ಒಂದೂವರೆ ನಿಮಿಷ…

1

ಭರ್ತಿ ಒಂದೂವರೆ ನಿಮಿಷಗಳ ಲಿಫ್ಟ್ ಪ್ರಯಾಣ…

ಕಟ್ಟಡದ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಲಿಫ್ಟ್ ನಲ್ಲಿ ಹೋಗುತ್ತೇವಲ್ಲಾ ಅದನ್ನು `ಲಿಫ್ಟ್ ಪ್ರಯಾಣ’ ಅನ್ನಬಹುದೇ ಎನ್ನುವುದರ ಬಗ್ಗೆ ನನಗಿನ್ನೂ ಗೊಂದಲವಿದೆ. ಆದರೂ ಸದ್ಯಕ್ಕೆ ಇದನ್ನು `ಪ್ರಯಾಣ’ ಎಂದೇ ಕರೆಯುತ್ತಿದ್ದೇನೆ. ಏನಾಯಿತು ಈ ಒಂದೂವರೆ ನಿಮಿಷಗಳಲ್ಲಿ ಎಂದು ಕೇಳುತ್ತೀರಾ? ಇಲ್ಲಿದೆ ನೋಡಿ ಕಥೆ.

ವಿವಿಧ ದೇಶಗಳ ಪ್ರಧಾನಿಗಳು, ರಾಷ್ಟ್ರಪತಿಗಳು… ಹೀಗೆ ಗಣ್ಯಾತಿಗಣ್ಯರು ಸಮಾಲೋಚನೆಗೆಂದು ಸೇರಿದಾಗ ಕೆಲ ಬಾರಿ `ಪುಲ್ ಅಸೈಡ್’ ಮೀಟಿಂಗ್ ಗಳು ಆಗುತ್ತವಂತೆ.

ಈ `ಪುಲ್ ಅಸೈಡ್’ ಮೀಟಿಂಗ್ ಏನಪ್ಪಾ ಅಂದ್ರೆ ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಕೆಲ ರಾಷ್ಟ್ರಗಳ ಗಣ್ಯರು ಕುಳಿತು ಏನೋ ಗಂಭೀರವಾದದ್ದನ್ನು ಚರ್ಚಿಸುತ್ತಿದ್ದಾರೆ ಅಂದುಕೊಳ್ಳೋಣ. ಆಗ ಅವರಲ್ಲೊಬ್ಬರಿಗೆ ಅದೇ ಸಭೆಯಲ್ಲಿ ಕುಳಿತ ಮತ್ತೊಬ್ಬರೊಂದಿಗೆ ತುರ್ತಾಗಿ ಏನೋ ಮಾತಾಡಬೇಕಿರುತ್ತದೆ. ಆಗ ಸಾಮಾನ್ಯವಾಗಿ ಚರ್ಚೆಯ ಮಧ್ಯದಲ್ಲೇ ನುಗ್ಗಿ ಹಟಾತ್ ವಿಷಯಾಂತರ ಮಾಡಲೋ ಅಥವಾ ಎಲ್ಲರೆದುರೇ ಕೂಗಿ ಕರೆಯಲೋ ಆಗುವುದಿಲ್ಲ. ಇಂಥಾ ಸಂದರ್ಭಗಳಲ್ಲಿ ರಾಜತಾಂತ್ರಿಕರ ಮೂಲಕ ಹೇಳಿ ಕಳಿಸಿ, ಮೀಟಿಂಗ್ ನಡೆಯುತ್ತಿರುವಂತೆಯೇ ಆ ನಿರ್ದಿಷ್ಟ ವ್ಯಕ್ತಿಯನ್ನು ಮೆಲ್ಲನೆ ಎಬ್ಬಿಸಿ ಪಕ್ಕಕ್ಕೆ ಕರೆದುಕೊಂಡು ಹೋಗುತ್ತಾರಂತೆ. ಹೀಗೆ ಪಕ್ಕಕ್ಕೆ ಕರೆದು ಎರಡು-ಮೂರು ನಿಮಿಷಗಳಲ್ಲೇ ಹೇಳಬೇಕಾಗಿರುವುದನ್ನು ಚಿಕ್ಕದಾಗಿ ಹೇಳಿ ಮುಗಿಸುತ್ತಾರೆ. ಸೋಜಿಗದ ಸಂಗತಿಯೆಂದರೆ ಕೆಲ ಬಾರಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ತೆಗೆದುಕೊಳ್ಳದಿರುವುದೂ ಕೂಡ ಈ `ಪುಲ್ ಅಸೈಡ್’ ಮೀಟಿಂಗ್ ಗಳ ಅನಿರೀಕ್ಷಿತ ಪರಿಣಾಮಗಳಲ್ಲೊಂದಂತೆ.

ನಮ್ಮ ಆ ದಿನದ ಮೀಟಿಂಗ್ ಕೂಡ `ಪುಲ್ ಅಸೈಡ್’ ಶೈಲಿಯಲ್ಲೇ ನಡೆದುಹೋಯಿತು ಎಂದರೆ ಅತಿಶಯೋಕ್ತಿಯಲ್ಲ.

ಐದು ವರ್ಷಗಳ ಕಾಲ ನವದೆಹಲಿಯಲ್ಲಿದ್ದ ನಾನು ಬೆಂಗಳೂರಿಗೆ ವರ್ಗಾವಣೆಯಾಗುತ್ತದೆಂದು ಕಾದಿದ್ದೇ ಕಾದಿದ್ದು. ಅದು ಕೊನೆಗೂ ಆಗಲಿಲ್ಲ. ಈ ಬಗ್ಗೆ ಗಂಭೀರವಾದ ಪ್ರಯತ್ನಗಳೇನೂ ನಡೆದಿರದಿದ್ದರೂ ಕೊನೆಗೆ ದಕ್ಷಿಣ ಭಾರತದ ಯಾವ ನಗರವಾದರೂ ಆದೀತು ಎಂಬ ನಿರೀಕ್ಷೆಗಳಿಗೂ ಕಲ್ಲುಬಿದ್ದಿತ್ತು. ಭಾರತದಲ್ಲೇ ಇದ್ದರೂ ವರ್ಷಕ್ಕೊಮ್ಮೆ ಮನೆಗೆ ಭೇಟಿ ಕೊಡುವ ನನ್ನ ಅಭ್ಯಾಸದಿಂದಾಗಿ ಆಗಲೇ ನಾನು ನಮ್ಮ ಗೆಳೆಯರ ಬಳಗದಲ್ಲಿ ತಮಾಷೆಯ ವಸ್ತುವಾಗಿದ್ದೆ. “ಗಲ್ಫ್ ದೇಶಗಳಲ್ಲಿರುವವರು ವರ್ಷಕ್ಕೊಮ್ಮೆ ಮಂಗಳೂರಿಗೆ ಬಂದು ಹೋಗುತ್ತಾರಂತೆ. ನಿನ್ನದೂ ಇದೇ ಕಥೆಯಾಯಿತಲ್ಲಪ್ಪಾ”, ಎಂದು ನಾನು ಕೇಳಿಸಿಕೊಳ್ಳಬೇಕಾಯಿತು.

`ನಟ ಸಂಜಯ್ ದತ್ ಗೂ ವರ್ಷಕ್ಕೊಮ್ಮೆ ಜೈಲಿನಲ್ಲಿ ಅದೇನೋ ಪರೋಲ್ ಸಿಗುತ್ತದಂತೆ. ನಮಗೆ ರಜಾ ಮಾತ್ರ ಸಿಗೋದಿಲ್ಲ ಮಾರಾಯ’, ಎಂದೆಲ್ಲಾ ನಾವುಗಳು ಹರಟೆ ಹೊಡೆಯುವುದು ನಿತ್ಯದ ಮಾತಾಗಿತ್ತು. ಇಂತಿಪ್ಪ ಕಾಲಘಟ್ಟದಲ್ಲಿ ನನ್ನೆದುರಿಗೆ ಹಟಾತ್ತಾಗಿ ಬಂದ ಆಯ್ಕೆಗಳು ಎರಡೇ: ಅದೇ ರಾಗ ಅದೇ ತಾಳ ಎನ್ನುವಂತಿದ್ದ `ದೆಹಲಿ’ ಮತ್ತು ಯಾರೂ ಹೋಗಲು ಒಪ್ಪುತ್ತಿಲ್ಲ ಎಂಬ ಹಸಿಹಸಿ ಸುಳ್ಳು ಗಾಳಿಸುದ್ದಿಯನ್ನು ಪಡೆದುಕೊಂಡ ದೇಶ `ಅಂಗೋಲಾ’. ಇನ್ನು ಅಂಗೋಲಾಕ್ಕೆ ಹೋದರೆ ವಾರ್ಷಿಕ ಕ್ರಿಸ್ಮಸ್ ರಜಾದಿನಗಳಲ್ಲಿ ಮಾತ್ರ ಭಾರತಕ್ಕೆ ಬರಲು ಅವಕಾಶ ಎಂಬ ಷರತ್ತುಗಳು ಬೇರೆ. ಈಗೇನೋ ವಾರಕ್ಕೊಮ್ಮೆ ಪಿಕ್ನಿಕ್ಕಿಗೆ ಹೋಗಿಬರುತ್ತಿದ್ದೇವೆ ಎಂಬಂತೆ!

ಹೇಗೂ ವರ್ಷಕ್ಕೊಮ್ಮೆಯಷ್ಟೇ ಮಂಗಳೂರಿನ ನಿವಾಸಕ್ಕೆ ರಜೆಯ ನಿಮಿತ್ತ ಬರುವುದಾದರೆ ದೆಹಲಿಯಾದರೇನು, ಅಂಗೋಲಾ ಆದರೇನು ಅಥವಾ ಮಂಗಳ ಗ್ರಹವಾದರೇನು? ನಾನು ಅಸ್ತು ಎಂದಿದ್ದೆ. ನಮ್ಮ ಆಫೀಸಿನ ಕಟ್ಟಡದ ಹನ್ನೆರಡನೇ ಮಹಡಿಯಿಂದ ನೆಲಮಾಳಿಗೆಗೆ ಲಿಫ್ಟ್ ನಲ್ಲಿ ಬಂದಿಳಿಯುವಷ್ಟರಲ್ಲಿ ನನ್ನ ಮತ್ತು ಸಂಬಂಧಿ ಅಧಿಕಾರಿಯ ನಡುವಿನ ಮಾತುಕತೆ, ಚರ್ಚೆ ಮತ್ತು ನಿರ್ಧಾರದ ತ್ವರಿತ ಪ್ರಕ್ರಿಯೆಗಳು ಮುಗಿದಿದ್ದವು.

ನಾನು `ಅಂಗೋಲಾ’ಕ್ಕೆ ಹೋಗುವವನಿದ್ದೇನೆ ಎಂಬುದು ಭರ್ತಿ ಒಂದೂವರೆ ನಿಮಿಷಗಳಲ್ಲಿ ನಿರ್ಧಾರವಾಗಿತ್ತು.

ದೆಹಲಿಯಲ್ಲಾಗ ನವೆಂಬರ್ ತಿಂಗಳು. ಚಳಿಯೆಂದರೆ ಸೊನ್ನೆಗಿಳಿಯುವ, ಸೆಖೆಯೆಂದರೆ ಐವತ್ತು ಡಿಗ್ರಿಗೇರುವ ಚಂಚಲ ತಾಪಮಾನದ ರಾಜಧಾನಿಯಲ್ಲಿ ಕೊಂಚ ಸಮಾಧಾನದ ಉಸಿರು ಬಿಡುವ ಕಾಲವೆಂದರೆ ಈ ನವೆಂಬರ್ ಅಷ್ಟೇ. ಆಗ ಬೇಸಿಗೆಯೂ ಮುಗಿದಿರುತ್ತದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಬರಲಿರುವ ಚಳಿಗಾಲಕ್ಕೂ ಮಹಾನಗರಿಯು ಸದ್ದಿಲ್ಲದೆ ಸಜ್ಜಾಗುತ್ತಿರುತ್ತದೆ. ಹೀಗಾಗಿ ತೀರಾ ಶೆಖೆಯೂ ಅಲ್ಲದ, ಇತ್ತ ಚಳಿಯೂ ಇಲ್ಲದ, ಚಿಕ್ಕದಾದರೂ ಬಹಳ ಖುಷಿ ತರುವ ಅವಧಿಯಿದು.

ಅತ್ತ ನಗರವು ಬರಲಿರುವ ಚಳಿಗಾಲಕ್ಕೆ ಸಜ್ಜಾಗುತ್ತಿದ್ದರೆ ನಾನು ನನ್ನ ಅಂಗೋಲಾ ಪ್ರಯಾಣಕ್ಕೆ ಸಿದ್ಧನಾಗುತ್ತಿದ್ದೆ. ಒಂದೂವರೆ ನಿಮಿಷಗಳಲ್ಲಿ ಮಹಾಬುದ್ಧಿವಂತನಂತೆ ನಾನು ನಿರ್ಧಾರವನ್ನು ತೆಗೆದುಕೊಂಡಿದ್ದೇನೋ ಹೌದು. ಆದರೆ ಅಂಗೋಲಾ ಆಫ್ರಿಕಾ ಖಂಡದಲ್ಲಿದೆ ಅನ್ನೋದನ್ನು ಬಿಟ್ಟರೆ ಬೇರ್ಯಾವ ಮಾಹಿತಿಗಳೂ ನನ್ನಲ್ಲಿರಲಿಲ್ಲ. ಅಷ್ಟಕ್ಕೂ ನಾವು ಭಾರತೀಯರಿಗೆ ಆಫ್ರಿಕಾ ಎಂದರೆ ನೆನಪಾಗುವುದೇನು? `ದಕ್ಷಿಣ ಆಫ್ರಿಕಾ’ ಅಷ್ಟೇ. ಅದೂ ಕೂಡ ಕ್ರಿಕೆಟ್ ಕೃಪೆಯಿಂದಾಗಿ. ಲಾವೋಸ್, ಮೊಝಾಂಬಿಕ್, ಕಾಂಬೋಡಿಯಾಗಳಿಗೆಲ್ಲಾ ಹೋದವರು “ಆಫ್ರಿಕಾ ಸಖ್ಖತ್ತಾಗಿದೆ” ಎಂದು ಹೇಳಿದ್ದ ಪರಿಣಾಮವೋ ಏನೋ, ನಾನೂ ಈ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ. ಗಡ್ಡ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದ ದೆಹಲಿಯ ದಿನಗಳಲ್ಲಿ `ಕಾಲ ಕೂಡಿ ಬಂದಾಗ ಹೋದರಾಯಿತು’ ಎಂಬ ಉಡಾಫೆಯಲ್ಲೇ ನಾನು ಆರಾಮಾಗಿದ್ದೆ.

ಮೇಲಾಗಿ ಇನ್ನೂ ಸಾಕಷ್ಟು ಸಮಯವಿದೆ ಎಂಬ ಯೋಚನೆಯೇ ನನ್ನನ್ನೂ ಸೇರಿದಂತೆ ಆಫೀಸಿನ ಎಲ್ಲರಲ್ಲೂ ಇತ್ತು. ಏಕೆಂದರೆ ಅಂಗೋಲಾ ಬಗ್ಗೆ ನಾವುಗಳು ಹೌದು ಹೌದೆಂದು ತಲೆಯಾಡಿಸಿದ್ದು ನಿಜವಾದರೂ ತತ್ಸಂಬಂಧಿ ಯಾವ ಬೆಳವಣಿಗೆಗಳೂ ಕೂಡ ವ್ಯವಸ್ಥಿತವಾಗಿ ನಡೆಯುವಂತೆ ಕಾಣುತ್ತಿರಲಿಲ್ಲ. ವೀಸಾಗೆಂದು ನನಗಿಂತ ಎರಡು ತಿಂಗಳ ಹಿಂದೆಯೇ ಪಾಸ್-ಪೋರ್ಟನ್ನು ಸಲ್ಲಿಸಿದ್ದ, ನನ್ನೊಂದಿಗೆ ಬರಲಿದ್ದ ಅಧಿಕಾರಿಯೊಬ್ಬರ ಪಾಸ್-ಪೋರ್ಟ್ ಗಾಳಿಯಲ್ಲಿ ಧೂಳಿನ ಕಣವು ಮಾಯವಾಗುವಂತೆ ಅಕ್ಷರಶಃ ಮಂಗಮಾಯವಾಗಿತ್ತು.

ಇದರ ಬೆನ್ನೆತ್ತಿಹೋದರೆ ವೀಸಾ ಪ್ರಕ್ರಿಯೆಯಲ್ಲಿದ್ದ ಎಲ್ಲರೂ ಒಬ್ಬರಿಗೊಬ್ಬರು ಬೆರಳು ಬೊಟ್ಟುಮಾಡಿ ತೋರಿಸುತ್ತಿದ್ದರೇ ಹೊರತು ಪಾಸ್ ಪೋರ್ಟು ಎಲ್ಲಿದೆ ಎಂದು ಸುಮಾರು ನಾಲ್ಕು ತಿಂಗಳ ಕಾಲ ಯಾವೊಬ್ಬನೂ ಬಾಯಿಬಿಟ್ಟಿರಲಿಲ್ಲ. ಓರ್ವ ಮಹಾಶಯನಂತೂ “ಅದು ಅಂಗೋಲಾದ ರಾಜಧಾನಿ ಲುವಾಂಡಾದಲ್ಲಿರುವ ಕಾನೂನು ಮಂತ್ರಾಲಯಕ್ಕೆ ಹೋಗಿದೆ, ಅಲ್ಲಿಗೇ ಕೇಳಿ ನೋಡಿ”, ಎಂದು ದೂರವಾಣಿ ಸಂಖ್ಯೆಯೊಂದನ್ನು ನಮ್ಮ ಕೈಗಿಟ್ಟು ಕೈತೊಳೆದುಕೊಂಡಿದ್ದ. ಅದ್ಯಾರ ನಂಬರೋ ಏನೋ, ಕರೆ ಮಾಡಿದರೆ ಬಡಿದುಕೊಳ್ಳುತ್ತಿತ್ತೇ ಹೊರತು ಯಾವ ಪುಣ್ಯಾತ್ಮನೂ ಒಮ್ಮೆಯೂ ಫೋನೆತ್ತಲಿಲ್ಲ.

ವೀಸಾ ನಿಯಮಾವಳಿಗಳು ಅದ್ಯಾವ ಮಟ್ಟಿಗಿತ್ತೆಂದರೆ ಹೊರಗಿನವರ್ಯಾರೂ ನಮ್ಮಲ್ಲಿಗೆ ಬರೋದೇ ಬೇಡ ಎಂದು ಆಚೆಗಿದ್ದ ಅಂಗೋಲನ್ ಸರ್ಕಾರವು ಹಟಹಿಡಿದು ಕೂತಂತಿತ್ತು. ಅಂತೂ ಇವೆಲ್ಲಾ ಪ್ರಹಸನಗಳ ನಂತರ ನಮ್ಮಿಬ್ಬರ ವೀಸಾ ಹೊರಬರುವಷ್ಟರಲ್ಲಿ ಜನವರಿ ತಿಂಗಳು ಬಂದಾಗಿತ್ತು. ದೆಹಲಿಗೆ ಆಗಲೇ ಸಂಪೂರ್ಣವಾಗಿ ಚಳಿಹಿಡಿದಿತ್ತು.

ಈ ಮಧ್ಯೆ ನವದೆಹಲಿಯಲ್ಲಿದ್ದ ಅಂಗೋಲಾ ರಾಯಭಾರ ಕಚೇರಿಗೆ ಸುತ್ತುಹಾಕುವ ನನ್ನ ಕೆಲಸವೂ ನಿರಂತರವಾಗಿ ನಡೆಯುತ್ತಿತ್ತು. ಈ ಹಿಂದೆ ಬೆನಿನ್ ಮತ್ತು ಕೀನ್ಯಾ ರಾಯಭಾರ ಕಚೇರಿಗಳಿಗೆ ಉದ್ಯೋಗ ಸಂಬಂಧಿ ಕಾರ್ಯಗಳಿಗೆ ಒಂದೆರಡು ಬಾರಿ ಹೋಗಿಬಂದ ಅನುಭವವಿದ್ದ ಪರಿಣಾಮವಾಗಿಯೋ ಏನೋ, ಇದ್ಯಾವುದೂ ಹೊಸ ಕೆಲಸ ಎಂದೇನೂ ಅನ್ನಿಸಲಿಲ್ಲ. ಮೇಲಾಗಿ ಬಹುತೇಕ ಎಲ್ಲಾ ರಾಯಭಾರ ಕಚೇರಿಗಳೂ ದೆಹಲಿಯ ಒಂದೇ ಭಾಗದಲ್ಲಿರುವುದರಿಂದ ಹುಡುಕಿಕೊಂಡು ಹೋಗುವ ಪ್ರಮೇಯಗಳೂ ಅಷ್ಟಾಗಿ ಬರುವುದಿಲ್ಲ.

ಇನ್ನು ನನ್ನ ಈ ನಿರಂತರ ಪಾದಯಾತ್ರೆಗಳಿಂದಾಗಿ ಕಚೇರಿಯಲ್ಲಿ ನಾನು ಪರಿಚಿತ ಮುಖವಾಗಿ ಬದಲಾಗಿದ್ದೆ. ರಿಸೆಪ್ಷನ್ನಿನಲ್ಲಿ ಕುಳಿತಿದ್ದ ಲಲನಾಮಣಿಯೊಬ್ಬರು ಪ್ರತೀಬಾರಿಯೂ ನನ್ನನ್ನು ನೋಡಿ ಶುಭ್ರನಗೆಯನ್ನು ಚೆಲ್ಲುತ್ತಾ “ಹೋ… ಬಂದ್ರಾ ನೀವು” ಅನ್ನುವವರು. ರಾಯಭಾರ ಕಚೇರಿಯಲ್ಲಿ ಅಳವಡಿಸಲಾಗಿದ್ದ ಟೆಲಿವಿಷನ್ ಸೆಟ್ ಒಂದು ಯಾವಾಗ ಹೋದರೂ ಒಂದೇ ವೀಡಿಯೋ ಅನ್ನು ಪದೇ ಪದೇ ತೋರಿಸುತ್ತಿತ್ತು. ವೀಡಿಯೋ ಜೊತೆಗೆ ಮೂಡಿಬರುತ್ತಿದ್ದ ಧ್ವನಿಯೂ ಪೋರ್ಚುಗೀಸ್ ಭಾಷೆಯಲ್ಲಿದ್ದುದರಿಂದ ನನಗಂತೂ ತಲೆಬುಡವೂ ಅರ್ಥವಾಗುತ್ತಿರಲಿಲ್ಲ. ಬಹುಷಃ ಅಂಗೋಲಾದ ಪ್ರವಾಸೋದ್ಯಮ ಇಲಾಖೆಯವರು ಬಿಡುಗಡೆಗೊಳಿಸಿದ್ದ ವೀಡೀಯೋ ಅದು.

ಇನ್ನು ತರಹೇವಾರಿ ಕೆಲಸಗಳೆಂದು ನನ್ನಂತೆಯೇ ಆಗಾಗ ಕಚೇರಿಗೆ ಬಂದು ಹೋಗುತ್ತಿದ್ದ ಅಂಗೋಲನ್ನರಿಂದ ಮೌನವನ್ನೇ ಉಸಿರಾಡುತ್ತಿದ್ದ ಹವಾನಿಯಂತ್ರಿತ ಕೊಠಡಿಗೂ ಕೊಂಚ ಜೀವ ಬರುತ್ತಿತ್ತು. ದೆಹಲಿಯಲ್ಲಿ ಇಷ್ಟೊಂದು ಜನ ಅಂಗೋಲನ್ನರು ವಿಧ್ಯಾಭ್ಯಾಸ ನಡೆಸುತ್ತಿದ್ದಾರೆ ಅಥವಾ ಉದ್ಯೋಗಿಗಳಾಗಿದ್ದಾರೆ ಎಂದು ನನಗೆ ತಿಳಿದದ್ದೇ ಆಗ. ಇವರುಗಳು ಬಂದಾಗಲೆಲ್ಲಾ ಏನೋ ದೊಡ್ಡ ದನಿಯಲ್ಲಿ ಅಬ್ಬರಿಸುವಂತೆ ಪರಸ್ಪರ ಮಾತನಾಡುತ್ತಿದ್ದರು ಅನ್ನುವುದನ್ನು ಬಿಟ್ಟರೆ ಅಂಥಾ ಗೆಳೆತನಗಳೇನೂ ಆಗಲಿಲ್ಲ. ಕಾಯುವಿಕೆಯ ಇಂಥಾ ನೀರಸ ಸಮಯಗಳಲ್ಲಿ ನನ್ನ ಬ್ಯಾಗಿನೊಳಗಿದ್ದ ಯಾವುದಾದರೊಂದು ಪುಸ್ತಕವು ನನ್ನನ್ನು ಕಾಪಾಡುತ್ತಿತ್ತು. ಒಳ್ಳೆಯ ಹವ್ಯಾಸಗಳು ಕೆಲಸಕ್ಕೆ ಬರುವುದೇ ಇಂಥಾ ಸಮಯಗಳಲ್ಲಿ!

ಅಂದಹಾಗೆ ಈ ಕಾಯುವಿಕೆಯ ಪ್ರಹಸನಗಳು ರಾಯಭಾರ ಕಚೇರಿಯಿಂದಲೇ ಪ್ರಾರಂಭವಾದದ್ದೇನಲ್ಲ. ಇವೆಲ್ಲದರ ಮೊಟ್ಟಮೊದಲ ಹೆಜ್ಜೆಯಾದ ಲಸಿಕಾ ಕಾರ್ಯಕ್ರಮಗಳಿಂದಲೇ ಇದಕ್ಕೊಂದು ಶುಭಾರಂಭವಾಗಿತ್ತು. ಕೆಲ ದೇಶಗಳಿಗೆ ಪ್ರಯಾಣಿಸುವ ಮುನ್ನ ಅಲ್ಲಿಯ ರೋಗಗಳಿಗೆ ತಕ್ಕಂತೆ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಕಡ್ಡಾಯವೆಂಬ ನಿಯಮವಿದೆ.

ಕೀನ್ಯಾ ಪ್ರಯಾಣಕ್ಕೆಂದು ಆಗಲೇ ಪೋಲಿಯೋ ಲಸಿಕೆಗಳನ್ನು ಹಾಕಿಸಿಕೊಂಡಿದ್ದ ನನಗೆ ಅಂಗೋಲಕ್ಕಾಗಿ ಹಳದಿ ಜ್ವರದ ಚುಚ್ಚುಮದ್ದನ್ನೂ ಹಾಕಿಸಿಕೊಳ್ಳಬೇಕಾಯಿತು. ಬರೆದರೆ ಇವುಗಳದ್ದೂ ಒಂದು ಕಥೆ. ಉದಾಹರಣೆಗೆ ದೆಹಲಿಯಲ್ಲಿ ಈ ವ್ಯವಸ್ಥೆ ಹೇಗಿದೆಯೆಂದರೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ದಿನಕ್ಕೆ ಇಂತಿಷ್ಟೇ ಜನರಿಗೆ ಮಾತ್ರ ಲಸಿಕೆಯನ್ನು ಹಾಕಿಸಲಾಗುತ್ತದೆ. ಅಂದರೆ ದಿನಕ್ಕೆ ಸುಮಾರು ನೂರರಿಂದ ನೂರೈವತ್ತು ಜನರಿಗೆ ಮಾತ್ರ. ಮತ್ತಷ್ಟು ಈ ಮಾಹಿತಿಯ ಆಳಕ್ಕೆ ಹೋಗುವುದಾದರೆ ಲಸಿಕೆ ಹಾಕಿಸಲು ರೆಜಿಸ್ಟ್ರೇಷನ್ ಮಾಡಿಸಿಕೊಂಡ ಮೊದಲ ನೂರು ಜನರಿಗಷ್ಟೇ ಅಂದಿನ ಅವಕಾಶ. ಇನ್ನು ರೆಜಿಸ್ಟ್ರೇಷನ್ ಮುಂಜಾನೆಯ ಏಳರಿಂದ ಎಂಟರ ಮಧ್ಯದಲ್ಲಷ್ಟೇ ಮಾಡಬೇಕು ಎಂಬ ಷರತ್ತು ಬೇರೆ.

ಹೀಗಾಗಿ ಬೆಳ್ಳಂಬೆಳಗ್ಗೆಯೇ, ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳ ದಿನದ ಪಾಳಿಯು ಶುರುವಾಗುವ ಮುನ್ನವೇ ಆಸ್ಪತ್ರೆಯ ಮುಖ್ಯದ್ವಾರದಲ್ಲಿ ದೊಡ್ಡದೊಂದು ಕ್ಯೂ ಸನ್ನದ್ಧವಾಗಿರುತ್ತದೆ. ನಾನು ಹೋದಾಗಲಂತೂ ಯಾರು, ಏನು, ಎತ್ತ ಎಂಬುದರ ಅರಿವಿಲ್ಲದೆ ಮುಂಜಾನೆಯ ಚಳಿಗೆ ನಡುಗುತ್ತಾ ಹಲವರು ಸಾಲಾಗಿ ನಿಂತಿದ್ದರು. ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಲು ಬಂದಿದ್ದು ಎಂದು ಪರಸ್ಪರರಿಂದ ಕೇಳಿ ತಿಳಿದುಕೊಂಡಿದ್ದರೂ ಅರ್ಜಿ ಎಲ್ಲಿದೆ, ಯಾರು ಕೊಡುತ್ತಾರೆ, ಯಾರು ಇಟ್ಟುಕೊಳ್ಳುತ್ತಾರೆ ಎಂಬ ಯಾವ ಮಾಹಿತಿಯೂ ಯಾರಿಗೂ ಇರಲಿಲ್ಲ.

ಕೊನೆಗೆ ಸಾಲಿನ ಮುಂಚೂಣಿಯಲ್ಲಿ ಸೇನಾಪತಿಯಂತಿದ್ದ ಪುಣ್ಯಾತ್ಮನೊಬ್ಬ ತನ್ನ ಬ್ಯಾಗಿನೊಳಗಿದ್ದ ಪುಸ್ತಕದಿಂದಲೇ ಕಾಗದವೊಂದನ್ನು ಹರಿದು ತೆಗೆದು ನಂಬರ್ 1. ಎಂದು ಬರೆದು ತನ್ನ ಹೆಸರನ್ನು ಬರೆದ. ಮುಂದೆ ಆ ಕಾಗದ ಕೈಗಳಿಂದ ಕೈಗಳಿಗೆ ಸಾಗುತ್ತಾ ಮೆಲ್ಲಗೆ ಹಿಂದಿನವರೆಗೆ ಹರಿದು ಬಂತು. ಈ ಮಧ್ಯೆ ಕಾದು ಕಾದು ಸುಸ್ತಾಗಿದ್ದ ಹಲವರು ತಮ್ಮ ಬೆನ್ನ ಹಿಂದೆ ನಿಂತಿದ್ದ ವ್ಯಕ್ತಿಯಲ್ಲಿ ಇಲ್ಲದ ಸೀಟನ್ನು ಕಾದಿರಿಸುವಂತೆ ಹೇಳಿ ಟೀ-ಸಿಗರೇಟು ಎಂದು ಹೊರನಡೆದರೆ, ಉಳಿದವರು ನಿಂತಲ್ಲೇ ತೂಕಡಿಸುತ್ತಾ, ಗೊಣಗುತ್ತಾ, ಇಲಾಖೆಗೆ, ತಮ್ಮ ದುರಾದೃಷ್ಟಕ್ಕೆ ಶಾಪ ಹಾಕುತ್ತಾ ಕಾದರು. ಕೊನೆಗೂ ಎಲ್ಲವೂ ಮುಗಿದಾಗ ಭರ್ತಿ ಹನ್ನೊಂದು. ಕೆಲವೇ ಕೆಲವು ನಿಮಿಷಗಳ ಕೆಲಸವೊಂದು ಹಲವರ ಮುಂಜಾನೆಯ ಸಿಹಿನಿದ್ರೆಯನ್ನಷ್ಟೇ ಅಲ್ಲದೆ ಅರ್ಧದಿನವನ್ನೇ ತಿಂದುಹಾಕಿತ್ತು.

`ಇಂತೆಝಾರ್ ಮೇ ಜೋ ಮಝಾ ಹೇ, ವೋ ದೀದಾರ್-ಎ-ಯಾರ್ ಮೇ ಕಹಾಂ’, ಅಂತ ಯಾರೋ ಹೇಳಿದ್ದಾರಂತೆ. ಆದರೆ ಕೆಲವೊಮ್ಮೆ ಕಾಯುವುದೇ ಕೆಲಸವಾಗಿ ಬಿಟ್ಟಾಗ ಸಮಯವೂ ಕುಂಟುತ್ತಿದೆ ಎಂದನ್ನಿಬಿಡುತ್ತದೆ. ಬಹುಷಃ ಅಂಗೋಲಾದ ದಿನಗಳಿಗೆ ನಾನು ಭಾರತದಲ್ಲೇ ನನಗರಿವಿಲ್ಲದಂತೆಯೇ ಸಜ್ಜಾಗುತ್ತಿದ್ದೆ. ಈ ಚಿಕ್ಕಪುಟ್ಟ ಅನುಭವಗಳು ಮುಂಬರುವ ದಿನಗಳ `ಟ್ರೇಲರ್’ ಅಷ್ಟೇ ಎಂದು ನನಗಾದರೂ ಏನು ಗೊತ್ತಿತ್ತು?

2 Responses

  1. Konaje Medha says:

    Waiting for next series 🙂 specially your experience of Angola life

  2. Bharathi B V says:

    ಕುತೂಹಲಕರವಾಗಿದೆ!
    ಮುಂದಿನ ಕಂತಿಗೆ ಕಾಯುತ್ತಾ ….

Leave a Reply

%d bloggers like this: