ನಾಟಕ ಓದು ಎಂದರೇನು?

 

 

 

ನಾಟಕ ಓದು ಹಾಗೂ ರಂಗ ನಟರು: ಒಂದಿಷ್ಟು ಚರ್ಚೆಗಳು
-ಮೇಟಿ ಮಲ್ಲಿಕಾರ್ಜುನ

 

 

 

ನಾಟಕ ಮತ್ತು ರಂಗಭೂಮಿಯ ಬಗೆಗಿನ ನನ್ನ ಗ್ರಹಿಕೆ ರೂಪುಗೊಂಡದ್ದು ಕೇವಲ ಆಧುನಿಕ ಹಾಗೂ ಶಾಸ್ತ್ರೀಯ ಓದಿನಿಂದಲ್ಲ. ಬದಲಾಗಿ ಸಮೂಹಗಳು ತಮ್ಮಷ್ಟಕ್ಕೆ ತಾವೇ ನಾಟಕ ತಂಡ ಮತ್ತು ಕಂಪನಿ ನಾಟಕಗಳನ್ನು ರೂಪಿಸಿಕೊಂಡು ತಮ್ಮ ಅಭಿರುಚಿಯ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಇಂತಹ ಪ್ರಕ್ರಿಯೆಯ ಮೂಲಕ ನಾಟಕ ಮತ್ತು ರಂಗಭೂಮಿಯ ಕುರಿತಾದ ಪ್ರಾಥಮಿಕ ತಿಳಿವು ಮತ್ತು ಅರಿವು ನನ್ನಲ್ಲಿ ನೆಲೆಗೊಂಡಿರುತ್ತದೆ.

ಯಾವುದೇ ಬಗೆಯ ಅಕಾಡೆಮಿಕ್ ಶಿಸ್ತುಗಳ ಮೂಲಕ ನನ್ನ ಅನುಭವ ಲೋಕವನ್ನು ವಿಸ್ತರಿಸಿಕೊಳ್ಳುವ ಮೊದಲೇ, ನಾನು ಬೆಳೆದ ಪರಿಸರದ ಸಾಮಾಜೀಕರಣ ಪ್ರಕ್ರಿಯೆಯೊಳಗೆಯೇ ದೊರೆಯುತ್ತಿದ್ದ ನಾಟಕ, ಭಜನೆ ಹಾಗೂ ಇತರೆ ಜನಸಂಸ್ಕೃತಿಯ ಅಭಿವ್ಯಕ್ತಿಗಳನ್ನು ಮೈದುಂಬಿ ಅನುಭವಿಸಿ ಪಡೆದಿರುತ್ತೇನೆ.

ನಮ್ಮ ಬದುಕಿನ ಅವಿಭಾಜ್ಯ ಅಂಗಗಳನ್ನಾಗಿ ಮಾತ್ರ ಇವುಗಳನ್ನು ನಾನು ನೋಡಿದ್ದರಿಂದ, ಇಂತಹ ತಿಳಿವಿನ ಮಾದರಿಗಳನ್ನು ಔಪಚಾರಿಕ ಶಿಕ್ಷಣ ಕ್ರಮದಲ್ಲಿ ಶಾಸ್ತ್ರೀಯವಾಗಿ ಮಾತ್ರ ಅಧ್ಯಯನ ಮಾಡಿ ಅರಿತುಕೊಳ್ಳಬೇಕೆಂಬ ಬಗೆಯೇ ಅತ್ಯಂತ ಅವೈಜ್ಞಾನಿಕ ಸಂಗತಿಯಾಗಿಯೂ ಕಂಡದ್ದಿದೆ.

ಆದರೆ ಇವತ್ತು ಕಲಾ ಅಭಿವ್ಯಕ್ತಿಯ ಯಾವುದೇ ಪ್ರಕಾರವು ನಮ್ಮ ಸಾಮಾಜೀಕರಣ ಪ್ರಕ್ರಿಯೆಗೆ ಹೊರತಾಗಿರುವುದರಿಂದ, ಇವುಗಳನ್ನು ಔಪಚಾರಿಕವಾಗಿ ಅಧ್ಯಯನ ಮಾಡಿ ಅರಿತುಕೊಳ್ಳುವ ಜರೂರಿದೆ ಎನ್ನುವುದು ದಿಟ. ಹಾಗಂತ ಈ ಬಗೆಯ ಎಲ್ಲ ಆಚರಣೆಗಳನ್ನು ಮೈಗೂಡಿಸಿಕೊಳ್ಳಲು ನಾವು ಅನುಸರಿಸಬೇಕಾದ ಮಾದರಿಗಳು ಮಾತ್ರ ನಮ್ಮ ಬದುಕಿನ ಆಚರಣೆಗಳಿಗೆ ಹೊರತಾಗಿರುತ್ತವೆ ಎಂದು ಗ್ರಹಿಸುವುದು ಸರಿಯಲ್ಲ. ಹಾಗೆಂದರೇನು? ಕಲೆ ಇಲ್ಲವೇ ಅಭಿನಯವನ್ನು ನಮ್ಮ ಬದುಕಿನ ಹೊರ ವಿನ್ಯಾಸವನ್ನಾಗಿ ನೋಡುವ ಕ್ರಮವೇ ಸರಿಯಲ್ಲವೆಂಬುದು ನನ್ನ ವಾದ.

ಈ ಮೇಲಿನ ಇಷ್ಟೆಲ್ಲ ಸಂಗತಿಗಳನ್ನು ಇಲ್ಲಿ ಹೇಳುವುದಕ್ಕೆ ಮುಖ್ಯ ಕಾರಣ, ಇತ್ತೀಚೆಗೆ ಶಿವಮೊಗ್ಗ ರಂಗಾಯಣದಲ್ಲಿ ನನಗೆ ಸಾಫೊಕ್ಲಿಸ್‍ನ ದೊರೆ ಈಡಿಪಸ್ ಕನ್ನಡಾನುವಾದವನ್ನು, ‘ವಾರಂತ್ಯ ನಾಟಕ ಓದು’ ಕಾರ್ಯಕ್ರಮದಲ್ಲಿ ಓದಲು ಹೇಳಿದ್ದರು. ಯಥಾಪ್ರಕಾರ ಈ ನಾಟಕವನ್ನು ಓದಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ನಾನು ಅವತ್ತು ನಾಟಕವನ್ನು ಓದಿದೆ.

ನಾಟಕ ಓದು ಎಂದರೇನು? ಅದನ್ನು ಈಡೇರಿಸಿಕೊಳ್ಳುವ ಬಗೆ ಯಾವುದು? ಯಾವುದೇ ಒಂದು ನಾಟಕ ಪಠ್ಯವನ್ನು ಗ್ರಹಿಸುವುದಕ್ಕೆ ಮುಖ್ಯವಾಗಿ ನಾವು ಅನುಸರಿಸಬೇಕಾದ ಪರಿಕರ, ವಿಧಾನಗಳು ಯಾವವು? ಯಾವುದೇ ಒಂದು ಅನ್ಯ ಪರಂಪರೆಯ ನಾಟಕವನ್ನು ಕನ್ನಡ ನಾಟಕ ಪರಂಪರೆಯೊಳಗೆ ತಂದುಕೊಳ್ಳುವುದರ ಅಗತ್ಯವೇನು? ಹಾಗೂ ಪರಂಪರೆಯೊಂದು ರೂಪುಗೊಳ್ಳುವಾಗ ಅಲ್ಲಿ ಏರ್ಪಡುವ ವಿವಿಧ ವಿದ್ಯಮಾನಗಳ ಸ್ವರೂಪ ಹೇಗಿರುತ್ತದೆ? ಎಂಬೆಲ್ಲ ಪ್ರಶ್ನೆಗಳನ್ನು ತಾತ್ವಿಕವಾಗಿ ಚರ್ಚಿಸಿ ನಾಟಕವನ್ನು ಓದುವುದು ಸೂಕ್ತವೆಂದು ಭಾವಿಸಿ ಹಾಗೇ ಮಾಡಿದೆ.

ಹೌದು ನಾಟಕ ಓದು ಹಾಗೆಂದರೇನು? ಎಂಬ ಪ್ರಶ್ನೆಯೂ ನಮಗೆ ಇಲ್ಲಿ ಎದುರಾಗುತ್ತದೆ. ಹಾಗಾಗಿ ಓದು ಎಂದರೇನು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು, ಓದಿನ ವಿಭಿನ್ನ ನೆಲೆಗಳನ್ನು ಅರಿಯುವ ಪ್ರಯತ್ನವನ್ನೂ ಮಾಡಲಾಯಿತು.

ಹಾಗಾದರೆ ಓದು ಎಂದರೇನು?

ನಾನು ಭಾಷಾಶಾಸ್ತ್ರದ ವಿದ್ಯಾರ್ಥಿಯಾಗಿದ್ದರಿಂದ, ನನ್ನ ಗ್ರಹಿಕೆಯ ನೆಲೆಗಳನ್ನು ನಾನು ಭಾಷಿಕ ವಿನ್ಯಾಸಗಳ ಮೂಲಕ ಅರಿಯುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ. ಇವತ್ತು ಈ ಕ್ರಮ ಅತ್ಯಂತ ಪ್ರಖರವಾಗಿಯೂ ಅಷ್ಟೇ ಮುಖ್ಯವಾಗಿಯೂ ಜಗತ್ತಿನಾದ್ಯಂತ ಬೆಳೆದಿರುವುದರಿಂದ, ಈ ಮಾದರಿ ನನ್ನಲ್ಲಿ ಹೆಚ್ಚು ಆತ್ಮವಿಶ್ವಾಸವನ್ನೂ ಮೂಡಿಸಿದೆ.

ಇರಲಿ, ಓದು ಎನ್ನುವುದನ್ನು ‘ಗ್ರಹಿಕೆ’, ‘ಅಧ್ಯಯನ’ ಹಾಗೂ ‘ಓದಿನ ಆಚರಣೆ’ ಎಂಬ ಮೂರು ಬಗೆಯಲ್ಲಿ ವ್ಯಾಖ್ಯಾನ ಮಾಡಿಕೊಂಡು ನಾಟಕವನ್ನು ಓದುವ ಇರಾದೆಯನ್ನು ನಾನು ಹೊಂದಿದ್ದೆ ಮತ್ತು ಅದೇ ಕ್ರಮದಲ್ಲಿ ನಾನು ನಾಟಕವನ್ನೂ ಆ ರಂಗ ಕಲಾವಿದರ ಎದುರಿಗೆ ಮಂಡಿಸಿದೆ.

ಈ ಮಾದರಿ ಆ ರಂಗ ಕಲಾವಿದರಿಗೆ ಒಗ್ಗಲಿಲ್ಲ ಕಾರಣವೇನಂದರೆ ಅವರ ಹಾಗೂ ಇನ್ನೂ ಬಹುತೇಕರ ಪ್ರಕಾರ ನಾಟಕವನ್ನು ಓದುವುದೆಂದರೆ ರಸಾನುಭವನ್ನು ಮಾತ್ರ ಪಡೆಯುವುದಾಗಿದೆ.

ಅಂದರೆ ಪ್ರತೀ ಸಂಭಾಷಣೆಯನ್ನು ಓದಿ ಅದನ್ನು ಬಣ್ಣಿಸುವ ಹಾಗೂ ವ್ಯಾಖ್ಯಾನ ಮಾಡುವಂತೆ ಈ ಕಲಾವಿದರು ನನ್ನನ್ನು ಒತ್ತಾಯಿಸಿದರು. ಈ ಮಾದರಿಯನ್ನೇ ನಮ್ಮ ಶೈಕ್ಷಣಿಕ ವಲಯದಲ್ಲಿ ಅನುಸರಿಸಲಾಗುತ್ತದೆ. ಹಾಗಾಗಿ ಈ ಅಪೇಕ್ಷೆಗೆ ಈ ರಂಗ ಕಲಾವಿದರು ಮಾತ್ರ ಕಾರಣವೆಂದು ನಾನು ಆರೋಪಿಸಲಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ, ನಾಟಕ ಓದು ಎನ್ನುವುದನ್ನು ಮೊದಲು ಒಂದು ಗ್ರಹಿಕೆಯ ನೆಲೆಯನ್ನಾಗಿ ಆಚರಿಸಬೇಕಾಗುತ್ತದೆ.

ಅಧ್ಯಯನ ಎಂಬುದು ವಿದ್ವತ್ತಿನ ಓದಿನ ಮಾದರಿ ಆಗಿದ್ದರಿಂದ ಈ ವಿನ್ಯಾಸವನ್ನು ಕೈಬಿಟ್ಟು ಕೇವಲ ಗ್ರಹಿಕೆ ಹಾಗೂ ಓದಿನ ಆಚರಣೆಗೆ (ಆ್ಯಕ್ಟ್ ಆಫ್ ರೀಡಿಂಗ್) ಮಾತ್ರ ಸೀಮಿತಗೊಂಡು ನಾನು ನಾಟಕವನ್ನು ಓದಿದೆ. ಈ ಓದಿನ ಕ್ರಮ ಅತ್ಯಂತ ಸಪ್ಪೆಯಾಗಿಯೂ ಮತ್ತು ನಿರುಪಯುಕ್ತಯೂ ಆಗಿತ್ತೆಂದು ಅವರ ವಾದಗಳಲ್ಲಿ ನನಗೆ ಭಾಸವಾಯಿತು. ಇದರಿಂದ ಎದೆಗುಂದದೆ ನಾನು ನಾಟಕವನ್ನು ಭಾಷಿಕ ವಿನ್ಯಾಸಗಳ ಮೂಲಕ ಗ್ರಹಿಸುವುದು ಹೇಗೆ ಮತ್ತು ಹಾಗೇ ಗ್ರಹಿಸಲು ಸಂಭಾಷಣೆಗಳು ಮತ್ತು ನಿರೂಪಣೆಗಳನ್ನು ಯಾವೆಲ್ಲ ಬಗೆಯಲ್ಲಿ ಪರಿಗಣಿಸಬೇಕು ಎಂಬುದು ನನ್ನ ವಾದವಾಗಿತ್ತು.

ಕಾವ್ಯ, ಕತೆ ಹಾಗೂ ನಾಟಕಗಳಲ್ಲಿ ಸಂಕಥನವೊಂದು (ಡಿಸ್ಕೋರ್ಸ್) ಏರ್ಪಡುವುದು ಭಾಷೆಯ ಮೂಲಕ ಹಾಗೂ ಏಸ್ತಟಿಕ್ ಆಯಾಮಗಳು ಕೂಡ ಸಾಹಿತ್ಯದಲ್ಲಿ ನೆಲೆಗೊಳ್ಳುವುದಕ್ಕೆ ಮುಖ್ಯ ಕಾರಣವೇ ಭಾಷೆ. ಈ ಎರಡೂ ವಿನ್ಯಾಸಗಳು ಕೇವಲ ಅನುಭವದ ಸಾಂದ್ರತೆಯಿಂದ ಮಾತ್ರ ನೆಲೆಗೊಳ್ಳುತ್ತವೆ ಎಂದು ಹೇಳುವುದು ಕೂಡ ಅಶಾಸ್ತ್ರೀಯ ಮತ್ತು ಅವೈಜ್ಞಾನಿಕ ತಿಳುವಳಿಕೆಯಾಗಿರುತ್ತದೆ.

ಕಾವ್ಯದೊಳಗೆ ಲಯವನ್ನು, ಕಥೆಯೊಳಗೆ ಕಥನವನ್ನು ಹಾಗೂ ನಾಟಕದೊಳಗೆ ಸಂಭಾಷಣೆಯನ್ನು ಗುರುತಿಸುವ ಮೂಲಕ ಆಯಾ ಸಾಹಿತ್ಯ ಪ್ರಕಾರದ ಚಹರೆಯನ್ನು ಹಾಗೂ ಅಸ್ತಿತ್ವವನ್ನೂ ಗುರುತಿಸುತ್ತೇವೆ. ಹಾಗಾಗಿ ಭಾಷೆಯೆಂಬುದನ್ನು ಕೇವಲ ಮಾಧ್ಯಮವನ್ನಾಗಿ ಇಲ್ಲವೇ ಸಾಧನವನ್ನಾಗಿ ಅರಿಯುವುದು ಸರಿಯಾದ ಓದಿನ ಕ್ರಮವಲ್ಲ ಎಂದು ನಾನು ಅತ್ಯಂತ ಬಲವಾಗಿಯೇ ಸಮರ್ಥಿಸುತ್ತೇನೆ.

ಏಕೆಂದರೆ ಭಾಷೆಯೆಂಬುದು ಯಾವುದೇ ಒಂದು ಆಲೋಚನೆ, ದೃಷ್ಟಿಕೋನದ ರಚನೆಯಾಗಿ, ಸಂಕಥನವಾಗಿ ಮತ್ತು ತಾತ್ವಿಕತೆಯಾಗಿ ಇರುತ್ತದೆ. ಪ್ರತಿಯೊಂದು ಭಾಷಿಕ ವ್ಯಾಪಾರವನ್ನು ಸಾಮಾನ್ಯವಾಗಿ ನಾವು ಗ್ರಹಿಸುವುದು ಕೂಡ ಈ ಅನುಕ್ರಮದಲ್ಲಯೇ ಹೊರತು ಬೇರೊಂದು ದಾರಿ ಇವತ್ತಿಗೂ ನಮಗೆ ಸಿಕ್ಕಿರುವುದಿಲ್ಲ.

ನಾಟಕವೊಂದರ ಒಡಲಲ್ಲಿ ಅಡಕವಾಗಿರುವ ಅನುಭವ, ವಿವೇಕ ಇಲ್ಲವೇ ಯಾವುದೇ ಬಗೆಯ ಸಾಮಾಜಿಕ ಸಂಕಥನವನ್ನು ಅರಿಯುವುದಕ್ಕೆ ಆಯಾ ನಾಟಕದೊಳಿಗಿನ ಸಂಭಾಷಣೆಗಳು ಅತ್ಯಂತ ಪೂರಕವಾಗಿರುತ್ತವೆ. ಆದರೆ ನಾವು ಬಹುತೇಕವಾಗಿ ನಂಬುವುದು ಆ ನಾಟಕವು ಬಳಸಿಕೊಂಡಿರುವ ಚಾರಿತ್ರಿಕ ಇಲ್ಲವೇ ಪೌರಾಣಿಕ ಹಿನ್ನಲೆಗಳನ್ನು ಯಥಾವತ್ತಾಗಿ ಅರಿಯುವುದಿಂದ ಮಾತ್ರ ಸಾಧ್ಯವೆಂದು ನಂಬಿರುತ್ತೇವೆ.

ಈ ಸಾಧ್ಯತೆಯೇನೋ ಸರಿ. ಆದರೆ ನಾಟಕಕಾರ ಆಯಾ ನಾಟಕದೊಳಗೆ ಸಾಮಾಜಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ವಿನ್ಯಾಸಗಳನ್ನು ಗುರುತಿಸಲು ಪ್ರಯತ್ನಿಸುತ್ತಾನೆ. ನಾವು ಕೇವಲ ಪುರಾಣ ಇಲ್ಲವೇ ಚರಿತ್ರೆಯ ಯಥಾಸ್ಥಿತಿಗಳನ್ನು ಮಾತ್ರ ಮನಗಾಣುವುದರಿಂದ, ನಾಟಕವೊಂದರಲ್ಲಿ ನೆಲೆಗೊಂಡಿರುವ ಗ್ರಹಿಕೆಗಳನ್ನು ಬದಿಗಿಟ್ಟು ಬೇರೆ ಏನನ್ನೋ ಮುನ್ನೆಲೆಗೆ ತರುವ ಪ್ರಯತ್ನವನ್ನು ಮಾಡುತ್ತಿರುತ್ತೇವೆ. ಈ ಮಾದರಿಯೇ ಅತ್ಯಂತ ಪ್ರಬಲವಾಗಿ ಬೆಳೆದು ಬಂದಿದ್ದರಿಂದ, ನಾಟಕ ಓದು, ಕಲಿಕೆ ಇಲ್ಲವೇ ಒಟ್ಟಾರೆ ಸಾಹಿತ್ಯ ಓದಿನ ಸನ್ನಿವೇಶದಲ್ಲಿ ಈ ಓದಿನ ವಿಧಾನ ಮುಂಚೂಣೆಗೆ ಬಂದಿರುತ್ತದೆ. ಈ ಪ್ರಕ್ರಿಯೆಗೆ ಒಳಗಾಗುವ ಪ್ರತಿಯೊಬ್ಬರೂ ಈ ಓದಿನ ಮಾದರಿ ಮಾತ್ರ ಸರಿಯಾದದ್ದು ಎಂದು ನಂಬಿಕೊಂಡಿರುತ್ತಾರೆ.

ನಾಟಕದೊಳಗೆ ಬಳಕೆಯಾಗುವ ಸಂಭಾಷಣೆಯ ಮಾದರಿಗಳು ನಮಗೆ ದೊರೆತಿರುವುದು ನಮ್ಮ ದಿನನಿತ್ಯದ ಬದುಕಿನಲ್ಲಿ ಮೈದಾಳುವ ನಿರೂಪಣೆಗಳಿಂದಲೇ ಮಾತ್ರ. ಇವು ಕೇವಲ ಕಾಲ್ಪನಿಕವಲ್ಲ, ಒಂದು ವೇಳೆ ಸಂಭಾಷಣೆಗಳು ಕಾಲ್ಪನಿಕವಾಗಿದ್ದರೆ, ಅವುಗಳೊಳಗಿಂದ ಸಾಮಾಜಿಕ, ಸಾಂಸ್ಕೃತಿಕ ಇಲ್ಲವೇ ರಾಜಕೀಯ ಹೊಳವುಗಳು ನೆಲೆಗೊಳ್ಳಲು ಹೇಗೆ ಸಾಧ್ಯ.

ಪ್ರತಿಯೊಂದು ಭಾಷಿಕ ವ್ಯವಹಾರವೂ ಯಾವುದೇ ಒಂದು ನಿರ್ವಾತದಲ್ಲಿ ಮೂಡುವುದಿಲ್ಲ. ಬದಲಾಗಿ ಬದುಕಿನ ಸನ್ನಿವೇಶದಲ್ಲಿ ಅವುಗಳು ತಲೆಯೆತ್ತುತ್ತವೆ. ನನ್ನ ವಾದದ ತಿರುಳು ನಾಟಕವೆಂಬುದು ಬದುಕಿನ ರೆಪ್ಲಿಕಾ ಎಂದು ಹೇಳುವುದಲ್ಲ ಬದಲಾಗಿ ಬದುಕಿನ ವಿವಿಧ ಸಾಧ್ಯತೆಗಳನ್ನು ಅರಿಯುವ ಕಣ್ಣೋಟಗಳನ್ನು ರೂಪಿಸುವುದಾಗಿದೆ. ಆದರೆ ಈ ವಿನ್ಯಾಸಕ್ಕೆ ಬೇಕಾಗುವ ವಿವರಗಳನ್ನು ಮಾತ್ರ ಬದುಕಿನ ಸನ್ನಿವೇಶದಿಂದ ಮಾತ್ರ ಪಡೆಯಲಾಗುತ್ತದೆ.

ದೊರೆ ಈಡಿಪಸ್ ಎಂಬೀ ಜಗತ್ಪ್ರಸಿದ್ಧ ನಾಟಕವೂ ಈ ವಿನ್ಯಾಸಕ್ಕೆ ಹೊರತಾಗಿಲ್ಲ. ಸಾಮಾಜಿಕ ನಂಬಿಕೆ, ಗ್ರಹಿಕೆ, ಮೌಲ್ಯಗಳನ್ನು ಪರೀಕ್ಷಿಸುವ ಇಲ್ಲವೇ ಪುನರ್ ಮೌಲ್ಯಮಾಪನ ಮಾಡುವ ಇಲ್ಲವೇ ಹೊಸ ಸಾಮಾಜಿಕ ವಿನ್ಯಾಸವನ್ನು ರೂಪಿಸುವ ಇರಾದೆಯನ್ನೂ ಹೊಂದಿದ್ದರೂ, ಈ ಎಲ್ಲಾ ವಿನ್ಯಾಸಗಳನ್ನು ಯಥೇಚ್ಚವಾಗಿ ಅರಿಯುವುದಕ್ಕೆ ಸಾಧ್ಯವಿದೆ. ಇಂತಹ ಯಥೇಚ್ಚ ಗ್ರಹಿಕೆ ನಮಗೆ ದೊರೆತಿರುವುದು ನಮ್ಮ ಬದುಕಿನ ಪರಿಸರದಲ್ಲಿ.

ಹಾಗಾಗಿ ದೊರೆ ಈಡಿಪಸ್ ನಾಟಕವನ್ನು ಅರಿಯಲು ಗ್ರೀಕ್ ಪುರಾಣ, ಚರಿತ್ರೆಯನ್ನು ಅರಿತುಕೊಂಡರೆ ಮಾತ್ರ ಸಾಧ್ಯವಾಗುತ್ತದೆ ಎನ್ನುವ ನಂಬಿಕೆಯಿಂದ ನಾವು ಹೊರಬರಬೇಕು. ಈ ಬಿಕ್ಕಟ್ಟಿನಿಂದ ನಾವು ಹೊರ ಬರದಿದ್ದರೆ, ಸಾಹಿತ್ಯ ಇಲ್ಲವೇ ನಾಟಕವನ್ನು ಅರಿಯಲು ಪರಾಮರ್ಶನ ಗ್ರಂಥವನ್ನು ಜೊತೆಗಿಟ್ಟುಕೊಂಡು ಓದಬೇಕಾಗುತ್ತದೆ.

ಸಾಹಿತ್ಯ ನಾಟಕವಾಗಲೀ ಇಲ್ಲವೇ ರಂಗ ನಾಟಕವಾಗಲೀ ಭಾಷಿಕ ನಿರೂಪಣೆಗಳನ್ನು ಸೂಕ್ಷ್ಮವಾಗಿ ಗಮನಿಸದೇ, ಆಯಾ ನಾಟಕದೊಳಗೆ ನಿರ್ಮಾಣವಾಗುವ ಸಾಮಾಜಿಕತೆಯನ್ನು ಗ್ರಹಿಸುವುದು ದುಸ್ತರವೇ ಸರಿ. ರಂಗಕ್ರಿಯೆ ಎನ್ನುವುದು ಅಂತಿಮವಾಗಿ ಅದೊಂದು ಸಾಮಾಜಿಕ ಕ್ರಿಯೆಯಾಗಿ ನೆಲೆಗೊಳ್ಳುತ್ತದೆ. ಸಾಹಿತ್ಯ ನಾಟಕವನ್ನು ಅಭಿನಯ ಕೇಂದ್ರಿತವಾಗಿ ಹೇಗೆ ಓದುವುದು. ಅಂದರೆ ಇಂತಹ ಪ್ರಯತ್ನ ಅಸಾಧ್ಯವೆಂದು ನಾನು ಹೇಳಲಾರೆ

ಆದರೆ ಅಂತಹದೊಂದು ಓದಿನಿಂದ ಏನನ್ನು ಪಡೆಯಲು ಸಾಧ್ಯ ಎಂಬ ಪ್ರಶ್ನೆಗೆ ಹೇಗೆ ಉತ್ತರಿಸುವುದು ಎಂಬುದೇ ನನಗಿರುವ ಅನುಮಾನ. ಸಾಫೊಕ್ಲಿಸ್‍ನ ಕಾಲದ ಗ್ರಹಿಕೆಗಳಿಗೆ ಮಾತ್ರ ಸೀಮಿತವಾಗಿ, ಇವತ್ತು ನಾವು ದೊರೆ ಈಡಿಪಸ್ ನಾಟಕವನ್ನು ಓದುವುದು ಸರಿಯೇ? ಹಾಗಾದರೆ ಅಂಕೇಶ್ ಅವರು ಇದನ್ನು ಕನ್ನಡಕ್ಕೆ ತರುವುದಕ್ಕೆ ಬಲವಾದ ಸಾಂಸ್ಕೃತಿಕ ಕಾರಣಗಳೇನು? ಯಾವ ನೈತಿಕತೆಯನ್ನು ಅರಿಯುವ ಇರಾದೆಯಿಂದ ಈ ನಾಟಕವನ್ನು ಲಂಕೇಶ್ ಅವರು ಕನ್ನಡಿಸಿದರು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ದೊರೆ ಈಡಿಪಸ್ ನಾಟಕವನ್ನು ನಾವು ಓದುವುದಾದರೆ, ಕನ್ನಡ ನುಡಿಯೊಳಗೆ ಮೈದಾಳುವ ತಾತ್ವಿಕ ಹಾಗೂ ನೈತಿಕ ಪ್ರಶ್ನೆಗಳು ನಮಗೆ ಮುಖ್ಯವಾಗುತ್ತವೆ.

ಕನ್ನಡ ನುಡಿ ಸಮುದಾಯಕ್ಕೆ ಪೂರಕವಾಗುವ ಬಗೆಯಲ್ಲಿಯೇ ಲಂಕೇಶ್ ಅವರು ಈ ನಾಟಕವನ್ನು ಕನ್ನಡಿಸಿದ್ದಾರೆ ಎಂದು ಹೇಳುವುದು ಅತ್ಯಂತ ಬಾಲಿಶವಾದ ಸಂಗತಿಯಾಗುತ್ತದೆ. ಆದರೆ ಕನ್ನಡ ನುಡಿಯೊಳಗೆ ಮೈದಾಳುವ ಪ್ರತಿಯೊಂದು ಲೋಕಗ್ರಹಿಕೆಯೂ ಬಹುತೇಕವಾಗಿ ಕನ್ನಡದ ಬದುಕಿಗೆ ಅಂಟಿಕೊಂಡಿರುವ ಸಾಮಾಜಿಕ-ರಾಜಕೀಯ ವಿನ್ಯಾಸಗಳೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಹಾಗಾಗಿ ಓದಿನ ಬಗೆಗಳು ಆಯಾ ನುಡಿ ಜಗತ್ತಿನ ತಾತ್ವಿಕತೆಗೆ ಹೊಂದಿಕೊಳ್ಳುವಂತೆ ಹಂಬಲಿಸುತ್ತವೆ. ಏಕೆಂದರೆ ಆಯಾ ಭಾಷೆಯ ಶ್ರವ್ಯಗುಣ ತಾನು ಮೈದೆರದ ನುಡಿ ಸಮುದಾಯಕ್ಕೆ ಒಗ್ಗುವ ಭಾವಗೀತಾತ್ಮಕತೆಯನ್ನು ಅದು ಪೊರೆಯತ್ತದೆ.

ಪರಿಣಾಮವಾಗಿ ಬದುಕಿನ ಕಾಲ ಮತ್ತು ಘಟನೆಗಳ ನಡುವಣ ಸಂಘರ್ಷವನ್ನು ಅರಿಯುವುದಕ್ಕೆ ತಾನು ಮೈದೊರೆದ ನುಡಿ ವಿನ್ಯಾಸ ಹಾಗೂ ಜೀವನದ್ರುಷ್ಟಿಯನ್ನು ನೆಲೆಯಾಗಿಸಿಕೊಳ್ಳುತ್ತದೆ. ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವುದು ಹಾಗೂ ಅದಕ್ಕೆ ಬೇಕಾದ ದಾರಿಗಳನ್ನು ಶೋಧಿಸುವುದು ಎಲ್ಲ ಸಮುದಾಯಗಳಿಗೂ ಪ್ರಿಯವಾದ ಸಂಗತಿಯೇ ಸರಿ. ಆದರೆ ದೊರೆ ಈಡಿಪಸ್ ಕಂಡುಕೊಳ್ಳುವ ಬಗೆ ಅದು ನಮಗೆ ಅನ್ಯವಾಗಿ ಕಾಣಿಸುತ್ತದೆ. ಟೈರೀಸಿಯಸ್ ಪಾತ್ರವನ್ನು ಒಪ್ಪದ ಯಾವುದೇ ಒಂದು ಸಮುದಾಯವಿರಲಾರದು ದಿಟ. ಈಡಿಪಸ್ ತನ್ನ ನೈತಿಕತೆಯನ್ನು ಮರುಸಂಪಾದಿಸುವ ಬಗೆಗಳೂ ಕೂಡ ಎಲ್ಲ ಸಮುದಾಯಗಳ ಸೂಪ್ತಪ್ರಜ್ಷೆಯಲ್ಲಿ ಹುದುಗಿರುತ್ತವೆ ಎಂಬುದು ಕೂಡ ಅಷ್ಟೇ ದಿಟವಾದ ನಿಲುವು.

ಇದುವರೆಗೂ ಚರ್ಚಿಸಿದ ಪ್ರತಿಯೊಂದು ಮಾತು ಕೂಡ ನಾಟಕ ಓದಿನ ಸಾಧ್ಯತೆಯನ್ನು ಕಂಡರಿಯುವ ವಿನ್ಯಾಸಕ್ಕೆ ಸಾಕ್ಷಿಯಾಗಿವೆ. ಭಾಷೆ, ಸಂಭಾಷಣೆ ಹಾಗೂ ನಿರೂಪಣೆಗಳ ರಾಚನಿಕ ವಿನ್ಯಾಸಗಳನ್ನೇ ಪ್ರಧಾನವಾಗಿಟ್ಟುಕೊಂಡು ನಾಟಕವನ್ನು ಓದುವುದಕ್ಕೆ ಇವು ಪೂರಕವಾಗಿವೆ. ಈ ವಿನ್ಯಾಸವನ್ನೇ ಕುವೆಂಪು ಅವರು ತಮ್ಮ ನಾಟಕಗಳಲ್ಲಿ ಸಾಧಿಸಿದ್ದಾರೆ. ಹಾಗಾಗಿ ಅವರ ನಾಟಕಗಳು ಅಭಿನಯಕ್ಕೆ ತಕ್ಕುದಾದವುಗಳಲ್ಲ ಎಂಬ ಆರೋಪವನ್ನೂ ಮಾಡಲಾಗಿತ್ತು.

ಶೇಕ್ಸ್ ಪಿಯರ್ ತನ್ನ ನಾಟಕಗಳಲ್ಲಿ ಒಂದು ಬಗೆಯ ವಿಶ್ವಾತ್ಮಕತೆಯನ್ನು ತಂದುಕೊಳ್ಳಲು ಸಾಧ್ಯವಾದದ್ದೂ ಕೂಡ ಈ ಮಾತು ಮತ್ತು ರೆಟ್ಹಾರಿಕ್ ವಿನ್ಯಾಸಗಳನ್ನು ಒಗ್ಗೂಡಿಸುವ ಕಲೆಯಲ್ಲಿಯೇ ಎಂದು ಹೇಳಬೇಕು. ಭಾಷೆಯನ್ನು ಪಳಗಿಸುವಷ್ಟು ಸುಲಭವಾಗಿ ಸಾಂಸ್ಕೃತಿಕ ವಿನ್ಯಾಸಗಳನ್ನು ಪಳಗಿಸುವುದು ಕಷ್ಟಸಾಧ್ಯ. ಏಕೆಂದರೆ ಇವುಗಳು ವಂಶವಾಹಿನಿಯಂತೆ ಕೆಲಸ ಮಾಡುತ್ತವೆ. ಆದರೆ ಭಾಷೆ ರೂಪಾಂತರ ಗುಣವನ್ನು ಹೊಂದಿರುತ್ತದೆ. ಹೀಗೆ ಒಂದು ಭಾಷೆಯಲ್ಲಿ ಅಡಕವಾಗಿದ್ದ ಗುಣಗಳನ್ನು ಮತ್ತೊಂದು ಭಾಷೆಯ ಗುಣಗಳೊಂದಿಗೆ ಜೋಡಿಸುವುದು ಸಾಧ್ಯ. ಜಗತ್ತಿನ ಶ್ರೇಷ್ಠ ಬರಹಗಾರರು ತಾವು ಮೈಗೂಡಿಸಿಕೊಂಡಿದ್ದ ಕಲೆಯೇನೆಂದರೆ, ತಾವು ಮಂಡಿಸುವ ಸಂವೇದನೆ ಇಲ್ಲವೇ ಸಾಹಿತ್ಯಕ ನಿರೂಪಣೆಗಳನ್ನು ಅತ್ಯಂತ ಲೀಲಾಜಾಲವಾಗಿ ತಮ್ಮ ತಮ್ಮ ಭಾಷೆಗಳ ಮೂಲಕ ನಿರೂಪಿಸುತ್ತಲೇ ಬಂದಿದ್ದಾರೆ. ಹಾಗೂ ಮತ್ತೊಂದು ಭಾಷೆಗೆ ಅವುಗಳನ್ನು ರೂಪಾಂತರಿಸುವ ಆಯಾಮಗಳನ್ನೂ ಈ ನಿರೂಪಣೆಗಳು ಹೊಂದಿರುತ್ತವೆ.

ನಾಟಕ ಮೊದಲು ಒಂದು ಗ್ರಹಿಕೆಯಾಗಿ ನೆಲೆಗೊಳ್ಳಲು ಆಯಾ ಭಾಷೆಯಲ್ಲಿ ಮೈದಾಳಿದ ಸಂಭಾಷಣೆಗಳನ್ನು, ಆಯಾ ಸಂಸ್ಕ್ರುತಿಯಲ್ಲಿ ಅಡಕವಾಗಿರುವ ಆಲೋಚನೆಗಳ ರಚನೆ, ಸಂಕಥನ ಹಾಗೂ ತಾತ್ವಿಕತೆಯ ಸೂಚಕಗಳನ್ನಾಗಿ ಹೇಗೆ ನೋಡಬೇಕು ಎಂಬ ವಾಸ್ತವವನ್ನು ಅರಿಯುವುದು ಜರೂರಾಗಿದೆ. ನಾಟಕವನ್ನು ಆಡುವ ನಟರಿಗೆ ಅಭಿನಯದ ತಾತ್ವಿಕತೆ ಹಾಗೂ ಅದನ್ನು ಪ್ರದರ್ಶಿಸುವ ಕಲೆ ಮತ್ತು ಮಾತುಗಳನ್ನು ನೆಲೆಗೊಳಿಸುವ ಬಗೆಗಳು ಅತ್ಯಂತ ಮುಖ್ಯ ಸಂಗತಿಗಳಾಗುತ್ತವೆ. ಆದಾಗ್ಯೂ ಅವರು ಭಾಷೆಯ ಲಯಗಳನ್ನು ಮರೆಯುವಂತಿಲ್ಲ.

ಹೇಳಲಕ್ಕಾಗದನ್ನು ಧ್ವನಿಸಬಹುದಾದ ಸಾಮರ್ಥ್ಯವನ್ನು ಪ್ರಚುರಪಡಿಸುವುಕ್ಕೆ ದೇಹ ಭಾಷೆ ಮತ್ತು ಮಾನಸಿಕ ಭಾಷೆಯನ್ನು ಮೇಳೈಸಿಕೊಂಡು ನಟಿಸಬೇಕಾಗುತ್ತದೆ. ಕಾವ್ಯವೊಂದು ಧ್ವನಿಸುವ ಪರಿಯೂ ಇದೆಯಾಗಿರುತ್ತದೆ. ನಾಟಕವನ್ನು ಕಾವ್ಯವಾಗಿ ರಚಿಸಿದ ನಾಟಕಕಾರರು, ಅದನ್ನು ಕಾವ್ಯವಾಗಿ ಅಭಿನಯಿಸಿದ ನಟರು ಮತ್ತೆ ಮತ್ತೆ ಬಳಸಿಕೊಂಡದ್ದು ಭಾಷೆಯನ್ನೇ. ನಾಟಕದ ಇಡೀ ಹೂರಣ ಅಡಕಗೊಳ್ಳುವುದೇ ಭಾಷೆಯಲ್ಲಿ ಹಾಗೂ ಭಾಷಿಕ ಸಾಧ್ಯತೆಗಳನ್ನು ಮೈಗೂಡಿಸಿಕೊಳ್ಳುವ ಬಗೆಯಲ್ಲಿ.

ಈ ತತ್ವಕ್ಕೆ ಬದ್ಧನಾಗಿ ದೊರೆ ಈಡಿಪಸ್ ನಾಟಕವನ್ನು ಓದುವ ಪ್ರಯತ್ನವನ್ನು ಮಾಡಲಾಯಿತು.

Leave a Reply