ಒಡೆದಿದ್ದು ಹೃದಯವಲ್ಲವಲ್ಲಾ..

ಗಾಜಿನ ಲೋಟ

ಅನಿತಾ ಪಿ ಪೂಜಾರಿ ತಾಕೊಡೆ

ಅಂದು ನಿನ್ನೆದೆಮಾಳದಲಿ ಪಡಿಮೂಡಿದ
ಭಾವಬಿಂದುಗಳು ಕೂಡಿ ಒಮ್ಮೆಗೇ
ಹೊಳೆದಿತ್ತಲ್ಲಾ ….ನೆನಪಿದೆಯಾ…?

ಯಾರೂನೂ ಒಂದಷ್ಟು ಹೊತ್ತು
ಅತ್ತಿತ್ತಲುಗದೆ ನಿಂತು ನೋಡುವಷ್ಟು
ಮೋಹಕವಾಗಿ ನಕ್ಕಿದ್ಯಲ್ಲಾ
ಆ ನಗು ಇನ್ಯಾರದ್ದಾಗಿರಲಿಲ್ಲ.

ಎಲ್ಲೋ ಸುತ್ತಿ ಬಂದಿರುವಲ್ಲಿ
ಸಂಧಿಸದವೆರಡು ಮುತ್ತು
ಆಲಯದಲ್ಲಿರದೆ ಚಿಪ್ಪಿನೊಳಗಿದ್ದಿದ್ದರೆ
ತೋಳ್ದೆರೆದು ಆವರಿಸಿ
ಒಂದಿಷ್ಟು ಪಿಸು ಮಾತು
ಅದೇನೇನೋ…..

ಕೇಳಿಸ್ತಾ……!
ಅಂದು ನಮ್ಮುಸಿರು ಬೆರೆತ
ದಟ್ಟ ಕಾಡಿನಲಿ, ನೀ ನಕ್ಕ ನಗು
ನಮ್ಮೊಲವಿನದೇ ಸೋಕು
ನಿನ್ನ ಕಣ್ಮಿಂಚಿಗೆ ಅಲ್ಲಿದ ಮೈನಾ
ಗೆಲ್ಲು ಬದಲಿಸಿ, ಅತ್ತ ನೋಡಲೆಂದು
ಮತ್ತೆ ಹಾಡಿತ್ತಲ್ಲಾ ದನಿಯೇರಿಸಿ..!

ಅಂದು ಹೃದಯದಲಿ ಸಾಲದಾಗಿ,
ಕಣ್ಣಲೂ ತುಂಬದಾಗಿ, ತೂಕಕ್ಕಿಟ್ಟು
ಸೆರೆ ಹಿಡಿದೆ ನೋಡು
ನನ್ನದೆನುವ ನಿನ್ನ
ಮಧುರ ಭಾವಚಿತ್ರಗಳನು,
ಯಾಕೆಂದು ಕೇಳ್ಬಾರ್ದಾ…?

ನೀನಿರದ ಹೊತ್ತಿನಲಿ
ಎದೆಯಪ್ಪುಗೆಯ ಕಾಯಲು
ಆ ಗಳಿಗೆಯ ಮತ್ತೆಮತ್ತೆ
ತಳುಕು ಹಾಕುತ್ತಿರಲು

ಬರೀ ನನ್ನಲಿದ್ದರೆ ಸಾಕೇ…!
ನೀನಿರುವಲ್ಲಿ…..
ನನ್ನದೆನುವ ನಿನ್ನದಾಗಿ
ಮರಳಿಸುವ ನೆನಪಾಗಿ
ಎನ್ಮಾಡಲಿ…..?

ಹೊಳೆಯೀತು ನೋಡು
ಗಾಜಿನ ಲೋಟ….!
ಅದೇ ಬೆಳಗಾತ ಕಾಪಿ ಹೀರುವ ನೆಪದಲಿ
ನಿನ್ನ ತುಟಿಗಂಟಿ ಬೆಚ್ಚನೆಯ ಸ್ಪರ್ಶ
ನೀಡುತ್ತಿದೆಯಲ್ಲಾ
ಅದರ ಸುತ್ತ ನನ್ನದೆನುವ ನಿನ್ನ ಚಿತ್ರ
ನಸುನಗುತ್ತಿರಬೇಕು ನಿನ್ನ ನೋಡಿ
ಆ ನಗು ನಿತ್ಯ ನನ್ನದಾಗಿರಬೇಕು

ನಿನಗಿದು ಗೊತ್ತಿತ್ತಾ…..?
ಹುಚ್ಚು ಮನಸ್ಸಿನ ಹತ್ತಾರು ಆಸೆ
ಈಡೇರಿತೆನುವ ಹುಮ್ಮಸ್ಸಿನಿಂದ
ಇಲ್ಲಿ ಬೀಗುತ್ತಿರುವಷ್ಟರಲ್ಲಿ…..!

ದೃಷ್ಠಿ ನಿವಾಳಿಸಲೆಂದೋ
ಅಸಹಾಯ ಆಕ್ರೋಶದಿಂದಲೋ
ಕಿಡಿಯೊಂದು ಸಿಡಿದು
ಹತ್ತಾರು ಚೂರಿನ ಗೀರು
ನನ್ನದೆನುವ ಚಿತ್ರಗಳೂ….!

ಆದರೂ ಕೇಳಿಸ್ಕೋ…
ಇಲ್ಲುದುರಿದ ಸ್ಪಟಿಕದ ಹಾಗಿನ
ಒಂದೊಂದು ಹನಿಗಳಲೂ
ನಿನ್ನದೇ ಬಿಂಬ,
ನಿತ್ರಾಣದ ರಾಗವಿಲ್ಲ
ಒಡೆದಿದ್ದು ಹೃದಯವಲ್ಲವಲ್ಲಾ

1 Response

  1. Ninjoor says:

    ಮನ ಸೆಳೆಯುವ ಕವಿತೆ. ಅಭಿನಂದನೆಗಳು

Leave a Reply

%d bloggers like this: