ಇದೂ ಸೋನಿಯಾ ಟ್ರಿಕ್ ಅಲ್ಲವೇ?

2019ರ ಚುನಾವಣೆ ತಯಾರಿಗೆ ಮೋದಿಯವರ ಸಂಪುಟ ಇದೆಂದು ಮಾಧ್ಯಮಗಳು ಭಾನುವಾರದ ಸಂಪುಟ ವಿಸ್ತರಣೆಯನ್ನು ಗುರುತಿಸಿವೆ.  ಈ ಇಡಿಯ ವಿಸ್ತರಣೆ ಎಂಬ “ಕೋರ್ಸ್ ಕರೆಕ್ಷನ್” ನಲ್ಲಿ ಢಾಳಾಗಿ ಕಾಣಿಸಿದ್ದು, ಅಧಿಕಾರವನ್ನು ತಮ್ಮ ಮುಷ್ಟಿಯಲ್ಲಿರಿಸಿಕೊಂಡು, ಕೆಲಸಗಳನ್ನು ಔಟ್ ಸೋರ್ಸ್ ಮಾಡಿದ್ದ ಸೋನಿಯಾಗಾಂಧಿಯವರ ಶೈಲಿ.

ಈಗ ಅಧಿಕಾರದ ಕೇಂದ್ರವು ನಾಗಪುರ ಮತ್ತು ಮೋದಿಯವರ ಕೈಯಲ್ಲಿದೆಯಾದರೂ, ಕೆಲಸದ ಸಾಮರ್ಥ್ಯ ಮತ್ತು ಪರಿಣಾಮಗಳ ದ್ರಷ್ಟಿಯಿಂದ ಅಲ್ಲಿ ಮಾನವ ಸಂಪನ್ಮೂಲದ ಕೊರತೆ ಎದ್ದು ಕಾಣುವಷ್ಟಿದೆ. ಹೊಸದಾಗಿ ಸಂಪುಟಕ್ಕೆ ಸೇರ್ಪಡೆಗೊಂಡ ನಿವ್ರತ್ತ IFS ಅಧಿಕಾರಿ ಹರ್ದೀಪ್ ಸಿಂಗ್ ಪುರಿ, ನಿವ್ರತ್ತ IAS  ಅಧಿಕಾರಿ ಅಲ್ಫೋನ್ಸ್ ಕನ್ನಂತಾನಂ ಮೊದಲಾದವರು ಈ ಕೊರತೆಯನ್ನು ನೀಗುವುದಕ್ಕಾಗಿಯೇ ಸಂಪುಟ ಸೇರುತ್ತಿರುವವರು. ಈಗಾಗಲೇ ಸಂಪುಟದಲ್ಲಿರುವ ಪತ್ರಕರ್ತ ಎಂ. ಜೆ. ಅಕ್ಬರ್, ಜ| (ನಿವ್ರತ್ತ) ವಿ.ಕೆ.ಸಿಂಗ್ ಮತ್ತಿತರ ಹಲವರು ಇದೇ ಊಳಿಗದ ವರ್ಗಕ್ಕೆ ಸೇರಿದವರು.

ಮೂರೂವರೆ ವರ್ಷಗಳಲ್ಲಿ ನರೇಂದ್ರ ಮೋದಿ ಎಂಬ ಪ್ರಖರ ಸೂರ್ಯನೆದುರು ಕೇವಲ ತಮ್ಮ ಬೆಂಕಿ, ಕಾವು ಮತ್ತು ಬೆಳಕುಗಳ ಕಾರಣದಿಂದಾಗಿಯೇ ಗುರುತಿಸಿಕೊಂಡ ಬೆರಳೆಣಿಕೆಯ ಹಣತೆಗಳೆಂದರೆ ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಸುರೇಶ್ ಪ್ರಭು, ಪ್ರಕಾಶ್ ಜಾವ್ಡೇಕರ್ ಮತ್ತು ಸುಷ್ಮಾ ಸ್ವರಾಜ್. ಸಹಜವಾಗಿಯೇ ಈ ಹೆಸರುಗಳು ಈಗ ಹೆವಿವೆಯ್ಟ್ ಹೆಸರುಗಳಾಗಿ ಬದಲಾಗಿವೆ.

ಕಾರ್ಟೂನ್: ಸತೀಶ್ ಆಚಾರ್ಯ

ನಿರ್ಮಲಾ ಸೀತಾರಾಮನ್ ಪರಿಶ್ರಮದ ಕಾರಣದಿಂದಾಗಿ ಬೆಳಕಿಗೆ ಬಂದವರು. ದೇಶದ ವಾಣಿಜ್ಯ ಸ್ಥಿತಿ ಈ ಮೂರೂವರೆ ವರ್ಷಗಳಲ್ಲಿ ಸತತವಾಗಿ ಹದಗೆಡುತ್ತಾ ಬಂದಿದ್ದರೂ, ತನ್ನ ಪ್ರಾಮಾಣಿಕ ಶ್ರಮದ ಕಾರಣದಿಂದಾಗಿ ಎದ್ದು ತೋರಿದ ಸಚಿವೆ ಅವರು. ಈಗ ಅವರನ್ನು ಬಹಳ ಕ್ರಿಟಿಕಲ್ ಸಮಯದಲ್ಲಿ ಎತ್ತಿ ರಕ್ಷಣಾ ಸಚಿವೆಯಾಗಿ ಕೂರಿಸಿರುವುದು ಪ್ರಮೋಷನ್ನೋ ಡಿಮೋಷನ್ನೋ ಎಂಬುದನ್ನು ಪ್ರಧಾನಿಯವರೇ ಹೇಳಬೇಕು.

ಯಾಕೆಂದರೆ, GST ಅನುಷ್ಠಾನ ನಡುಹಾದಿಯಲ್ಲಿ ಅಧ್ವಾನ ಆಗಿ ಕುಳಿತಿದೆ. ಈ ಜಿಡುಕುಗಳನ್ನು ಪರಿಹರಿಸುವಲ್ಲಿ ವಿತ್ತ ಮತ್ತು ವಾಣಿಜ್ಯ ಇಲಾಖೆಗಳು ಓವರ್ ಡ್ರೈವ್ ಹೊರಡಬೇಕಾಗಿರುವ ಸಮಯ ಇದು. ಆದರೆ ನಡುದಾರಿಯಲ್ಲಿ ನಿರ್ಮಲಾ ಅವರನ್ನು ಅಲ್ಲಿಂದ ಎಬ್ಬಿಸಿ, ರಕ್ಷಣಾ ಖಾತೆಯಲ್ಲಿ ಕೂರಿಸಲಾಗಿದೆ. ವಾಣಿಜ್ಯ ಖಾತೆಗೆ ಇನ್ನೊಬ್ಬ ಶ್ರಮಜೀವಿ, ಚಾರ್ಟರ್ಡ್ ಅಕೌಂಟಂಟ್  ಸುರೇಶ್ ಪ್ರಭು ಅವರನ್ನು ವರ್ಗಾಯಿಸಲಾಗಿದೆ. ಅಂದರೆ, ಅಲ್ಲಿ ಸರಿಪಡಿಸಲು ಬೇಕಾದಷ್ಟು ಕೆಲಸಗಳು ಸುರೇಶ್ ಪ್ರಭು ಅವರಿಗೆ ಗುಡ್ಡೆ ಬಿದ್ದಿವೆ ಎಂದೇ ಅರ್ಥ.

ಸುರೇಶ್ ಪ್ರಭು ಅವರಿಂದ ಅತಿ ನಿರೀಕ್ಷೆಯ ಭಾರದಿಂದಾಗಿ ತಗ್ಗಿದ್ದ ರೈಲು ಖಾತೆಗೆ ಸಚಿವರಾಗಿ ಪಿಯೂಷ್ ಗೋಯಲ್ ಎಂಬ ಚಾರ್ಟರ್ಡ್ ಅಕೌಂಟಂಟ್ ಒಳಹೊಕ್ಕಿರುವುದು ಈ ಸಂಪುಟ ವಿಸ್ತರಣೆಯಲ್ಲಿ ನನ್ನಮಟ್ಟಿಗೆ ಅತ್ಯಂತ ಕುತೂಹಲಕರ ಅಂಶ. ಪಿಯೂಷ್ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ್ದಾರೆ ಕೂಡ.

ರಕ್ಷಣಾ ಖಾತೆ, ಗ್ರಹ ಖಾತೆ, ವಿದೇಶಾಂಗ ಖಾತೆಗಳೆಲ್ಲ ಕಿರೀಟವಹಿ ದೊಡ್ಡದೇ ಆದರೂ, ಮೋದಿಯವರಂತಹ ಪ್ರಖರ ಪ್ರಭೆಯ ಪ್ರಧಾನಿ ಇರುವಾಗ ಅವಕ್ಕೂ ಬೇರೆ ಖಾತೆಗಳಿಗೂ ದೊಡ್ಡ ವ್ಯತ್ಯಾಸಗಳೇನಿರುವುದಿಲ್ಲ. ಅವಲ್ಲ ವಸ್ತುಶಃ ಪ್ರಧಾನಿಯೆಂಬ ದೀಪದಡಿಯ ಕತ್ತಲಿನಲ್ಲೇ ಇರುವ ಖಾತೆಗಳು. ಇದನ್ನೆಲ್ಲ ಕಳೆದ ಮೂರೂವರೆ ವರ್ಷಗಳಲ್ಲಿ ಕಂಡಾಗಿದೆ. ಹಾಗಾಗಿ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ಸಚಿವೆ ಆಗಿರುವುದು ಒಂದು ಸಿಂಬಾಲಿಕ್ ಬೆಳವಣಿಗೆಯಾಗಿ ಬಿಜೆಪಿಗೆ ಮಹತ್ವದ್ದಾದೀತೇ ಹೊರತು ದೊಡ್ಡ ಕ್ರಾಂತಿ ಎಂಬ ನಿರೀಕ್ಷೆ ಬೇಕಾಗಿಲ್ಲ.

ಕೊನೆಯದಾಗಿ ಕರ್ನಾಟಕದ ಮಟ್ಟಿಗೆ ಮೋದಿ-ಷಾ ಜೋಡಿಯ ನಿರೀಕ್ಷೆಗಳೇನೆಂಬುದು ಈ ಸಂಪುಟ ವಿಸ್ತರಣೆಯಲ್ಲಿ ಸಾಬೀತಾಗಿದೆ. ನಳಿನ್ ಕುಮಾರ್, ಶೋಭಾ ಕರಂದ್ಲಾಜೆ ಅವರಂತಹ ಕರಾವಳಿಯ ಸಂಭಾವ್ಯ ಹೆಸರುಗಳನ್ನೆಲ್ಲ ಕಡೆಗಣಿಸಿ, ಉತ್ತರ ಕನ್ನಡ ಕರಾವಳಿಯ ವಿವಾದಾತ್ಮಕ ನಾಯಕ ಅನಂತ ಹೆಗಡೆ ಅವರನ್ನು ಸಂಪುಟಕ್ಕೆ ಪರಿಗಣಿಸಲಾಗಿದೆ. ಅಂದರೆ, ರಾಜಕೀಯ-ಜಾತಿ ಲೆಕ್ಕಾಚಾರಗಳೆಲ್ಲದಕ್ಕಿಂತ ಸಂಘಪರಿವಾರದ ಹಿಡಿತವನ್ನು ಕರಾವಳಿಯಲ್ಲಿ ಬಿಗಿಪಡಿಸುವ ಮೂಲಕ ತಮ್ಮ ಪ್ರಯೋಗಶಾಲೆಗೆ ದೀರ್ಘಕಾಲಿಕ ಅಜೆಂಡಾವೊಂದನ್ನು ನಾಗಪುರ ಗೊತ್ತುಪಡಿಸಿದೆ.

ಈ ಹೆಜ್ಜೆಯಿಂದಾಗಿ, ಕರ್ನಾಟಕದ ಎಲ್ಲ ಮೊದಲ ಪಂಕ್ತಿ ನಾಯಕರಿಗೂ ಸ್ಪಷ್ಟ ಸಂದೇಶ ಕೂಡ ರವಾನೆ ಆದಂತಾಗಿದ್ದು, ಕೈ ಕೆಸರಾದರೆ ಮಾತ್ರ ಬಾಯಿಮೊಸರು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಲಾಗಿದೆ.

2 Responses

  1. Karnatakavannu prayogashaleyaagi Maadi kannadiga rannu moorkarannagisuttiddare.

  2. Vijendra says:

    Ella modiyo prabhuve,ella modiye

Leave a Reply

%d bloggers like this: