ನೆಲಮೂಲದಲ್ಲಿ ಬರೆಯುವ ‘ಅಷ್ಟೆ’

 

 

ರಾಜು ಅಷ್ಟೆ ಎಂಬ ವಿಶಿಷ್ಟ ಹೆಸರನ್ನು ಇಟ್ಟುಕೊಂಡಿರುವ ಅಡ್ಲೂರ್ ರಾಜು ಅವರ ‘ಚರ್ಮಾಯಿ’ ಕೃತಿ ಹೆಬ್ಬಗೋಡಿ ಗೋಪಾಲ ಮತ್ತು ಎಂ ಜಮುನ ದತ್ತಿನಿಧಿ ಪ್ರಶಸ್ತಿಗೆ ಪಾತ್ರವಾಗಿದೆ. 

-ಶ್ರೀದೇವಿ ಕೆರೆಮನೆ 

 

ಒಂದು ಕೃತಿಯನ್ನು ನೆಲಮೂಲದಲ್ಲಿ ಬರೆಯುವುದು ಎಷ್ಟೊಂದು ಕಷ್ಟ ಎನ್ನುವುದು ಬರವಣಿಗೆಯ ಕ್ಷೇತ್ರದಲ್ಲಿ ಇರುವ ಎಲ್ಲರಿಗೂ ಗೊತ್ತಿದೆ.

ಆದರೆ ರಾಜು ಅಷ್ಟೆ ಎಂಬ ವಿಶಿಷ್ಟ ಹೆಸರನ್ನು ಇಟ್ಟುಕೊಂಡಿರುವ ಅಡ್ಲೂರ್ ರಾಜು ಒಂದು ಇಡೀ ಕಾದಂಬರಿಯನ್ನು ನೆಲಮೂಲದಲ್ಲಿ ಬರೆಯುವ ಹುಚ್ಚು ಸಾಹಸಕ್ಕೆ ಯಾಕೆ ಕೈ ಹಾಕಿದ್ದಾರೋ ನಿಜಕ್ಕೂ ನನಗೆ ಆಶ್ಚರ್ಯ ಎನಿಸುತ್ತಿದೆ. ಹಾಗೆ ನೋಡಿದರೆ ಇದನ್ನು ಹುಚ್ಚು ಸಾಹಸ ಎನ್ನದೇ ವಿಧಿ ಇಲ್ಲ.

ಯಾಕೆಂದರೆ ಒಂದು ನೆಲಮೂಲದ ಸಾಹಿತ್ಯವನ್ನು ಬರೆಯುವುದು ಅಷ್ಟು ಸುಲಭವಲ್ಲ. ಪ್ರಾದೇಶಿಕ ಉಚ್ಛಾರವನ್ನು ಗ್ರಂಥಸ್ಥ ಭಾಷೆಯ ಉಚ್ಚಾರದಂತೆ ಸುಲಭವಾಗಿ ಅಕ್ಷರಕ್ಕಿಳಿಸಲಾಗುವುದಿಲ್ಲ. ಭಾಷೆಯ ಮೇಲಿನ ಹಿಡಿತ, ಸಾಮಾಜಿಕ ಒಳನೋಟ, ಸುತ್ತಲಿನ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವ ಮತ್ತು ಅದನ್ನು ದಾಖಲಿಸುವ ಚಾಕಚಕ್ಯತೆ ಎಲ್ಲವನ್ನೂ ಬೇಡುತ್ತದೆ.

ಹಿಂದೆಲ್ಲ ಎಷ್ಟೋ ಕಾದಂಬರಿಕಾರರು ನೆಲಮೂಲದಲ್ಲಿ ಬರೆದಿದ್ದಾರೆ. ಪ್ರಾದೇಶಿಕ ಭಾಷೆಯಲ್ಲಿ ಬರೆದು ಯಶಸ್ವಿಯಾದವರಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಯ ಸೊಗಡು ನಿಧಾನವಾಗಿ ಮಾಯವಾಗುತ್ತಿದೆ. ಕರ್ನಾಟಕದ ಒಂದು ಕಡೆಯ ಪ್ರಾದೇಶಿಕ ಭಾಷೆಯನ್ನು ಕರ್ನಾಟಕದ ಇನ್ನೊಂದು ಭಾಗದಲ್ಲಿ ಅರ್ಥೈಸಿಕೊಳ್ಳುವುದು ಕಷ್ಟ ಎಂಬುದು ಒಂದು ಕಾರಣವಾದರೆ ನಾವೆಲ್ಲ ನಗರ ಕೇಂದ್ರಿತ ಜೀವನದತ್ತ ವಾಲುತ್ತಿರುವುದರಿಂದ ಹಳ್ಳಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಬರೆಯುವ ಸಾಹಿತ್ಯ ಕಡಿಮೆಯಾಗುತ್ತಿರುವುದೂ ಇರಬಹುದು.

ಎಲ್ಲಕ್ಕಿಂತ ಹೆಚ್ಚಾಗಿ ನಗರ ಕೇಂದ್ರಿತವೂ ಬೆಂಗಳೂರಿನತ್ತಲೇ ಮುಖಮಾಡಿರುವುದರಿಂದ ಬೆಂಗಳೂರಿನ ಪಾಲಿಷ್ಡ್ ಭಾಷೆಯೇ ಶ್ರೇಷ್ಟ ಎಂಬ ಭಾವನೆ ಎಲ್ಲರಲ್ಲೂ ಮೊಳಕೆಯೂರಿಬಿಟ್ಟಿದೆ. ಹೀಗಾಗಿ ಆಯಾ ಪ್ರಾದೇಶಿಕ ಭಾಷೆಯಲ್ಲಿ ಬರೆಯುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಅದರಲ್ಲೂ ಉತ್ತರ ಕನ್ನಡ ಉಳಿದ ಕಡೆಯಂತಲ್ಲದೇ ಪ್ರತಿಯೊಂದು ಜನಾಂಗಕ್ಕೂ, ಪ್ರತಿಯೊಂದು ಉಪಜಾತಿಗೂ ಪ್ರತ್ಯೇಕ ಭಾಷೆಯನ್ನು ಕಾಯ್ದುಕೊಂಡ ಜಿಲ್ಲೆಯಾದ್ದರಿಂದ ಇಲ್ಲಿನ ಪ್ರಾದೇಶಿಕ ಸೊಗಡನ್ನು ಹೇಳುವುದು ತುಂಬಾ ಕಷ್ಟ ಎಂದೇ ಹೇಳಬೇಕು.

ಹೊರಗಿನಿಂದ ಕೇಳುಗರಿಗೆ ಎಲ್ಲಾ ಉಚಾರವೂ ಒಂದೇ ಎಂದೆನಿಸಿದರೂ ಅಲ್ಲಿಯೇ ವಾಸಿಸುವವರಿಗೆ ಅಲ್ಲಿನ ಸೂಕ್ಷ್ಮ ವ್ಯತ್ಯಾಸ ಗೋಚರವಾಗುತ್ತದೆ. ನಾಡವರ ಭಾಷೆ ಬೇರೆ, ನಾಮಧಾರಿಗಳ ಮಾತು ಬೇರೆ, ಹಾಲಕ್ಕಿಗಳ ಉಚ್ಛಾರ ಬೇರೆ, ಕೋಮಾರಪಂಥ ಸಮಾಜದ ಮಾತು ಇನ್ನೊಂದು ವಿಧ, ಹವ್ಯಕರ ಧ್ವನಿಯ ಏರಿಳಿತವೇ ಭಿನ್ನ, ಖಾರ್ವಿ, ಹರಿಕಂತರು, ಮೊಗೆರರು, ಅಂಬಿಗರು ಹೀಗೆ ಎಲ್ಲಾ ಜನಾಂಗಗಳೂ ತಮ್ಮದೇ ಜನಾಂಗಕ್ಕೆ ಸೇರಿದ ಬೇರೆ ಬೇರೆ ಉಚ್ಛಾರಣೆಯ ಮಾತುಗಳನ್ನೇ ಆಡುತ್ತಾರೆ.

ಹೀಗಾಗಿ ಇಲ್ಲಿನ ಭಾಷೆ ಬಳಸುವಾಗ ಒಂದಿಷ್ಟು ಹಿಡಿತ ತಪ್ಪಿದರೂ ಅದು ಮೂಲತೆಗೆ ಹೊರತಾಗಿ ಬಿಡುವ ಋಣಾತ್ಮಕತೆಯಿದೆ. ಇಡೀ ಕಾದಂಬರಿಯ ನಿರೂಪಣೆ ಸಾಮಾನ್ಯ ಕನ್ನಡವೇ ಆಗಿದ್ದರೂ ಪಾತ್ರಗಳ ಸಂಭಾಷಣೆ  ಮಾತ್ರ ಹಾಲಕ್ಕಿಗಳ ಆಡು ಮಾತಲ್ಲಿದೆ. ಅಂಕೋಲೆಯಲ್ಲಿ ಬಹುಸಂಖ್ಯಾತ ಜನಾಂಗವಾಗಿರುವ ಹಾಲಕ್ಕಿ ಒಕ್ಕಲಿಗರ ಭಾಷೆಯನ್ನು ಬಳಸಿಕೊಳ್ಳಲಾಗಿದ್ದು ಅದು ಕಥೆಗೆ ಪ್ಲಸ್ ಪಾಂಯಿಂಟ್.

ಹೆಚ್ಚಿನ ನೆಲಮೂಲದ ಕಾದಂಬರಿಯ ಅಪಾಯವೆಂದರೆ ಅದರ ಏಕತಾನತೆ. ಬಹುತೇಕ ನೆಲಮೂಲ ಎಂದುಕೊಂಡ ಕಾದಂಬರಿಗಳು ನೀರಸವಾಗಿ ಓದಿಸಿಕೊಂಡು ಹೋಗುವ ಹೊತ್ತಿನಲ್ಲಿ ರಾಜು ಅದಕ್ಕೆ ಆಸ್ಪದ ನೀಡದಂತೆ ಬರೆದಿರುವುದು ಈ ಕಾದಂಬರಿಯ ಹೆಗ್ಗಳಿಕೆ ಎಂದೇ ಹೇಳಬೇಕು.

ಮುಖ್ಯವಾಗಿ ನಾವಿಲ್ಲಿ ಗಮನಿಸಬೇಕಾದದ್ದು ಕಾದಂಬರಿಗಾಗಿ ಆಯ್ದುಕೊಂಡ ವಸ್ತು ವಿಷಯ. ಹೆಣ್ಣಿಗೆ ದೇವಾಲಯದ ಗರ್ಭಗುಡಿಯೊಳಗೆ ಹೋಗುವುದಕ್ಕೇ ಆಸ್ಪದವಿರದ ನಮ್ಮ ಸಮಾಜದಲ್ಲಿ ಋತುಮತಿಯಾದ ಹೆಣ್ಣು ದೇವರ ಶಿಲೆಯನ್ನು ಮುಟ್ಟಿದರೆ ಏನಾಗುತ್ತದೆ ಎಂಬ ಬಹು ಚರ್ಚಿತ ವಿಷಯದ ಎಳೆಯನ್ನು ಹಿಡಿದುಕೊಂಡು ಕಾದಂಬರಿಯನ್ನು ಬೆಳೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶನಿ ದೇವಾಲಯದ ಒಳಗೆ ಪ್ರವೇಶ ಮಾಡಲು, ಕೇರಳದ ಶಬರಿಮಲೆಗೆ ಹೋಗಲು ಇನ್ನೂ ಹೆಣ್ಣುಮಕ್ಕಳು ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕವಾಗಿ ಬಹಿಷ್ಟೆ ಎಂದು ಕರೆಯುವ ಆ ಸಂದಿಗ್ಧ ಸ್ಥಿತಿಯಲ್ಲಿ ಜಾತ್ರೆಯ ಹೊತ್ತಿಗೆ ದೇವಾಲಯವನ್ನು ಪ್ರವೇಶಿಸುವ ತೀರ್ಮಾನ ಕಾದಂಬರಿಯ ಮುಖ್ಯ ತಿರುವುಗಳಲ್ಲೊಂದು.

ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಸ್ವಚ್ಛತೆಗೆ ಅಗತ್ಯವುಳ್ಳ ಸ್ಯಾನಿಟರಿ ಪ್ಯಾಡ್‍ಗಳು ದೊಡ್ಡಮಟ್ಟದ ಸದ್ದು ಮಾಡುತ್ತಿರುವಾಗ ಈ ಕಾದಂಬರಿ ತೀರಾ ಪ್ರಸ್ತುತವೆನಿಸುತ್ತದೆ. ಪ್ರಕೃತಿ ಸಹಜವಾದ ನೈಸರ್ಗಿಕ ಕ್ರಿಯೆಯನ್ನು ಮೈಲಿಗೆ ಎಂದು ಬಿಂಬಿಸುವುದರ ವಿರುದ್ಧ ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ನಾಲ್ಕಾರು ವರ್ಷಗಳಿಂದ ಚರ್ಚೆಯಾಗುತ್ತಲೇ ಬಂದಿದೆ. ಸಂತಾನೋತ್ಪತ್ತಿ ಸಂಬಂಧಿಸಿದ ಜೀವ ವಿಕಾಸಕ್ಕೆ ಪೂರಕವಾದ ಋತುಸ್ರಾವ ಅನಾದಿಕಾಲದಿಂದಲೂ ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಯಿಂದ ಹೊರಗಿಡಲು ಪುರುಷ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಲೇ ಇದ್ದಾನೆ. ಅಂತಹುದ್ದೊಂದು ವಸ್ತು ವಿಷಯವನ್ನಿಟ್ಟುಕೊಂಡು ಬರೆದ ಕಾದಂಬರಿ ಮೊದಲ ಓದಿಗೇ ಸುಲಭವಾಗಿ ಮನದಾಳಕ್ಕೆ ಇಳಿಯುತ್ತದೆ.

ಕಾದಂಬರಿಯಲ್ಲಿ ಬರುವ ಊರಿನ ಹೆಸರು, ಪಾತ್ರಗಳ ಹೆಸರುಗಳೂ ತೀರಾ ಆಕರ್ಷಕವಾಗಿದೆ. ಕುಂಕುಮಗ್ರಾಮ ಎಂಬುದೊಂದು ಹಳ್ಳಿ. ಬಹುತೇಕ ಅಂಕೋಲೆಯ ಸುತ್ತುಮುತ್ತಲಿನವರಿಗೆ ಆ ಊರಿನ ವಿವರಣೆಯಿಂದಲೇ ಅದು ಎಲ್ಲಿ ಬರಬಹುದು ಎಂಬ ಕಲ್ಪನೆ ಮಾಡಿಕೊಳ್ಳಬಹುದು. ಕಾದಂಬರಿಯ ಇಡೀ ಕಥೆ ಸುತ್ತಿ ಸುಳಿಯುವುದು ಸುಮಕೇತು ಹಾಗೂ ಪರಿಧಿ ಎನ್ನುವ ಎರಡು ಪಾತ್ರಗಳ ಸುತ್ತ. ಇದರ ನಡುವೆ ಸುಮಕೇತು ಕೈವಲ್ಯ ಎಂಬ ಹುಡುಗಿಯನ್ನು ಮದುವೆ ಆಗುವುದು ಮತ್ತು ಮದುವೆ ಆದ ವೇಗದಲ್ಲಿಯೇ ಅವಳನ್ನು ಕಳೆದುಕೊಳ್ಳುವುದು ನಡೆದು ಹೋಗುತ್ತದೆಯಾದರೂ ಕಾದಂಬರಿಯ ಪ್ರಾರಂಭದಲ್ಲಿ ಇದೇ ಕೈವಲ್ಯ ಸುಮಕೇತುವಿನ ಹಾಗೂ ಪರಿಧಿಯ ಸೆಳೆತದ ಮೂಲ ಸೆಲೆಯನ್ನು ಗುರುತಿಸಿದ ಹಾಗೆ ಕಥೆ ಮುಂದುವರೆಯುತ್ತದೆ.

ಕೈವಲ್ಯ ಗುರುತಿಸಿದಂತೆ ಸಮಾಜದ ಜಾತಿ ಪದ್ದತಿಯನ್ನು ಮುರಿಯಲು ಆತನ ಹೋರಾಟಕ್ಕೆ ಪ್ರೇರಣೆಯಾಗಿ, ಏಣಿಯಾಗಿ ಜೊತೆಗಿರುವ ಆತನ ಧರ್ಮವಿರೋಧಿ ನಡವಳಿಕೆಗೂ, ಹೊಸ ಹಾದಿಯ ಅನ್ವೇಷಣೆಗೂ ಮರುಗುವ ಮನಸ್ಸುಗಳ ಹಿತಕ್ಕಾಗಿ ಹೊರಡುವ ಸುಮಕೇತುವಿನ ಎಲ್ಲಾ ಕೆಲಸಕ್ಕೂ, ಕೊನೆಗೆ ಆತನ ಯೌವನಕ್ಕೂ ಪರಿಧಿ ಜೊತೆಯಾಗುವುದನ್ನು ಕೈವಲ್ಯ ಗುರುತಿಸಿಕೊಂಡಿದ್ದಾಳೆ. ಮುಟ್ಟಾದ ಹೆಣ್ಣು ದೇಗುಲ ಪ್ರವೇಶಕ್ಕೆ ಅರ್ಹಳಲ್ಲ ಎಂಬುದನ್ನು ಪ್ರಶ್ನಿಸಿ ಹೊರಡುವ ಪರಿಧಿ ಮೂಲತಃ ಸಮಾಜ ಹೇಳುವ ಕೆಳವರ್ಗದವಳು. ಅವಳ ಜನಾಂಗವನ್ನು ಮುಟ್ಟಿಸಿಕೊಳ್ಳುವುದೂ ಪಾಪ ಎಂದುಕೊಳ್ಳುವ ಮೇಲ್ವರ್ಗದವರ ಎದುರು ಕೇವಲ ತನ್ನ ಜನಾಂಗವನ್ನಷ್ಟೆ ದೇಗುಲ ಪ್ರವೇಶಕ್ಕೆ ಕೇಳದೇ, ಮೇಲ್ವರ್ಗದವರು ಮುಟ್ಟಾದ ಹೆಣ್ಣನ್ನೂ ಮುಟ್ಟಿಸಿಕೊಳ್ಳದ ಬಹಿಷ್ಟೆ ಎಂದು ತಿರಸ್ಕರಿಸುವುದನ್ನು ಪ್ರಶ್ನಿಸುತ್ತ ಮುಟ್ಟಾದ ಹೆಣ್ಣನ್ನು ದೇವಾಲಯ ಪ್ರವೇಶಕ್ಕೆ ಅನುವುಮಾಡಬೇಕೆಂದು ಓಡಾಡುತ್ತಾಳೆ.

ಅವಳ ಈ ಪ್ರಯತ್ನ ಊರವರ ದೃಷ್ಟಿಯಲ್ಲಿ ಘೋರ ಅಪರಾಧ ಎನ್ನಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಸೃಷ್ಟಿ ಸಹಜ ಕ್ರಿಯೆಯ ಬಗ್ಗೆ ಹೆಣ್ಣೂ ಕೂಡ ತಿರಸ್ಕಾರ ಭಾವನೆಯಿಂದ ನೋಡುವುದು, ಎಗ್ಗುಸಿಗ್ಗಿಲ್ಲದ ಹುಡುಗಿ ಎಂಬಂತೆ ಊರಿನ ಮಾನವಂತರೆನಿಸಿಕೊಂಡವರು ಮಾತನಾಡುವುದು ಖೇದವೆನಿಸುತ್ತದೆ. ಒಟ್ಟಿನಲ್ಲಿ ಕಾದಂಬರಿ ಒಂದು ಚಂದದ ವಿಷಯವನ್ನಿಟ್ಟುಕೊಂಡು, ಸುಂದರವಾದ ನಿರೂಪಣೆಯಿಂದ ಸಾಗುವುದು ಕಾದಂಬರಿಕಾರನ ಕರ್ತೃತ್ವ ಶಕ್ತಿಯನ್ನು ಅನಾವರಣಗೊಳಿಸುತ್ತದೆ.

ಇಷ್ಟಾಗಿಯೂ ಕಾದಂಬರಿ ಕೆಲವೊಂದು ಹಂತದಲ್ಲಿ ಅಲ್ಲಲ್ಲಿ ಎಡವುತ್ತದೆ.

ಹೆಣ್ಣೆಂದರೆ ಹೀಗಿರಬೇಕು ಎಂಬ ಮೆಚ್ಚುಗೆಗಳಿಸಿಕೊಳ್ಳುವ ಪರಿಧಿ ವಿಷಾದವೆಂದರೆ ತನ್ನ ಧೈರ್ಯಕ್ಕೆ ನಿದರ್ಶನವೆಂಬಂತೆ ಊರವರು ಹೇಳಿದಂತೆ ತಾನು ಸುಮುಖನೊಂದಿಗೆ ಸುಖಿಸಿದ್ದೇನೆ ಎಂಬ ಮಾತನ್ನು ನಿಜ ಮಾಡಲು ಹೊರಡುವುದು ಮತ್ತು ಆ ಸಂದರ್ಭದಲ್ಲಿ ತನ್ನ ಸಾಮಾಜಿಕ ಹೋರಾಟವನ್ನು ತನ್ನ ಶಕ್ತಿಯಂತೆ ಬಳಸುವ ಸುಮಕೇತು ನೈತಿಕತೆಯ ಪ್ರದರ್ಶನ ಮಾಡದೇ ಸಿಕ್ಕಿದ್ದೇ ಅವಕಾಶ ಎಂಬತೆ ಅವಳನ್ನು ಒಪ್ಪಿಕೊಳ್ಳುವುದು ಇಂದಿನ ಹೋರಾಟದ ಬದುಕಿನ ದುರಂತವನ್ನು ಹೇಳುತ್ತಿರುವಂತೆ ಭಾಸವಾಗುತ್ತದೆ.

ಮಿಲನದ ಸಂದರ್ಭದ ವಿವರಣೆಗಳು ನಾರದ ಮಹರ್ಷಿಗಳು ವೇಶ್ಯೆಯರ ಬೀದಿಯಲ್ಲಿ ಓಡಾಡಿದ ಕಾವ್ಯವನ್ನು ನೆನಪಿಗೆ ತರುವಂತೆ ಭಾಸವಾಗುತ್ತದೆ. ಪ್ರತಿ ಮಿಲನಕ್ಕೂ ವಿವರಣೆಗಳು ನಾಲ್ಕೈದು ಪುಟಗಳನ್ನು ನುಂಗಿಹಾಕುವುದು ಅಗತ್ಯಕ್ಕೆ ಮೀರಿದ್ದೆನಿಸುವುದರ ಜೊತೆಯಲ್ಲಿ ನಮ್ಮ ಸಹನೆಯನ್ನು ಪರೀಕ್ಷಿಸುತ್ತದೆ.

ಇನ್ನೇನು ಎಲ್ಲವೂ ಸುಖಾಂತವಾಯಿತು ಎಂದುಕೊಳ್ಳುವಾಗಲೇ ಬಂಡಾಯದ ಹಾದಿಯಲ್ಲಿ ನಡೆದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸುಮಕೇತು ಹಾಗೂ ಪರಿಧಿಯರು ಹೋರಾಟದಲ್ಲಿ ಜಯಗಳಿಸಿ ಊರಿಗೆ ಹಿಂದಿರುಗುವಾಗ ಸುಮಕೇತುವಿನ ಕೊಲೆ ಆಗುವುದು ಮತ್ತೆ ಹಳೆಯ ಸಂಪ್ರದಾಯಕ್ಕೆ ಬೆಂಬಲ ಕೊಟ್ಟಂತೆ ಭಾಸವಾಗುತ್ತದೆ. ಅದಕ್ಕಿಂತ ಬೇಸರವೆಂದರೆ ಸುಮಕೇತು ಸತ್ತ ನಂತರ ತೀರಾ ಸಂಪ್ರದಾಯವಾದಿಯಂತೆ ಪರಿಧಿ ತನ್ನ ಬಳೆಗಳನ್ನೆಲ್ಲ ಒಡೆದುಕೊಂಡು, ಕುಂಕುಮ ಒರೆಸಿಕೊಂಡು ಅಚ್ಚರಿ ಕಾರಣಳಾಗುತ್ತಾಳೆ.

ಸುಮಕೇತು ಮತ್ತು ಪರಿಧಿಗೆ ಮದುವೆ ಮಾಡಿಸಿ ಆತನ ಮನೆಯವರು ಒಪ್ಪಿಕೊಳ್ಳುವಂತೆ ಮಾಡಿದ್ದರೂ ಸಾಕಿತ್ತು ಅಥವಾ ಸುಮಕೇತು ಸಾಯಲೇಬೇಕಾಗಿದ್ದ ಪಾತ್ರವಾಗಿದ್ದರೆ ಪರಿಧಿ ಮತ್ತಷ್ಟು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಯುವತಿಯ ಆತ್ಮಸ್ಥೈರ್ಯ ಹೆಚ್ಚಿಸುವ ಹೆಣ್ಣಾಗಿ ಚಿತ್ರಿತವಾಗಿದ್ದರೂ ಸಾಕಿತ್ತು. ಕಾದಂಬರಿಗೊಂದು ಚಂದದ ಹಾಗೂ ತಾರ್ಕಿಕವಾದ ಅಂತ್ಯ ಸಿಗುತ್ತಿತ್ತು.

ಇಷ್ಟಾದರೂ ಇದು ರಾಜುರವರ ಪ್ರಥಮ ಕಾದಂಬರಿ ಎಂಬುದನ್ನು ಗಮನದಲ್ಲಿ ಇರಿಸಿಕೊಂಡರೆ ಸಣ್ಣಪುಟ್ಟ ಎಡರುಗಳ ನಡುವೆಯೂ ಕಾದಂಬರಿ ರಚನೆಯಲ್ಲಿ ರಾಜು ಹಿಡಿತಸಾಧಿಸುತ್ತಾರೆ ಮುಂದಿನ ದಿನಗಳಲ್ಲಿ ಮತ್ತಿಷ್ಟು ಕಾದಂಬರಿಗಳನ್ನು ನೀಡಲು ಶಕ್ತರಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

Leave a Reply