ಬಂಬಯ್ಯಾ!

 

 

ಬಂಬಯ್ಯಾ!

ದ್ವೀಪದೊಳು ಮನೆಮಾಡಿ ಪ್ರಳಯಕ್ಕಂಜಿದೊಡೆಂತಯ್ಯಾ!?

-ರಾಜೀವ ನಾರಾಯಣ ನಾಯಕ

 

 

ಇದು ಅಂಥ ಅನಿರೀಕ್ಷಿತವೇನಲ್ಲ. ಇಲ್ಲಿ ಜೋರು ಮಳೆಯಾದರೆ ರಸ್ತೆಗಳು ಕೆರೆಗಳಾಗುವ, ರೈಲು ಹಳಿಗಳು ನೀರಿನಡಿ ಕಣ್ಣಾಮುಚ್ಚಾಲೆಯಾಡುವ ವಿದ್ಯಮಾನ ಸಾಮಾನ್ಯವೇ!

ಮುಂಬಯಿಗರು ಇದಕ್ಕೆ ಒಗ್ಗಿಕೊಂಡಿದ್ದಾರೆ ಕೂಡ.

ಆದರೆ ಸತತ ಜಡಿಮಳೆಯಾದರೆ ಈ ಸಾಮಾನ್ಯ ಸ್ಥಿತಿ ವಿಕೋಪದ ಸ್ವರೂಪಕ್ಕೆ ತಿರುಗುತ್ತದೆ. ಹೆದ್ದಾರಿಗಳು ನದಿಗಳಾಗುತ್ತವೆ. ಗಲ್ಲಿಗಳು ಗುಡಿಹಳ್ಳಗಳಾಗುತ್ತವೆ. ಗಟಾರದಂಥ ಗಟಾರಕ್ಕೂ ಸೊಕ್ಕು ಉಕ್ಕೇರುತ್ತದೆ. ನಿತ್ಯವೂ ಲಕ್ಷಾಂತರ ಜನರನ್ನು ಗತ್ತಿನಿಂದ ಹೊತ್ತು ಸಾಗುವ ರೈಲುಗಳು “ದಾರಿಕಾಣದಾಗಿದೆ ರಾಘವೇಂದ್ರನೇ’’ ಎಂಬ ವಿನೀತ ಭಾವಮಳೆಯಲ್ಲಿ ಮಿಂದು ಎಲ್ಲೆಂದರಲ್ಲಿ ನಿಂತುಬಿಡುತ್ತವೆ.

ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡ ಬೆಸ್ಟ್ ಬಸ್ಸುಗಳು ರಸ್ತೆ ಮೇಲಿನ ನೀರಿನ ಮಟ್ಟವನ್ನು ಅಳೆಯುವ ಪೆಟ್ಟಿಗೆಗಳಾಗಿ ಮಾರ್ಪಾಡಾಗುತ್ತವೆ…ಆಗ ನಿಜಕ್ಕೂ ಕಂಗಾಲಾಗುವ ಮುಂಬೈಕರ್ ತನ್ನ ಎಂದಿನ ಧಾವಂತಕ್ಕೆ ಬ್ರೇಕು ಹಾಕಿ ಬಚಾವ್ ದಾರಿಗಳನ್ನು ಹುಡುಕುತ್ತಾನೆ. ಆದರೆ ಅಷ್ಟರಲ್ಲಿ ಅವನು ಮನೆ ತಲುಪುವ ಎಲ್ಲ ದಾರಿಗಳೂ ಮಾಯವಾಗಿರುತ್ತವೆ. ಸೊಂಟಮಟ್ಟದ ನೀರಿನಲ್ಲಿ ರಸ್ತೆಯಲ್ಲೋ ರೈಲುಹಳಿಯಲ್ಲೋ ಅಂದಾಜು ಹೆಜ್ಜೆಗಳನ್ನಿಡುತ್ತಾ ತನ್ನಂಥದ್ದೇ ಸಾವಿರಾರು ಸಾಥಿಗಳ ಸಾಲಿನಲ್ಲಿ ಮುನ್ನಡೆಯುವ ಹಿಮ್ಮತ್ ತೋರಬೇಕು ಅಥವಾ ಸ್ಟೇಶನ್ನಿನಲ್ಲೋ ಆಫೀಸಿನಲ್ಲೋ ಎಲ್ಲಿದ್ದೀರೋ ಅಲ್ಲೇ ಉಳಿದು ವ್ಯವಸ್ಥೆ ಸರಿಯಾಗುವವರೆಗೆ ತಾಳ್ಮೆಯಿಂದ ಕಾಯಬೇಕು.

ಹನ್ನೆರಡು ವರ್ಷಗಳ ಹಿಂದಿನ ಪ್ರಳಯಸ್ವರೂಪಿ ಪರಿಸ್ಥಿತಿಯ ನಂತರ ಅಂಥದ್ದೇ ಸನ್ನಿವೇಶವನ್ನು ಮುಂಬೈಯಿಗರು ನಿನ್ನೆ (ಮಂಗಳವಾರ) ಮತ್ತೆ ಅನುಭವಿಸುವಂತಾಯಿತು. 2005 ರಷ್ಟು ತೀವ್ರತೆ ಮತ್ತು ಅಷ್ಟು ದೀರ್ಘ ಕಾಲದ ಪರಿಣಾಮ ಇರಲಿಲ್ಲವಾದರೂ ಅಸ್ತವ್ಯಸ್ತಗೊಂಡ ಸಾರಿಗೆ ವ್ಯವಸ್ಥೆಯಿಂದ ಪಟ್ಟಪಾಡು ಕಡಿಮೆಯೇನಲ್ಲ. ಲಕ್ಷಾಂತರ ಜನರು ಮನೆ ತಲುಪಲಾಗದೆ ಸ್ಟೇಶನ್ನುಗಳಲ್ಲಿ, ಮಾರ್ಗಮಧ್ಯದಲ್ಲಿ ಅಥವಾ ಕಾರ್ಯಕ್ಷೇತ್ರಗಳಲ್ಲಿ ಸಿಕ್ಕಿಬಿದ್ದು ಒದ್ದಾಡಿದರು. ಕೆಲವರು ಧೈರ್ಯಮಾಡಿ ಎಂಟತ್ತು ತಾಸುಗಳವರೆಗೂ ನಡೆದು ರಸ್ತೆ ಮೇಲಿನ ನೀರು ಹಾಯ್ದು ಹೇಗೋ ಮನೆ ತಲುಪಿದ್ದಾರೆ. ಅದೆಷ್ಟೋ ಮನೆಗಳಲ್ಲಿ ನೀರು ಗೃಹಪ್ರವೇಶ ಮಾಡಿದೆ. ಮಳೆ ಕಡಿಮೆಯಾದರೆ ಇದೆಲ್ಲ ಸರಿಯಾಗಲು ಇನ್ನೊಂದೆರಡು ದಿನಗಳಾದರೂ ಬೇಕಾದೀತು.

ದಿನಕ್ಕೆ ಮುನ್ನೂರು ಮಿಲಿಮೀಟರ್ ಮಳೆಯಾದರೆ ಎಲ್ಲ ವ್ಯವಸ್ಥೆಗಳೂ ತಾಳ ತಪ್ಪುವುದು ಸಹಜ ಎಂದು ಒಪ್ಪಿಕೊಂಡರೂ ಇಂಥ ಆಪತ್ಕಾಲದ ಪರಿಸ್ಥಿಯನ್ನು ನಿರ್ವಹಿಸುವಲ್ಲಿ  ಆಡಳಿತ ವ್ಯವಸ್ಥೆ, ವಿಶೇಷವಾಗಿ ಮುಂಬಯಿ ಮಹಾನಗರ ಪಾಲಿಕೆ ಮತ್ತು ಟ್ರಾಫಿಕ್ ಪೋಲಿಸ್, ಅದೆಷ್ಟು ನಿಸ್ಸಾಹಯಕವಾಗುತ್ತದೆ ಎನ್ನುವುದು ಇನ್ನೊಮ್ಮೆ ಬಹಿರಂಗಗೊಂಡಿದೆ.

ಸಕಾಲಿಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗುವ, ಪರಿಸ್ಥಿತಿ ತೀರಾ ಹದಗೆಡುವವರೆಗೂ ಕಾದು ನಂತರ ಕೈಯೆತ್ತಿಬಿಡುವ ಈ ಆಡಳಿತವು ಅನುಭವಗಳಿಂದ ಪಾಠ ಕಲಿಯುವುದೇ ಇಲ್ಲ. ಅದೆಷ್ಟೋ ವರ್ಷಗಳಿಂದ ಮಹಾನಗರಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಶಿವಸೇನೆಗೆ ವಾಣಿಜ್ಯನಗರಿಯೆನ್ನುವ ಹೆಗ್ಗಳಿಕೆಯ ಮಹಾನಗರದ ಕನಿಷ್ಠ ಸೌಲಭ್ಯಗಳನ್ನು ಆಧುನಿಕಗೊಳಿಸುವ ಕನಸೇ ಇದ್ದಂತಿಲ್ಲ. ಬ್ರಿಟಿಷ್ ಜಮಾನಾದ ಒಳಚರಂಡಿ ವ್ಯವಸ್ಥೆಯನ್ನು ಅತಿಯಾಗಿ ಹೆಚ್ಚಿರುವ ಜನಸಂಖ್ಯೆಗನುಗುಣವಾಗಿ ಮೇಲ್ದರ್ಜೆಗೇರಿಸುವ ಕನಸಿನ ಯೋಜನೆಗಳು ಸರಿಯಾಗಿ ಕಾರ್ಯಗತಗೊಳ್ಳುತ್ತಿಲ್ಲ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಥ ವಿಪರೀತ ಸನ್ನಿವೇಶವನ್ನು ಎದುರಿಸಲು ಅನೇಕ ಮಹಾನಗರಗಳು ಸಜ್ಜಾಗಿರುತ್ತವೆ. ಮುಂಬಯಿ ಅಧಿಕಾರಸ್ಥರು ಇನ್ನೂ “ಚಲ್ತಾ ಹೈ” ಸ್ವಭಾವದಿಂದ ಜಡಗೊಂಡಿದ್ದಾರೆ. ಲೆಕ್ಕದ ಬಾಬತ್ತಿನಲ್ಲಿ ಇಂಥದಕ್ಕೆಲ್ಲ ನೂರಾರು ಕೋಟಿ ತೋರಿಸಿದರೂ ವಾಸ್ತವದಲ್ಲಿ ಯಾವುದೇ ಬದಲಾವಣೆ ಕಾಣದಿರುವುದು ಮುಂಬಯಿಗರ ದುರ್ದೈವವೇ ಸರಿ. ಇಂಥ ವಿಷಮ ಸನ್ನಿವೇಶಕ್ಕೆ ಮುಂಬಯಿ ನಿವಾಸಿಗಳೂ ಸ್ವಲ್ಪ ಮಟ್ಟಿಗೆ ಹೊಣೆಗಾರರೇ.

ನದಿ, ನಾಲಾಗಳನ್ನೇ ಭರ್ತಿ ಮಾಡಿ ಅತಿಕ್ರಮಿಸುವುದು, ತೆರೆದ ಪ್ರದೇಶಗಳಲ್ಲಿ ಜೋಪಡಿಗಳನ್ನೆಬ್ಬಿಸಿ ಆನಂತರ ಬಿಲ್ಡರುಗಳು ಬಹುಮಹಡಿ ಇಮಾರತುಗಳನ್ನೆಬಿಸುವುದು- ಇಂಥ ಅನಧಿಕೃತ ಚಟುವಟಿಕೆಗಳು ಮುಂಬಯಿಯಲ್ಲಿ ನಿರಂತರವಾಗಿ ನಡೆಯುತ್ತಿದೆ. (ಬಹುಶ: ಸಪ್ತ ದ್ವೀಪಗಳನ್ನು ಜೋಡಿಸಿ ಮುಂಬಯಿ ನಗರ ಕಟ್ಟುವಲ್ಲಿಂದಲೇ ಇದು ಶುರುವಾಗಿದೆ) ಚರಂಡಿಗಳಲ್ಲಿ ಪ್ಲಾಸ್ಟಿಕ್ ನಂತಹ ಕಸಕಡ್ಡಿ ಬಿಸಾಡುವ ಬೇಜವಾಬ್ದಾರಿತನವೂ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ.

ಈ ಸಲದ ಮಳೆ ಕೆಲವು ಹೊಸ ಸವಾಲುಗಳನ್ನೂ ಎದುರಿಸುವಂತೆ ಮಾಡಿದೆ.  ಕುರ್ಲಾ-ಸಯನ್, ಕಿಂಗ್ ಸರ್ಕಲ್, ದಾದರ್-ಪರೇಲ್, ಕುರ್ಲಾ-ಕೋಳಿವಾಡಾ ಮುಂತಾದ ಸಾಂಪ್ರದಾಯಿಕ ಮುಳುಗು ಪ್ರದೇಶಗಳ ಜೊತೆಗೆ ಕೆಲವು ಹೊಸ ಜಾಗಗಳಲ್ಲೂ ನೀರು ಸಾಮಾನ್ಯಕ್ಕಿಂತ ಹೆಚ್ಚು ತಡೆದು ನಿಂತಿದೆ. ಇದಕ್ಕೆ ಕಾರಣ ಮತ್ತು ಅದರ ಪರಿಹಾರೋಪಾಯಗಳನ್ನು ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.

ಏನೇ ಇರಲಿ, ಮತಲಬಿ ಮುಂಬಯಿಗರೂ ಕೂಡ ದುಗುಡದ ಸನ್ನಿವೇಶದಲ್ಲಿ ಸಹೃದಯಿಗಳಾಗುತ್ತಾರೆ ಎನ್ನುವುದು 2005 ರಲ್ಲಿಯ ಪ್ರಳಯ ಸ್ವರೂಪಿ ಮಳೆಯಲ್ಲೇ ಸಾಬೀತಾಗಿತ್ತು.

ಅದಕ್ಕೆ ಸಾವಿರಾರು ಮಾನವೀಯ ನಿದರ್ಶನಗಳು ಸಾಕ್ಷಿಯಾಗಿದ್ದವು. ಅಸಹಾಯಕ ಗಳಿಗೆಯಲ್ಲಿ ಸಹಾಯ ಹಸ್ತ ಚಾಚುವ ಮಾನವೀಯ ಗುಣ ಉದ್ದೀಪನಗೊಳ್ಳುತ್ತದೆ ಎಂಬುದೇ ಧನಾತ್ಮಕ ಅಂಶ. ನಿನ್ನೆ ಕೂಡ ಅದೆಷ್ಟೋ ಕಡೆಗಳಲ್ಲಿ ಪೋಲೀಸರು ಕಾಣದಿದ್ದರು ಕೆಲವು ಯುವಕ ಸಂಘದವರು, ಮಿತ್ರಮಂಡಳಿಗಳ ಹುಡುಗರು ರಸ್ತೆಗಳಲ್ಲಿ ಅಲ್ಲಲ್ಲಿ ನಿಂತು ತಮ್ಮಿಂದಾದಷ್ಟು ನೆರವು ನೀಡುತ್ತಿದ್ದರು.

ಇನ್ನು ಕೆಲವರು ಸಿಕ್ಕಿಹಾಕಿಕೊಂಡ ಪ್ರಯಾಣಿಕರಿಗೆ ಅವರು ನಿಂತಲ್ಲಿ ಅಥವಾ ಮನೆಗೊಯ್ದು ಅವರಿಗೆ ನೀರು ತಿಂಡಿ ತಿನಿಸು ನೀಡಿದ್ದಾರೆ. ಈ ಲೇಖಕನೂ ಸುಮಾರು ಆರು ತಾಸು ಮುಳುಗಿದ ಹಳಿಗಳ ಮೇಲೆ, ನೀರು ತುಂಬಿದ ರಸ್ತೆಗಳಲ್ಲಿ ನಡೆಯುವಾಗ (ಕೆಲವಡೆ ಈಸುವಾಗ) ಇದನ್ನು ಕಣ್ಣಾರೆ ಕಂಡಿದ್ದಾನೆ. ಸುಮನ್ ನಗರ ಸಮೀಪ ಒಬ್ಬ ಆಟೋದವನಿಗೆ ದಮ್ಮಯ್ಯ ಹಾಕಿ ನಾವಿಬ್ಬರು ಎಷ್ಟು ಸಾಧ್ಯವೋ ಅಲ್ಲಿಯವರೆಗೆ ಬಿಡು ಅಂದು ಅವನ ಒಪ್ಪಿಗೆಯನ್ನು ಕೇಳದೇ ಕೂತು ಬಿಟ್ಟೆವು.

ಚೆಂಬೂರಿನ ಸಮೀಪದಲ್ಲಿ ಜಲಾವೃತ್ತವಾಗಿದ್ದ ಜಾಗದಲ್ಲಿ ನೀರು ಆಟೋ ಒಳಗೇ ಬಂತು. ನಿಂತೂ ಬಿಟ್ಟಿತು. “ಸಾಬ್, ಮೇರಾ ಬೇಟಿ ಗೋವಂಡಿ ಸ್ಕೂಲ್ ಮೆ ಫಸ್ ಗಯಿ ಹೈ. ಮುಝೆ ಜಾನಾಹಿ ಹೈ…ಥೋಡಾ ಧಕ್ಕಾ ಮಾರೋ” ಎಂದ. ಎಲ್ಲೆಲ್ಲೋ ನಡೆದು ಸುಸ್ತಾಗಿದ್ದರೂ ನಾವು ಸೊಂಟದಷ್ಟಿದ್ದ ನೀರಿನಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೂ ದೂಡಿಕೊಂಡು ಹೋದೆವು. ಮುಳುಗಿದ ರಸ್ತೆ ಮುಗಿದ ಮೇಲೆ ಆಟೊ ಚಾಲಕ ಏನೇನೋ ಮಾಡಿ ಇಂಜಿನ್ ಬಿಸಿಗೊಳಿಸಿ ಮತ್ತೆ ಚಾಲೂ ಮಾಡಿ ಮಗಳನ್ನು ಕರೆದೊಯ್ಯಲು ನಾವು ಹೋಗಬೇಕಾದ ವಿರುದ್ಧ ದಿಕ್ಕಿಗೆ ಧಾವಿಸಿದ. ಅಂಥ ವಿಕೋಪ ಪರಿಸ್ಥಿಯಲ್ಲಿ ನಾವು ಸ್ವತ: ತೊಂದರೆಯಲ್ಲಿದ್ದರೂ ಅವನಿಗೆ ಸಹಾಯ ಮಾಡಿದ ಸಾರ್ಥಕಭಾವ ನಮ್ಮಲ್ಲಿ ಮುನ್ನೆಡೆಯುವ  ಶಕ್ತಿ ತುಂಬಿತ್ತು. ಕಡಿಮೆ ಕಷ್ಟದಲ್ಲಿದ್ದವರು ಜಾಸ್ತಿ ಕಷ್ಟದಲ್ಲಿದ್ದವರಿಗೆ ಮದತ್ ಮಾಡುವ ಮುಂಬಯಿಯ ಮಾನವೀಯ ಗುಣ ಪ್ರಕೋಪದ ಪರಿಸ್ಥಿಯನ್ನು ಸ್ವಲ್ಪವಾದರೂ ಸಹನೀಯಗೊಳಿಸುತ್ತದೆ.

ಬಿಹಾರ ಮತ್ತು ಆಸ್ಸಾಮ್ ರಾಜ್ಯಗಳಲ್ಲಿ ಪ್ರವಾಹವು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. (ಮಾಧ್ಯಮದವರು ಮುಂಬೈ ಪ್ರಳಯ ಕವರ್ ಮಾಡಿದ ಕಾಲಾಂಶದಷ್ಟೂ ಅಲ್ಲಿಯ ಪರಿಸ್ಥಿಯನ್ನು ತೋರಿಸುತ್ತಿಲ್ಲ, ಇರಲಿ) ಜನಸಂಖ್ಯೆಯ ಅರ್ಧದಷ್ಟು ಜನರು ಫುಟಪಾತುಗಳಲ್ಲಿ ಮತ್ತು ಜೋಪಡಪಟ್ಟಿಗಳಲ್ಲಿ ಇದ್ದರೂ ಅದೃಷ್ಟವಶಾತ್ ಮುಂಬಯಿಯಲ್ಲಿ ಅಂಥ ಜೀವಹಾನಿಯಾಗಿಲ್ಲ. ಆದರೆ ಸ್ಥಳೀಯ ನೆಲ-ಜಲದ ನೈಸರ್ಗಿಕ ಸ್ವರೂಪವನ್ನೇ ವಿರೂಪಗೊಳಿಸಿರುವ ನಾವು ಅಂಥ ಸಂದರ್ಭದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬದುಕನ್ನರಸಿ ಎಲ್ಲೆಲ್ಲಿಂದಲೋ ಇಲ್ಲಿಗೆ ಬಂದು ನೆಲೆಸಿರುವವರಿಗೆ ಇದರ ಅರಿವು ಇಲ್ಲ ಅಂತಲ್ಲ.

ಕಷ್ಟಕಾಲದಲ್ಲಿ ಜೊತೆಯಾಗುವ ಮನುಷ್ಯ ಭರವಸೆಯನ್ನೇ ನಂಬಿ ಮುಂಬಯಿಗರು ಮತ್ತೆ ಮತ್ತೆ ಬದುಕಿಗೆ ಮರಳುತ್ತಿದ್ದಾರೆ.

4 Responses

 1. ನಳಿನಾ ಪ್ರಸಾದ್ says:

  ಲೇಖನ ಅಚ್ಚುಕಟ್ಟಾಗಿ ಮೂಡಿ ಬಂದಿದೆ .

  • ರಾಜೀವ says:

   ಧನ್ಯವಾದ ನಳಿನಾ..ಓದಿದ್ದಕ್ಕೆ ಪ್ರತಿಕ್ರಿಯಿಸಿದ್ದಕ್ಕೆ

 2. Shyamala Madhav says:

  ಇದು ನಮ್ಮ , ನಮ್ಮೆಲ್ಲರ ಮುಂಬಯಿ , ಅಲ್ವೇ ರಾಜೀವ್? ತುಂಬ ಸೊಗಸಾದ ದಕ್ಷ ನಿರೂಪಣೆ. ಚೆಂಬೂರಿಂದ ಏರ್ ಪೋರ್ಟ್ ತಲುಪಲು ಅಂದು 8 ಗಂಟೆ ಹಿಡಿದಿತ್ತು

  • ರಾಜೀವ says:

   ಗೂಗಲ್ ಮ್ಯಾಪಿನಲ್ಲಿ ಕೇವಲ ೪೦ ನಿಮಿಷ ತೋರಿಸುತ್ತಿದೆ. ನಮ್ಮ ಗೂಗಲ್ ಮಹಾಶಯ ಒಮ್ಮೆ ಮಳೆಗಾಲದಲ್ಲಿ ಮುಂಬೈಗೆ ಬಂದುಳಿಯಲಿ 🙂

Leave a Reply

%d bloggers like this: