ಇದು ‘ಕತ್ತಲೆ ಕಾನು’

 

 

 

 

 

ಗಂಗಾಧರ ಕೊಳಗಿಯವರ ‘ಕತ್ತಲೆ ಕಾನು’

-ನಾಗರೇಖಾ ಗಾಂವಕರ

 

 

 

ಸಮಯದ ನಿಜ, ಮನಸು ಆಕಾಶದ ನೀಹಾರಿಕೆ, ಕಾಡಂಚಿನ ಕಥೆಗಳು, ಗಾಂಜಾ ಗ್ಯಾಂಗ್ ಕೃತಿಗಳ ಲೇಖಕ ಸಿದ್ಧಾಪುರದ ಗಂಗಾಧರ ಕೊಳಗಿಯವರ ಐದನೆಯ ಕೃತಿ ಕತ್ತಲೆ ಕಾನು.

ಆಧುನಿಕತೆಯ ಪ್ರತಿಕೂಲತೆಗಳ ಮೇಲೆ, ಅದು ಪ್ರತಿಫಲಿಸುತ್ತಿರುವ ಅಸಹನೆ, ದ್ವೇಷ, ಕೌರ್ಯ, ಲೋಭ, ಲಾಲಸೆಗಳ ಮೇಲೊಂದು ಮಿಣುಕು ದೀಪ ಈ ಕಾದಂಬರಿ. ಪ್ರಾಕೃತಿಕ ಸೌಂದರ್ಯದ ಉತ್ತರ ಕನ್ನಡ ನೆಲದ ಸೊಗಡು, ಭಾಷಾ ಸೊಗಡನ್ನು ಅನುಪಮವಾಗಿ ಕಟ್ಟಿಕೊಟಿದ್ದಾರೆ ಕೊಳಗಿಯವರು.

ಸಹ್ಯಾದ್ರಿಯ ನೆತ್ತಿಯಲ್ಲಿ ಸ್ವಲ್ಪ ಚಪ್ಪಟೆಯಾದ ಕಾಡಿನ ನಡುವೆ ಅರಳಿನಿಂತ ‘ಕತ್ತಲೆಕಾನು’ ಎಂಬ ಪ್ರದೇಶ ಹೆಸರಿಗೆ ತಕ್ಕಂತೆ ನಿಗೂಢ ಕಾಡಿನ ಚಹರೆಗಳ ಹೊದ್ದ ಕಾಡು. ಅನುಪಮ ಸಸ್ಯರಾಶಿ, ವೈವಿಧ್ಯಮಯ ಜೀವಸಂಕುಲ ಒಳಗೊಂಡ ತಾಣ. ಮಾನವ ವಾಸ್ತವ್ಯ ಅಸಾಧ್ಯವೆನಿಸಿದರೂ ಅಲ್ಲಿಯೇ ಬದುಕಿನ ಶ್ರೀಮಂತ ಪರಂಪರೆಯನ್ನು ಬೆಳೆಸಿಕೊಂಡು ಬಂದ ಕಾಡಿನ ಜನರೇ ಎನ್ನುವಂತಹ ಆದಿವಾಸಿಗಳೋ, ಬುಡಕಟ್ಟುಗಳೋ ಆದ ಗಣಪು ಮತ್ತವನ ಸಮುದಾಯ.ಆ ನೆಲದ ಇಂಚೂ ಇಂಚನ್ನೂ ಅರಿತುಕೊಂಡ ನಿಸರ್ಗದೊಂದಿಗೆ ಬೆರೆತ ಜನರು. ಬದುಕಿನ ಕೆಲವೇ ಅಗತ್ಯಗಳಿಗೆ ಹೊರ ಜಗತ್ತಿನ ಸಂಪರ್ಕವಿರಿಕೊಂಡವರು. ಅವರದೇ ಆದ ಸಂಪ್ರದಾಯ ಕಟ್ಟುಕಟ್ಟಳೆಗಳ ರೂಪಿಸಿಕೊಂಡು ಪ್ರಕೃತಿ ಆರಾಧನೆಯಲ್ಲಿ ಸಂತಸದ ಕಾಣುತ್ತ ನಿಸರ್ಗ ನೀಡಿದ ಸದೃಢ ಶರೀರಿಗಳು.

ಆದರೆ ನಿಧಾನವಾಗಿ ಹೊರಜಗತ್ತು ಕಾನಿನೊಳಗೆ ಅಡಿಇಡತೊಡಗುತ್ತದೆ. ಕಾಡಿನ ಸಮೀಕ್ಷೆಗೆ ಹಾರಾಡುವ ವಿಮಾನಗಳು, ಸರ್ವೆಗೆ ಬಂದ ಹೊರಜಗತ್ತಿನ ಜನ ಎಲ್ಲವೂ ನಿಧಾನಕ್ಕೆ ಕಾನು ನಾಡಿನ ಮುಖವಾಡಗಳ ಬಣ್ಣ ಪಡೆದುಕೊಳ್ಳುತ್ತ ಹೋಗುತ್ತದೆ.

ಮೊದಮೊದಲು ಯಾವುದೋ ಕರಾಳ ಹಸ್ತಕ್ಕೆ ತಾವುಗಳು ಬಲಿಯಾಗುತ್ತಿರುವ ಶಂಕೆಯಿಂದ ಗಣಪು, ವೆಂಕು, ಶೇಷ ಇವರೆಲ್ಲ ಅಭದ್ರತೆಯ ಶಂಕೆಯಿಂದ ತಳಮಳಿಸುತ್ತಾರೆ. ದೇವರ ಬಲಿಗೆ ತಂದ ಕುರಿ ತಪ್ಪಿಸಿಕೊಂಡು ಓಡಿ ಹೋದದ್ದು ಅಪಶಕುನವೆಂದು ಬಗೆಯುತ್ತಾರೆ. ಮುಂದೇನೋ ಆಪತ್ತು ಕಾದಿದೆ ಎಂಬ ತಲ್ಲಣಕ್ಕೆ ಒಳಗಾಗುತ್ತಾರೆ. ಇದೇ ಸಮಯದಲ್ಲಿಯೇ ಅವರಲ್ಲಿಯೇ ಹಿರಿಯಸ್ಥಿಕೆಗಾಗಿ ಭಿನ್ನಾಭಿಪ್ರಾಯಗಳು ಮೂಡುವುದು ಆಕ್ಷೇಪ ವಿವಾದಗಳು ತೋರುವುದು ಜೀವನದ ಏರಿಳಿತಗಳ ಸಾಮಾಜಿಕ ಜೀವನದ ಸಂಘರ್ಷಗಳ ವಾಸ್ತವಾಂಶವನ್ನು ಕಾದಂಬರಿಕಾರರು ಬಿಚ್ಚಿಡುತ್ತಾರೆ.

ಮುಂದೆ ಕಾಲಕ್ರಮೇಣ ಹೊಸ ತಲೆಮಾರಿನ ಹುಡುಗರು ಅವರ ಹೊಸ ಆಕರ್ಷಣೆ ಹಣ ಮತ್ತು ಕರೆಂಟೆಂಬ ಆಧುನಿಕತೆಯ ಶೋಕಿಗಳಿಗೆ ಆ ಸಮುದಾಯ ಹೇಗೆ ಬದಲಾಗುತ್ತದೆ. ಆಧುನಿಕತೆಯ ವಿಷ ವರ್ತುಲ ಅಲ್ಲಿ ತನ್ನ ಕರಾಳ ಹಸ್ತವ ಚಾಚಿ ಅವರ ಸ್ವಯಂ ಶುದ್ಧ ಜೀವನ ಮತ್ತು ಪ್ರಾಕೃತಿಕ ನೆಲೆ ರೆಸಾರ್ಟ ಉದ್ದೇಶಕ್ಕೆ ಬಳಕೆಯಾಗುವುದು ಅದಕ್ಕೆ ಆ ಹುಡುಗರೇ ಮುಂದಾಗಿ ಸಹಕರಿಸುವುದು ಹೇಗೆ ಆಧುನಿಕತೆಯೆಂಬ ಭೂತ ಸಹಜ ಜೀವನವನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಬಿಂಬಿಸುತ್ತದೆ ಕಾದಂಬರಿ. ಇದು ಕಾದಂಬರಿಯ ಮೊದಲರ್ಧದಲ್ಲಿ ಬರುವ ಕಥಾನಕ.

ಎರಡನೇ ಆಯಾಮದಲ್ಲಿ ಭಿನ್ನ ಜೀವನ ನೆಲೆಯ ನಾಗೇಶ ಮಾಸ್ತರ ಮತ್ತವರ ಪೂರ್ವ ಬದುಕು. ವರ್ತಮಾನದೊಂದಿಗೆ ಮುಂದಿನ ತಲೆಮಾರಿನ ತನಕವೂ ಹೊಸೆದುಕೊಂಡ ಕಥೆ.

ಪ್ರಾಮಾಣಿಕರಾದ ನಾಗೇಶ ಮಾಸ್ತರ ಬದುಕಿನುದ್ದಕ್ಕೂ ಸವಾಲುಗಳ ಜೊತೆಗೆ ದೈವವೂ ನಿರಂತರ ಹೊಂಚುಹಾಕಿ ಪರೀಕ್ಷಿಸಿದರೂ ಬದುಕಿನಿಂದ ವಿಮುಖರಾದವರಲ್ಲ. ತಂದೆ ಬ್ರಾಹ್ಮಣನಾದರೂ ಕೆಲಸಗಾರನಾಗಿ ಬ್ರಾಹ್ಮಣ ಮನೆಗೆ ಹೋದಾಗ ಅವರಿಂದ ಪರಕೀಯನಂತೆ ಅನ್ಯನಂತೆ ಪರಿಭಾವಿಸಲ್ಪಡುವುದು, ಪಂಕ್ತಿಭೇಧದಲ್ಲಿ ಉಣ್ಣಲಿಕ್ಕುವುದು ಮುಂತಾದ ಸೂಕ್ಷ್ಮತೆಗಳ ದುಡಿಸಿಕೊಂಡು ಅಲ್ಲಿಯೂ ಇರುವ ಕಪ್ಪು ಮುಖದ ವೈವಸ್ಥೆಯ ಭ್ರಷ್ಟತೆಯನ್ನು ವಿಶ್ಲೇಷಿಸುತ್ತಾರೆ. ತಂದೆ ತಾಯಿ ತಂಗಿಯನ್ನು ಕಳೆದುಕೊಂಡರೂ ಜೀವನದ ಸಾಗರವನ್ನು ಶಾಂತವಾಗಿ ಬಂದದ್ದನ್ನು ಎದುರಿಸುತ್ತಾ ಸಾಗುವ ಅವರ ಬದುಕಿನಲ್ಲಿ ಮೂವರು ಹೆಣ್ಣು ಹಾಗೂ ಒಬ್ಬ ಕುಲಪುತ್ರನ ಕೈಗಿಟ್ಟ ಸದ್ಗುಣಿಯಾದ ಪತ್ನಿಯ ಅಗಲಿಕೆಯನ್ನು ಸ್ಥಿತ ಪ್ರಜ್ಞೆಯಿಂದ ಸ್ವೀಕರಿಸುತ್ತಾರೆ.

ಆದರೆ ಮಗ ನಾಗಭೂಷಣ ತನ್ನ ಬಾಲ್ಯದ ಅತೃಪ್ತಿಗೆ ಶ್ರಮಪಟ್ಟು ಉನ್ನತ ಹುದ್ದೆಯ ಅಲಂಕರಿಸಿದರೂ ಆ ನೋವು ನಿರಾಶೆಗಳಿಂದ ಹೊರಬರಲಾಗದೇ ಆಧುನಿಕತೆಯ ದಾಹದಲ್ಲಿ ಬಯಸಿದ್ದೆಲ್ಲಾ ಪಡೆದರೂ ನೈರಾಶ್ಯದ ಮಡುವಿನಿಂದ ಹೊರಬರಲಾಗದೇ ಒದ್ದಾಡುತ್ತಾನೆ. ತನ್ನ ವಿದ್ಯಾಭ್ಯಾಸಕ್ಕೆ ರಕ್ತ ಹರಿಸಿದ ಹೆತ್ತವರ ಮರೆತು ತಾನೇ ಪ್ರೀತಿಸಿ ಬಯಸಿ ಶ್ರೀಮಂತ ಮನೆತನದ ಕೋಕಿಲಾಳನ್ನುವಿವಾಹವಾಗುತ್ತಾನೆ. ತಂದೆತಾಯಿಗಳ ಜೊತೆಯಲ್ಲಿ ಅಷ್ಟಕಷ್ಟೇ ಸಂಬಂಧ ಹೊಂದುವ ಆತ ಮುಂದೆ ಮಗು ಪ್ರತೀಕ ಹುಟ್ಟಿ ಸ್ವಲ್ಪ ದೊಡ್ಡದಾಗುತ್ತಲೇ ಪತ್ನಿಯ ಮೇಲೂ ಅನಾವಶ್ಯಕ ಶಂಕೆಗಳ ಮೂಡಿಸಿಕೊಂಡು ಆಕೆಯ ಮೇಲೆ ದೌರ್ಜನ್ಯಕ್ಕೆ ಮುಂದಾಗುತ್ತಾನೆ.

ಹಳ್ಳಿಯ ಪರಿಸರದಲ್ಲಿಯೇ ಹುಟ್ಟಿಬೆಳೆದ ನಾಗಭೂಷಣ ತನ್ನ ಕತ್ತಲೆಯಿಂದ ಬೆಳಕಿಗೆ ವರ್ಗಾಯಿಸಿಕೊಳ್ಳುವಲ್ಲಿ ಬೆಳಕಿನ ಮೂಲವನ್ನು ಅರಿಯದೇ ಹೋಗುವುದು ವಿಪರ್ಯಾಸವೆನಿಸುತ್ತದೆ.ಇದೇ ಮುಂದೆ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಮೊಮ್ಮಗನ ಜೊತೆ ಬದುಕುವ ಆಸೆಯಿಂದ ನಾಗೇಶ ಮಾಸ್ತರ ತನ್ನ ನೆನಪಿನ ಗೂಡಾದ ತಾನೇಕಟ್ಟಿಸಿದ ಮಾದನಗೇರಿಯ ಮನೆಗೆ ಬೀಗಜಡಿದು ಮಗನ ಮನೆಗೆ ಬಂದರೆ ಅಲ್ಲಿ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಸ್ವಲ್ಪ ದಿನಗಳಲ್ಲೇ ನಾಗಭೂಷಣ ಪ್ರತೀಕನನ್ನು ಹಾಸ್ಟೇಲ್ ಒಂದಕ್ಕೆ ಸೇರಿಸುತ್ತಲೂ ಮಾಸ್ತರರು ಏಕಾಂಗಿತನದಿಂದ ಮುದುಡಿ ಹೋಗುತ್ತಾರೆ. ಕುಡಿತಕ್ಕೆ ಬಲಿಯಾದ ಮಗ, ಒಡೆದ ಅವರ ವೈವಾಹಿಕ ಸಂಬಂಧ ಇವೆಲ್ಲವೂಗಳು ಅವರನ್ನು ಬಾಧಿಸುತ್ತವೆ.

ಶ್ರೀಮಂತಿಕೆಯಲ್ಲಿಯೇ ಬೆಳೆದು ಬಂದ ಸೊಸೆ ಕೋಕಿಲಾ ಮಾತ್ರ ಶ್ರೀಮಂತಿಕೆಯ ಹಮ್ಮು ಬಿಮ್ಮುಗಳಿಂದ ದೂರಾಗಿ ಜೀವನದ ಸಾರ್ಥಕತೆಗೆ ಸಂಗೀತದ ಮೋರೆಹೋಗಿ ತನ್ನತನವನ್ನು ದುಡಿಸಿಕೊಳ್ಳುವುದು ಅಚ್ಚರಿಯಾದರೂ ಜೀವನದ ನೈಜ ಸಂತೋಷದ ಮೂಲವನ್ನು ತೆರೆದುತೋರುತ್ತಾಳೆ. ಆದರೆ ನಾಗಭೂಷಣ ಸಂಗೀತ ಗುರುವಿನೊಂದಿಗೆ ಸಭ್ಯಳಾದ ಆಕೆಗೆ ಸಂಬಂಧ ಕಲ್ಪಿಸಿ ಶಂಕಿಸುವುದು, ಅವರ ಸಂಸಾರ ಸಾರ ಕಳೆದುಕೊಳ್ಳುವುದು ಎಲ್ಲ ಆಧುನಿಕ ಜಗತ್ತಿನ ಲೋಪಗಳಿಗೆ ಸಂಕೇತವೆನಿಸುತ್ತದೆ. ಇವೆಲ್ಲವೂ ಜಿರ್ಣಿಸಿಕೊಳ್ಳಲಾಗದ ಮಾಸ್ತರರು ಅಂತರ್ಮುಖಿಯಾಗುತ್ತಾರೆ.

ಮಗ ಸೊಸೆ ಬೇಡವೆಂದರೂ ತಾವಾಗಿಯೇ ವೃದ್ಧಾಶ್ರಮಕ್ಕೆ ಸೇರಿಕೊಳ್ಳುತ್ತಾರೆ. ದೊಡ್ಡವನಾಗುವ ಪ್ರತೀಕ ತನ್ನಜ್ಜನ ಗುಣಗಳನ್ನೆ ಪಡೆದಂತೆ ತಂದೆತಾಯಿಯರ ಆಪೇಕ್ಷೆಗೆ ವಿರುದ್ಧವಾಗಿ ವೈಲ್ಡ್ ಲೈಫ್ ಕೋರ್ಸನ್ನು ಆಯ್ದುಕೊಂಡು ಪ್ರಕೃತಿಯತ್ತ ಮುಖ ಮಾಡುತ್ತಾನೆ. ಈ ಮಧ್ಯೆ ನಾಗೇಶ ಮಾಸ್ತರ ಹರಿದ್ವಾರಕ್ಕೆ ಹೋದವರೂ ನದಿಯಲ್ಲಿ ಮುಳುಗಿ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತದೆ. ದಾಂಪತ್ಯ ಬಿರುಕುಬಿಟ್ಟ ನಾಗಭೂಷಣ ಕೋಕಿಲಾ ಪರಸ್ಪರ ಬೇರೆಯಾಗುತ್ತಾರೆ.

ಕಾದಂಬರಿಯ ಮೂರನೇ ಆಯಾಮದಲ್ಲಿ ಪ್ರತೀಕ ತನ್ನ ಕಾಡಿನ ಅದ್ಯಯನದಲ್ಲಿ ಸಿಂಗಳೀಕಗಳ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಿ ಕತ್ತಲೆಕಾನಿಗೆ ಬರುತ್ತಾನೆ. ಅಲ್ಲಿ ಗಣಪುವಿನ ಮಗಳು ಆತನ ಆಕರ್ಷಿಸುತ್ತಾಳೆ. ಕಾಡಿನ ರಕ್ಷಣೆಗೆ ತನ್ನಿಂದಾಗುವ ಪ್ರಯತ್ನಕ್ಕೆ ಸಿದ್ದನಾದರೂ ಅಲ್ಲಿಯ ಯುವ ಪೀಳಿಗೆಯವರ ಬೆಂಬಲ ಸಿಗದೇ ಇದ್ದಾಗ ಕಾಡಿನ ನೈಜ ಚಲುವನ್ನು ಹೊತ್ತು ನಿಂತ ಗಣಪುವಿನ ಮಗಳನ್ನೆ ಪ್ರೀತಿಸಿ ತನ್ನೊಂದಿಗೆ ಕರೆದೊಯ್ಯುತ್ತಾನೆ. ಕತ್ತಲೆ ಕಾನು ಆಧುನಿಕತೆಗೆ ತೆರೆದುಕೊಳ್ಳಲು ಸಿದ್ದವಾಗುತ್ತದೆ.

ಕಾದಂಬರಿಯು ಎರಡು ವಿರುದ್ಧ ಮುಖದ ವಾಸ್ತವಗಳ ಹಿಡಿದಿಡುತ್ತ ಅಲ್ಲಿಯ ಲೋಪಗಳ ತೆರೆದು ತೋರುವುದು. ಕತ್ತಲೆ ಕಾನಿನ ಯುವಜನ ಆಧುನಿಕತೆಗೆ ಎದುರುಗೊಳ್ಳಲು ಉತ್ಸುಕರಾಗುವುದು, ಅದೇ ಸಂಘರ್ಷ ಮುಂದೆ ಕತ್ತಲೆಕಾನಿನ ಜೀವಜಗತ್ತು ಸಮುದಾಯದ ಒಗ್ಗಟ್ಟು ಎಲ್ಲವನ್ನು ಛಿಧ್ರಗೊಳಿಸುತ್ತ ಮಾನವ ನಿರ್ಮಿತ ಜಗತ್ತಿನ ಕಲುಷಿತ ಪರಂಪರೆಗೆ ಸಾಕ್ಷಿಯಾಗುತ್ತದೆ. ಹೆತ್ತ ಮಗಳು ಮನೆ ಬಿಟ್ಟ ನೋವಿನೊಂದಿಗೆ ತನ್ನೊಂದಿಗೆ ತಾದ್ಯಾತ್ಮ ಭಾವ ಬೆಸೆದ ಕಾಡನ್ನು ಕಳೆದುಕೊಳ್ಳುತ್ತಿರುವ ಹತಾಶೆಯಲ್ಲಿ ಗಣಪು ಅಸಹಾಯಕತೆಗೆ ಸಾಕ್ಷಿಯಾಗಿ ನಿಲ್ಲುತ್ತಾನೆ. ಇಲ್ಲಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಕಾದಂಬರಿಕಾರ ಸ್ವತಃ ಇಂತಹ ಪ್ರದೇಶದಲ್ಲೆ ಬೆಳೆದಂತೆ ಅಲ್ಲಿಯ ಒಳಹೊರಗನ್ನು ಅರೆದು ಕುಡಿದಂತೆ ಕಾಡಿನ ಜಾಡನ್ನು ವರ್ಣಿಸಿರುವುದು ಅವರ ಪ್ರಕೃತಿ ಪ್ರೀತಿಗೆ ದ್ಯೋತಕವೆನಿಸುತ್ತದೆ.ವಿನಾಶದಂಚಿಗೆ ಸೆಳೆಯುತ್ತಿರುವ ಆಧುನಿಕತೆಯ ಸಂಚಿನ ಮೂಲಗಳನ್ನು ಕೆದಕಿ ಓದುಗನ ವಿವೇಚನೆಗೆ ಬಿಡುತ್ತಾರೆ.ಇದು ಹಲವಾರು ವಿಶ್ಲೇಷಣೆಗಳ ಕಣ್ಮುಂದೆ ನಿಲ್ಲಿಸುತ್ತದೆ.

ಕತ್ತಲೆ ಕಾನು ಮೂಲ ಬೇರಾಗಿ ಬೇರಿಗೆ ಕವಲೊಡೆದು ಕವಲಿಗೆ ಇನ್ನೊಂದು ಜೊತೆ ಬೆಳೆದು ಅವುಗಳ ಚಿಗುರುಗಳು ಮರಳಿ ಬೇರಿಗೆ ಇಳಿಯುವುದು. ಬದುಕಿನ ಓಟವು ಹಾಗೆ. ಎಲ್ಲಿಂದಲೋ ಎಲ್ಲಿಗೋ ಸೇರಿ ಸುರಳಿಯಾಗಿ ಸಾಂದ್ರವಾಗಿ ಮರಳಿ ಮಣ್ಣಿಗೆ ಕೂಡುವುದು ವಿಸ್ಮಯ.

ಆದರೆ ಪ್ರಕೃತಿಯತ್ತ ಆಕರ್ಷಿತನಾದ ಪ್ರತೀಕ ಪ್ರಕೃತಿಯ ಪ್ರತಿರೂಪವಾದ ಆತನ ಅಸಲಿ ಪ್ರೀತಿಗೆ ಸಾಕ್ಷೀಭೂತಳಾದ ಮುಗ್ಧಳನ್ನು ಆರಿಸಿಕೊಳ್ಳುವಲ್ಲಿ ತಪ್ಪಿಲ್ಲವೆನಿಸುತ್ತದೆ. ಆಧುನಿಕತೆಯ ಪೆಡಂಭೂತದೊಂದಿಗೆ ಸೆಣಸಲಾಗದೇ ಪ್ರತೀಕ ಬಂದಂತೆ ಬದುಕ ಸ್ವೀಕರಿಸುವ ಸಂದರ್ಭ ಉಂಟಾಗುತ್ತದೆ. ಅಕ್ಷರ ಕಲಿಸುವ ಆ ಮೂಲಕ ಶಿಕ್ಷಣದ ಮಹತ್ವ ಸಾರಿದ ನಾಗೇಶ ಮಾಸ್ತರರಿಗೆ ತಮ್ಮ ಮಗನ ಜ್ಷಾನ ಅಧೋಮುಖಿಯಾದದ್ದು ಸಹ್ಯವಾಗುವುದಿಲ್ಲ.

ಹೀಗೆ ಬದುಕಿನ ವಿಪರ್ಯಾಸಗಳು ಇಂತಹುದೇ ಎಂದು ಹೇಳಲಾಗದ ಮಾನವ ಮುಖಗಳ ಚಹರೆಗಳ ಅರ್ಥೈಸಲಾಗದ ಸಂಗತಿಯಾಗಿಯೂ ಕಾದಂಬರಿ ಮನ ಸೆಳೆಯುತ್ತದೆ.

ಗಂಗಾಧರ ಕೊಳಗಿಯವರ ಕತ್ತಲೆ ಕಾನು ಈ ಎಲ್ಲ ಮಾನವನ ಉಪದ್ವ್ಯಾಪಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನದಂತೆ ಕಂಡುಬರುವ ಆ ಮೂಲಕ ಭೂಮಿತಾಯಿಯ ಆಕೆಯ ಎಲ್ಲ ಕುಡಿಗಳ ಬದುಕಿನ ಹಕ್ಕನ್ನು ಪ್ರತಿಪಾದಿಸುವ ಪ್ರಯತ್ನ ಮಾಡುತ್ತಾರೆ. ಕಾದಂಬರಿ ಎರಡು ವಿಭಿನ್ನ ದಿಕ್ಕಿನಲ್ಲಿ ಚಲಿಸುತ್ತ ಇಂದಿನ ಎರಡು ಭಿನ್ನ ಸಾಮಾಜಿಕ ನೆಲೆಯ ಜನರ ಬದುಕನ್ನು ಪ್ರತಿನಿಧಿಸುತ್ತದೆ. ಕೊನೆಯಲ್ಲಿ ಎಲ್ಲ ಬದುಕಿನ ಐಕ್ಯಮಾರ್ಗದ ಕೊಂಡಿ ಒಂದೇ ಎಂಬ ಸತ್ಯವೂ ಮನಗಾಣುತ್ತದೆ,

Leave a Reply