ಹೂವಿನ ನಿದಿರೆಗೆ ಸೋಬಾನ ಹಾಡಿ

 

 

 

ನಿಝಾಮ್ ಗೋಳಿಪಡ್ಪು

 

 

 

 

ತೇಲಿದ ಹೂ

ಮೊಲೆಹಾಲು ಬತ್ತದ
ತುಟಿಗಳನ್ನೆಲ್ಲ ಸೀಳಿ
ಶಾಂತಿಕುಂಡದಲ್ಲಿ ಬೇಯಿಸಲಾಗುತ್ತಿದೆ
ಬೋಧಿವೃಕ್ಷದಡಿಯಲ್ಲಿ ಹಿಂಸೆಯ ನೆರಳೇ ಅಡ್ಡಾಡುತಿದೆ

ಮೊಗ್ಗಿನಲ್ಲೇ ಸುಟ್ಟ ಹೂವುಗಳೆಲ್ಲ
ಮ್ಯಾನ್ಮಾರ್ ಮಸಣದಲ್ಲಿ
ಬಿದ್ದುಕೊಂಡಿವೆ
ವಾಸನೆ ಬರಬಾರದೆಂದು
ಶಾಂತಿದೂತರೆಲ್ಲ ಮೂಗು
ಮುಚ್ಚಿದ್ದಾರೆ

ಬಿಳಿ ಪಾರಿವಾಳ ಹಾರಿಸುವ
ಕೈಗಳೆಲ್ಲವೂ ನೆತ್ತರ ಮೆತ್ತಿಕೊಂಡಿದೆ
ತೊಳೆದು ಬಿಟ್ಟ ಬರ್ಮಾ ನದಿಗಳೆಲ್ಲವೂ ಕೆಂಬಣ್ಣವಾಗಿದೆ

ಧರ್ಮದ ಕೊಳೆ ಹೋಗುವಷ್ಟು
ನೀರಿನಲ್ಲಿ ತೊಳೆದುಬಿಡಿ
ಮಾನವತಾವಾದಿಗಳೆಲ್ಲ ಬನ್ನಿ
ಹೂವಿನ ನಿದಿರೆಗೆ ಸೋಬಾನ ಹಾಡಿ..!

Leave a Reply