ಅಲ್ಲಿ ಗೌರಿ ತಣ್ಣಗೆ ಮಲಗಿದ್ದಳು…

 

 

 

ಶಿವಾನಂದ ತಗಡೂರು

ಪ್ರಸ್ತುತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರು  

 

 

 

ಹದಿನೇಳು ವರ್ಷದ ಹಿಂದಿನ ಮಾತು. ನಾಡಿಗೆ ಲಂಕೇಶ್ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು.

ನಾನಾಗ ಹಾಸನದಲ್ಲಿದ್ದೆ. ಸಾವಿಗೆ ಬೆಂಗಳೂರಿಗೆ ಹೋಗಲು ಸಿದ್ದವಾಗಿದ್ದಾಗ, ಲಂಕೇಶ್ ಸಾವಿಗೆ ಹೋಗಲು ನಾವು ‘ಜನತಾ ಮಾಧ್ಯಮ’ ಬಳಗದಿಂದ ಟಾಟಾ ಸುಮೋ ಮಾಡಿದ್ದೇವೆ, ಬರುವುದಿದ್ದರೆ ಬನ್ನಿ ಅನ್ನೋ ಕರೆಯೋಲೆ ಬಂತು. ಮಂಜುನಾಥ ದತ್ತ, ಆರ್ ಪಿ ವಿ, ಚಂದ್ರು ಸೇರಿದಂತೆ ಎಲ್ಲರೂ ಒಟ್ಟಿಗೆ ಹೊರಟೆವು. ನಾ ಹಿಂದಿನ ಸೀಟಿನಲ್ಲಿ ವಿರಾಜಮಾನನಾಗಿದ್ದೆ. ದಾರಿ ಉದ್ದಕ್ಕೂ ಲಂಕೇಶ್ ಅವರದೇ ಮಾತು. ನಾಡಿನ ರಾಜಕಾರಣದ ಮಗ್ಗುಲು ಬದಲಿಸಿದ ಲಂಕೇಶ್ ಪತ್ರಿಕೆ ಕೇವಲ ಪತ್ರಿಕೆ ಅಲ್ಲ. ಅದೊಂದು ಚಳವಳಿ ಅನ್ನೋ ಮಾತು ದಿಟವಾಗಿತ್ತು.

ಸಾವಿನ ದಿನದಿಂದ ಒಂದು ವರ್ಷದ ಆಚೆಗಿನ ಘಟನೆ ನೆನಪಿಗೆ ಬಂತು.
ನಮ್ಮ ಚನ್ನರಾಯಪಟ್ಟಣದ ಬಸವರಾಜ್, ಅರಸೀಕೆರೆ ತಾಲ್ಲೂಕಿನ ಸಿದ್ದಪ್ಪ ಅರಕೆರೆ ಅವರು ಲಂಕೇಶ್ ಗೆ ತೀರಾ ಹತ್ತಿರವಾಗಿದ್ರು. ಆ ಮೂಲಕ ನನಗೂ ಸ್ವಲ್ಪ ಸಂಬಂಧ ಬೆಸೆದುಕೊಂಡಿತ್ತು.
1999 ಇರಬೇಕು. ಲಂಕೇಶ್ ತೋಟದಲ್ಲಿ ಆಯೋಜಿಸಿದ್ದ ಹೊಸ ವರ್ಷದ ಆಚರಣೆಗೆ ಬಸವರಾಜ್ ಕರೆದಿದ್ರು.

ಹಾಸನದಿಂದ ನಾನು ಮತ್ತು ಸ್ನೇಹಿತ ಶಾಡ್ರಾಕ್ ಇಬ್ಬರು ಬೆಂಗಳೂರಿಗೆ ಬಂದೆವು. ನನ್ನ ಅಣ್ಣ ಶಿವಲಿಂಗಪ್ಪ ಅವರ ಬೈಕ್ ಪಡೆದು ರಾತ್ರಿ ಇಬ್ಬರೂ ಲಂಕೇಶ್ ತೋಟದತ್ತ ಹೊರಟೆವು. ಅಲ್ಲಿ ತಲುಪಿದಾಗ ರಾತ್ರಿ 8 ಗಂಟೆ. ಅಷ್ಟೊತ್ತಿಗೆ ಗುಂಡು ಪಾರ್ಟಿಯು ಶುರುವಾಗಿತ್ತು. ತೋಟದ ಮನೆಯ ಮಹಡಿಯ ಮೇಲೆ ‘ಸಂಗ್ಯಾ-ಬಾಳ್ಯಾ’ ದೊಡ್ಡಾಟ ನಡೆದಿತ್ತು. ಲಂಕೇಶ್ ಬಳಗ ಪೂರ್ಣ ಅಲ್ಲಿ ತಲ್ಲೀನವಾಗಿತ್ತು. ರಾತ್ರಿ 12 ಗಂಟೆಗೆ ಹೊಸ ವರ್ಷ ಸ್ವಾಗತಿಸಿ, ಬೈಕ್ ನಲ್ಲಿ ಹೊರಟು ಮನೆ ಸೇರಿದೆವು. ಇದೆಲ್ಲವೂ ಹಾಗೆ ನೆನಪಾಯಿತು. ಅಷ್ಟೊತ್ತಿಗೆ ಬೆಂಗಳೂರು ತಲುಪಿದ್ದೆವು.

ವರ್ಷದೊಳಗೆ ಮತ್ತೊಮ್ಮೆ ತೋಟಕ್ಕೆ ಬರ್ತಿನಿ ಅಂತ ನಾ ಅಂದುಕೊಂಡಿರಲಿಲ್ಲ.
ಹೊಸ ವರ್ಷ ಆಚರಿಸಿದ್ದ ತೋಟದಲ್ಲಿ ಲಂಕೇಶ್ ಮಣ್ಣಿಗೆ ಸಿದ್ದತೆ ನಡೆದಿತ್ತು.

ಅಲ್ಲಿಗೆ ಹೋದ ನಾವೆಲ್ಲರೂ ಲಂಕೇಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆವು.
ಗುಂಡಿಯೊಳಗೆ ಲಂಕೇಶ್ ಅವರ ಶವ ಇಟ್ಟು ಲಿಂಗಾಯತ ಧರ್ಮದ ಪ್ರಕಾರ ಶವಸಂಸ್ಕಾರ ಮಾಡಲು ಹೊರಟಾಗ, ಅಲ್ಲೊಂದು ಜೋರು ಧ್ವನಿ. ‘ಈ ಪೂಜೆ ಪುನಸ್ಕಾರ ಎಲ್ಲ ಅಪ್ಪನಿಗೆ ಇಷ್ಟವಿಲ್ಲ, ನಿಲ್ಲಿಸಿ’ ಎಂದ ಆ ದಿಟ್ಟ ಮಹಿಳಾ ಧ್ವನಿ ಕೇಳಿ ಅಲ್ಲಿದ್ದವರಿಗೆಲ್ಲ ಆಶ್ಚರ್ಯ. ಆ ಹೆಣ್ಮಗಳೇ ಗೌರಿ.

ನಿಜ ಹೇಳಬೇಕೆಂದರೆ, ನಾನು ಗೌರಿ ಅವರನ್ನು ನೋಡಿದ್ದು ಅದೇ ಮೊದಲು. ಎಷ್ಟು ಧೈರ್ಯದ ಹೆಣ್ಮಗಳು ಅಂದುಕೊಂಡೆ.

‘ಲಂಕೇಶ್ ಪತ್ರಿಕೆ’ ಜವಾಬ್ದಾರಿ ವಹಿಸಿಕೊಂಡ ಗೌರಿ ಅವರು ನಮ್ಮ ನಂಬಿಕೆ ಹುಸಿ ಮಾಡಲಿಲ್ಲ. ಕಾಲಾಂತರದಲ್ಲಿ ತಮ್ಮದೇ ‘ಗೌರಿ ಲಂಕೇಶ್ ಪತ್ರಿಕೆ’ ಶುರು ಮಾಡಿದಾಗಲೂ ಅಷ್ಟೇ.

ಕೋಮು ಸೌಹಾರ್ದ ವೇದಿಕೆ ಮುಂಚೂಣಿಯಲ್ಲಿ ನಿಂತು ಮಾತನಾಡುವಾಗ ಗೌರಿ ಅವರ ಮಾತನ್ನ ನಿಬ್ಬೆರಗಾಗಿ ಕೇಳಿದ್ದೆ.

ಬೆಂಗಳೂರಿಗೆ ಬಂದ ಮೇಲೆ ಆಗಿಂದಾಗ್ಗೆ ವಿಧಾನಸೌಧದಲ್ಲಿ ಸಿಗುತ್ತಿದ್ದರು, ಮಾತನಾಡುತ್ತಿದ್ದೆ.

‘ಅಪ್ಪನ ಹಾಗೆ ನೀವು ಬಾರಿ ಧೈರ್ಯವಂತರಾಗಿದ್ದೀರಿ’ ಅಂದಾಗಲೆಲ್ಲ ಗೌರಿ ಅವರ ಮುಖದಲ್ಲೊಂದು ಅದೇನೋ ಸಾರ್ಥಕ ಮುಗುಳ್ನಗೆ ಹಾದು ಹೋಗುತ್ತಿತ್ತು.

ಸೆ.4 ಸೋಮವಾರ ಸಂಜೆ ಅದೇ ವಿಧಾನಸೌಧದ 3ನೇ ಮಹಡಿಯಲ್ಲಿ, ಅರಣ್ಯ ಸಚಿವರ ಕಚೇರಿ ಬಳಿ ನಿಂತಿದ್ದ ಗೌರಿ ಅವರನ್ನು ನೋಡಿ ಮಾತನಾಡಿಸಿದೆ. ಮಾಮೂಲಿಯಂತೆ ಅದೇ ರೀತಿ ಮುಗುಳ್ನಕ್ಕು ಮಾತನಾಡಿದ್ದರು. ಅದೇ ಅವರ ಕೊನೆಯ ಮುಗುಳ್ನಗೆ ಅನ್ನೋದು ನನಗಾಗ ಗೊತ್ತಾಗಲಿಲ್ಲ. ವಿಧಿ ವಿಪರ್ಯಾಸ ನೋಡಿ.
ಮಾರನೆ ದಿನ ಮಂಗಳವಾರ ರಾತ್ರಿ ಗೌರಿ ಅವರು ತಮ್ಮದೇ ಮನೆ ಅಂಗಳದಲ್ಲಿ ಗುಂಡೇಟಿಗೆ ಬಲಿ ಆಗಿದ್ದರು.

ಮನಸು ತಡೆಯಲಿಲ್ಲ. ಬುಧವಾರ ಬೆಳಗ್ಗೆ 9 ಕ್ಕೆ ವಿಕ್ಟೋರಿಯಾ ಆಸ್ಪತ್ರೆ ಶವಗಾರದ ಧಾವಿಸಿ ಹೋದೆ. ಶವಾಗಾರದ ಒಳಗೆ ಗೌರಿ ತಣ್ಣಗೆ ಮಲಗಿದ್ದಳು. ಆಗಲೂ ಅದೇ ಮುಗುಳ್ನಗೆ.

ಹೊರಗೆ ಪೊಲೀಸ್ ಜಮಾಯಿಸಿದ್ದರು. ನಟ ಪ್ರಕಾಶ್ ರೈ ಮೌನವಾಗಿ ರೋಧಿಸುತ್ತ ಅಲ್ಲಿ ಕೂತಿದ್ದರು. ಇಂದ್ರಜಿತ್ ಲಂಕೇಶ್ ಮಾತನಾಡಿಸಿದೆ. ಬಳಿಕ ಕವಿತಾ ಲಂಕೇಶ್ ಬಂದ್ರು. ಎಲ್ಲರಿಗೂ ಶವಪರೀಕ್ಷೆ ಗಡಿಬಿಡಿ. ಸಾವು ಅರಗಿಸಿಕೊಳ್ಳಲಾಗದ ನೋವು, ತಳಮಳ.

ನಾವೊಂದಷ್ಟು ಜನ ಪತ್ರಕರ್ತರೆಲ್ಲ ಹೊರಗೆ ಕುಳಿತು ಮೌನ ಪ್ರತಿಭಟನೆ ಮಾಡಿದೆವು. ರಾಜು, ಆರ್ಟಿ ವಿಠಲ್ ಮೂರ್ತಿ, ಜೋಗಿ, ಬಿವಿಎಂ, ಮೊದಲಿಯಾರ್ ಎಲ್ಲ ಇದ್ರು. ನಮ್ಮೆಲ್ಲರ ಆತಂಕವನ್ನು ಮೌನ ಪ್ರತಿಭಟನೆ ಮೂಲಕ ವ್ಯಕ್ತಪಡಿಸಿ, ಹತ್ಯೆ ಖಂಡಿಸಿದ್ದೆವು.

ರವೀಂದ್ರ ಕಲಾಕ್ಷೇತ್ರ ಬಳಿಯೂ ಮಳೆಯಲ್ಲೂ ಗೌರಿ ಅಂತಿಮ ದರ್ಶನಕ್ಕೆ ಜನ ಕಾಯ್ದಿದ್ದರು.

ಪ್ರೆಸ್ ಕ್ಲಬ್ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ, ಎಲ್ಲರೂ ವಿಧಾನಸೌಧಕ್ಕೆ ಹೋಗಿ ಸಿಎಂ ಗೆ ಮನವಿ ಕೊಟ್ಟು, ಅಂತಿಮ ಸಂಸ್ಕಾರಕ್ಕೆ ಹೊರಟೆ.

ಚಾಮರಾಜಪೇಟೆ ಲಿಂಗಾಯತ ರುದ್ರಭೂಮಿಯಲ್ಲೂ ಜನಸಾಗರ. ಮಳೆಯಲ್ಲೂ ಗೌರಿ ಅಂತಿಮ ದರ್ಶನಕ್ಕೆ ನೂಕು ನುಗ್ಗಲು.

ಗೌರಿ ತಾಯಿ ಇಂದಿರಾ ರೋದಿಸುತ್ತಲೇ ಇದ್ದರು. ಕವಿತಾ, ಇಂದ್ರಜಿತ್ ಕುಟುಂಬ ಸದಸ್ಯರ ನೋವಿಗೆ ನಟ ಪ್ರಕಾಶ್ ರೈ ಕಣ್ಣೀರಾಗಿ ಸಮಾಧಾನಿಸುತ್ತಿದ್ದರು. ಇಡೀ ದಿನ ರೈ ಸ್ಪಂದಿಸಿದ ರೀತಿ ನೋಡಿ ನನಗೆ ಅವರ ಮೇಲಿನ ಅಭಿಮಾನ ಇನ್ನೂ ಹೆಚ್ಚಾಯಿತು.

ಲಂಕೇಶ್ ಪತ್ರಿಕೆ ಬಳಗದ ಸಿದ್ದಪ್ಪ ಅರಕೆರೆ ಅವರಿಂದ ಹಿಡಿದು ಚಂದ್ರಚೂಡ್ ತನಕ ಅನೇಕರು ಸಿಕ್ಕರು. ಮೈಸೂರಿನ ರಾಜಶೇಖರ ಕೋಟಿ ಸೇರಿದಂತೆ ನಾಡಿನ ಉದ್ದಗಲಕ್ಕೂ ಬಂದಿದ್ದ ಎಲ್ಲರನ್ನೂ ಆ ರುದ್ರಭೂಮಿಯಲ್ಲಿ ಕಣ್ತುಂಬಿಕೊಂಡೆ.

ಅತ್ತ ಕ್ರಾಂತಿ ಗೀತೆ, ಗೌರಿ ಕುರಿತು ಜಯಘೋಷ ಮುಗಿಲು ಮುಟ್ಟಿತ್ತು. ಗೌರಿ ಗುಂಡಿಯಲ್ಲಿ ಸಲೀಸಾಗಿ ತಣ್ಣಗೆ ಮಲಗಿಬಿಟ್ಟಿದ್ದಳು.

ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿ, ಮೂರು ಬೊಗಸೆ ಮಣ್ಣು ಹಾಕಿದೆ.

ಗೌರಿ ಅವರ ಧೈರ್ಯದ ನಡೆ, ಆ ದಿಟ್ಟತನದ ಮಾತು ಮತ್ತೆ ಮತ್ತೆ ನೆನಪಾಗುತ್ತಲೇ ಇತ್ತು.

ಗೌರಿ ಸಾವಿಗೆ ನಾಡು, ಅಷ್ಟೇ ಏಕೆ ವಿಶ್ವದ ಮಾನವಂತ ಸಮಾಜ ಮಿಡಿದ ಪರಿಗೆ ಅಭಿಮಾನವೂ ಉಕ್ಕಿ ಬಂತು.

ದಿಟ್ಟ ಮಹಿಳೆಯಾಗಿ ಮತ್ತೆ ಹುಟ್ಟಿ ಬಾ ಎಂದು ಹರಸಿ, ಕಚೇರಿಯತ್ತ ಹೆಜ್ಜೆ ಹಾಕಿದೆ.

1 Response

  1. Beeru Devaramani says:

    ವಾವ್ಹ್ ಎಂತಹ ಅನುಬಂಧದ ಒಡನಾಟ ಸರ್.
    ಈ ಲೇಖನ ಓದುತ್ತಿದ್ದಂತೆ ಹಲವಾರು ವಿಚಾರಗಳು ಕಣ್ಮುಂದೆ ಹಾದು ಹೋದವು.
    ದಿಟ್ಟ, ಧೈರ್ಯದ ಗುಂಡಿಗೆಯ ಒಬ್ಬ ಧೀಮಂತ ಮಹಿಳೆಯ ಬಗ್ಗೆ ಇದ್ದ ನಿಮ್ಮ ಗೌರವ, ಕಾಳಜಿ ಒಳ ನೋಟಕ್ಕೆ ಇದ್ದ ಒಂದು ಅರ್ಥ ನೀಡಿತು.
    ಆದರೆ ಈ ಪ್ರಕರಣ ಇಲ್ಲಿಗೆ ನಿಲ್ಲಬಾರದು ತನಿಖೆ ಮುಂದುವರಿಸಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಆಗಬೇಕು. ಅಸುನೀಗಿದ ಕನ್ನಡದ ಧೀಮಂತ ಪತ್ರಕರ್ತೆಯ ಆತ್ಮಕ್ಕೆ ಶಾಂತಿ ಸಿಗಬೇಕು.

Leave a Reply

%d bloggers like this: