ಪ್ರತಿಭಾವಂತ ಬರಹಗಾರನ ಕತೆಗಳಿವು..

ಕನಕರಾಜು ಆರನಕಟ್ಟೆ ಅವರ ಕಥಾ ಸಂಕಲನ ಈ ಶುಕ್ರವಾರ (ಸೆಪ್ಟೆಂಬರ್ ೧ ) ಸಂಜೆ ನಯನ ರಂಗಮಂದಿರದಲ್ಲಿ ಬಿಡುಗಡೆಯಾಗುತ್ತಿದೆ.

ಸಂಕಲನಕ್ಕೆ ಖ್ಯಾತ ವಿಮರ್ಶಕರಾದ ರಾಜೇಂದ್ರ ಚೆನ್ನಿ ಅವರು ಬರೆದ ಮುನ್ನುಡಿ ಇಲ್ಲಿದೆ.

ನಿಮ್ಮ ಓದಿಗಾಗಿ –

 

 

ರಾಜೇಂದ್ರ ಚೆನ್ನಿ

ಕನಕರಾಜ್ ಅವರು ಬರೆದ ಕತೆಗಳ ಈ ಸಂಗ್ರಹ ಅತ್ಯಂತ ವಿಶಿಷ್ಟವೂ ಮುಖ್ಯವೂ ಆದ ಕೃತಿಯಾಗಿದೆ.

ನಿಸ್ಸಂಶಯವಾಗಿ ಸೂಕ್ಷ್ಮ ಸಂವೇದನೆ, ವಿಸ್ತಾರವಾದ ಅನುಭವ ಹಾಗೂ ಬದುಕನ್ನು ನೋಡುವ ಖಚಿತವಾದ ದೃಷ್ಟಿಕೋನವಿರುವ ಪ್ರತಿಭಾವಂತ ಬರಹಗಾರನ ಕತೆಗಳಿವು.

ಇತ್ತೀಚೆಗೆ ನಾನು ಓದಿರುವ ಕತೆಗಾರರಲ್ಲಿ ಬಿ.ಟಿ.ಜಾಹ್ನವಿ ಮತ್ತು ಕನಕರಾಜ್‍ರಲ್ಲಿ ನಮ್ಮನ್ನು ಡಿಸ್ಟರ್ಬ್ ಮಾಡಿ, ತಳಮಳಗೊಳಿಸುವ ಶಕ್ತಿ ನನಗೆ ಕಂಡಿದೆ.

ಇವರಿಬ್ಬರಿಗಿಂತ ಹೆಚ್ಚು ಕಲಾತ್ಮಕವಾಗಿ ಮತ್ತು ತಾಳ್ಮೆಯ ಕಸುಬುಗಾರಿಕೆಯಿಂದ ಬರೆಯುವ ಅನೇಕ ಬರಹಗಾರರಿದ್ದಾರೆ. ಆದರೆ ಕೆಲವೊಮ್ಮೆ ಅತಿಶಯವಾಗಿ ಕರಾಳವಾಗಿದೆಯೆನ್ನಿಸುವ ನೋಟಕ್ರಮದಿಂದ ಬರೆಯುವ ಇವರಿಬ್ಬರು ಕತೆಗಾರರು ನಮ್ಮನ್ನು ಬೆಚ್ಚಿಬೀಳಿಸುವಂಥ ಅನುಭವಗಳನ್ನು ಹಾಗೂ ಮನುಷ್ಯ ಸ್ವಭಾವದ ಅನಿರೀಕ್ಷಿತ ನೋಟಗಳನ್ನು ಕೊಡುತ್ತಾರೆ.

ಅಲ್ಲದೆ ಯುವ ತಲೆಮಾರಿನ ಬರಹಗಾರರು ತಮ್ಮದೇ ಆದ ಪುಟ್ಟ ‘Comfort Zone’ (ಜಯಂತ್ ಕಾಯ್ಕಿಣಿ ಅವರು ಬಳಸುವ ಪದ)ನಿಂದ ಹೊರಬರಲು ತಯಾರಿಲ್ಲದಿದ್ದಾಗ ಕನಕರಾಜ್ ಆಯ್ದುಕೊಳ್ಳುವ ಅನುಭವ ಲೋಕದ ವೈವಿಧ್ಯತೆಯು ಅವರ ಕಥನ ಪ್ರತಿಭೆಯ ಲಕ್ಷಣವಾಗಿದೆ.

ಬುದ್ದಿಮಾಂದ್ಯ ಮೊಮ್ಮಗಳನ್ನು ಕರಡಿಯಂತೆ ನೋಡಿಕೊಂಡು ಅವಳ ಮೇಲೆ ಅತ್ಯಾಚಾರವಾದ ನಂತರ ಪ್ರಾಣ ಬಿಡುವ, ಜೀವನ ನಿರ್ವಹಣೆಗಾಗಿ “ರುಡಾಲಿ”ಯಾಗಿದ್ದ ಅಜ್ಜಿ: ತನ್ನ ತಂದೆಯ ಸಿಲೋನ್ ಸೈಕಲ್‍ನಲ್ಲಿ ಅವನ ಆತ್ಮವಿದೆ ಎಂದು ನಂಬಿದ್ದ ತನ್ನ ತಂದೆಯ ವಿರುದ್ಧ ಕ್ಷುಲ್ಲಕ ಕಾರಣಕ್ಕಾಗಿ ಬಂಡೆದ್ದು ಅಜ್ಜನ ಸೈಕಲ್ ಅನ್ನು ಹಾಳುಮಾಡುವ ಅವನ ಮೊಮ್ಮಗ, ಒಡೆಯನೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಸುಳ್ಳು ಸಂಶಯದಿಂದಾಗಿ ಓಡಿ ಹೋಗಿ ವಿದೇಶದ ಜೈಲಿನಲ್ಲಿರುವ ಮುಸ್ಲಿಂ ಹೆಂಗಸು, ಹಿಂದೆ ತಾನು ಮಾಡಿರಬಹುದಾದ ಕಳ್ಳತನದಿಂದಾಗಿ ಒಂದು ಮನೆಯೇ ಮಣ್ಣಗೂಡಿದ್ದನ್ನು ಅಕಸ್ಮಾತ್ತಾಗಿ ಅದೇ ಮನೆಗೆ ಬಂದಾಗ ನೋಡಿ ಕೇಳುವ ಮಾಜಿ-ಕಳ್ಳ ಹೀಗೆ ಹತ್ತಾರು ವಿಚಿತ್ರ ಸನ್ನಿವೇಶಗಳಲ್ಲಿ ಸಿಕ್ಕಿಕೊಳ್ಳುವ ಮನುಷ್ಯ ಜೀವಿಗಳ ವೈವಿಧ್ಯ ಪೂರ್ಣ ಜಗತ್ತನ್ನೇ ಕನಕರಾಜ್ ಚಿತ್ರಿಸುತ್ತಾರೆ.

ಒಂದು ಕಡೆಗೆ ವಲಸೆ ಬಂದ ತಮಿಳರ ಶ್ರೇಣೀಕೃತ ಸಮಾಜವಿದೆ. ಇದರಲ್ಲಿ ತೇವರ್‍ರು ಕೆಳಜಾತಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿರುತ್ತಾರೆ. ಆದರೆ ತೇವರ್ ಕುಟುಂಬಗಳೊಳಗಿನ ಸಂಬಂಧಗಳೇ ಕ್ರೌರ್ಯದಿಂದ ಕೂಡಿವೆ. ಇಲ್ಲಿ ಮಗಳ ಮೇಲಿನ ಮೋಹದಿಂದ ಸಾವಿನಲ್ಲಿಯೂ ಮಗನ ಮೇಲೆ ಸೇಡು ತೀರಿಸಿಕೊಳ್ಳುವ ತಾಯಿಯಿದ್ದಾಳೆ. ಆ ಮಗನ ಗಂಡು ಮಕ್ಕಳು ಅವನ ಕೊಲೆ ಮಾಡಲು ಸನ್ನದ್ಧರಾಗಿದ್ದಾರೆ. ಇವರ ಕ್ರೌರ್ಯಕ್ಕೆ ಬಲಿಯಾಗುವವರು ಕೆಳಜಾತಿಯ ಗಂಡಸರು ಹಾಗೂ ಹೆಂಗಸರು. ಈ ಸಮಾಜವನ್ನು ಕನಕರಾಜ್ ದಟ್ಟವಾಗಿ, ಸವಿವರವಾಗಿ ಕಟ್ಟಿಕೊಡುತ್ತಾರೆ. ಅದರೊಳಗಿನ ಅರ್ಥಹೀನ ಸ್ವಾರ್ಥ ಹಾಗೂ ಕ್ರೌರ್ಯಗಳನ್ನು ವಿಶ್ಲೇಷಿಸುತ್ತಾರೆ.

ಇನ್ನೊಂದೆಡೆಗೆ ಸಂಗ್ರಹದ ಅನೇಕ ಕತೆಗಳಲ್ಲಿ ಚಿತ್ರಿತವಾಗಿರುವ ವಲಸಿಗ ಭಾರತೀಯರ, ಅದರಲ್ಲೂ ಸಿಲೋನ್, ಸೌದಿ ಅರೇಬಿಯಾ, ಮಾಲ್ಡೀವ್ಸ್ ನಂಥ ದೇಶಗಳಲ್ಲಿ ದುಡಿಯುವ ಭಾರತೀಯರ ಸಮಾಜವಿದೆ. ಅದು ಸಮಾಜವು ಅಲ್ಲ. ಅನೇಕ ದೇಶದವರು ದುಡಿದು ದುಡ್ಡು ಮಾಡಲು ಬಂದವರ ತಾತ್ಕಾಲಿಕ ಗುಂಪುಗಳಿವೆ. ಇದು ಸಾಹಿತ್ಯದಲ್ಲಿ ಅಂಚಿನಲ್ಲಿಯೂ ಅಸ್ತಿತ್ವ ಪಡೆಯದ ನಿಜವಾದ ಭಾರತೀಯ ಡಯಸ್ಟೋರಾ. ಇಲ್ಲಿಯ ವರೆಗಿನ ಪ್ರಧಾನ ಧಾರೆಯ ಸಾಹಿತ್ಯವು ಅದರಲ್ಲೂ ಭಾರತೀಯ ಇಂಗ್ಲಿಷ್ ಸಾಹಿತ್ಯವು ಕೇವಲ ಮೇಲ್‍ವರ್ಗದ, ಶಿಕ್ಷಿತ ಭಾರತೀಯ ವಲಸಿಗರ ಬಗ್ಗೆಯೇ ಇದೆ. ಎಷ್ಟರ ಮಟ್ಟಿಗೆ ಎಂದರೆ ಈ ವರ್ಗವೇ ಭಾರತೀಯ ಇಂಗ್ಲಿಷ್ ಬರಹದ ಕೇಂದ್ರ ವಸ್ತುವಾಗಿದೆ: ಈ ವರ್ಗದವರೇ ಅದರ ಓದುಗರೂ ಆಗಿದ್ದಾರೆ. ಅಲ್ಲದೇ ಈ ಸಾಹಿತ್ಯವು ಪಡೆದಿರುವ ಅತಿಯಾದ ವರ್ಚಸ್ಸಿಗೆ ಕಾರಣರಾದವರು ಅವರೇ ಆಗಿದ್ದಾರೆ.

ಒಂದು ಕಾಲದಲ್ಲಿ ನಮ್ಮ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಈ ವಸ್ತುವನ್ನು East-West encounter ಎಂದು ಗಂಭೀರವಾಗಿ ಚರ್ಚಿಸಲಾಗುತ್ತಿತ್ತು. ಆದರೆ ವಿಪರ್ಯಾಸವೆಂದರೆ ಶತಮಾನಗಳಿಂದ ಲಕ್ಷಾಂತರ ಭಾರತೀಯರು, ಅದರಲ್ಲೂ ಕೆಳವರ್ಗದ, ದುಡಿಯುವ ವರ್ಗದ ಜನರು ಅನೇಕ ದೇಶಗಳಿಗೆ ವಲಸೆ ಹೋಗಿದ್ದಾರೆ. ವೆಸ್ಟ್ ಇಂಡೀಸ್‍ಗೆ ‘Indentured’ ಕೂಲಿಗಳಾಗಿ ಈ ಜನ ಹೋದರು. ಆಫ್ರಿಕಾದ ದೇಶಗಳಿಗೆ ಕೆಲಸ, ವ್ಯಾಪಾರಕ್ಕಾಗಿ ಹೋಗಿ ನೆಲಸಿದರು. ಇಂಗ್ಲೆಂಡ್‍ನಲ್ಲಿ Taxi – Cab ಗಳನ್ನು ಓಡಿಸಲು ಸಾವಿರಾರು ಭಾರತೀಯ ಸಿಖ್ ಜನರು ವಲಸೆ ಹೋದರು. ಸ್ವತಃ ನೆಹರು ಮತ್ತು ಗಾಂಧಿ ಶಿಕ್ಷಣಕ್ಕಾಗಿ ಇಂಗ್ಲೆಂಡ್‍ಗೆ ಹೋದ ಶ್ರೀಮಂತ ವರ್ಗದವರಾಗಿದ್ದರು. ಆದರೆ ಬಡತನ ಹಾಗೂ ಉದ್ಯೋಗದ ಹುಡುಕಾಟದಲ್ಲಿ ವಲಸೆ ಹೋದ ಭಾರತೀಯ Sub-altern diaspora ಬಗ್ಗೆ ನಮ್ಮ ಸಾಹಿತ್ಯವು ಮೌನವಾಗಿದೆ. ಇಲ್ಲಿ ಅಂಚಿನಲ್ಲಿದ್ದವರು ಅಲ್ಲಿ ಹೋದ ಮೇಲೂ ಅಂಚಿನಲ್ಲಿಯೇ ಉಳಿದಿದ್ದಾರೆ.

ಇತ್ತೀಚಿನ ದಶಕಗಳಲ್ಲಿ ಸೌದಿ ಅರೇಬಿಯಾ, ಕತಾರ್ ಮುಂತಾದ ಮಧ್ಯಪ್ರಾಚ್ಯ ದೇಶಗಳಿಗೆ ಅಪಾರ ಸಂಖ್ಯೆಯ ಭಾರತೀಯರು ದುಡಿಮೆಗಾಗಿ ಹೋಗಿದ್ದಾರೆ. ವಲಸೆಯನ್ನು ಕ್ರಿಮಿನಲ್ ದಂಧೆಯಾಗಿಸಿರುವ ಏಜೆಂಟ್ ರಿಂದಾಗಿ ಸರಿಯಾದ ದಾಖಲೆಗಳಿಲ್ಲದೇ ಅಲ್ಲಿ ಹೋಗಿ ನರಕಸದೃಶವಾದ ಜೀವನವನ್ನು ಬದುಕುತ್ತಿದ್ದಾರೆ. ನಾವು ಪತ್ರಿಕೆಗಳಲ್ಲಿ ಕೇರಳದಿಂದ ಈ ದೇಶಗಳಿಗೆ ವಲಸೆ ಹೋದವರು ಅಪಾರ ದುಡ್ಡನ್ನು ಸಂಪಾದಿಸಿ ಕೇರಳದ ಆರ್ಥಿಕತೆಯನ್ನೇ ಬದಲಾಯಿಸಿದ್ದರ ಬಗ್ಗೆ ಓದುತ್ತೇವೆ. ಆದರೆ ವಾಸ್ತವವೆಂದರೆ ಅಲ್ಲಿಯ ವಲಸಿಗ, ಅನಾಮಿಕ ಭಾರತೀಯ ದುಡಿಮೆಗಾರರ ಬವಣೆಗಳು ಅಮಾನವೀಯವಾಗಿವೆ. ಅಲ್ಲಿಯ ಕಠೋರವಾದ ಧಾರ್ಮಿಕ ನ್ಯಾಯಪದ್ಧತಿ , ಹಿಂಸೆ, ಅಭದ್ರತೆ, ರಾಜಕೀಯದ ಗೋಜಲುಗಳು, ಲೈಂಗಿಕ ಶೋಷಣೆ ಇವುಗಳು ಭಾರತೀಯ ಮನಸ್ಸನ್ನು ಕದಕಿದಂತೆ ತೋರುವುದಿಲ್ಲ. ಮಲಯಾಳಂ ಭಾಷೆಯಲ್ಲಿ ಇಂಥ ಡಯಾಸ್ಪೋರಾದ ಕತೆಗಳು ಬಂದಿವೆ ಎಂದು ಕೇಳಿದ್ದೇನೆ.

ಈ ಅನುಭವ ಲೋಕದ ಬಗ್ಗೆ ಆಥೆಂಟಿಕ್ ಆಗಿ ಅಂತಃಕರಣದಿಂದ ಬರೆಯುತ್ತಿರುವ ಕನ್ನಡದ ಮೊದಲ ಮುಖ್ಯ ಲೇಖಕ ಕನಕರಾಜ್.

ಇದರಲ್ಲಿ ಬಹುಪಾಲು ಜನ ತಮ್ಮ ಕುಟುಂಬಗಳ ಬಡತನಕ್ಕೆ ಪರಿಹಾರವಾಗಿ ದುಡಿಮೆಯನ್ನು ಹುಡುಕಿಕೊಂಡು ಬಂದವರು. ಹಿರಿಯೂರು ತಾಲ್ಲೂಕಿನ ಧರ್ಮಪುರದ ಫರೀದಾ ಬೇಗಂ ಮೂರು ಹೆಣ್ಣುಮಕ್ಕಳನ್ನು ಕೊಟ್ಟು ಓಡಿಹೋದ ಗಂಡನಿಂದಾಗಿ ಸೌದಿ ಅರೇಬಿಯಾಕ್ಕೆ ಬಂದಿದ್ದಾಳೆ. ಅವಳನ್ನು ಅರಬ್ಬೀ ಕಫೀಲ್‍ನ ಮನೆಗೆ ಬಿಟ್ಟು ಹೋದವನು ಈಗ ನಾಪತ್ತೆ. ಅವಳ ಬಳಿ ಪಾಸ್‍ಪೋರ್ಟ್ ಇಲ್ಲ. (Auden ಯಹೂದಿಗಳ ಬಗ್ಗೆ ಬರೆದ ಪದ್ಯದಲ್ಲಿ “ನಿಮ್ಮ ಬಳಿ ಪಾಸ್‍ಪೋರ್ಟ್ ಇಲ್ಲದಿದ್ದರೆ “You are officially dead” ಎಂದು ಬರೆದಿದ್ದು ಫರೀದಾಳಂಥ ಸಾವಿರಾರು ಭಾರತೀಯರಿಗೆ, ವಿದೇಶಿಗರಿಗೆ ನಿಜವಾಗಿದೆ). ಹೇಗೋ ಸಂಭಾಳಿಸಿಕೊಂಡು ಬದುಕುತ್ತಿದ್ದಾಗ ಕಫೀಲ್‍ನ ಹೆಂಡತಿ ಇವಳ ಬಗ್ಗೆ ಸಂಶಯ ಪಟ್ಟು ತನ್ನ ತಮ್ಮನನ್ನು ಕರೆಸಿ ಅವನಿಂದ ಗಂಡನ ಕೊಲೆಗೆ ಕಾರಣವಾಗುತ್ತಾಳೆ. ಭಾರತದ ಎಂಬೆಸಿ ಫರಿದಾಳನ್ನು ಜೈಲಿನಿಂದ ಬಿಡಿಸಲಾಗದು.

ಅನೇಕ ಕತೆಗಳಲ್ಲಿ ಇಂಥ ವಲಸಿಗರ ಸ್ಥಾಯಿಯಾದ ಅನುಭವವೆಂದರೆ ನಿರಂತರವಾದ ಅವ್ಯಕ್ತ ಭೀತಿ. ಅಂದರೆ ತಾವು ಬದುಕುತ್ತಿರುವ ಜೀವನವು ವಾಸ್ತವವೇ, ಭ್ರಮೆಯೆ ಎಂದು ಹೇಳಲಾಗದ ಅನಾಥ ಸ್ಥಿತಿ. ಇದು ಅತ್ಯಂತ ತಲ್ಲಣಗೊಳಿಸುವಂತೆ ‘ಬಯಲುಗಾಳಿಯ ನೆರಳು’ ಕತೆಯಲ್ಲಿ ಹೆಪ್ಪುಗೊಂಡಿದೆ.

ಆ ದೇಶದ ಕಾನೂನಿನ ಪ್ರಕಾರ ಕೊಲೆಯಾದವನ ಕುಟುಂಬದವರು ಕ್ಷಮಿಸಿ, ಜುಲ್ಮಾನೆಯನ್ನು ಒಪ್ಪಿಕೊಳ್ಳದಿದ್ದರೆ ಶಿಕ್ಷೆಯೆಂದರೆ ಸಾವಿಗೆ ಕಾರಣನಾದವನ ತಲೆಯನ್ನು ಸಾರ್ವಜನಿಕವಾಗಿ ಕತ್ತರಿಸುವುದು. ಇಡೀ ಕತೆಯಲ್ಲಿ ವಲಸಿಗರ ಒಂದು ಗುಂಪು ಇದರ ಬಗ್ಗೆ ಮಾತನಾಡುತ್ತದೆ. ಒಬ್ಬನಿಗೆ ತಾನು ಅದನ್ನು ನೋಡಬೇಕು ಎನ್ನುವ ವಿಕೃತ ಆಸೆ. ಈ ಕತೆಗಳ ವೈಶಿಷ್ಟ್ಯವೆಂದರೆ ವಲಸಿಗರು ಕೇವಲ ಬಲಿಪಶುಗಳಲ್ಲ. ಅವರಲ್ಲಿಯೂ ಅಂಥದೇ ಕ್ರೌರ್ಯವು, ಹಿಂಸಾನಂದವು ಮನೆ ಮಾಡಿಕೊಂಡಿದೆ.

ಇನ್ನೊಂದು ಕತೆಯಲ್ಲಿ ಹಸಿವಿನಿಂದ ಕಂಗಾಲಾಗಿ ಊಟವನ್ನು ಕೇಳಿದವರ ಭಾಷೆ ಅರ್ಥವಾಗದೇ ಅವರ ಮೇಲೆ ಸೇನೆಯು ದೌರ್ಜನ್ಯ ನಡೆಸುತ್ತದೆ. ಕಕ್ಕಸು ಮಾಡಲು ಕುಳಿತ ಮಕ್ಕಳಂತೆ ಕುಕ್ಕರು ಗಾಲಿನಲ್ಲಿ ಕುಳಿತು ತೆರಳುವ ಶಿಕ್ಷೆಯನ್ನು ಅವರಿಗೆ ಕೊಡುತ್ತದೆ. ಆಗ ಅಲ್ಲಿರುವ ಎಲ್ಲಾ ಕೈದಿಗಳು, ಮುಖ್ಯವಾಗಿ ಹೇಗಾದರೂ ಫೈನಲ್ ಎಕ್ಸಿಟ್ ಮಾಡಿ, ಊರಿಗೆ ಮರಳಿ ಹೆಂಡತಿಯಿಂದ ಮಗುವನ್ನು ಪಡೆಯಲು ಕಾತರನಾಗಿರುವ ಕಥಾನಾಯಕನೂ ಅವರನ್ನು ನೋಡಿ ನಗುತ್ತಾರೆ. ಆ ದೇಶದಲ್ಲಿ ಯಾವ ಸ್ವಾತಂತ್ರ್ಯವೂ ನೆಮ್ಮದಿಯೂ ಇಲ್ಲದೇ ಕೈದಿಗಳಂತೆ ಇರುವವರಲ್ಲಿ ಒಬ್ಬನು ಇನ್ನೊಬ್ಬನನ್ನು ಕವ್ವಾಲಿ ಹಾಡಬೇಡ, ದರ್ಗಾ ಸಂಸ್ಕೃತಿಯು ಇಲ್ಲಿ ನಿಷಿದ್ಧ ಎಂದು ಬಯ್ಯುತ್ತಾನೆ.

ಇಂಥ ಅಪರೂಪದ ನೋಟಗಳಿರುವುದರಿಂದಲೇ ಈ ಕತೆಗಳು ವಲಸಿಗರ ಗೋಳಿನ ಕರುಣಾಜನಕ ಕತೆಗಳಾಗುವುದಿಲ್ಲ. ಸೂಕ್ಷ್ಮವಾಗಿ ನೋಡಿದರೆ ಇಂಥ ವಲಸಿಗರ ನಿರಂತರ ಭಯ, ಅಭದ್ರತೆ ಹಾಗೂ ಕ್ರೌರ್ಯದ ಸ್ಥಿತಿಯೇ ಮನುಷ್ಯ ಜೀವನದ ಸ್ಥಾಯಿ ಸ್ಥಿತಿಯೆನ್ನುವ ಕಾಣ್ಕೆ ಕನಕರಾಜ್ ಅವರದ್ದಾಗಿದೆ. ಆದ್ದರಿಂದಲೇ ನಾನು ಅದು ಅತಿಶಯವಾಗಿ ಕರಾಳವಾದದ್ದು ಎಂದು ವಿವರಿಸಿದ್ದೇನೆ.

ಹೀಗೆ ಹೇಳಲು ಕಾರಣವೆಂದರೆ ಇವು ಬಿಡಿ ಬಿಡಿಯಾಗಿ ಬರೆದ ಕತೆಗಳಾದರೂ ಅವು ಒಂದು ಖಚಿತವಾದ, ತನ್ನದೇ ರೀತಿಯಲ್ಲಿ ಸಮಗ್ರವಾದ ಲೋಕ ಗ್ರಹಿಕೆಯನ್ನು ಹೊಂದಿವೆ. ಇದು ನಿರ್ಮಮವಾದ, ಕಠೋರವಾದ ಲೋಕ ಗ್ರಹಿಕೆ. ಇದು ಸುಲಭವಾಗಿ ಒಳ್ಳೆಯತನವನ್ನು ಒಪ್ಪುವುದಿಲ್ಲ. ಸುಖ, ಸಂತೋಷದ ಸಾಧ್ಯತೆಗಳು ಭೋಳೆತನದಿಂದ ನಂಬುವುದಿಲ್ಲ. ತಪ್ಪಿತಸ್ಥ ಭಾವನೆಯಿಂದ ಬಿಡುಗಡೆ ಇದೆಯೆಂದು ನಿರೀಕ್ಷಿಸುವುದಿಲ್ಲ. ಅಸ್ವಸ್ಥ, ತಬ್ಬಲಿತನದ, ಭೀತಿಯೇ ಸ್ಥಾಯಿಯಾದ ಮನುಷ್ಯ ಲೋಕವನ್ನು ವಸ್ತುನಿಷ್ಠವಾಗಿ ಅದು ಗ್ರಹಿಸಲು ಪ್ರಯತ್ನಿಸುತ್ತದೆ. ಹಾಗೆಂದ ಮಾತ್ರಕ್ಕೆ ಅದು ಸಿನಿಕಲ್ ಆದ ಅಥವಾ ಕೇವಲ ಭೀಭತ್ಸವನ್ನೇ ವಿಜೃಂಭಿಸುವ ಲೋಕ ದೃಷ್ಟಿಯೂ ಅಲ್ಲ. ಇಂಥ ಸ್ಥಿತಿಯಲ್ಲಿರುವ ವ್ಯಕ್ತಿಗಳ ಬಗ್ಗೆ ಬರಹಗಾರನ ಅಂತಃಕರಣ ಮಿಡಿಯುವುದು ಸ್ಪಷ್ಟವಾಗಿದೆ.

ಆದರೆ ಇದು ವ್ಯಗ್ರತೆಯಿಂದ ಕೂಡಿದ, ಸುಲಭ ಭ್ರಮೆಗಳನ್ನು ಸ್ವೀಕರಿಸದ ಅಂತಃಕರಣವಾಗಿದೆ. ಇದು ಇಲ್ಲದ ಒಂದೆರಡು ಕತೆಗಳಲ್ಲಿ ಬರಹಗಾರರು ಓದುಗರನ್ನು ನಂಬಿಸುವುದರಲ್ಲಿ ಯಶಸ್ವಿಯಾಗುವುದಿಲ್ಲ. ಉದಾಹರಣೆಗೆ “ಕಾಮಾಲೆ ಕಣ್ಣು” ಕತೆಯಲ್ಲಿ ನಾಯಿಗಳು ಮನುಷ್ಯರನ್ನು ತಿನ್ನುವ ಅತಿಲಂಬಿತವಾದ ವರ್ಣನೆ ನಮ್ಮನ್ನು ಗಾಢವಾಗಿ ತಟ್ಟುವುದಿಲ್ಲ. ಅದೊಂದು ಉದ್ದೇಶಿತವಾದ exercise ಆಗಿ ಮಾತ್ರ ಕಾಣುತ್ತದೆ.

ಆದರೆ “ಇಸ್ಪೀಟು ಮತ್ತು ಸಾವು” ಕತೆಯು ನಾನು ಹೇಳಿದ ಅಂತಃಕರಣದಿಂದಾಗಿ ಪ್ರಭಾವೀ ಕತೆಯಾಗಿದೆ. ಮಾಲ್ಡೀವ್ಸ್ ನ ಒಂದು ದ್ವೀಪದಲ್ಲಿ ದುಡಿಯುತ್ತಿರುವ ಕನ್ನಡಿಗರ ಒಂದು ಗುಂಪು ವಾರಕ್ಕೊಮ್ಮೆ ಇಸ್ಪೀಟು ಹಾಗೂ ಹರಟೆಗಾಗಿ ಸೇರುತ್ತದೆ. ಹರಟೆಯ ಮುಖ್ಯ ವಿಷಯ ಆ ದ್ವೀಪದ ಹೆಂಗಸರ ಮುಕ್ತ ಲೈಂಗಿಕತೆಯ ಬಗ್ಗೆ ಅರೆ ಪೋಲೀ ಮಾತುಗಳು. ಅವರನ್ನು ಸೂಳೆಯರು ಎಂದು ಹೀಗಳೆಯುತ್ತಲೆ ಬಾಯಿ ಚಪ್ಪರಿಸುವ ಈ ಗುಂಪಿನಲ್ಲಿ ಒಂದಿಬ್ಬರಿಗೆ ಇಂಥ ಲೈಂಗಿಕ ಸ್ವಾತಂತ್ರ್ಯವಿಲ್ಲದ್ದರಿಂದಲೇ ತಮ್ಮ ಅಕ್ಕತಂಗಿಯರ ಬಾಳು ನರಕವಾಗಿದೆ ಎಂದೂ ಅನ್ನಿಸಿದೆ. ಕತೆಯ ಕೊನೆಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ನಿಂತಿರುವ ರವಿಗೆ ಸುಟ್ಟು ಕರಕಲಾದ ಅಕ್ಕನ ದೇಹದ ನೆನಪು ಬಾಧಿಸುತ್ತಿದೆ. ಆದರೆ ಅವನನ್ನು ದೂರದಿಂದ ಛೇಡಿಸುವ ಗೆಳೆಯರು ‘ಈ ದ್ವೀಪದ ಹೆಂಗಸರಿಗೆ ಮಳೆಯಲ್ಲಿ ಮಾಡೋದು ಇಷ್ಟವಂತೆ’ ಎಂದು ನಗುತ್ತಿದ್ದಾರೆ. ಸೂಕ್ಷ್ಮವಾಗಿ ಈ ಕತೆ ಸತ್ತು ಕರಕಲಾದ ಅಕ್ಕ ಮತ್ತು ಕೇವಲ ಸಂಭೋಗಕ್ಕಾಗಿರುವ ದೇಹದಂತೆ ಇವರಿಗೆ ಕಾಣುವ ಹೆಂಗಸರ ಪ್ರತಿಮೆಗಳನ್ನು ಒಟ್ಟಿಗೆ ತಂದು ನಮ್ಮ ಮೇಲೆ ಪರಿಣಾಮ ಮಾಡುತ್ತದೆ.

ಇಂಥದೇ ಇನ್ನೊಂದು ಶಕ್ತಿಪೂರ್ಣ ಕತೆ ಹಳ್ಳಿಗಾಡಿನಿಂದ ಬಂದು ಅಪಾರ್ಟ್‍ಮೆಂಟ್ ಜೀವನಕ್ಕೆ ಖುಷಿಯಿಂದ ಒಗ್ಗಿಹೋದ ರೂಪಾಳ ಕತೆಯಾಗಿದೆ. ಅವಳ ಜೀವಂತಿಕೆ, ಛಲ, ಗೆಲ್ಲಬೇಕೆನ್ನುವ ಹಠ, ಅವಳ ನಗು ಇವೆಲ್ಲ ಒಂದಾಗಿ ರೂಪಾ ಮನಸೆಳೆಯುತ್ತಾಳೆ. ಆದರೆ ಅವಳ ಸುಖೀ ಕುಟುಂಬವು ಕ್ರೂರವಾದ ಸುಳ್ಳಿನ ಮೇಲೆ ನಿಂತಿದೆ. ಅವಳ ಮದುವೆಯನ್ನು ಮಾಡಿಸಿಕೊಟ್ಟ ಮದುವೆ ಬ್ರೋಕರ್ ಅವಳ ಗಂಡನಿಗೆ ಏಡ್ಸ್ ಕಾಯಿಲೆ ಇದೆಯೆನ್ನುವುದನ್ನು ಬಚ್ಚಿಟ್ಟು ಅವಳಿಗೂ ಏಡ್ಸ್ ಇದೆಯೆಂದು ಗಂಡನಿಗೆ ಸುಳ್ಳು ಹೇಳಿದ್ದಾನೆ. ಈಗ ರೂಪಳಿಗೂ ಅವಳ ಮಗನಿಗೂ ಏಡ್ಸ್ ನಂದಿದೆ. ಭೀಕರ ದುರಂತದೊಂದಿಗೆ ಕೊನೆಗೊಳ್ಳುವ ಈ ಕತೆಯ ನಾಯಕಿ ಬಹುಕಾಲ ಓದುಗರನ್ನು ಕಾಡುವಂತಿದ್ದಾಳೆ.

 

ಇಷ್ಟು ಪ್ರಭಾವಶಾಲಿಯಾಗಿ ಬರೆಯುವ ಕನಕರಾಜ್ ತಮ್ಮ ಕೆಲವು ದೌರ್ಬಲ್ಯಗಳನ್ನು ಮೀರಬೇಕಾಗಿದೆ. ಒಂದು, ಭೀತಿ, ಆತಂಕಗಳ ಅತಿಯಾದ, ಲಂಬಿತ ವಿವರಣೆಗಳು ಅನವಶ್ಯಕ. ಆ ಭಾವನೆಗಳು ಕತೆಯ ಸಂದರ್ಭಗಳಿಂದಲೇ ಓದುಗನನ್ನು ತಲುಪುತ್ತವೆ. ಎರಡನೆಯದು, ಕತೆಯನ್ನು ಸಾಂದ್ರವಾಗಿ ಕಟ್ಟುವ ಇವರು ಅನೇಕ ಕಡೆಗೆ ಮುಕ್ತಾಯಕ್ಕೆ ಅದನ್ನು ಸಾಂಗವಾಗಿ ತೆಗೆದುಕೊಂಡು ಹೋಗುವುದರಲ್ಲಿ ತಡಬಡಾಯಿಸಿ ಬಿಡುತ್ತಾರೆ. ಮೂರನೆಯದು, ಅವರು ವಿಮರ್ಶೆಯಲ್ಲ ಕೇವಲ ನನ್ನ ವೈಯಕ್ತಿಕ ಉದ್ದೇಶವೆಂದು ಭಾವಿಸಲಿ! ಬದುಕಿನ ಬರ್ಬರ ದುರಂತಗಳ ಆಚೆಗೆ ಇನ್ನೇನೋ ಇದೆ ಎನ್ನುವುದರಲ್ಲಿ ನಿಮಗೆ ನಂಬಿಕೆಯಿದೆ. ಅದು ಕತೆಗಳಲ್ಲಿ ಸೂಕ್ಷ್ಮವಾಗಿ ಬರುತ್ತದೆ. ಆ ನಂಬಿಕೆ ಇನ್ನೂ ಬಲವಾಗಲಿ ಎಂದು ಕೇವಲ ಹಾರೈಸಬಲ್ಲೆ. ಅದು ಬದುಕಿಗೇ ಬಿಟ್ಟಿದ್ದು.

2 Responses

  1. Anand Kunchanur says:

    Nice article. I am curious to read the stories. Thank you Avadhi.

  2. Lalitha siddabasavayya says:

    ಕನಕರಾಜರ ಬರಹಗಳನ್ನು , ಕತೆಗಳನ್ನು ಬಿಡಿಬಿಡಿಯಾಗಿ ಓದಿದ್ದೇನೆ. ಆಗ ಹೀಗೇ ಅನ್ನಿಸಿದೆ. ನಮಗೆ ಗೊತ್ತಿರದ, ಗೊತ್ತಿದ್ದವರು ಬರವಣಿಗೆಯಲ್ಲಿ ತರದ ಅನೇಕ ವಸ್ತುಗಳನ್ನು ಕನಕರಾಜರು ಕನ್ನಡಕ್ಕೆ ತಂದಿದ್ದಾರೆ,, ಅವರ ಕತೆಗಳಿಗಂತೆ, ಒಮ್ಮೊಮ್ಮೆ ಅದಕ್ಕೂ ಮಿಗಿಲಾದ ಲವಲವಿಕೆ ಅವರ ಲೇಖನಗಳಲ್ಲಿ ಇದೆ ಎಂದೂ ನನಗೆ ತೋರಿದೆ.

Leave a Reply

%d bloggers like this: