‘ಅತಿಯಾದ ಭಾವುಕತೆಯನ್ನು ತೋರುವ ಭಾರತದಂತಹ ದೇಶದಲ್ಲಿ ಸಂಶೋಧಕರ ಜೀವನ ಸುಲಭ ಸಾಧ್ಯವಲ್ಲ..’

ಕಲಬುರ್ಗಿಯವರ ನಿಧನದ ನಂತರ ಕೆಲವೆಡೆ ಷ. ಶೆಟ್ಟರ್ ಅವರು 

ಮಾಡಿದ ಭಾಷಣ ಮತ್ತು ಲೇಖನಗಳ ಆಯ್ದ ಭಾಗ

ಸಂಪಾದನಾ ಸಹಾಯ: ವಾಗೀಶ್  

 

 

 

ಸಂಶೋಧನಾ ಮೇರು

-ಷ. ಶೆಟ್ಟರ್

 

 

‘ಅತಿಯಾದ ಭಾವುಕತೆಯನ್ನು ತೋರುವ ಭಾರತದಂತಹ ದೇಶದಲ್ಲಿ ಸಂಶೋಧಕರ ಜೀವನ ಸುಲಭ ಸಾಧ್ಯವಲ್ಲ. ಯಾಕೆಂದರೆ ‘ಕಹಿಯಾದ ಸತ್ಯ’ವನ್ನು ಅರಗಿಸಿಕೊಳ್ಳುವವರು ತೀರಾ ಕಡಿಮೆ. ಆದ್ದರಿಂದ ಸಂಶೋಧಕರು ಕೋರ್ಟ್-ಕಟ್ಟಳೆ ಸೇರಿದಂತೆ ಹಲವು ವಿಚಾರಣೆಯನ್ನು ಹಿಂದೆಯೂ ಎದುರಿಸಿದ್ದಾರೆ, ಈಗಲೂ ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ‘ಬುದ್ಧಿವಂತರನ್ನು’ ಸತ್ಯ ಮತ್ತು ಸತ್ಯ ಹೇಳುವವರನ್ನು ನಾಶ ಮಾಡಲು ಕೆಲವು ಶಕ್ತಿಗಳು ಯತ್ನಿಸುತ್ತಿರುವುದು ವಾಸ್ತವ. ಈ ಮೂಲಕ ಆತನಿಗೆ ಅಗ್ನಿ ಪರೀಕ್ಷೆಯೊಡ್ಡಿ ಸಂಧಾನಕ್ಕೆ ಮುಂದಾಗುವಂತೆ ಒತ್ತಡ ಹೇರುತ್ತವೆ..’

‘..ಇದನ್ನು ಕರ್ನಾಟಕಕ್ಕೆ ಹೋಲಿಸುವುದಾದರೆ ನನ್ನ ಸಮಕಾಲೀನರಿಗೆ ಹೊಂಡ ತೋಡಿದ್ದಕ್ಕಿಂತಲೂ ಹೆಚ್ಚು ನನ್ನ ಕಾಲು ಕೆಳಗೆ ಇಂತಹ ಶಕ್ತಿಗಳು ಗುಂಡಿ ತೋಡಿದ್ದಾರೆ. ಆದಾಗ್ಯೂ, ಕಾಲ ಕೆಳಗೆ ಬೆಂಕಿಯಿರುವ ಭಾವನೆ ಹೊಂದದೆ, ಕಣ್ಣ ಮುಂದೆ ಕಾಣುವ ಸತ್ಯವೇ ನನಗೆ ಮುಖ್ಯವಾಗಿದೆ. ಇದು ನನ್ನನ್ನು ಇದುವರೆಗೆ ಬೆಳೆಯುವಂತೆ ಮುಂದೆ ಇನ್ನಷ್ಟು ಬೆಳೆಯುವಂತೆ ಮಾಡಿದೆ’

ಇದನ್ನು ತಮ್ಮ 50ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 1988ರಲ್ಲಿ ಬಿಡುಗಡೆಯಾದ ಎರಡು ಸಂಪುಟಗಳ ಸಮಗ್ರ ಸಂಗ್ರಹ ಕೃತಿಯಾದ ‘ಮಾರ್ಗ’ ಪುಸ್ತಕದ ಎರಡನೆಯ ಆವೃತ್ತಿಯ ಮುನ್ನುಡಿಯಲ್ಲಿ ಕಲಬುರ್ಗಿಯವರು ಬರೆದುಕೊಂಡಿದ್ದಾರೆ.

1997ರಲ್ಲಿ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಇದಕ್ಕೆ ಮತ್ತೊಂದು ಸಂಪುಟ ಸೇರ್ಪಡೆಯಾಯಿತು. ಬಳಿಕವೂ ಬರವಣಿಗೆ ಮುಂದುವರಿಸಿದ ಅವರು ಇದರ ಒಟ್ಟು ಸಂಪುಟ ಆರು ಆಗುವಂತೆ ಮಾಡಿದ್ದರು.

2010ರಲ್ಲಿ ಲೋಕಾರ್ಪಣೆಯಾದ ಈ ಒಟ್ಟು ಸಂಪುಟದ ಪುಸ್ತಕ 633 ದಾಖಲೆಗಳ ಸಹಿತ 4,000 ಪುಟಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಇದರ ಲೋಕಾರ್ಪಣೆಯಾದ ಸಂದರ್ಭದಲ್ಲಿ, ಕರ್ನಾಟಕದಲ್ಲಿ 150 ವರ್ಷಗಳ ಇತಿಹಾಸದಲ್ಲಿ ಇಷ್ಟು ಪ್ರಮಾಣದಲ್ಲಿ ಬರೆದವರು ಯಾರೂ ಇಲ್ಲ ಎಂದು ಹೇಳಿದ್ದೆ. ಅವುಗಳು ವಿಷಯ ಮತ್ತು ವಿಚಾರದಲ್ಲಿ ಖಚಿತವಾಗಿಯೂ ಎನ್‍ಸೈಕ್ಲೋಪೀಡಿಯಾ. ಅವರು ಚಿಕ್ಕ ಪುಟ್ಟ ವಿಷಯಗಳ ಸಂಶೋಧನೆಯಲ್ಲೂ ಪ್ರಾಜ್ಞರು ಎಂಬುದನ್ನು ನಾನು ಕಂಡುಕೊಂಡೆ.

ಹತ್ಯೆಗೀಡಾಗುವಾಗ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ ಅವರಿಗೆ 77 ವರ್ಷ ವಯಸ್ಸಾಗಿತ್ತು. ಬೆಳಗ್ಗೆ ಅವರ ಹಳೆಯ ವಿದ್ಯಾರ್ಥಿ ಎಂದು ಹೇಳಿಕೊಂಡು ಬಾಗಿಲು ಬಡಿದು ಮುಖ್ಯ ದ್ವಾರವನ್ನು ಅವರು ತೆರೆದ ತಕ್ಷಣವೇ ಹಾರಿಸಿದ ಎರಡು ಗುಂಡಿನಿಂದ ಕಲಬುರ್ಗಿ ಅವರ ಪ್ರಾಣಪಕ್ಷಿ ಹಾರಿಹೋಯಿತು. ಇದು 2015ರ ಆಗಸ್ಟ್ 30ರ ಬೆಳಗ್ಗೆ 8.45ಕ್ಕೆ ಘಟಿಸಿತು.

ಆದಿಲ್‍ಶಾಹಿ ಸಾಮ್ರಾಜ್ಯದ ಕೇಂದ್ರವಾದ ವಿಜಯಪುರ ಜಿಲ್ಲೆಯ ಚಿಕ್ಕ ಹಳ್ಳಿಯಲ್ಲಿ ಅವಿಭಜಿತ ಕುಟುಂಬದಲ್ಲಿ ಜನಿಸಿದ ಕಲಬುರ್ಗಿ, ಬಳಿಕ ವಿಜಯಪುರಕ್ಕೆ ಬಂದರು. ಬಳಿಕ ಧಾರವಾಡದಲ್ಲಿ ಪದವಿ ಪೂರೈಸಿದರು. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಓದಿದರು. ತಮ್ಮ ವೃತ್ತಿ ಜೀವನವನ್ನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ 1962ರಲ್ಲಿ ಆರಂಭಿಸಿದ ಅವರು, 1966ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗವನ್ನು 1966ರಲ್ಲಿ ಸೇರಿದರು. ಬಳಿಕ ವಿಶ್ವವಿದ್ಯಾಲಯದ ಬಸವ ಪೀಠ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದರು. 1998ರಲ್ಲಿ ಹಂಪಿ -ಕಮಲಾಪುರ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗುವವರೆಗೆ ಅವರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದರು.

ಸಂಶೋಧನೆಗೆ ಬದ್ಧರಾಗಿದ್ದ ಕಲಬುರ್ಗಿ ಪ್ರಭಾವಿ ಬರಹಗಾರರಾಗಿ ಹೊರ ಹೊಮ್ಮಿದರು. ಕರ್ನಾಟಕ ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯ ಹಾಗೂ ಇತರ ಪೂರಕ ಕ್ಷೇತ್ರಗಳು ಅವರ ಆದ್ಯತೆಯ ಕ್ಷೇತ್ರಗಳಾಗಿದ್ದವು. ಸುಮಾರು 600 ಪ್ರಬಂಧಗಳನ್ನು ಬರೆದಿದ್ದ ಅವರು, ಶಿಲಾಶಾಸನ, ಪ್ರಾಚೀನ ಮತ್ತು ಮಧ್ಯಕಾಲದ ಕನ್ನಡ ಬರಹಗಳು, ಸ್ಥಳೀಯ ಇತಿಹಾಸ ಪಠ್ಯ, ತಾಳೆಗರಿ ಗ್ರಂಥಗಳು, ಜಾನಪದ ಕಲಾಕೃತಿ ಮತ್ತು ಸ್ಮಾರಕಗಳನ್ನು ಅವರು ಬಹುವಾಗಿ ಬಳಕೆ ಮಾಡಿಕೊಂಡಿದ್ದಾರೆ. ಕರ್ನಾಟಕದ ಮೊದಲ ಸಾಹಿತ್ಯ ಗ್ರಂಥ ಎಂದು ಹೇಳಲಾದ ಕವಿರಾಜ ಮಾರ್ಗ (ಎಂಟನೇ ಶತಮಾನ)ದ ಬಗ್ಗೆ ಅವರು ಮಾಡಿದ ಪಿಎಚ್‍ಡಿ ಪದವಿ ಅವರ ಸಾಹಿತ್ಯ ಜೀವನದಲ್ಲಿ ಬಹುದೊಡ್ಡ ಮೈಲುಗಲ್ಲು.

ಆಗಿನ ಕಾಲದ ಭಿನ್ನ ಭಿನ್ನವಾದ ರಾಜಕೀಯ ಆಡಳಿತದ ಹಿನ್ನೆಲೆಯಿಂದಾಗಿ ಕರ್ನಾಟಕದಲ್ಲಿ ಶಾಸನಗಳ ಸಂಗ್ರಹ ತುಂಬಾ ಕಡಿಮೆಯಾಗಿದೆ. ಮೈಸೂರು ಒಡೆಯರ ಆಡಳಿತದಲ್ಲಿ ದಕ್ಷಿಣ ಕರ್ನಾಟಕ ಶಾಸನ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿದ್ದರೆ, ಬಾಂಬೆ, ಮದ್ರಾಸ್ ಮತ್ತು ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿದ್ದ ಕರ್ನಾಟಕ ಉಳಿದ ಭಾಗಗಳಲ್ಲಿ ಇಂತಹ ಅಮೂಲ್ಯ ಶಾಸನಗಳನ್ನು ಉಳಿಸುವ ಕೆಲಸ ಹೇಳುವಷ್ಟರ ಮಟ್ಟಿಗೆ ಆಗಿಲ್ಲ.

Umadevi wife of Kalburgi inconsolable during the funeral procession of scholar, writer and rationalist M M Kalburgi in Dharwad on Monday, August 31, 2015. – KPN ### Dharwad: funeral of Kalburgi

ಇದರ ಬಗ್ಗೆ ಅರಿವಿದ್ದ ಕಲಬುರ್ಗಿ, ಮೊದಲು ಇಂತಹ ಪ್ರದೇಶಗಳನ್ನು ಗುರುತಿಸಲು ಆರಂಭಿಸಿದರು. ಇದರ ಫಲಿತಾಂಶವಾಗಿ ಇಂತಹ ಪ್ರದೇಶಗಳ ಅರ್ಧ ಡಜನ್ ವಿವರವಾದ ಅಧ್ಯಯನದ ಬರಹ ಹೊರ ಬಂದಿತು. ಈ ಸಂಶೋಧನೆಗಳಿಂದ 12ನೆಯ ಶತಮಾನದ ಸುಧಾರಣಾವಾದಿ ಬಸವೇಶ್ವರ ಮತ್ತವರ ಸಮಕಾಲೀನರ ಇತಿಹಾಸ ದಾಖಲಾಗಲು ತುಂಬಾ ಸಹಾಯ ಮಾಡಿತು. ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾದ ಬಳಿಕ ಹಲವಾರು ವಿದ್ವಾಂಸರನ್ನು ನಾನಾ ಕಡೆಗಳಿಗೆ ಕಳುಹಿಸಿ ದಾಖಲೆಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಅವುಗಳನ್ನು ಪ್ರಕಾಶಿಸುವ ನಿಟ್ಟಿನಲ್ಲಿ ಕಠಿಣ ಶ್ರಮ ವಹಿಸಿದರು.

ಕಲಬುರ್ಗಿಯವರು ಪ್ರತಿಯೊಂದು ಐತಿಹಾಸಿಕ ದಾಖಲೆಗಳು ಮತ್ತು ಸ್ಥಳೀಯ ಇತಿಹಾಸದ ಪ್ರತಿಯೊಂದು ಆಯಾಮದ ಬಗ್ಗೆ ಜಿಜ್ಞಾಸೆ ಹೊಂದಿದ್ದರು. 18 ಮತ್ತು 19ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಕರ್ನಲ್ ಮೆಕೆಂಝೆ ಕೆಲಸವನ್ನು ಮುಂದುವರಿಸಿದ ಕಲಬುರ್ಗಿ, 1994ರಲ್ಲಿ ಕರ್ನಾಟಕದ ಖಲೀಫಯತ್ ಎನ್ನು 350ಕ್ಕೂ ಹೆಚ್ಚು ದಾಖಲೆಗಳ ಪುಸ್ತಕವನ್ನು ಹೊರತಂದರು. ಇದು ಇತಿಹಾಸಕಾರರು ಮತ್ತು ಜಾನಪದ ಸಾಹಿತಿಗಳಿಗೆ ಮಾಹಿತಿಯ ಭಂಡಾರವೇ ಆಯಿತು.

1960ರಲ್ಲಿ ವಚನ ಸಾಹಿತ್ಯದ ಸಂಶೋಧನೆಯಲ್ಲಿ ತೊಡಗಿಕೊಂಡು ಸಾವಿನತನಕವೂ ಅದನ್ನು ಮುಂದುವರಿಸಿಕೊಂಡು ಹೋದರು. ಇದಕ್ಕಾಗಿ ಅರ್ಧ ಡಜನ್‍ಗೂ ಹೆಚ್ಚು ಲಿಂಗಾಯಿತ ಮಠಗಳನ್ನು ಅಧ್ಯಯನ ಕೇಂದ್ರವಾಗಿ ಪರಿವರ್ತಿಸಿದರು. ಇಂತಹ ಕೇಂದ್ರಗಳ ಪೈಕಿ ಒಂದಾದ ಗದಗದಿಂದ 242 ಶರಣರ 21,000 ವಚನಗಳನ್ನು 15 ಸಂಪುಟಗಳಲ್ಲಿ ಪ್ರಕಟಿಸಿದರು. ಇದರ ಜೊತೆಗೆ ಲಿಂಗಾಯಿತ ಸಮುದಾಯದ ಸಾಧಕರ ಆತ್ಮಕಥೆಯನ್ನು 100 ಸಂಪುಟಗಳಲ್ಲಿ ಪ್ರಕಟಿಸಿದರು. ಇದನ್ನೆಲ್ಲಾ ಕೇವಲ ಒಂದು ದಶಕದಲ್ಲಿ ಸಾಧಿಸಿದ್ದು ಇಲ್ಲಿ ಗಮನಾರ್ಹ.

ಅವರ ಇತ್ತೀಚಿನ ಯೋಜನೆಯೆಂದರೆ 1,700ಕ್ಕೂ ಹೆಚ್ಚು ಆಯ್ದ ವಚನಗಳನ್ನು ಭಾರತದ ಇತರ ಭಾಷೆಗಳಿಗೆ ಅನುವಾದಿಸುವುದಾಗಿತ್ತು. 23 ಭಾಷೆಗಳಲ್ಲಿ ಇದನ್ನು ಮಾಡಿದ ಬಳಿಕ ಬೋಡೋ, ನೇಪಾಳಿ, ಫ್ರೆಂಚ್, ಚೀನಾ ಮತ್ತು ಸ್ಪಾನಿಶ್ ಭಾಷೆಗಳಿಗೆ ಕೂಡ ಇದನ್ನು ವಿಸ್ತರಿಸಲು ಯೋಜಿಸಿದರು. ಈ ಬೃಹತ್ ಯೋಜನೆ ಅನುವಾದ, ಪ್ರಶ್ನೆಗಳಿಗೆ ಉತ್ತರ, ಅವರ ಕೆಲಸಗಳ ಪರಿಶೀಲನೆ ಮತ್ತು ಅನುವಾದದ ದೃಢೀಕರಣ ಮಾಡುವ ನಿಟ್ಟಿನಲ್ಲಿ ಅವರುದ್ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೂ ಪ್ರಯಾಣ ಬೆಳೆಸುವಂತೆ ಮಾಡಿತು.

ಈ ಕೆಲಸ ನಡೆಯುತ್ತಿರುವಾಗಲೇ ಕನ್ನಡ ಬರಹಗಾರ ಬಸವರಾಜ ಕಟ್ಟೀಮನಿ ಅವರ ಕಾದಂಬರಿಗಳನ್ನು 13 ಸಂಪುಟಗಳಲ್ಲಿ, ಚರಿತೆ ಎಂಬ ಹೆಸರಿನಲ್ಲಿ ಕನ್ನಡ ಸಾಹಿತ್ಯವನ್ನು 18 ಸಂಪುಟಗಳಲ್ಲಿ ಕೂಡ ಪ್ರಕಟಿಸಿದರು. ವಿಜಯಪುರದ ಆದಿಲ್‍ಶಾಹಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಪರ್ಶಿಯನ್ ಮತ್ತು ಅರೇಬಿಕ್ ಭಾಷೆಯಲ್ಲಿದ್ದ ದಾಖಲೆಗಳನ್ನು ಆರು ಸಂಪುಟಗಳಲ್ಲಿ ಕೂಡ ಪ್ರಕಟಿಸಿದರು. ಯಾವುದೇ ಬರಹ ಮುದ್ರಣಾಲಯಕ್ಕೆ ಹೋಗುವ ಮೊದಲು ತಾವೇ ಖುದ್ದು ಅದನ್ನು ಪರಿಶೀಲಿಸಿ, ಅಕ್ಷರ ದೋಷವನ್ನು ಸರಿಪಡಿಸುವ ಹವ್ಯಾಸವನ್ನು ಅವರು ಹೊಂದಿದ್ದರು.

ಕಲಬುರ್ಗಿಯವರು ಕನ್ನಡ ಸಂಶೋಧನಾ ಕ್ಷೇತ್ರದ ಮೇರು ವ್ಯಕ್ತಿ. ಹಿಂದಿನ ಅಥವಾ ಪ್ರಸಕ್ತ ಸಾಹಿತಿಗಳ ಕೃತಿಗಳು ತಮಗೆ ಸರಿ ಎಂದೆನಿಸದಿದ್ದರೆ ಟೀಕಿಸಲೂ ಅವರು ಹಿಂಜರಿಯುತ್ತಿರಲಿಲ್ಲ. ಇದರಲ್ಲಿ ಮೊದಲಿಗರೆಂದರೆ ‘ಪ್ರವಾಸಿ ಎನ್‍ಸೈಕ್ಲೋಪೀಡಿಯಾ’ ಖ್ಯಾತಿಯ ಹಾಗೂ ಕೇಶಿರಾಜನ ಶಬ್ಧಮಣಿ ದರ್ಪಣದ ಸಂಪಾದಕ, ಮೈಸೂರು ವಿಶ್ವವಿದ್ಯಾಲಯದ ಡಿ. ಎಲ್. ನರಸಿಂಹಾಚಾರ್. ಇವರಲ್ಲದೆ ರಾಷ್ಟ್ರಕವಿ ಗೋವಿಂದ ಪೈ, ಆಚಾರ್ಯ ಬಿ. ಎಂ. ಶ್ರೀ, ಪು.ತಿ.ನ., ಟಿ. ಎನ್. ಶ್ರೀಕಂಠಯ್ಯ ಸೇರಿದಂತೆ ಆಗಿನ ಪ್ರಸಿದ್ಧ ಸಾಹಿತಿಗಳು ಈ ಪಟ್ಟಿಯಲ್ಲಿ ಸೇರಿದ್ದಾರೆ. ಆದರೆ, ಚಿದಾನಂದ ಮೂರ್ತಿ, ಅನಂತಮೂರ್ತಿ ಮತ್ತು ಭೈರಪ್ಪ ಜೊತೆಗಿನ ಅವರ ಭಿನ್ನಾಭಿಪ್ರಾಯಗಳು ಇತರ ಹಿರಿಯ ಸಾಹಿತಿಗಳ ಕುರಿತ ಅವರ ಗಂಭೀರ ಭಿನ್ನಾಭಿಪ್ರಾಯಕ್ಕಿಂತ ಹೆಚ್ಚು ಮಾಧ್ಯಮಗಳಲ್ಲಿ ಪ್ರಚಾರ ಪಡೆದವು. ಆಧುನಿಕ ಕನ್ನಡ ಸಾಹಿತ್ಯದ ರೂವಾರಿ ಆಚಾರ್ಯ ಬಿಎಂಶ್ರೀಯವರಿಗೆ ಹೆಸರಿದ್ದರೂ, ಕಲಬುರ್ಗಿಯವರು ಅವರ ಸಾಹಿತ್ಯದ ಅಸಾಮಾನ್ಯವಾದುದೇನನ್ನೂ ಕಾಣಲಿಲ್ಲ. ಸಾಹಿತ್ಯ ಕೃಷಿ ಮತ್ತು ಇತರ ಅಂಶಗಳು ಅವರಿಗೆ ಸಾಕಷ್ಟು ಅಭಿಮಾನಿಗಳನ್ನು ಅಷ್ಟೇ ಪ್ರಮಾಣದ ಟೀಕಾಕಾರರನ್ನೂ ಸೃಷ್ಟಿಸಿತು.

ಕಲಬುರ್ಗಿಯವರು ದೈತ್ಯನಾಗಿ ಬೆಳೆದು ನಿಂತರು. ರಾಜ್ಯ ಮತ್ತು ಕೇಂದ್ರದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳ ಜೊತೆಗೆ ಪ್ರತಿಷ್ಠಿತ ಪಂಪ, ನೃಪತುಂಗ, ಬಸವ ಮತ್ತು ರನ್ನ ಪ್ರಶಸ್ತಿಗಳು ಅವರಿಗೆ ಸಿಕ್ಕಿತು. ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ವಿಶ್ವ ವಿದ್ಯಾಲಯವು ಅವರಿಗೆ ನಾಡೋಜ ಬಿರುದನ್ನು ನೀಡಿತು. ಕೇವಲ ಪ್ರಶಸ್ತಿಗಳು ಮಾತ್ರವಲ್ಲ ಅದರ ಜೊತೆಗೆ ಸಿಕ್ಕಿದ ಲಕ್ಷಾಂತರ ರೂ. ನಗದು ಅವರ ಬಗ್ಗೆ ಸಮಕಾಲೀನರಲ್ಲಿ ವೈರತ್ವ ಬೆಳೆಯುವಂತೆ ಮಾಡಿತು. ಇದರಿಂದ ಹೆಚ್ಚು ಪ್ರಚಾರದಲ್ಲಿರುವ ಜ್ಞಾನಪೀಠ ಪ್ರಶಸ್ತಿ ಅವರ ಕೈತಪ್ಪುವಂತೆ ಮಾಡಿತು.

1960ರ ದಶಕದ ಆರಂಭದಲ್ಲಿ ನಾನು ಕಲಬುರ್ಗಿಯವರನ್ನು ಮೊದಲ ಬಾರಿ ಭೇಟಿಯಾದರೂ 1970ರ ದಶಕದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ಸಹೋದ್ಯೋಗಿಯಾದ ಬಳಿಕ ನಮ್ಮಿಬ್ಬರಲ್ಲಿರುವ ಸಮಾನ ಸಂಶೋಧನಾಸಕ್ತಿ ಅರಿವಿಗೆ ಬಂತು. ನಾವಿಬ್ಬರೂ ಸೇರಿ ಪ್ರಾಚೀನ ವೀರರ ಬಗ್ಗೆ ಪ್ರಬಂಧ ಬರೆದೆವು. ಇದು ‘ಮೆಮೋರಿಯಲ್ ಸ್ಟೋನ್ಸ್’ ಹೆಸರಿನಲ್ಲಿ 1982ರಲ್ಲಿ ಕರ್ನಾಟಕ ಮತ್ತು ಹೈಡಲ್‍ಬರ್ಗ್ (ಜರ್ಮನಿ) ವಿಶ್ವವಿದ್ಯಾಲಯಗಳ ವತಿಯಿಂದ ಪ್ರಕಟವಾಯಿತು. ಈ ವಿಷಯದ ಮೇಲೆ ನಾವು ಪ್ರತ್ಯೇಕವಾಗಿ ಬರವಣಿಗೆ ಮುಂದುವರಿಸಿದವಾದರೂ ಅದಕ್ಕೆ ಎರಡು ದಶಕ ಬೇಕಾಯಿತು.

ಈ ಸಂದರ್ಭದಲ್ಲಿ ಕಲಬುರ್ಗಿಯವರು ವೀರರ ಕುರಿತ ಹಲವಾರು ಅರಿವಿಗೆ ಬಾರದಿದ್ದ ಆಯಾಮಗಳನ್ನು ಸಂಶೋಧಿಸಿ ಕನಿಷ್ಟವೆಂದರೂ ಒಂಬತ್ತು ಪ್ರಬಂಧ ಮತ್ತು ಎರಡು ಅಧ್ಯಯನ ವರದಿಯನ್ನು ಪ್ರಕಟಿಸಿದರು. ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಅರ್ಧಕ್ಕೂ ಹೆಚ್ಚು ಡಜನ್ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು. 1980ರ ದಶಕದಲ್ಲಿ ನಾನು ಕನ್ನಡದ ಶ್ರೇಷ್ಠ ಕೃತಿಗಳನ್ನು ಸಂಶೋಧಿಸಿದ ಸಂದರ್ಭದಲ್ಲಿ ನನಗೆ ಮಾಹಿತಿ ಕೊರತೆ ಎದುರಾದಾಗಲೆಲ್ಲಾ ಅವರನ್ನು ಸಂಪರ್ಕಿಸುತ್ತಿದ್ದೆ.

ಸಲ್ಲೇಖನ ವ್ರತ (ಸಾವಿಗೆ ಆಹ್ವಾನ) 1986 ಮತ್ತು ಸಾವನ್ನ ಅರಸಿ (1990) ಇತ್ಯಾದಿಗಳ ಕುರಿತು ಜೈನ ಸಮುದಾಯ ದೃಷ್ಟಿಕೋನದ ಕುರಿತು ಸಂಶೋಧನೆ ನಡೆಸುವುದು ಕಲಬುರ್ಗಿಯವರು ಇಲ್ಲದೆ ಸುಲಭ ಸಾಧ್ಯವಾಗುತ್ತಿರಲಿಲ್ಲ. ನಾವು ಪರಸ್ಪರ ಪಡೆದುಕೊಂಡ ವಿಚಾರಗಳು ಇಬ್ಬರಿಗೂ ನೆರವು ನೀಡಿ, ನಾವಿಬ್ಬರೂ ಒಂದೇ ದಾರಿಯ ಪಯಣಿಗರು ಎಂಬುದ ಅರಿವು ಮೂಡಿಸಿತು.

ನಾನು ಪ್ರಾಚೀನ ಕನ್ನಡ ಬರಹ, ಲಿಪಿ ಮತ್ತು ಅಕ್ಷರಗಳ ಸೃಷ್ಟಿ (2014)ಗಳ ಅಧ್ಯಯನವನ್ನು ನಾನು ಪೂರ್ಣಗೊಳಿಸಿದಾಗ ಅವರು ನಿಜವಾಗಿ ತುಂಬಾ ಸಂತೋಷಪಟ್ಟು ಓದುಗರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ರೀತಿಯ ಮುನ್ನುಡಿಯನ್ನು ಕೂಡ ಬರೆದರು.

ಅವರ ಹತ್ಯೆಯ ಕೆಲವು ದಿನಗಳ ಹಿಂದೆ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕಾಗಿ ಧಾರವಾಡಕ್ಕೆ ಬರುವಂತೆ ಹೇಳಿದರು ಹಾಗೂ ಜೊತೆಗೆ ಮೊದಲ ಸಹಸ್ರಮಾನದ ಕನ್ನಡ ಶಾಸನಗಳ ಕುರಿತ ಎಂಟು ಸಂಪುಟಗಳ ಹಸ್ತಪ್ರತಿಯನ್ನು ಜಂಟಿಯಾಗಿ ಪರಿಶೀಲಿಸುವ ನಿಟ್ಟಿನಲ್ಲಿ ಜೊತೆಗೆ ತರುವಂತೆ ಹೇಳಿದ್ದರು. ಇದಕ್ಕಾಗಿ ಅವರು ಕಾತುರದಿಂದ ಕಾಯುತ್ತಿದ್ದರು. ಈ ಕೃತಿಯ ಮುನ್ನುಡಿ ಬರೆಯಲು ಅವರಷ್ಟು ಉತ್ತಮ ವಿದ್ವಾಂಸ ಬೇರೊಬ್ಬರಿಲ್ಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಅವರು ಸಿಕ್ಕಾಗಲೆಲ್ಲ ಹೇಳುತ್ತಿದ್ದ ಮಾತೊಂದು ನೆನಪಾಗುತ್ತಿದೆ: `ನೀನು ಆನೆ ಇದ್ದಂಗೆ. ಆನೆ ನಡೆದ ಮೇಲೆ ಬೇರೆ ಆ ದಾರಿಯಲ್ಲಿ ನಡೆಯಲು ಸಾಧ್ಯವೇ?… ನೀನು ಸಾಹಿತ್ಯ ಕ್ಷೇತ್ರಕ್ಕೆ ತಡವಾಗಿ ಬಂದಿ ಅದರಿಂದಲೇ ನಾವೆಲ್ಲ ಉಳಿದುಕೊಂಡೆವು. ಈಗ ನೋಡು ಜನರೆಲ್ಲರೂ ನಿನ್ನತ್ತಲೇ ನೋಡುವಂತೆ ಮಾಡಿಬಿಟ್ಟಿದ್ದೀ. ಶೆಟ್ಟರ್ ಹೇಳಿದ ಮೇಲೆ ಅದು ಖರೇನೇ ಎಂದು ನಂಬುವಷ್ಟು’. ಅವತ್ತು ಪಾರ್ಥಿವ ಶರೀರದ ಹತ್ತಿರ ಕುಳಿತು ಅವರ ಪತ್ನಿ ಹೇಳಿದ ಮಾತು ಇನ್ನೂ ನೆನಪಿದೆ. `ಇಬ್ಬರೂ ನಂದು ಖರೆ ನಂದು ಖರೇ ಅಂತ ಜಗಳವಾಡಿತ್ತೀರಲ್ಲ ಇನ್ನು ಮುಂದೆ ಯಾರ ಜೋಡಿ ಜಗಳ ಆಡ್ತಿರೀ?’ ನಿಜ ಇವತ್ತು ಜಗಳವಾಡಲೂ ಕೂಡ ಕಲಬುರ್ಗಿಯಂಥ ಜನರಿಲ್ಲ.

ಹಿಂದೂ ಮೂಲಭೂತವಾದಿಗಳಿಗಿಂತ ಹೆಚ್ಚು ವಿರೋಧವನ್ನು ಅವರು ತಮ್ಮ ಸಮುದಾಯದಿಂದಲೇ ಎದುರಿಸಿದರು. ವಚನಕಾರರ ಜೀವನ ಮತ್ತು ಬೋಧನೆಗಳು ಬಗ್ಗೆ ತೀವ್ರವಾಗಿ ಬರೆದರು. ಇದರಲ್ಲಿ 800 ವರ್ಷಗಳ ನಡುವೆ ಇವರ ನಿಯಮಗಳು ಮತ್ತು ಅದರ ಆಚರಣೆಯಲ್ಲಿ ಆದ ಅಂತರ ಸೇರಿದಂತೆ ಹಲವು ಪ್ರಶ್ನೆಗಳನ್ನು ಎತ್ತಿದರು. ಇತ್ತೀಚಿನ ದಶಕಗಳಲ್ಲಿ ತಾವು ಒಂದೇ ಆಂದೋಲನದ ಮೂಲದವರೇ ಅಥವಾ ವಿಭಿನ್ನ ಮೂಲವನ್ನು ಹೊಂದಿದ್ದೇವೆಯೇ ಎಂಬ ಕುರಿತು ವೀರಶೈವ-ಲಿಂಗಾಯಿತ ಸಮುದಾಯಗಳು ವಿಭಜನೆಯಾಗಿವೆ.

ಒಂದು ಗುಂಪು 12ನೆಯ ಶತಮಾನದಲ್ಲಿ ಬಸವಣ್ಣ ಆರಂಭಿಸಿದ ಚಳುವಳಿಯ ಭಾಗ ನಾವಲ್ಲ ಎಂದು ಹೇಳುತ್ತಿವೆ ಮತ್ತು ವೀರಶೈವ ಧರ್ಮವು ಬಸವ ಪೂರ್ವದಲ್ಲೇ ಇತ್ತು ಎಂದು ವಾದಿಸುತ್ತಿವೆ. ಕಲಬುರ್ಗಿಯವರು ಇದರ ಇತಿಹಾಸದ ಅಧ್ಯಯನ ಮಾಡಿ ಆ ಶಬ್ಧಗಳ ಬಳಕೆಯ ಬಗ್ಗೆ ಪರೀಕ್ಷೆ ನಡೆಸಿ ಇಂತಹ ವಿವಾದ ಅನಗತ್ಯ ಎಂದರು. ವಾಸ್ತವವಾಗಿ ಅವರು ಪ್ರಕಾಶಿಸಿದ ಆರು ಸಂಪುಟಗಳ ಮಾರ್ಗದಲ್ಲಿ ವಚನಗಳು ಮತ್ತು ಅದರಲ್ಲಿ ಪ್ರತಿಪಾದಿಸಲಾದ ಜೀವನಕ್ರಮವನ್ನು ಹೊರತುಪಡಿಸಿ ಸುಮಾರು 600 ಪ್ರಬಂಧಗಳಲ್ಲಿ ಇಂತಹ 280 ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು.

ಕಲಬುರ್ಗಿಯವರಿಗೆ ಸಾಹಿತ್ಯಿಕ ವಲಯದಲ್ಲಿ ಯಾಕೆ ಅಷ್ಟು ವೈರಿಗಳು ಹುಟ್ಟಿಕೊಂಡರು ಎಂಬುದನ್ನು ಕಂಡುಹಿಡಿಯುವುದು ಅಷ್ಟೇನೂ ಕಷ್ಟವಲ್ಲವಾದರೂ, ಅವರನ್ನು ಹತ್ಯೆಗೈಯುವಷ್ಟು ಶತ್ರುತ್ವ ಯಾಕೆ ಹುಟ್ಟಿಕೊಂಡಿತು ಎಂಬುದು ನನ್ನ ಊಹೆಗೆ ನಿಲುಕುತ್ತಿಲ್ಲ.

ಹಿಂದುತ್ವದ ಭಾಗವಲ್ಲದ ಭಾರತದ ಸ್ವತಂತ್ರ ಧರ್ಮಗಳ ಪೈಕಿ ಒಂದಾದ ವೀರಶೈವತ್ವ (ಬುದ್ಧ, ಸಿಖ್ ಮತ್ತು ಜೈನದಂತಹ ಧರ್ಮಗಳಂತೆ)ದ ಬಗ್ಗೆ ಅವರು ಪ್ರಬಲ ಪ್ರತಿಪಾದನೆ ಮಾಡಿದ್ದರೂ ವೈದಿಕ ಹಿಂದುತ್ವವಾದಿಗಳ ಜೊತೆಗೆ ಅವರು ವೈರತ್ವ ಬೆಳೆಸಿಕೊಂಡಿರಲಿಲ್ಲ. ವೇದ ಮತ್ತು ಗೀತೆಯನ್ನು, ವರ್ಣಾಶ್ರಮ ವ್ಯವಸ್ಥೆಯನ್ನು, ದೇವಾಲಯಗಳಲ್ಲಿರುವ ದೇವರ ಆರಾಧನೆಯನ್ನು ಅಥವಾ ಆಗಮಗಳ ಬಗ್ಗೆ ಗೌರವವನ್ನು ಅಥವಾ ಕರ್ಮ ಸಿದ್ಧಾಂತ ಮತ್ತು ಪುನರ್ಜನ್ಮ ಮೊದಲಾದ ವೈದಿಕ ಹಿಂದುತ್ವದ ರೀತಿಯಲ್ಲಿರದ ಪರಿಕಲ್ಪನೆಯನ್ನು ಒಪ್ಪದ 12ನೆಯ ಶತಮಾನದ ಸುಧಾರಣಾಕಾರರ ವಚನಗಳನ್ನು ಓದಿ ಅದರಲ್ಲಿನ ತತ್ವಜ್ಞಾನವನ್ನು ಅವರು ಅರಿತುಕೊಂಡಿದ್ದರು.

ಯು. ಆರ್. ಅನಂತಮೂರ್ತಿಯವರು ದೇವರು ಮತ್ತು ರಾಕ್ಷಸರ ವಿಗ್ರಹದ ಮೇಲೆ ಮೂರ್ತ ವಿಸರ್ಜನೆ ಮಾಡಿದ (ಆಕಸ್ಮಿಕವಾಗಿ) ಪ್ರಸಂಗವನ್ನು ಅವರು ಉಲ್ಲೇಖಿಸಿದ್ದೂ ಕೂಡ ಕಲ್ಲಿನ ವಿಗ್ರಹಗಳ ಬಗ್ಗೆ ವಚನಗಳು ಪ್ರತಿಪಾದಿಸಿದ್ದನ್ನೇ ಹೇಳುವ ಉದ್ಧೇಶ ಹೊಂದಿದ್ದರು. ಹಿಂದುತ್ವವಾದಿಗಳ ಒಂದು ಗುಂಪು ಅವರ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದವು ಮತ್ತು ಈ ಮೂಲಕ ಅವರನ್ನು ಯಾವತ್ತಿಗೂ ಮೌನವಾಗಿಸುವ ಸನ್ನಿವೇಶ ಸೃಷ್ಟಿಸಿದವು.

 

1 Response

  1. “ಹಿಂದುತ್ವದ ಭಾಗವಲ್ಲದ ಭಾರತದ ಸ್ವತಂತ್ರ ಧರ್ಮಗಳ ಪೈಕಿ ಒಂದಾದ ವೀರಶೈವತ್ವ (ಬುದ್ಧ, ಸಿಖ್ ಮತ್ತು ಜೈನದಂತಹ ಧರ್ಮಗಳಂತೆ)ದ ಬಗ್ಗೆ ಅವರು ಪ್ರಬಲ ಪ್ರತಿಪಾದನೆ ಮಾಡಿದ್ದರೂ ವೈದಿಕ ಹಿಂದುತ್ವವಾದಿಗಳ ಜೊತೆಗೆ ಅವರು ವೈರತ್ವ ಬೆಳೆಸಿಕೊಂಡಿರಲಿಲ್ಲ. ”

    ವೀರಶೈವತ್ವ ಅಲ್ಲ ಸಾರ್ ಅದು. ಲಿಂಗಾಯತ ಧರ್ಮ!!
    ಬೇಕಾದ್ರೆ ಅವರೆ ಹೇಳಿದ ಈ ವಿಡಿಯೋ ನೋಡಿ
    http://bit.ly/kalburgi_lingayat_independent_religion

Leave a Reply

%d bloggers like this: