ಚಿಂತನೆಗಳ ಹಂತಕರೂ.. ಹಂತಕರ ಚಿಂತನೆಗಳೂ..

 

 

 

ನಾ ದಿವಾಕರ

 

 

ಖ್ಯಾತ ಸಂಶೋಧಕ, ಸಾಹಿತಿ, ವಿಚಾರವಾದಿ ಮತ್ತು ಮಾನವತೆಯ ಪ್ರತಿಪಾದಕ ಡಾ ಎಂ ಎಂ ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷಗಳು ಕಳೆದಿವೆ .

ರಾಜ್ಯಾದ್ಯಂತ ಕಲಬುರ್ಗಿಯವರ ಹತ್ಯೆಗೆ ಸಾರ್ವಜನಿಕ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಜನಸ್ತೋಮದ ಆಗ್ರಹ ಒಂದೇ ಆಗಿದೆ. ಕಲಬುರ್ಗಿಯವರ ಹಂತಕರ ಬಂಧನ.

ಆದರೆ ಈ ಸಂದರ್ಭದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಕಲಬುರ್ಗಿಯ ಹಂತಕರು ಯಾರು? ಹಂತಕರಿಗೆ ಏಕೆ ಇನ್ನೂ ಶಿಕ್ಷೆಯಾಗಿಲ್ಲ ? ಗೋವಿಂದ ಪನ್ಸಾರೆ, ಧಬೋಲ್ಕರ್ ಮತ್ತು ಕಲಬುರ್ಗಿಯವರ ಹತ್ಯೆಯ ಹಿಂದಿರುವ ಅಧಿಪತ್ಯದ ಶಕ್ತಿಗಳಾದರೂ ಯಾವುದು ?

ಹಾದಿಬೀದಿಯ ರೌಡಿಷೀಟರ್‍ಗಳ ಹಂತಕರನ್ನು ಕ್ಷಣಮಾತ್ರದಲ್ಲಿ ಕಂಡುಹಿಡಿಯುವ ಸಾಮರ್ಥ್ಯ ಇರುವ ಆಳುವ ವರ್ಗಗಳಿಗೆ ಸಮಾಜದ ಓರೆಕೋರೆಗಳನ್ನು ತಿದ್ದುವ ಕಾಯಕದಲ್ಲಿ ತೊಡಗಿರುವ ವಿಚಾರವಾದಿಗಳ ಹಂತಕರನ್ನು ಗುರುತಿಸಲೂ ಸಾಧ್ಯವಾಗದಿರುವುದು ಏಕೆ ?

ಕಲಬುರ್ಗಿ, ಪನ್ಸಾರೆ ಮುಂತಾದವರು ಹತ್ಯೆಗೆ ಅರ್ಹರಾದವರೇ ಅಥವಾ ಇಂತಹ ವಿಚಾರವಾದಿಗಳ ಹಂತಕರು ಶಿಕ್ಷೆಯಿಂದ ಹೊರತಾದವರೇ ?

ಈ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಶೋಧಿಸುತ್ತಾ ಹೊರಟರೆ ಭಾರತೀಯ ಇತಿಹಾಸದ ಗರ್ಭವನ್ನೇ ಸೀಳಿ ನೋಡಬೇಕಾಗುತ್ತದೆ. ಏಕೆಂದರೆ ಭಾರತೀಯ ಸಾಮಾಜಿಕ-ಸಾಂಸ್ಕೃತಿಕ ಪರಂಪರೆಯಲ್ಲಿ ಕೆಲವು ಜನಸಮುದಾಯಗಳು (ಸಹಜವಾಗಿ ಈ ಸಮುದಾಯಗಳಿಗೆ ಸೇರುವ ವ್ಯಕ್ತಿಗಳು) ಸಾವಿಗೆ ಅರ್ಹರಾಗಿಯೇ ಜನಿಸುತ್ತಾರೆ. ಈ ಸಾವಿನ ಪರಂಪರೆಯನ್ನು ಸಾಕಾರಗೊಳಿಸುವ ಶಕ್ತಿಗಳು ಪ್ರಶ್ನಾತೀತವಾಗುತ್ತವೆ. ಈ ಹಿನ್ನೆಲೆಯಲ್ಲೇ ಕಲಬುರ್ಗಿಯ ಹಂತಕರು ಯಾರು ಎಂಬ ಪ್ರಶ್ನೆ ಜಿಜ್ಞಾಸೆಯಾಗಿ ಕಾಡುತ್ತದೆ.

ಸಮಕಾಲೀನ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭದಲ್ಲಿ ಕಲಬುರ್ಗಿ-ಪನ್ಸಾರೆ ಮತ್ತು ಧಬೋಲ್ಕರ್ (ಒಂದು ರೀತಿಯಲ್ಲಿ ತಮ್ಮೊಳಗಿನ ಸಾಹಿತಿ ಇನ್ನಿಲ್ಲ ಎಂದು ಘೋಷಿಸಿದ ಪೆರುಮಾಳ್ ಮುರುಗನ್) ವೈಚಾರಿಕತೆಯ ಸಂಕೇತದ ರೂಪದಲ್ಲಿ ಕಾಣುವಂತೆಯೇ ಫ್ಯಾಸಿಸ್ಟ್ ಅಧಿಪತ್ಯದ ದಮನಕ್ಕೊಳಗಾದ ಬಲಿಪಶುಗಳಂತೆಯೂ ಕಾಣುತ್ತಾರೆ.

ಆಧುನಿಕ ಸಂವಹನ ಮಾಧ್ಯಮದ ಸಂಕಥನದಲ್ಲಿ ಸಾಹಿತ್ಯವನ್ನು ಒಂದು ಪ್ರಮುಖ ಸಂವಹನ ಮಾಧ್ಯಮ ಎಂದು ಪರಿಗಣಿಸದೆ ಇರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಸಾಹಿತ್ಯ ಮತ್ತು ವಿಶೇಷವಾಗಿ ವೈಚಾರಿಕ ಸಾಹಿತ್ಯ ಜನಸಮುದಾಯಗಳ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುವುದರಿಂದಲೇ ವಿಚಾರವಾದಿ ಚಿಂತಕರು, ಸಾಹಿತಿಗಳು, ಬರಹಗಾರರು ಮತ್ತು ಕವಿಗಳು ಸ್ಥಾಪಿತ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗುತ್ತಲೇ ಇರುತ್ತಾರೆ.

ಸಾಹಿತ್ಯದ ಮಾಧ್ಯಮ ಜನಸಾಮಾನ್ಯರ ಬದುಕಿನೊಳಗೆ ನೇರವಾಗಿ ಒಳಹೊಕ್ಕು ಅಂತರಂಗವನ್ನು ಭೇಧಿಸುತ್ತದೆ. ಹಾಗಾಗಿ ಸಾಹಿತ್ಯ ಜನಜೀವನವನ್ನು ರೂಪಿಸುವ ಒಂದು ಸಾಧನವಾಗುತ್ತದೆ. ಸಂಸ್ಕೃತಿಯನ್ನು ನಿರ್ಮಿಸುವ ಭೂಮಿಕೆಯಾಗುತ್ತದೆ. ಒಂದು ಪ್ರಬುದ್ಧ ಸಮಾಜವನ್ನು ನಿರ್ಮಿಸುವಲ್ಲಿ ಹಾಗೂ ಮಾನವೀಯ ಮೌಲ್ಯಗಳನ್ನೊಳಗೊಂಡ ಸಂಸ್ಕೃತಿಯನ್ನು ರೂಪಿಸುವಲ್ಲಿ ಸಾಹಿತ್ಯ ಪ್ರಬಲ ಅಸ್ತ್ರದಂತೆ ಕಾರ್ಯ ನಿರ್ವಹಿಸುತ್ತದೆ. ಇದು ಇತಿಹಾಸ ಕಂಡಿರುವ ಸತ್ಯ.

ಸ್ಥಾಪಿತ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡಲು ಬಯಸುವ ಸೈದ್ಧಾಂತಿಕ ಶಕ್ತಿಗಳು ಸದಾ ಕಾಲಕ್ಕೂ ಸಾಹಿತ್ಯದ ಮೇಲೆ ತಮ್ಮ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಲೇ ಇರುತ್ತವೆ. ಸಾಹಿತಿಗಳಿಗೆ ಪರಿಪೂರ್ಣ ಸ್ವಾತಂತ್ರ್ಯ ನೀಡುತ್ತಲೇ ಸಾಹಿತ್ಯಕ ಚಿಂತನೆಯನ್ನು ನಿಗ್ರಹಿಸಲಾಗುತ್ತದೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿವರ್ತನೆಗೆ ಹಾತೊರೆಯುವ ಸಂವೇದನಾಶೀಲ ಮನಸ್ಸುಗಳ ಮೇಲೆ ರಾಷ್ಟ್ರೀಯತೆಯ ಭಾವೋದ್ರೇಕದ ಹೊದಿಕೆಯನ್ನು ಹೊದಿಸಲಾಗುತ್ತದೆ. ಅಥವಾ ಧರ್ಮ-ಜಾತಿ ಮತ್ತು ಭಾಷೆಯ ಪರದೆಯನ್ನು ಹೊದಿಸಲಾಗುತ್ತದೆ.

ಇಂತಹ ವಿಷಮ ಸನ್ನಿವೇಶದಲ್ಲಿ ಸಂವೇದನಾಶೀಲ ಮನಸ್ಸುಗಳು ವ್ಯಕ್ತಪಡಿಸುವ ಪ್ರತಿರೋಧ ದೇಶದ್ರೋಹಿ ಅಥವಾ ರಾಷ್ಟ್ರವಿರೋಧಿ ಎಂದು ಬಿಂಬಿಸಲ್ಪಡುತ್ತವೆ. ಇಲ್ಲಿ ಪ್ರಗತಿಶೀಲ ಸಾಹಿತ್ಯ ಅಥವಾ ವೈಚಾರಿಕ ಚಿಂತನೆಗಳು ಪ್ರಭುತ್ವದ ಎದುರು ಸೆಟೆದು ನಿಲ್ಲುವ ಪ್ರಬಲ ದನಿಗಳಾಗಿ ಮಾರ್ಪಡುತ್ತವೆ. ಹಾಗಾಗಿಯೇ ಪೆರುಮಾಳ್ ಮುರುಗನ್ ಅವರಂತಹ ದಿಟ್ಟ ಸಾಹಿತಿಗಳು ತಮ್ಮೊಳಗಿನ ಸಾಹಿತಿಯ ಮೃತ್ಯು ಬಯಸುತ್ತಾರೆ, ಕಲಬುರ್ಗಿಯವರಂತಹ ಸಂಶೋಧಕರು ಹತ್ಯೆಗೀಡಾಗುತ್ತಾರೆ.

ಅನಂತಮೂತಿಯವರಂತಹ ಚಿಂತಕರ ಸಾವು ಸಂಭ್ರಮಿಸಲ್ಪಡುತ್ತದೆ. ಸಂಸ್ಕೃತಿ ಮತ್ತು ಧರ್ಮರಕ್ಷಣೆಯ ಸೋಗಿನಲ್ಲಿ ಸಾಂಪ್ರದಾಯಿಕ ಸಮಾಜದ ಮನುಕುಲ ವಿರೋಧಿ ನೆಲೆಗಳ ಮರುಸ್ಥಾಪನೆಗಾಗಿ ವಿಕೃತ ಇತಿಹಾಸವನ್ನು ಅನಾವರಣಗೊಳಿಸುವ ಸಾಹಿತಿಗಳು ಶ್ರೇಷ್ಠತೆಯ ಪಟ್ಟ ಪಡೆಯುತ್ತಾರೆ.

ಸಮಾಜದ ಓರೆಕೋರೆಗಳನ್ನು ತಿದ್ದುವ ಸಾಮರ್ಥ್ಯ ಸಾಹಿತ್ಯದ ಮಾಧ್ಯಮಕ್ಕೆ ಇರುತ್ತದೆ ಎನ್ನುವ ವೈಚಾರಿಕ ನೆಲೆಯನ್ನೇ ಧ್ವಂಸಗೊಳಿಸುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಸಾಹಿತ್ಯದಿಂದ ಯಾವುದೇ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ ಎಂದು ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿರುವುದನ್ನು ಇಲ್ಲಿ ಗಮನಿಸುತ್ತಲೇ ಈ ಹೇಳಿಕೆಯ ಹಿಂದಿನ ವಿಕೃತಿಯನ್ನು ವಿಶ್ಲೇಷಿಸಬೇಕಾಗುತ್ತದೆ.

ತಮ್ಮ ಸಾಹಿತ್ಯ ಕೃತಿಗಳ ಮೂಲಕ ಸಾಂಪ್ರದಾಯಿಕ ಹಿಂದೂ ಸಮಾಜಕ್ಕೆ ಒಂದು ಸಾಂಸ್ಕೃತಿಕ-ಸೈದ್ಧಾಂತಿಕ-ರಾಜಕೀಯ ಆಯಾಮವನ್ನು ಒದಗಿಸುವಲ್ಲಿ ಯಶಸ್ವಿಯಾಗಿರುವ ಭೈರಪ್ಪನವರ ‘ಆವರಣ’ ಕೃತಿಯಲ್ಲಿ ಇತಿಹಾಸದ ಘಟನೆಗಳನ್ನು ಸಮಕಾಲೀನ ಸಂದರ್ಭದ ರಾಜಕೀಯ ಸಿದ್ಧಾಂತಕ್ಕೆ ಅನುಗುಣವಾಗಿ ಹೇಗೆ ಬಳಸಿಕೊಳ್ಳಬಹುದು ಎಂದು ಸುಸ್ಪಷ್ಟವಾಗಿ ನಿರೂಪಿಸಲಾಗಿದೆ. ಅಯೋಧ್ಯೆಯ ನಂತರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತೀಯ ಹಿಂದುತ್ವ ಪ್ರೇರಿತ ಫ್ಯಾಸಿಸಂ ಸುಭದ್ರ ನೆಲೆ ಪಡೆಯುವಲ್ಲಿ ಈ ಕೃತಿ ತನ್ನದೇ ಆದ ಕೊಡುಗೆಯನ್ನು ಸಲ್ಲಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೂ ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂದು ಹೇಳುವುದು ವೈಚಾರಿಕ ಚಿಂತನೆಯನ್ನು ಭೂಗತಗೊಳಿಸುವ ಹುನ್ನಾರ ಎನ್ನದೆ ವಿಧಿಯಿಲ್ಲ.

ಇಂತಹ ಸಂಕೀರ್ಣ ಸನ್ನಿವೇಶದಲ್ಲಿ, ಮಾನವ ಸಮಾಜವನ್ನು ಮಾನವೀಯ ಪಥದಲ್ಲಿ ಕೊಂಡೊಯ್ಯಲು ಯತ್ನಿಸುವ ಸಾಹಿತಿಗಳು, ವಿಚಾರವಾದಿಗಳು ಮತ್ತು ಚಿಂತಕರು ವಿದ್ರೋಹಿಗಳಾಗಿ ಕಾಣುತ್ತಾರೆ. ಆತ್ಮರತಿ ಮತ್ತು ವೈಭವೀಕರಣದ ಮೂಲಕವೇ ಸಂಸ್ಕೃತಿಯ ಆರಾಧನೆಯಲ್ಲಿ ತೊಡಗುವ ಸಾಂಪ್ರದಾಯಿಕ ಶಕ್ತಿಗಳ ಹಪಾಹಪಿ ಪರಾಕಾಷ್ಠೆ ತಲುಪುತ್ತದೆ. ಶತಮಾನಗಳಿಂದ ತನ್ನ ಶ್ರೇಷ್ಠತೆಯ ಅಹಮಿಕೆಯನ್ನು ಕಾಪಾಡಿಕೊಂಡು ಬಂದಿರುವ ಒಂದು ಸಾಮಾಜಿಕ ವ್ಯವಸ್ಥೆಗೆ, ತನ್ನ ಗರ್ಭದೊಳಗಿನ ಅನಿಷ್ಠಗಳನ್ನು ಹೊರಗೆಡಹುವುದೇ ಘೋರ ಅಪರಾಧದಂತೆ ಕಾಣುತ್ತದೆ.

ಮಾನವ ಸಮಾಜದ ಅಭ್ಯುದಯದ ಹಾದಿಯಲ್ಲಿ ರೂಪುಗೊಳ್ಳುವ ಮನುಕುಲ ವಿರೋಧಿ ಆಚರಣಾ ಪದ್ಧತಿಗಳೂ ಸಹ ಪಾವಿತ್ರ್ಯತೆಯನ್ನು ಪಡೆಯುತ್ತವೆ. ಅಥವಾ ಇಂತಹ ಅನಿಷ್ಠ ಪದ್ಧತಿಗಳು ಸಾಂಪ್ರದಾಯಿಕತೆ ಮತ್ತು ಧಾರ್ಮಿಕ ನೆಲೆಯಲ್ಲಿ ಸ್ಥಾಪಿತ ವ್ಯವಸ್ಥೆಯ ಒಂದು ಭಾಗವಾಗಿ ರೂಪುಗೊಳ್ಳುತ್ತವೆ. ಮತಧರ್ಮಗಳ ಅಧಿಪತ್ಯ ಹೆಚ್ಚಾದಂತೆಲ್ಲಾ ಶ್ರೇಷ್ಠತೆಯ ಅಹಮಿಕೆ ಸೃಷ್ಟಿಸುವ ಪ್ರಭಾವಳಿಯಲ್ಲಿ ಈ ಪದ್ಧತಿಗಳು ಪ್ರಶ್ನಾತೀತವಾಗುತ್ತವೆ.

ಆಧುನಿಕ ಭಾರತದ ಇತಿಹಾಸದಲ್ಲಿ ಇಂತಹ ಅನಿಷ್ಠ ಪದ್ಧತಿಗಳನ್ನು, ಆಚರಣೆಗಳನ್ನು ಮತ್ತು ಸಾಂಪ್ರದಾಯಿಕ ನೆಲೆಗಳನ್ನು ದಿಟ್ಟವಾಗಿ ವಿರೋಧಿಸಿದ ರಾಜಾರಾಂ ಮೋಹನ್ ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಶರತ್‍ಚಂದ್ರ ಚಟರ್ಜಿ ಮುಂತಾದ ಧೀಮಂತರು, ಕೆಲವು ಸಂದರ್ಭಗಳಲ್ಲಿ ವಿವೇಕಾನಂದರೂ ಸಹ, ಸ್ಥಾಪಿತ ಸಾಮಾಜಿಕ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿರುವುದನ್ನು ಇತಿಹಾಸ ಸಾರಿ ಹೇಳುತ್ತದೆ. ಸಮಕಾಲೀನ ಸಂದರ್ಭದಲ್ಲಿ ಪೆರುಮಾಳ್ ಮುರುಗನ್, ಕಲಬುರ್ಗಿ, ಪನ್ಸಾರೆ, ಧಬೋಲ್ಕರ್ ಈ ಸಾಲಿಗೆ ಸೇರುತ್ತಾರೆ.

ಈ ನೆಲೆಯಲ್ಲಿ ನಿಂತು ಯೋಚಿಸಿದಾಗ ಕಲಬುರ್ಗಿ ಅವರ ಹಂತಕರು ಯಾರು ಎಂಬ ಪ್ರಶ್ನೆ ಕ್ಲೀಷೆಯಾಗಿ ಕಾಣುತ್ತದೆ. ಕಲಬುರ್ಗಿ ಎಂಬ ವ್ಯಕ್ತಿಯನ್ನು ಮತಾಂಧನೊಬ್ಬ ಹತ್ಯೆ ಮಾಡಿದ್ದಾನೆ. ಈ ದುಷ್ಕರ್ಮಿಯನ್ನು ಎಂದಾದರೊಂದು ದಿನ ಗಲ್ಲಿಗೇರಿಸಲು ಸಾಧ್ಯವಿದೆ. (ಸದ್ಯದ ಸನ್ನಿವೇಶದಲ್ಲಿ ಇದು ಕನಸು !) ಆದರೆ ಕಲಬುರ್ಗಿ ಪ್ರತಿನಿಧಿಸುವ ಚಿಂತನೆಗಳ ನೆಲೆಯನ್ನು ಕ್ಷಣಕ್ಷಣಕ್ಕೂ ಹತ್ಯೆಗೈಯ್ಯಲು ತವಕಿಸುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ನೆಲೆಯ ಮೂಲ ಎಲ್ಲಿದೆ ಎಂದು ಶೋಧಿಸುವುದು ಇಂದಿನ ತುರ್ತು ಅಗತ್ಯತೆಯಾಗಿದೆ.

ಈ ಮೂಲ ನೆಲೆ ಜೀವಂತವಾಗಿರುವವರೆಗೂ ಕಲಬುರ್ಗಿಗಳು ಸಾಯುತ್ತಲೇ ಇರುತ್ತಾರೆ, ಪೆರುಮಾಳ್ ಮುರುಗನ್‍ಗಳು ಚರಮಗೀತೆ ಹಾಡುತ್ತಲೇ ಇರುತ್ತಾರೆ. ರೋಹಿತ್ ವೇಮುಲಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರುತ್ತಾರೆ. ಕನ್ನಯ್ಯ ಕುಮಾರ್‍ಗಳು ದಮನಕ್ಕೊಳಗಾಗುತ್ತಲೇ ಇರುತ್ತಾರೆ. ದಾದ್ರಿ ಸಂಭವಿಸುತ್ತಿರುತ್ತದೆ. ಊನಾ ಉದ್ಭವಿಸುತ್ತಿರುತ್ತದೆ. ರಾಮಾಯಣದ ಶಂಭೂಕ ವಧೆಯಿಂದ ಮಹಾಭಾರತದ ದ್ರೋಣಾಚಾರ್ಯ-ಏಕಲವ್ಯ ಪ್ರಕರಣದಿಂದ ಹಿಡಿದು ಗುಜರಾತ್‍ನ ಊನಾ ಘಟನೆಯವರೆಗೆ ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಈ ಹಂತಕ ಸಂಸ್ಕೃತಿ ಜೀವಂತವಾಗಿದೆ. ಈ ಜೀವಂತಿಕೆಗೆ ಪುಷ್ಠಿ ನೀಡುವ ಕಾಯಕವನ್ನು ಸಂಘಪರಿವಾರ ಮುಂದುವರೆಸಿದೆ.

ಶ್ರೇಣೀಕೃತ ಜಾತಿ ಸಮಾಜದ ಮೇಲೆ ತನ್ನ ಅಧಿಪತ್ಯ ಸಾಧಿಸುವ ಮೂಲಕ ಈ ಕಾಯಕ ಯೋಗಿಗಳಿಗೆ ಸಾಂಸ್ಥಿಕ ನೆಲೆಯನ್ನು ಒದಗಿಸಿದ ಪುರೋಹಿತಶಾಹಿ ವ್ಯವಸ್ಥೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಭೂಮಿಕೆಯನ್ನು ಗಟ್ಟಿಗೊಳಿಸಲು ಸತತ ಪ್ರಯತ್ನ ನಡೆಸುತ್ತಿದೆ.

ಈ ಪ್ರಯತ್ನದ ಒಂದು ಆಯಾಮವನ್ನು ರಾಮಮಂದಿರ ವಿವಾದ ಮತ್ತು ಅಯೋಧ್ಯಾ ಕಾಂಡದ ಸಂದರ್ಭದಲ್ಲಿ ಕಾಣಬಹುದಿತ್ತು. ಈ ವಿನಾಶಕಾರಿ ವಿಪ್ಲವದ ಸಂದರ್ಭದಲ್ಲಿ ಉಗಮಿಸಿದ ಶಕ್ತಿಗಳು ಪ್ರವರ್ಧಮಾನಕ್ಕೆ ಬಂದಿರುವ ಈ ಹೊತ್ತಿನಲ್ಲಿ ಹಂತಕ ಸಂಸ್ಕೃತಿಯ ಚಿಂತನೆಗಳು ತನ್ನ ವಿರಾಟ್ ಸ್ವರೂಪವನ್ನು ಪ್ರದರ್ಶಿಸುತ್ತಿವೆ.

ವೈಚಾರಿಕತೆಯ ಚಿಂತನೆಗಳನ್ನು ಹಂತ ಹಂತವಾಗಿ ಕೊಲ್ಲುವ ಈ ಹಂತಕ ಚಿಂತನೆಗಳಿಗೆ ಪ್ರೇರಣೆ ನೀಡುವ ಒಂದು ಸಮಾಜೋ-ರಾಜಕೀಯ ವ್ಯವಸ್ಥೆಯನ್ನು ಪ್ರಜಾಸತ್ತಾತ್ಮಕ ಭಾರತ ಪೋಷಿಸಿ ಸಲಹಿರುವುದು ದುರಂತವಾದರೂ ಸತ್ಯ. ಹಾಗಾಗಿಯೇ ದಾದ್ರಿಯಲ್ಲಿ ಹಂತಕರು ಅಗೋಚರವಾಗಿಯೇ ಉಳಿಯುತ್ತಾರೆ. ಊನಾದ ಘಾತುಕರು ಮರೆಯಾಗುತ್ತಾರೆ. ಬಾಬ್ರಿಯ ಅಪರಾಧಿಗಳು ಮೆರೆದಾಡುತ್ತಾರೆ. ಪೆರುಮಾಳ್ ಮುರುಗನ್ ಒಳಗಿನ ಸಾಹಿತಿಯ ಹಂತಕರು ಅಂತರ್ಧಾನರಾಗುತ್ತಾರೆ. ಕಲಬುರ್ಗಿಯ ಹಂತಕರು ನಿಗೂಢವಾಗುತ್ತಾರೆ.

ಚಿಂತನೆಗಳ ಹಂತಕರ ಚಿಂತನೆಗಳನ್ನು ಗ್ರಹಿಸದ ಹೊರತು ಅಪರಾಧಿ ಪತ್ತೆಯಾಗುವುದೇ ಇಲ್ಲ.

 

Leave a Reply