ನನಗೆ ಪ್ರೇಮಿಸಲೂ ಬರುತ್ತದೆ ಆರೀಫ್ ಮಿಂಯಾ….

ದಿನವೊಂದು ಖಾಲಿ ಖಾಲಿ ಪಾತ್ರೆಯಂತೆ ಏನನ್ನೂ ತುಂಬಿಕೊಳ್ಳದೇ, ಏನನ್ನೂ ಅಂಚಿಗೂ ಸೋಕಿಸಿಕೊಳ್ಳದೆ ಉರುಳಿಯೇ ಹೋಯಿತೆಂಬ ವಿಷಾದ  ಖಾಲಿ ಕಣ್ಣುಗಳಲ್ಲಿ ಹೊಗೆಯಂತೆ ತುಂಬಿಕೊಳ್ಳುವುದೂ ಇದೆ.  ಹೊಗೆಮಂಜು ಹನಿಯುವ ಹೃದಯ ಭಾರ ಭಾರ !  ಮೃದುವಾದ ಒಂದು ಚೆಹರೆ, ಒಂದು ಬೆಚ್ಚನೇ ಹಸ್ತ, ನವಿರಾದ ಬೆರಳು ಸೋಕಿ ಬದುಕು ಇಷ್ಟೂ ನಿರ್ದಯವಲ್ಲ ಗೆಳತೀ ಎಂದು ಕಿವಿಯಲ್ಲಿ ಉಸಿರಿದರೆ ಹೇಗೆನಿಸಬಹುದು ! ತುಂಬಾ ಬೇಸರದ ದಿನ, ಅವತ್ತು  ನನ್ನ ಮೆಚ್ಚಿನ ರಂಗಭೂಮಿ ಕಲಾವಿದೆ ಮತ್ತು ನಟಿ ಮೀತಾ ವಶಿಷ್ಠಳನ್ನು ಭೇಟಿಯಾದಾಗ ಅನಿಸಿದ್ದು ಅದೇನೇ.

ಏನೂ ಬೇಡವೆನಿಸಿದ  ಅನ್ಯಮನಸ್ಕತೆಯಲ್ಲಿ  ಕಾಲೆಳೆದುಕೊಂಡು ಹೊರಟಿದ್ದೆ.  ಮೆಟ್ರೋವರೆಗೆ ಹೋಗ್ತಿನಿ ಅಂದ ಬಸ್ಸಿನವ – “ಇನ್ನು ಮುಂದೆ ಹೋಗಲ್ಲ” ಅಂತ  ನನ್ನ ಮನೆಯ ಕಡೆ ಹೊರಳುವ ಕ್ರಾಸಿಗೇ ಇಳಿಸಿಬಿಟ್ಟ.  ಮನೆಗೆ ಹೋಗಿಬಿಡು ಎನ್ನುವ ಮನಸ್ಸನ್ನು ಗಟ್ಟಿಮಾಡಿಕೊಂಡು ಇನ್ನೊಂದು ಆಟೋ ಹತ್ತಿದ್ದೆ. ಎಷ್ಟು ವಿಚಿತ್ರ ಬದುಕು – ಹೀಗೆ ಯಾವುದೋ ತಿರುವಿನಲ್ಲಿ ತಂದು ನಿಲ್ಲಿಸಿಬಿಡುತ್ತದೆ,  ನಾನಿದೀನಿ ಇಲ್ಲಿ ಎಂದ ಬೆಸೆದ ಬೆರಳುಗಳು ಎಲ್ಲಿ ಸಡಿಲಗೊಳ್ಳುವವೋ ಎಂದು ಎದೆ ಕಂಪಿಸುತ್ತದೆ. ನಟ್ಟನಡುವಿನ ಹಾದಿಯಲ್ಲಿ ಎತ್ತ ಹೋಗಲಿ ? ಏನು ಮಾಡಲಿ ತಿಳಿಯದಂಥ ಮಂಕು ಆವರಿಸಿಕೊಂಡಿರುತ್ತದೆ.

ಇಷ್ಟು ದೊಡ್ದ ಶಹರಿನಲ್ಲಿ, ಜೇನುನೊಣಗಳಂತೆ ಗಿಜಗುಡುವ ಜನಜಂಗುಳಿಯಲ್ಲಿ ಅಚಾನಕ್ಕಾಗಿ ಕಾಡುವ ಏಕಾಂಗಿತನ, ಅನಾಥಭಾವ ಎಂಥವರನ್ನೂ ತಬ್ಬಿಬ್ಬುಗೊಳಿಸಿಬಿಡುತ್ತದೆ. ಎಲ್ಲವಿದ್ದೂ ಏನೂ ಇರದ ಭಾವ.  ಮೆಟ್ರೋ, ಮಾರ್ಕೆಟ್ಟು, ಮಾಲುಗಳು, ಬಸ್ಸು,  ಎಲ್ಲಿ ನೋಡಿದರೂ ಹಿಂಡು ಹಿಂಡು ಜನ. ಇವರೆಲ್ಲ ಎಲ್ಲಿಂದ ಬಂದವರು ಮತ್ತು ಎಲ್ಲಿಗೆ ಹೋಗುತ್ತಾರೆ. ಯಾವ ಚೆಹರೆಯೂ ನನಗೆ ಬೇಕಿದ್ದಲ್ಲ.

ಯಾಕೆ ಈ ಜಗತ್ತು ಇಷ್ಟು ಧಾವಂತದಲ್ಲಿ ಓಡುತ್ತಿದೆ ? ಈ ಬದುಕಿಗಾದರೂ ನಂಬಲು ಒಂದು ಅಂತ್ಯವಿದೆ. ಗಮ್ಯವಿದೆ. ಆದರೆ ನಂಬಿಕೆಯ ಕೈಗಳೇ ಇರದ ಅಂತ್ಯಹೀನ ಈ ಸುದೀರ್ಘ ರಸ್ತೆಗಳು ತಲುಪುತ್ತವೆ ಎಲ್ಲಿಗೆ? ನಮ್ಮದಲ್ಲದ, ಪರಿಚಯವಿರದ ಚೆಹರೆಗಳಲ್ಲಿ  ಆಪ್ಯಾಯತೆಯನ್ನು, ಹೃದಯಕ್ಕೆ ಆಪ್ತವಾದುದನ್ನು ಹುಡುಕುವುದು ಅಥವ ಪಡೆದುಕೊಳ್ಳುವ ಹಂಬಲವೇ ಈ ಜೀವನ ? ಇದಲ್ಲ  ಹುಡುಕಿದ್ದು , ಇನ್ನೇನೋ ಇದೆ ಅನಿಸುವಾಗಲೂ, ಮೊಟ್ಟೆ ಇಟ್ಟು ಕಾವಿಗೆ ಕೂತ ಹಕ್ಕಿಯಂತೆ ಜೀವ ವಿಲಗುಡುವಾಗಲೂ, ಗಾಳಿಯ ಸುಳಿವೇ ಇರದೇ ನಡೆಯಲೂ ದುಸ್ಸಾಧ್ಯವೆನಿಸುವ ಕಡುಬೇಸಿಗೆಯ ಆರ್ದ್ರಗೊಂಡ ಮಬ್ಬು ಹಗಲಿನಲ್ಲೂ ಬೆಳ್ಳಿ ಚುಕ್ಕೆಗಳಿಗಾಗಿ ತಹತಹಿಸುವುದೇಕೆ ಮನಸ್ಸು?

ಖಾನ್ ಮಾರ್ಕೆಟ್ಟಿನಿಂದ ಹೆಜ್ಜೆ ಹಾಕಲಾರದೆ ಆಟೋ ಹಿಡಿದು ಹ್ಯಾಬಿಟೇಟ್ ಸೆಂಟರ್ ತಲುಪಿದ್ದೆ.  ಆಗಿನ್ನೂ ಆರೂವರೆ. ಇನ್ನೂ ಅರ್ಧಗಂಟೆ ಶೋ ಶುರುವಾಗಲು.  ಒಂದು ಕಾಫಿ ಹೀರುತ್ತ , ಪುಸ್ತಕಗಳನ್ನು ನೋಡುತ್ತ ಸಮಯ ಕಳೆದು ಆಡಿಟೋರಿಯಂನಲ್ಲಿ ಹೋಗಿ ಕುಳಿತಿದ್ದೆ.

ವೇದಿಕೆಯಲ್ಲಿ ಒಂಟಿ ಖುರ್ಚಿ. ಮತ್ತಷ್ಟು ಮಂದ ಬೆಳಕು, ಮತ್ತಿಷ್ಟು ಕತ್ತಲೆ ಬಿಟ್ಟರೆ ಏನಿಲ್ಲ.  ಇಲ್ಲಿಯೂ  ಏನನ್ನೂ  ತುಂಬಿಕೊಳ್ಳದ   ಖಾಲಿ ಕುರ್ಚಿ, ಖಾಲಿ ಪಾತ್ರೆಯಂಥ ದಿನವನ್ನು ನೆನಪಿಸುತ್ತಿತ್ತು.  ಆಗಲೇ ಆಕೆ  ವೇದಿಕೆಯಿಂದ  ಮೆಲ್ಲಗೇ ಗಾಳಿಯಷ್ಟು ಹಗುರವಾದ ಹೆಜ್ಜೆಗಳಿಡುತ್ತ ಮೆಟ್ಟಳಿದು ಒಮ್ಮೆ ಕೆಳಗೆ ಬಂದಳು.  ಕೈಯಲ್ಲಿ ಒಂದಿಷ್ಟು ಕಾಗದಗಳು. ಅಲ್ಲಲ್ಲಿ ನಾಲ್ಕಾರು ಜನಬಿಟ್ಟರೆ ಸಭಾಂಗಣವೂ ಖಾಲಿ ಖಾಲಿ.

ಆಕೆ ಸುತ್ತಲೂ ನೋಡದೇ ನೇರವಾಗಿ ನನ್ನನ್ನೇ ನೋಡುತ್ತಿರುವಂತೆ ಅನಿಸಿತು. ನಾನೂ ಅವಳನ್ನೇ ನೋಡುತ್ತಿದ್ದೆ. ಪರದೆಯ ಮೇಲಿನ ಮೀತಾ ವಶಿಷ್ಠಳಿಗೂ ಇಲ್ಲಿ ನನ್ನೆದುರು ತುಸು ದೂರದಲ್ಲಿ ನಿಂತ  ಮೀತಾಳನ್ನು ನೋಡುತ್ತಲೆ   ನನಗರಿವಿಲ್ಲದೇ ಸಹಜವಾಗಿಯೇ ನಾನು ’ಹಾಯ್’ ಎಂದು ಕೈಬೀಸಿದೆ.  ಪ್ರತಿಯಾಗಿ ಆಕೆಯೂ ಮುಗುಳ್ನಕ್ಕು ’ಹಾಯ್’ ಎಂದು ಕೈಬೀಸಿದಳು ಮತ್ತು ಬಹುದಿನಗಳ, ಅಲ್ಲ…ಬಹು ಕಾಲದ ಪರಿಚಯವಿರುವ ಗೆಳತಿಯಂತೆ ನನ್ನತ್ತ ನಡೆದು ಬಂದಳು.  ನಾನೂ ಇಷ್ಟು ಹೊತ್ತೂ ಇಷ್ಟು ಕಾಲ ಧ್ಯಾನಿಸುತ್ತಿರುವ ಮೃದುವಾದ ಚೆಹರೆ, ಬೆಚ್ಚನೆಯ ಬೆರಳುಗಳು ನನ್ನ ಕೂಗಿ ಕರೆದಂತೆ  ಎದ್ದು ಕೈಕುಲುಕಿ.  ಬಹಳಷ್ಟನ್ನು ನೋಡಿಲ್ಲವಾದರೂ ನಾನು ನಿಮ್ಮ ಅಭಿಮಾನಿ. ’ದಿಲ್ಲಿಯಲ್ಲಾ ಇರೋದು’  ಅಂದೆ.

ಆಕೆಯೂ ನಾವು ಈ ಹಿಂದೆಯೂ…ಅದರಾಚೆಯ ಹಿಂದೆಯೂ…ಮತ್ತದರಾಚೆಯ ಎಲ್ಲ ಹಿಂದಿನ ಆಯುಷ್ಯದಲ್ಲಿ ಪರಿಚಿತರಿದ್ದವರಂತೆ – “ ಇಲ್ಲಿಲ್ಲ , ನಾನು ಮುಂಬಾಯಿಯಲ್ಲೇ ..ಅಮ್ಮ ಮಾತ್ರ ಇಲ್ಲಿರ್ತಾಳೆ..” ಎಂದು ನಕ್ಕಳು. ಬಹಳ ಖುಷಿಯಾಯ್ತು ನಿಮ್ಮನ್ನು ನೋಡಿ ಎಂದೆ.  “ ಮುಝ್ಝೆ ಭೀ” ಅಂದಳು ನಕ್ಕು.  ನಡುಹಗಲಿನಿಂದಲೂ  ಒಳಗೇ ಮೋಡಕಟ್ಟಿಕೊಂಡಂತಿದ್ದ ದುಗುಡವೆಲ್ಲ ಇನ್ನೇನು ಕಟ್ಟೆಯೊಡೆದು ಹರಿಯುತ್ತದೆನ್ನುವಾಗ ಸಾವರಿಸಿಕೊಂಡೆ.   ಒಂದು ಸೆಲ್ಫೀ ತಗೋಳ್ಳೋಣವಾ – ಎಂದಾಗ  ಇನ್ನೂ ಸನಿಹಕ್ಕೆ ಸರಿದು ಒಂದು ಫೋಟೋ ಕ್ಲಿಕ್ಕಿಸಿದೆವು. ಆಮೇಲೆ ಸಿಗೋಣ – ಅಂತ ಮತ್ತೆ ಆಕೆ  ಇನ್ಯಾರನ್ನೋ ಮಾತಾಡಿಸಲು ತಿರುಗಿದಳು.

ನಾವೆಲ್ಲರೂ ಮೀತಾ ವಶಿಷ್ಠಳನ್ನು ನೋಡಿಯೇ ಇದ್ದೀವಿ.  ಬಹುಶಃ ಸಿನೇಮದ ಥಳಕು ಬಳಕು, ಕೀರ್ತಿಶನಿಯ ಸಮ್ಮೋಹನದಲ್ಲಿ ಬದುಕನ್ನು ಮರೀಚಿಕೆಯಾಗಿಸಿಕೊಳ್ಳದೇ ಎಲ್ಲರೊಳಗೊಂದಾಗಿ ಸಾಮಾನ್ಯ ಬದುಕನ್ನು ಬದುಕುತ್ತಿರುವವರಲ್ಲಿ ಮೀತಾ ಒಬ್ಬರು ಎನ್ನಬಹುದು. ಎಷ್ಟೆಷ್ಟೊ ಸಿನೇಮಗಳಲ್ಲಿ ಚಿಕ್ಕ ಪುಟ್ಟ ಪಾತ್ರಳಲ್ಲಿ ಕಂಡು ಕಾಣದಂತೆ ಮಿಂಚಿದ್ದಾರೆ.  ಕಲಾತ್ಮಕ ಸಿನೇಮಗಳಲ್ಲೂ ಅವಳದು ಅದ್ಭುತ ನಟನೆ. ಪುಣೆಯಲ್ಲಿ ಜನಿಸಿದ ಮೀತಾ ಅವರ ತಂದೆ  ಕರ್ನಲ್ ರಾಜೇಶ್ವರ್ ದತ್ತ್ ವಶಿಷ್ಠ, ತಾಯಿ ಮೀನಾಕ್ಷಿ ಮೆಹತಾ ವಶಿಷ್ಠ – ಶಿಕ್ಷಕಿ ಮತ್ತು ಸಂಗೀತಗಾರ್ತಿ. ಮನೆಯಲ್ಲಿನ ಮಿಲಿಟರಿ ಹಿನ್ನೆಲೆ ಮೀತಾ ಅವರನ್ನು ಶಿಶ್ತುಬದ್ಧ, ಸಹಜ ಮತ್ತು ಸರಳಜೀವಿಯನ್ನಾಗಿಸಿದೆ ಎನಿಸುತ್ತದೆ.  ಯಾವ ಕೃತ್ರಿಮತೆಯೂ ಅವರನ್ನು ಸೋಕಿಲ್ಲ.

ಭೇಟಿಯ ಕ್ಷಣಗಳು ನಿನ್ನೆಯ ಪುಟಗಳಿಗೆ ಸರಿದವು.  ಆದರೆ ಮೀತಾ ನನ್ನಂತರಂಗದಲ್ಲಿ ಉಳಿದುಹೋದರು ಒಂದು ಹಿತವಾದ ಗೀತೆಯಂತೆ. ಮತ್ತೆ ಮತ್ತೆ  ಅವರ ಪಾತ್ರಗಳನ್ನು ನೋಡಿದೆ. ಮನಕಲಕಿ  ಕಾಡುತ್ತಿದ್ದುದು  ಗುಲ್ಜಾರ್ ಬರೆದ “ ಕಿರದಾರ್ ” ಎಂಬ  ಟಿವೀ ಧಾರವಾಹಿಯ ’ಆಂಲಾ ಳ ’ ಕತೆ.  ಮತ್ತೊಮ್ಮೆ ನೋಡಿದೆ.

ಆಂಲಾ…ಒಬ್ಬ ಚಮ್ಮಾರನ ಮಗಳು.  ತಾಯಿ ಮೊದಲೆ ತೀರಿಹೋಗಿದ್ದಾಳೆ.  ತಂದೆ ಇತ್ತೀಚೆಗೆ ತೀರಿಹೋಗಿದ್ದಾನೆ.   ದೊಡ್ದ ಸಿರಿವಂತರ ಹವೇಲಿಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಡುತ್ತ ಹೇಗೋ ಜೀವನ ಕಳೆಯುತ್ತಿದ್ದೆ., ಬೀಸುವುದು, ಮನೆ ಗುಡಿಸುವುದು, ಸಾರಿಸುವುದು, ಹಸುವಿನ ಹಾಲು ಕರೆಯುವುದು, ಹುಲ್ಲನ್ನು ಕೊಯ್ಯುವುದು, ಮೇವು ಹಾಕುವುದು, ಏನೆಂದರೆ ಏನೆಲ್ಲವನ್ನೂ ಆಂಲಾ ಮಾಡಬಲ್ಲಳು.  ಸಾವುಕಾರಣಿಯ ಮಗ ಆರಿಫ್ ( ಓಂಪುರಿ)  ದುಬೈಯಿಂದ  ಬಂದಿರುತ್ತಾನೆ. ಆರಿಫ್ ಮತ್ತು ಆಂಲಾ ಬಾಲ್ಯದಿಂದಲೇ ಬಲ್ಲವರು. ಆಂಲಾಳ ಕಾರ್ಯಕುಶಲತೆ  ಮುಗ್ಧ ಚೆಲುವು ಆರೀಫನನ್ನು ಆಕರ್ಷಿಸುತ್ತದೆ. ಆದರೆ ಆತ ತನ್ನ ಮೆಚ್ಚುಗೆಯನ್ನು ಮುಕ್ತವಾಗಿ ವ್ಯಕ್ತಪಡಿಸಲಾರ.  ಆಂಲಾಳಿಗೂ ಆರೀಫನ ಇರುವು, ಮೆಚ್ಚುಗೆಯ ನೋಟ, ಸ್ನೇಹದ ಮಾತುಗಳು ಹೃದಯವನ್ನು ಆವರಿಸಿಕೊಳ್ಳುತ್ತವೆ.

ಇಬ್ಬರಲ್ಲೂ ಹೇಳಿಕೊಳ್ಳಲಾಗದ ಆಕರ್ಷಣೆ. “  ಬಯಸುವ ಮತ್ತು ಬಯಸದೇ ಇರುವುದರ ನಡುವೆ ಬಹು ತೆಳುವಾದ ರೇಖೆಯಷ್ಟೆ  ಇರುತ್ತದೆ.  ಆರಿಫ್ – ಇಷ್ಟೆಲ್ಲ ಕೆಲಸವನ್ನು ಮಾಡುವ ಅವಳನ್ನು ಮೆಚ್ಚುತ್ತ – ಪ್ರತಿ ಸಲ “ ನಿನಗೆ ಏನೇನು ಬರುತ್ತದೆ” ಎಂದು ಕೇಳುತ್ತಿರುತ್ತಾನೆ. ಆಗೆಲ್ಲ ಆಂಲಾ ಎಲ್ಲವೂ ಬರುತ್ತದೆ…ಚಪ್ಪಲಿ ಹೊಲಿಯುವುದನ್ನು ಬಿಟ್ಟು ಎಲ್ಲವೂ ಬರುತ್ತದೆ , ನೀವು ಇಲ್ಲಿಯೇ ಇದ್ದರೆ ನಿಧಾನಕ್ಕೆ ನಿಮಗೆ ಗೊತ್ತಾಗುತ್ತದೆ ಎನ್ನುತ್ತಾಳೆ.  ತಾನಿರುವಾಗ ಅವನಿಗೆ ಯಾವ ಕೆಲಸದ ಭಾರವೂ ಇರಕೂಡದು ಎನ್ನುವಂತೆ ಎಲ್ಲವನ್ನೂ ಆಂಲಾ ಖುಷಿ ಖುಷಿಯಾಗಿ ಮಾಡುತ್ತಾಳೆ.

ಆರಿಫ್ ಮರಳಿ ಹೋಗುವ ದಿನ ಬರುತ್ತದೆ.  ಮನೆಯಲ್ಲಿ ದೊಡ್ದ ಭೋಜನಕೂಟ ( ದಾವತ್) ಇರುತ್ತದೆ. ಆಂಲಾ ಅದು ತನ್ನದೇ ಮನೆಯೆನ್ನುವಂತೆ ಎಲ್ಲ ಜವಾಬ್ದಾರಿಯನ್ನು ತಲೆಮೇಲೆ ಹೊತ್ತುಕೊಂಡು ಮಾಡುತ್ತಾಳೆ.  ದಾವತ್ ಮುಗಿದು, ಎಲ್ಲರ ನೌಕರಿಗೆ ಔತಣದ ಊಟ, ಸಂಬಳ ಹಂಚುವಾಗ ಆಂಲಾಳನ್ನೆ ಮರೆತಿರುತ್ತಾನೆ ಆರಿಫ್. ಮರೆವೆಂದರೆ ಮರೆವಲ್ಲ ಅದು. ಅವಳು ಅವನೊಳಗೇ ಉಳಿದುಹೋದ ಮಧುರಭಾವ. ತನ್ನದಾಗದ ಯಾವುದೋ ತನ್ನದೇ ಭಾಗವಾಗಿಹೋದ ಆಪ್ಯಾಯತೆ.  ಆಂಲಾ ತನ್ನನ್ನು ಅಲಕ್ಷಿಸಿದನೆಂಬ ಬೇಸರದಲ್ಲಿ ತನ್ನ ಗುಡಿಸಲಿಗೆ ಹೋಗಿರುತ್ತಾಳೆ.  ಸಾವುಕಾರಣಿ ಆಂಲಾಳೇ  ದಾವತಿನ ಎಲ್ಲ ಹೊಣೆಯನ್ನೂ ಹೊತ್ತು ದುಡಿದಿದ್ದನ್ನು ನೆನೆದು, ಅವಳಿಗೂ ಊಟ ಮತ್ತು ಕಾಣಿಕೆ ಕೊಟ್ಟು ಬಾ ಎನ್ನುತ್ತಾಳೆ. ಆರಿಫ್ ಬರುತ್ತಾನೆ,  ಹೊರಗಡೆ ನಿಂತು ’ಆಂಲಾಳನ್ನು ಕೂಗಿ ಕರೆಯುತ್ತಾನೆ’

ಆರೀಫನ ಒಂದು ಕರೆಗಾಗಿಯೇ ಅವಳ ಮೈಮನಗಳೆಲ್ಲ ಕಾದಿರುವಂತೆ ಆಂಲಾ ಜಿಂಕೆಯಂತೆ ಓಡಿ ಹೊರಬರುತ್ತಾಳೆ.  ’ಬೀಜಿ’ ಕಳಿಸಿರಬೇಕು,. ನಾನು ಹೇಳಿದ್ದನ್ನು ’ಬೀಜಿ’  ಹೇಳಿದರಲ್ಲವಾ ? ಎನ್ನುತ್ತ.  ಪಾತ್ರೆಯನ್ನು ತೆಗೆದುಕೊಂಡು ಒಳಗಿಟ್ಟು ಬರುತ್ತಾ ಅವನ ಕೈಗೆ ಒಂದು ಮಡಿಚಿದ ಪೊಟ್ಟಣ ಕೊಡುತ್ತ, ಇದನ್ನಿಟ್ಟುಕೊಳ್ಳಲು  ನಿಮ್ಮ  ಟ್ರಂಕಿನಲ್ಲಿ ಜಾಗವಿರಬಹುದಲ್ಲ…, ಹೇಗೂ ನಾನೇ ಗಾಡಿಯಲ್ಲಿ ಇಡ್ತೀನಲ್ಲ” .ಎನ್ನುತ್ತಾಳೆ.

ಆರಿಫ್ ಏನೆಂದು ಕೇಳಿದಾಗ – ಅಂಲಾ…ಕಾಗದದಿಂದ ಕುರ್ತಾ ತೆಗೆದು ಬಿಡಿಸಿ ಅವನೆದುರು ಹಿಡಿಯುತ್ತಾಳೆ.  ಇದು ನಿಮಗಾಗಿ ಆರೀಫ್ ಮಿಂಯಾ ಅನ್ನುತ್ತಾಳೆ.

ಇದನ್ನೂ ನೀನೆ ಹೊಲಿದೆಯಾ ? ಆರಿಫ್ ಕೇಳುತ್ತಾನೆ

ಹಾಂ…

ಈ ಕಸೂತಿ ?

ಇದನ್ನೂ ನಾನೇ  ಮಾಡಿದ್ದೇನೆ …

ಅವನು ಅದೇ ಬೆರಗಿನಲ್ಲಿ ಅಭ್ಯಾಸದಂತೆ  – “ಮತ್ತೆ ಏನೇನು ಬರುತ್ತದೆ ನಿನಗೆ ? ಔರ್ ಕ್ಯಾ ಕ್ಯಾ ಕರ್ ಲೇತೆ ಹೋ ತುಮ್ ? ” ಎನ್ನುತ್ತಾನೆ ಆರಿಫ್

ಆಂಲಾ……ಎಲ್ಲವೂ ಬರುತ್ತದೆ ಆರಿಫ್ ಮಿಂಯಾ, ಪ್ರೀತಿಸುವುದನ್ನೂ ಬಲ್ಲೆ ನಾನು.  ನಿಮಗೇ ಕಾಣಿಸೋದಿಲ್ಲ “ ಗದ್ಗದಳಾಗಿ ನುಡಿಯುತ್ತಾಳೆ.  ಕತೆ ಅಲ್ಲಿಗೇ ಕೊನೆಗೊಳ್ಳುತ್ತದೆ.

’ಪಾತ್ರ’  (’ಕಿರದಾರ್)  ಮುಗಿದರೂ  ಪಾತ್ರದ ಆಳದಿಂದ ಹೊರಬರಲಾಗುವುದೇ ಇಲ್ಲ.

ಹವೇಲಿಯ ನೆರಳಲ್ಲಿದ್ದರೂ ಆಂಲಾ  ಹವೇಲಿಯ ಗೋಡೆಯ ಮೇಲಿನ ಸುಣ್ಣವೂ ತಾನಾಗದ ವ್ಯಥೆಯಿದೆ. ಹಸುವಿಗೆ ಹುಲ್ಲು ಕೊಯ್ದು ಹಾಕಬಲ್ಲಳು ಆದರೆ ದೊಡ್ದವರ ಅಂಗಳದ ಗರಿಕೆಯೂ ಆಗಲಾರಳು, ಆರೀಫನಿಗೆ ಅಂಗಿಯನ್ನೂ ಹೊಲಿಯಬಲ್ಲಳು, ಕಸೂತಿಯನ್ನೂ ಹಾಕಬಲ್ಲಳು,  ಆದರೆ ಅಂಗಿಯನ್ನು ಕಸೂತಿಯನ್ನು ಹೆಣೆದ ದಾರ ಆರೀಫನ ಮತ್ತು ಆಂಲಾಳ ಬದುಕನ್ನು ಹೆಣೆಯಲಾರದೆನ್ನುವ ಸತ್ಯವನ್ನು ಅವಳು ಚೆನ್ನಾಗಿ ಬಲ್ಲಳು.  ತನ್ನ ಜಾತಿಯಿಂದಾಗಿ ತನ್ನ ಕನಸುಗಳನ್ನು ಕುಗ್ಗಿಸಿಕೊಳ್ಳುವ, ಆಸೆಗಳನ್ನು ಹೊಲಿಯದೇ ಅಲ್ಲಿಗಲ್ಲಿಗೇ ಕತ್ತರಿಸಿಹಾಕುವ  ಕಲೆಯನ್ನೂ ಬಲ್ಲಳವಳು.

ಮೀತಾಳ ಯಾವ ಮಾತುಗಳನ್ನು ಮರೆಯಲಾಗುವುದಿಲ್ಲ. .  ಚೂಪಾದ ಒಂದು ಸಣ್ಣ ಮೌನ, ಹರಿತವಾದ ಕಣ್ಣ ನೋಟ ಯಾವುದೂ ಅಂತರಂಗದಿಂದ ಕದಲುವುದೇ ಇಲ್ಲ. ಎಲ್ಲವನ್ನೂ ಕಲಿತಿದ್ದೇನೆ ಆದರೆ ಅಪ್ಪನಂತೆ ಚಪ್ಪಲಿ ಹೊಲಿಯುವುದನ್ನು ಮಾತ್ರ ಕಲೀಲಿಲ್ಲ ಎನ್ನುವ ಅವಳ ದನಿಯಲ್ಲಿ ಅಪಾರವಾದ ವಿಷಾದವಿದೆ.  ಹಿಟ್ಟು ಬೀಸುವಷ್ಟೇ ಸಹಜವಾಗಿ ಅವಳಿಗೆ ಪ್ರೇಮಿಸಲೂ ಬರುತ್ತದೆ, ಆದರೆ ಅರಿಯಬೇಕಾದ ಹೃದಯ ಅರಿತೂ ಅರಿಯದಂತೆ ನಿರ್ಲಿಪ್ತವಾಗಿರುವುದು ಅವಳನ್ನು ಕುಗ್ಗಿಸುತ್ತದೆ.  ’ ನನಗೆ ಪ್ರೇಮಿಸಲೂ ಬರುತ್ತದೆ ಆರೀಫ್ ಮಿಂಯಾ ’ ಎನ್ನುವ  ಆಂಲಾ ಸೋತಿಲ್ಲ, ಗೆದ್ದಿದ್ದಾಳೆ.  ಸುಳ್ಳು ಹೇಳಿ ಆತ್ಮವಂಚನೆ ಮಾಡಿಕೊಳ್ಳದ ಆಂಲಾಳ  ನೈಜತೆ, ಸೋಗಿನ ಸಮಾಜಕ್ಕೆ  ಒಡ್ಡುವ ಸವಾಲಿನಂತೆ ಮುಖಾಮುಖಿಯಾಗುತ್ತದೆ. ಆರೀಫ್‍ ಮೌನವಾಗುತ್ತಾನೆ.  ಹೇಳಿಕೊಳ್ಳುವುದೇನೂ ಇರದ ಖಾಲಿ ಪಾತ್ರೆಯಂತೆ

ಆಂಲಾಳ ಗುಂಗು ಇನ್ನಷ್ಟು ದಿನ ಕಾಡುತ್ತಲೆ ಇರುತ್ತದೆ…… ….ಹೀಗೆ……….

3 Responses

 1. sadaask says:

  ನಮಗೆ ಅವಳ ಗುಂಗು ಹಿಡಿಸಿಬಿಟ್ರೆ. ವಿಷಯದ ಜೊತೆ ಇನ್ನೂ ಹೆಚ್ಚು ಆಪ್ತವೆನಿಸುವುದು ನಿಮ್ಮ ಬರಹದ ಶೈಲಿ.

 2. ಮಿತಾರ ಬಗ್ಗೆ ಆಪ್ತವಾಗಿ ಪರಿಚಯಿಸಿದ್ದೀರಿ .
  ಪರಿಚಯಿಸಿರುವ ಕ್ರಮವೂ ಸೊಗಸು
  ಬರವಣಿಗೆಯ ಲಹರಿ ಇಷ್ಟವಾಯ್ತು .

 3. ರಾಜೀವ says:

  ಆರ್ದ್ರಗೊಳಿಸುವ ಬರೆಹ…ಮಿತಾಳ ಅಭಿನಯವನ್ನು ನಾನು ಮೆಚ್ಚುತ್ತೇನೆ. ಮನಸ್ಸಿನ ಭಾವಗಳನ್ನು ಕಣ್ಣುಗಳಲ್ಲಿ ಅದ್ಭುತವಾಗಿ ಅಭಿವ್ಯಕ್ತಿಸಬಲ್ಲಳು..nicely written

Leave a Reply

%d bloggers like this: