‘ಹಾಯ್ ತೇಜಸ್ವಿ..’ ಮಾಡಿದ್ದು ಹೀಗೆ..

 

 

 

 

ಪ್ರಸಾದ್ ರಕ್ಷಿದಿ

 

 

 

 

 

ಒಂದು ದಿನ ಗೆಳೆಯ ಜಿ.ಎನ್. ಮೋಹನ್‍ರಿಂದ ದೂರವಾಣಿ ಕರೆ ಬಂತು.

ಅವರಾಗ ಸಮಯ ಟಿ.ವಿ.ಯ ಪ್ರಧಾನ ಸಂಪಾದಕರಾಗಿದ್ದರು.

“ಪ್ರಸಾದ್ ನಿಮ್ಮ ತೇಜಸ್ವಿ ಬರಹಗಳ ಆಧಾರದಮೇಲೆ ಒಂದು ಸಾಕ್ಷಚಿತ್ರವನ್ನು ಸಮಯ ಟಿ.ವಿ.ಗಾಗಿ ಮಾಡೋಣ ಎಂದುಕೊಂಡಿದ್ದೇನೆ. ನಿಮ್ಮ ಸಹಕಾರ ಬೇಕು” ಎಂದರು. ಅವರಾಗಲೇ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಾಗಿತ್ತು. ಅವರದೇ ಶೂಟಿಂಗ್ ತಂಡವಿತ್ತು. ಸಾಕ್ಷಚಿತ್ರದ ರೂಪುರೇಷೆ ಮತ್ತು ಸ್ಕ್ರಿಪ್, ಹಾಗೂ ಉಸ್ತುವಾರಿಯನ್ನು ಕರವೇ ನಲ್ನುಡಿ ಸಂಪಾದಕ ದಿನೇಶ್ ಕುಮಾರ್ ಮತ್ತವರ ಗೆಳೆಯರಿಗೆ ಹೊರಿಸಿದ್ದರು.

ಹಾಗಾಗಿ ನಮ್ಮೂರಿನ ಸುತ್ತಮುತ್ತ ಹಾಗೂ ಮೂಡಿಗೆರೆ ಇನ್ನಿತರ ಕಡೆಗಳಲ್ಲಿನ ತೇಜಸ್ವಿಯವರ ಒಡನಾಡಿಗಳನ್ನು ಸಂಪರ್ಕಿಸುವ, ಅನುಮತಿ-ಸಹಕಾರ ಪಡೆಯುವ ಇತ್ಯಾದಿ ಕೆಲಸಗಳ ಜವಾಬ್ದಾರಿಯನ್ನು ನಾನು ವಹಿಸಿಕೊಂಡೆ. ಇದರಿಂದಾಗ ಮತ್ತೊಮ್ಮೆ ಮಾಯಾಲೋಕದಲ್ಲಿ ಸುಳಿದಾಡುವ ಅವಕಾಶವಾಯಿತು.

ಮತ್ತೊಮ್ಮೆ ಶ್ರೀಮತಿ ರಾಜೇಶ್ವರಿಯವರನ್ನು ಅಲ್ಲದೆ ತೇಜಸ್ವಿಯವರ ಹಲವು ವರ್ಷಗಳ ಒಡನಾಡಿಗಳಾದ ರಾಘವೇಂದ್ರ, ಪ್ರದೀಪ್ ಕೆಂಜಿಗೆ, ಧನಂಜಯ ಜೀವಾಳ, ಕೆ.ಟಿ ಶಿವಪ್ರಸಾದ್ ಮುಂತಾದವರನ್ನೂ ಬಿರ್ಯಾನಿ ಕರಿಯಪ್ಪ, ರೈಟರ್ ಶಿವು, ಮಾವಿನಹಳ್ಳಿ ಮುಳ್ಳಯ್ಯನವರಂಥಹವರನ್ನೂ ಕಂಡು ಮಾತನಾಡಿಸುವ ಸಂದರ್ಭವುಂಟಾಯಿತು. ಮುಂದೆ ಈ ಸಾಕ್ಷ್ಯಚಿತ್ರ ಸಮಯ ವಾಹಿನಿಯಲ್ಲಿ ಪ್ರಸಾರವೂ ಆಯಿತು. ಆಗಿನ ಕೆಲವು ಅನುಭವಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ತೇಜಸ್ವಿ ಬಗ್ಗೆ ಸಾಕ್ಷ್ಯಚಿತ್ರವೆಂಬ ಉತ್ಸಾಹದಲ್ಲಿ ದಿನೇಶ್ ಕುಮಾರ್, ಜ್ಞಾನೇಂದ್ರ ಕುಮಾರ್ ಪ.ಬ., ಸ.ಸು.ವಿಶ್ವನಾಥ್, ಜೈಭೀಮ್ ಮಂಜು ಎಲ್ಲರೂ ತಯಾರಾದರು. ಸಮಯ ಟಿವಿಯಿಂದ ಸುಘೋಷ್‍ನಿಗಳೆ ಮತ್ತು ಕ್ಯಾಮರಾಮನ್ ಮೋಹನಚಂದ್ರ ಇದ್ದರು. ಅವರಾಗಲೇ ಸಾಕಷ್ಟು ತಯಾರಿ ಸಿದ್ಧತೆ ಮಾಡಿಕೊಂಡೇ ಬಂದಿದ್ದರು. ಈ ಸಾಕ್ಷ್ಯಚಿತ್ರಕ್ಕಾಗಿ ಸಕಲೇಶಪುರ ಮತ್ತು ಮೂಡಿಗೆರೆ ತಾಲ್ಲೂಕಿನ ಅನೇಕ ಭಾಗಗಳಲ್ಲಿ ಸುಮಾರು ಒಂದು ವಾರ ಕಾಲ ಚಿತ್ರೀಕರಣ ನಡೆಯಿತು.

ತೇಜಸ್ವಿಯವರು ಓಡಾಡುತ್ತಿದ್ದ ಸ್ಥಳಗಳು, ಮೀನುಹಿಡಿಯುತ್ತಿದ್ದ ಹೊಳೆಗಳು, ಅವರ ಒಡನಾಡಿಗಳು, ಸ್ನೇಹಿತರು, ಹಿಂಬಾಲಕರು, ಸಹಾಯಕರು, ಅವರಿಂದ ಪ್ರೇರಣೆ ಪಡೆದವರು, ಬೈಸಿಕೊಂಡವರು… !, ಅವರೊಂದಿಗೆ ಜಗಳ ಕಾದವರು, ಹೀಗೆ ಎಲ್ಲ ವ್ಯಕ್ತಿ-ವಿಚಾರಗಳಿಗೆ ಸಂಬಂಧಿಸಿದಂತೆ ಚಿತ್ರಿಸಿಕೊಂಡೆವು. ರಾಜೇಶ್ವರಿಯವರು ನಮ್ಮನ್ನೆಲ್ಲ ಪ್ರೀತಿಯಿಂದ ವಿಚಾರಿಸಿಕೊಳ್ಳುತ್ತ ಆಗಾಗ್ಗೆ ಕಾಫಿ ಸಮಾರಾಧನೆ ಮಾಡುತ್ತ ನಾವು ಮರೆತಿಬಹುದಾದ ವಿಷಯಗಳನ್ನು ನೆನಪಿಸುತ್ತ ಸಹಕರಿಸಿದರು. ಹಾಗೇ ರಾಘವೇಂದ್ರ ಅವರು ಕೂಡಾ ನಮಗೆ ತಿಳಿದಿರದ ಅನೇಕ ಸಂಗತಿಗಳನ್ನು- ತೇಜಸ್ವಿಯವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಚಿತ್ರೀಕರಣಕ್ಕೆ ಒದಗಿಸಿಕೊಟ್ಟರು.

ಈ ಸಾಕ್ಷ ಚಿತ್ರದಲ್ಲಿ ಬರುವ ತೇಜಸ್ವಿಯರ ಆಪ್ತರ, ಗಣ್ಯರ ವಿಚಾರಗಳನ್ನು ನಾನಿಲ್ಲಿ ಮತ್ತೆ ಪ್ರಸ್ತಾಪಿಸುವುದಿಲ್ಲ. ಇವರೆಲ್ಲರ ಬಗ್ಗೆ ಮತ್ತು ಅವರೊಡಗಿನ ಒಡನಾಟದ ಬಗ್ಗೆ ಈಗಾಗಲೇ ಹಲವರು ಬರೆದಿದ್ದಾರೆ ಮತ್ತು ಇನ್ನು ಮುಂದೆಯೂ ಬೇರೆಯವರು ಬರೆಯುವ ಸಾಧ್ಯತೆ ಇದೆ. ಇದಲ್ಲದೆ ಇನ್ನೂ ಒಂದೆರಡು ಸಾಕ್ಷ್ಯ ಚಿತ್ರಗಳು ತೇಜಸ್ವಿಯವರ ಬಗ್ಗೆ ಈಗಾಗಲೇ ಬಂದಿದೆ. ಆದ್ದರಿಂದ ಮತ್ತೊಮ್ಮೆ ತೇಜಸ್ವಿಯವರ ಮಾಯಾಲೋಕದ ಸಂಗಾತಿಗಳ ಬಗ್ಗೆ ಮಾತ್ರ ಪ್ರಸ್ತಾಪಿಸುತ್ತೇನೆ. ಆದರೆ ಅವರಲ್ಲಿ ಅನೇಕರು ಈಗ ಎಲ್ಲಿದ್ದಾರೆಂದು ಹುಡುಕುವುದೇ ಬಹಳ ಕಷ್ಟವಾಗಿತ್ತು.

ತೇಜಸ್ವಿಯವರ ಕತೆಗಳಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದ ಪಾತ್ರವಾಗಿ ಉಳಿದವರು “ಬಿರಿಯಾನಿ ಕರಿಯಪ್ಪ”. ಆದ್ದರಿಂದ ಬಿರಯಾನಿ ಕರಿಯಪ್ಪ ಇಲ್ಲದ ತೇಜಸ್ವಿ ಸಾಕ್ಷಚಿತ್ರವನ್ನು ಊಹಿಸಿಕೊಳ್ಳಲು ಸಾದ್ಯವಿರಲಿಲ್ಲ. ಇಡೀ ಚಿತ್ರೀಕರಣ ತಂಡ ಗೋಣೀಬೀಡಿ ಹತ್ತಿರದ ನಿಡುಗೋಡಿನಲ್ಲಿರುವ ಅವರ ಮನೆಗೆ ಹೋಯಿತು. ಜೊತೆಯಲ್ಲಿ ಕರಿಯಪ್ಪನವರ ಮಗಳು ಶೋಭಾ ಕೂಡಾ ಇದ್ದರು. ಕರಿಯಪ್ಪ ಗೌಡರಿಂದ ಬಿರಿಯಾನಿ ಮಾಡಿಸಿ ಚಿತ್ರೀಕರಿಸುವುದು ಮತ್ತು ಆ ನೆನಪಲ್ಲಿ ಅದರ ರುಚಿಯನ್ನು ಸವಿಯುವುದು ನಮ್ಮ ತಂಡದ ಉದ್ದೇಶವಾಗಿತ್ತು !

ಕರಿಯಪ್ಪ ಗೌಡರು ಬಿರಿಯಾನಿಗಾಗಿ ಆರಿಸಿತೆಗೆದುಕೊಳ್ಳುವ ಮಾಂಸ, ಅದಕ್ಕೆ ಬೇಕಾದ ಸಂಬಾರ ವಸ್ತುಗಳು,ಇನ್ನಿತರ ಸಾಮಗ್ರಿಗಳು, ಪಾಕ ಮಾಡುವ ರೀತಿ, ಎಲ್ಲವೂ ಕರಿಯಪ್ಪನವರೊಬ್ಬ ಅದ್ಭುತ ಪಾಕಕಲಾವಿದ ಎಂಬುದನ್ನು ಸಾಬೀತು ಪಡಿಸಿದವು. ಕರಿಯಪ್ಪ ಬಿರಿಯಾನಿ ಪಾಕಕ್ಕೆ ಅನಾನಾಸ್ ಹಣ್ಣನ್ನೂ ಬಳಸುತ್ತಾರೆ. ಬಿರಿಯಾನಿ ತಯಾರಾಗುತ್ತ ಆಗುತ್ತ ಹೋದಂತೆ ಕರಿಯಪ್ಪನವರ ಹಳೆಯ ನೆನಪುಗಳ ಭಂಡಾರ ತೆರೆದುಕೊಳ್ಳುತ್ತ ಹೋಯಿತು. ಕರಿಯಪ್ಪ ಮತ್ತು ತೇಜಸ್ವಿಯವರ ಒಡನಾಟದ ಕತೆಗಳು, ಬಿರಿಯಾನಿ ಪಾಕದೊಂದಿಗೆ ಹದವಾಗಿ ಬೆರೆತು ವಿಶೇಷ ರುಚಿಕೊಟ್ಟವು. ತಯಾರಾಗಿ ಅರ್ಧಗಂಟೆಯೊಳಗಾಗಿ ಒಂದಗುಳೂ ಉಳಿಯದಂತೆ ಒಂದು ಹಂಡೆ ಬಿರಿಯಾನಿ ಖಾಲಿಯಾಗಿ ಹೋಯಿತು.

ಕಲಾವಿದ ಕೆ.ಟಿ. ಶಿವಪ್ರಸಾದರನ್ನು ಸಂದರ್ಶಿಸಿ ಚಿತ್ರೀಕರಿಸಲು ಹೋದಾಗ “ ತೇಜಸ್ವಿ ಅವರೊಬ್ಬ ಮಾಂತಿಕ, ನನ್ನ ವ್ಯಕ್ತಿತ್ವವನ್ನು ರೂಪಿದವರು ಅವರೇ” ಎಂದಿದ್ದರು. ಕೆ.ಟಿ. ಶಿವಪ್ರಸಾದರಿಗೆ, ತೇಜಸ್ವಿಯವರೊಂದಿಗೆ ಧೀರ್ಘಕಾಲದ ಒಡನಾಟವಿತ್ತು. ಆದರೆ ನಮ್ಮೂರಿನ ಸುತ್ತ ಮುತ್ತ ಅನೇಕರಿಗೆ ತೇಜಸ್ವಿಯವರನ್ನು ನೋಡಿ, ಕೇಳಿ, ಓದಿ ಹೀಗೆ ಈರೀತಿಯ ಪರಿಚಯ ಮಾತ್ರವಿತ್ತು. ಆದರೆ ಅಂಥವರನ್ನು ತೇಜಸ್ವಿಯವರು ಅನೇಕ ಸ್ತರಗಳಲ್ಲಿ ತಲುಪಿ ಪ್ರಭಾವಿಸಿದ್ದರು.

ಇಂಥವರಲ್ಲಿ ಹಾನುಬಾಳಿನ ಹೆಚ್.ಎಂ.ವಿಕ್ರಮ್ ಒಬ್ಬರು. ಈಗ ಪರಿಸರವಾದಿಯೆಂದು ಗುರುತಿಸಿಕೊಳ್ಳುತ್ತಿರುವ ಇವರು ಒಳ್ಳೆಯ ಓದುಗ. ತೇಜಸ್ವಿಯವರ ಎಲ್ಲಾ ಪುಸ್ತಕಗಳ ಸಂಗ್ರಹವೂ ಇವರಲ್ಲಿದೆ. ಪೋಟೋಗ್ರಫಿ, ಮೀನು ಹಿಡಿಯುವುದು ಕೂಡಾ ಇವರ ಹವ್ಯಾಸಗಳಲ್ಲಿ ಸೇರಿದೆ.

ಒಳ್ಳೆಯ ಕಬಡ್ಡಿ ಮತ್ತು ಕ್ರಿಕೆಟ್ ಆಟಗಾರರಾದ ವಿಕ್ರಮ್ ಕಾಡಿನ ಬಗ್ಗೆ ಅದ್ಭುತ ಜ್ಞಾನವುಳ್ಳವರು. ಮಲೆನಾಡಿನ ಘಟ್ಟ ಪ್ರದೇಶದ ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ದಟ್ಟ ಅರಣ್ಯದ ಸುಮಾರು ನೂರಕ್ಕೂ ಹೆಚ್ಚು ಕಿ,ಮೀ ಉದ್ದಗಲದ ಪ್ರದೇಶವನ್ನು ಅನೇಕ ಭಾರಿ ಕಾಲ್ನಡಿಗೆಯಲ್ಲಿ ಸುತ್ತಿರುವ ವಿಕ್ರಮ್‍ರಿಗೆ ಈ ಭಾಗದ ಅರಣ್ಯದ ಪ್ರತಿಯೋಮದು ವಿಭಾಗವೂ ಪರಿಚಿತ. ಕಾಡಿನ, ನೆಲ, ಜಲ. ಸಸ್ಯಗಳು. ಪ್ರಾಣಿಗಳಿಂದ ಹಿಡಿದು ಸಣ್ಣ ಸಣ್ಣ ಕ್ರಿಮಿ ಕೀಟಗಳವರೆಗೆ ಇವರಲ್ಲಿರುವ ಮಾಹಿತಿ-ಜ್ಞಾನ ಅಪೂರ್ವವಾದವು. ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯಕ್ರಮಗಳಿಂದ ಹಿಡಿದು-ಕಾಡಿನಲ್ಲಿ ಹೆಲಿಕಾಫ್ಟರ್ ಬೀಳಲಿ-ಚಾರಣಿಗರು ದಾರಿತಪ್ಪಲಿ ಅರಣ್ಯ ಇಲಾಖೆಗೆ ಇವರ ನೆರವು ಬೇಕೇ ಬೇಕು. ಅನೇಕ ಸಾರಿ ಕಾಡಿನ ಪ್ರಾಣಿಗಳಿಗೆ ರೋಗ ಬಂದಿರುವುದನ್ನು ಇವರು ಪತ್ತೆ ಮಾಡಿ ಇಲಾಖೆಗೆ ತಿಳಿಸಿದ್ದೂ ಉಂಟು.

ವಿಕ್ರಮ್ ನಮ್ಮನ್ನೆಲ್ಲ ತೇಜಸ್ವಿಯವರು ಮೀನು ಹಿಡಿಯಲು ಹೋಗುತ್ತಿದ್ದ ಹೇಮಾವತಿ ನದಿಯಲ್ಲಿರುವ ಬೂದಿಕೊಂಡ, ಕಲ್ಲುಕೊಂಡ ಎಂಬ ಆಳವಾಗಿ ನೀರಿರುವ ಸ್ಥಳಗಳು, ಹಾಗೇ ಅಗನಿ ಗ್ರಾಮದ ಬಳಿಯ ಬೆಣಗಿನಹಳ್ಳ ಮುಂತಾದ ಕಡೆಗಳಿಗೆಲ್ಲ ಕರೆದೊಯ್ದರು.

ತೇಜಸ್ವಿಯವರ ಬಗ್ಗೆ ಕೇಳಿದಾಗ ಅವರು ಹೇಳಿದ್ದಷ್ಟು “ನಾನು ಒಂದುರೀತಿಯಲ್ಲಿ ಅವರ ಏಕಲವ್ಯ ಶಿಷ್ಯ, ಅವರು ತುಂಬ ಹಿರಿಯರು, ಆದ್ದರಿಂದ ಅವರನ್ನು ಮಾತಾಡಿಸುವ ಧೈರ್ಯವೇ ಇರಲಿಲ್ಲ, ಎಲ್ಲೋ ಒಂದೆರಡು ಬಾರಿ ಮಾತಾಡಿರಬಹುದು ಅಷ್ಟೆ. ಆದರೆ ನನ್ನಷ್ಟಕ್ಕೆ ನಾನೇ ಅವರನ್ನು ಅನುಸರಿಸುತ್ತಾ ಕಲಿಯುತ್ತಾ ಹೋದೆ. ಅವರು ಶಿಕಾರಿ ಮಾಡುತ್ತಿದ್ದರು, ನಾವೂ ಶಿಕಾರಿ ಮಾಡಿದ್ವು, ಅವರು ಮೀನು ಹಿಡಿದರು, ನಾವೂ ಮೀನು ಹಿಡಿಯುತ್ತಿದ್ದೆವು. ಅವರು ಗನ್ ಬಿಸಾಕಿ ಕ್ಯಾಮರಾ ಕೈಗೆತ್ತಿಕೊಂಡರು, ನಾವೂ ಕ್ಯಾಮರಾ ಹಿಡಿದುಕೊಂಡೆವು, ಅವರು ಕಾಡು ಸುತ್ತಿದರು, ನಾವೂ ಕಾಡು ಸುತ್ತಿದೆವು. ಅವರು ಬರೀತಾ ಹೋದ್ರು ನಾವು ಓದ್ತಾ ಹೋದ್ವು !”

Leave a Reply