ಸಜ್ಜಾಗುತ್ತಿದೆ ಊರು.. ಇನ್ನು ಒಂದೇ ವಾರಕ್ಕೆ ತೇರು..

 

 

 

 

ತೇರು

ಅಭಿಷೇಕ್ ಪೈ ಕಾಜ್ರಳ್ಳಿ

 

 

ಸಜ್ಜಾಗುತ್ತಿದೆ ಊರು
ಇನ್ನು ಒಂದೇ ವಾರಕ್ಕೆ ತೇರು

ತಗಡಿನ ಮನೆಯಲ್ಲಿ ಉಸಿರು ಕಟ್ಟಿಕೊಂಡು
ವರ್ಷವಿಡೀ ನಿಲ್ಲುವುದಕ್ಕೆ ಸಿಕ್ಕಿದೆ ಅಲ್ಪವಿರಾಮ.
ಆಚೆ ತಂದು ದೇವಸ್ಥಾನದ ಹೊರಗೆ
ನಿಲ್ಲಿಸಿ, ಶೃಂಗರಿಸುತ್ತಿದ್ದಾರೆ ಗುಡಿಗಾರರು.
ಹಗಲಿರುಳು ಅವಿರತ ಶ್ರಮಿಸಿ, ಗುಡಿಯ
ಗೋಪುರಕ್ಕಿಂತ ಎತ್ತರಕ್ಕೆ ಕಟ್ಟುತ್ತಿದ್ದಾರೆ ಭವ್ಯವಾಗಿ.

ತುತ್ತತುದಿಯಲೊಂದು ಕಲಷ
ಸುತ್ತಲೂ ಬಣ್ಣದ ಪತಾಕೆಯ ಹೊಳಪು
ಕಿವಿ ಬೆಂಡೊಲೆಯಂತೆ ಫಲಗಳಿಂದ
ಸೊಂಟದ ಡಾಬಿನಂತೆ ಪುಷ್ಪಗಳಿಂದ ಅಲಂಕರಿಸಿದ್ದಾರೆ.
ಅಲ್ಲೇ ಮುಂದಿನ ಚಕ್ರದ ಪಕ್ಕ ಮಾರುದ್ದದ ಜಡೆಯಂತಹ ಹಗ್ಗ ಸುತ್ತಿಟ್ಟಿದ್ದಾರೆ.

ಚಡ್ಡಿ ಹಾಕಿಕೊಂಡು ಗಾಲಿ ಆಡುತ್ತಾ
ಬಂದ ಪೋರರು ತಯಾರಾದ ನನ್ನ ನೋಡಿ
ಊರೊಳಗೆ ಸುದ್ದಿ ಮುಟ್ಟಿಸಿದರು.

ಇಂದು ಸಂಭ್ರಮದ ರಥೋತ್ಸವ.
ಊರ ಸರಿಕರು ಉತ್ಸಾಹದಿಂದ ಎಳೆದು
ರಥಬೀದಿಯಲ್ಲಿ ಸುತ್ತಿಸುತ್ತಿದ್ದಾರೆ.
ಎಲ್ಲರೂ ಕಣ್ಣು ಅರಳಿಸಿ ನನ್ನೇ ನೋಡುತ್ತಿದ್ದಾರೆ.
ಮನೆಗಳ ಮುಂದೆಲ್ಲಾ ನನ್ನದೇ ರಂಗೋಲಿ.
ಜನರು ಕೈ ಮುಗಿದು ಇಡುಗಾಯಿ ಒಡೆಯುತ್ತಿದ್ದಾರೆ.
ಇಷ್ಟಾರ್ಥಗಳನ್ನು  ಬೇಡಿಕೊಳ್ಳುತ್ತಿದ್ದಾರೆ ನಮ್ರವಾಗಿ.

ತಾಯಿಯೊಬ್ಬಳು ತನ್ನ ಕಂದಮ್ಮನ ಹಣೆಯನ್ನು
ನನಗೆ ಮುಟ್ಟಿಸಿ ಆಶೀರ್ವಾದ ಬೇಡಿ ಖುಷಿ ಪಡುತ್ತಿದ್ದಾಳೆ.

ಆಳೆತ್ತರದ ತಟ್ಟಿರಾಯರು,
ಕೀಲುಕುದುರೆ ರಾಜ – ರಾಣಿಯರು,
ತರಹೇವಾರಿ ಗೊಂಬೆಗಳ ಮುಖವಾಡ
ತೊಟ್ಟ ಅಪರಿಚಿತರು, ಬಣ್ಣದೋಕುಳಿ
ಎರಚುತ್ತಾ ಯುವಕ – ಯುವತಿಯರು
ಬ್ಯಾಂಡು ಭಜಂತ್ರಿಗಳ ಜೊತೆಗೆ
ನನ್ನ ಮುಂದೆ ಕುಣಿದಾಡುತ್ತಿದ್ದಾರೆ.

ರಾತ್ರಿಯೇ ಜಾತ್ರೆ ಮುಗಿಯುತ್ತದೆ…ನಾಳೆ
ಎಲ್ಲವೂ ಸ್ತಬ್ಧವಾಗಿ ಬೀದಿಯೇ ಬಿಕೋ ಎನ್ನುತ್ತದೆ.
ಕಟ್ಟಿದ ಹೂಗಳು ಬಾಡಿ, ಸಂಪೂರ್ಣ
ಧೂಳಿನಿಂದ ಮಿಂದಿರುತ್ತೇನೆ.
ಶೃಂಗರಿಸಿದ ಗುಡಿಗಾರರು ಬಂದು
ನನ್ನನ್ನು ಬೆತ್ತಲೆ ಮಾಡುತ್ತಾರೆ.
ಮತ್ತದೇ ತಗಡಿನ ಮನೆಗೆ ವಾಪಾಸಾಗುತ್ತೇನೆ…

Leave a Reply