ಅವಳು ನಿರ್ಗಮನದ ಹಾದಿಯಲ್ಲಿದ್ದಳು. ತಾಯಿಗೆ ಹೇಗೆ ಹೇಳಲಿ..

‘ಅವಧಿ’ಯ ಅಂಕಣಕಾರ, ಓದುಗ ಪ್ರಸಾದ್ ರಕ್ಷಿದಿ ಅವರ ಮಗಳು ಅಮೃತಾ ಇನ್ನಿಲ್ಲ. ನೀನಾಸಂನ ರಂಗ ಪದವೀಧರೆ, ಕನಸುಗಣ್ಣುಗಳ ಹುಡುಗಿ ನಿರಂತರ ಯಾತ್ರೆಗೆ ಸಜ್ಜಾಗಿಬಿಟ್ಟಳು. 

ತಂದೆಯ ಕಣ್ಣಲ್ಲಿ ಆ ಕೊನೆಯ ದಿನ ಹೀಗಿತ್ತು-

ಪ್ರಸಾದ್ ರಕ್ಷಿದಿ 

ಗೆಳೆಯ ದಿನೇಶ್ ಕುಕ್ಕಜಡ್ಕ, ಗಣೇಶನ ಹಬ್ಬದ ದಿನ ಸಕುಟುಂಬರಾಗಿ ಬಂದಿದ್ದರು. ಜೊತೆಯಲ್ಲಿ ಅದ್ಭುತ ಕೃಷಿಕ ಕಾಡಿನ ಮನುಷ್ಯ ಮುರಳಿ ಎಂಬ ಗೆಳೆಯನೂ ಇದ್ದರು. ದಿನೇಶ ಹಿಂದಿರುಗುವಾಗ ನನ್ನಲ್ಲಿದ್ದ ‘ಓಶೋ’ ನ ‘ಬುದ್ಧ ಮತ್ತು ಪರಂಪರೆ’ ಪುಸ್ತಕವನ್ನು ಕೊಟ್ಟೆ.

ಅಮೃತಾ ಆ ಪಸ್ತಕವನ್ನು ಒಂದು ಬಾರಿ ಓದಿ ಮುಗಿಸಿದ್ದಳು, ಕೆಲವು ಅಧ್ಯಾಯಗಳನ್ನು ಪದೇ ಪದೇ ಓದಿದ್ದಳು. ಅವಳು ಇತ್ತೀಚಿಗೆ ಹಲವು ಬಾರಿ ತಿರುವಿ ಹಾಕಿದ್ದು ಅಗ್ನಿ ಶ್ರೀಧರ ಅವರ “ಕ್ವಾಟಂ ಜಗತ್ತು” ಮತ್ತು ಮಣಿ ಬೌಮಿಕ್ ಅವರ “ಕೋಡ್ ನೇಮ್ ಗಾಡ್” ಎಂಬ ಪುಸ್ತಕಗಳು.

ಕೇವಲ ಕೆಲವು ದಿನಗಳ ಹಿಂದೆ ಅವಳ ಆತ್ಮ ಚರಿತ್ರೆಯ ಬರಹ ಮುಗಿದಿತ್ತು.

ಮೈಸೂರಿಗೆ ಹೋದಾಗ ದೇವನೂರ ಮಹಾದೇವ ಅವರುಮನೆಗೇ ಬಂದು (ನಮ್ಮಕ್ಕನ ಮನೆ) ಅಮೃತಾಳನ್ನು ಮಾತಾಡಿಸಿ, ಅವಳ ಚಿತ್ರಗಳನ್ನು ನೋಡಿ ಮೆಚ್ಚಿದ್ದರು. ನಿನ್ನ ಪುಸ್ತಕ ಬಿಡುಗಡೆಗೆ ಒಬ್ಬ ಪ್ರೇಕ್ಷಕನಾಗಿ ಬರುತ್ತೇನಮ್ಮ ಎಂದಿದ್ದರು. ಅಮೃತಾಳ ಪ್ರಶ್ನೆಗಳಿಗೆ ಮಹಾದೇವ ನೀಡಿದ ಉತ್ತರಗಳು ಅವಳಿಗೆ ತುಂಬ ತುಂಬ ಸಾಂತ್ವನ ನೀಡಿದ್ದವು.

ಅಮೃತಾಳ ಪುಸ್ತಕ ಬಿಡುಡೆಯ ದಿನ ನಿಗದಿಯಾಗಿತ್ತು ( ನವೆಂಬರ್19)

ಆ ದಿನ ಸಂಜೆ ಅಮೃತಾ “ಅಪ್ಪ ನನ್ನ ಕೆಲಸ ಮುಗಿಯಿತಲ್ಲ” ಎಂದಳು.
“ಹೌದು ಪುಸ್ತಕದ ಕೆಲಸ ಮುಗಿಯಿತು. ಇನ್ನು ಪೇಂಟಿಂಗ್ ಕಡೆ ಗಮನ ಕೊಡು” ಎಂದೆ.
“ಇಲ್ಲಪ್ಪ ನನ್ನ ಪರ್ಪಸ್ ಮುಗಿಯಿತು” ಎಂದಳು.
“ಏನೂ ಹಾಗಂದರೆ?”
“ಅಪ್ಪ ಬುದ್ಧ ಹೇಳಿದ್ದಾನೆ ಜೀವಕ್ಕೊಂದು ಪರ್ಪಸ್ ಇದೆ ಅದು ಮುಗಿದ ನಂತರ ಹೊರಟುಹೋಗುತ್ತದೆ. ಅಂತ ನನ್ನ ಜೀವನದ ಪರ್ಪಸ್ ಮುಗಿಯಿತು” ಎಂದಳು. ನಾನು ಗಂಭೀರನಾದೆ.

ಈಗ ಕೇವಲ ಮೂರು ದಿನದ ಹಿಂದೆ “ನನ್ನಿಂದ ಯಾರಿಗೂ ನೆಮ್ಮದಿ ಇಲ್ಲ, ನನಗೂ ಇಲ್ಲ ನಾನು ಕಾಲಯಾನ ಮಾಡುತ್ತೇನೆ. ಹಿಂದಕ್ಕೆ ಚಲಿಸಿ ಬೇರೆ ಗರ್ಭದಲ್ಲಿ ಹುಟ್ಟುತ್ತೇನೆ” ಎಂದಳು. ನಾನು ಅದಕ್ಕೂ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ.
ಅಂದು ರಾತ್ರಿ ಮಲಗುವ ಮುನ್ನ “ಅಪ್ಪ ನನಗೊಂದು ಕಥೆ ಹೇಳಿ” ಎಂದು
ನೀನು ಪ್ರಪಂಚಕ್ಕೇ ಕಥೆ ಹೇಳೋಕೆ ಹೊರಟಿದ್ದೀಯ, ನಿಂಗೇ ಯಾವ ಕಥೆ ಹೇಳ್ಲಿ?” ಎಂದೆ.
“ಅಪ್ಪ ಕೆಂಪಕ್ಕಿ- ನೀಲಿ ಹಕ್ಕಿಯಾದ ಕಥೆ ಹೇಳಿ” ಅಂದಳು.

ಎದೆಯಲ್ಲಿ ಬೆಂಕಿ ಹೊತ್ತಿಕೊಂಡಿತು.

ಅದು ಅಮೃತ ಮೂರು ವರ್ಷದ ಮಗುವಾಗಿದ್ದಾಗ ನಾನೇ ಕಟ್ಟಿ ಹೇಳುತ್ತಿದ್ದ ಕಥೆ. ಅದು ಸುಳ್ಳೆಂದು ಗೊತ್ತಾದ ನಂತವೂ ಅನೇಕ ಬಾರಿ ನನ್ನಿಂದ ಅದೇ ಕಥೆಯನ್ನು ಹೇಳಿಸಿಕೊಂಡಿದ್ದಳು. ಈಗ ಬೇಡವೆಂದರೆ ಕೇಳಲಿಲ್ಲ. “ಒಂದ್ಸಾರಿ ಹೇಳಿ ಅಪ್ಪ” ಎಂದಳು. ಕಣ್ಣಲ್ಲಿ ಯಾತನೆಯ ಬೇಡಿಕೆಯಿತ್ತು. ಕಥೆ ಹೇಳಿಮುಗಿಸಿದೆ. ಸಮಾಧಾನದ ನಿಟ್ಟುಸಿರುಬಿಟ್ಟಳು.

ನಾನು ಅಂದು ನಿದ್ರಿಸಲಿಲ್ಲ. ಏನೋ ಭಯ ಇವಳೇನೋ ಮಾಡಿಕೊಂಡಾಳೆಂಬ. ಅದನ್ನು ತಿಳಿದವಳಂತೆ “ನಾನು ಹಿಂದೆಲ್ಲ ಸಾಯಲು ಬಯಸಿದ್ದು ಸಾಯುವ ಉದ್ದೇಶದಿಂದ ಅಲ್ಲ ಅಪ್ಪ , ಜನರು ಹೀಗಾದರೂ ನನ್ನನ್ನು ಗುರ್ತಿಸಲಿ ಅಂತ, ಈಗ ನನಗೆ ಆ ಸಮಸ್ಯೆ ಇಲ್ಲ” ಎಂದು ಬಿಟ್ಟಳು.

ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಯ ವೇಳೆಗೆ. ಈ ವರ್ಷ “ಶೂರ್ಪನಖಿ” ಸೋಲೋ ಮಾಡುತ್ತೇನೆಂದು ಕಾಸ್ಟೂಮ್ ಮತ್ತ ಮೇಕಪ್ ಗಳ ಡಿಸೈನ್ ಮಾಡಿ ಚಿತ್ರಿಸಿ ನನಗೆ ತೋರಿಸಿದಳು. ನಂತರ ಕಥಕ್ಕಳಿ, ಯಕ್ಷಗಾನ, ಕಳರಿ ಮತ್ತು ಭರತ ನಾಟ್ಯ ಶೈಲಿಯಲ್ಲಿ ಶೂರ್ಪನಖಿಯ ಚಲನೆಗಳನ್ನುಕುಣಿದು ತೋರಿಸಿದಳು. ಸಾಕು ಸುಸ್ತು ಮಾಡಿಕೊಳ್ಳಬೇಡವೆಂದು ಹೇಳಿ ಕೂರಿಸಿದೆ.

“ನಾನು ಹೆಗ್ಗೋಡಿಗೆ ಹೋಗುತ್ತೇನೆ ಮೂರು ವಾರವಿದ್ದು ಐತಾಳ ಸರ್ ಮತ್ತು ಮಂಜು ಸರ್ ಹತ್ರ ಸ್ಟೆಪ್ಸ್ ಎಲ್ಲ ಸರಿಮಾಡಿಸಿಕೊಂಡು ಬರುತ್ತೇನೆ. ಅರುಣ್ ಸರ್ ಹತ್ರ ಮ್ಯೂಸಿಕ್ ಮಾಡಿಕೊಡಲು ಹೇಳುತ್ತೇನೆ ನಮ್ಮ ರಂಗ ಮಂದಿರದಲ್ಲಿ ಮೊದಲನೇ ಶೋ” ಎಂದಳು. ಈ ಬೇಸಗೆಯಲ್ಲಿ ಬೆಂಗಳೂರಿನಲ್ಲಿ ವೈಜಯಂತಿ ಕಾಶಿಯವರ ಬಳಿ ನೃತ್ಯ ಕಲಿಯಲು ಸೇರಬೇಕು ಅವರು ಹಿರಿಯರು ನನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಹೇಳಿಕೊಟ್ಟಾರು ಎಂದೆಲ್ಲ ತನ್ನ ಕನಸನ್ನು ಬಿಚ್ಚಿಟ್ಟಳು.

ಸಂಜೆಯಾಗುತ್ತಿದ್ದಂತೆ ಮತ್ತೆ ಮಾತು ಮುಂದುವರೆಸಿದಳು. ಬರಿ ಮಾತು ಮಾತು ಮಾತು. ನಿದ್ದೆ ಮಾಡೆಂದು ಹೇಳಿದರೆ. ಬಯ್ದಳು. “ನಿಮಗೊಂದು ನಿದ್ದೆ ನನಗೆ ಮಾತು ನಿಲ್ಲಿಸಿದರೆ ತಲೆ ಸಿಡಿದು ಹೋಗುತ್ತೆ ” ಎಂದಳು. ಮಾರನೆಯ ಬೆಳಗ್ಗೆ ಬೆಂಗಳೂರಿಗೆ ಹೋಗೋಣ ಈಗ ಮಲಗು ಎಂದೆ. “ಬೆಂಗಳೂರಿಗೆ ಅಣ್ಣನ ಮನೆಗಾದರೆ ಬರುತ್ತೇನೆ. ಆಸ್ಪತ್ರೆಗೆ ಬರುವುದಿಲ್ಲ ಅವರು ಇನ್ನು ಮಾಡುವಂತದ್ದು ಏನೂ ಇಲ್ಲ” ಎಂದಳು.

ಹಾಗೇ ಮಾಡೋಣ ಎಂದು ಹೊರಡಿಸಿದೆ. ಬಟ್ಟೆಗಳನ್ನು ಬ್ಯಾಗಿಗೆ ತುಂಬಿಕೊಂಡಳು. ಮತ್ತೆ ಮಾತು ಪ್ರಾರಂಭಿಸಿದಳು. ರಾತ್ರಿಯಿಡೀ ಮಾತು ಮಾತು, ನಾವಿಬ್ಬರೂ (ಅಪ್ಪ ಅಮ್ಮ) ಪಕ್ಕದಲ್ಲಿದ್ದೆವು. ಒಂದೆರಡು ಬಾರಿ ಸುಸ್ತಾಗಿ ಮಲಗಿ ಎದ್ದಳು. ಮತ್ತೆ ಮಾತು ಮುಂದುವರಿಯಿತು. ಬೆಳಗಿನ ಜಾವದವರೆಗೂ…..

ಅವಳು ನಿರ್ಗಮನದ ಹಾದಿಯಲ್ಲಿದ್ದಳು. ತಾಯಿಗೆ ಹೇಗೆ ಹೇಳಲಿ..

ಸೂರ್ಯೋದಯಕ್ಕೂ ಸ್ವಲ್ಪ ಮೊದಲು ಅಮೃತಾ ಕಾಲಯಾನವನ್ನೇರಿದಳು.

ಆ ಚೈತನ್ಯ ಕ್ಕೆ ಬುದ್ಧಗುರು ನವಗರ್ಭವನ್ನು ಕರುಣಿಸಲಿ… ನಮ್ಮನ್ನು ಕ್ಷಮಿಸಲಿ..

2 comments

  1. ಹೇ ದೇವಾ…ಅಮೃತಾ..ಇನ್ನೊಮ್ಮೆ ಹುಟ್ಟಿ ಬಾ

Leave a Reply