`ಅಂಗೋಲ’ ಅನ್ನುವ ಮುದ್ರಣದೋಷ..

2

‘ದೇಶ ಸುತ್ತು ಕೋಶ ಓದು’ ಎನ್ನುತ್ತಾರೆ ಹಿರಿಯರು. ಕೋಶವನ್ನು ಹೇಗಾದರೂ ಕೊಂಡುಕೊಂಡೋ, ಎಲ್ಲಿಂದಾದರೂ ತರಿಸಿಕೊಂಡೋ ಓದಬಹುದು. ಆದರೆ ದೇಶ ಸುತ್ತುವ ಬಗೆಗಿನ ಆಯಾಮಗಳೇ ಬೇರೆ. ದೇಶ ಸುತ್ತುವ ಅವಕಾಶಗಳು ಸಾಮಾನ್ಯವಾಗಿ ಎಲ್ಲರಿಗೂ ಸಿಕ್ಕುವುದಿಲ್ಲ. ಇನ್ನು ಅವಕಾಶ ಸಿಕ್ಕವರಿಗೆ ಸಮಯ, ಖರ್ಚು ಮಾಡುವ ತಾಕತ್ತು, ವೈಯಕ್ತಿಕ ಆದ್ಯತೆಗಳು ಹೀಗೆ ಬಹಳಷ್ಟು ಸಂಗತಿಗಳು ಅಡ್ಡ ಬಂದು ನಿಲ್ಲುತ್ತವೆ.

ಆದರೆ ಒಂದು ಮಾತಂತೂ ಸತ್ಯ. ದೇಶ ಸುತ್ತಲೂ, ಕೋಶ ಓದಲೂ ಮುಖ್ಯವಾಗಿ ಬೇಕಿರುವುದು ಆಸಕ್ತಿ. ಇಚ್ಛಾಶಕ್ತಿಯುಳ್ಳ ಮನುಷ್ಯ ಏನನ್ನು ಬೇಕಾದರೂ ಸಾಧಿಸಬಲ್ಲ. ಕೋಟ್ಯಾಧಿಪತಿಗಳಿಂದ ಹಿಡಿದು ಜೇಬಿನಲ್ಲಿ ಬಿಡಿಗಾಸಿಲ್ಲದವರೂ ಕೂಡ ದೇಶ ಸುತ್ತಿದ್ದಾರೆ. ಸುತ್ತುತ್ತಲೂ ಇದ್ದಾರೆ. ಮುನ್ನೂರಕ್ಕೂ ಹೆಚ್ಚು ಸಂಸ್ಥೆಗಳ ಒಡೆಯನಾದ ರಿಚರ್ಡ್ ಬ್ರಾನ್ಸನ್ ಕ್ಯಾರೇ ಇಲ್ಲದೆ ಆಕಾಶದಲ್ಲಿ ಕುಪ್ಪಳಿಸಿದ್ದೂ ಇದೆ. ಫ್ರಾಂಕ್ ಅಬಗ್ನೇಲ್ ಎಂಬ ಅಮೆರಿಕನ್ `ಕಾನ್’ ಆರ್ಟಿಸ್ಟ್ ಪಾನ್ ಅಮೆರಿಕನ್ ಸಂಸ್ಥೆಗೆ ಚಳ್ಳೆಹಣ್ಣು ತಿನ್ನಿಸಿ ನಯಾಪೈಸೆ ಖರ್ಚಿಲ್ಲದೆ ಇಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಜುಮ್ಮೆಂದು ಹಾರಾಡಿದ್ದೂ ಇದೆ.

ಪಾಶ್ಚಾತ್ಯರೊಂದಿಗೆ ಹೋಲಿಸಿದರೆ ಪ್ರವಾಸಗಳ ಬಗ್ಗೆ ಭಾರತೀಯರಲ್ಲಿ ಕೊಂಚ ಡಿಫರೆಂಟ್ ಎಂಬಂತಹ ದೃಷ್ಟಿಕೋನವಿದೆ. ಪ್ರವಾಸಗಳಿಗೆ ಹೋದವರೆಲ್ಲಾ ಪ್ರವಾಸ ಕಥನಗಳನ್ನು ಬರೆಯಬೇಕು ಅಂತಲ್ಲ. ಆದರೆ ಭೇಟಿಯಿತ್ತ ಸ್ಥಳಗಳ ಬಗೆಗಿನ ಸ್ವಾರಸ್ಯಕರ ಕತೆಗಳನ್ನು ಕೆದಕುವ ಗೋಜಿಗೆಲ್ಲಾ ನಾವುಗಳು ಹೋಗುವುದು ಕಮ್ಮಿಯೇ. ಜನಪದ, ಸಂಸ್ಕøತಿ, ಸ್ಥಳ ಇತಿಹಾಸಗಳು, ವೈಶಿಷ್ಟ್ಯಗಳು ಹೆಚ್ಚಿನವರಿಗೆ ಬೋರು ಹೊಡೆಸುತ್ತವೆ.

ನಮ್ಮಲ್ಲಿ ಬಹುತೇಕರಿಗೆ ಪ್ರವಾಸ ಎಂದರೆ ಹೊಸ ಜಾಗಗಳಿಗೆ ಹೋಗಿ, ಹೊಟ್ಟೆ ತುಂಬಾ ತಿಂದು, ನೂರಿನ್ನೂರು ಫೋಟೋಗಳನ್ನು ಕ್ಲಿಕ್ಕಿಸಿ, ಮನೆಗೆ ಮರಳಿ ಬರುವುದಷ್ಟೇ. ಸಾಮಾಜಿಕ ಜಾಲತಾಣಗಳು, ಸೆಲ್ಫಿಗಳು ಬಂದ ನಂತರವಂತೂ ಈ ಫೋಟೋ ಗೀಳು ಮತ್ತಷ್ಟು ಹೆಚ್ಚಿತು ಎಂದೇ ಹೇಳಬೇಕು. ಪ್ರವಾಸೀ ತಾಣಗಳಲ್ಲಿ ಗೈಡ್ ಗಳ ಸಹಾಯವನ್ನು ಪಡೆಯಲೂ ಕೂಡ ಜಿಪುಣತನವನ್ನು ತೋರಿಸುವವರಿದ್ದಾರೆ. ಸುಮ್ಮನೆ ಯಾಕೆ ಖರ್ಚು ಅಂತ!

ಪ್ರವಾಸಕ್ಕೆಂದು ಎಲ್ಲಿಗೋ ಹೋಗಿ ದಿನವಿಡೀ ಹೋಟೇಲ್ ರೂಮಿನಲ್ಲಿ ಮಲಗಿಕೊಂಡೋ, ಟಿ.ವಿ. ನೋಡಿಕೊಂಡೋ ಕಾಲಕಳೆಯುವವರೂ ಇದ್ದಾರೆ. ಹಲವರಿಗೆ ಪ್ರವಾಸಗಳಲ್ಲಿ ಜೊತೆಗೊಬ್ಬ ಹಿಂಬಾಲಕ ಬೇಕೇ ಬೇಕು ಎಂಬ ಹಂಬಲವಾದರೆ ನನ್ನಂತಹ ಕೆಲವರು ಯಾರನ್ನೂ ಕಾಯುವ ಗೋಜಿಗೆ ಹೋಗದೆ ಅವಕಾಶ ಸಿಕ್ಕಾಗಲೆಲ್ಲಾ ಸುಮ್ಮನೆ ಬ್ಯಾಗೊಂದನ್ನು ಹೆಗಲಿಗೇರಿಸಿ ಎಲ್ಲಿಗಾದರೂ ಹೊರಡುವುದನ್ನು ಇಷ್ಟಪಡುವವರು.

ನಮ್ಮ ಪುಟ್ಟ ಕುಟುಂಬದಲ್ಲಂತೂ ತಿರುಗಾಟದ ಹುಚ್ಚು ಹತ್ತಿಸಿಕೊಂಡವನು ನಾನೊಬ್ಬನೇ ಎಂದರೆ ತಪ್ಪಿಲ್ಲ. ಆದರೆ ನನ್ನ ನಿಜವಾದ ತಿರುಗಾಟಗಳು ಶುರುವಾಗಿದ್ದು ಸುರತ್ಕಲ್ ನಲ್ಲಿ ಎಂಜಿನಿಯರಿಂಗ್ ಮುಗಿಸಿ ದೆಹಲಿಗೆ ಬಂದಿಳಿದ ನಂತರವೇ. ಆ ಮೊದಲು ನೆಟ್ಟಗೆ ಕರ್ನಾಟಕದ ಉತ್ತರ ಜಿಲ್ಲೆಗಳ ಕಡೆಗೂ ನಾವು ಪ್ರವಾಸ ಹೋದವರಲ್ಲ. ಜೀವನದ ಕಾಲು ಭಾಗ ಮುಗಿದುಹೋದರೂ ಕರ್ನಾಟಕದ ಹತ್ತು ಪ್ರತಿಶತವನ್ನೂ ನೋಡಲಾಗಲಿಲ್ಲ ಎಂಬ ಬಗ್ಗೆ ನನಗೆ ಖೇದವಿದೆ.

ಹೀಗೆ ಮಂಗಳೂರಿನಿಂದ ದೆಹಲಿಗೆ ಬಂದು ಏಕಾಏಕಿ ಪಡೆದ ಸ್ವಾತಂತ್ರ್ಯದ ಪರಿಣಾಮವೋ ಏನೋ, ತಿರುಗಾಟದ ಹೊಸ ಹುಚ್ಚೂ ಅಂಟಿಕೊಂಡುಬಿಟ್ಟಿತ್ತು. ಇನ್ನು ಉದ್ಯೋಗನಿಮಿತ್ತವಾಗಿಯೂ ಕೂಡ ದೇಶದ ಹಲವು ಭಾಗಗಳನ್ನು ನೋಡುವ ಅಪರೂಪದ ಅವಕಾಶಗಳು ಸಿಕ್ಕಿದ್ದವು. ಹರಿಯಾಣಾ, ಉತ್ತರ ಪ್ರದೇಶ, ಕೇರಳ, ಅಂಡಮಾನ್, ನಾಗಾಲ್ಯಾಂಡ್, ಜೈಪುರ… ಹೀಗೆ ಸಿಕ್ಕ ಅವಕಾಶಗಳನ್ನೇ ಸದುಪಯೋಗಪಡಿಸಿಕೊಳ್ಳುತ್ತಾ ಏಕಾಂಗಿಯಾಗಿ ಅಲೆದಾಡುತ್ತಾ ಹೊಸ ಹೊಸ ಅನುಭವಗಳನ್ನು ನನ್ನದಾಗಿಸಿಕೊಳ್ಳುತ್ತಿದ್ದೆ. ಅಂಡಮಾನ್ ದ್ವೀಪದಲ್ಲಂತೂ ಬರೋಬ್ಬರಿ ಎರಡು ತಿಂಗಳ ಕಾಲ ತಂಗಿದ್ದ ನಾನು ಕ್ರಮೇಣ ಅಲ್ಲಿಯವನೇ ಆಗಿಬಿಟ್ಟಿದ್ದೆ.

ಸದ್ಯಕ್ಕಿರುವ ರಿಪಬ್ಲಿಕ್ ಆಫ್ ಅಂಗೋಲಾ ಈ ಪಯಣದ ಮುಂದುವರಿದ ಭಾಗವೆಂದಷ್ಟೇ ನಾನು ಹೇಳಬಲ್ಲೆ.

ಏನಿದು ಈ ಅಂಗೋಲಾ?

“ಈಗೆಲ್ಲಿದ್ದಾನೆ ನಿಮ್ಮ ಸುಪುತ್ರ?”, ಅಮ್ಮನಿಗೆ ಯಾರೋ ಕೇಳಿದರಂತೆ.
“ಅಂಗೋಲಾ ಅಂತಿದೆ ಆಫ್ರಿಕಾದ ದಕ್ಷಿಣ ಭಾಗದಲ್ಲಿ… ಅಲ್ಲಿದ್ದಾನೆ”, ಎಂದಂದರಂತೆ ನಮ್ಮಮ್ಮ.
“ಹೋ… ದಕ್ಷಿಣ ಆಫ್ರಿಕಾನಾ?”
“ಅಲ್ಲಲ್ಲ… ಈ ದೇಶ ಆಫ್ರಿಕಾದ ದಕ್ಷಿಣದಲ್ಲಿದೆ ಅಷ್ಟೇ… ಆದರೆ `ದಕ್ಷಿಣ ಆಫ್ರಿಕಾ’ ಅಲ್ಲ… ಅಂಗೋಲಾ ಅಂತ ಹೆಸ್ರು ಅದರದ್ದು…”
“ಹೌದಾ… ಏನೋ ಒಂದು… ಎಲ್ಲಾದ್ರೂ ಇರ್ಲಿ… ಆರಾಮಾಗಿರ್ಲಿ ಅಷ್ಟೇ…”

ಇಂಥದ್ದೇ ಇನ್ನೊಂದು:
“ನಿಮ್ಮ ಲೇಖನ ಓದಿದೆ ಮಾರಾಯ್ರೇ… ಚೆನ್ನಾಗಿತ್ತು. ಹೀಗೇ ಬರೀತಾ ಇರಿ”, ಯಾವತ್ತೂ ಮಾತಿಗೆ ಸಿಗದ ಪರಿಚಿತರೊಬ್ಬರು ಹೇಳಿದರು.
“ಹೌದಾ… ಥ್ಯಾಂಕ್ಯೂ”, ಅಂದೆ ನಾನು.
“ಆದ್ರೆ ನಂಗೆ ಒಂದೇ ಒಂದು ಡೌಟು ಅಂತೀನಿ…”, ಅಂದರು ಅವರು.
“ಏನದು?”, ನನ್ನ ಹಣೆಯ ಮಧ್ಯದಲ್ಲಿ ಪ್ರಕಾಶಮಾನವಾಗಿ ಮೂಡಿತೊಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ!
“ಅಲ್ಲಾ… ಪತ್ರಿಕೆಯವರು ಯಾವಾಗಲೂ ನಿಮ್ಮ ಹೆಸರಿನ ಜೊತೆ ಅಂಗೋಲಾ ಅಂತ ಹಾಕೋದ್ಯಾಕೆ ಅಂತ? `ಅಂಕೋಲ’ ಅನ್ನೋದು `ಅಂಗೋಲ’ ಅಂತ ಕಣ್ತಪ್ಪಿನಿಂದ ಒಮ್ಮೆ ಮುದ್ರಣದೋಷವಾದರೆ ಸರಿ. ಆದ್ರೆ ಪದೇ ಪದೇ ಇದೇ ಆಗಿಬಿಟ್ರೆ ಏನು ಕತೆ ಅಂತ ನಾನು ಕೇಳೋದಪ್ಪಾ!”
“ಮುದ್ರಣದೋಷ ಅಲ್ಲ ಸಾಹೇಬ್ರೇ. ಅದು ಅಂಗೋಲಾನೇ. ನಾನು ಅಂಕೋಲಾದಲ್ಲಿಲ್ಲ. ಸದ್ಯ ಆಫ್ರಿಕಾದಲ್ಲಿದ್ದೇನೆ”
“ಓ ಹೌದಾ… ಅಂಕೋಲ ಆಫ್ರಿಕಾದಲ್ಲೂ ಇದೆಯಾ?”
“ಇದು ಅಂಕೋಲ ಅಲ್ಲ. ಅಂಗೋಲಾ… ಅಂಗೋಲಾ…”, ನಾನೀಗ ಮೆತ್ತಗೆ ಹಣೆ ಚಚ್ಚಿಕೊಳ್ಳುತ್ತಿದ್ದೇನೆ. ಬಹುಷಃ ನನ್ನ ಹಣೆಯಿಂದ ಛಂಗನೆ ಜಿಗಿದ ಪ್ರಶ್ನಾರ್ಥಕ ಚಿಹ್ನೆಯೀಗ ಅವರ ಹಣೆಯಲ್ಲಿ ವಿರಾಜಮಾನವಾಗಿದೆ.
“ಓ ಹೌದಾ… ಇರ್ಲಿ ಬಿಡಿ… ಮುಂದಿನ ಬಾರಿಯಾದರೂ ನಿಮ್ಮ ಹೆಸರಿನ ಹಿಂದೆ `ಕಿನ್ನಿಗೋಳಿ’ ಅಂತ ಹಾಕಲು ಪತ್ರಿಕೆಯವರಿಗೆ ಹೇಳಿ, ಓಕೇನಾ? ನಮ್ಮೂರಿನ ಹುಡುಗ ಅಂತ ಹೇಳಿಕೊಳ್ಳೋಕೂ ಸುಲಭವಾಗುತ್ತೆ ನೋಡಿ”
“ಒಳ್ಳೇ ಐಡಿಯಾ… ನೋಡೋಣ… ಪ್ರಯತ್ನಿಸುತ್ತೇನೆ”, ಎಂದೆ ನಾನು.

ಅಂಗೋಲಾ ಎಂಬ ಆಫ್ರಿಕನ್ ದೇಶವೊಂದರ ಹೆಸರು ಹುಟ್ಟುಹಾಕಿದ ಗೊಂದಲಗಳ ನಿದರ್ಶನಗಳಿವು. ನಾಮಬಲದಿಂದ ಪೇಚಿಗೊಳಗಳಾಗುವ ಸನ್ನಿವೇಶಗಳು ಬಹುತೇಕ ಎಲ್ಲರ ಜೀವನದಲ್ಲೂ ಬಂದುಹೋಗಿರುತ್ತವೆ. ನಾನು ಕಲಿತ ಸುರತ್ಕಲ್ ಎನ್.ಐ.ಟಿ.ಕೆ ವಿದ್ಯಾಸಂಸ್ಥೆಯಲ್ಲಿ ಹಲವು ಉತ್ತರ ಭಾರತದ ಗೆಳೆಯರು ಹೇಳುತ್ತಿದ್ದ ಮಾತು ನನಗೀಗ ನೆನಪಾಗುತ್ತಿದೆ. `ಎನ್.ಐ.ಟಿ.ಕೆ’ ವಿದ್ಯಾಸಂಸ್ಥೆಯನ್ನು `ಎನ್.ಐ.ಐ.ಟಿ’ ಎಂದೂ, `ಸುರತ್ಕಲ್’ ಅನ್ನು `ಸೂರತ್’ ಎಂದೂ ಇವರುಗಳ ಸಂಬಂಧಿಕರು ಅಂದುಕೊಳ್ಳುತ್ತಿದ್ದರಂತೆ. “ಭಾರತದಲ್ಲಿ ಐಐಟಿ, ಐಐಎಮ್ಮುಗಳನ್ನು ಬಿಟ್ಟರೆ ನಮ್ಮದೇ ಲೆವೆಲ್ಲು. ಅಷ್ಟಿದ್ದರೂ ಎನ್.ಐ.ಟಿ.ಕೆ ಅಂದ್ರೆ ಅದೇನು ಗೊಂದಲವಪ್ಪಾ”, ಎಂದು ಗೊಣಗುತ್ತಾ ನಗೆಯಾಗುತ್ತಿದ್ದ ನೆನಪುಗಳು ಇನ್ನೂ ಹಸಿರಾಗಿವೆ.

ಅವರಿವರ್ಯಾಕೆ? ಆಫ್ರಿಕಾದಲ್ಲಿ `ಅಂಗೋಲಾ’ ಅನ್ನೋ ಹೆಸರಿನ ದೇಶವೂ ಒಂದಿದೆ ಎಂದು ನನಗೆ ತಿಳಿದಿದ್ದೂ ಕೂಡ ಇತ್ತೀಚಿನ ಕೆಲವರ್ಷಗಳಲ್ಲೇ.

ಶಾಲಾದಿನಗಳ ಸಮಾಜವಿಜ್ಞಾನದ ಪಾಠಗಳಲ್ಲಿ `ಕಗ್ಗತ್ತಲ ಖಂಡ’ ಎಂದು ಹೆಸರಿಸಿದ್ದೇ ಆಫ್ರಿಕಾ ಬಗ್ಗೆ ನಮಗೆ ಸಿಕ್ಕ ಮೊದಲ ನೋಟಗಳಲ್ಲೊಂದು. ನಂತರ ಗಾಂಧೀಜಿ, ಮಂಡೇಲಾ, ಕರಿಯರು, ಗುಲಾಮಗಿರಿ ಇತ್ಯಾದಿಗಳೆಲ್ಲಾ ನಿಧಾನವಾಗಿ ಪರಿಚಯವಾದವು. ಕ್ರಿಕೆಟ್ ಕ್ರೇಝ್ ಶುರುವಾದಾಗಿನಿಂದ ದಕ್ಷಿಣ ಆಫ್ರಿಕಾ, ಕೀನ್ಯಾ ಮತ್ತು ಜಿಂಬಾಬ್ವೆಗಳು ಜೊತೆಯಾದವು. ಯಾರೋ ಹನಿಮೂನಿಗೆ ಹೋಗಿ ಬಂದರೆಂದು ಮಾರಿಷಿಯಸ್ ದ್ವೀಪಗಳೂ ಕೂಡ ಆಗೊಮ್ಮೆ ಈಗೊಮ್ಮೆ ಮಾತಿನ ಮಧ್ಯದಲ್ಲಿ ಇಣುಕುವುದು ಶುರುವಾಗಿತ್ತು.

ಭಯಂಕರ ಹಸಿವು, ಬಡತನಗಳು ಸುಡಾನ್ ಗಷ್ಟೇ ಸೀಮಿತವೆಂದೂ ಈದಿ ಅಮೀನ್ ಎಂಬ ಸರ್ವಾಧಿಕಾರಿಯಿಂದ ಉಗಾಂಡಾ ಅನ್ನೋ ದೇಶ ಕೂಡ ಅಸ್ತಿತ್ವದಲ್ಲಿದೆಯೆಂದು ಅಲ್ಪಸ್ವಲ್ಪ ಜನರಿಗೆ ಮತ್ತಷ್ಟು ತಿಳಿದುಬಂತು. ಗಡಾಫಿಯಿಲ್ಲದಿದ್ದರೆ ಲಿಬಿಯಾ ಸುದ್ದಿಯಾಗುತ್ತಿರಲಿಲ್ಲವೋ ಏನೋ. ನನಗೆ ನೆನಪಿರುವಂತೆ ಈಜಿಪ್ಟಿನ ಪಿರಮಿಡ್ ಮತ್ತು ಮಮ್ಮಿಗಳು ಶಾಲಾದಿನಗಳಲ್ಲಿ ಭಾರೀ ಆಸಕ್ತಿಯನ್ನು ನನ್ನಲ್ಲಿ ಹುಟ್ಟುಹಾಕಿದ್ದವು.

ಬಹುಷಃ ನಾನು ದೂರದರ್ಶನದಲ್ಲಿ ಕಂಡ ಈಜಿಪ್ಟಿನಲ್ಲಿ ಬಿಳಿಯರೇ ಹೆಚ್ಚು ಕಾಣಿಸಿಕೊಂಡಿದ್ದರಿಂದಲೋ ಏನೋ, ಈಜಿಪ್ಟ್ ಆಫ್ರಿಕಾದಲ್ಲಿಲ್ಲ, ಇನ್ನೆಲ್ಲೋ ಇದೆ ಎಂದೇ ನಾನು ಅಂದುಕೊಂಡಿದ್ದೆ. ಹಲವಾರು ವರ್ಷಗಳಿಂದ ಸಂಗಾತಿಯಾಗಿದ್ದ ಅಟ್ಲಾಸ್ ಪುಸ್ತಕವನ್ನು ನಾವೆಷ್ಟು ಪರಿಣಾಮಕಾರಿಯಾಗಿ ಬಳಸಿದ್ದೇವೆ ಎಂಬುದನ್ನು ಅರ್ಥೈಸಿಕೊಳ್ಳಲು ಇವಿಷ್ಟೇ ಸಾಕು.

ಖ್ಯಾತ ಸೊಮಾಲಿಯನ್ ಸೂಪರ್ ಮಾಡೆಲ್, ಲೇಖಕಿ, ಸಾಮಾಜಿಕ ಕಾರ್ಯಕರ್ತೆ ವಾರಿಸ್ ಡಿರೀಯವರು “ನಿಜಕ್ಕೂ ಆಫ್ರಿಕಾದಲ್ಲೇನು ನಡೆಯುತ್ತಿದೆ ಎಂಬ ಕಲ್ಪನೆಯೇ ಬೆಚ್ಚಗಿನ ಹೊರಕಕ್ಷೆಯಲ್ಲಿರುವ ಜಗತ್ತಿನ ಜನರಿಗಿದ್ದಂತಿಲ್ಲ” ಎಂದು ತಮ್ಮ ಕೃತಿಯೊಂದರಲ್ಲಿ ಬರೆದಾಗ ನಾನು ಬೆಚ್ಚಿಬಿದ್ದಿದ್ದೆ.

ನನ್ನ ಸಾಮಾನ್ಯ ಜ್ಞಾನ, ತಿಳುವಳಿಕೆ, ಓದು, ಪ್ರಚಲಿತ ವಿದ್ಯಮಾನಗಳ ಬಗೆಗಿನ ಅರಿವು, ಕೆಲಸಕ್ಕೆ ಬಾರದ ಒಣಜಂಭ… ಹೀಗೆ ಎಲ್ಲವನ್ನೂ ಈ ಒಂದು ವಾಕ್ಯವು ಅಳಿಸಿಹಾಕಿತ್ತು. ಅದೆಂಥಾ ಮಾತು ಹೇಳಿದ್ದರು ಆಕೆ! ಇಲ್ಲದಿದ್ದರೆ ಮಲಾವಿ, ಬೆನಿನ್, ರವಾಂಡಾ, ಬುರುಂಡಿ, ಬುರ್ಕಿನಾಫಾಸೋಗಳಂತಹ ದೇಶಗಳೂ ಕೂಡ ಆಫ್ರಿಕಾದಲ್ಲಿವೆ ಎಂಬುದನ್ನು ತಿಳಿಯಲು ನನಗೆ ಇಪ್ಪತ್ತೈದು ವರ್ಷಗಳು ಬೇಕಾಗುತ್ತಿರಲಿಲ್ಲ.

ಕ್ಯಾಮೆರೂನ್ ಮತ್ತು ಮೌರಿಟೇನಿಯಾ ದೇಶಗಳ ಅಮಾನುಷ ಆಚರಣೆಯೊಂದರ ಬಗ್ಗೆ ನಾನು ಬರೆದ ಲೇಖನವೊಂದು ಬಹುತೇಕ ಓದುಗರನ್ನು ಕಂಗೆಡಿಸಿತ್ತು. `ಫೋರ್ಸ್ ಫೀಡಿಂಗ್’ (ಬಲವಂತದ ಭೋಜನ) ಸಂಪ್ರದಾಯದ ಬಗ್ಗೆ ಬರೆಯುವವರೆಗೂ ಮೌರಿಟೇನಿಯಾ ನನಗೂ ಹೊಸದು.

ಹೀಗೆ ದಿನದ ಇಪ್ಪತ್ತನಾಲ್ಕು ಘಂಟೆ ಸಕ್ರಿಯವಾಗಿರುವ ಜಾಗತಿಕ ಮಾಧ್ಯಮಗಳ, ಅಂತರ್ಜಾಲ – ಸ್ಮಾರ್ಟ್‍ಫೋನ್ ಗಳ ಯುಗದಲ್ಲಿ ನಾವಿದ್ದರೂ ಪಕ್ಕದ ಖಂಡದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಕಿಂಚಿತ್ತು ಮಾಹಿತಿಯೂ ನಮಗಿಲ್ಲದಿರುವುದು ಸೋಜಿಗದ ಸಂಗತಿಗಳಲ್ಲೊಂದು. ಅಮೇರಿಕಾದಲ್ಲಿ ಪಟಾಕಿ ಸಿಡಿದರೂ ನಮಗೆ ಗೊತ್ತಾಗುತ್ತದೆ. ಆದರೆ ಆಫ್ರಿಕಾದ ಸಿಯಾರಾ ಲಿಯೋನೆಯಲ್ಲಿ ನೆರೆ, ಮಣ್ಣು ಎಲ್ಲವೂ ಕೊಚ್ಚಿಕೊಂಡು ಬಂದು ಏಕಾಏಕಿ ಐನೂರು ಚಿಲ್ಲರೆ ಜನರನ್ನು ಗುಳುಂ ಮಾಡಿದಲೂ ನಮಗದು ಸುದ್ದಿಯಾಗಿ ದಕ್ಕುವುದೇ ಇಲ್ಲ. ದಕ್ಕಿದರೂ ಕಾಡಬೇಕಾದಷ್ಟು ತೀವ್ರವಾಗಿ ಕಾಡುವುದೇ ಇಲ್ಲ. ಹೇಳಿ, ಇದಕ್ಕೇನನ್ನೋಣ?

ಇರಲಿ. ಮರಳಿ ಅಂಗೋಲಾಕ್ಕೆ ಬರೋಣ. ಅಂಗೋಲಾದಲ್ಲಿ ಹೊಸ ಪ್ರಾಜೆಕ್ಟ್ ಒಂದು ಸಿಕ್ಕಿದೆ ಎಂದು ಸಹೋದ್ಯೋಗಿ ಮಿತ್ರರೊಬ್ಬರು ಹೇಳಿದಾಗ ನಾನು ಸುಮ್ಮನೆ ಹೂಂ ಎಂದಿದ್ದೆ. `ಅಂಗೋಲಾ’ ಎಂಬ ಹೆಸರನ್ನು ನಾನು ಮೊಟ್ಟಮೊದಲು ಕೇಳಿದ್ದೇ ಆಗ. ಸದ್ಯ ನಾನಿರುವ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿರುವ ದೇಶಗಳಲ್ಲಿ ಎಪ್ಪತ್ತು ಪ್ರತಿಶತ ದೇಶಗಳು ಆಫ್ರಿಕಾದಲ್ಲೇ ಇರುವುದರಿಂದ ಈ ಅಂಗೋಲಾ ಕೂಡ ಆಫ್ರಿಕಾದಲ್ಲೇ ಇರಬಹುದು ಎಂದು ನಾನು ಲೆಕ್ಕಹಾಕಿದ್ದೆ. ಮುಂದೆ ಈ ತರ್ಕವು ಹೌದು ಎಂದು ದೃಢವಾಗಿ ಈ ಸಂಗತಿಯನ್ನು ಮರೆತಿದ್ದೂ ಆಯಿತು.

ಬಿಂಗೋ! ನಿಜಕ್ಕೂ ಅದೊಂದು ಒಳ್ಳೆಯ `ಗೆಸ್’ ಆಗಿತ್ತಷ್ಟೇ. ಇನ್ನೇನೂ ಅಲ್ಲ! ನಂತರ “ಇವರು ಅಂಗೋಲಾಕ್ಕೆ ಹೊರಡಬೇಕಾದೀತೋ ಏನೋ” ಎಂಬ ಗುಸುಗುಸು ಮಾತುಗಳೂ ಕೂಡ ನಮ್ಮ ಸಹೋದ್ಯೋಗಿಗಳ ವಲಯದಲ್ಲಿ ಕೇಳಿಬರಲು ಆರಂಭವಾದಾಗ ನೇಪಥ್ಯಕ್ಕೆ ಸರಿದಿದ್ದ ಅಂಗೋಲಾ ಮತ್ತೊಮ್ಮೆ ಜೀವಂತವಾಗಿತ್ತು.

ನಾನು ಅಂಗೋಲಾ ದೇಶಕ್ಕೆ ಬಂದಿಳಿದು ಒಂದು ವರ್ಷ ಕಳೆದರೂ ಆಫ್ರಿಕಾ ಬಗೆಗಿನ ಹಲವಾರು ಪ್ರಶ್ನೆಗಳು, ಅಚ್ಚರಿಗೊಳಪಡಿಸುವ ಹೇಳಿಕೆಗಳು ಹಲವರಿಂದ ಇಂದಿಗೂ ನನಗೆ ಎದುರಾಗುತ್ತವೆ. ಅವುಗಳಲ್ಲಿ ಕೆಲವು ತೀರಾ ಬಾಲಿಶವೆಂದೆನಿಸಿದರೂ ಉಳಿದವುಗಳು ನಿಜಕ್ಕೂ ಸ್ವಾರಸ್ಯಕರವಾದವುಗಳು. “ಎಲ್ಲರೂ ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಅಂತೆಲ್ಲಾ ಹೋದರೆ ನೀವೇನ್ರೀ ಅಫ್ರಿಕಾಗೆ ಹೋಗುತ್ತಿದ್ದೀರಿ?”, ಎಂದು ನನ್ನಲ್ಲಿ ಹಲವರು ಕೇಳಿದ್ದಾರೆ.

“ಆಫ್ರಿಕಾದಲ್ಲಿ ನರಭಕ್ಷಕರು ಇದ್ದಾರಂತೆ ಮಾರಾಯ, ಜಾಗ್ರತೆ”, ಎನ್ನುತ್ತಾ ಕಣ್ಣರಳಿಸಿದವರೂ ಇದ್ದಾರೆ. ನಾನು ಸದ್ಯಕ್ಕಿರುವುದು ಅಂಗೋಲಾದ ಹಳ್ಳಿಯೊಂದರಲ್ಲಿ ಎಂದು ತಿಳಿದ ಹಲವರು ನಾನು ಕಾಡಿನೊಳಗೇ ಸೊಂಟಕ್ಕೆ ಎಲೆಗಳನ್ನು ಸುತ್ತಿಕೊಂಡ ಆದಿವಾಸಿಗಳೊಂದಿಗೆ ವಾಸಿಸುತ್ತಿದ್ದೇನೆ ಎಂಬ ಅವಸರದ ಊಹೆಗಳಿಗೆ ಬಂದಿದ್ದಾರೆ.

ಅಸಲಿಗೆ ಇವೆಲ್ಲವೂ ಕೂಡ ಭ್ರಮೆಗೆ ಬಿದ್ದ ಮನಸ್ಸುಗಳ ಕಾಲ್ಪನಿಕ ಫ್ಯಾಂಟಸಿಗಳಷ್ಟೇ ಎಂದು ತಳ್ಳಿಹಾಕಲಾಗುವುದಿಲ್ಲ. ವೈಚಿತ್ರ್ಯ-ಸ್ವಾರಸ್ಯಗಳ ಮುಖವಾಡವನ್ನು ಹೊತ್ತ, ಎಲ್ಲಿಂದಲೋ ಸಿಕ್ಕ ಅರೆಬೆಂದ ಮಾಹಿತಿಯೊಂದು ನಮ್ಮ ಸ್ಮತಿಪಟಲದಲ್ಲಿ ಹಾಗೆಯೇ ಉಳಿದುಹೋಗಿರುತ್ತದೆ. ಇವುಗಳು ಸತ್ಯಗಳಾಗಿದ್ದರೂ ಕೂಡ ಒಂದು ರೀತಿಯಲ್ಲಿ ಅರ್ಧಸತ್ಯಗಳು. ವಿವಿಧ ಪರಿಚಿತ-ಅಪರಿಚಿತ, ಪರೋಕ್ಷ-ಅಪರೋಕ್ಷ, ಅಗೋಚರ ಆಯಾಮಗಳನ್ನು ತನ್ನೊಡಲಿನಲ್ಲಿ ಅಡಗಿಸಿಟ್ಟುಕೊಂಡ ಘಟನಾವಳಿಗಳು.

“ಹಾಯ್… ಅಂಗೋಲಾ” ಅಂಕಣವು ಇಂಥಾ ಆಯಾಮಗಳನ್ನೇ ಓದುಗರಿಗಾಗಿ ತೆರೆದಿಡಲಿದೆ. ಆಫ್ರಿಕಾದೊಳಗಿನ ಹೊಸ ಜಗತ್ತೊಂದು ವಿಶಿಷ್ಟ ರೀತಿಯಲ್ಲಿ ಅನಾವರಣಗೊಳ್ಳಲಿದೆ.

5 Responses

  1. Prema says:

    Very nice, interesting and fun filled narration so far!! Look forward to reading more .

  2. Konaje Medha says:

    Love reading this. As you mentioned we only know about countries like America , Africa is still “kaggattaleya khanda” for us .. These kind of articles enlighten us !

  3. ಭಾರತಿ ಬಿ ವಿ says:

    ನಿಜ … ಜಗತ್ತಿನ ಮತ್ತೊಂದು ಭಾಗದ ಬಗೆಗೆ ಅದೆಷ್ಟು ಅಜ್ಞಾನ ನಮ್ಮದು! ಇರಲು better late than never ಅಂದುಕೊಳ್ಳೋಣ …

Leave a Reply

%d bloggers like this: