ಹನೂರರ ‘ಕಾಲುದಾರಿಯ ಕಥನ’

 

 

 

ನಾಗಭೂಷಣ

 

 

 

ನಾನು ಇಂದು ತಾನೇ ಓದಿ ಮಗಿಸಿದ ಪುಸ್ತಕದ ಬಗ್ಗೆ ಇಲ್ಲಿ ಬರೆಯುತ್ತಿದ್ದೇನೆ.

ಅದು ಗೆಳೆಯ ಕೃಷ್ಣಮೂರ್ತಿ ಹನೂರು ಅವರ ಇತ್ತೀಚಿನ ಪುಸ್ತಕ ‘ಕಾಲು ದಾರಿಯ ಕಥನಗಳು’.

ಇದು ಮೂಲತಃ, ಕೃಷ್ಣಮೂರ್ತಿ ಅವರು ನಲವತ್ತು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಕಾಲೇಜೊಂದರಲ್ಲಿ ಕನ್ನಡ ಅಧ್ಯಾಪಕರಾಗಿದ್ದಾಗ ಜಾನಪದದಲ್ಲಿ ಆಸಕ್ತಿ ತಾಳಿ ನಡೆಸಿದ ಕ್ಷೇತ್ರ ಕಾರ್ಯದ ಕಥನ. ಆದರೆ ಅದು ಅಷ್ಟಕ್ಕೇ ನಿಲ್ಲದೆ, ಅವರ ಈ ಆಸಕ್ತಿ ಅವರನ್ನು ರಾಜ್ಯದ ಮತ್ತು ದೇಶದ ಇತರ ಕಡೆಗಳಿಗೂ ಕರೆದುಕೊಂಡು ಹೋದ ಅಥವಾ ಅನ್ಯಕಾರ್ಯನಿಮಿತ್ತ ಹೋದ ಸ್ಥಳಗಳಲ್ಲಿ ಅವರ ಈ ಆಸಕ್ತಿ ಕೆರಳಿ ಅಲ್ಲೆಲ್ಲ ಅವರಿಗೆ ಕಾಣಿಸಿದ, ಕೇಳಿಸಿದ ಕಥನ ಚಿತ್ರಗಳೂ ಇಲ್ಲಿ ಜೋಡಣೆಗೊಂಡಿವೆ.

ಜೋಡಣೆ ಎಂದೆ. ಹಾಗೆ ನೋಡಿದರೆ ಈ ಜೋಡಣೆಯೇ ಈ ಪುಸ್ತಕವನ್ನು ವಿಶಿಷ್ಟಗೊಳಿಸಿ ಅದನ್ನು ಓದುವ ಕುತೂಹಲವನ್ನು ಹುಟ್ಟಿಸಿರುವುದು. ಈ ಹಲವು ಕಥನಗಳ ಜೋಡಣೆಯಲ್ಲಿ ಮೂಡುವ ಹಲವು ವ್ಯಕ್ತಿಚಿತ್ರಗಳು, ಹಲವು ಜನಪದ ಸಮುದಾಯಗಳ ಸಾಂಸ್ಕೃತಿಕ ಅನನ್ಯತೆಗಳು ಮತ್ತು ಹಲವು ಜನಪದ ಪ್ರಕಾರಗಳ ಸೌಂದರ್ಯ ವಿಶೇಷಗಳು ಗರಿಗೆದರಿ ನಿಂತು ನಮ್ಮನ್ನು ಬೆರಗುಗೊಳಿಸುತ್ತವೆ. ಈ ಕ್ಷೇತ್ರ ಕಾರ್ಯದ ಕಥನಗಳು ಚಿತ್ರದುರ್ಗದಿಂದ ಮೈಸೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆ, ಆಂಧ್ರ ಪ್ರದೇಶ, ಹಿಮಾಚಲಪ್ರದೇಶ ಮತ್ತು ಜಮ್ಮುವರೆಗೂ ಹರಡಿಕೊಂಡು ಕಥನ ಅಖಿಲಭಾರತ ಆಯಾಮವನ್ನೂ ಪಡೆದುಕೊಳ್ಳಲು ಹವಣಿಸಿದೆ. ಒಂದು ಮಹಾಕಥನವಾಗಿ ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತದೆ.

ಈ ಮಹಾಕಥನದ ಮುಖ್ಯ ಕ್ರಿಯಾಕ್ಷೇತ್ರ್ರ ಹಲವು ಜಾತಿ-ಬುಡಕಟ್ಟುಗಳ ಮಿಶ್ರ ಸಂಸ್ಕೃತಿಯ ಸಮಾಜವಿರುವ ಚಿತ್ರದುರ್ಗ ಜಿಲ್ಲೆ. ಇಲ್ಲಿನ ಪ್ರಬಲ ಕುಲಗಳೆನಿಸಿದ ಲಿಂಗಾಯತ, ಕುಂಚಿಟಿಗ ಮತ್ತು ರೆಡ್ಡಿ ಸಮಾಜಗಳ ಹೊರತಾಗಿಯೂ, ಈ ಜಿಲ್ಲೆಯ ಬಹುತೇಕ ಭಾಗ (ವಿಶೇಷವಾಗಿ ಪೂರ್ವ ಭಾಗ) ಒಂದು ಜಾನಪದ ಮಹಾಕ್ಷೇತ್ರವೇ ಆಗಿದೆ. ಮ್ಯಾಸ ಬೇಡರು, ಊರು ಬೇಡರು ಮತ್ತು ಕಾಡುಗೊಲ್ಲರು, ಊರು ಗೊಲ್ಲರು ಎಂಬ ನಾಲ್ಕು ಮುಖ್ಯ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಸಾರವೇ ಈ ಇಡೀ ಜಿಲ್ಲೆಯ ಸಂಸ್ಕೃತಿಗೆ ಒಳಸತ್ವವನ್ನು ನೀಡಿರುವುದು ಎಂದು ಅಲ್ಲಿ ಕೆಲ ಕಾಲ ತಂಗಿದ ಯಾರಿಗಾದರೂ ಗೊತ್ತಾಗುತ್ತದೆ.

ಸ್ವತಃ ನಾನೂ ಅಲ್ಲಿ ಐದು ವರ್ಷಗಳ ಕಾಲವಿದ್ದು ಜಿಲ್ಲೆಯ ನಾಲ್ಕೂ ಕಡೆ ತಿರುಗಿ ಬಂದಿರುವ ಅನುಭವದ ಹಿನ್ನೆಲೆಯಲ್ಲಿ ಈ ಮಾತನಾಡುತ್ತಿದ್ದೇನೆ. ನಾನು ನನ್ನ ವೃತ್ತಿ ಬದುಕಿನ ಅತ್ಯುತ್ತಮ ಕಾಲವನ್ನು ಅಲ್ಲಿಯೇ ಕಳೆದದ್ದು ಎಂದು ನನಗೆ ಅನ್ನಿಸಿದ್ದರೆ ಅದಕ್ಕೆ ಆ ಒಳಸತ್ವದ ಶಕ್ತಿ ಸಂಪನ್ಮೂಲಗಳೇ ಕಾರಣವಾಗಿವೆ.

ಇನ್ನೂ ಜಿಲ್ಲೆಯ ಬಹುಭಾಗ ನಗರ ಸಂಸ್ಕೃತಿಯ ಹಪಾಹಪಿಯಿಂದ ದೂರವಿರುವ ಗ್ರಾಮೀಣ ಸಮಾಜವಾಗಿದ್ದು, ತನ್ನ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯಲ್ಲೇ ಸಮಾಧಾನದಿಂದ ಬದುಕುತ್ತಿದೆ. ಅದರ ದೇವರು, ಧರ್ಮಗಳು, ಹಾಡು-ಹಬ್ಬಗಳು, ನಂಬಿಕೆ-ಆಚರಣೆಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇವೆಲ್ಲವುಗಳ ಸರಳ ಸೌಂದರ್ಯಗಳ ಹಿಂದೆ ಇರುವ ಅವರ (ಕೃಷಿ, ಪಶುಪಾಲನೆ, ಕಂಬಳಿ ನೇಯ್ಗೆ ಇತ್ಯಾದಿ) ಕಸುಬುಗಳು ಇನ್ನೂ ಅವರವೇ ಆಗಿವೆ.

ಅವಾವುವೂ ಶಿಷ್ಟ ಸಮಾಜದ ದುಷ್ಟ ಶಕ್ತಿಗಳ ಆಕ್ರಮಣಕ್ಕೆ ಇನ್ನೂ ಒಳಗಾಗಿಲ್ಲ. ಹಾಗಾಗಿ ಈ ಇಡೀ ಸಮಾಜ ತನ್ನೊಂದಿಗೆ ತಾನು ಸಮರಸದಲ್ಲಿದ್ದು ಒಂದು ಪ್ರಸನ್ನಚಿತ್ತತೆ ಅದರ ಹೆಗ್ಗುರುತಾಗಿದೆ. ಅದು ‘ಶ್ರೀಮಂತಿಕೆ’ಯಿಂದ ಕಣ್ಣು ಕುರುಡು ಮಾಡಿಕೊಂಡು ಹೋದ ಹೊರಗಿನವರಿಗೆ ಬಡತನದ ಸಮಾಜವಾಗಿ ಕಾಣಬಹುದಷ್ಟೆ. ಸ್ವತಃ ಅವರಿಗೆ ಆ ಭಾವನೆ ಇಲ್ಲ. ಹಾಗಾಗಿಯೇ ಅವರು ಹೊರಗಿನಿಂದ ಹೋದವರು ಕರುಬುವಷ್ಟು ಪ್ರಸನ್ನಚಿತ್ತರು.

ಇದು ನನ್ನ ಹದಿನೈದು ವರ್ಷಗಳ ಹಿಂದಿನ ಅನುಭವ. ಈಗ ಹೋಗಿ ನೋಡಿದರೆ ನಾನು ವಾಸಮಾಡಿದ ಚಿತ್ರದುರ್ಗ ಪಟ್ಟಣವಂತೂ ಬಹು ಬದಲಾಗಿದೆ. ಗ್ರಾಮಾಂತರ ಸಮಾಜ ಹೇಗೋ ನನಗೆ ತಿಳಿಯದು. ಇತ್ತೀಚೆಗೆ ಚಳ್ಳಕೆರೆ ಸುತ್ತಮುತ್ತ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯು ಸ್ಥಳೀಯ ಕಸಬುದಾರರ ಮತ್ತು ಪರಿಸರವಾದಿಗಳ ಪ್ರತಿಭಟನೆಗಳ ನಡುವೆಯೂ ಸಾವಿರಾರು ಎಕರೆ ಜಮೀನನ್ನು ವಶಪಡಿಸಿಕೊಂಡು ಆರಂಭಿಸಿರುವ ಮಿಲಿಟರಿ ಉದ್ದೇಶಗಳ ಸಂಸ್ಥಾಪನೆ ಅಲ್ಲಿನ ಬದುಕಿನ ಕ್ರಮದ ಮೇಲೆ ಏನು ಪರಿಣಾಮ ಉಂಟು ಮಾಡಿದೆಯೋ ಗೊತ್ತಿಲ್ಲ.

ಕೃಷ್ಣಮೂರ್ತಿ ಅವರು ಈ ಪುಸ್ತಕದಲ್ಲಿ ತಮ್ಮ ಕಥನಗಳ ಮೂಲಕ ಚಿತ್ರಿಸುವ ಸಮಾಜ ನಲವತ್ತು ವರ್ಷಗಳಷ್ಟು ಹಳೆಯದು. ಆದರೆ ಅದು ಹಳೆಯದೆಂದು ಹಳಿಯಲಾಗದಂತಹದ್ದು ಮತ್ತು ಅಪ್ರಸ್ತುತವಾಗದಂತಹದ್ದು, ಏಕೆಂದರೆ, ಅ ಸಮಾಜದ ಪ್ರಸನ್ನಚಿತ್ತತೆ ಇಂದು ನಾವು ಬಹು ಪ್ರಗತಿ ಹೊಂದಿ ಆಧುನಿಕರಾಗಿ ಏನೆಲ್ಲ ಗಳಿಸಿ ಏನೆಲ್ಲ ಕಳೆದುಕೊಂಡಿದ್ದೇವೆ ಎಂಬುದನ್ನು ಈ ಕಥನಗಳು ನಮ್ಮನ್ನು ಆಳದಲ್ಲಿ ಕಾಡಿ ನೆನಪಿಸುತ್ತವೆ.

ಇದನ್ನೇ ಈ ಪುಸ್ತಕದ ಶೀರ್ಷಿಕೆಯನ್ನೇ ಬಳಸಿ ಹೇಳುವುದಾದರೆ, ನಾವು ಚತುಷ್ಪಥ ರಸ್ತೆಗಳನ್ನು ಗಳಿಸಿಕೊಂಡು ಕಾಲುದಾರಿಗಳನ್ನು ಕಳೆದುಕೊಂಡಿದ್ದೇವೆ. ಆ ಕಾಲುದಾರಿಗಳ ಪಕ್ಕದ ನೆಲ-ಜಲ-ಜನ-ಜಾನುವಾರುಗಳು ತಮ್ಮಷ್ಟಕ್ಕೆ ತಾವಿದ್ದುಕೊಂಡು ಸುಖಿಸುವ ಜೀವಂತ ಚಿತ್ರಗಳನ್ನೇ ಕಳೆದುಕೊಂಡಿದ್ದೇವೆ. ಈ ಪುಸ್ತಕ ಅಂತಹ ಜೀವಂತ ಚಿತ್ರಗಳನ್ನು ನಮಗೆ ಕಟ್ಟಿಕೊಡುತ್ತದೆ. ಆ ಚಿತ್ರದಲ್ಲಿ ಕೊಲೆ-ಕಳ್ಳತನ-ಹಾದರ ಇತ್ಯಾದಿ ಕಥೆಗಳು ಇಲ್ಲವೆಂದಲ್ಲ. ಆದರೆ ಒಂದು ಸಮಾಜ ಅವನ್ನೆಲ್ಲ ಮೀರಿ ತನ್ನ ಸಮಾಧಾನವನ್ನು ಕಂಡುಕೊಳ್ಳುವ ಬಗೆಗಳನ್ನೂ ಅದರೊಂದಿಗೆ ಸೂಚಿಸುತ್ತವೆ.

ಜಾನಪದ ಹಾಡುಗಾರರಾದ ಸಿರಿಯಜ್ಜಿ, ದಾನಮ್ಮ, ಜಯಮ್ಮ, ಕತ್ತೆಗಳನ್ನು ಮೇಯಿಸುತ್ತಾ ಊರೂರು ಅಲೆಯುತ್ತಾ ಕತೆ ಹೇಳುವ ಕಲೆಯನ್ನು ಕಲಿತಿರುವ ಎಂಭತ್ತರ ನರಸಜ್ಜ, ಒಂಬತ್ತು ಎಕರೆ ಜಮೀನು ಉಳಿಸಿಕೊಳ್ಳಲು ಐವ್ವತ್ತು ಎಕರೆ ಜಮೀನು ಕಳೆದುಕೊಂಡ ತನ್ನ ಕಥೆಯಷ್ಟೇ ಸ್ವಾರಸ್ಯಕರವಾಗಿ ಹಲವು ಜಾನಪದ ಕಥೆಗಳನ್ನು ಹೇಳುವ ಗಿರಿಯಯ್ಯ, ತನ್ನ ಕಸುಬಿನಿಂದಾಗಿಯೇ ಹೆಂಡತಿಯನ್ನು ಕಳೆದುಕೊಂಡರೂ ಕೋತಿ ಕುಣಿಸುವ ಕಸುಬಿನಲ್ಲೇ ತನ್ನ ಬದುಕಿನ

ತತ್ವ ಅರಸುತ್ತಿರುವ ಬೊಮ್ಮಣ್ಣ, ಗುಂಡೇರಿ ಬಳಿಯ ಅಮೃತ ಮಹಲ್ ಕಾವಲಿನ ಚರವಾಯಿಗಳು, ನಾಟಿ ಪಶುವೈದ್ಯ ಪಾಲನಾಯಕ ಮುಂತಾದ ಜಾನಪದರ ಬದುಕಿನ ಕೆಲವೊಮ್ಮೆ ರೋಚಕವೆನಿಸುವ ಸ್ವಾರಸ್ಯಕರ ಚಿತ್ರಗಳು ಮತ್ತು ಅವರು ಹೇಳುವ ಹಾಡು-ಕತೆಗಳ ವಿವರಗಳ ಜೊತೆಗೇ, ಈ ಜಾನಪದ ಸಂಪತ್ತಿನ ಮಧ್ಯೆಯೇ ಮೂಡಿದ ಒಂದು ವಿಶಿಷ್ಟ ವ್ಯಕ್ತಿತ್ವವೆನಿಸುವ ಬೆಳಗೆರೆ ಕೃಷ್ಣಶಾಸ್ತ್ರಿ ಮತ್ತು ಅವರ ತಂದೆ ಚಂದ್ರಶೇಖರ ಶಾಸ್ತ್ರಿಗಳ ಕತೆಗಳೂ ಜೋಡಿಸಿಕೊಂಡು ಈ ಕಥನ ಯಾತ್ರೆ ಒಂದು ಹೊಸ ಆಯಾಮವನ್ನೇ ದೊರಕಿಸಿಕೊಂಡುಬಿಡುತ್ತದೆ.

 

ಇದು ನಾವು ಅಧ್ಯಯನಕ್ಕೆಂದು ಆರಂಭಿಸಿದ ಜಾನಪದ-ಶಿಷ್ಟ, ವೈದಿಕ-ಅವೈದಿಕ ಎಂಬ ಸಾಂಸ್ಕೃತಿಕ ವಿಂಗಡಣೆಗಳು ಇಂದು ಅಧ್ಯಯನದ ಗುರಿ-ಉದ್ದೇಶಗಳಿಂದಲೇ ನಮ್ಮನ್ನು ಚ್ಯುತಿಗೊಳಿಸಿ ಅಗ್ಗದ ಸಾಂಸ್ಕೃತಿಕ ರಾಜಕಾರಣದತ್ತ ಒಯ್ದಿರುವ ದುರಂತದ ಕತೆಯನ್ನು ಹೇಳುತ್ತದೆ.

ಬೆಳಗೆರೆ ಕೃಷ್ಣಶಾಸ್ತ್ರಿಗಳ ಜೊತೆ ಸಾಕಷ್ಟು ಒಡನಾಡಿರುವ ನಾನು ಅವರನ್ನು ಚೆನ್ನಾಗಿ ಬಲ್ಲೆ. ಅವರ ಮತ್ತು ಅವರನ್ನು ಮೀರಿಸಿದ ಅನ್ವೇಷಣಾತ್ಮಕತೆಯ ಬದುಕು ನಡೆಸಿದ ಅವರ ತಂದೆಯವರ ಕಥೆಯನ್ನು (ಮತ್ತು ಈ ಕಥೆಗಳ ಜೊತೆಗೇ ಬಂದು ಸೇರಿಕೊಳ್ಳುವ ಗದುಗಿನ ಭಾರತದ ರಾಮಯ್ಯ ಮತ್ತು ಭಜನೆ ಬುಡೇನ್ ಸಾಬ್‌ರ ಕಥೆಗಳನ್ನು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ, ಕೃಷ್ಣಶಾಸ್ತ್ರಿಗಳು ಹೇಳುವ ದಂತ ಕಥೆಯಂತಿರುವ ಮುಕಂದೂರು ಸ್ವಾಮಿಗಳ ಕಥೆಯನ್ನು) ಜಾನಪದವೆಂದು ಕರೆಯುವುದೋ, ಶಿಷ್ಟವೆಂದು ಕರೆಯುವುದೋ? ಶಿಷ್ಟ-ಜಾನಪದ ವಿಂಗಡಣೆಯ ಗೆರೆಗಳ ನಡುವೆ ಇಂತಹವರ ಕತೆಗಳು ಕಳೆದು ಹೋಗುವ;ಹಾಗಾಗಿ ಆ ಕತೆಗಳು ಹೇಳುವ ಸತ್ಯಗಳಿಂದ ಅಧ್ಯಯನ ವಂಚಿತವಾಗುವ ಅಪಾಯದ ಬಗ್ಗೆ ನಾನು ಇಲ್ಲಿ ಹೇಳುತ್ತಿರುವೆ. ಇಂತಹ ಕಾರಣಗಳಿಂದಲೇ ಇವೊತ್ತು ತತ್ವಪದಗಳ ಬಗ್ಗೆ ಹುಟ್ಟಿರುವ ಹೊಸ ಉತ್ಸಾಹವೂ ಈ ಅಪಾಯಕ್ಕೆ ಪಕ್ಕಾಗುವ ಎಲ್ಲ ಸೂಚನೆಗಳೂ ಇವೆ ಎಂಬುದನ್ನೂ ಇಲ್ಲಿ ಹೇಳಬಹುದು.

ಇಂತಹ ಮಹತ್ವದ ಪ್ರಶ್ನೆಗಳನ್ನು ಓದುಗರಲ್ಲಿ ಈ ಕಥನ ಯಾತ್ರೆ ಹುಟ್ಟಿಸುವುದು ಜಾನಪದ-ಶಿಷ್ಟಗಳ ಮಡಿ ಮೈಲಿಗೆಗಳಿಲ್ಲದೆ ಬೆರೆತು ಉಂಟಾಗಿರುವ ಅದರ ವಿಶಿಷ್ಟ ವಿನ್ಯಾಸದಿಂದಾಗಿ ಎಂಬುದನ್ನೂ ಇಲ್ಲಿ ಕಾಣಿಸಬೇಕು. ಚಿತ್ರದುರ್ಗದ ನಾಯಕರ ಆಡಳಿತದ ವೈಭವೀಕೃತ ಕಥೆಗಳ ಮಧ್ಯೆ ಥಣ್ಣನೆ ನಮ್ಮನ್ನು ಕೊರೆಯುವ ಹಲವು ರುದ್ರ ಕಥೆಗಳು, ಕಲ್ಲೇದೇವರ ಪುರದಲ್ಲಿ ಪಶುವೈದ್ಯರನ್ನು ಕಾಣಲು ಹೋಗಿ ಅಲ್ಲಿ ಬಸವಣ್ಣನ ಶಾಸನದ ಕತೆಯ ಜೊತೆಗೆ ಅಲ್ಲಿ ಅಲ್ಲಮನ ಕಾಲುದಾರಿಯಲ್ಲಿ ಈವರೆಗೆ ಎಲ್ಲೂ ಪತ್ತೆಯಾಗದ ಗುಹೇಶ್ವರನ ಗುಡಿಯನ್ನೂ, ಗೊಹೇಸ್ವರಪ್ಪನ ಅಂಕಿತವಿರುವ ಹಾಡುಗಳನ್ನೂ ಕಾಣುವಂತಾಗುವ ಮತ್ತು ಅಲ್ಲಿ ರಾತ್ರಿ ಕೇಳುವ ಒಂಟಿ ಹೆಂಗಸಿನ ಆರ್ತನಾದ ಹಾಗೂ ನಂತರದಲ್ಲೇ ಸಹಜ ತರ್ಕವೆಂಬಂತೆ ಕಾಣಿಸಿಕೊಳ್ಳುವ ಚಿರತೆಯ ಕತೆ, ಎ.ಕೆ. ರಾಮಾನುಜನ್‌ರ ಜೊತೆಯಲ್ಲಿ ಕೂತು ನೋಡಿದ ಗೊಲ್ಲರ ಕೋಲಾಟದ ಸಂಕೀರ್ಣತೆಯ ಬೆರಗು, ಮೊಳಕಾಲ್ಮೂರಿನ ಬಳಿ ಮ್ಯಾಸಬೇಡರ ಕಂಪಳರಂಗನ ಜಾತ್ರೆ ನೋಡಲು ಹೋಗಿ ಬರುವಾಗ ಮಾರ್ಗದ ಊರೊಂದರಲ್ಲಿ ಕಂಡ ಒಂದು ಪೌರಾಣಿಕ ನಾಟಕದ ಒಂದು ಸ್ವಾರಸ್ಯದ ಪ್ರಸಂಗ, ಹೆಂಡದಂಗಡಿಯೊಂದರಿಂದ ಕಂಡು ಕೇಳಿದ ಬಸಜ್ಜನ ಇಂದ್ರಾ ಗಾಂಧಿ ಪ್ರಸಂಗ, ಹಕ್ಕಿಪಿಕ್ಕರ ಹಂದಿ ಭೋಜನದ ಸಿದ್ಧತೆಯ ರೌದ್ರ ವಿವರ ಇತ್ಯಾದಿಗಳು ಸಾವಯವವಾಗಿ ಒಂದಕ್ಕೊಂದು ಹೆಣೆದುಕೊಂಡು ಧ್ವನಿಪೂರ್ಣವಾಗಿ ಚರಿತ್ರೆಯನ್ನು ಬಹು ಸೂಕ್ಷ್ಮದಲ್ಲಿ ವರ್ತಮಾನದೊಳಕ್ಕೆ ನುಸುಳಿಸುವ ಸೃಜನಶೀಲತೆಯನ್ನು ಮೆರೆಯುತ್ತವೆ.

ಎಷ್ಟಾದರೂ ಹನೂರರು ನಮ್ಮ ಹಿರಿಯ ಕಥೆಗಾರರೂ ಅಲ್ಲವೆ? ಆದರೆ ಅವರ ಕಥೆಗಳಲ್ಲಿ ಕಾಣುವ ದೌರ್ಬಲ್ಯಗಳೂ ಇಲ್ಲಿ ಸೇರಿಕೊಂಡು ಇಡೀ ಕಥನಕ್ಕೆ ಸಿಗಬಹುದಾಗಿದ್ದ ಒಂದು ದರ್ಶನದ ನೋಟವನ್ನು ಮುಕ್ಕಾಗಿಸಿದೆ ಎಂಬುದನ್ನೂ ಇಲ್ಲಿ ಹೇಳಬೇಕು. ಚಿತ್ರದುರ್ಗದ ಕಥೆಗಳ ಜೊತೆಗೇ ತಮ್ಮ ಇತ್ತೀಚಿನ ಪ್ರಿಯ ವಸ್ತುವಾದ ನಿಯೋಗ ಪದ್ಧತಿ ಕುರಿತು ತಾವು ಮಾಡಹೊರಟಿರುವ ಸಂಶೋಧನೆಗಳ ಕಥೆಗಳನ್ನೂ, ಮೈಸೂರು ಜಿಲ್ಲೆಯ ನಂಜುಂಡೇಶ್ವರ, ಮಂಟೇಸ್ವಾಮಿ, ಬಿಳಿಗಿರಿ ರಂಗ, ಮಲೆ ಮಾದೇಶ್ವರರಿಗೆ ಸಂಬಂಧಿಸಿದ ಜಾನಪದ ಐತಿಹ್ಯಗಳ ತಮ್ಮ ವ್ಯಾಖ್ಯಾನಗಳನ್ನೂ, ತಿರುಪತಿ ದೇವರ ವಿಗ್ರಹದ ಜೀವಂತಿಕೆ ಕುರಿತು ತಾವು ಕೇಳಿದ ದಂತ ಕಥೆಯನ್ನೂ, ಭದ್ರಾಚಲದ ಬಳಿ ಕಂಡ ಒಂದು ಕಪಟ ಜಾನಪದ ಆಚರಣೆಯ ವಿವರಗಳನ್ನೂ ಈ ಪುಸ್ತಕದ ಚೌಕಟ್ಟಿನೊಳಕ್ಕೆ ಒಳನುಗ್ಗಿಸಿ ಅದಕ್ಕಾಗಿ ಹೊಸೆದಂತೆ ಕಾಣುವ ವ್ಯಾಖ್ಯಾನಗಳ ಹಿಂದಿನ ಮಹತ್ವಾಕಾಂಕ್ಷೆಯನ್ನು ಈ ಪುಸ್ತಕದ ಮುಖ್ಯ ಕಥಾನಕ ಹೊರಲಾಗದೆ ಪುಸ್ತಕದ ಅಂತ್ಯ ಭಾಗ ಬಸವಳಿದಿದೆ. ಪುಸ್ತಕದ ಮಂಗಳ ಗೀತೆಯಂತಿರುವ, ಕೃಷ್ಣಶಾಸ್ತ್ರಿಗಳ ಗುಡಿಸಿಲಿನ ಇಂದಿನ ಚಿತ್ರದ ಕಾವ್ಯಮಯ ವರ್ಣನೆಯ ಒಂದಿಷ್ಟು ತಂಗಾಳಿ ಈ ಬಸವಳಿಕೆಯನ್ನು ಸ್ವಲ್ಪ ಕಡಿಮೆ ಮಾಡುತ್ತದಾದರೂ.

ನಾನು ಕಂಡಂತೆ ಈ ಜಿಲ್ಲೆಯಲ್ಲಿ ಆಗಿ ಹೋದ ಸಾಧು ಸಂತರ ಸಂಖ್ಯೆ ಜಾಸ್ತಿ. ಅಂತಹವರ ಸಮಾಧಿಗಳೂ, ಅವುಗಳ ಭಕ್ತ ಸಮೂಹಗಳೂ ಅಲ್ಲಲ್ಲಿ ಇವೆ. ಈಗಲೂ ಜನಸಂದಣಿಯ ಮಧ್ಯೆ ಕಾಣದಂತಹ ಯೋಗಿಗಳೂ, ಸಿದ್ದರೂ, ಅವಧೂತರೂ ಅಲ್ಲಿರುವವರೆಂದು ಹೇಳಲಾಗುತ್ತದೆ. ಅಂತಹವರ ಭಕ್ತ ಸಮೂಹಗಳೂ ಈಗಲೂ ಅಲ್ಲಿವೆ. ದೊಡ್ಡೇರಿಯಲ್ಲಿ ಈಗ ಒಂದು ಸಂಸ್ಥಾನವನ್ನೇ ಕಟ್ಟಿರುವ ಸತ್‌ಉಪಾಸಿ ಮಲ್ಲಣ್ಣನವರ ಕಥೆ ಬಹುಜನಜನಿತ. ಚಿತ್ರದುರ್ಗದ ಈವೊಂದು ವಿಶಿಷ್ಟ ಪರಂಪರೆಯ ಕಥೆಗಳನ್ನೂ -ಕೃಷ್ಣಶಾಸ್ತ್ರಿಗಳ ಕಥೆಗೆ ಸಂವಾದಿಯಾಗಿ-ರರು ತಮ್ಮ ಕಥನದಲ್ಲಿ ಜೋಡಿಸುವಂತಾಗಿದ್ದರೆ ಇದರ ಸಾಂಸ್ಕೃತಿಕ ಆಯಾಮಕ್ಕೊಂದು ಹೊಸ ಬೆಡಗು ಪ್ರಾಪ್ತಿಯಾಗುತ್ತಿತ್ತೇನೋ!

ಈ ಎರಡು ಕೊರತೆಗಳನ್ನು ಬಿಟ್ಟರೆ ಇದೊಂದು ಆಧುನಿಕ ಕನ್ನಡ ವಾಙ್ಮಯಕ್ಕೇ ಒಂದು ಅಪರೂಪದ ಕೊಡುಗೆ ಎಂದು ಹೇಳಬಹುದು.

Leave a Reply