ವಿದಾಯಕ್ಕೆಷ್ಟು ಸಂಜೆಗಳು..

ಪ್ರವರ ಕೊಟ್ಟೂರು 

ಸಂಜೆ ಸಿಕ್ಕ ಅವಳೊಟ್ಟಿಗೆ
ಕಾಫಿ ಹೀರಿದೆ,
ಹಬೆ ಚೂರು ಮೊಬ್ಬು, ಗುರುತ್ವ ಮೀರಿ ರೆಕ್ಕೆ ಹುಟ್ಟಿದ್ದು ಹೇಗೊ ತಿಳಿಯುತ್ತಿಲ್ಲ
ತುಟಿಗಂಟಿಸಿದ ಕಾಫಿ ಕಪ್ಪಿಂದ
ಹಾರಿ ರೆಪ್ಪೆಗೆ ಬಾವಲಿಯಂತೆ ನೇತು ಬಿದ್ದಿವೆ
ಕಣ್ಣು ತೋಯಿಸಿದ ಹಬೆಗೆ
ಕರುಣೆ ದೂರದ ಮಾತು

ಹೇಗಿದ್ದಿ?
ಇದ್ದೀನಿ ಹಾಗೆ, ಒಂಥರಾ ಷೋಕೇಸಿನ ಗೊಂಬೆಯ ಹಾಗೆ
ಯಾರೋ ಖುಷಿಗೆ
ಕೀಲಿ ಕೊಟ್ಟಾಗ ತಡವರಿಸಿ ಮಾತಾಡುತ್ತೇನೆ,
ಸಾಕೆನ್ನಿಸಿ ಷೋಕೇಸಿಗೆ ನೂಕಿದಾಗ
ಮೌನವಾಗುತ್ತೇನೆ ಬೀಗ ಹಾಕಿಕೊಂಡು
ಒಂಥರಾ ಚೆನ್ನಾಗಿದ್ದೇನೆ ಅಂದುಕೋ

ಮುಳ್ಳು ಗಿರಕಿ ಹೊಡಿಯುತ್ತದೆ
ಗ್ರಹದ ಹಾಗೆ,
ಸುಮ್ಮನೆ ನಿಲ್ಲುವ ಜಾಯಮಾನದ್ದಲ್ಲ
ಕಿವಿ ತುಂಬಿಕೊಂಡ ವಾಚಿನ ಸದ್ದಿಗೆ
ಸಣ್ಣಗೆ ನಡುಗುತ್ತಾಳೆ,
ಬರ್ಫಿನ ಚಾದರ ಹೊದ್ದ ಆಕೆಯ ನೀಲಿ ಕಣ್ಣುಗಳಲ್ಲಿ
ಬೆದರಿದ ಮೊಲ

ಬೆರಳಿಗೆ ಬೆರಳು ಬೆಸೆದು
ಸಣ್ಣ ಗೂಡು, ಪುಟ್ಟ ಹಕ್ಕಿಯಂಥ ಬೆಚ್ಚಗಿನ ಗಾಳಿ
ಮುಖ ಮಡಿಚಿ ಮೈ ಮುದುರಿ
ಬಡಿದುಕೊಳ್ಳುವ ನಾಡಿಗೆ ಕಿವಿಯಾಗುತ್ತದೆ
ಸಡಿಲಗೊಳಿಸಿದಷ್ಟೂ ಬೆರಳಿಗೆ ಕೋಳ ಬೀಳುತ್ತದೆ
ಅವಳು ಹೊರ ಬರದ
ನಾನು ಒಳ ಹೋಗದ
ಅಂಗೈಯ ಪಂಜರಕ್ಕೆ ಬಾಗಿಲಿಲ್ಲ

ತುಂಬಾ ನೋಡ್ಬೇಕನ್ನಿಸ್ತಿತ್ತು!
ನಿದ್ರೆ ಹತ್ತದ ರಾತ್ರಿ
ತುಂಬು ಚಂದ್ರನ ಕೊಲೆಯ ಕನಸು
ಕನ್ನಡಿಯ ಮುಂದೆ ನಿಂತಾಗ
ತುರುಬಿನಲ್ಲಿ ರಕ್ತ ಮೆತ್ತಿದ ಚೂರಿ
ಕೊಲೆಯ ಪಾಪ ನನಗೋ ಪ್ರೀತಿಗೋ

ನಾಳೆ ರಾತ್ರಿಗೂ…ಕನಸಿಗೂ…
ಜೀವವಿದೆ,
ನೋಡು, ನಾನು ಇದ್ದೇನೆ
ಮೋಡಗಟ್ಟುತ್ತೇನೆ ಮತ್ತೆ ಮತ್ತೆ,
ಅಂದುಕೊಂಡ ಆಕಾರಕ್ಕೆ
ನಿನ್ನ ಕಣ್ಣಿನೊಳಗೆ

ಕಪ್ಪಿನ ತಳಕ್ಕುಳಿದ ಎಂಜಲಿಗೆ
ಕಣ್ಣಿಂದ ಬಿದ್ದ ಹನಿಯ ಆಲಿಂಗನವೆಷ್ಟು ಕ್ರೂರ,
ಬೆರಳು ಬಿಡಿಸಿ ಹೊರಟ ಸಣ್ಣ ದನಿಯಲ್ಲಿ
“ಮತ್ತೆ ಸಿಗುತ್ತೇನೆ”

ವಿದಾಯಕ್ಕೆಷ್ಟು ಸಂಜೆಗಳು

2 Responses

  1. K Nalla Thambi says:

    ಹಹಹ… ಪವನ್…

Leave a Reply

%d bloggers like this: