ವೇಳು, ನಮ್ಮ ವಿವೇಕ ಎಲ್ಲಿ ಹೋಯ್ತು ಹೇಳು!

 

ಭಾರತೀಯ ವಿದ್ಯಾಭವನ ನೀಡುವ  ಡಾ.ವಿ.ಕೃ. ಗೋಕಾಕ್ ರಾಷ್ಟ್ರೀಯ ಪುರಸ್ಕಾರಕ್ಕೆ ಹಿರಿಯ ವಿಜ್ಞಾನ ಬರಹಗಾರ ನಾಗೇಶ್ಹೆಗಡೆಯವರನ್ನು ಆಯ್ಕೆ ಮಾಡಲಾಗಿದೆ.

‘ಅವಧಿ’ಯ ಅಭಿನಂದನೆಗಳು 

 

ನಾಗೇಶ್ ಹೆಗಡೆ

 

 

ರಾಜ್ಯದಲ್ಲೆಲ್ಲ ಭರ್ಜರಿ ಮಳೆಯಾಗುತ್ತಿರುವ ಈ ದಿನಗಳಲ್ಲಿ ಮಹಾರಾಷ್ಟ್ರದ ‘ವೇಳು’ ಹೆಸರಿನ ಗ್ರಾಮ ನಮ್ಮ ಹಳ್ಳಿಗಳಿಗೆ ಮಾದರಿಯಾಗಬೇಕು. ಆಮಿರ್‍ಖಾನ್‍ ನಡೆಸುವ ‘ವಾಟರ್‍ ಕಪ್‍’ ಸ್ಪರ್ಧೆಯಲ್ಲಿ ಕಳೆದ ವರ್ಷ 50 ಲಕ್ಷ ರೂಪಾಯಿಗಳ ಮೊದಲ ಬಹುಮಾನ ಪಡೆದ ಗ್ರಾಮ ‘ವೇಳು’. ಇಲ್ಲಿಯ ಹೆಂಗಸರು, ಮಕ್ಕಳು, ಗಂಡಸರೆಲ್ಲ ಸೇರಿ ಆಕಾಶದಿಂದ ಸುರಿದ ಮಳೆಯೆಲ್ಲ ಹಳ್ಳಕ್ಕೆ ಹೋಗದ ಹಾಗೆ ಶ್ರಮದಾನ ಮಾಡಿ ನೂರಾರು ತೋಡುಗಳನ್ನು ನಿರ್ಮಿಸಿದರು.

ಅವರೆಲ್ಲ ಸೇರಿ 27,360 ಕೋಟಿ ಲೀಟರ್‍ (27ಸಾವಿರ+ ಕೋಟಿ) ನೀರನ್ನು ಸಂಗ್ರಹಿಸಿದರು. ಅದು ಎಷ್ಟೆಂದರೆ 2 ಕೋಟಿ 37 ಲಕ್ಷ ಟ್ಯಾಂಕರ್‍ಗಳಷ್ಟು (ಪ್ರತಿ ಟ್ಯಾಂಕರಿನಲ್ಲಿ 10 ಸಾವಿರ ಲೀಟರ್‍ ಲೆಕ್ಕದಲ್ಲಿ) ನೀರು! ‘ದುಷ್ಕಾಲ್’ (ಬರಗಾಲ) ದೂರ ಓಡಿತು. ಕೆರೆ, ಬಾವಿ ಜಲಾಶಯಗಳು ತುಂಬಿದವು; ಎರಡೆರಡು ಫಸಲು ಬೆಳೆಯಲು ಸಾಧ್ಯವಾಯಿತು. ಜನ-ಜಾನುವಾರುಗಳಿಗೆ, ವನ್ಯಜೀವಿಗಳಿಗೆ ಖುಷಿಯೋ ಖುಷಿ… ಎರಡನೆ, ಮೂರನೆಯ ಬಹುಮಾನ ಪಡೆದ, ಬಹುಮಾನ ಪಡೆಯದ ಹಳ್ಳಿಗಳು ಎಲ್ಲವೂ ಜಲಕ್ರಾಂತಿಯ ಫಲಾನುಭವಿಗಳಾದವು.

ಆಮಿರ್‍ಖಾನ್‍ನ ಆರಂಭಿಕ ಯತ್ನಕ್ಕೆ ಅಲ್ಲಿಯ ಮುಖ್ಯಮಂತ್ರಿ ಫಡ್ನವೀಸ್ ಅಷ್ಟೇ ಉತ್ಸಾಹದಿಂದ ಬೆಂಬಲ ಘೋಷಿಸಿದರು. ಸ್ಪರ್ಧೆಯಲ್ಲಿ ಸಮಸ್ಥಾನ ಪಡೆದ ಹಳ್ಳಿಗಳಿಗೆ ಸರಕಾರದಿಂದ extra ಬಹುಮಾನ ಘೋಷಿಸಿದರು.

ಮಾಧ್ಯಮಗಳು ಮತ್ತೆ ಮತ್ತೆ ಗ್ರಾಮೀಣ ಜನರ ಈ ಸಂಗ್ರಾಮವನ್ನು ಹೈಲೈಟ್ ಮಾಡಿದವು. ಈ ವರ್ಷ ಅಲ್ಲಿ ಇನ್ನೂ ಉತ್ಸಾಹದಿಂದ ಮಳೆಕೊಯ್ಲು ನಡೆದಿದೆ.

ಇತ್ತ ನಮ್ಮ ರೈತಮುಖಂಡರು ಮಹದಾಯಿ ನೀರಿಗಾಗಿ ಸರಕಾರಕ್ಕೆ ಮೊರೆ ಇಡುತ್ತಿದ್ದಾರೆ. ರಾಜಕೀಯ ಮುಖಂಡರು ಕನ್ನಡ ಧ್ವಜ, ವಿಶ್ವಕನ್ನಡ ಮಾತಾಡುತ್ತಿದ್ದಾರೆ. ಸಚಿವ ಸಂಪುಟವೋ ಒಣಗಿದ ಕೆರೆಗಳನ್ನೆಲ್ಲ ರಿಯಲ್‍ ಎಸ್ಟೇಟ್‍ ಮಾಡಲು ಹೊರಟಿದೆ. ಪ್ರತಿಪಕ್ಷಗಳು ಕೋಮುಯಜ್ಞದಲ್ಲಿ ತಲ್ಲೀನವಾಗಿದೆ.

ಮಾಧ್ಯಮಗಳು ಚೀನಾ, ಪಾಕಿಸ್ತಾನ, ಕೋವಿಂದ, ಮಂಗಳೂರುಗಳಿಗೆ ತುಸು ಕಡಿಮೆ ಪ್ರಾಶಸ್ತ್ಯ ನೀಡಿ, ಮಳೆನೀರನ್ನು ಹಿಡಿಯುವ ಬಗ್ಗೆ ಚರ್ಚೆ ನಡೆಸಬಹುದಿತ್ತು. ಫಡ್ನವೀಸರ ಪ್ರೇರಣಾದಾಯಕ ಮಾತುಗಳನ್ನು, ಆಮಿರ್‍ ತಂಡದ ಶ್ರಮವನ್ನು, ವಾಟರ್ ಕಪ್‍ನಲ್ಲಿ ಈ ವರ್ಷ ಭಾಗವಹಿಸಿದವರ ರೋಚಕ ಕತೆಗಳನ್ನು ಜನರಿಗೆ ತಿಳಿಸಬಹುದಿತ್ತು. ನಮ್ಮ ಸಾಮೂಹಿಕ ವಿವೇಕವೇಕೆ ಹೀಗೆ ಹಳ್ಳ ಹಿಡಿದಿದೆ?

1 Response

  1. Vijaykumar wadawadagi says:

    ನಾಗೇಶ.ಹೆಗಡೆ ಸರ್ ಪ್ರತಿವಾರ ಬರೆಯುವ ಪ್ರಜಾವಾಣಿ ಅಂಕಣ ಓದಿಯೂ ಕರ್ನಾಟಕದಲ್ಲಿ ಇನ್ನು ನೀರಿನ ಬಗೆಗಿನ ಉದಾಸೀನ ಕಂಡು ಹೇವರಿಕೆಯಾಗುತ್ತದೆ ಕರ್ನಾಟಕದಲ್ಲೆ ಇರುವ ಅದೆಷ್ಟೋ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳದ ಸರಕಾರಕ್ಕೆ ಅದೇನು ಹೇಳಬೇಕು ತಿಳಿಯದು…

Leave a Reply

%d bloggers like this: