ಈಗೀಗ ಪಾದಗಳು ನನ್ನ ಮಾತನ್ನೇ ಕೇಳುತ್ತಿಲ್ಲ..

 

 

 

 

ಸಿದ್ಧರಾಮ ಕೂಡ್ಲಿಗಿ

 

 

 

 

ಈಗೀಗ ಪಾದಗಳು
ನನ್ನ ಮಾತನ್ನೇ ಕೇಳುತ್ತಿಲ್ಲ
ಎಲ್ಲಿ ಹೋಗಬೇಕೆನ್ನುವೆನೋ
ಹೋಗದೇ ಚಂಡಿ ಹಿಡಿದು
ಕುಳಿತುಬಿಡುತ್ತವೆ
ಬೇಡಿಕೆಗಳ ಈಡೇರಿಕೆಗೆ
ಮುಷ್ಕರ ಹೂಡುವ ನಾಗರಿಕರಂತೆ !

ಐದು ದಶಕಗಳವರೆಗೆ
ಬಿಟ್ಟು ಬಿಡದಂತೆ
ಹೆಗಲ ಮೇಲೆ ಭಾರ ಹೊತ್ತು
ನಡೆದ ನೋವಿಗೆ ಗೊಣಗುತ್ತವೆ
ಬೇಸರಿಸಿಕೊಳ್ಳುತ್ತವೆ
ಕೆಲವೊಮ್ಮೆ ಅನಿವಾರ್ಯವೆಂಬಂತೆ
ಹೊತ್ತು ಮುಂದೆ ಸಾಗುತ್ತವೆ
ದೇಹಕ್ಕೋ ಎಲ್ಲೆಲ್ಲೋ ಹೋಗುವ ತವಕ
ಪಾದಗಳಿಗೋ ಭಾರ ಹೊತ್ತು
ನಡೆಯಬೇಕಲ್ಲ ಎಂಬ ಬೇಸರ
ಪಾದಗಳನ್ನು ಬಿಟ್ಟು ದೇಹ ಮುಂದೆ
ಹೋಗುವಂತಿಲ್ಲ
ದೇಹವನ್ನು ಬಿಟ್ಟು ಪಾದಗಳು ಮುಂದೆ
ಹೋಗುವಂತಿಲ್ಲ
ತಾಳಮೇಳವಿಲ್ಲದ ದೇಹ, ಪಾದಗಳ
ಗೊಂದಲ ಕಂಡು
ತಲೆಯೆಂಬೋ ತಲೆಯೇ ಕೆಟ್ಟು
ಕೊನೆಗೆ ಇದೀಗ ಆದೇಶಿಸಿದ್ದೇನೆ
‘ದೇಹವು ಪಾದಗಳಿಗೆ ಸಹಕರಿಸಬೇಕು
ಪಾದಗಳು ಒಯ್ದಾಗ ಹೋಗಬೇಕು’ ಎಂದು
‘ಪಾದಗಳು ಆಗಾಗ ವಿಶ್ರಾಂತಿ ಪಡೆದು
ಗೊಣಗದೆ ದೇಹವನ್ನು ಹೊತ್ತೊಯ್ಯಬೇಕೆಂದು’

ಇದೀಗ ಪಾದಗಳು ಮತ್ತೆ ಚುರುಕಾಗಿವೆ
ಲವಲವಿಕೆಯಿಂದ
ಒಂದನ್ನೊಂದು ನೋಡಿಕೊಂಡು
ಮುಗುಳ್ನಗುತ ದೇಹವನ್ನು
ಹೊತ್ತು ಸಾಗುತ್ತಿವೆ !

 

1 Response

  1. Premalatha B says:

    Very nice read!! A lot of truth presented with fun

Leave a Reply

%d bloggers like this: