‘ಆಧಾರ್’ ಎಂಬುದು ಮಹಾ ಹಗರಣದ ‘ಕಣಿ’

ನಂದನ್ ನಿಲೇಕಣಿ ಎಂಬ ಅರ್ಧ ರಾಜಕಾರಣಿ; ಅರ್ಧ ಐಟಿ ತಜ್ನ, ತನ್ನ ಕಕ್ಷೆಯಲ್ಲಿ ಒಂದು ಸುತ್ತು ತಿರುಗಿ, ಈಗ ಮತ್ತೆ ಇನ್ಫೋಸಿಸ್ ಎಂಬ ತನ್ನ ಗೂಡು ಸೇರಿಕೊಂಡಿದ್ದಾರೆ. ಹೀಗೆ ‘ಘರ್ ವಾಪಸಿ’ ಆಗುವ ಹೊತ್ತಿಗೆ, ಆ ಪುಣ್ಯಾತ್ಮ ದೇಶದ ಪ್ರತಿಯೊಬ್ಬ ಪ್ರಜೆಯ ಖಾಸಗಿತನವನ್ನು ತಟ್ಟೆಯಲ್ಲಿಟ್ಟು ಅಮೆರಿಕದಂತಹ ಯುದ್ಧ ಪಿಪಾಸು ದೇಶಗಳ ಕೈಗೆ ಒಪ್ಪಿಸಿ ಹೋಗಿದ್ದಾರೆ ಎಂದು ಬಲವಾದ ಗುಮಾನಿ ಆರಂಭವಾಗಿದೆ.

ಕಳೆದವಾರ ಸುಪ್ರೀಂ ಕೋರ್ಟಿನ ಸಂವಿಧಾನಪೀಠವು ಖಾಸಗಿತನ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವ ಮೂಲಕ ಕೋಟೆಯಿಡೀ ಸೂರೆಹೋದ ಮೇಲೆ ದಿಡ್ಡಿ ಬಾಗಿಲು ಹಾಕುವ ಶಾಸ್ತ್ರ ಮಾಡಿ ಮುಗಿಸಿದೆಯಾದರೂ, ಆಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯ ಆಗುವುದು ಕಷ್ಟ. ಸುಪ್ರೀಂ ಕೋರ್ಟಿಗೆ ಈ ಪ್ರಕರಣದಲ್ಲಿ ಅರ್ಜಿದಾರರಲ್ಲಿ ಒಬ್ಬರಾಗಿರುವ ನಿವ್ರತ್ತ ಸೇನಾಧಿಕಾರಿ ಕರ್ನಲ್ ಮ್ಯಾಥ್ಯೂ ಥಾಮಸ್ ವಿವರಿಸುವುದನ್ನು ಕೇಳಿದರೆ ಇಡಿಯ ಬೆನ್ನುಕೋಲು ಚಳಿಯೇರಿ ಕಂಪಿಸತೊಡಗುತ್ತದೆ.

ಬಿಜೆಪಿ ಪ್ರತಿಪಕ್ಷವಾಗಿದ್ದಾಗ 2011ರ ವೇಳೆಯಲ್ಲಿ, ಬಿಜೆಪಿ ಸಂಸದೀಯ ಪಕ್ಷದ ಸದಸ್ಯರಿಗೆ ಆಧಾರ್ ಬಗ್ಗೆ ಕರ್ನಲ್ ಮ್ಯಾಥ್ಯೂ ಎಳೆಯೆಳೆಯಾಗಿ ವಿವರಿಸಿದ್ದರು. ಆಗ ಹಾಜರಿದ್ದ ಆಡ್ವಾಣಿ, ರಾಜನಾಥ್ ಸಿಂಗ್ ಮತ್ತು ಜೇಟ್ಲಿ ಮೊದಲಾದ ನಾಯಕರು ಇದನ್ನೆಲ್ಲ ಪರಾಂಬರಿಸಿ ನೋಡಿ, ಮುಂದೆ ಚುನಾವಣೆಯಲ್ಲೂ ಆಧಾರ್ ವಿರೋಧಿಸಿಯೇ ತಮ್ಮ ಸರಕಾರ ರಚನೆಯಾಗಲು ಕಾರಣರಾಗಿದ್ದರು. ಆದರೆ ಆಡ್ವಾಣಿ ಯುಗ ಪಲ್ಲಟವಾಗಿ ಹೊಸ ಸರಕಾರದ ಮುಖ್ಯಸ್ಥರಾದ ನರೇಂದ್ರ ಮೋದಿಯವರು ಬರಬರುತ್ತಲೇ ಆಧಾರ್ ಮಾರ್ಕೆಟಿಂಗ್ ಏಜನ್ಸಿ  ಪಡೆದುಬಂದವರಂತೆ ವರ್ತಿಸಿ, ಸಿಕ್ಕ ಸಿಕ್ಕದ್ದಕ್ಕೆಲ್ಲ ಆಧಾರ್ ಕಡ್ಡಾಯ ಮಾಡುತ್ತಾ ಸಾಗಿದ್ದೇ, ಈ ಪ್ರಕರಣ ಸುಪ್ರೀಂ ಕೋರ್ಟಿನ ಮೆಟ್ಟಿಲೇರಲು ಮೂಲ ಕಾರಣ.

ಆಧಾರ್ ಎಂಬುದು ಮಾಹಿತಿ ಕಸದ ರಾಶಿಯಾಗಿದ್ದು, inherently probabilistic and inherently fallible ದತ್ತಾಂಶಗಳ ಸಂಗ್ರಹವಾಗಿದೆ. ಅದರಿಂದ ದೇಶಕ್ಕೆ ಚಿಕ್ಕಾಸಿನ ಪ್ರಯೋಜನವೂ ಆಗದು ಎಂಬುದು ದತ್ತಾಂಶ ತಂತ್ರಜ್ನರ ಅಭಿಪ್ರಾಯ. ಅದಕ್ಕೆ ಸಕಾರಣಗಳೂ ಅವರ ಬಳಿ ಇವೆ. ಆದರೆ, ಈ ವಿಚಾರ ಇಷ್ಟಕ್ಕೇ ಮುಗಿಯುವುದಿಲ್ಲ ಎಂಬಲ್ಲಿಂದಲೇ ಆಧಾರ್ ಎಂಬ ಮಹಾ ಹಗರಣ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.

ಸ್ವತಃ ಸರ್ಕಾರ ಜವಾಬ್ದಾರಿಯುತವಾಗಿ ಮಾಡಬೇಕಾದ್ದ ಆಧಾರ್ ದತ್ತಾಂಶವನ್ನು ಅಥೆಂಟಿಕೇಟ್ ಮಾಡಿಕೊಡುವ ಗುತ್ತಿಗೆಯನ್ನು ವಹಿಸಿಕೊಂಡಿರುವುದು ಅಮೆರಿಕ ಮೂಲದ ಎಲ್ ವನ್ ಐಡೆಂಟಿಟಿ ಸೊಲ್ಯೂಷನ್ಸ್ ಆಪರೇಟಿಂಗ್ ಕಂಪನಿ. ಹಾಲಿ ಅದು ಸಾಫ್ರಾನ್ ಐಡೆಂಟಿಟಿ ಅಂಡ್ ಸೆಕ್ಯುರಿಟಿ ಎಂಬ ಫ್ರೆಂಚ್ ಮೂಲದ ಬಹುರಾಷ್ಟ್ರೀಯ ಕಂಪನಿಯ ಭಾಗ. ಈ ಅಮೆರಿಕನ್ ಕಂಪನಿಯ ಆಡಳಿತ ಮಂಡಳಿಯಲ್ಲಿರುವವರು ಅಮೆರಿಕದ ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ (CIA), ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ಸ್(FBI), ಅಮೆರಿಕನ್ ರಕ್ಷಣಾ ಸಂಶೋಧನಾ ಕೇಂದ್ರಗಳ ಮಾಜೀ ಅಧಿಕಾರಿಗಳು!

ಅಂದರೆ, ದೇಶದ ಅಂದಾಜು 120 ಕೋಟಿ ನಾಗರಿಕರ ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್ ಮತ್ತಿತರ ಬಯೋಮೆಟ್ರಿಕ್ ಮಾಹಿತಿಗಳನ್ನು ತಟ್ಟೆಯಲ್ಲಿರಿಸಿ ಅಮೆರಿಕದ ಕಾಲಿನಡಿ ಇಟ್ಟು ಕೈಮುಗಿಯುವ ಮೂಲಕ ‘ದೇಶಭಕ್ತಿ’ ಪ್ರದರ್ಶಿಸಲಾಗಿದೆ ಎಂದು ಕರ್ನಲ್ ಮ್ಯಾಥ್ಯೂ ಆಪಾದಿಸುತ್ತಿದ್ದಾರೆ. ಇಷ್ಟೇ ಅಲ್ಲ, ಈ ಅಮೆರಿಕನ್ ಕಂಪನಿಗೆ ಪ್ರತಿಯೊಂದು ಆಧಾರ್ ನಂಬರ್ ಅಥೆಂಟಿಕೇಟ್ ಮಾಡಿ ಕೊಡುವುದಕ್ಕೆ  ರೂ. 2.75 ಪಾವತಿ ಮಾಡಲಾಗುತ್ತಿದೆಯಂತೆ!

ಈ ಹಿಂದೆ ಅಮೆರಿಕ ಸರ್ಕಾರದಿಂದಲೇ ಅನೈತಿಕ ವ್ಯವಹಾರಕ್ಕಾಗಿ 63 ಮಿಲಿಯ ಡಾಲರ್ ದಂಡ ಹಾಕಿಸಿಕೊಂಡ ಈ ಸಂಸ್ಥೆಯನ್ನು ಯಾವುದೇ ಜಾಗತಿಕ ಟೆಂಡರ್ ಕರೆಯದೆ, request for proposal ಎಂದು ಕರೆಸಿ, ಲಾಬಿ ಮೂಲಕ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿಗಳನ್ನು ಸಲ್ಲಿಸಿದರೆ, ವರ್ಷಗಟ್ಟಲೆ ಮಾಹಿತಿ ನೀಡದೆ ಸತಾಯಿಸಲಾಗುತ್ತಿದೆ. ವಿದೇಶಿ ಕಂಪನಿಗಳು ಆಧಾರ್ ನಿರ್ವಹಣೆಯಲ್ಲಿ ಒಳಗೊಂಡಿವೆ ಎಂಬುದನ್ನು ದೇಶದ ಜನರಿಂದ ಮುಚ್ಚಿಡಲಾಗುತ್ತಿದೆ.  ಸ್ವತಃ ಕರ್ನಲ್ ಮ್ಯಾಥ್ಯೂ ಹೈಕೋರ್ಟಿನಲ್ಲಿ ಹಲವಾರು ದಾವೆಗಳನ್ನು ಸರ್ಕಾರ ಹಾಗೂ ಆಧಾರ್ ಪ್ರಾಧಿಕಾರದ ವಿರುದ್ಧ ಹಾಕಿ ಹೋರಾಡುತ್ತಿದ್ದಾರೆ.

ಹಿಂದೆಲ್ಲ ಕಾಂಗ್ರೆಸ್ ರಾಜಕಾರಣಿಗಳು ಮಿಸುಕಾಡಿದರೆ ಅವರು CIA  ಏಜಂಟರೆಂದು ಜರೆಯುತ್ತಿದ್ದ ದೇಶಭಕ್ತರ ಗಢಣ ಈಗ ನೇರಾನೇರ ಅಮೆರಿಕದ ಗುಪ್ತಚರ ಅಧಿಕಾರಿಗಳಿಗೇ ದೇಶದ ಮಾಹಿತಿಯನ್ನು ತಟ್ಟೆಯಲ್ಲಿಟ್ಟು ನೀಡಿದೆ ಮತ್ತು ಆ ಬಗ್ಗೆ ಲಿಖಿತ ಒಪ್ಪಂದ ಮಾಡಿಕೊಂಡಿದೆ ಎಂಬುದು ವಾಸ್ತವ. ಇದೇ ಅಮೆರಿಕನ್ ಕಂಪನಿ ಪಾಕಿಸ್ಥಾನದಲ್ಲೂ ಈ ರೀತಿಯ ಮಾಹಿತಿಯನ್ನು ಕಲೆಹಾಕಿದ್ದು, ಜಗತ್ತಿನಲ್ಲಿ ಸದ್ಯಕ್ಕೆ ಭಾರತ ಮತ್ತು ಪಾಕಿಸ್ಥಾನ ಮಾತ್ರ ಈ ರೀತಿ ಬಯೋಮೆಟ್ರಿಕ್ಸ್ ಸಹಿತ ತನ್ನ ದೇಶದ ಪ್ರಜೆಗಳ ಬಗ್ಗೆ ಮಾಹಿತಿಯನ್ನು ವಿದೇಶೀ ಕಂಪನಿಯ ಮೂಲಕ ನಿಭಾಯಿಸತೊಡಗಿರುವ ದೇಶಗಳಂತೆ.

ಆಧಾರ್ ಪ್ರಾಧಿಕಾರ ಸಂಗ್ರಹಿಸಿರುವ ಮಾಹಿತಿಗಳ ಗುಣಮಟ್ಟದ ಬಗ್ಗೆ ಹೇಳಹೋದರೆ ಅದೇ ಇನ್ನೊಂದು ಹಗರಣ. ಅಲ್ಲಿ ಆಧಾರ್ exempt  ಮಾಡಲಾಗಿರುವ ವ್ರದ್ಧರು, ಮಕ್ಕಳು, ವಲಸೆ ಕಾರ್ಮಿಕರು ಇತ್ಯಾದಿ ವರ್ಗ ಒಟ್ಟು 75% ವರೆಗೂ ಮುಟ್ಟುತ್ತದೆ. ಉಳಿದ 25% ನಲ್ಲೂ ಸಂಗ್ರಹಿಸಲಾಗಿರುವ ಮಾಹಿತಿ ಗುಣಮಟ್ಟ ಏನೇನೂ ಚೆನ್ನಾಗಿಲ್ಲ ಪ್ರತೀ 60ಕ್ಕೆ ಒಬ್ಬರ ಮಾಹಿತಿ ಕಳಪೆ ದತ್ತಾಂಶ ಎಂದು ತಜ್ನರು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ, ಇಂತಹ ಮಾಹಿತಿ ಸಂಗ್ರಹ ಮಾಡಿರುವುದು ಆಳುವ ಪಕ್ಷಕ್ಕೆ ಬೇಕಾಗಿರುವ ರಾಜಕಾರಣಿಗಳಿಗೆ ಸಂಬಂಧಪಟ್ಟ ಏಜನ್ಸಿಗಳು ಮತ್ತು ಅವರಿಂದ ಉಪಗುತ್ತಿಗೆ ಪಡೆದಿರುವ ಬೇಜವಾಪ್ದಾರಿ ವ್ಯಕ್ತಿಗಳು ಎಂದು ಹೇಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳೂ ದಾಖಲಾಗಿವೆ. ಆದರೆ ದೇಶದ ಮಾಧ್ಯಮಗಳು ಈ ಬಗ್ಗೆ ಮಾತನಾಡುತ್ತಿಲ್ಲ.

ಇನ್ನು ರಾಜಕಾರಣಿಗಳಿಗೆ ಆಧಾರ್ ಏನು ಲಾಭ ತರಲಿದೆ ಎಂಬ ಪ್ರಶ್ನೆಗೆ, ಮುಂದಿನ ಚುನಾವಣೆಯಲ್ಲಿ ಓಟಿಗಾಗಿ ಕಾಸು ಹಂಚುವ ವಿಧಾನ ಬದಲಾಗಲಿದೆ ನೋಡಿ ಎನ್ನುತ್ತಿದ್ದಾರೆ ತಜ್ನರು. ಮುಂದಿನ ಚುನಾವಣೆಯ ವೇಳೆ ಜನಧನ್ ಖಾತೆಗಳ ಮೇಲೆ ಕಣ್ಣಿಟ್ಟುಕೊಂಡಿರಿ ಎಂದು ಈಗಾಗಲೇ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ. ಇಂತಹದೇ ಒಂದು ದೊಡ್ಡ ಹಗರಣ ಕೊಲಂಬಿಯಾ ದೇಶದಲ್ಲಿ ನಡೆದಿರುವ ಹಿನ್ನೆಲೆ ಕೂಡ ಇದೆ.

ಒಟ್ಟಿನಲ್ಲಿ, ಇಂಗ್ಲಂಡಿನಲ್ಲಿ ಇತ್ತೀಚೆಗೆ ಇಂತಹ ಗುರುತು ಚೀಟಿ ಅಭಿಯಾನವನ್ನು ಕಸದ ಬುಟ್ಟಿಗೆ ಸೇರಿಸಿದ ಅಲ್ಲಿನ ಪ್ರಧಾನಿ ಥೆರೆಸಾ ಮೇ ಅವರು ಸಂಸತ್ತಿನಲ್ಲಿ ಈ ಗುರುತು ಚೀಟಿಗಳನ್ನು INTRUSIVE BULLYING  ಎಂದು ಜರೆದಿದ್ದಾರೆ. ಅಂದರೆ, ನಾವಿವತ್ತು ಎದುರಿಸುತ್ತಿರುವುದು “ಡಿಜಿಟಲ್ ತುರ್ತುಪರಿಸ್ಥಿತಿಯನ್ನು!”

ಈ ಎಲ್ಲ ವಿವರಗಳಿಗೆ ಕರ್ನಲ್ ಮ್ಯಥ್ಯೂ ಅವರ ಈ ಸಂದರ್ಶನಗಳನ್ನು ಕೇಳಿ. ಇವು ಮೂರು ಭಾಗಗಳಲ್ಲಿವೆ.

ಭಾಗ ೧: https://www.youtube.com/watch?v=J8YtkVf2cjY

ಭಾಗ ೨: https://www.youtube.com/watch?v=Nu6rrSt6Koo

ಭಾಗ ೩: https://www.youtube.com/watch?v=tweCG9se2hw

 

 

 

‘ನುಣ್ಣನ್ನಬೆಟ್ಟ’ ಪ್ರತಿ ಬೇಕಿದ್ದವರು ಈ ಕೆಳಗಿನ WhatsApp ನಂಬರಿಗೆ ನಿಮ್ಮ ವಿಳಾಸವನ್ನು ತಲುಪಿಸಿದಲ್ಲಿ, ಅಂಚೆ ಮೂಲಕ ಕಳುಹಿಸಿಕೊಡಲಾಗುವುದು.

ಪುಸ್ತಕದ ಬೆಲೆ ರೂ. 150/-.

WhatsApp: 98455 48478

 

1 Response

  1. ನಾವು ಪ್ರಜಾಪ್ರಭುತ್ವ ಹೊಂದಿದ ದೇಶದ ಪ್ರಜೆಗಳಾಗಿದ್ದರೂ ಇನ್ನೂ ಏನೇನು ಅನುಭವಿಸಲಿಕ್ಕಿದೆಯೊ!!!

Leave a Reply

%d bloggers like this: