ಆಗಲೂ ಜನ ಒಂದೂ ಮಾತನಾಡಲಿಲ್ಲ!!

ಡಾ ಶ್ರುತಿ ಬಿ ಆರ್ / ಮೈಸೂರು

 

ಅವಳು ಅಲಂಕರಿಸಿಕೊಂಡು

ಬಾಗಿಲಲ್ಲಿ ನಿಂತಳು

ಜನ ವಯ್ಯಾರಿ, ಸುಪ್ಪನಾತಿ

ಎಂದೆಲ್ಲ ಮೂದಲಿಸಿದರು,

ಅವಳು ಬೀದಿಯಲಿ ಬಂದಾಗ

ಅವಳ ಇತಿಹಾಸವನ್ನೇ

ಜಗಿ ಜಗಿದು ಅವಳತ್ತಲೇ

ಉಗುಳಿದರು!

 

ಅವಳ ಮನೆಗೊಬ್ಬ ಗಂಡಸು

ಬಂದು ಹೋಗುವಾಗ,

ಇಂಥ ಹೊಲಸು ಹೆಂಗಸು

ಇಲ್ಲಿರಬಾರದಿತ್ತೆಂದರು,

ಅವಳಿಗೆ ಇನ್ನೊಬ್ಬಳ ಗಂಡ

ಕಾಸಿನ ಸರ ಕೊಟ್ಟಾಗ

ಮನೆಮುರುಕಿ

ಎಂದು ಮೂತಿ ತಿವಿದರು!

 

 

 

 

 

 

 

 

 

 

 

ಅವಳು ಬಸುರಾದಳು

ಛೆ ಛೆ ಇದಕ್ಕೆ ಮಗು ಬೇರೆ

ಕೇಡು, ಮಾನಗೇಡಿ

ಎಂದು ಕುಹಕವಾಡಿದರು,

ಅವಳ ಕೂಸು ಹುಟ್ಟಿತು

ಕಂಡ ಕಂಡಲೆಲ್ಲ

ಸೂಳೆ ಮಗನೆಂದೇ ಕರೆದು

ಅಣಕವಾಡಿ ನಕ್ಕರು!

 

ಅವಳು ಕಾಯಿಲೆ ಬಿದ್ದಳು

ಹಾಸಿಗೆ ಹಿಡಿದಳು,

ಸಂಪಾದನೆ ಶೂನ್ಯವಾಯಿತು

ಯಾರೂ ಮಾತನಾಡಲಿಲ್ಲ!

ಅವಳ ಕಂದ ಹಸಿವಿನಿಂದ

ಕಸದ ತೊಟ್ಟಿಯಲ್ಲಿ

ಹಳಸಿದನ್ನ ಆಯ್ದು ತಿಂದ

ಆಗಲೂ ಜನ ಸುಮ್ಮನಿದ್ದರು!

 

ಅವಳ ಮನೆ ಮಾಲಿಕ

ಬಾಡಿಗೆ ಕೊಡಲಿಲ್ಲೆಂದು

ತಾಯಿ ಮಗುವ ಹೊರತಳ್ಳಿದ,

ರಸ್ತೆ ಬದಿಯ ಮರದಡಿ

ನಿತ್ರಾಣಳಾಗಿ ಬಿದ್ದಿದ್ದಳು

ಮೂಳೆ ಚಕ್ಕಳವೇ ಆಗಿದ್ದ

ಮಗು ತಾಯಿಗಂಟಿ ಕುಳಿತಿತ್ತು

ಎಲ್ಲರೂ ನಿಂತು ನೋಡಿದರು!

 

ರಾತ್ರಿಯಿಡಿ ಸುರಿದ ಮಳೆ

ಶೀತದಿಂದ, ಹಸಿವಿನಿಂದ

ಅವಳು, ಅವಳ ಮಗು

ಬೀದಿ ಹೆಣವಾದರು!

ಕಾರ್ಪೊರೇಷನ್ ಶವದ ಗಾಡಿ

ಕೃಶ ದೇಹಗಳ ಹೊತ್ತೊಯ್ದಿತ್ತು

ಆಗಲೂ ಜನ ಒಂದೂ

ಮಾತನಾಡಲಿಲ್ಲ!!

 

4 Responses

 1. Sachinkumar Hiremath says:

  ಡಾ.ಶ್ರುತಿಯವರೇ,
  ನಿಮ್ಮ ಕವಿತೆಗಳನ್ನು ಓದಿದಾಗಲೆಲ್ಲ ಒಂದರ್ಧ ತಾಸು ಯೋಚಿಸದೇ ನಿರ್ಗಮಿಸಲು ಬಿಡುವುದೇ ಇಲ್ಲ. ಅದೆಷ್ಟು ಪ್ರಸ್ತುತ? ಕಣ್ಣ ಎದುರಲ್ಲೇ ಸರಿದ ಹಾಗಾಗುತ್ತವೆ ನಿಮ್ಮ ಕವಿತೆಯ ಭಾವಗಳು..
  ಅಭಿನಂದನೆಗಳು..
  ನಿಮಗೆ..
  ಹಾಗೂ

  ಅವಧಿಗೆ..

 2. Santosh says:

  Nice one!

Leave a Reply

%d bloggers like this: