ಷರೀಫಾ..

ಬ್ಯಾ…..ಗುಡುವ ದನಿಗೆ

ಕರುಣೆ ತೋರದೆ

ಸಾಕುತ್ತಾನೆ ಷರೀಫಾ

ತನ್ನ ಕಂದನ ಕರುಳ.

 

ಬೋಟಿ ಖಲೀಜಾ, ಕಾಲು ತೊಡೆ

ಕತ್ತು ಮಿದಿಲೆ, ಎದೆಚಕ್ಕೆ ಬಿಡಿಸಿ

ಲಯಬದ್ದ ಹೊಡೆತ

ಮರಮುಂಡ ಮೇಲೆ

ಹೊರಳುವ ಕೈಮಾ ಉಂಡೆ

ಹರಿದು ಹಂಚಿಟ್ಟು ಕಣ್ಣಲ್ಲಿ

ಜೊಲ್ಲ ಕರೆಸುತ್ತಾನೆ

ಒಲೆಮೇಲೆ ಕುದಿವೆಸರ

ಘಮಲೋ…ಅದು. ಅಲ್ಲಾ……

 

ತೂಗಿತೂಗಿ ಅಳೆಯುತ್ತಾನೆ

ಮಾಂಸಮೂಳೆ

ಮೇಲೊಂದಿಷ್ಟು ತೊಳ್ಳೆ, ಛರ್ಭಿ

ಆಪ್ತರಿಗೊಂದೆರಡು ತುಂಡು

ಮಣ್ಣೀಲಿ ಗುರ್ದಾ

 

ಜೀವ ಹರಿವ ರಕ್ತ, ಮಾಂಸ,

ಮೈ ಮರಸು ಚರ್ಮವೂ

ಇಲ್ಲಿ ಹರಾಜು

 

ಅಂಗೈ ಅಗಲ ಅರಮನೆ

ಕನಸು

ಹೊಳೆವ ಹೆಂಡತಿ

ಮೂಗಿನ ದಿನಸು

 

ಕೈತುಂಬಿ

ಕೊಡಲೇಬೇಕು

ಮಗಳ ನಿಖಾದ

ಹೊತ್ತು

 

ತೊಳೆದು ಕಲೆ

ಜಾರು ಹೊತ್ತಿನಲೂ

ನಿದ್ದೆಗೆ

ತಲೆ ಬಾಗು

 

ತಬ್ಬಿತು ಅಲ್ಲಾ……

ರಂಜಾನಿನತ್ತರು

ಯಾ….ಅಲ್ಲಲ್ಲಾ….

 

ಹೊಡೆವ ಕತ್ತಿ

ಏಟಿಗೊಂದಿಷ್ಟು ಕಸುವು

ನಿಷ್ಠೆ ಬೇಕು ಜೀವಕೆ

 

ಬಕ್ರೀದಿನ ಮಾಂಸದಾನ,

ಉಳಿದ ಮೂಳೆದಾನ

ನಾಯಿನರಿ.

 

ಹೀಗೆ…..

ಕಾದಿಡಬೇಕು ಮುಡುಪ

ತನ್ಮಕ್ಕಳ ಕಾಯ್ವ ಕುರಿಯ ನೆನೆಪ

 

ಕಾಯುವಾಟ

ಕೊಲ್ಲುವಾಟದ

ನಮ್ಮ ಷರೀಷಾ

ಇರುವರೆಗೂ…..

5 Responses

 1. ರಘುನಾಥ says:

  ಕಾಯುವಾಟ ಕೊಲ್ಲುವಾಟಗಳು ಜತೆಜತೆಗೆ ಬದುಕಿನ ವೈರುಧ್ಯಗಳ ಅನಾವರಣ

 2. ಮೇಡಂ . ಇದು ನಿಮ್ಮ ಪದ್ಯ !!! . ಅಬ್ಬಾ .. ಕಣ್ಮುಂದೆ ಹಾಯ್ದು ಹೋಯ್ತು ಚಿತ್ರ .
  ಕಟ್ಟುವಿಕೆಯಂತೂ ಸೊಗಸು . ಹದವಾದ ಸಾಲುಗಳು

 3. Geetha Montadka says:

  ಚೆನ್ಬಾಗಿದೆ ಪದಪುಂಜ ಭಾವಗಳು

 4. H.R.sujatha says:

  ಏನ್ ಹೇಳದು
  ಓದಿದ್ದಕ್ಕೆ ವಂದನೆ

Leave a Reply

%d bloggers like this: