ಒಂಟಿಕೋಣೆ ಮಹಲಿನ ನಕ್ಷತ್ರಗಳ ಹಾಡು…

ಆಗಿನ್ನೂ ದೆಹಲಿಗೆ ಬಂದ ಹೊಸತು.  ದೂರವಾದ ಊರಿನ ನೆನಪುಗಳನ್ನು ಹೊದ್ದು ಅಪರಿಚಿತ ಇರುಳ ಪರಿಮಳ ಮತ್ತು ಮಂಜಿನ ನೇವರಿಕೆಯಲ್ಲಿ ಅಂಥದ್ದೊಂದು ಕಟಕಟಿಸುವ ಚಳಿಯಿರುಳು  ಕಳೆದು ಬೆಳಗಾಗುವಾಗ ಹೊರಗಿನದೆಲ್ಲ ನನಗೆ ಹೊಚ್ಚ ಹೊಸಲೋಕ.  ನನ್ನ ಒಳಲೋಕ ಮುಸುಕುಹಾಕಿ ಮಲಗಿ, ಮುಸುಕಿನೊಳಗಿನಿಂದಲೇ ಪಿಳಿ ಪಿಳಿ ಕಣ್ಣುಬಿಟ್ಟುಕೊಂಡು ನೋಡುತ್ತಿತ್ತು.

ಅದೊಂದು ಚಾಳಿನಂತಹ ಚಾಳಲ್ಲದ ಹಾಗೂ ಮನೆಗಳಾಗಿಯೂ  ಮನೆಗಳಲ್ಲದ ಒಂಟಿಕೋಣೆಗಳ ಸಮುಚ್ಛಯ. ಆ ಚಾಳು ಜಯಚಂದ್ರ ರಾಠಿ ಅನ್ನುವ ಜಾಟರದ್ದು. ಆ ಮಾಲಿಕರಿಗೆ ಚೌಧರಿ ಸಾಹಬ್ ಮತ್ತು ಅವನ ಹೆಂಡತಿಗೆ ಚೌಧರಾಯಿನ್ ಅನ್ನುತ್ತಿದ್ದರು ಜನ. ಬಾಡಿಗೆದಾರರನ್ನು ನಿರ್ಗತಿಕ ದನಗಳಂತೆಯೂ, ತಮ್ಮ ಸಾಕು ದನಗಳನ್ನು ಮಕ್ಕಳಂತೆ ಪ್ರೀತಿಸುವ ಮನುಷ್ಯರನ್ನು ಕಂಡದ್ದು ಆಗಲೇ.

ಒಂದೇ ಕೋಣೆಯಲ್ಲಿ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು, ಬರುಹೋಗುವ ನೆಂಟರನ್ನು, ಅತಿಥಿ ಅಭ್ಯಾಗತರನ್ನು ನೋಡಿಕೊಳ್ಳುತ್ತಾ, ಒಂಟಿಕೋಣೆಗಳನ್ನೇ ಪುಟ್ಟ ಮಹಲಿನಂತೆ ಸಜ್ಜುಗೊಳಿಸಿಟ್ಟುಕೊಂಡು ಖುಶಿಯಾಗಿ ಹಾಡನ್ನು ಗುನುಗುನಿಸಿಕೊಳ್ಳುವಂತೆ ವಾಸಿಸುವ ಚೆಂದದ ಕುಟುಂಬಗಳನ್ನು ಕಂಡಿದ್ದೂ ಇದೇ ಚಾಳಿನಲ್ಲಿ. ನನಗೀಗಲೂ ನೆನಪಾಗುವುದು ಅಲ್ಲಿ ಕೇಳಿದ್ದ “ಝಿಲ್ ಮಿಲ್ ಸಿತಾರೋಂಕಾ ಆಂಗನ್ ಹೋಗಾ, ರಿಮ್ ಝಿಮ್ ಬರಸತಾ ಸಾವನ್ ಹೋಗಾ….” ಹಾಡು.

ನಮ್ಮ ಒಂಟಿಕೋಣೆಯ ಎದುರಿನ ಎರಡು ಮನೆಗಳಲ್ಲಿ ಆಚೆಯಿಂದ ಮೊದಲನೆಯದು, ಈ ಕಡೆಯಿಂದ ಕೊನೆಯದೂ ಇರುವ ಮೂಲೆ ಮನೆಯವಳು ರಾಶಿ ಪಾತ್ರೆಗಳನ್ನು ತೊಳೆಯಲು ಒಟ್ಟರಿಸಿಟ್ಟುಕೊಂಡು ಸರಭರ ಓಡಾಡುವ ಚುರುಕಿನ ಹೆಣ್ಣುಮಗಳು. ಬೆಳಿಗ್ಗೆ ಐದೂವರೆ – ಆರರಿಂದ ಶುರುವಾದರೆ ಅವಳು ಅಡುಗೆ ಕೆಲಸ, ಪಾತ್ರೆ ತೊಳೆಯೋದು, ಬಟ್ಟೆ ಒಗೆಯೋದು, ನೆಲವರೆಸೊದು ಅನ್ನುವ ಸಕಲ ಮನೆಗೆಲಸಗಳನ್ನು ಮುಗಿಸಿ ಹೊರಬಿದ್ದಾಗಲೇ ಅವಳ ಟ್ರಾನಿಸ್ಟರ್ ಬಾಯಿಮುಚ್ಚುತ್ತಿತ್ತು.  ನನಗ್ಯಾವಾಗಲೂ ಅದು ಬೋರ್ ಅನಿಸಿದ್ದಿಲ್ಲ. ಆಕೆ ಗುಪ್ತಾ ಆಂಟಿ.  ಆಕೆಗೆ ಟ್ರಾನ್ಸಿಸ್ಟರ್ ಅಂದರೆ  ಗಂಟೆಯ ನೆಂಟ – ಗಡಿಯಾರ. ಈ ಕಾರ್ಯಕ್ರಮ ಮುಗಿಯುತ್ತಲೋ, ಇಲ್ಲ ಇನ್ನೊಂದು ಶುರುವಾಗುತ್ತಲೋ ಆಕೆ ಕೆಲಸಕ್ಕೆ ಹೊರಡಬೇಕು.

ರೇಡಿಯೋದಲ್ಲಿನ ಈ ಜಾಹಿರಾತು ಲೋಕವೂ ಬೆರಗಿನದಾಗಿತ್ತು. ನಮ್ಮ ಆಕಾಶವಾಣಿಯ ಬೆಳಗಿನ ಕೌಸಲ್ಯಾ ಸುಪ್ರಭಾತದಿಂದ ಶುರುವಾಗಿ, ಭಕ್ತಿಗೀತೆಗಳು, ವಚನಗಳು, ಗೀಗೀ ಪದಗಳು, ಮಧ್ಯಾಹ್ನದ ಅಕ್ಕನ ಬಳಗ, ರಾತ್ರಿ ನಾಟಕ ಇತ್ಯಾದಿ ಕಾರ್ಯಕ್ರಮಗಳು, ಇತ್ತ ವಿವಿಧಭಾರತಿಯ ಚಿತ್ರಗೀತೆಗಳನ್ನಷ್ಟೇ ಕೇಳುತ್ತಿದ್ದವಳಿಗೆ ಇಲ್ಲಿನ ಜಾಹಿರಾತುಗಳೇ ತುಂಬಿತುಳುಕುವ  ರೇಡಿಯೋ ಕಾರ್‍ಯಕ್ರಮಗಳೂ ಹೊಸವೇ.  ’ಗಲೆ ಮೇ ಖಿಚ್ ಖಿಚ್, ಕ್ಯಾ ಕರೂಂ…’  ’ಮುಗಲಿ ಘುಟ್ಟಿಯ – ಆಹಾ ಮೀಠಿ ಮೀಠಿ” ನಿಂದ ಶುರುವಾಗಿ ಕರೋಲ್ ಬಾಗಿನ ಅಜಮಲ್ ಖಾನ್ ರೋಡಿನಲ್ಲಿನ ಹೆಸರಾಂತ ಮದುವೆ ಸೀರೆ, ಶಾಲು, ಸೂಟು, ಅಂಗಡಿಗಳ ಬಾಯಿ ಹರಕೊಳ್ಳುವ ಜಾಹಿರಾತುಗಳನ್ನು ಕೇಳುತ್ತಿದ್ದರೆ ಅಜಮಲ್ ಖಾನ್ ಮಾರ್ಕೆಟ್ಟಿನ ಒಂದು ಅಸ್ಪಷ್ಟ ಕಲ್ಪನೆ ಕಣ್ಣಲ್ಲಿ ಮೂಡಿತ್ತು. ಅವೆಲ್ಲ ನಿತ್ಯವೂ ಕೇಳಿ ಕೇಳಿ ಬಾಯಿಪಾಠವಾಗಿ ಹೋಗಿದ್ದವು.

ಗರಿಗರಿಯಾದ ಗಂಜಿಹಾಕಿದ ಕಾಟನ್ ಸೀರೆಯುಟ್ಟು, ಸ್ಲೀವ್ಲೆಸ್ ಕುಪ್ಪುಸ ತೊಟ್ಟು, ಒಪ್ಪವಾಗಿ ಕೂದಲನ್ನು ಮೇಲೆತ್ತಿ ಗಂಟು ಕಟ್ಟಿಕೊಂಡು, ಬಿಸಿಲಿಗೆ ತಂಫು ಕನ್ನಡಕ ತೊಟ್ಟು ಗುಪ್ತಾ ಆಂಟಿ ಹೋಗುವಾಗ  ಚಾಳಿನ  ತಲೆಬಾಚದ, ಸೀರೆಯ ಮುದುಡಿದ ನೆರಿಗೆಗಳನ್ನು ಕೊಡವದೇ, ಬೇವಿನ ಕಡ್ದಿಯಿಂದ ಎಳೆಬಿಸಿಲಿನಲ್ಲಿ ಸೋಮಾರಿಗಳಂತೆ ಹಲ್ಲುಜ್ಜುತ್ತ ಕೂತ ಬಿಹಾರಿ ಹೆಂಗಸರು ತುಟಿಬಿಚ್ಚದೇ, ಕಿಮಕ್ ಎನ್ನದೇ ಉಸಿರುಗಟ್ಟಿದವರಂತೆ ಇರುತ್ತಿದ್ದರು. ಅವರ ಲೋಕಕ್ಕಿಂತ ಆಕೆ ಭಿನ್ನವೆಂಬ ಕಾರಣಕ್ಕೋ ಏನೋ ಒಂದು ನಮೂನೆ ಗಾಳಿಯಾಡದ ಮೌನ ಕಟ್ಟಿಕೊಂಡಿರುತ್ತಿತ್ತು.  ಆಕೆ ಮನೆಗೆ ಕೀಲಿ ಹಾಕಿ ಹೊರಗಿನ ಲೋಹದ ಬಾಗಿಲು ದಾಟಿದಳೋ ಇಲ್ಲಿ ಕಲರವ ಶುರುವಾಗುತ್ತಿತ್ತು…

ಹರೀಶ  ಕೀ ಮಮ್ಮೀ…..ಓ ನವೀನ ಕೀ ಮಮ್ಮಿ…ಗಳು ತಮ್ಮ ತಮ್ಮ ಒಂಟಿ ಕೋಣೆಗಳ ಕೆಲಸ ಬೊಗಸೆಗಳನ್ನು ಅಲ್ಲಲ್ಲಿಗೆ ಬಿಟ್ಟು ಬಾಯಿ ಚಪಲ ತೀರಿಸಿಕೊಳ್ಳಲು, ತುಸುಹೊತ್ತು ಗುಪ್ತಾನಿಯನ್ನು ಆಡಿಕೊಳ್ಳಲು ಅಂಗಳದಲ್ಲಿ ಸೇರುತ್ತಿದ್ದರು.  ಸದಾಕಾಲ ಅಲ್ಲೊಂದು ಚಾರಪಾಯಿ ಇದ್ದೇ ಇರುತ್ತಿತ್ತು. ಅಡ್ಡಡ್ಡವಾಗಿ ಬಿದ್ದುಕೊಂಡು, ಇಲ್ಲ ಉದ್ದುದ್ದಕ್ಕೆ ಗೋಡೆಗಾತು ನಿಂತುಕೊಂಡೋ ತನ್ನ ಅವಸ್ಥೆಗಾಗಿ ಪರಿತಪಿಸುತ್ತ ನಿಂತುಕೊಂಡಂತೆ ಭಾಸವಾಗುತ್ತಿತ್ತು.  ಎಳೆದುಕೊಂಡು ಕೂರಲಿಕ್ಕೆ. ಮುಸ್ಸಂಜೆಯಲ್ಲಿ ಬೇಸಿಗೆಯ ತಾಪಕ್ಕೆ ಸೋತು ಮಲಗುವ ದೇಹಕ್ಕೆ, ತಾರೆಗಳೇ ಕಾಣದ ಮಬ್ಬು ಬಣ್ಣದ ಆಕಾಶದಲ್ಲಿ ಅಲ್ಲೋ ಎಲ್ಲೋ ಅಪ್ಪಿತಪ್ಪಿ ಕಾಣುವ ತಾರೆಗಳನ್ನು ಹುಡುಕುವವರಂತೆ ಕೆಲವರಾದರೂ ಚಾರಪಾಯಿಯಲ್ಲಿ ಬಿದ್ದುಕೊಂಡಿರುತ್ತಿದ್ದರು.

ನಾನು ಅಲ್ಲಿರುವವರೆಗೂ ಅಲ್ಲಿ ಬಿದ್ದಿರುತ್ತಿದ್ದ ಒಂದೆರಡು ಹಗ್ಗದ ಚಾರ್‍ಪಾಯಿ (ಹೊರಸು)ಗಳು ಅನಂತಕಾಲದಿಂದಲೂ ಅಲ್ಲೆ ಬಿದ್ದುಕೊಂಡಿರುವ ಪುರಾತನ ಇಮಾರತ್ತುಗಳಂತೆ ತೋರುತ್ತಿದ್ದವು. ಹಾಗೂ ಈ ಪಾಪದ ಚಾರ್‍ ಪಾಯಿಗಳ ಹೊಟ್ಟೆಯಲ್ಲಿ ಅದೆಷ್ಟೋ ಕತೆಗಳು ಹುರಿಗಟ್ಟಿಹೋಗಿರಬಹುದೆಂದೂ ಅನಿಸುತ್ತಿತ್ತು.

ಇವರೆಲ್ಲ ಕೂತು ಗುಪ್ತಾ ಆಂಟಿ, ಮನೆ ಮಾಲಕಿನ್ ಆಂಟಿಯ ಬಗ್ಗೆ ಹರಟುವಾಗ ನನಗೆ ಒಳಗೇ ಮಲಗಿರುವ ಶಿಕ್ಷೆ. ಬೆಡ್ ರೆಸ್ಟ್ ಅಂತಾ ವೈದ್ಯರು ಹೆದರಿಸಿದ್ದರಿಂದ ಒಂಟಿಕೋಣೆಯ ಬಂದಿ ನಾನಾಗ. ಮಲಗಿಯೇ ಇರುತ್ತಿದ್ದೆ. ಆಗಾಗ ಇಳಿಸಂಜೆ ಹೊತ್ತು ಎದ್ದು ಬಂದು ಕೂರುತ್ತಿದ್ದೆ.  ಎದ್ದು ಧಡ ಭಡ ಓಡಾಡುವ ಹಾಗಿಲ್ಲ. ಬಕೆಟ್ ಎತ್ತುವ ಹಾಗಿಲ್ಲ.  ಅವರಿವರ ಮಾತುಗಳು, ದನಿಗಳು, ಕಟ್ಟೆಯೊಡೆದು ನಗುವ ನಗುವಿನ ಅಲೆಗಳು, ಮಕ್ಕಳ ಜಗಳ, ಗಲಾಟೆ,  ಜಾಟ್ ಆಂಟಿಯ ಅರ್ಥವಾಗದ ಮಾತುಗಳು. ಎಮ್ಮೆ ಮೇವನ್ನು ಮೆಲುಕಾಡುವ ಮತ್ತು ಆಗಾಗ ಅಂಬಾ ಎನ್ನುವ ಸದ್ದು. ಮಾಲಕಿನ್ ಹಾಲು ಕರೆಯಲು ಬಂದಾಗ ಬಕೆಟ್, ಚೊಂಬಿನ ಸದ್ದು, ಮತ್ತೆಲ್ಲ ಅವಳ ಬೈಗುಳಗಳ ಗಂಟೆ.  ಹೀಗೆ ದನಿಗಳ ಜಾಡು ಹಿಡಿದು ದಿನವೊಂದು ಉರುಳುತ್ತಿತ್ತು.

ಸಂಜೆಯಾಗುವಾಗ ದುಡಿಮೆಗೆ ಹೋದ ಗಂಡಸರು ಕಛೇರಿಗಳಿಂದ ಮರಳುವ ಹೊತ್ತು ಮತ್ತು ಗಂಡಸರ ದನಿಗಳು ಹೆಚ್ಚಾಗಿ, ಹಗಲಿನ ಹೆಣ್ಣುದನಿಗಳೆಲ್ಲ ಅಡಗಿ ಈಗ ಗಂಭೀರ ವಾತಾವರಣವೊಂದು ಸೃಷ್ಟಿಯಾಗುತ್ತಿತ್ತು.  ಅದೇ ರೀತಿ ತನ್ನ ಅಂಗಡಿಯಿಂದ ಮರಳಿದ ಗುಪ್ತಾನಿಯ ಟ್ರಾನ್ಸಿಸ್ಟರ್ ಚಾಲೂ ಆಗಿ, “ಝಿಲ್ ಮಿಲ್ ಸಿತಾರೋಂಕಾ ಆಂಗನ ಹೋಗಾ…” ಆಲಾಪನೆಯಲ್ಲಿ  ಅವಳ ಮನೆಯಲ್ಲಿ ದೀಪದ ಬೆಳಕಿನಲ್ಲಿ ಆಕೆ ಅಡುಗೆಮಾಡುವುದು, ರೊಟ್ಟಿ ಬೇಯಿಸುವುದೂ ಕಾಣುತ್ತಿರುತ್ತಿತ್ತು. ಮುಂದೆ ನನಗೆ ಗೊತ್ತಾಯ್ತು  ವಸಂತ್ ವಿಹಾರದ ಶಾಪಿಂಗ್ ಕಾಂಪ್ಲೆಕ್ಸಿನಲ್ಲಿ ಅವಳದೊಂದು ಟೈಲರ್ ಅಂಗಡಿಯಿದೆಯೆಂದೂ ಮತ್ತು ದಿನವೂ ಆಕೆಯ ಓಟ ಆ ಬೂಟಿಕ್  ಅಂಗಡಿವರೆಗೆಂದು.

ಈಗಲೂ ನೆನೆದರೆ ನನಗೆ ಆ ಜನಗಳ ಮುಖಗಳು, ನಗುವಿನ ಗೆರೆಗಳು ಕಣ್ಣಮುಂದೆ ಬಂದು ಮಾತಾಡಿದಂತಾಗುತ್ತವೆ. ಅವರ ಮುಗ್ಧತೆ, ದೊಡ್ದ ಕೈ, ದೊಡ್ದ ಹೃದಯ, ದೊಡ್ಡವರೆಂಬುವರ ಸಣ್ಣತನಗಳು, ದುಡ್ಡಿದ್ದರೂ ಹಣ ಹಣವೆಂದು ಬಾಯ್ಬಿಡುವ , ಇನ್ನೊಬ್ಬರನ್ನು ಸುಲಿಯುವ ಜಾಟ್- ಗುಜ್ಜರ್ ಶ್ರೀಮಂತರು, ತಮಗಿರದಿದ್ದರೂ ಕೈಯೆತ್ತಿ ಇನ್ನೊಬ್ಬರಿಗೆ ಕೊಡುವ ಹೃದಯವಂತರು ಎಲ್ಲರ ನೆನಪೂ ಒಟ್ಟೊಟ್ಟಿಗೆ ಬರುತ್ತದೆ. ಎಲ್ಲಿಂದಲೋ ಬಂದು ಇಲ್ಲಿ ಬದುಕು ಕಟ್ಟಿಕೊಂಡು ಕನಸುಗಳನ್ನು ನೆಚ್ಚಿಕೊಂಡು ತಮ್ಮ ತಮ್ಮ ತವರು ನೆಲದ ಸುಖವನ್ನು, ಹೆಮ್ಮೆಗಳನ್ನು ನೆನೆವಂತೆ ಮಾಡುವ ಈ ಮಹಾನಗರದ ರಂಗುರಂಗಿನ ಚಾದರ್ ಹೊದ್ದುಕೊಂಡ ಮುನಿರ್ಕಾದ ಹಳ್ಳಿಯಂಥ ವಾತಾವರಣ ಬಹಳಷ್ಟನ್ನು ಕಲಿಸಿತು.  ಮೊದಲ ಪಾಠಗಳು ಕಲಿತದ್ದೇ ಮುನಿರ್ಕಾದಲ್ಲಿ.

ಗುಪ್ತಾನಿಗೆ ಮಕ್ಕಳಿರಲಿಲ್ಲ.  ಹಾಗೆಂದು ಆಕೆ ಯಾವತ್ತೂ ತನ್ನ ಕೆಲಸ, ಟ್ರಾನ್ಸಿಸ್ಟರ್ ಬಿಟ್ಟು ಯಾರೊಂದಿಗೂ ಕುಳಿತು ಹರಟಿದ್ದಿಲ್ಲ. ಅವಳಿಗೆ ಅಷ್ಟು ಸಮಯವಿಲ್ಲ.  ಇಷ್ಟೆಲ್ಲ ಗದ್ದಲದ ನಡುವೆಯೂ ಅವಳ ಯಜಮಾನರೂ ಇದ್ದಾರೋ ಇಲ್ಲವೋ ಎನ್ನುವ ಸಾಧು ಮನುಷ್ಯ.  ತಮ್ಮ ಪಾಡಿಗೆ ತೆಪ್ಪಗೇ ಇನ್ನೊಂದು ಕೋಣೆಯಲ್ಲಿ ಓದುತ್ತಿರುತ್ತಿದ್ದರು.  ಕಾಲೇಜು ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರಂತೆ.  ದಿನದಲ್ಲಿ ಆತ ನಡುಮಧ್ಯಾಹ್ನವೇ ತಮ್ಮ ಹಳೇ ಬೈಕನ್ನು ಲೋಹದ ಗೇಟಿನಾಚೆಗೆ ದೂಡಿಕೊಂಡು ಹೋಗಿ – ..ಢರ್ ಡರ್ರ್ ಸದ್ದು ಮಾಡಿಕೊಂಡು ಹೋದರೆ ಮತ್ತೆ ಯಾವಾಗ ಮರಳಿ ಬಂದರೋ ಗೊತ್ತಾಗುತ್ತಿದ್ದಿಲ್ಲ.  ಯಾರೊಂದಿಗೂ ಹರಟಿದ್ದನ್ನು ನಾನು ಕಂಡಿದ್ದಿಲ್ಲ. ಏನಿದ್ದರೂ ಗುಪ್ತಾ ಆಂಟಿಯ ಬಾಯಿಯೇ ಸೈ.

ಗುಪ್ತಾ ಆಂಟಿಯ ಪಕ್ಕದ ಮನೆಯಲ್ಲಿಯೇ ಮಿಶ್ರಾ ಕುಟುಂಬ. ನಮ್ಮ ಪಕ್ಕದ ಒಂಟಿ ಕೋಣೆ. ಅವರಿಗೆ ಇಬ್ಬರು ಮಕ್ಕಳು.  ಮಗ ನವೀನ ಅನ್ನುವ ಒಂದಾರು ವರ್ಷದ ಹುಡುಗ, ’ಗುಗ್ಗಲಿ’ ಎನ್ನುವ ಮೂರುವರ್ಷದ ಹೆಣ್ಣುಮಗು. ಈಗ ’ಗೂಗಲ್’ ನೋಡುವಾಗ ಅರೆ…ಈ ಗುಗ್ಗಲಿ ಎಲ್ಲಿರಬಹುದು? ಈಗ ಮದುವೆಯಾಗಿ ಸಂಸಾರಸ್ಥೆಯೂ ಆಗಿರಬಹುದೇನೋ ಎಂದು ಯೋಚಿಸುತ್ತೇನೆ. ಆಗ ಅಪರಿಚಿತ ಊರಲ್ಲಿ ಇವರ್ಯಾರೂ ನನ್ನವರಲ್ಲ ಎಂದು ಏಕಾಂಗಿತನ ಕಾಡುವಾಗ, ನನಗೇನಾದರೂ ಪ್ರೀತಿ ತೋರಿದ ಸಂಗಾತಿಗಳಿದ್ದರೆ ಅದು ಈ ಮಕ್ಕಳು.  ತಾಯಿ ಗದರಿದರೆ ಇತ್ತ ನುಸುಳುತ್ತಿದ್ದವು. ನೆಲದ ಮೇಲೆ ಕೂತು ಅಡುತ್ತಿದ್ದವು.

ಏನೇನೋ ದೊಡ್ದವರ ಮಾತುಗಳನ್ನು, ದೊಡ್ದ ಗುಟ್ಟುಗಳಂತೆ ನವೀನ್ ತೊದಲು ತೊದಲಾಗಿ ಹೇಳುತ್ತಿದ್ದರಂತೂ ನಾನು ನಗ್ತಾನೇ ಇರ್ತಿದ್ದೆ.  ಗುಗ್ಗಲಿ ಚುರುಕು.  ಮುದ್ದು ಮುದ್ದು ಮಗು. ಇನ್ನೊಂದು ಆರತಿ ಎನ್ನುವ ತಮಿಳ್ ಮಗು.  ಎಲ್ಲವೂ ಕೂಡಿ ಆಡುತ್ತ ಆಡುತ್ತಲೆ ಆಟಿಕೆ ಮುರಿದೋ ಒಡೆದೋ ಅವರ ಕೈಯಲ್ಲಿನ ಆಟಿಕೆ ಇವರು ಕದ್ದು, ಇವರದನ್ನು ಅವಳು ಎತ್ತಿಹಾಕಿ ಏನೋ ಒಂದು ಕಿತ್ತಾಟ ಶುರುವಾದಾಗಲೆ ಎಲ್ಲ ತಾಯಂದಿರು ದೊಡ್ದ ಸಂಗತಿಯನ್ನಾಗಿಸಿ ಜಗಳಕ್ಕೆ ನಿಲ್ಲುತ್ತಿದುದನ್ನು ಪ್ರೇಕ್ಷಕಳಂತೆ ನೋಡುತ್ತಿದ್ದೆ ಅಷ್ಟೆ. ಮುಂದೆ ನನ್ನ ಮಕ್ಕಳು ಜಗಳ ಮಾಡಿಕೊಂಡು ಬಂದಾಗ ನಾನ್ಯಾವತ್ತೂ ಇನ್ಯಾರೊಂದಿಗೂ ನಿಂತು ಜಗಳ ಕಾಯಲಿಲ್ಲ. ಮಕ್ಕಳು ಮಕ್ಕಳು ಮತ್ತೆ ಒಂದಾಗುತ್ತಾರೆ- ದೊಡ್ದವರು ಸಣ್ಣವರಂತಾಗೋದು ಯಾಕಾಗಿ ?

ಈ ಗುಪ್ತಾ ಆಂಟಿಯೂ ಈ ಮಕ್ಕಳನ್ನು ಬಹಳವೇ ಮುದ್ದು ಮಾಡುತ್ತಿದ್ದಳು ದೂರದಿಂದಲೇ. ಇನ್ನಿಬ್ಬರು ಬಿಹಾರಿಗಳಿಗೆ ಕೈಗೂಸುಗಳಿದ್ದವು.  ಗುಪ್ತಾನಿ ಅವನ್ನೂ ದೂರದಿಂದಲೇ ಮಾತಾಡಿಸುತ್ತಿದ್ದಳು ಇಲ್ಲವೆ ಅವುಗಳ ಆಟ ಪಾಟಗಳನ್ನು ದೂರವಿದ್ದೇ ನೋಡುತ್ತಿದ್ದಳು.  ಯಾವತ್ತೂ ಎತ್ತಿಕೊಳ್ಳಲು ಹೋಗುತ್ತಿದ್ದಿಲ್ಲ.

ಮುಂದೊಂದು ದಿನ ಸುಮಾರು ಎರಡು ದಶಕಗಳ ನಂತರ ನಾವು ವಸಂತ್ ವಿಹಾರದ ಸರ್ಕಾರಿ ಕ್ವಾರ್ಟರ್ಸ್ ಗೆ ಹೋದಾಗ ಅಲ್ಲಿನ ಮಾರ್ಕೆಟ್ಟಿನ ಅಂಗಡಿಯೊಂದರಲ್ಲಿ ಈ ಗುಪ್ತಾ ಆಂಟಿಯನ್ನು ಕಂಡೆ. ವಯಸ್ಸಾದ ಬಿಳಿಕೂದಲಿಗೆ ಮೆಹಂದಿಹಾಕಿ ಕೆಂಪಾಗಿಸಿಕೊಂಡ ಆಕೆ ಗುಪ್ತಾ ಆಂಟಿಯೇ ಅಂತ ಮನಸ್ಸಿಗೆ ಗೊತ್ತಾದರೂ ಮುಂದೆ ಹೋಗಿ ಮಾತಾಡಿಸಲು ಯಾಕೋ ಧೈರ್ಯವೇ ಬರಲಿಲ್ಲ.  ಅಂದಿನ ಅವಳ ಖಡಕ್‍ತನ, ಗಡಸುತನದ ಗಟ್ಟಿದನಿ ನನ್ನನು ಅಧೀರಳನ್ನಾಗಿಸಿತೋ, ಅವಳೇ ಹೌದೋ ಅಲ್ಲವೋ ಅಂತ ಅನುಮಾನಿಸಿದೆನೋ ತಿಳಿಯದು.

ಆ ಎಳೆವಯಸ್ಸಿನಲ್ಲೂ ನನಗೆ ಅವಳೊಂದಿಗೆ ಸಲುಗೆ ಹುಟ್ಟಿರಲೇ ಇಲ್ಲ. ಯಾವ ಕಾರಣಕ್ಕೋ  ಅಂತೂ ನಾನವಳನ್ನು ಮಾತಡಿಸಲಾಗಲಿಲ್ಲ.  ಆದರೆ ಇವತ್ತಿಗೂ ಆ ಘಟನೆ, ಶಾಪಿಂಗ್ ಕಾಂಪ್ಲೆಸ್ಕಿನಲ್ಲಿ ಕಂಡ ಗುಪ್ತಾ ಆಂಟಿಯ ಚೆಹರೆ ಮನಸ್ಸನ್ನು ಕಟಿಯುತ್ತಿದೆ. ಯಾಕೋ ಹೊಟ್ಟೆಯಲ್ಲಿ ಸಂಕಟ.  ಒಮ್ಮೆ ಹೋಗಿ ಮಾತಾಡಿಸಿದ್ದರೆ ಬಹುಶಃ ಅವಳಿಗೆ ಸಂತೋಷವಾಗುತ್ತಿತ್ತೋ ಏನೋ ಅನ್ನುವುದಕ್ಕಿಂತ ನನಗೇ ಹೆಚ್ಚು ಸಂತೋಷವಾಗುತ್ತಿತ್ತಲ್ಲ. ಈಗಿದ್ದಾಳೋ ಇಲ್ಲವೋ ಗೊತ್ತಿಲ್ಲ. ವಸಂತ್ ವಿಹಾರಗೆ ಹೋಗುವ ಅವಕಾಶ ಸಿಕ್ಕರೆ ಖಂಡಿತ ಹೋಗಿ ಭೆಟ್ಟಿಯಾಗಬೇಕು ಅವಳಿಗೆ.

ಮೀಶ್ರಾ ಕುಟುಂಬ, ಬಿಹಾರಿ ಕುಟುಂಬಗಳು ಎತ್ತ ಹೋದುವೋ ಗೊತ್ತಿಲ್ಲ. ಬದುಕು ಕೊಟ್ಟ ಯಾವ ಅವಕಾಶಗಳನ್ನೂ ಕಳೆದುಕೊಳ್ಳಬಾರದು. ಮನಸ್ಸಿಗೆ ಅನಿಸಿದ್ದನ್ನು ಮಾಡಬೇಕು.  ಯಾರನ್ನಾದರೂ ಮಾತಾಡಿಸಬೇಕೆಂದರೆ, ಮಾತಾಡಿಸಿಬಿಡಬೇಕು, ಯಾವುದೋ ಹಳಹಳಿಕೆ ಮರೆತು ಕ್ಷಮಿಸಿಬಿಡಬೇಕೆಂದರೆ ಕ್ಷಮಿಸಿಬಿಡಬೇಕು.  ಏನನ್ನೂ ಮಾಡದೇ ಕಾಲ ಸರಿದುಹೋದಾಗ ಕೊರಗೊಂದು ಮರಕುಟಿಕ  ಹಕ್ಕಿಯಂತೆ ಮನಸ್ಸನ್ನು ಕೊರೆಯುತ್ತಲೇ ಇರುತ್ತದೆ..…..

ಆ ಚಾಳಿನ ಝಿಲ್ ಮಿಲ್ ಸಿತಾರೋಂಕಾ ಆಂಗನ್  ಮತ್ತು ಚಾರ್ ಪಾಯಿ ಹರಟೆಗಳು ಹೀಗೆ ಕಾಡುತ್ತಲೇ ಇರುತ್ತವೆ…..

। ರೇಣುಕಾ ನಿಡಗುಂದಿ ।

2 Responses

  1. Bharathi B V says:

    ಹಾಗೂ ಈ ಪಾಪದ ಚಾರ್‍ ಪಾಯಿಗಳ ಹೊಟ್ಟೆಯಲ್ಲಿ ಅದೆಷ್ಟೋ ಕತೆಗಳು ಹುರಿಗಟ್ಟಿಹೋಗಿರಬಹುದೆಂದೂ ಅನಿಸುತ್ತಿತ್ತು…
    ಚೆಂದದ ಸಾಲುಗಳು …
    ಮುಂದಿನ ಕತೆಗಾಗಿ ಕಾಯುತ್ತಿರುವೆ

  2. ತುಂಬಾ ಚೆನ್ನಾಗಿ ಬರೆದಿದ್ದೀರಿ. ಮನಸ್ಸು ಮುಟ್ಟುತ್ತದೆ ನಿಮ್ಮ ನಿರೂಪಣೆ.

Leave a Reply

%d bloggers like this: