ಹಾಮಾನಾರದ್ದು ಒಂದು ಬಗೆಯ ಪ್ರೇಮವಿವಾಹ..

4

ಸಂಸಾರ ಜೀವನ

ಯಾವುದೇ ವ್ಯಕ್ತಿಯ ಬದುಕಿನಲ್ಲಿ ತಾನು, ತನ್ನ ಸಂಸಾರ ಪ್ರಧಾನ. ಕೆಲವರಂತೂ ಸಾಂಸಾರಿಕ ವ್ಯವಹಾರಗಳಲ್ಲೇ ಸದಾ ಮುಳುಗಿ ಹೋಗಿರುತ್ತಾರೆ. ಮನೆಕಟ್ಟುವುದು, ಆಸ್ತಿ ಮಾಡುವುದು, ಮಕ್ಕಳನ್ನು ಪ್ರತಿಷ್ಠ್ತಿತ ಶಾಲೆಗಳಲ್ಲಿ ಓದಿಸಿ ಹೊರದೇಶಗಳಿಗೆ ರಪ್ತು ಮಾಡುವುದು, ಹೆಂಡತಿ ಮಕ್ಕಳೊಡನೆ ಪ್ರವಾಸ ಹೋಗುವುದು ಇವೇ ಅವರ ಆದ್ಯತೆಗಳು. ಅವರಿಗೆ ವೃತ್ತಿ ಏನಿದ್ದರೂ ತಮ್ಮ ಸಂಸಾರದ ಸುಖ ಸಂತೋಷಗಳಿಗೆ ಅಗತ್ಯ ಸವಲತ್ತುಗಳನ್ನು ಒದಗಿಸುವ ಒಂದು ಸಾಧನ ಮಾತ್ರವೇ!

ಆದರೆ ಹಾಮಾನಾ ಸಂಸಾರ ಮತ್ತು ವೃತ್ತಿಗಳ ನಡುವೆ ಒಂದು ಬಗೆಯ ಸಮತೋಲನವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದ. ವೃತ್ತಿಯನ್ನು ಕಡೆಗಾಣಿಸಿ ಸಂಸಾರದ ಕಾಳಜಿಯಲ್ಲೇ ಇದ್ದು ಅಥವಾ ಸಂಸಾರವನ್ನು ಮರೆತು ಸಂಪೂರ್ಣ ವೃತ್ತಿಯಲ್ಲೇ ತೊಡಗಿಸಿಕೊಳ್ಳದೆ ಎರಡಕ್ಕೂ ಸಮನಾದ ಒತ್ತುಕೊಡುವ ಒಂದು ಸುವರ್ಣ ಮಾಧ್ಯಮ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದ. ಅವನ ಸಂಸಾರದ ಕಲ್ಪನೆ ಕೇವಲ ತನ್ನ ಹೆಂಡತಿ ಮತ್ತು ಮಕ್ಕಳಿಗೆ ಮಾತ್ರವೇ ಸೀಮಿತವಾಗಿರದೆ, ಇತರರನ್ನೂ ಒಳಗೊಂಡಿತ್ತು. ನಾನೂ ಸೇರಿದಂತೆ ನನ್ನ ಕುಟುಂಬದ ಹಲವು ಸದಸ್ಯರು ಬೇರೆ ಬೇರೆ ಸಮಯಗಳಲ್ಲಿ ಹಾಮಾನಾ ಮನೆಯಲ್ಲಿ ಕೆಲವು ಅವಧಿಗಾದರೂ ಆಶ್ರಯ ಪಡೆದದ್ದುಂಟು.

ಹಾಮಾನಾ ಹೆಂಡತಿ ಯಶೋಧರಮ್ಮ. ಅವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ‘ಸಂಪಿಗೆಖಾನ್’ ಕಾಫಿ ಎಸ್ಟೇಟಿನ ಮಾಲೀಕರಾಗಿದ್ದ ಸುಬ್ಬೇಗೌಡರ ಪುತ್ರಿ. ಅವರ ಓದು ಶಾಲಾಮಟ್ಟದಲ್ಲೇ ಮುಗಿದಿದ್ದು, ಚಿಕ್ಕ ವಯಸ್ಸಿನಲ್ಲಿ ಸಂಗೀತ, ಕಸೂತಿ ಮುಂತಾದ ಕಲೆಗಳಲ್ಲಿ ಆಸಕ್ತಿ ಉಳ್ಳವರಾಗಿದ್ದರು. ಹಾಮಾನಾ-ಯಶೋಧರಮ್ಮರದು ಒಂದು ಬಗೆಯ ಪ್ರೇಮವಿವಾಹ—ಅದರ ನಿಜವಾದ ಅರ್ಥದಲ್ಲಿ.

ನಮ್ಮ ತಾಯಿಯ ಸೋದರಮಾವ ಮಳುವಾಡಿ ಶಂಕರಪ್ಪ ಗೌಡರ ಬಗ್ಗೆ ಈ ಮೊದಲು ಪ್ರಸ್ತಾಪಿಸಿದ್ದೇನೆ. ಹಾಮಾನಾ ಬಾಲ್ಯದ ದಿನಗಳಲ್ಲಿ ತನ್ನ ತಾಯಿಯ ಸೋದರಮಾವಂದಿರ ಜೊತೆಯಲ್ಲಿ ಆತ್ಮೀಯ ಸಂಬಂಧ ಹೊಂದಿದ್ದು, ಅವರೊಡನೆ ಸಾಕಷ್ಟು ಸಮಯ ಕಳೆಯುತ್ತಿದ್ದ. ಶಂಕರಪ್ಪ ಗೌಡರ ಮಗ ಶ್ರೀನಿವಾಸ ಗೌಡರು. ಅವರೊಬ್ಬ ವರ್ಣರಂಜಿತ ವ್ಯಕ್ತಿ. ಬೆಂಗಳೂರಿನ ಯಾವುದೋ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದ ಶ್ರೀನಿವಾಸ ಗೌಡರು ಇಂಗ್ಲಿಷ್ ಪ್ರೇಮಿ. ಸದಾ ಪಾಶ್ಚಾತ್ಯ ಉಡುಗೆಯಲ್ಲಿ ಮಿಂಚುತ್ತಿದ್ದ ಮತ್ತು ತುಂಬಾ ರೂಪವಂತರಾಗಿದ್ದ ಇವರನ್ನು ಜನ “ಇಂಗ್ಲಿಷ್ ಗೌಡರು” ಎನ್ನುವ ವಾಡಿಕೆ ಇತ್ತು. ಈ ಶ್ರೀನಿವಾಸ ಗೌಡರು ಯಶೋಧರಮ್ಮನ ಹಿರಿಯ ಅಕ್ಕ ಕೃಷ್ಣಮ್ಮ ಎಂಬುವರನ್ನು ಮದುವೆಯಾಗಿದ್ದರು. ಸಹಜವಾಗಿಯೇ ಯಶೋಧರಮ್ಮನೂ ಸಹ ತಮ್ಮ ಅಕ್ಕನ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಅಲ್ಲಿ ಹಾಮಾನಾ ಮತ್ತು ಯಶೋಧರಮ್ಮ ಆಗಾಗ ಭೆಟ್ಟಿಯಾಗುತ್ತಿದ್ದರು. ಹೀಗೆ ಸಂಧಿಸುತ್ತಿದ್ದ ಸಂದರ್ಭಗಳಲ್ಲಿ ಪರಸ್ಪರ ಮೆಚ್ಚಿಕೊಂಡರು, ಮದುವೆಯ ನಿರ್ಧಾರವನ್ನೂ ತೆಗೆದುಕೊಂಡರು. ಮನೆಯವರ ಒಪ್ಪಿಗೆಯಿಂದಲೇ ಇವರ ವಿವಾಹ ಆಯಿತು.

ಮುಂದಿನ ಸುಮಾರು 45 ವರ್ಷಗಳಷ್ಟು ದೀರ್ಘಕಾಲ ಸಹಬಾಳ್ವೆ ನಡೆಸಿದರು. ಇಪ್ಪತ್ತರ ಹೊಸ್ತಿಲಲ್ಲಿ ಬೆಳೆದ ಪ್ರೀತಿ ಮುಂದಿನ ವರ್ಷಗಳಲ್ಲಿ ಪರಸ್ಪರ ವಿಶ್ವಾಸ ಮತ್ತು ಗೌರವ ಕೂಡಿದ ಸಂಬಂಧವಾಗಿ ರೂಪುಗೊಂಡಿತು. ಯಶೋಧರಮ್ಮ ತಮ್ಮ ಪತಿಯನ್ನು ಒಂದು ಬಗೆಯ ಆರಾಧನಾ ಭಾವನೆಯಿಂದಲೇ ನಡೆಸಿಕೊಳ್ಳುತ್ತಿದ್ದರು ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಗಂಡನ ಅಪೇಕ್ಷೆ ಮತ್ತು ಅನಪೇಕ್ಷಿತ ವಿಚಾರಗಳನ್ನು ಅರಿತುಕೊಳ್ಳುವ ಸೂಕ್ಷ್ಮಪ್ರಜ್ಞೆಯನ್ನು ಅವರು ಬೆಳೆಸಿಕೊಂಡಿದ್ದರು. ಅತಿಥಿ ಸತ್ಕಾರ, ಪುಸ್ತಕಗಳ ಜೋಪಾನ, ಪ್ರಯಾಣ ಸಿದ್ಧತೆ ಹೀಗೆ ಅದು ಯಾವುದೇ ವಿಚಾರವಿರಲಿ, ಹಾಮಾನಾ ಇಷ್ಟಗಳಿಗೆ ಸ್ವಲ್ಪವೂ ಚ್ಯುತಿಬಾರದ ಹಾಗೆ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವ ಕಲೆ ಅವರಿಗೆ ಸಿದ್ಧಿಸಿತ್ತು.

ಮನೆಯ ಬೇಕುಬೇಡಗಳಿಗೆ ಹಾಮಾನಾ ಯಾವತ್ತೂ ತಲೆಕೆಡಿಸಿಕೊಳ್ಳುವ ಗೋಜಿಗೆ ಅವಕಾಶವೇ ಇರಲಿಲ್ಲ. ಯಶೋಧರಮ್ಮನ ಈ ಬಗೆಯ ಗೃಹಾಡಳಿತ ಹಾಮಾನಾ ವೃತ್ತಿ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಿತು ಎಂದರೆ ಗಂಡನ ಸಾಧನೆಯಲ್ಲಿ ಹೆಂಡತಿಯ ಪಾತ್ರದ ಮಹತ್ವ ಅರಿವಾಗುತ್ತದೆ. ಪ್ರತಿಯಾಗಿ ಹಾಮಾನಾ ಕೂಡಾ ಪತ್ನಿಯ ಬಗ್ಗೆ ವಿಶೇಷವಾದ ಆದರ ಗೌರವಗಳನ್ನು ಹೊಂದಿದ್ದು, ಅವರ ಬೇಕು ಬೇಡಗಳಿಗೆ ಸಕಾರಾತ್ಮಕವಾಗಿಯೇ ನಡೆದುಕೊಳ್ಳುತ್ತಿದ್ದ. ಗೃಹಕೃತ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸದಾ, “ಏನ್ರೀ, ಯಶೋಧರಮ್ಮ” ಎಂದು ಅವರ ಸಲಹೆಗಳನ್ನು ಸ್ವೀಕರಿಸಿ, ಅವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುತ್ತಿದ್ದ. ಈ ದಂಪತಿಗಳ ನಡುವಣ ಹೊಂದಾಣಿಕೆಯಲ್ಲಿ ಒಂದು ರಹಸ್ಯ ಇದ್ದಿರಬಹುದೆಂದು ನನ್ನ ಊಹೆ. ತಮ್ಮ ಪತಿಯ ಅಂತರಾಳವನ್ನು ಚೆನ್ನಾಗಿ ಅರಿತಿದ್ದ ಯಶೋಧರಮ್ಮ ಅವರು ಸಮ್ಮತಿಸಬಹುದಾದ ಸಲಹೆಗಳನ್ನೇ ನೀಡುತ್ತಿದ್ದರು. ಹಾಗಾಗಿ ಇಬ್ಬರ ನಡುವೆ ಸಂಘರ್ಷಗಳಿಗೆ ಎಡೆಯೇ ಇರಲಿಲ್ಲ.

ಮಗಳು ಕವಿತಾ ಹುಟ್ಟಿದ್ದು 1956ರಲ್ಲಿ. ನಂತರ 1959ರಲ್ಲಿ ಹುಟ್ಟಿದವನು ಮಗ ರವೀಂದ್ರ. ಮಕ್ಕಳಿಬ್ಬರೂ ತಾಯಿಯನ್ನು “ಮಾಮಿ” ಎಂದೂ, ತಂದೆಯನ್ನು “ದೊಡ್ಡಣ್ಣ” ಎಂದೂ ಕರೆಯುತ್ತಿದ್ದರು. ಹಾಮಾನಾ ಸೋದರ ಸೋದರಿಯರು ಅವನನ್ನು “ದೊಡ್ಡಣ್ಣ” ಎಂದು ಸಂಬೋಧಿಸುತ್ತಿದ್ದ ಕಾರಣ, ಮಕ್ಕಳು ಅದನ್ನೇ ಅಭ್ಯಾಸ ಮಾಡಿಕೊಂಡರು. ಅದು ಅವರ ಜೀವನದುದ್ದಕ್ಕೂ ಹಾಗೆಯೇ ಉಳಿದುಬಂತು.

ಮೊದಲು ಹುಟ್ಟಿದ ಕವಿತಾ ತಂದೆ ತಾಯಿ ಇಬ್ಬರಿಗೂ ಮೆಚ್ಚಿನವಳು. ರವೀಂದ್ರ ಹುಟ್ಟಿದ ಮೇಲೂ ಕವಿತಳ ಬಗೆಗಿನ ಪ್ರೀತಿ ಒಂದು ತೂಕ ಜಾಸ್ತಿಯದೇ ಆಗಿತ್ತು ಎನ್ನುವುದು ನನ್ನ ಅಂದಾಜು. (ಈ ನನ್ನ ಅಂದಾಜು ತಪ್ಪಿರಲೂ ಬಹುದು; ಈ ಕುರಿತು ರವಿ ನನ್ನ ಜೊತೆ ಜಗಳಕ್ಕೆ ಇಳಿಯುವುದಿಲ್ಲ ಎಂಬ ಧೈರ್ಯದ ಮೇಲೆ ಈ ಮಾತನ್ನು ಇಲ್ಲಿ ಹೇಳುತ್ತಿದ್ದೇನೆ.) ತನ್ನ ಮದುವೆ ಮತ್ತು ಮಗಳು ಕವಿತಳ ಜನನ ಈ ಸಂದರ್ಭಗಳ ಆಸುಪಾಸಿನಲ್ಲಿ ಸೃಷ್ಟಿಯಾದ ಹಾಮಾನಾ ಕೃತಿ “ನಮ್ಮ ಮನೆಯ ದೀಪ” ಅವನ ಸಂಸಾರದ ಒಂದು ‘ನೀಲಿನಕ್ಷೆ’ ಎಂದು ಭಾವಿಸಬಹುದೇನೋ! ಅಲ್ಲಿ ಕಂಡುಬರುವ ಹೆಂಡತಿ ವಸುಂಧರೆ—ಅಲ್ಪಸ್ವಲ್ಪ ಓದುಬರಹಗಳ ಬಲ್ಲ, ಸಂಗೀತದಲ್ಲಿ ಆಸಕ್ತಿಯುಳ್ಳ, ನಗರಜೀವನದ ಪರಿಚಯವುಳ್ಳ, ಮಲೆನಾಡಿನ ಸಂಪ್ರದಾಯಸ್ಥ ಹೆಣ್ಣು. ಯಶೋಧರಮ್ಮನನ್ನು ಬಲ್ಲವರು ವಸುಂಧರೆಯ ಈ ಲಕ್ಷಣಗಳನ್ನು ಅವರಲ್ಲಿ ಕಾಣಲು ಸಾಧ್ಯವಾಗುತ್ತದೆ. ಇನ್ನು ಮಗಳು ಕವಿತ ‘ನಮ್ಮ ಮನೆಯ ದೀಪದ’ ರಮೆಯ ಪ್ರತಿರೂಪವಾಗಿಯೇ ಬೆಳೆಯುತ್ತಾಳೆ.

ಹಾಮಾನಾ ಮೈಸೂರಿನಲ್ಲಿ ಸಂಸಾರ ಪ್ರಾರಂಭಿಸಿದ ದಿನಗಳು ನನ್ನ ನೆನಪಿನಲ್ಲಿ ಇನ್ನೂ ಉಳಿದಿವೆ. ಆಗ ನಾನು ನನ್ನ ಎಂ. ಎ. ತರಗತಿಯಲ್ಲಿ ಓದುತ್ತಿದ್ದೆ. ಆ ನಂತರದ ದಿನಗಳಲ್ಲೂ ಯು. ಜಿ. ಸಿ. ಶಿಷ್ಯವೇತನ ಪಡೆದು ಸಂಶೋಧನಾ ವಿದ್ಯಾರ್ಥಿಯಾಗಿ ಮಾನಸಗಂಗೋತ್ರಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ದಿನಗಳಲ್ಲಿ ನಾನು ಅವನ ಜೊತೆಯಲ್ಲಿ ವಾಸಿಸುತ್ತಿದ್ದೆ. ಪ್ರತಿ ತಿಂಗಳು ಮೊದಲ ವಾರದಲ್ಲಿ ಆ ತಿಂಗಳಿಗೆ ಬೇಕಾಗುವ ಸಾಮಾನುಗಳನ್ನು ಖರೀದಿಸಿ ತರುವ ಒಂದು ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಕವಿತ ಮತ್ತು ನನ್ನನ್ನು ಜೊತೆಯಾಗಿಸಿಕೊಂಡು ದೊಡ್ಡಣ್ಣ ದೇವರಾಜ ಮಾರ್ಕೆಟಿಗೆ ಹೋಗಿ, ಅಲ್ಲಿ ತನ್ನ ಖಾಯಂ ಅಂಗಡಿಯಲ್ಲಿ ಸಾಮಾನಿನ ಪಟ್ಟಿ ಬರೆಸುತ್ತಿದ್ದ. ನಂತರದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ಬಾಂಬೆ ಇಂದ್ರ ಭವನಕ್ಕೆ ಹೋಗಿ, ಅಲ್ಲಿ ಮಗಳಿಗೆ ಇಷ್ಟವಾದ ಜಾಮೂನು ಮತ್ತು ಮಸಾಲೆದೋಸೆ ಕೊಡಿಸುವ ಪರಿಪಾಠ ಅವನು ಅಮೆರಿಕಾಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುವವರೆಗೂ ನಡೆದುಕೊಂಡು ಬಂದಿತ್ತು. ಇದು ಯಾವುದೇ ತಂದೆ ತನ್ನ ಮಗಳಿಗೆ ತೋರಬಹುದಾದ ವಿಶ್ವಾಸ ಎಂದು ಪರಿಗಣಿಸಬಹುದಾದರೂ, ಅದರಲ್ಲಿ ಅವನು ಅನುಭವಿಸುತ್ತಿದ್ದ ಸುಖ ಮತ್ತು ತೃಪ್ತಿಗಳು ವಿಶೇಷವಾಗಿದ್ದವು.

ತಂದೆ ಮಗಳ ಬಾಂಧವ್ಯಕ್ಕೆ ಸಂಬಂಧಿಸಿದ ಇನ್ನೂ ಒಂದು ಸಂದರ್ಭವನ್ನು ಇಲ್ಲಿ ಉಲ್ಲೇಖಿಸಬಹುದು. ಕವಿತ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರಿದ್ದರಿಂದ, ದೊಡ್ಡಣ್ಣ ಅವಳಿಗೆ ಮಣಿಪಾಲದ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರಕಿಸಿಕೊಟ್ಟ. ಅವಳನ್ನು ಕಾಲೇಜಿಗೆ ಸೇರಿಸಲು ಮಣಿಪಾಲಕ್ಕೆ ತಂದೆ ತಾಯಿ ಇಬ್ಬರೂ ಜೊತೆಯಲ್ಲಿ ಹೋದರು. ಆ ಕಾಲಕ್ಕೆ ನಾನು ಮೈಸೂರಿನಲ್ಲೇ ಇದ್ದೆ. “ಬಾರಯ್ಯ, ಕಾರಿನಲ್ಲಿ ಹೋಗುತ್ತಿದ್ದೇವೆ. ಕವಿತಳನ್ನು ಕಾಲೇಜಿಗೆ ಸೇರಿಸಿ ಬರೋಣ” ಎಂದು ಆಹ್ವಾನಿಸಿದ. ನಾನೂ ಜೊತೆಯಲ್ಲಿ ಹೊರಟೆ. ಕವಿತಳನ್ನು ಕಾಲೇಜಿಗೆ ಸೇರಿಸಿ ಮೈಸೂರಿಗೆ ವಾಪಾಸ್ಸು ಬರುವ ಹಾದಿಯಲ್ಲಿ ಮಗಳನ್ನು ಬಿಟ್ಟುಬಂದ ಬೇಸರದಿಂದ ಕಣ್ಣೀರು ಹಾಕುತ್ತಲೇ ಇದ್ದ.

ಆ ಸಮಯದಲ್ಲಿ ನಾನು ಅವನಿಗೆ ಹಿಂದಿನ ಸಂದರ್ಭವೊಂದನ್ನು ನೆನಪಿಸಿದೆ. ಅವನು ಅಮೆರಿಕಾಕ್ಕೆ ಹೊರಟಾಗ ಅವನನ್ನು ಕಳಿಸಲು ನಮ್ಮ ತಾಯಿ ಊರಿಂದ ಬಂದಿದ್ದರು. ರೈಲ್ವೆ ನಿಲ್ದಾಣದಲ್ಲಿ ಮಗ ಹೊರಟು ನಿಂತಾಗ ತಾಯಿ ಕಣ್ಣೀರು ಹಾಕುತ್ತಿದ್ದರು. ಅದನ್ನು ಕಂಡು ಅಲ್ಲಿಯೇ ಇದ್ದ ಸಾಹಿತಿ ಚದುರಂಗರು, “ಏನಮ್ಮಾ, ಮಕ್ಕಳನ್ನು ತಾಯಂದಿರು ಸೈನ್ಯಕ್ಕೆ ಕಳಿಸುತ್ತಾರೆ. ನಿಮ್ಮ ಮಗ ವಿದೇಶಕ್ಕೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಕೀರ್ತಿವಂತನಾಗಿ ಮರಳುತ್ತಾನೆ. ನೀವು ಸಮಾಧಾನ ಮಾಡಿಕೊಳ್ಳಿ” ಎಂದು ಸಾಂತ್ವನ ಹೇಳಿದ್ದರು. ನಾನು ಆ ಮಾತು ಹೇಳಿದಾಗ, “ಹೌದಯ್ಯಾ, ಬಾಯಲ್ಲಿ ಹೇಳೋದು ಎಲ್ಲ ಸುಲಭ. ಆದರೆ ಆಚರಿಸೋದು ಕಷ್ಟ” ಎಂದು ಬಾಯಿ ಮುಚ್ಚಿಸಿದ್ದ. ಅವನು ಆ ದಿನ ಹೇಳಿದ ಮಾತು ಮುಂದೆ ನನ್ನ ಜೀವನದಲ್ಲಿ ನನಗೂ ಅನುಭವಕ್ಕೆ ಬಂದ ಸನ್ನಿವೇಶಗಳು ಇದ್ದಾವೆ.

ಮಗ ರವೀಂದ್ರನ ವಿಚಾರದಲ್ಲೂ ಪ್ರೀತಿ, ವಿಶ್ವಾಸಗಳಿಗೆ ಕೊರತೆ ಇರಲಿಲ್ಲ. ಆದರೂ ಅವನ ಬಗ್ಗೆ ಒಂದು ಬಗೆಯ ಉದಾರ ನೀತಿಯನ್ನು ಅನುಸರಿಸಿಕೊಂಡು ಬಂದು, ಅವನ ವಿದ್ಯಾಭ್ಯಾಸ ಮತ್ತು ಮುಂದಿನ ಬದುಕಿನ ಯೋಜನೆಗಳ ಬಗ್ಗೆ ಅವನಿಗೇ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದ. ಆ ಸ್ವಾತಂತ್ರ್ಯವನ್ನು ರವಿ ಎಂದೂ ದುರುಪಯೋಗ ಪಡಿಸಿಕೊಳ್ಳಲಿಲ್ಲ; ಸರಿಯಾದ ಹಾದಿಯಲ್ಲೇ ಬೆಳೆದು ಅವನ ಜೀವನವನ್ನು ರೂಢಿಸಿಕೊಂಡ. ಹಾಮಾನಾ ಇಷ್ಟಪಟ್ಟಿದ್ದರೆ ತನ್ನ ಪ್ರಭಾವವನ್ನು ಬಳಸಿಕೊಂಡು ಮಗನಿಗೆ ಯಾವುದಾದರೂ ಉನ್ನತ ಸ್ಥಾನವನ್ನು ಗಳಿಸಿಕೊಡುವ ಸಾಮರ್ಥ್ಯ ಹೊಂದಿದ್ದ. ಆದರೆ ಅವನು ಮನಸ್ಸು ಮಾಡಲಿಲ್ಲ. ಬಹುಶಃ ರವೀಂದ್ರ ಕೂಡಾ ಅದಕ್ಕೆ ಒಲವು ತೋರಿಸಲಿಲ್ಲ.

ಮಕ್ಕಳಿಬ್ಬರೂ ತಮ್ಮ ಸ್ವಾತಂತ್ರ್ಯವನ್ನು ಸರಿಯಾಗಿಯೇ ಬಳಸಿಕೊಂಡರು. ತಮ್ಮ ಜೀವನ ಸಂಗಾತಿಗಳನ್ನು ತಾವೇ ಆಯ್ಕೆ ಮಾಡಿಕೊಂಡು, ತಮ್ಮ ನಿರ್ಧಾರವನ್ನು ತಂದೆಗೆ ತಿಳಿಸಿದರು. ಅದಕ್ಕೆ ಹಾಮಾನಾ ಯಾವುದೇ ಬಗೆಯ ವಿರೋಧ ವ್ಯಕ್ತಪಡಿಸದೆ, ಅವರ ಆಯ್ಕೆಯನ್ನು ಒಪ್ಪಿಕೊಂಡು ಅವರ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ. ಹಲವು ವರ್ಷಗಳ ಮೊದಲು ಹಾಮಾನಾ ಕೂಡಾ ಇದೇ ಬಗೆಯ ನಿರ್ಧಾರ ತೆಗೆದುಕೊಂಡು ಮಕ್ಕಳಿಗೆ ಮಾದರಿ ಹಾಕಿದ್ದ! ಎರಡೂ ಮದುವೆಗಳು—ಕೆಲವು ವರ್ಷಗಳ ಅಂತರದಲ್ಲಿ–ಯಾವುದೇ ಆಡಂಬರ ಇಲ್ಲದೆ, ತಾಯಿ ಯಶೋಧರಮ್ಮ ಅವರ ತೀರ್ಮಾನಕ್ಕೆ ಒಳಪಟ್ಟು, ಒಂದು ಚಿಕ್ಕ ದೇವಸ್ಥಾನದಲ್ಲಿ ನಡೆದವು.

ಕೇವಲ ಬಂಧುಗಳು ಕೂಡಿದ್ದ ಈ ಕಾರ್ಯಕ್ರಮಗಳಲ್ಲಿ ಅತಿಥಿಗಳ ಸಂಖ್ಯೆ 20-25 ಜನರನ್ನು ಮೀರಿರಲಿಲ್ಲ. ಹೊರಗಿನವರಾಗಿ ದೊಡ್ಡಣ್ಣನಿಗೆ ಆತ್ಮೀಯರಾಗಿದ್ದ ಡಿ. ವಿ. ಅರಸು ಮತ್ತು ಚದುರಂಗರು ಮಾತ್ರ ಈ ಸಮಾರಂಭಗಳನ್ನು ಸಾಕ್ಷೀಕರಿಸಿದರು ಎನ್ನುವುದು ನನ್ನ ನೆನಪು. ಮದುವೆಯ ನಂತರದಲ್ಲಿ ತನ್ನ ಇಲಾಖೆಯ ಸಹೋದ್ಯೋಗಿಗಳು ಮತ್ತು ಸಿಬ್ಬಂದಿಗಳಿಗೆ ಹೋಟೆಲ್ ದಾಸ್‍ಪ್ರಕಾಶ್‍ನಲ್ಲಿ ಭೋಜನ ಕೊಡಿಸಿದ್ದು ಒಂದು ಹೆಚ್ಚುವರಿ ಏರ್ಪಾಡು. ಸರಳ ವಿವಾಹಗಳ ಹೆಸರಿನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳುವ ಅನೇಕ ಜನರನ್ನು ನಾನು ಕಂಡಿದ್ದೇನೆ; ಅದರೆ ಹಾಮಾನಾ ಈ ಬಗೆಗೆ ಎಲ್ಲಿಯೂ ‘ಟಾಂ ಟಾಂ’ ಬಾರಿಸಲಿಲ್ಲ.

ಮೊಮ್ಮಕ್ಕಳು ಶಿಶಿರ ಮತ್ತು ಅಚಿಂತ್ಯ. ಈ ಎರಡು ಹೆಸರುಗಳನ್ನೂ ಹಾಮಾನಾ ಸೂಚಿಸಿದ್ದಾಗಿ ನಾನು ಭಾವಿಸುತ್ತೇನೆ. ‘ಶಿಶಿರ’ದ ತಂಪು ಮತ್ತು ಚಿಂತೆಗಳಿಗೆ ಹೊರತಾದ ‘ಅಚಿಂತ್ಯ’ ಅವನ ಆಶಯಗಳಾಗಿದ್ದಿರಬಹುದು! ಅಜ್ಜ ಅಜ್ಜಿಗೆ ಮೊಮ್ಮಕ್ಕಳೇ ಸರ್ವಸ್ವವಾಗಿದ್ದರು. ಆದರೆ ಕೊನೆಯ ದಿನಗಳಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಅವರೊಡನೆ ಒಡನಾಟ ಕಳೆದುಹೋಗಿತ್ತು ಅಥವಾ ಸೀಮಿತವಾಗಿತ್ತು. ಏಕಾಂಗಿತನದ ಅನುಭವ ಆಧುನಿಕ ಬದುಕಿನ ಕ್ರೂರ ವಿಪರ್ಯಾಸ!

1 Response

  1. Lalitha siddabasavayya says:

    ನಮ್ಮ ಮನೆಯ ದೀಪದ ಒಂದು ಭಾಗ ನಮಗೆ ಪಠ್ಯವಾಗಿತ್ತು. ನನಗೆ ಈಗಲೂ ಅದರ ಸಾಲು ಸಾಲೂ ನೆನಪಿದೆ. ವಸುಂಧರೆ ಮತ್ತು ರಮೆ ಈ ಎರಡೂ ಪಾತ್ರಗಳು ಅವರಿಗೆ ಎಷ್ಟು ಪ್ರಿಯವಾದುವೆಂಬುದು ಆ ಬರಹದಲ್ಲಿ ಸೊಗಸಾಗಿ ವ್ಯಕ್ತವಾಗುತ್ತದೆ. ಬಾಚಣಿಗೆಯನ್ನು ಮಗು ಹಾಳುಮಾಡಿದಾಗ ರೇಗುವ ವಸುಂಧರೆ, ಮೂದಲಿಸುವ ಪತಿ ,,,, ಈಗಲೂ ಕಣ್ಣಿಗೆ ಕಟ್ಟಿದಂತಿದೆ.

Leave a Reply

%d bloggers like this: