ಜೋಯ್ಡಾದ ಹುಡುಗಿಯ ಪುಳಕ

 

 

ಕೋಳ್ಗಂಬ

ಸಚಿನ್ ಅಂಕೋಲಾ

 

 

 

ಜೋಯ್ಡಾದ ದಟ್ಟಾರಣ್ಯಗಳಲ್ಲಿ, ಹಚ್ಚ ಹಸಿರ ವನ ಸಿರಿಯ ನಡುವೆ ಪ್ರಕೃತಿಯ ಪುಟ್ಟ ಮಗುವಾಗಿ ಪ್ರತಿ ಕ್ಷಣವೂ ಆನಂದದಲ್ಲಿ ಪುಳಕಗೊಳ್ಳುತ್ತಾ, ಹಳ್ಳಿ ಮಕ್ಕಳಿಗೆ ವಿದ್ಯೆ ಹೇಳಿಕೊಡುವ ಭಾವನಾತ್ಮಕ ಕೆಲಸದಲ್ಲಿ ನಿತ್ಯವೂ ಹೊಸದಾಗಿ ಅರಳುತ್ತಾ ಕವಿತೆಗಳ ಪರಿಮಳವ ಎಲ್ಲೆಡೆ ಪಸರಿಸುತ್ತಿರುವ ಸ್ವಚ್ಛ ಸುಂದರ ಮನದ ಅಕ್ಷತಾ ಅವರ ಎರಡನೇ ಕವನ ಸಂಕಲನವಿದು…

‘ಕೋಳ್ಗಂಬ’ ಪದ ಕೇಳಿದಾಗಲೇ ಬಾಲ್ಯ, ಹಳ್ಳಿಯ ಮನೆಗಳು ನೆನಪಾಗುತ್ತವೆ..

ಕಾಂಕ್ರೀಟು ಕಾಡಿನಲ್ಲಿ ಬದುಕುತ್ತಿರುವ ನಾವು ಕೋಳ್ಗಂಬ ಪದವನ್ನೇ ಮರೆತೇಬಿಟ್ಟಿದ್ದೆವು… ಅಂತಹ ಒಂದು ಅಮೂಲ್ಯವಾದ ವಿಚಾರವನ್ನು ನೆನಪಿಸಿದಕ್ಕೆ ಮತ್ತು ಈ ಸಂಕಲನದ ಮೂಲಕ ಮುಂದಿನ ತಲೆಮಾರಿಗೆ ಕೋಳ್ಗಂಬ ಪದವನ್ನು ರವಾನಿಸಿದ್ದಕ್ಕಾಗಿ ಅಕ್ಷತಾ ಅವರನ್ನು ಅಭಿನಂದಿಸಲೇಬೇಕು…

ಈ ಸಂಕಲನದ ಮೊದಲ ಕವಿತೆಯೇ ಕೋಳ್ಗಂಬ. ಈ ಕವಿತೆ ತನ್ನ ಬಿಗಿಯಾದ ನಿರೂಪಣೆಯಿಂದ ಎಲ್ಲೂ ಜಾಳಾಗದಂತೆ ಕಟ್ಟಿಕೊಂಡಿರುವ ಪರಿ ಸಂಕಲನದ ಕುರಿತು ಅಪಾರ ನಿರೀಕ್ಷೆಗಳನ್ನು ಹುಟ್ಟಿಸಿಬಿಡುತ್ತದೆ…

ಸೂತಕದ ನೆರಳು ಸುಳಿಯದ ಹಾಗೆ/ ಮೀರಿ ತೂಗಿದೆ ತೊಟ್ಟಿಲು/ಪರಿಶುದ್ಧ…/ಬುದ್ಧಳಾಗಿ …

ನೀನು/ ಮನೆಯ ಕೋಳ್ಗಂಬ/ ಮಡಿಲಲಿ ಬೆಳೆದ ಗುಬ್ಬಿಮರಿ ನಾನು/ಬರಿಯ ನಾನು..  

ಇಲ್ಲಿ ಕವಿ ತನ್ನ ತಾಯಿಯನ್ನು  ಮನೆಯ ಕೋಳ್ಗಂಬವೆಂದು ಕರೆದಿರುವುದು ಬಹಳ ಸಶಕ್ತವಾದ ರೂಪಕ ಎನಿಸುತ್ತದೆ… ಒಬ್ಬ ತಾಯಿ ತನ್ನ ಕುಟುಂಬಕ್ಕಾಗಿ ಏನೆಲ್ಲಾ ತ್ಯಾಗ ಮಾಡುತ್ತಾಳೆ, ಏನೆಲ್ಲಾ ಕಷ್ಟ ಕಾರ್ಪಣ್ಯಗಳ ಎದುರಿಸುತ್ತಾಳೆ.. ಅಂತೆಯೇ ಈ ಕೋಳ್ಗಂಬವು ಸಹ ಇಡಿ ಸೂರಿನ ಭಾರವನ್ನು ಹೊತ್ತು ನಮ್ಮೆಲ್ಲರನ್ನು ತನ್ನ ಮಡಿಲಲ್ಲಿ ಕಾಪಾಡುವ ತಾಯಿಯೇ ಸರಿ… ಈ ಕವಿತೆ ಜಗದ ಎಲ್ಲಾ ತಾಯಂದಿರಿಗೂ ಸಲ್ಲಿಸಿದ ಗೌರವದಂತಿದೆ…

 

ಅಕ್ಷತಾ ಅವರ ಕವಿತೆಗಳನ್ನು ತುಂಬಾ ಸಮಯದಿಂದ ಇಷ್ಟಪಟ್ಟು ಓದುತ್ತಿರುವೆ..ಅವರ ಕವಿತೆಗಳ ಪ್ರಧಾನ ವಸ್ತು ಪ್ರೀತಿ-ಪ್ರಕೃತಿ-ಪುರುಷ… ಪ್ರಸ್ತುತ ಸಂಕಲನದಲ್ಲೂ ಈ ಗಾಢತೆ ದಟ್ಟವಾಗಿ ಆವರಿಸಿದೆ.. ಸಂಬಂಧಗಳ ಸೂಕ್ಷ್ಮತೆಯನ್ನು ಎಳೆ ಎಳೆಯಾಗಿ ಬಿಡಿಸುತ್ತಾ, ಸುಕ್ಕು -ಗಂಟುಗಳ ಜಾಗೃತೆಯಿಂದ ಕಳಚಿಕೊಳ್ಳುತ್ತಾ, ಕಾವ್ಯವನ್ನು ಬೆಸುಗೆಯನ್ನಾಗಿ ಬಳಸುವ ಇವರ ಕವಿತೆಗಳು ಭಾವುಕತೆಯನ್ನೇ ಮರೆಯುತ್ತಿರುವ ಈ ದಿನಗಳಲ್ಲಿ ಮಹತ್ವದ್ದು ಎನಿಸುತ್ತದೆ….

‘ಮಧ್ಯಾಹ್ನದ ಮಾತು’ ಕವಿತೆಯ

“ಪಡೆದಿರುವೆ ಗುರುತಿನ ಚೀಟಿ

ಆದರೂ ಯಾಕೋ ಪದೇ ಪದೇ

ಕೇಳುತ್ತಲೇ ಇರುತ್ತದೆ

ಅಪರಿಚಿತ ಕೂಗು

ಪರಿಚಿತವಾದ ಗಳಿಗೆಗಳು

ಇದ್ದಕ್ಕಿದ್ದಲ್ಲೆ ಅಪರಿಚಿತ.”

ಎಂಬ ಸಾಲುಗಳು ನಿರೀಕ್ಷಿಸದೇ ಬರುವ ಅಪರಿಚಿತ ಗಳಿಗೆಗಳ ಕುರಿತು ವಿವರಿಸುತ್ತದೆ…

“ಕನಸು ಕಟ್ಟಿ ರೆಕ್ಕೆಗಳ ಜೋಡಿಸಿ

ಹಾರಲು ಕಲಿಸಿದೆ ನೀನು ಪುನಃ

ಪಂಜರದೊಳಗೆ ಹಾರು ಎನ್ನುವುದು

ಸರಿಯೇನು..?”

‘ಅಂತಿಮ ಪ್ರಶ್ನೆ ನನ್ನಲೂ ಉಳಿದಿದೆ’ ಕವಿತೆಯ ಈ ಅಂತಿಮ ಪ್ರಶ್ನೆ ಉತ್ತರಿಸಾಗದಂತೆ ಕಟ್ಟಿಹಾಕುತ್ತದೆ, ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಪ್ರತಿ ದಿನವೂ ಇಂತಹ ಪ್ರಶ್ನೆಗಳ ನಡುವೆಯೇ ಬದುಕುತ್ತಿರುವುದನ್ನು ಸಶಕ್ತವಾಗಿ ಬಿಂಬಿಸುತ್ತದೆ…

ಅಕ್ಷತಾರ ಕವಿತೆಗಳಲ್ಲಿ ಪ್ರೀತಿ ಮತ್ತು ಪ್ರಕೃತಿಯ ನಡುವಿನ ಬೆಸುಗೆ ಸೊಗಸಾಗಿ ಗೋಚರಿಸುತ್ತದೆ..’ಚಳಿ’ ಕವಿತೆಯ ಈ ಸಾಲುಗಳೇ ಅದಕ್ಕೆ ಸಾಕ್ಷಿ,

“ಚಳಿಯೆಂದರೆ/ ನಿನ್ನೆದೆಯ ಗೂಡೊಳಗೆ/ಹುದುಗಿ ಬಿಸಿಯಾಗುವ ಹೊತ್ತು…”
ಈ ಸಂಕಲನದಲ್ಲಿ ಕವಿ ಅಪ್ಪಟ ಪ್ರೇಮಿಯಾಗಿ ತನ್ನಿನಿಯನಲ್ಲಿ ಪ್ರೇಮ ನಿವೇಧಿಸಿಕೊಳ್ಳುವ ಒಂದಷ್ಟು ಆಪ್ತವಾದ ಸಾಲುಗಳನ್ನು ನೀಡಿದ್ದಾರೆ..

“ಪೂರ್ಣವಿರಾಮವ ನೀಡದ ಖಾಯಂ ಒಲುಮೆ/ ಗೀತೆ ಹಾಡುವೆಯಾದರೆ ನನ್ನೊಂದಿಗೆ ನಡೆ..”
“ನಾನಂತೂ ಸೆಲ್ಪಿಯಲ್ಲೂ ನಿನ್ನನ್ನೆ ಕಾಣುವೆ..”
“ಈಗ ಅನಿಸುತಿದೆ/ ಪ್ರೀತಿಸುವುದು ಅಂದರೆ/ ಬೇರೆ ಬೇರೆಯಾಗಿ ಅರಳಿಕೊಳ್ಳುವುದು.”
“ಮಳೆ ಬಿದ್ದಂತೆ ಹುಲ್ಲು ಹುಟ್ಟುವ ಪರಿಗೆ/ ನವಿಲುಗರಿಯ ನೀಡಿ ನನ್ನ ಗೆಲ್ಲುವ ಪರಿಗೆ..”
ಹೀಗೇ ಈ ಕೃತಿಯಲ್ಲಿ ಪ್ರೀತಿಯ ಕುರಿತಾದ ಅನೇಕ ಸುಂದರ ಸಾಲುಗಳಿವೆ…

ಕುಟುಂಬ ವ್ಯವಸ್ಥೆಯನ್ನು ಅಪ್ಪುತ್ತಲೇ ಅಲ್ಲಿನ ಅಸಮಾನತೆಯ ನಿಲುವುಗಳನ್ನು ಬಹಳ ದಿಟ್ಟವಾಗಿ ಬರೆಯುತ್ತಾರೆ.. ‘ಅವರು ಹೇಳುತ್ತಲೇ ಇದ್ದಾರೆ’ ಕವಿತೆಯಲ್ಲಿನ “ಹೊದ್ದುಕೋ, ಮೈ ತುಂಬ ಸೆರಗು/ ಪಲ್ಲು ಏನಾದರೂ ಒಂದು ತುಂಡು/ ಕೊನೆಗೆ ಕರವಸ್ತ್ರವಾದರೂ/ ಅದಕೂ ಹೇಳು/ ನಕ್ಕು ಜಾರಬೇಡ ಎಂದು..”

” ಹೊರಗುಳಿ ಆ ಮೂರು ದಿನ/ ಎಷ್ಟೇ ಮುಂದುವರಿದರೂ”..ಎನ್ನುವ ಸಾಲುಗಳು ಆಕ್ರೋಶವನ್ನು ಅತ್ಯಂತ ಸಮರ್ಥವಾಗಿ ವ್ಯಕ್ತಪಡಿಸುತ್ತಾವೆ, ಹಾಗೇ ಮುಂದುವರಿದು ಕವಿ ಕೊನೆಯಲ್ಲಿ ಸ್ಪಷ್ಟ ನಿರ್ಧಾರವೊಂದನ್ನು ಪ್ರಕಟಿಸುತ್ತಾರೆ. “ಕರಿ ನೆಲದ ಮೇಲೆ ಅವಳೇ ಇಟ್ಟ/ ಚುಕ್ಕಿಗಳ ದಿಕ್ಕು ಬದಲಾಯಿಸಿ/ ನವೀಕರಿಸಬೇಕಿದೆ /ಅದೇ ರಂಗೋಲಿ/ ನಗಬೇಡ ಎಂದವರ ಮುಂದೆ…”

ಈ ಸಂಕಲನದ ಮತ್ತೆರಡು ಪ್ರಮುಖ ಕವಿತೆಗಳಾದ ‘ನೀ ಹೀಗೆ..ಹಾಗೆ’ ಕವಿತೆಯಲ್ಲಿ ಹೆಣ್ಣು ಎಂಬ ಕಾರಣಕ್ಕಾಗಿಯೇ ತನ್ನೆಡೆಗೆ ಅನುಕ್ಷಣವೂ ತೂರಿ ಬರುವ ಪ್ರಶ್ನೆಗಳನ್ನು ದಾಖಲಿಸುತ್ತಾ ಕೊನೆಯಲ್ಲಿ “ಇರುಳು ತಿಂದ ಹೊಡೆತ ಮರೆತು/ ಮರುದಿನ ಮತ್ತೆ ಬೇಗನೆ ಎದ್ದು/ ತುಂಡಾದ ಕರಿಮಣಿ ಸರ ಪೋಣಿಸುವವಳು..” ಎನ್ನುವ ಮೂಲಕ ಮಾನಸಿಕ ದೈಹಿಕ ದಾಳಿಗಳ ನಂತರವೂ ಎಲ್ಲವನ್ನು ಕ್ಷಮಿಸುತ್ತಾ ಮತ್ತೊಂದು ದಿನಕ್ಕೆ ಸಜ್ಜಾಗುವ ಹೆಣ್ಣಿನ ಅಪಾರ ತಾಳ್ಮೆ, ಸಹನೆ, ಭರವಸೆಗಳನ್ನು ಚಿತ್ರಿಸುವ ಈ ಕವಿತೆ ನನಗೆ ಅಚ್ಚುಮೆಚ್ಚಾದದ್ದು…

ಹಾಗೆಯೇ ‘ಇನ್ನೂ ಬೇಕಾದಷ್ಟಿದೆ’ ಕವಿತೆಯಲ್ಲಿ “ಎಲ್ಲರೂ ಉಂಡುಟ್ಟು ಹಾಸಿಗೆಗೆ ಒರಗಿದಾಗ/ ಹಿತ್ತಲಿನ ಹಿಂಬಾಗಿಲಲಿ ಮುಸುರೆಗಳ/ ಹರಡಿ ತಿಕ್ಕುತ್ತಾ ಕೂತಾಗ ಕೈ ಕರಿಯಾದರೂ/ ಆಕಾಶದಲರಳಿದ ನಕ್ಷತ್ರ ನಗುತ್ತದೆ/ ಅಥವಾ ಹಂಗಿಸುತ್ತದೆ..”ಎಂಬ ಸಾಲುಗಳು ಒಮ್ಮೆ ದಂಗಾಗಿಸಿದವು..

ಮೇಲಿನ ಈ ಎರಡೂ ಕವಿತೆಗಳು ಕುಟುಂಬ ವ್ಯವಸ್ಥೆ ಹೆಣ್ಣಿಗೆ ವಿಧಿಸಿರುವ ಕಟ್ಟುಪಾಡುಗಳ ಬಗೆಗಿನ ಆಕ್ರೋಶವನ್ನು ಅಷ್ಟೇ ತಣ್ಣನೆಯ ದನಿಯಲ್ಲಿ ವ್ಯಂಗ್ಯದ ರೂಪದಲ್ಲಿ ಅನಾವರಣಗೊಳಿಸುತ್ತವೆ…

‘ಸುಗ್ಗಿ’ ಎಂಬ ಕವಿತೆ ಅಂಕೋಲೆಯ ಹಾಲಕ್ಕಿ ಜನಾಂಗದ ಮಹಿಳೆಯರ ಬದುಕನ್ನು ಬಣ್ಣಿಸುವ ಸೊಗಸಾದ ಕವಿತೆ.. “ಬಾರೇ/ ಸುಕ್ರಿ ಸೇವಂತಿ/ ನುಗ್ಲಿ/ ನೀವಿದ್ದರೆ ಮಾತ್ರ/ ಅಂಕೋಲೆ ಅನುದಿನವೂ ಸುಗ್ಗಿ..”ಎನ್ನುತ್ತ ಅವರ ವಿಶಿಷ್ಟ ಪರಂಪರೆಯ ಮಹತ್ವವನ್ನು  ಬಣ್ಣಿಸಿದ್ದಾರೆ..

ಹಾಗೆಯೇ ‘ಸರಸಿ’ ಎಂಬ ಕವಿತೆಯೂ ಕುಣಬಿ ಹೆಣ್ಣುಮಕ್ಕಳ ಬಗೆಗಿನ ಬಹಳ ವಿಶೇಷವಾದ ಕವಿತೆಯಾಗಿದೆ…
“ಬಿಳಿ ಮಣಿಯ/ ಒಂದೆಳೆಯ ಸರ ತೂಗಿದ/ ಕೊರಳಲಿ ಬಂಗಾರದ/ ಎಳೆ ಕಾಣದ /ಕಣ್ಣು/ ನಮ್ಮೂರ ಕುಣಬಿ ಹೆಣ್ಣು..”

ಹೀಗೇ ಈ ಸಂಕಲನದಲ್ಲಿ ‘ಇದು ವಿದಾಯದ ಗಳಿಗೆ’, ‘ಮಾಧವಿಯೊಡನೆ ಮಾತುಕತೆ’, ‘ಅಣಶಿ, ‘ಅರಬ್ಬಿ ಕಡಲಿನ ಕಪ್ಪು’ಅಂತಹ ಉತ್ತಮ ಕವಿತೆಗಳು ಸಾಕಷ್ಟಿವೆ..

ಮಳೆ-ಪ್ರೀತಿಯ ಕುರಿತ ಒಂದಷ್ಟು ಸೊಗಸಾದ ಹನಿಗಳು ಈ ಸಂಕಲನದ ಮೆರಗು ಹೆಚ್ಚಿಸಿವೆ…

“ಈ ಹಾಡು ನಿನ್ನ ಮೆಚ್ಚಿಸಲಲ್ಲಾ/ ಒಲವು ಬೆಳೆಯಲು” ಎನ್ನುವ ಈ ಕವಿ ಒಲವು ಬೆಳೆಸುವ, ಒಲವ ಬೆಚ್ಚನೆ ಕಾಪಿಟ್ಟುಕೊಳ್ಳುವ ಉತ್ತಮ ಕವಿತೆಗಳನ್ನು ನೀಡುತ್ತಲೇ ಇರಲಿ ಎಂಬುದು ನನ್ನ ಹಾರೈಕೆ…

Leave a Reply