ಚಂದ್ರನ ರೊಟ್ಟಿಗಳು..

ಒಟ್ಟಾರೆ ಜೀವಿತದಲ್ಲಿ ಅಂಥ ಮುಂಜಾವು ಭೂಮಿ ಮೇಲೆ ಬರಲೇ ಇಲ್ಲವೇನೊ ಎಂಬ ಸಣ್ಣ ಹಳಹಳಿಕೆ ಎದೆಯಲ್ಲಿನ್ನೂ ಉಳಿದಿದೆ. ಎಂದೂ ಮರೆಯಲಾಗದ ಆ ಮುಂಜಾವನ್ನು ನೆನೆವುದಕ್ಕೂ ಮೊದಲು ನಮ್ಮ ಮನೆಯ ಬಗ್ಗೆ ಹೇಳಲೇ ಬೇಕು.

ಚಿಕ್ಕ ಮಕ್ಕಳನ್ನು ಗದರಿಸಿದರೆ ಬೆದರಿ ಮೂಲೆಯಲ್ಲಿ ಹೋಗಿ ಅಡಗುವಂತೆ ಓಣಿಯ ಮುಖ್ಯ ದಾರಿಯಿಂದ ಸುಮಾರು ಹದಿನೈದು ಅಡಿ ಹಿಂದೆ ಅಡಗಿ ಕುಳಿತಿತ್ತು ನಮ್ಮ ಮನೆ.  ಅದೂ ಹಳೇ ಕಾಲದ ದಪ್ಪ ದಪ್ಪ ಮಣ್ಣಿನ ಗೋಡೆಯ ಕರೀ ಹೆಂಚಿನ, ಮಳೆಗೆ ಸೋರುವ, ಬಿಸಿಲಿಗೆ ತಂಪಾಗಿರುವ, ಗಿಡ್ಡ ಬಾಗಿಲಿನ ಮನೆ. ಪೀಳಿಗೆಗಳಿಂದ ರಂಗು ಕಾಣದೆ ಬಣ್ಣಗೆಟ್ಟ ಬಾಗಿಲು. ಸೆಗಣಿ ಅರಲು ಮೆತ್ತಿ ಮೆತ್ತಿ, ಸುಣ್ಣ ಹಚ್ಚಿದ ಜೋರಾಗಿ ಕೈ ತಾಗಿದರೆ ಸಾಕು ಬುಳುಬುಳು ಉದುರುವ ಗೋಡೆಯ ಮುದ್ದಿನ  ಮನೆ.

ಅಕ್ಕಪಕ್ಕ ಕಡಪಾ ಕಲ್ಲಿನ  ಎರಡು ಕಟ್ಟೆಗಳು.  ಮುಂದಿನ ಅಂಗಳವೆಲ್ಲ ಇಡೀ ಓಣಿಯ ಮಕ್ಕಳ ಆಟದ ಮೈದಾನು. ನಮ್ಮ ಅಂಗಳಕ್ಕೆ ಬಿಡುವೇ ಇರುತ್ತಿದ್ದಿಲ್ಲ ಹಗಲಲ್ಲಿ. ಯಾರೋ ಎತ್ತನ್ನು ತಂದು ಕಟ್ಟಿದರೆ, ಇನ್ಯಾರೋ ಎಮ್ಮೆಯನ್ನು ಕಟ್ಟಿ ಮೈ ತೊಳೆಯುತ್ತಿದ್ದರು.  ಬಾಜೂ ಮನೆಯ ಬೂಬಮ್ಮಗಳ ಆಡುಗಳು, ಹೋತಗಳು, ಕೋಳಿಗಳು ಎಲ್ಲವೂ ಅಲ್ಲಿರುತ್ತಿದ್ದವು ಮನುಷ್ಯರೊಡನೆ.   ಉದ್ದನೆಯ ಕಡಪಾಕಲ್ಲಿನ ನಮ್ಮ ಕಟ್ಟೆ ಮೇಲೆ ಬೂಬೂಗಳೆಲ್ಲ ಉಂಡು ನಡುಮಧ್ಯಾಹ್ನವೆಲ್ಲ ಕೂತು ಹರಟುತ್ತಿದ್ದರು.

ಬಿಸಿಲಿಗೆ ಮೆಣಸಿನಕಾಯಿ, ಬಣ್ಣದ ಸಂಡಿಗೆ, ಹಪ್ಪಳಗಳೂ ಒಣಗಲು ಹರವಿರುತ್ತಿದ್ದವು.  ರಾತ್ರಿಯೂ ಕಟ್ಟೆಗೆ ಮತ್ತು ಅಂಗಳಕ್ಕೆ ನೆಮ್ಮದಿಯ ನಿದ್ದೆಯೆಂಬುದೇ ಇದ್ದಿಲ್ಲ. ಆಗಲೂ ಯಾರಾದರೂ ಆ ಕಟ್ಟೆಯ ಕಬ್ಜಾ ತಗೊಂಡಿರುತ್ತಿದ್ದರು. ಅಂಗಳವೆಂಬುದು ನಿತ್ಯ ಸಂತೆಯಾಗಿರುತ್ತಿತ್ತು. ಮಕ್ಕಳ  ಅಳು, ಹೆಂಗಸರ ಕೀರಲು ಕೂಗಾಟ.  ಸದಾ ಗಿಜಿಗಿಜಿ, ಗದ್ದಲ. ಈ ಮಾಯಕಾರ ಮುಂಜಾವಿದೆಯಲ್ಲ ಆಗ ಮಾತ್ರ ನನಗೆ ನಮ್ಮ ಅಂಗಳ ದೇವಲೋಕದ ಅಂಕಣವೆನಿಸುತ್ತಿತ್ತು.  ಹಾಗೂ ನಮ್ಮ ಮನೆ ಅರಮನೆ!

ಪ್ರಶಾಂತತೆಯ ಮುಸುಕುಹೊದ್ದು, ತಂಗಾಳಿ ಮಂದ ಮಂದವಾಗಿ ತೀಡುತ್ತಿರುವಾಗ, ನೀಲಿ ಆಕಾಶದ ತುಂಬೆಲ್ಲ ಚುಕ್ಕಿಗಳು ಕಣ್ಣು ಮಿಟುಕಿಸುತ್ತಿರವಾಗ…ನಮ್ಮ ಓಣಿ ಗಾಢ ನಿದ್ದೆಯಲ್ಲಿ ಮುಳುಗಿರುತ್ತಿತ್ತು. ಎಲ್ಲವೂ ನೀರವ, ಮತ್ತು ಪರಿಶುಭ್ರ….ನೀಲಿ..ನೀಲಿ…ಚುಮು ಚುಮು ಬೆಳಗು

ಬೆಳ್ಳಂ ಬೆಳಗ್ಗೆ ನಾಲಕೆಂದರೆ ನಾಲ್ಕು, ಇಲ್ಲಾ ನಾಲ್ಕೂವರೆಯೆಂದರೆ ಸರೀ..ನಾಲ್ಕೂವರೆಗೇ ನಳದಲ್ಲಿ ನೀರು ಬಂದುಬಿಡುತ್ತಿತ್ತು. ಈ ನಾಲ್ಕೂವರೆಯಿಂದ ಐದೂವರೆಗಿನ ಸಮಯವಿದೆಯಲ್ಲ ಅದು ಬೆಳ್ಳಿ ಬಟ್ಟಲಿನ ನೊರೆಹಾಲಿನಲ್ಲಿ  ಬೆಳ್ಳಕ್ಕಿ ಮೀಯುವ ಸಮಯ.   ಆಗಸದಲ್ಲಿ ಕನಸು ಚುಕ್ಕಿ ಇಡುವ ಸಮಯ.   ಶುಕ್ಲಪಕ್ಷವಾಗಿದ್ದರಂತೂ ಮನೆಯ ಎದುರಿನ ವಿಶಾಲ ಅಂಗಳದಲ್ಲಿ ಬಿಳಿ ಹಿಟ್ಟು ಚೆಲ್ಲಿದಂತೆ  ಬೆಳದಿಂಗಳ  ಹಾಸು. ಎಂಥ ಬೆಳದಿಂಗಳದು ! ತಿಂಗಳ ಬೆಳಕನ್ನು ಹಿಡಿದು ಸೋಸಿ ಸಾಣೆ ಹಿಡಿದು ಚಂದ್ರನ ರೊಟ್ಟಿಗಳನ್ನ ಮಾಡಿಬಿಡಬಹುದಿತ್ತು.

ನಮ್ಮ ಮನೆಯ ನಲ್ಲಿಯಿಂದ ಇನ್ನೂ ಮೂರು ಮನೆಗಳವರು ನೀರು ಹಿಡಿಯುತ್ತಿದ್ದುದರಿಂದ ಒಬ್ಬೊಬ್ಬರಾಗಿ ಕೊಡಪಾನ ತಂದಿಟ್ಟು ಹೋಗುತ್ತಿದ್ದರು. ಅವ್ವನೂ ಎದ್ದಿರುತ್ತಿದ್ದಳು.  ದಿನಾ ಕೊಡ, ಹಂಡೆಗಳನ್ನು ಹುಣಸೆ ಹಣ್ಣು ಉಪ್ಪು ಹಚ್ಚಿ, ಇಲ್ಲ ಬರೀ ಬೂದಿಯಿಂದಲೋ  ಉಜ್ಜಿ ತೊಳೆದು ಜಳ ಜಳ ಬೆಳಗಿ ಮತ್ತೆ ನೀರು ತುಂಬಿಸುವ ಕಾಯಕ ಅವ್ವನದು.   ನಸುಕಿನ ನೀರವತೆಯಲ್ಲಿ ತಿಂಗಳ ಬೆಳಕಿನಲ್ಲಿ ಮೀಯುವ ಸುಖವೂ,  ತಿಳಿ ಲಾಸ್ಯದಿಂದ ಪಲ್ಲವಿಸುವ ತಂಗಾಳಿಯ  ಹಿತವೂ ಕರಿಹೆಂಚಿನ ಮನೆಯೆದುರಿನ ಅಂಗಳವನ್ನು ಕಿನ್ನರಲೋಕದಂತೆ ಚೆಲುವಾಗಿಸುತ್ತಿತ್ತು.

ಅವಳೇ  ಬೆಳ್ಳಿಯಂತೆ ಹೊಳೆಯುವ ಶುಕ್ರಗ್ರಹವನ್ನು ತೋರಿಸಿ ಬೆಳದಿಂಗಳ ಹುಚ್ಚು ಹಿಡಿಸಿದ್ದು.  ಶುಭ್ರವಾದ ನೀಲಾಕಾಶದಲ್ಲಿನಬೆಳ್ಳಿಚುಕ್ಕಿಯನ್ನು ನೋಡುತ್ತ ನೋಡುತ್ತ ನೀರು ತುಂಬಿಸಿದ್ದೇ ಗೊತ್ತಾಗುತ್ತಿರಲಿಲ್ಲ.  ಹಿತ್ತಲಲ್ಲಿ ಸೂಜಿ ಮಲ್ಲಿಗೆ ಗಮಲು.   ಮಣ್ಣಿನ ಗೋಡೆಯ ನೆಮ್ಮದಿಯಲ್ಲಿ ಬೆಚ್ಚಗೇ ಮಲಗುವ ಕೌದಿಯ ಕನಸು.  ಕರಿಹೆಂಚಿನ ಒಳಹೊರ ಹಾಸಿ ಸೂಸಿತಂಪಾದ ಗಾಳಿಯಾಡುವ ಹವಾ ಮಹಲು !

ಅಡುಗೆ ಮನೆಯಲ್ಲಿ ಕೂತು ಬೆಳಕಿಂಡಿಗಳಿಂದ ಇಣುಕುವ ಬಿಸಿಲಕೋಲನ್ನೇ ಹಿಡಿಯಲು ಓಡುವ ಹುಮ್ಮಸಿನ ದಿನಗಳು. ಅವ್ವ ಜೋಳದ ಭಕ್ಕರಿ ಬಡಿಯುತ್ತ ನಮಗೆ ಊಟಕ್ಕೂ ಬಡಿಸುತ್ತಿರುತ್ತಿದ್ದರೆ ತಾಟು ಮತ್ತು ಪರಾತದ ಮಧ್ಯೆ ಈ ಬಿಸಿಲುಕೋಲುಗಳು ತಾವೇನು ಕಡಿಮೆ ಎಂದು ಬಂದೇ ಬಿಡುತ್ತಿದ್ದವು…ಮತ್ತೆ ಬಿಸಿಲುಕೋಲುಗಳಲ್ಲಿ ತೇಲಾಡುವ ರಂಗು ರಂಗಿನ ಸಣ್ಣ ಸಣ್ಣ ಕಣಗಳ ಆಟ…

ಮನೆಯಲ್ಲಿನ ಪ್ರೀತಿಯ ಮಲ್ಲಿಗೆ ಬಳ್ಳಿಯನ್ನೂ, ಮಲ್ಲಿಗೆ ಬಳ್ಳಿಯ ಪೊದೆಯಂತ  ದಪ್ಪ ಕಾಂಡಗಳ ಹೆಣಿಕೆಯಲ್ಲಿ ಕಡ್ಡಿ ಕಸವನ್ನು ಕುಣಿಕೆ ಹಾಕಿ ಹೊಸೆದ ಗುಬ್ಬಚ್ಚಿ ಗೂಡನ್ನು ದೂರದಿಂದಲೇ ನೋಡಿ ಸಂಭ್ರಮಿಸುತ್ತಿದ್ದ ದಿನಗಳು. ಆಕಾರವೇ ಮೂಡದ ಮುಚ್ಚಿದ ಕಣ್ಣಲ್ಲಿ ಗುಟುಕಿಗಾಗಿ ಬಾಯ್ ಬಾಯ್ ಬಿಡುವ ಹಸಿ ಹಸಿ ಮರಿಗಳು ಸೋಜಿಗದ ಲೋಕವನ್ನೇ ತೆರೆದಿದ್ದವು. ಕಾಗೆ ಕುಕ್ಕಿ ಒಯ್ಯದಂತೆ ಬಳ್ಳಿಯನ್ನೆಳೆದು ಗೂಡನ್ನು ಮುಚ್ಚುತ್ತಿದ್ದೆವು. ಹಿತ್ತಲಲ್ಲಿ  ಬೆಳೆದ ಕೆಸು, ಪುಂಡಿಗಿಡ,  ಪುದೀನಾ, ದೇವರ ಪೂಜೆಗೆಂದೇ ಬೆಳೆಸಿದ  ದಾಸವಾಳ, ಬಟ್ಟಲುಹೂವಿನ ಗಿಡ, ಕಲಬಾಳೇ ಗಿಡ.  ನಾ ಹುಟ್ಟಿ ಬೆಳೆದ ಆ ಮನೆಯ ಮಣ್ಣಿನಗೋಡೆ, ಕರಿಹೆಂಚಿನ ಮಾಡಿನ, ನೆಲ್ಲಕ್ಕಿ ಮಣ್ಣಿನ ಪರಿಮಳ ನನ್ನುಸಿರಿನಲ್ಲಿ ಸದಾ ಹಸಿರು.

ಬೇಗ ಎದ್ದು ಆರು ಗಂಟೆಯ ನನ್ನ ಹಿಂದಿಕ್ಲಾಸಿಗೆ ಇನ್ನು ನಸುಗತ್ತಲೆಯ ಮುಸುಕಿನಲ್ಲೇ ಓಡುತ್ತಿದ್ದೆ  ಬೆಳದಿಂಗಳ ಜೊತೆ ಜೊತೆಯಲ್ಲಿ.   ಹಿಂದಿಪ್ರಚಾರ ಸಭೆಯವರು ಎಲ್ಲಾ ಕಡೆ ಹಿಂದಿ ಕ್ಲಾಸುಗಳನ್ನು ನಡೆಸುತ್ತಿದ್ದು ನಾನೂ ನನ್ನ ಕೆಲ ಗೆಳತಿಯರಿಗೂ ಹೊಸದೊಂದು ಭಾಷೆಯನ್ನು ಕಲಿಯುವ ಹುಮ್ಮಸ್ಸು.  ಮಟ್ಟಿಪರಪ್ಪನ ಕೂಟಿನಲ್ಲಿದ್ದ ಗಾಂಧಿ ದಿ ಹೈಸ್ಕೂಲಿನ ಕ್ಲಾಸ್ ರೂಮೊಂದನ್ನೆ ತೆರವು ಮಾಡಿಕೊಂಡು ಬೆಳವಲ ಸರ್  ನಮಗೆ ಹಿಂದಿಕ್ಲಾಸ್ತೆಗೆದುಕೊಳ್ಳುತ್ತಿದ್ದರು.

ಕೆಲವೊಮ್ಮೆ ಅವರ ಪತ್ನಿಯೂ ಬರುತ್ತಿದ್ದರು. ಅವರೂ ಟೀಚರ್.  ಬೆಳವಲ್ ಸರ್ ಅವರನ್ನು ನೋಡಿದರೆ ಗುರು ರವೀಂದ್ರರ ನೆನಪಾಗುತ್ತಿತ್ತು.  ಕೊಕ್ಕರೆಯಷ್ಟು ಬೆಳ್ಳಗಿನ ಜುಬ್ಬ ಪಾಯಿಜಾಮವನ್ನೆ ಅವರುನಿತ್ಯ ತೊಡುತ್ತಿದ್ದುದು. ಭುಜದವರೆಗೂ ಇಳಿಬಿದ್ದ ಉದ್ದನೆಯ ಕಪ್ಪು ಕೂದಲು. ಅದಕ್ಕ ತಕ್ಕಂತೆ  ಗುರುದೇವರಂಥಾ ನೀಳ ಗಡ್ದ.  ಆಗಿನ್ನೂ ಹರಯದವರಾಗಿದ್ದು ಬೆಳವಲ್ ಸರ್ ವಯಸ್ಸಾದಾಗ  ಥೇಟ್  ಗುರುದೇವರಂತೆಯೇಆಗಿರುತ್ತಾರೆಂದು ನಾವೆಲ್ಲ ಅಂದುಕೊಂಡಿದ್ದೆವು.   ಯಾವತ್ತೂ ಹೆಚ್ಚು ಮಾತಾಡಿದವರೇ ಅಲ್ಲ.  ಬೈದವರೂ ಅಲ್ಲ.  ಯಾರೂ ಸಲುಗೆಯಿಂದ ಹತ್ತಿರ ಹೋಗುತ್ತಿರಲ್ಲಿಲ್ಲ.  ಅವರ ಗಾಂಭಿರ್ಯವೇ ಅಂಥದ್ದು.  ನಮಗೆ ಕಲಿಸುವುದನ್ನುಕಲಿಸಿ, ತಿಳಿಸುವುದನ್ನು ತಿಳಿಸಿ, ಕೈಗೊಂದಿಷ್ಟು ಬರೆಯುವ ಕೆಲಸಕೊಟ್ಟರೆ ಅವರ ಕೆಲಸ ಮುಗೀತು.  ಆಮೇಲೆ ಎದುರಿನ ಕುರ್ಚಿಯಲ್ಲಿ ಪದ್ಮಾಸೀನರಾಗಿಯೋ ಇಲ್ಲ ಹಾಗೇ ಕೂತಲ್ಲೆ ಕಣ್ಣುಮುಚ್ಚಿಕೊಂಡು ಧ್ಯಾನಸ್ಥರಾಗಿ ಬಿಡುತ್ತಿದ್ದರು.  ಆಗಾಗ ಅರೆ ನಿಮೀಲಿತ ನೇತ್ರದಿಂದ ನಮ್ಮನ್ನೆಲ್ಲ ನೋಡುತ್ತಿದ್ದಾರೆಂದೇ ಅನಿಸುತ್ತಿತ್ತು.  ಕೆಲವೊಮ್ಮೆ ಉದ್ದಕೂದಲನ್ನು ತುರುಬು ಹಾಕಿ ಬಿಗಿದು ಕೂರಿಸಿ ಧ್ಯಾನಸ್ತರಾಗುತ್ತಿದ್ದರು.

ನಾವೆಲ್ಲ ನಮ್ಮ ಬರೆಯುವ ಕೆಲಸ ಮುಗಿಸಿ ಅವರನ್ನು ಎಬ್ಬಿಸಿತೊಂದರೆಕೊಡಲಿಚ್ಚಿಸದೇ  ನಮ್ಮ ನಮ್ಮಲ್ಲೆ ಪಿಸಿಪಿಸಿ ಮಾತಾಡುತ್ತ ಕೊನೆಗೆ ಬೆಳಗಿನ ಶಾಂತ ವಾತಾವರಣವನ್ನು ಕಲಕುವ ಹಕ್ಕಿಗಳಂತೆ ನಮ್ಮ ಪಿಸಿಪಿಸಿಯ ಕಲರವವೇ ಹೆಚ್ಚಾದಾಗ ಅವರು ಕಣ್ಣುಬಿಡುತ್ತಿದ್ದರು.  ನಾವೆಲ್ಲ ಗಪ್ಚಿಪ್.   ಬೆಳವಲ್ ಸರೇ ನಮ್ಮ ಹತ್ತನೇ ನಂಬರ್ ಶಾಲೆಯಲ್ಲಿ ಓದಿಸುತ್ತಿದ್ದುದು.  ಅವರ ಮನೆ ಆ ಕಡೆ ರವಿವಾರ ಪೇಟೆ ದಾಟಿ ಎಲ್ಲೋ ಇತ್ತು.   ಒಮ್ಮೆ ಹೋದ ನೆನಪು.   ಓಣಿಯ ಹೆಸರು ನೆನಪಿಲ್ಲ.   ಗುರುದೇವರಂಥ ನಮ್ಮಬೆಳವಲ್  ಗುರುಗಳನ್ನೂ,  ಕಿನ್ನರಲೋಕದಂತ ಬೆಳದಿಂಗಳ ಬೆಳಗನ್ನೂ, ನನ್ನೂರಿನ  ದೇವಲೋಕದಂತ ಜನರನ್ನೂ  ಈ ಜನ್ಮಪೂರ್ತಿ ಮತ್ತೆ  ಕಾಣಲಿಲ್ಲ!  ಏನೋ ಧಾವಂತದ, ಎಲ್ಲೋ  ತಲ್ಲಣದ ಬದುಕಿನಲ್ಲಿ ನೆನಪಾಗುವ,  ಅಲ್ಲೊಮ್ಮೆ ಇಲ್ಲೊಮ್ಮೆ ನೆನಪಾಗಿ ಹರಿಯುವ  ನನ್ನ ಶಾಲ್ಮಲಿಯ ಪ್ರಶಾಂತ ಸೆರಗಿನಲ್ಲಿ ಮುಗ್ಧ ಮಗುವಿನ ಹುಚ್ಚು ನಗೆಯಂಥ ನನ್ನೂರು ಮಲಗಿ ನಿದ್ರಿಸುತ್ತಿದ್ದಂತಿತ್ತು.

ಲೋಕವಿನ್ನೂ ಕಣ್ಣುಬಿಡುವ ಹೊತ್ತು. ಸೂರ್ಯ ಮೂಡಲು ಸಜ್ಜಾಗುವ  ಪ್ರಾತಃ ಕಾಲದಲ್ಲೆ ವಿದ್ಯಾರ್ಥಿಗಳನ್ನು ಕೂರಿಸಿ ಆಗ ನಮಗೆ ಅರ್ಥವಾಗದ  ’ಹೇತುಹೇತುಮದ್ಭೂತ’ಕಾಲವನ್ನು  ವಿವರಿಸುತ್ತಿದ್ದರೆ ನಾವು ಕಿಸಿಕಿಸಿ ನಗುತ್ತಿದ್ದೆವು. ಎಂಥ ಗತಕಾಲವಿದು! ಅವರು ಓದಿಸಿದ ಹಿಂದಿ ವ್ಯಾಕರಣದ ರಚನಾ ಪುಸ್ತಕಗಳು ಇನ್ನೂ ನನ್ನ ಹತ್ತಿರವಿವೆ.

ಯಾವುದೋ ಪೆಟ್ಟಿಗೆಯಲ್ಲಿ ಸುಖವಾಗಿ ನಿಶ್ಚಿಂತೆಯಿಂದ ಮಲಗಿವೆ.  ಮುಂದೆ  ಉತ್ತರಾಯಣದ  ನನ್ನ ಬದುಕಿನಲ್ಲಿ ಹಿಂದಿಯನ್ನು ಚೆನ್ನಾಗಿ ಕಲಿಸಿ ಬೆಳೆಸಿದ  ನನ್ನ ಗುರುಗಳನ್ನು ಹೇಗೆ ಮರೆಯೋದು ?   ಎಲ್ಲೂ ಕಲಿಸಲು ಜಾಗ ಸಿಗದಾಗ ನಗರೇಶ್ವರ ಗುಡಿಯ ಹತ್ತಿರದ ಕಾಳಮ್ಮನ ಗುಡಿಯ ಅಟ್ಟದ ಮೇಲೆ ನಮ್ಮ ಹಿಂದಿ ಕ್ಲಾಸು ನಡೆಯುತ್ತಿದ್ದವು. ಎರಡೇ ಕೋಣೆಯ ಪುಟ್ಟ ಅಟ್ಟದ ಮೇಲೆ ಒಂದೆಡೆ ಪ್ರಥಮಾ, ಇನ್ನೊಂದೆಡೆ ಮಧ್ಯಮಾ, ಮತ್ತೆ ರಾಷ್ಟ್ರಭಾಷಾ ಕ್ಲಾಸು ಹೀಗೆ ಬೇರೆ ಬೇರೆ ಗುಂಪುಗಳಿದ್ದವು.  ವಿದ್ಯಾರ್ಥಿ- ವಿದ್ಯಾರ್ಥಿನಿಯರೂ ಒಟ್ಟಿಗೆ ಇದ್ದೆವು. ಅಲ್ಲಿ ಸ್ಕೂಲಿನ,ಹೈಸ್ಕೂಲಿನ ಮಕ್ಕಳು, ಕಾಲೇಜಿನವರು ಎಲ್ಲ ಶ್ರೇಣಿಯವರೂ ಇದ್ದೆವು.

ಬಹುತೇಕ ಮಧ್ಯಮಾ ಕ್ಲಾಸುಗಳನ್ನು ತೆಗೆದುಕೊಳ್ಳಲು ಮುಂದೆ ಪಟೇಗಾರ್ ಓಣಿಯ ವಹೀದಾ ರೆಹಮಾನ್ ತರಾ ಕಣ್ಣಿಗೆ ಕಾಡಿಗೆ ಹಚ್ಚಿ, ನಡುವೆ ಬೈತಲೆತೆಗೆದು ಅಳ್ಳಕವಾಗಿ ಜಡೆ ಹಾಕಿಕೊಳ್ಳುತ್ತಿದ್ದ ಚೆಂದದ ಟೀಚರ್ ಬರತೊಡಗಿದ್ದರು.   ಆಮೇಲೆ ಮತ್ತೊಬ್ಬ ಸರ್ ಕೂಡ ಬರತೊಡಗಿದ್ದರು.   ಆ ಪಟೇಗಾರ್ ಓಣಿಯ ಟೀಚರ್ಗೂ ಈ ಸರ್ ಗೂ ದೋಸ್ತಿ ಇದೆಯೆಂದು ಗಂಡು ಹುಡುಗರೆಲ್ಲಮಾತಾಡಿಕೊಳ್ಳುತ್ತಿದ್ದರು.   ಅವರದನು ಹೇಗೆ ಕಂಡುಕೊಂಡರೋ ಎಂದು ನಾನು ನನ್ನ ಗೆಳತಿ ಯೋಚಿಸಿದರೂ ತಿಳಿದಿದ್ದಿಲ್ಲ. ಅದೆಲ್ಲ ಅರ್ಥವಾಗವ ವಯಸ್ಸೂ ಇದ್ದಿಲ್ಲ. ನಾವು   ಬೆಳವಲ್ ಸರ್ ಬರುವುದನ್ನೇ ಕಾಯುತ್ತಿದ್ದೆವು.   ನೋಡಿದರೂ ಮತ್ತೆ  ನೋಡಬೇಕೆನ್ನುವ  ಋಷಿಯಂತ ವ್ಯಕ್ತಿತ್ವ ಅವರದು.  ಅವರಿದ್ದರೆ ಎಲ್ಲರೂ ಶಿಸ್ತಿನಲ್ಲಿರುತ್ತಿದ್ದರು. ಇಲ್ಲಾಂದರೆ ಟೀಚರ್ ಹೇಳಿದ್ದೂ ಕೇಳಿಸದಷ್ಟು ಗದ್ದಲ ಗೌಜು.   ಹತ್ತನೇ ನಂಬರ್ ಶಾಲೆಯಲ್ಲೂ ಅವರು ಇದ್ದಾರೋ ಇಲ್ಲವೋ ಎನ್ನುವಷ್ಟು ನಿಧಾನದಲ್ಲಿ, ಶಾಂತ,  ಸೌಮ್ಯ ಧ್ಯಾನಸ್ಥ ತಪಸ್ವಿಯಂತೆ  ಗಾಳಿಯಲ್ಲಿ ಬಂದು ಗಾಳಿಯಂತೆ ತೇಲುಹೋಗುತ್ತಾರೋ ಅನ್ನುವಷ್ಟು ನಿಶ್ಯಬ್ಧ ಪದ ಛಾಪುಗಳು ಅವರದು.  ಸ್ಟಾಫ್ ರೂಮಿನಲ್ಲಿ ಕೂಡ ಅವರದು ಸದ್ದಿಲ್ಲದ ಇರುವು.

ಗಾಂಧಿ ಹಿಂದೀ ಹೈಸ್ಕೂಲಿನಲ್ಲಿ ಓದುವವರೆಲ್ಲ ಮಾರವಾಡಿ ಮಕ್ಕಳು.  ಅದೇ ಆವರಣದಲ್ಲಿ ನಮ್ಮ ಹತ್ತನೇ ನಂಬರ್ ಶಾಲೆ.  ಎರಡೂ ಸಾಲೆಗೂ ಒಂದೇ ಮೈದಾನ.  ಪೂರ್ವದ ಆಚೆ ಬದಿಯಲ್ಲಿ ಎಲ್ಲ ತೊಗರಿ, ಶೇಂಗಾ, ಜೋಳಬೆಳೆಯುವ ಹೊಲಗಳು.  ಮಕ್ಕಳು ಹಾಯದಂತೆ ಮುಳ್ಳುಬೇಲಿ ಹಾಕಿರುತ್ತಿದ್ದರು.  ಇಂದು ಅದೆಲ್ಲ ಕಾಂಕ್ರೀಟ್ ಕಾಡಾಗಿದೆ.  ಚರಂತೀಮಠ ಗಾರ್ಡನ್ ಎಂದು ಪ್ಲಾಟುಗಳನ್ನು ಮಾಡಿ ಮಾರಿ ಈಗ ಮನೆಗಳಾಗಿವೆ. ಈಗ ಅದೇ ಜಾಗದಲ್ಲಿ ನನ್ನ ಮನೆಯೂ ಎದ್ದಿದೆ.  ಅದೇ ಮಟ್ಟಿಪರಪ್ಪನ ಕೂಟಿನಲ್ಲಿದ್ದ ಎರಡನೇ ನಂಬರ್ ಶಾಲೆಯಲ್ಲೇ ಬೇಂದ್ರೆ ಅಜ್ಜನೂ ಓದಿದ್ದರೆಂಬುದು ಇತಿಹಾಸ.  ಶಾಲ್ಮಲಿಯ ಮಡಿಲಿನ ಬೆಳದಿಂಗಳನ್ನೂ , ಸಾಧನಕೇರಿಯ ಗಾಳಿಯನ್ನೂಉಂಡೇ ನಾನು ಬೆಳೆದಿದ್ದಿನಲ್ಲಾ ಎಂಬ ಧನ್ಯತೆ ಬಿಟ್ಟರೆ ಏನೂ ಇಲ್ಲ ನನ್ನದು.  ಇತ್ತೀಚೆಗೆ ಸಿದ್ದಲಿಂಗ ಪಟ್ಟಣಶೆಟ್ಟಿ ದಂಪತಿಗಳೇ ನಮ್ಮ ಬೆಳವಲ್ ಸರ್ ತುಂಬಾ ಮೊದಲೇ ತೀರಿಹೋಗಿದ್ದಾರೆಂದು ತಿಳಿಸಿದರು.  ಏನೋ ಕಳಕೊಂಡಭಾವ ಆವರಿಸುವ,…ಕಣ್ಣು ಹನಿಯಾಗುವ ಮೊದಲೇ ಮಮತೆಯ  ದನಿಯೊಂದು ತಬ್ಬಿತು,

” ನೀ ಸ್ಟೇಶನ್ ಇಳಿದ ಕೂಡ್ಲೇ ಸೀದಾ ನಂ ಮನೀಗೆ ಬಾ..ಒಂದಿನ ಹೂಮನೆಯಲ್ಲಿದ್ದು ಆಮೇಲೆ ಮನೀಗೆ ಹೋಗು”  ಪ್ರೀತಿಯಿಂದ ಕರೆಯುವ ಪಟ್ಟಣಶೆಟ್ಟಿ ಹೇಮಕ್ಕ –   ಮೊನ್ನೆ ಮೊನ್ನೆಯಷ್ಟೇ ಹೋದಾಗ ಮಾವಿನ ಹಣ್ಣು ಇಳಿಸುತ್ತಿದ್ದರು.  ಗಿಣಿಕಡಿದ ಒಂದೆರಡು  ಹಣ್ಣು ಹೆಚ್ಚಿಟ್ಟು ಎಲ್ಲಾ ನಿಂದ ತಿನ್ನು ಎಂದು ತಿನಿಸಿದ್ದು,  ಬೆಳ್ಳಿಯೊಡನೆ ಆಡಿದ್ದು, ಬೆಳ್ಳಿಯನ್ನು ಎತ್ತಿಕೊಂಡು ಫೋಟೋ ಕ್ಲಿಕ್ಕಿಸಿದ್ದು.  ಅಪರೂಪದ ಮದನಮಸ್ತಿ ಹೂವನ್ನು ಹೇಮಕ್ಕತೋರಿಸಿದಾಗ ರಾಮಾನುಜನ್ ಪದ್ಯಗಳು ನೆನಪಾಗಿ ನಕ್ಕಿದ್ದೆ. ಎಷ್ಟೇ ಜತನದಿಂದ ಹೂವನ್ನು ಬ್ಯಾಗಿನಲ್ಲಿಟ್ಟುಕೊಂಡರೂ ಅದು ಬಾಡಿಹೋಗಿತ್ತು.  ನವಿರಾದ ಘಮ ಬಹಳ ದಿನ ಕಾಡುತ್ತಲೇ ಇತ್ತು.

ಹಚ್ಚಿದ ಕಾರದ ಕಾರ್ನಫ್ಲೇಕ್ಸ್  ತಿನ್ನುತ್ತ – ಚಹದ ಜೋಡಿ ಚೂಡಾಧಂಗ….” ಸಂಜೆವರೆಗೂ ಮಾತಾಡಿ ಸಿಪ ಸರ್ ಅವರೇ ಬೆಳ್ಳಿಯೊಡನೆ ಬಸ್ ಸ್ಟ್ಯಾಂಡಿನವರೆಗೂ ಬಂದು ಬಸ್ ಹತ್ತಿಸಿಹೋಗಿದ್ದರು.  ತವರಿನ ನೆನಪು ಯಾವಾಗಲೂ ಹಿತವೇ.   ಇಂಥ  ಪ್ರೀತಿಯ ತಾವಿಗೆ ಮರಳಬೇಕಿದೆ ಇನ್ನು… ಸಾಯುವ ಮೊದಲು ಮತ್ತೆ ಆ ಬೆಳದಿಂಗಳಿನಲ್ಲಿ ಒಮ್ಮೆ ಮೀಯಬೇಕು. . ಮರಳಿ ಮಣ್ಣಿಗೆ ಸಾಗುವ ಹಾದಿಯಲ್ಲಿ ಮತ್ತೆ ಅಂಥದ್ದೆ ಬೆಳದಿಂಗಳನ್ನು ಸೋಸಿ ಸಾಣೆಹಿಡಿದು ಚಂದ್ರನ ರೊಟ್ಟಿಗಳ ತಟ್ಟುವ ಕನಸನ್ನಾದರೂ ಕಾಣಬೇಕು……

2 Responses

  1. ನಿಮ್ಮ “ಚಂದ್ರನ ರೊಟ್ಟಿಗಳು ” ಮನೋಜ್ಞವಾಗಿದೆ , ನನ್ನ ಬಾಲ್ಯವನ್ನೂ ನೆನಪಿಸಿತು , ಅಗಧಿ ಚಂದ ಬರೀತೀರಾ , ಅಕ್ಕಾ .

  2. Vijaykumar wadawadagi says:

    ಫಲಾಶದ ಪಕಳೆಗಳು ಈ ಹೆಸರೇ ರೋಮಾಂಚನ ಬರವಣಿಗೆಯೂ ಅಷ್ಟೆ ಮೃದು ಮಧುರ…ಹೃದಯ ತುಂಬಿದ ಓದು

Leave a Reply

%d bloggers like this: