ಮಿಸ್ ಯೂ ಗೌರಿ…

ಪ್ರಶಾಂತ್ ಹುಲ್ಕೊಡು

ಮನೆಯಲ್ಲಿ ಅಮ್ಮ ಗಾಬರಿಯಾಗಿದ್ದಾರೆ. ಗೌರಿ ಲಂಕೇಶ್ ಹತ್ಯೆ ಆಕೆಯನ್ನು ಗಾಬರಿ ಬೀಳಿಸಿದೆ. ‘ಮಗ ಕೂಡ ಅದೇ ವೃತ್ತಿಯಲ್ಲಿದ್ದಾನೆ, ಅವನಿಗೆ ಏನಾಗುತ್ತೊ’ ಎಂಬ ತಾಯಿಯ ಸಹಜ ಮನಸ್ಸು ಅದು. ಇರಲಿ, ನಾನು ಫೀಲ್ಡ್‌ಗೆ ಬಂದ ಮೇಲೆ ಅನೇಕ ಪತ್ರಕರ್ತರ ಹತ್ಯೆಗಳನ್ನು ಕೇಳಿದ್ದೇನೆ. ಯುದ್ಧ ಪೀಡಿತ ಪ್ರದೇಶಗಳಲ್ಲಿ ಬಲಿಯಾದ ಪತ್ರಕರ್ತರ ಕೊಲೆಗಳಿಗೆ ವೀಕ್ಷಕನಾಗಿದ್ದೇನೆ. ನಮ್ಮಲ್ಲೇ, ಇವತ್ತು ಸಂಸದರಾಗಿರುವ ಪ್ರತಾಪ್ ಸಿಂಹ, ಸಂಪಾದಕ ವಿಶ್ವೇಶ್ವರ ಭಟ್, ಮಾಧ್ಯಮ ಮಾಲೀಕ ವಿಜಯ್ ಸಂಕೇಶ್ವರ್ ಮತ್ತಿತರ ಕೊಲೆಗೆ ಸಂಚು ರೂಪಿಸಿದ ಪ್ರಕರಣದ ವರದಿಯನ್ನು ಬರೆದಿದ್ದೇನೆ. ಪ್ರತಿ ದಿನ ಅಲ್ಲದಿದ್ದರೂ, ಆಗಾಗೆ ನಾನೇ ಕೊಲೆಯಾದಂತೆ ಕನಸನ್ನೂ ಕಂಡಿದ್ದೇನೆ.
ನಿನ್ನೆ ಕೂಡ ರಾಜರಾಜೇಶ್ವರಿ ನಗರದ ಗೌರಿ ಅವರ ಮೃತ ದೇಹ ಬಿದ್ದ ಜಾಗದ ಪಕ್ಕದಲ್ಲಿ ಮಧ್ಯ ರಾತ್ರಿ ನಿಂತುಕೊಂಡು ಇದನ್ನೇ ಯೋಚಿಸುತ್ತಿದ್ದೆ… ಕೊಲೆಯಾಗುವುದು ವಿಶೇಷ ಏನಲ್ಲವಾದರೂ, ಇಂಗ್ಲಿಷ್ ಪತ್ರಿಕೋದ್ಯಮ, ವಿದೇಶಿ ಪತ್ರಿಕೋದ್ಯಮದ ಬೆರಗು ಎಲ್ಲವನ್ನೂ ಕಂಡಿದ್ದ ಗೌರಿ ಕೊನೆಗೆ ಇಲ್ಲಿಗೆ ಬಂದು ಹೀಗೆ ಕೊಲೆಯಾಗಬೇಕಿತ್ತಾ? ಅಂತ.

ನನಗೆ ಗೌರಿ ಪರಿಚಯ ಅಂತ ಆಗಿದ್ದು 2002-03ರ ಸುಮಾರಿಗೆ. ನಾನಾಗ ಮನೆಯಲ್ಲಿ ಡಾಕ್ಟರೋ, ಎಂಜಿನಿಯರ್ರೋ ಆಗಬೇಕು ಅಂತ ಹಠ ಹಿಡಿದಿದ್ದ ಕುಟುಂಬದವರನ್ನು ಧಿಕ್ಕರಿಸಿ ಪಿಯುಸಿ ಬಿಟ್ಟು ಬೆಂಗಳೂರಿಗೆ ಬಂದಿದ್ದೆ. ಆದರೆ ಪತ್ರಕರ್ತನೇ ಆಗಬೇಕು ಎಂಬ ಕನಸು ಕಟ್ಟಿಕೊಂಡಿದ್ದೆ. ಈ ಸಮಯದಲ್ಲಿ ‘ಒಂದು ಕೆಲಸ ಕೊಡಿ’ ಎಂದು ಗೌರಿ ಅವರ ಬಳಿ ಹೋಗಿದ್ದೆ. ಏನನ್ನೋ ಬರೆಯಲು ಹೇಳಿ ಕಳಿಸಿದರು. ಮತ್ತೆ ಒಂದು ವಾರ ಬಿಟ್ಟು ಬರೆದಿದ್ದನ್ನು ತೆಗೆದುಕೊಂಡು ಹೋಗಿದ್ದೆ. ಈ ಸಮಯದಲ್ಲಿ ‘ಕನ್ನಡ ಸರಿಯಾಗಿ ಬರೆಯಲು ಬರಲ್ಲ ನಿಂಗೆ, ಮೊದಲು ಡಿಗ್ರಿ ಓದಿಕೊಂಡು ಬಾ’ ಎಂದು ಕಳಿಸಿಕೊಟ್ಟಿದ್ದರು. ಆಗ ಮನೆಯವರ ಜತೆಯೂ ಮಾತಾಡ್ತೀನಿ ಅಂತ ಹಠಕ್ಕೆ ಬಿದ್ದಿದ್ದರು. ನಾನು ಕೋಪಗೊಂಡು, ತಪ್ಪಿಸಿಕೊಂಡು ಶಿವಮೊಗ್ಗಕ್ಕೆ ಹೋಗಿ ಪಿಯುಸಿ ಸಪ್ಲೆಮೆಂಟರಿ ಬರೆದು, ವಿಜ್ಞಾನಕ್ಕೆ ಗುಡ್‌ ಬೈ ಹೇಳಿ ಪತ್ರಿಕೋದ್ಯಮ ಸೇರಿಕೊಂಡೆ.

ಆಗ ಮತ್ತೆ ಮುಖಾಮುಖಿಯಾದರು ಗೌರಿ. ಹೋರಾಟ, ಸಂಘಟನೆ ಅಂತ ನಾನು ಕಾಲೇಜು ದಿನಗಳಲ್ಲಿ ಓಡಾಡುತ್ತಿದ್ದಾಗ, ಗೌರಿ ಕೂಡ ಓಡಾಟ ಶುರುಮಾಡಿದ್ದರು. ಹೀಗಾಗಿ ಒಂದೇ ಸೂರಿನಡಿ ನಾವು ಆಗಾಗ ಸ್ಪಂದಿಸುವ ಅವಕಾಶ ಒದಗಿ ಬಂತು. ಒಂದೇ ವ್ಯತ್ಯಾಸ ಏನಿತ್ತು ಎಂದರೆ ಅವರು ನಾಯಕಿ ಆಗಿದ್ದರು, ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ. ನಂತರ ದಿನಗಳಲ್ಲಿ ನನಗೆ ‘ಕೋಮು ಸೌಹಾರ್ದ ವೇದಿಕೆ’ ಕುರಿತು ಅಸಮಾಧಾನಗೊಂಡು ಅದರಿಂದ ಹೊರಬಂದಿದ್ದೆ. ಈ ಸಮಯದಲ್ಲಿ ಗೌರಿ ಸೇರಿದಂತೆ ಹಲವು ಸಂಗಾತಿಗಳ ಸಂಪರ್ಕ ಕಡಿತಗೊಂಡಿತ್ತು. ನಾನು ಪತ್ರಿಕೋದ್ಯಮ ಪದವಿ ಮುಗಿಸಿ ಮುಖ್ಯವಾಹಿನಿಯ ಮಾಧ್ಯಮ ಸೇರಿಕೊಂಡಿದ್ದೆ.

ನಡುವೆ ವಾಹಿನಿಯೊಂದರಲ್ಲಿ ಇರುವಾಗ ಸ್ಟೋರಿಯೊಂದಕ್ಕೆ ಬೈಟ್ ತೆಗೆದುಕೊಳ್ಳಲು ಹೋಗಿದ್ದೆ. ಆಗ ನಕ್ಸಲ್ ನಾಯಕರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ಆರಂಭವಾಗಿತ್ತು. ಇನ್ನೂ ಎಲ್ಲಿಯೂ ಬಹಿರಂಗವಾಗಿರಲಿಲ್ಲ. ಬೈಟ್ ಕೊಟ್ಟು, ಅವರ ಕಂಪ್ಯೂಟರ್‌ನಲ್ಲಿ ಹಳೆಯ ನಕ್ಸಲ್‌ ಚಳವಳಿ ಸಂಬಂಧಪಟ್ಟ ಫೊಟೋಗಳನ್ನು ಫಾರ್ವರ್ಡ್ ಮಾಡಿದರು. ಪತ್ರಕರ್ತರು ಎಲ್ಲಾ ಇಟ್ಟುಕೊಂಡಿರಬೇಕು ಎಂದು ನಗುತ್ತ ಸಿಗರೇಟು ಹಚ್ಚಿದ್ದರು.
ಈ ನಡುವೆ, ‘ಸಮಾಚಾರ’ ಆರಂಭಿಸಿದ ಸಮಯದಲ್ಲಿ ಯಾವುದೋ ಒಂದು ಸ್ಟೋರಿಗೆ ರಿಸರ್ಚ್ ಮಾಡ್ತಾ ಇದ್ದೆ. ಈ ಸಮಯದಲ್ಲಿ ಗೌರಿ ಬರೆದ ಒಂದು ಇಂಗ್ಲಿಷ್ ಲೇಖನ ಸಿಕ್ಕಿತು. ಅದರ ಕೆಲವು ಮಾಹಿತಿಗಾಗಿ ಕರೆ ಮಾಡಿದೆ. ಯಾವ ಒತ್ತಡದಲ್ಲಿದ್ದರೋ ಗೊತ್ತಿಲ್ಲ, “ಅಲ್ಲೇ ಇದೆ ಎಲ್ಲಾ ಓದ್ಕಳಪ್ಪ” ಎಂದು ಫೋನಿಟ್ಟರು. ಅಷ್ಟೊತ್ತಿಗೆ ಅವರ ಆರೋಗ್ಯ ಕೂಡ ಹದಗೆಟ್ಟಿದೆ ಎಂದು ಸ್ನೇಹಿತರ ವಲಯದಲ್ಲಿ ಕೇಳಿದ್ದೆ. ಅದಾದ ಮೇಲೂ ಆಗಾಗ ಟೌನ್‌ ಹಾಲ್‌ ಅಲ್ಲಿ ತಮ್ಮ ಗುಬ್ಬಿ ದೇಹಕ್ಕೆ ಒಂದು ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಬರುತ್ತಿದ್ದರು. ಎದುರಿಗೆ ಸಿಕ್ಕರೆ ಲಿಪ್‌ಸ್ಟಿಕ್ ಹಚ್ಚಿದ ತುಟಿಯನ್ನು ಬಿಚ್ಚಿ ಪರಿಚಯದ ನಗೆ ಬೀರುತ್ತಿದ್ದರು. ಸ್ವಲ್ಪ ಹೊತ್ತಿಗೆ ಘೋಷಣೆ ಕೂಗುವವರ ಗುಂಪಿನ ಜತೆ ಇರುತ್ತಿದ್ದರು.

ಕೆಲವು ತಿಂಗಳ ಹಿಂದೆ ಗೆಳೆಯ ಹರ್ಷ ಜತೆ ನಾನು ‘ಸಮಾಚಾರ’ ಪ್ರಯೋಗದ ಕುರಿತು ಮಾತನಾಡಲು ಗಾಂಧಿ ಬಜಾರಿನ ಗೌರಿ ಕಚೇರಿಗೆ ಹೋಗಿದ್ದೆ. ‘ತಿಂಗಳ ಇಎಂಐಗಳನ್ನೇ ಕಟ್ಟುವುದು ಕಷ್ಟವಿದೆ ಮರಿ, ಆದ್ರೂ ಇಂತಹದೊಂದು ಜರ್ನಲಿಸಂ ಕನ್ನಡಕ್ಕೆ ಬೇಕಿತ್ತು. ಚೆನ್ನಾಗಿ ಬರೀತಿದೀರ. ನಂಗೆ ಸ್ವಲ್ಪ ಟೈಮ್ ಕೊಡು’ ಅಂದಿದ್ರು. ಅದಾದ ಮೇಲೆ ನಾನು ಮತ್ತೆ ಅವರನ್ನು ಮತ್ತೆ ಸಂಪರ್ಕಿಸರಲಿಲ್ಲ. ಫೇಸ್ಬುಕ್‌ಗಳಲ್ಲಿ ಅವರು ‘ಸಮಾಚಾರ’ದ ಕೆಲವು ಸ್ಟೋರಿಗಳನ್ನು ಶೇರ್ ಮಾಡುತ್ತಿದ್ದರು. ಕೆಲವು ವರದಿಗಳನ್ನು ತಮ್ಮ ಪತ್ರಿಕೆಯಲ್ಲಿ ಮರು ಮುದ್ರಣ ಮಾಡಿದರು. ಅದನ್ನು ನೋಡಿದಾಗ ಮನಸ್ಸಿನಲ್ಲಿಯೇ ಥ್ಯಾಂಕ್ಯೂ ಅಂತ ಹೇಳಿಕೊಳ್ಳುತ್ತಿದ್ದೆ.

ನನ್ನ ವೃತ್ತಿ ಜೀವನದಲ್ಲಿ ಹಲವು ಪತ್ರಕರ್ತರನ್ನು ಕಂಡಿದ್ದೇನೆ. ಪತ್ರಿಕೋದ್ಯಮಕ್ಕೆ ಬೈದು ಹೊಸ ಉದ್ಯೋಗ ಹುಡುಕಿಕೊಂಡವರನ್ನೂ ಕಂಡಿದ್ದೇನೆ. ಇಂಗ್ಲಿಷ್ ಪತ್ರಿಕೋದ್ಯಮದ ವೃತ್ತಿ ಪರತೆ ಹಿನ್ನೆಲೆಯಲ್ಲಿ ಬಂದ ಸಂಪಾದಕರ ಕೆಳಗೆ ಕೆಲಸ ಮಾಡಿದ್ದೇನೆ. ಆದರೆ, ಗೌರಿ ರೀತಿಯ ಪತ್ರಕರ್ತೆಯನ್ನು ನಾನು ಕರ್ನಾಟಕದಲ್ಲಿ ಕಂಡಿಲ್ಲ.

ಅವರು ಪತ್ರಕರ್ತೆ ಮಾತ್ರವೇ ಆಗಿರಲಿಲ್ಲ, ಹೋರಾಟಗಾರ್ತಿಯೂ ಆಗಿದ್ದರು. ಪತ್ರಿಕೋದ್ಯಮ ಮತ್ತು ಹೋರಾಟ ಒಂದಕ್ಕೊಂದು ತದ್ವಿರುದ್ಧ ನೆಲೆಯಲ್ಲಿ ನಿಂತಿರುವ ಈ ದಿನಗಳಲ್ಲಿ ಅವರು ಎರಡೂ ದೋಣಿಯ ಮೇಲೆ ಕಾಲಿಟ್ಟು ಪ್ರಯಾಣ ಮಾಡುತ್ತಿದ್ದರು. ಆದರೆ ಅವರ ಪ್ರಯಾಣ ಸದ್ದು ಮಾಡುತ್ತಿತ್ತು. ಸತ್ಯ ಹೇಳುತ್ತಿತ್ತು. ಸ್ಟೋರಿಗಳು ಮೂಡಿಸುವ ಕಂಪನಕ್ಕಿಂತ ಹೆಚ್ಚಿನ ಕಂಪನಗಳನ್ನು ಅವರ ಮಾತುಗಳು, ಭಾಷಣ ಮೂಡಿಸುತ್ತಿದ್ದವು.

ಅದೇ ವೇಳೆ ವಿರೋಧಗಳಿಗೆ ಅಗತ್ಯಕ್ಕಿಂತ ಹೆಚ್ಚೇ ಕಿವುಡಾಗಿದ್ದರು. ಸುತ್ತಲಿನ ಜನರ ಆಲೋಚನೆಯ ವೃತ್ತದಲ್ಲಿ ಬಂಧಿಯಾಗಿದ್ದರು. ಏಕಮುಖ ಚಲನೆ ಅಂತ ನನಗೆ ಆಗಾಗ ಅನ್ನಿಸುತ್ತಿತ್ತು. ಬಹುಶಃ ಅವರ ಬಗ್ಗೆ ಇರುವ ನನ್ನ ಏಕೈಕ ಭಿನ್ನಾಭಿಪ್ರಾಯ ಇದಿಷ್ಟೆ.
ಏನೇ ಇದ್ದರೂ, ಪತ್ರಕರ್ತೆಯಾಗಿ ವರದಿಗಳನ್ನು ಬರೆಯುವ ಹಕ್ಕು, ಈ ದೇಶದ ಪ್ರಜೆಯಾಗಿ ಸಂವಿಧಾನದ ಆಶಯಗಳನ್ನು ಉಳಿಸುವ ಹಕ್ಕು, ತನ್ನ ಸುತ್ತಮುತ್ತಲಿನ ಯುವ ನಾಯಕರಿಗೆ ಅಮ್ಮನಾಗುವ ಹಕ್ಕು ಇವುಗಳನ್ನು ಮೀರಿ ಬದುಕುವ ಹಕ್ಕನ್ನು ಗೌರಿ ಹೊಂದಿದ್ದರು.
ಅದು ಯಾವ ಕಾರಣಗಳಿಗೇ ಆಗಲಿ, ಅವರನ್ನು ಕೊಲೆ ಮಾಡಿದ ಮನಸ್ಥಿತಿಯ ಬಗ್ಗೆ ನನಗೆ ಅಸಹ್ಯವಾಗುತ್ತಿದೆ. ಒಬ್ಬ ಪತ್ರಕರ್ತನಾಗಿ, ನನ್ನ ಸಹೋದ್ಯೋಗಿಯ ಸಾವಿಗೆ ನ್ಯಾಯ ಕೊಡಿಸುವ ಹೊಣೆಹಾರಿಕೆ ನನ್ನ ಮೇಲಿದೆ. ನನ್ನ ವಲಯದ ಸ್ನೇಹಿತರ ಮೇಲಿದೆ.

ಗೌರಿಯನ್ನು ಕಳೆದುಕೊಂಡಿರುವ ಈ ಸಮಯದಲ್ಲಿ ಅಸಹ್ಯಕರ ಪ್ರತಿಕ್ರಿಯೆ ನೀಡುವವರ ಬಗ್ಗೆ ಸಂತಾಪ ಸೂಚಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ಗೌರಿ ಕುಟುಂಬ ಗೌರಿ ಸಾವಿನ ಭಾರದಿಂದ ಹೊರಬರಲಿ. ಅವರಿಗೆ ಸಾಂತ್ವನ ಸಿಗಲಿ.
ಗೌರಿ, ನನ್ನ ಕಡೆಯಿಂದ ಭಾವಪೂರ್ವಕ ಶ್ರದ್ಧಾಂಜಲಿ.
ಮಿಸ್ ಯೂ…

Leave a Reply