ನನಗಂತಲೇ ಹೆಚ್ಚು ಹಣ್ಣುಗಳನ್ನ ಕೊಂಡು ತರ್ತಾಳೆ, ಉಳಿಸಿ ತಗೆದಿಟ್ಟ ದುಡ್ಡು ಕೊಡ್ತಾಳೆ, ಅಮ್ಮ ಅಂದ್ರೆ ಚಿಕ್ಕ ಚಿಕ್ಕ ಸಂಗತಿ,  ಸಣ್ಣ ಸಣ್ಣ ಖುಷಿ ಇವನ್ನೆಲ್ಲಾ ಮಿಸ್ ಮಾಡಿಕೊಳ್ಳಲೇಬಾರದು.

ಇವೆಲ್ಲವುಗಳ ಮಧ್ಯೆ ಕೆಲವೊಮ್ಮೆ ಹಾಳು ವಿಷಯಗಳು ತಲೆ ಕೊರದುಬಿಡ್ತವೆ. ಒಂದು ವೇಳೆ ಅವಳು ಇಲ್ಲವಾಗಿಬಿಟ್ಟರೇ ! ಒಂದು ಕ್ಷಣ ಜಗತ್ತು ಶೂನ್ಯ ಅನ್ನಿಸಿಬಿಡುತ್ತೆ, ನೀರಿಲ್ಲದ ಮರುಭೂಮಿ ಆಗಿಬಿಡ್ತೇನೆ, ಹೃದಯ ಗಾಣಕ್ಕೆ ಸಿಕ್ಕಿದ ಕಬ್ಫಿನಂತಾಗಿಬಿಡ್ತದೆ, ನನ್ನ ನೋವಿಗೆ ಯಾರೂ ಉತ್ತರ ಹೇಳುವವರಿಲ್ಲ , ಆ ದೇವರು ಕೂಡಾ. ಸ್ವತಃ ಅವಳೇ ನನಗೆ ಸಾಂತ್ವನ ಹೇಳಬೇಕೊ ಏನೊ ಗೊತ್ತಿಲ್ಲ.

ಜೀವನದುದ್ದಕ್ಕೂ ಅವಳ ಪ್ರೀತಿ, ಜೋಗುಳ ಸದಾ ಇರಲಿ ಎಂದು ಮನಸ್ಸು ಹಂಬಲಿಸುತ್ತದೆ.

5 Responses

 1. ಬೀರು ದೇವರಮನಿ says:

  ಈ ಮನಸುಗಳ ಭಾವುಕ ನಂಟಿನ ಕುರಿತು ಓದಿದಾಗ ಅದೇನೋ ಅಮ್ಮನ ಮೇಲಿನ ಪ್ರೀತಿ, ಮಮತೆ ಮತ್ತು ವಾತ್ಸಲ್ಯದ ಒಳನೋಟಗಳು ಸೂಕ್ಷ್ಮವಾಗಿ ಕಂಡುಬಂದವು. ಇಂತಹ ಮಹಾಮುದ್ದಿನ ಪ್ರೀತಿಸುವ ತಾಯಿಯನ್ನು ಪಡೆದ ನೀನು ಧನ್ಯವಂತ. ನಿಮ್ಮಿಬ್ಬರ ಕರುಳಬಳ್ಳಿಯ ಸಂಬಂಧ ಸದಾ ಸಿಹಿಯಂತಿರಲಿ ಮತ್ತೆ ದುಗುಡಗಳು ನಿಮ್ಮತ್ತ ಸುಳಿಯದಿರಲಿ.
  ಇದೊಂತರ ವಿಸ್ಮಯವೇ ಸರಿ ಮತ್ತೆ ಅಮ್ಮ ಕಣ್ಮುಂದೆ ಬಂದು ಕಾಡಿದಳು ಅವಳಿಲ್ಲದ ಲೋಕ ಊಹಿಸಿಕೊಳ್ಳುವುದಕ್ಕೂ ಅಸಾಧ್ಯ.
  ಅಮ್ಮನಿಗೆ ಅಮ್ಮನೇ ಸಾಟಿ ಈ ಲೇಖನ ಓದಿ ಕಣ್ಣುತುಂಬಿ ಬಂತು ಒಮ್ಮೆ ಭಾವುಕನಾದೆ..
  ಪ್ರೀತಿಯ ಮುದ್ದು ಅಮ್ಮನಿಗೆ ನನ್ನದೊಂದು ಒಲವಿನ ಶುಭಾಷಯ ತಿಳಿಸಿಬಿಡು ಕೃಷ್ಣ.

 2. Vasudev nadig says:

  ಆರ್ದ್ರ ಹೃದಯದ ಕೃಷ್ಣ ಚರಿತ್ರೆ

 3. ಅಮ್ಮ ಕಣ್ಣೆದುರಿರುವ ದೇವತೆ

  • mallika says:

   ಅಮ್ಮ ಅಂದ್ರೆ ಹಾಗೇನೇ.ಮಕ್ಕಳಿಗೋಸ್ಕರ ಗಾಣದೆತ್ತಿನ ಥರಾ ದುಡಿತಾರೆ. ಅವರನ್ನು ದೇವತೆ ಯಂತೆ ಪೂಜಿಸಬೇಕು.

 4. kalkesh says:

  ಅವ್ವನಿಗೆ ಅವ್ವನೇ ಸಾಟಿ

Leave a Reply

%d bloggers like this: