ತೂಗುವ ತೋಳ್ತೊಡೆಯ ಬೀಗು ಬಾಹುವಿನ ಕದನೋತ್ಸಾಹ..

ಆನಂದ ಋಗ್ವೇದಿ

ಯುದ್ಧ ಸೋತ ಯಶೋಧರ

ವೀರ್ಯವೆಂದರೆ;
ತೂಗುವ ತೋಳ್ತೊಡೆಯ
ಬೀಗು ಬಾಹುವಿನ ಕದನೋತ್ಸಾಹ

ಹೆಣ್ಣಿಗಾಗಿ ಮಣ್ಣಿಗಾಗಿ ಕಾದಲ್ಲದೇ ಕದನ ಕಲಿಗಳ ತರಿದು ಚಿಲ್ಲನೇ ನೆತ್ತರುಕ್ಕಿಸಿ ತರ್ಪಣ ಕೊಟ್ಟಲ್ಲದೇ ಗೆಲ್ಲಬಹುದೇ ಯುದ್ಧ ಧರ್ಮ
ನೆಲಕ್ಕಾಗಿ ನಾಳೆಗಾಗಿ

ಕತ್ತರಿಸುವ ಕೊರಳು
ಮುಗ್ಗರಿಸುವ ಕುದುರೆ ಕಾಲ್ಗೊರಸು
ಘೀಳಿಡದೇ ಬೀಳುವ ಆನೆಯ ಸೊಂಡಿಲು
ಸಿಡಿ ಮದ್ದ ಫಿರಂಗಿ ಕುಸಿದ ಕಾಲಾಳು. . . ಎಲ್ಲಾ ಸಾಮೂಹಿಕ ಸಾವ ಬಿಡಿ ಬಿಡಿ ಚಿತ್ರಗಳು

ಅಂತಹ ಯಾವ ಊಳು ಕಹಳೆಯ ಕೂಗು ನಗಾರಿಯ ಸದ್ದಿಲ್ಲದೇ ನಡೆದ ಯುದ್ಧದಿ ಸೋತ ಯಶೋಧರ

ಅನಂಗ ರೂಪಕ್ಕೆ ರತಿ ಜೊತೆಯಾದ ಲಾವಣ್ಯವತಿ ಅಮೃತಮತಿ
ಮದನ ರಂಗದಲ್ಲಿ ಬದಗನ ಬೆವರ ಮಗ್ಗುಲ ಮೋಹದುಲಿಗೆ ಮದನಾರಿ ಮೈಮರೆತ ಆ ಕ್ಷಣ

ಬವರವಿಲ್ಲದೇ ಬೆವರಿದ-  ಬೀಗುವ ಬಿಗುಮಾನ ರಾಜಾಸ್ಥಾನ ವಂಧಿ ಮಾಗಧರ ಹೊಗಳು ಹೂಗಳ ಹೊದ್ದ ಯಶೋಧರ-

ಅವನೆಡೆಗೆ ಹೊರಳಿ ಅರಳಲಾರದ ಕಣ್ಣಿಗೆ

ಯುಧ್ದದಿ ಮಣ್ಣ ಗೆಲ್ಲಬಹುದಲ್ಲದೇ
ಹೆಣ್ಣ ಗೆಲಬಹುದೇ!?

 

ಅವಳ ನೆನಪು

 

ಕಾಲ ಬುಡದಲ್ಲಿ
ಸುಳಿದಾಡುವ ಕಾಮಿ ಬೆಕ್ಕು-
ಅವಳ ನೆನಪು!

ವಯ್ಯಾರದೊನಪು ಮೈ
ಮಿರಿ ಮಿಂಚುವ ಕರಿಗೂದಲು
ಹೊಳೆವ ಹಸಿರುಗಣ್ಣು
ಸಿರ್ ಎನ್ನುವ ಸಿಡುಕು
ಮರುಕ್ಷಣವೇ ಮಿಯಾಂವ್
ಎನ್ನುವವಳ ಭಾವ ಸ್ವಭಾವ

ಅರೆ ಕ್ಷಣ ಕೂಡದೇ ಪುಟ ನೆಗೆವ,
ಮೆತ್ತಗೆ ನಡೆವ
ಮಾರ್ಜಾಲಕ್ಕೆ ಸದಾ ಹೊಂಚು:
ಸಣ್ಣಿಲಿಗೆ ಕಾಟ
ಹೆಗ್ಗಣಕ್ಕೆ ಸಿಗದೇ ಓಟ!

ಕಣ್ಣ ಇಂದ್ರಜಾಲಕ್ಕೆ ಮುಗಿಲಗಲ
ಕಾಮನಬಿಲ್ಲ ಕಟ್ಟಿ ತೂರಿ
ಬಿಟ್ಟ ಬಾಣಕ್ಕೆ ಸಿಲುಕಿ ಭಾವದ ಬೇಟ
ಬೇಡದೇ ಮತ್ತೆ ಹೊಸ ಹೂಟ~

ಹೂಂಕರಿಸದೇ ಝೇಂಕರಿಸುವ ಹೆದೆಯ
ಕನ್ಯಾ ಮಾಸದ ಬೆದೆಯ
ಬದಲಾದ ಕಾಲದ ಕೆಳೆಯ
ಕಳವಳಿಸದೇ ಕೊರಗದೇ ತಪ್ಪ ಒಪ್ಪುವ ಅಪ್ಪುವ
ಅವಳಲ್ಲಿ ಸಟೆಯಿರಲಿಲ್ಲ ದಿಟ

ಬೆಕ್ಕಿನ ಠಕ್ಕತನವಿಲ್ಲದ ಠಾಕು ಠೀಕು
ಬದುಕ ಬಂದಳಿಕೆ ಬೇಡ ಬೇಕು
ಬೆನ್ನ ಹಿಂದಿನ ಟೀಕೆ ಎದುರು ಪರಾಕು

ಅವಳ ಬಿಡಾರ ಈಗ ನನ್ನ ತಾವಲ್ಲ!

ರಾಣಿವಾಸಕ್ಕೆ ಕುತೂಹಲ ತಾಳುವ ಅವಳಂತರಂಗ
ಅಂತಃಪುರ ಹೊಕ್ಕು ಈಗ ಬಂಧಿ
ಬೆವರ ಪುನುಗು ಮನದ ಗುನುಗು
ಬೇರೆಯವರ ಪಾಲಾದರೂ

ನನ್ನ ಮರುಳು;
ಆ ನುಣುಪು ಸ್ಪರ್ಶ ಮರೆಯದ ಬೆರಳು
ಕಾಲ ಕೆಳಗೇ ಸುಳಿದಾಡುವ ನೆರಳು!

4 Responses

 1. ಆನಂದ್,
  ಕಾವ್ಯ ಕಡಗೋಲು
  ಮಥಿಸಿದಷ್ಟೂ ನವನೀತ

 2. Vasudev nadig says:

  Beautiful images for beautiful poem

 3. Poornimasuresh says:

  ಕಾವ್ಯ ಪುನುಗು..ಚೆಂದದ ಕಚನಗಳು

 4. Poornimasuresh says:

  *ಕವನಗಳು

Leave a Reply

%d bloggers like this: